ತ್ರಿಪುರಾ ಸಿಎಂ ಮಾಣಿಕ್‌ ಸರ್ಕಾರ್ ಬಳಿ ಇರುವುದು ಕೇವಲ ೩,೯೩೦ ರುಪಾಯಿ!

ಚುನಾವಣಾ ಆಯೋಗಕ್ಕೆ ಗುರುವಾರ (ಫೆ.೧) ನಾಮಪತ್ರ ಸಲ್ಲಿಸಿದ ತ್ರಿಪುರಾ ಸಿಎಂ ಮಾಣಿಕ್‌ ಸರ್ಕಾರ್‌ ಅವರು ತಮ್ಮ ಆಸ್ತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಅಚ್ಚರಿ ಅಂದರೆ, ಅವರ ಬಳಿ ಇರುವುದು ಕೇವಲ ೩,೯೩೦ ರುಪಾಯಿ! ಅಲ್ಲದೆ, ಇದುವರೆಗೂ ಅವರು ಒಂದು ಬಾರಿಯೂ ಐಟಿ ರಿಟನ್ಸ್‌ ಸಲ್ಲಿಸಿಲ್ಲ!

ಚುನಾವಣಾ ಆಯೋಗಕ್ಕೆ ರಾಜಕಾರಣಿಗಳು ನಾಮಪತ್ರ ಸಲ್ಲಿಸುವಾಗ ತಮ್ಮ ಬಳಿ ಇರುವ ಆಸ್ತಿ ಪ್ರಮಾಣ ಘೋಷಿಸುತ್ತಾರೆ. ಬಹುತೇಕ ರಾಜಕಾರಣಿಗಳು ಕೋಟ್ಯಧಿಪತಿಗಳಾಗಿದ್ದರೆ, ಹಲವು ಮಂದಿ ಲಕ್ಷಾಧಿಪತಿಗಳಿರುತ್ತಾರೆ. ಆದರೆ, ಗುರುವಾರದಂದು (ಫೆ.೧) ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರು ಸಲ್ಲಿಸಿದ ಆಸ್ತಿ ಪ್ರಮಾಣಪತ್ರ ಈ ಹಿಂದಿನಂತೆಯೇ ಮತ್ತೆ ಸುದ್ದಿಯಲ್ಲಿದೆ. ಅಚ್ಚರಿ ಎಂದರೆ, ಅವರ ಬಳಿ ಇರುವುದು ಕೇವಲ ೩,೯೩೦ ರುಪಾಯಿ. ಅಲ್ಲದೆ, ಅವರು ಇದುವರೆಗೂ ಒಂದು ಬಾರಿಯೂ ಐಟಿ ರಿಟನ್ಸ್‌ ಸಲ್ಲಿಸಿಲ್ಲ. ಇಲ್ಲಿ ನೆನೆಪಿಸಿಕೊಳ್ಳಬೇಕಾದ ಮತ್ತೊಂದು ಸಂಗತಿ ಎಂದರೆ, ಮಾಣಿಕ್‌ ಸರ್ಕಾರ್‌ ಅವರು ತ್ರಿಪುರಾ ರಾಜ್ಯದಲ್ಲಿ ಸತತ ಐದು ಬಾರಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ!

ಪ್ರಸ್ತುತ ತ್ರಿಪುರಾ ರಾಜ್ಯದಲ್ಲಿ ಸಿಪಿಐ (ಎಂ) ಪಕ್ಷ ಅಧಿಕಾರದಲ್ಲಿದ್ದು, ಮಾಣಿಕ್‌ ಸರ್ಕಾರ್‌ ಮುಖ್ಯಮಂತ್ರಿ ಆಗಿದ್ದಾರೆ. ಇದೇ ಫೆ.೧೮ಕ್ಕೆ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಣಿಕ್‌ ಸರ್ಕಾರ್‌ ಅವರು ಧನ್‌ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ : ತಾರಕಕ್ಕೇರಿದ ಸಿಪಿಎಂ ನಾಯಕರಾದ ಯೆಚೂರಿ, ಕಾರಟ್‌ ನಡುವಿನ ಶೀತಲ ಸಮರ

೬೯ ವರ್ಷದ ಮಾಣಿಕ್‌ ಸರ್ಕಾರ್‌, ತಮ್ಮ ಪೂರ್ತಿ ಸಂಬಳವನ್ನು ಪಕ್ಷಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ಪಕ್ಷದಿಂದ ತಿಂಗಳಿಗೆ ಐದು ಸಾವಿರ ರುಪಾಯಿ ಭತ್ಯೆ ಪಡೆದುಕೊಳ್ಳುತ್ತಿದ್ದಾರೆ. ಮಾಣಿಕ್‌ ಅವರ ಕೈಯಲ್ಲಿ ೧,೫೨೦ ರುಪಾಯಿ ನಗದು ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಲ್ಲಿ ೨,೪೧೦ ರು. ಇದೆ. ಇದು ಬಿಟ್ಟರೆ ಅವರ ಬಳಿ ಯಾವುದೇ ಬ್ಯಾಂಕಿನಲ್ಲೂ ಡೆಪಾಸಿಟ್‌ ಇಲ್ಲ. ಕೃಷಿಭೂಮಿ ಅಥವಾ ನಿವೇಶನ ಇಲ್ಲ. ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ವಾಸವಾಗಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು, ಮಾಣಿಕ್‌ ಸರ್ಕಾರ್‌ ಅವರ ಪತ್ನಿ ಪಂಚಾಲಿ ಭಟ್ಟಾಚಾರ್ಯ ಅವರು, ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿದ್ದು, ೨೦,೧೪೦ ನಗದು ಹಾಗೂ ಎರಡು ಬ್ಯಾಂಕ್‌ ಖಾತೆಗಳಲ್ಲಿ ೧,೨೪,೧೦೧ ರು. ಮತ್ತು ೮೬,೪೭೩.೭೮ ರು. ಇದೆ. ಅಲ್ಲದೆ, ಅವರ ಹೆಸರಿನಲ್ಲಿ ೨ ಲಕ್ಷ ರು., ೫ ಲಕ್ಷ ರು. ಹಾಗೂ ೨.೨೫ ಲಕ್ಷ ರು.ಗಳ ಮೂರು ಸ್ಥಿರ ಠೇವಣಿ ಮತ್ತು ೨೦ ಗ್ರಾಂ ಆಭರಣ ಇದೆ. ಅಲ್ಲದೆ, ಅವರು ಪಿತ್ರಾರ್ಜಿತವಾಗಿ ಪಡೆದ ೮೮೮.೩೫ ಚದರ ಅಡಿ ನಿವೇಶನ ಇದ್ದು, ಈ ಜಾಗದಲ್ಲಿ ಅಂದಾಜು ೧೫ ಲಕ್ಷ ರುಪಾಯಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರ ೨೧ ಲಕ್ಷ ರು. ಭಟ್ಟಾಚಾರ್ಯ ಅವರು ೨೦೧೧-೧೨ರಲ್ಲಿ ಐಟಿ ರಿಟನ್ಸ್‌ ಸಲ್ಲಿಸಿದ್ದು, ಅದರಲ್ಲಿ ಅವರು ತಮ್ಮ ಒಟ್ಟು ಆದಾಯ ೪,೪೯,೭೭೦ ರುಪಾಯಿ ಎಂದು ತೋರಿಸಿದ್ದರು. ಆನಂತರದಿಂದ ಈವರೆಗೂ ಐಟಿ ರಿಟನ್ಸ್‌ ಸಲ್ಲಿಸಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More