ಪ್ರಕಾಶ್ ರೈ ಚುನಾವಣಾ ರಾಜಕಾರಣಕ್ಕೆ ಇಳಿಯುವರೇ? ಹೆಚ್ಚುತ್ತಲೇ ಇದೆ ಚರ್ಚೆ

ಚುನಾವಣೆ ಹತ್ತಿರ ಆಗುತ್ತಿರುವಂತೆ ನಟ ಪ್ರಕಾಶ್ ರೈ ರಾಜಕೀಯ ಪ್ರವೇಶ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಆ ಬಗ್ಗೆ ಅವರು ಇದುವರೆಗೂ ಅಧಿಕೃತವಾಗಿ ಏನನ್ನೂ ಮಾತನಾಡಿಲ್ಲ. ಹಾಗಾದರೆ ಅವರ ಮೌನದ ಅರ್ಥವೇನು? ಜನರ ಚರ್ಚೆಗಳನ್ನು ಆಧರಿಸಿದ ಒಳನೋಟ ಇಲ್ಲಿದೆ

‘ಇರುವರ್’, ಪ್ರಕಾಶ್ ರೈ ಅಭಿನಯದ ತಮಿಳು ಸಿನಿಮಾ. ಅದು ಬಣ್ಣದ ಲೋಕ ಮತ್ತು ತಮಿಳು ರಾಜಕಾರಣದ ಒಂದು ಘಟ್ಟವನ್ನು ವಿಶಿಷ್ಟವಾಗಿ ಹಿಡಿದಿಟ್ಟ ಕೃತಿ. ತೀರಾ ಭಾವನಾತ್ಮಕ ನೆಲೆಯಲ್ಲಿ ರಾಜಕಾರಣದ ಒಳತೋಟಿಗಳನ್ನು ಬಿಡಿಸಿಡುವ ಚಿತ್ರ. ಅಲ್ಲಿ ಎರಡು ಪಾತ್ರಗಳಿವೆ. ‘ಆನಂದ್’ ತನ್ನ ತಾರಾ ವರ್ಚಸ್ಸಿನ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದವನು. ಅವನ ರಾಜಕೀಯ ಮೆರುಗಿಗೂ ಅದೇ ಕಾರಣ. ಆದರೆ, ಅದೇ ಬಣ್ಣದ ಲೋಕವನ್ನು ಉಸಿರಾಡುವ ‘ತಮಿಳುಸೆಲ್ವನ್’ ಸಂಭಾಷಣೆಕಾರ, ಹಾಡು ಬರೆಯುವವನು. ತನ್ನ ಶ್ರಮದ ಹೊರತಾಗಿಯೂ ಅವನಿಗೆ ಆನಂದನ ಜನಪ್ರಿಯತೆ ಲಭಿಸುವುದಿಲ್ಲ. ಆದರೂ ಆತ ರಾಜಕೀಯವಾಗಿ ಪ್ರಬುದ್ಧ. ಹಿಡಿದದ್ದನ್ನು ಸಾಧಿಸಲು ಏನುಬೇಕಾದರೂ ಮಾಡುವವ. ಈಗಿನ ಪ್ರಶ್ನೆ, ಪ್ರಕಾಶ್ ರೈ ಅವರಿಗೆ ಕರ್ನಾಟಕ ರಾಜಕಾರಣದ ‘ತಮಿಳು ಸೆಲ್ವನ್’ ಆಗುವ ಸಿದ್ಧತೆಗಳಿವೆಯೇ ಎನ್ನುವುದು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಳಿಕ ಜಾತ್ಯತೀತ ಒಲವುಳ್ಳವರ ಐಕಾನ್ ಎಂಬಂತೆ ಗುರುತಿಸಿಕೊಂಡ ಪ್ರಕಾಶ್ ರೈ, ಚುನಾವಣಾ ರಾಜಕೀಯಕ್ಕೆ ಬರುವರೇ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿದೆ. ಬರುವ ವಿಧಾನಸಭಾ ಚುನಾವಣೆಗೆ ಅಲ್ಲದಿದ್ದರೂ 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಕರ್ನಾಟಕದ ಯಾವುದಾದರೂ ಸಂಸತ್ ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಹಾಗೆಂದು, ಕಣ ರಾಜಕಾರಣ ಕುರಿಂತಂತೆ ಅವರ ನಿಲುವು ಬಹಿರಂಗವಾಗಿ ಪ್ರಕಟಗೊಂಡಿಲ್ಲ. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದಿದ್ದರೂ, ಹಲವು ರಾಜಕೀಯ ಅಭಿಪ್ರಾಯಗಳನ್ನು ಹೊರಹಾಕುವ ಮೂಲಕ ಅವರು ಈಗಾಗಲೇ ರಾಜಕಾರಣಕ್ಕೆ ಬಂದಂತಾಗಿದೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಜನಪ್ರಿಯತೆ, ಬಂಟ ಸಮುದಾಯದ ಬೆಂಬಲದ ಜೊತೆಗೆ ಅಲ್ಪಸಂಖ್ಯಾತರ ಮತಗಳೂ ಅವರ ನೆರವಿಗೆ ಬರಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ದಕ್ಷಿಣ ಕನ್ನಡ ಕೋಮು ರಾಜಕಾರಣದ ಪ್ರಬಲ ನೆಲೆ ಎಂದು ಗುರುತಿಸಿಕೊಳ್ಳುತ್ತಿದ್ದರೂ, ಆಳದಲ್ಲಿ ಜಿಲ್ಲೆಯೊಳಗೆ ಜಾತಿ ರಾಜಕಾರಣ ಮೇಲುಗೈ ಪಡೆದ ಉದಾಹರಣೆಗಳು ಸಾಕಷ್ಟಿವೆ. ಜಾತಿ ಪ್ರಾತಿನಿಧ್ಯದ ಕಾರಣಕ್ಕೆ ಬಂಟ ಸಮುದಾಯ ಅವರನ್ನು ಬೆಂಬಲಿಸುವುದು ಸಹಜ ಎನ್ನಲಾಗುತ್ತಿದೆ. ಇದೇ ವೇಳೆ, ಪ್ರತಾಪ್ ಸಿಂಹ ಪ್ರತಿನಿಧಿಸುತ್ತಿರುವ ಮೈಸೂರು-ಕೊಡಗು ಸಂಸತ್ ಕ್ಷೇತ್ರದಿಂದ ರೈ ಸ್ಪರ್ಧಿಸುವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಇಬ್ಬರ ನಡುವೆ ನಡೆದ ವಾಕ್ಸಮರ ಈ ಬಗೆಯ ಚಿಂತನೆಗೆ ಕಾರಣವಾಗಿದೆ.

ಕಾಂಗ್ರೆಸ್‌ನಿಂದ ಅವರು ಸ್ಪರ್ಧಿಸಲಿ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಪಕ್ಷೇತರರಾಗಿ ಕಣಕ್ಕಿಳಿಯುವುದು ಸೂಕ್ತ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಒಂದು ವೇಳೆ ರೈ ಗೆದ್ದರೆ, ಅದು ಪಕ್ಷಕ್ಕೆ ಲಾಭ. ಆದರೆ, ಮೃದು ಹಿಂದುತ್ವದ ಕಡೆಗೆ ವಾಲಿರುವ ಕಾಂಗ್ರೆಸ್, ರೈ ಅವರಿಗೆ ಮಣೆ ಹಾಕಲಿದೆಯೇ ಎಂಬ ಪ್ರಶ್ನೆಗಳಿವೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ಕಾಂಗ್ರೆಸ್ ಸೇರಿದಂತೆ ಇತರ ಪ್ರಜಾಸತ್ತಾತ್ಮಕ ಜಾತ್ಯತೀತ ಪಕ್ಷಗಳ ಬೆಂಬಲ ಪಡೆಯುವುದು ಸಾಧ್ಯ ಎಂಬುದು ಕೆಲವರ ಅನಿಸಿಕೆ.

ಪಕ್ಷ ರಾಜಕಾರಣದಿಂದ ದೂರ ಉಳಿದವರು ಹೀಗೆ ಹೇಳುತ್ತಿರುವುದು ನಿಜ. ಆದರೆ, ರೈ ಜನಪ್ರಿಯತೆಯು ಅವರು ಸ್ಪರ್ಧಿಸುವ ಕ್ಷೇತ್ರದಲ್ಲಿ ಮತವಾಗಿ ಪರಿವರ್ತನೆ ಆಗಲಿದೆಯೇ ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಹುಟ್ಟಿವೆ. ತಮಿಳುನಾಡು, ಆಂಧ್ರಪ್ರದೇಶದ ಸಿನಿ ವರ್ಚಸ್ಸಿನ ರಾಜಕೀಯ ಅಲೆ ಕರ್ನಾಟಕದಲ್ಲಿ ಇಲ್ಲ. ಅನೇಕ ಸಿನಿಮಾ ನಟ-ನಟಿಯರನ್ನು ಕೊಡುಗೆಯಾಗಿ ನೀಡಿದ ದಕ್ಷಿಣ ಕನ್ನಡದಲ್ಲಿಯೂ ಇಂತಹ ವಾತಾವರಣ ಇಲ್ಲ. ಜನರನ್ನು ಮೋಡಿ ಮಾಡಲು ಸಿನಿಮಾಗೆ ಹೊರತಾದ ರಾಜಕೀಯ ವರ್ಚಸ್ಸು ಅಗತ್ಯ ಎನ್ನಲಾಗುತ್ತಿದೆ. ಹಾಗೆ ಹೇಳುವವರು ಜಾತಿ ಬೆಂಬಲವನ್ನೂ ಗಳಿಸಿದ, ಸಿನಿಮಾ ಹಿನ್ನೆಲೆಯ ಅನೇಕರ ರಾಜಕೀಯ ವೈಫಲ್ಯವನ್ನು ಉದಾಹರಣೆಯಾಗಿ ನೀಡುತ್ತಾರೆ.

ಅಲ್ಲದೆ, ರೈ ಅವರ ರಾಜಕೀಯ ಹಿನ್ನೆಲೆಯನ್ನೂ ಪ್ರಶ್ನಿಸಲಾಗುತ್ತಿದೆ. ಅವರ ಜನಪ್ರಿಯತೆ ಸಾಮಾನ್ಯ ಮತದಾರರಿಗೆ ಎಷ್ಟರಮಟ್ಟಿಗೆ ತಿಳಿದಿದೆ? ದಕ್ಷಿಣ ಕನ್ನಡದಲ್ಲಿ ಒಂದು ವೇಳೆ ಅವರು ಸ್ಪರ್ಧಿಸಿದರೂ ಇಲ್ಲಿನ ಎಷ್ಟು ಮತದಾರರಿಗೆ ಅವರು ಗೊತ್ತು ಎಂದು ರಾಜಕೀಯ ವಲಯದ ಅನುಭವಿಗಳು ಕೇಳುತ್ತಿದ್ದಾರೆ. ಜಾತಿ ಬೆಂಬಲ, ಜನಪ್ರಿಯತೆ ಇದ್ದ ಮಾತ್ರಕ್ಕೆ ಗೆಲುವು ಸಾಧ್ಯ ಎಂಬುದು ಕನ್ನಡಿಯೊಳಗಿನ ಗಂಟಿದ್ದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೋದಿ, ಅಮಿತ್ ಶಾ, ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕಾಶ್ ರೈ ಮಾತನಾಡುತ್ತಿದ್ದಾರೆ, ನಿಜ. ಅದರಾಚೆಗೆ ಅವರ ಯೋಜನೆಗಳು ಏನಿವೆ, ರಾಜಕೀಯ ರೂಪುರೇಷೆಗಳೇನು ಎಂಬುದು ಜನರಿಗೆ ತಿಳಿದಿಲ್ಲ. ಸಕ್ರಿಯ ರಾಜಕಾರಣಕ್ಕೆ ಬರಲಿಚ್ಛಿಸುವವರು ತಮ್ಮ ವಿರೋಧಿಗಳನ್ನು ಟೀಕಿಸುವುದಷ್ಟೇ ಅಲ್ಲ, ಜನರನ್ನು ರಚನಾತ್ಮಕವಾಗಿ ಬೇರೆ-ಬೇರೆ ವಿಚಾರಗಳಲ್ಲಿ ತೊಡಗಿಸಬೇಕಾಗುತ್ತದೆ. ಜನರ ಮುಂದೆ ತಮ್ಮ ಯೋಜನೆಗಳನ್ನು ತೆರೆದಿಡಬೇಕಾಗುತ್ತದೆ. ಆದರೆ, ಈ ಬಗೆಯ ಸ್ಪಷ್ಟತೆ ಅವರಿಗೆ ಇದ್ದಂತಿಲ್ಲ. ಬೌದ್ಧಿಕವಾಗಿ ದೊಡ್ಡ ಧ್ವನಿಯಾಗಬೇಕು ಎಂಬುದಕ್ಕಾದರೂ ಸಾಕಷ್ಟು ತಯಾರಿ ಬೇಕು. ಅದಕ್ಕೆ ಸಮಯ ಹಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ರೈ ಅವರು ‘ತಮಿಳು ಸೆಲ್ವನ್’ ರೀತಿಯಲ್ಲಿ ಇನ್ನಷ್ಟು ಮಾಗಬೇಕಿದೆ ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ : ನೆಲದ ಮೇಲಿನ ದೋಣಿಯಾನ ಆಗಲಿದೆಯೇ ಕಮಲ್ ರಾಜಕೀಯ ಪಯಣ?

ಅಲ್ಲದೆ ಸೆಲೆಬ್ರಿಟಿ, ಬಹುಭಾಷಾ ನಟ ಎನ್ನುವುದನ್ನು ಹೊರತುಪಡಿಸಿದರೆ, ಜನರನ್ನು ಸೆಳೆಯುವ ಸ್ಥಳೀಯ ಜನಪ್ರಿಯತೆ ಅವರಿಗಿದೆಯೇ ಎಂಬ ಪ್ರರ್ಶನೆ ಇದೆ. ಅವರ ಸುತ್ತ ಇರುವವರು ರಾಜಕೀಯದ ಭ್ರಮೆಗಳನ್ನು ಬಿತ್ತಿರಬಹುದು. ಆದರೆ, ಅದೆಲ್ಲ ಯಶಸ್ವಿಯಾಗದು ಎಂಬ ಮಾತುಗಳಿವೆ. ಒಂದು ವೇಳೆ, ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾದರೆ, ಅವರಿಗೆ ತಮ್ಮ ಕ್ಷೇತ್ರ ಬಿಟ್ಟುಕೊಡಲು ಎಷ್ಟು ಮಂದಿ ತಯಾರಿದ್ದಾರೆ? ಯಾವುದೇ ಪಕ್ಷದ ಒಳಸುಳಿಗಳು ಮೇಲ್ನೋಟಕ್ಕೆ ಕಂಡಬುರುವುದಕ್ಕಿಂತಲೂ ಭಿನ್ನವಾಗಿರುತ್ತದೆ ಎನ್ನುತ್ತಾರೆ ಕೆಲವರು.

ಹಣ, ಜನಪ್ರಿಯತೆ ನಂತರ ಮುಂದೇನು ಎಂಬ ಭವಿಷ್ಯದ ಪ್ರಶ್ನೆ ರಾಜಕಾರಣಿಗಳಲ್ಲಿ ಉದ್ಭವಿಸುವುದು ಸಹಜ. ಕಮಲ್ ಹಾಸನ್, ರಜನೀಕಾಂತ್ ರೀತಿಯ ನಟರನ್ನೂ ಸೆಳೆದಿರುವ ಆ ಶೂನ್ಯ ವಾತಾವರಣ ಪ್ರಕಾಶ್ ರೈ ರೀತಿಯ ಕನಸುಗಾರರನ್ನೂ ಬಿಟ್ಟಿಲ್ಲವೇ? ಅವರ ಗುರಿ ಬಗ್ಗೆ ಅನುಮಾನಗಳು ಇಲ್ಲವಾದರೂ ನಡೆವ ಹಾದಿಯನ್ನು ಅನೇಕರು ಸಂಶಯದಿಂದ ನೋಡುತ್ತಿದ್ದಾರೆ. ಇದಕ್ಕೆ ಅವರು ನೀಡುವ ಉತ್ತರವೇನು ಎಂಬ ಪ್ರಶ್ನೆ ಬೃಹತ್ತಾಗಿ ಬೆಳೆದುನಿಂತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More