ಬಜೆಟ್‌ ಮುನಿಸು; ಬಿಜೆಪಿ ಮೈತ್ರಿಯಿಂದ ಹೊರಬರಲಿದೆಯೇ ತೆಲುಗು ದೇಶಂ ಪಕ್ಷ?

ನರೇಂದ್ರ ಮೋದಿ ಸರ್ಕಾರ ತಮ್ಮ ರಾಜ್ಯವನ್ನು ನಿರ್ಲಕ್ಷಿಸುತ್ತಿದೆ, ಹೊಸ ರಾಜಧಾನಿ ಅಮರಾವತಿಯ ನಿರ್ಮಾಣಕ್ಕೆ ಸೂಕ್ತ ಹಣ ಒದಗಿಸುತ್ತಿಲ್ಲ, ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆಯುವ ಸೂಚನೆ ನೀಡಿದೆ ಟಿಡಿಪಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರವು ತನ್ನ ಐದನೇ ಬಜೆಟ್ ಮಂಡಿಸಿದ ಬೆನ್ನಲ್ಲೇ ಅದರ ಮೈತ್ರಿಕೂಟದಲ್ಲಿ ಒಡಕಿನ ಧ್ವನಿ ಮೂಡಿದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ತೆಲುಗು ದೇಶಂ ಮೈತ್ರಿಕೂಟದಿಂದ ಹೊರಬರುವ ಮಾತುಗಳನ್ನಾಡಿದೆ. ಈ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥರೂ ಆದ ಚಂದ್ರಬಾಬು ನಾಯ್ಡು ಅವರು, ಶೀಘ್ರ ಸಂಪುಟ ಸಭೆ ಕರೆದು, ಮೈತ್ರಿಕೂಟವನ್ನು ತೊರೆಯುವ ವಿಚಾರವಾಗಿ ಪಕ್ಷದ ತೀರ್ಮಾನ ಘೋಷಿಸುವುದಾಗಿ ಹೇಳಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ನವದೆಹಲಿಗೆ ಹಲವು ಬಾರಿ ಭೇಟಿ ನೀಡಿದ್ದ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಮನವಿ ಮಾಡಿದ್ದರು. ತಮ್ಮ ಮನವಿಗೆ ಬಜೆಟ್‌ನಲ್ಲಿ ಸ್ಪಂದನೆ ಸಿಗದ ಕಾರಣ ಅವರು ಬಿಜೆಪಿಗೆ ಕೊನೆಯ ನಮಸ್ಕಾರ ಹೇಳುವುದಾಗಿ ನುಡಿದಿದ್ದಾರೆ. “ವಿಭಜಿತ ಆಂದ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲು ಕೇಳಿದ್ದೆವು. ಅಮರಾವತಿ ಮೆಟ್ರೋ ನಿರ್ಮಾಣಕ್ಕೆ ಅನುದಾನ ನೀಡಲು ಕೋರಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಯಾವ ಬೇಡಿಕೆಗಳನ್ನೂ ಈಡೇರಿಸಿದೆ ಅನ್ಯಾಯ ಎಸಗಿದ್ದು, ನಮ್ಮ ಅಸಮಾಧಾನಕ್ಕೆ ಕಾರಣ,” ಎಂದು ಟಿಡಿಪಿ ಮುಖಂಡರು ತಿಳಿಸಿದ್ದಾರೆ.

“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಕುರಿತು ನಿರ್ಲಕ್ಷ್ಯ ಮಾಡುತ್ತಿದೆ. ಹೊಸ ರಾಜಧಾನಿ ಅಮರಾವತಿಯ ನಿರ್ಮಾಣಕ್ಕೆ ಸೂಕ್ತ ಹಣ ಒದಗಿಸುತ್ತಿಲ್ಲ. ಆಂಧ್ರಪ್ರದೇಶವು ಹೆಚ್ಚು ತೆರಿಗೆ ತಂದುಕೊಡುವ ರಾಜ್ಯಗಳಲ್ಲಿ ಒಂದಾಗಿದ್ದರೂ, ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ,” ಎಂದು ಟಿಡಿಪಿಯು ಎರಡು ವರ್ಷಗಳಿಂದ ಆರೋಪಿಸುತ್ತಲೇ ಬಂದಿತ್ತು.

ಮತ್ತೊಂದೆಡೆ, ವೈಎಸ್‌ಆರ್ ಕಾಂಗ್ರೆಸ್ ನಾಯಕ ವೈ ಎಸ್ ಜಗನ್ ಮೋಹನ್ ರೆಡ್ಡಿಯವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆಂಬ ಸುದ್ದಿಯು ಆಂಧ್ರಪ್ರದೇಶ ರಾಜಕೀಯ ವಲಯದಲ್ಲಿ ಹೆಚ್ಚು ಕೇಳಿಬರತೊಡಗಿತು. ಇದಕ್ಕೆ ಪುಷ್ಟಿ ನೀಡುವಂತೆ, ಚಂದ್ರಬಾಬು ನಾಯ್ಡು ಅವರ ಆಡಳಿತದ ವಿರುದ್ಧ ಜಗನ್ ಮೋಹನ್ ರೆಡ್ಡಿ ಪಾದಯಾತ್ರೆ ಕೈಗೊಂಡರು. ಇದೇ ವೇಳೆ, ಕೇಂದ್ರ ಸರ್ಕಾರವು ವಿಭಜಿತ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಜಗನ್ ಮೋಹನ್ ರೆಡ್ಡಿ ಹೇಳಿಕೆ ನೀಡಿದರು. ಈ ಹೇಳಿಕೆಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತ ಬಂದ ಆಂಧ್ರದ ಬಿಜೆಪಿ ನಾಯಕರು, ಸಂದರ್ಭ ಬಂದರೆ ತಮ್ಮ ಪಕ್ಷವು ವೈಎಸ್‌ಆರ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹೇಳತೊಡಗಿದರು. ಇದು ಟಿಡಿಪಿಯಲ್ಲಿ ಬಹುದೊಡ್ಡ ಆತಂಕ ಹುಟ್ಟುಹಾಕಿತು. ಆಗ ಬಿಜೆಪಿ ಹಾಗೂ ಟಿಡಿಪಿ ಮೈತ್ರಿಯಲ್ಲಿ ಬಿರುಕುಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು.

ಜ.27ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಬಿಜೆಪಿ ನಾಯಕರ ವಿರುದ್ಧ ದೊಡ್ಡ ಮಟ್ಟದಲ್ಲಿ ಅಸಮಾಧಾನ ಹೊರಹಾಕಿದ್ದರು. “ಬಿಜೆಪಿಯವರು ಮೈತ್ರಿ ಮುರಿದುಕೊಳ್ಳುವುದಾದರೆ, ಅವರಿಗೊಂದು ನಮಸ್ಕಾರ ಹೇಳುತ್ತೇನೆ. ನಾವು ಕೇವಲ ಮೈತ್ರಿಧರ್ಮ ಪಾಲಿಸಲು ಅವರೊಂದಿಗಿದ್ದೇವೆ,” ಎಂದು ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದರು.

ಈ ಎಲ್ಲ ಬೆಳವಣಿಗೆಗಳಿಂದ ಟಿಡಿಪಿ ಹಾಗೂ ಬಿಜೆಪಿಯ ಮೈತ್ರಿಯು ಅಪಾಯದ ಹಂತಕ್ಕೆ ಬಂದುನಿಂತಿತು. ಇದನ್ನೆಲ್ಲ ಗಮನಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು, ಜಾಣ ಕುರುಡು ಹಾಗೂ ಜಾಣಮೌನವನ್ನು ಅನುಸರಿಸಿದರು. ಈಗ ಮಂಡನೆಯಾಗಿರುವ ಬಜೆಟ್‌ನಲ್ಲಿ ತಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಚಂದ್ರಬಾಬು ನಾಯ್ಡು ಅವರು ಮೈತ್ರಿ ಮುರಿದುಕೊಳ್ಳುವ ಸೂಚನೆಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ : ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ಒತ್ತು ಕೊಟ್ಟ ಬಿಜೆಪಿ ಮೈತ್ರಿಧರ್ಮ ಮರೆಯಿತೇ?

ತೆಲಂಗಾಣ ಸರ್ಕಾರದ ಆಕ್ರೋಶಕ್ಕೂ ಗುರಿಯಾದ ಬಜೆಟ್

ಕೇಂದ್ರ ಸರ್ಕಾರದ ಬಜೆಟ್‌ಗೆ ತೆಲಂಗಾಣ ಸರ್ಕಾರವೂ ಅಸಮಾಧಾನ ವ್ಯಕ್ತಪಡಿಸಿದೆ. “ಕುಡಿಯುವ ನೀರು, ಸರಬರಾಜು ಯೋಜನೆ, ಮಿಷನ್ ಭಗೀರಥ ಯೋಜನೆ, ಮಿಷನ್ ಕಾಕತೀಯ ಯೋಜನೆ, ಕೆರೆ ಹಾಗೂ ಕೊಳಗಳ ಪುನರುಜ್ಜೀವನ ಯೋಜನೆ ಮತ್ತು ಕಲೇಶ್ವರಂ ಬೃಹತ್ ನೀರಾವರಿ ಯೋಜನೆಗಳಿಗೆ ಬಜೆಟ್ ಹಂಚಿಕೆ ಮಾಡಲು ರಾಜ್ಯವು ಕೇಂದ್ರಕ್ಕೆ ಒತ್ತಾಯಿಸಿತ್ತು. ಆದರೆ, ಕೇಂದ್ರದ ಬಜೆಟ್‌ನಲ್ಲಿ ಈ ಯಾವುದೇ ಯೋಜನೆಗಳ ಬಗ್ಗೆ ಪ್ರಸ್ತಾಪವಾಗಿಲ್ಲ. ಪ್ಲೋರೈಡ್‌ಪೀಡಿತ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಿಗೆ 440 ಕೋಟಿ ರುಪಾಯಿ ವೆಚ್ಚದಲ್ಲಿ ನೀರು ಸಂಗ್ರಹಗಾರ ಸ್ಥಾಪಿಸುವ ಬೇಡಿಕೆಯನ್ನು ಕೂಡ ನಿರ್ಲಕ್ಷಿಸಲಾಗಿದೆ,” ಎಂದು ತೆಲಂಗಾಣ ಹಣಕಾಸು ಸಚಿವ ಎತೆಲಾ ರಾಜೇಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, “ನೋಟು ಅಮಾನ್ಯ, ಜಿಎಸ್ಟಿಯಂಥ ನಿರ್ಧಾರಗಳಿಂದ ಬಸವಳಿದಿದ್ದ ದೇಶದ ಜನತೆಯ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಈ ಬಜೆಟ್ ಮಂಡಿಸಲಾಗಿದೆ. ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಕಾಣುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇದನ್ನು ನಾವು ‘ಚುನಾವಣಾ ಬಜೆಟ್’ ಎಂದು ವ್ಯಾಖ್ಯಾನಿಸುತ್ತೇವೆ,” ಎಂದು ಶಿವಸೇನೆ ಹೇಳಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More