ಟ್ವಿಟರ್ ಸ್ಟೇಟ್ | ರಾಜಕೀಯ ಬೆಳವಣಿಗೆಗಳ ಬಗ್ಗೆ ಬಿಜೆಪಿಯ ವೀಕೆಂಡ್‌ ನಿದ್ರೆ!

ಶನಿವಾರ-ಭಾನುವಾರದಂದು ರಾಹುಲ್ ಗಾಂಧಿ ಹೈದರಾಬಾದ್ ಕರ್ನಾಟಕ ಪ್ರವಾಸದಲ್ಲಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟೀಕಿಸುವ ಎಂದಿನ ನೆಗೆಟಿವ್ ಪ್ರಚಾರ ವಿಪಕ್ಷಗಳಿಂದ ಕಂಡುಬರಲಿಲ್ಲ. ಈ ವಿಷಯದಲ್ಲಿ ಒಬ್ಬಂಟಿ ಸೈನಿಕರಂತೆ ಮಾತನಾಡುತ್ತಿರುವುದು ಬಿಎಸ್‌ವೈ ಮಾತ್ರ ಎಂಬುದು ವಿಶೇಷ

ಫೆಬ್ರವರಿ ೧೦ರಿಂದ ೧೪ರವರೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರಾಂತದಲ್ಲಿ ಪ್ರವಾಸದಲ್ಲಿದ್ದಾರೆ. ರಾಹುಲ್ ಗಾಂಧಿಯವರ ಭಾಷಣಗಳು ಮತ್ತು ಕೇಂದ್ರ ಸರ್ಕಾರ-ಮೋದಿ ವಿರುದ್ಧ ಅವರ ಟೀಕಾ ಪ್ರಹಾರ ಪ್ರಮುಖ ಮಾಧ್ಯಮಗಳು ಮತ್ತು ಸಾಮಾಜಿಕ ತಾಣಗಳನ್ನು ಆವರಿಸಿಕೊಂಡಿವೆ. ಆದರೆ ರಾಜ್ಯದ ಪ್ರಮುಖ ವಿಪಕ್ಷವಾಗಿರುವ ಬಿಜೆಪಿಯ ಪ್ರತಿಕ್ರಿಯೆ ಮಾತ್ರ ಬಹಳ ನೀರಸವಾಗಿರುವುದು ಅಚ್ಚರಿಯ ವಿಷಯ. ಶನಿವಾರ ಮತ್ತು ಭಾನುವಾರದಂದು ಸಾಮಾಜಿಕ ತಾಣಗಳಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧಿಸುವುದು ಅಥವಾ ಟೀಕಿಸುವ ವಿಶೇಷ ನೆಗೆಟಿವ್ ಪ್ರಚಾರ ಕಂಡುಬರಲಿಲ್ಲ. ಇದು ಬಿಜೆಪಿಯ ಜಾಯಮಾನಕ್ಕೆ ವಿರುದ್ಧವಾದ ಬೆಳವಣಿಗೆ. ಸಾಮಾಜಿಕ ತಾಣಗಳಲ್ಲಿ ಸದಾ ರಾಹುಲ್ ಗಾಂಧಿ ವಿರುದ್ಧ ಪ್ರಚಾರ ಅಭಿಯಾನ ಕೈಗೊಳ್ಳುವ ಬಿಜೆಪಿ ಈ ಬಾರಿ ಟ್ವಿಟರ್‌ನಲ್ಲಿ ವಿಶೇಷವಾದ ಪ್ರತಿರೋಧ ತೋರಿಸದೆ ಇರುವುದು ಸೋಜಿಗ.

ರಾಹುಲ್ ಗಾಂಧಿ ಆಗಮನಕ್ಕೆ ಮೊದಲು ಫೆ.೯ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಹುಲ್ ಗಾಂಧಿಯವರು ದೇವಾಲಯಗಳಿಗೆ ಭೇಟಿಕೊಡುತ್ತಿರುವ ಬಗ್ಗೆ ತಮಾಷೆ ಮಾಡಿದ್ದರು. “ನಾನು #ElectionHindu (ಚುನಾವಣಾ ಸಮಯದ ಹಿಂದು) ರಾಹುಲ್ ಗಾಂಧಿ ಅವರನ್ನು ಬಳ್ಳಾರಿಗೆ ಹೃತ್ಪೂರ್ವಕ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಮುಕ್ತ ಕರ್ನಾಟಕದ ನಮ್ಮ ಕನಸನ್ನು ನನಸಾಗಿಸಲಿದ್ದಾರೆ” ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದರು. #ElectionHindu ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಸರಣಿ ಟ್ವೀಟ್ ಮಾಡಿದ ಬಿಎಸ್ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು. ಆದರೆ ತಮ್ಮ ರಾಜ್ಯಾಧ್ಯಕ್ಷರು ಸ್ವತಃ ಹ್ಯಾಷ್‌ಟ್ಯಾಗ್‌ ಕೊಟ್ಟು ಟ್ವೀಟ್ ಮಾಡಿದರೂ ಬಿಜೆಪಿಯ ಉಳಿದ ಟ್ವಿಟರ್ ಹ್ಯಾಂಡಲ್‌ಗಳು ಅದನ್ನು ಬಳಸಿಕೊಳ್ಳಲಿಲ್ಲ. ಕೆಲ ಸಾಮಾನ್ಯ ಬಿಜೆಪಿ ಬೆಂಬಲಿಗರು ಮಾತ್ರ ಈ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್‌ಗಳನ್ನು ಮಾಡಿದ್ದರು. ಆದರೆ ಅಧಿಕೃತ ಖಾತೆಗಳೆಂದು ನೀಲಿ ಗುರುತಿರುವ ಹ್ಯಾಂಡಲ್‌ಗಳು ಈ ಹ್ಯಾಷ್‌ಟ್ಯಾಗ್‌ ಬಳಸಲಿಲ್ಲ. ಕೆಲವು ಮಾಧ್ಯಮಗಳು, “ಬಿಎಸ್ ಯಡಿಯೂರಪ್ಪ ಅವರು ರಾಹುಲ್ ಗಾಂಧಿಯವರನ್ನು ಚುನಾವಣಾ ಹಿಂದೂ ಎಂದು ಕರೆದಿದ್ದಾರೆ,” ಎಂದು ಸುದ್ದಿ ಮಾಡಿದ ಮೇಲೂ ಬಿಜೆಪಿ ಖಾತೆಗಳು ಎಚ್ಚೆತ್ತುಕೊಳ್ಳಲೇ ಇಲ್ಲ.

ಇದೇ ರೀತಿಯಲ್ಲಿ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಫೆ.೧೦ರಂದು #RahulMustAnswer (ರಾಹುಲ್ ಉತ್ತರಿಸಬೇಕು) ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಹಾಕಿದೆ. ಆದರೆ ಈ ಹ್ಯಾಷ್‌ಟ್ಯಾಗ್‌ಗೂ ಯಾರೂ ಬೆಂಬಲ ತೋರಿಸಲಿಲ್ಲ. ಈ ಹ್ಯಾಷ್‌ಟ್ಯಾಗ್ ವಿಚಾರದಲ್ಲೂ ಅದೇ ಕತೆ ಮುಂದುವರಿಯಿತು. ಹೆಚ್ಚು ಬೆಂಬಲಿಗರಿಲ್ಲದ ಕೆಲವು ಬಿಜೆಪಿ ಪರ ಹ್ಯಾಂಡಲ್‌ಗಳು ಮಾತ್ರ ಈ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್‌ಗಳನ್ನು ಹಾಕಿವೆ. ಆದರೆ ರಾಹುಲ್ ಗಾಂಧಿ ವಿರುದ್ಧ ಒಗ್ಗಟ್ಟಿನ ಪ್ರತಿರೋಧ ಇಲ್ಲೂ ವ್ಯಕ್ತವಾಗಲಿಲ್ಲ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್‌ | ಪರ್ರಿಕರ್‌ಗೆ ಬಿಯರ್‌ ಸೇವನೆಯ ಹೇಳಿಕೆಗೆ ಮಹಿಳೆಯರ ಟಾಂಗ್‌

ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಫೆ.೯ ಮತ್ತು ೧೦ರಂದು ಒಂದೊಂದು ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್‌ಗಳಲ್ಲಿ ಅವರು ಹ್ಯಾಷ್‌ಟ್ಯಾಗ್ ಬಳಸಲಿಲ್ಲ. “ಇಂದು ಕರ್ನಾಟಕ ರಾಜ್ಯಕ್ಕೆ ಆಗಮಿಸುತ್ತಿರುವ ದೇಶದೆಲ್ಲಡೆ ಜನರಿಂದ ತಿರಸ್ಕರಿಸಲ್ಪಟ್ಟು ಭಾರೀ ನಷ್ಟದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕುಟುಂಬ ವ್ಯಾಪಾರ ಸಂಸ್ಥೆಯ ಹೊಸ ಮುಖ್ಯಸ್ಥ ಶ್ರೀ ರಾಹುಲ್ ಗಾಂಧಿ ರವರಿಗೆ ಸ್ವಾಗತ," ಎಂದು ಸದಾನಂದ ಗೌಡರು ಬರೆದಿದ್ದಾರೆ. ಜೊತೆಗೆ ಬಿಎಸ್ ಯಡಿಯೂರಪ್ಪ ಅವರ ಟ್ವೀಟ್‌ ಅನ್ನು ರಿಟ್ವೀಟ್ ಮಾಡಿದ್ದಾರೆ. ಆದರೆ ಈ ಒಂದೆರಡು ಟ್ವೀಟ್‌ಗಳು ಬಿಟ್ಟರೆ ವಿಶೇಷವಾಗಿ ರಾಹುಲ್ ಗಾಂಧಿ ಅವರನ್ನು ವಿರೋಧಿಸುವ ಪ್ರಯತ್ನ ಟ್ವಿಟರ್‌ನಲ್ಲಿ ಸದಾನಂದ ಗೌಡರಿಂದ ಕಂಡುಬರಲಿಲ್ಲ.

ಇವರನ್ನು ಹೊರತುಪಡಿಸಿ, ಕೇಂದ್ರ ಸಚಿವರಾದ ಅನಂತಕುಮಾರ್, ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ರಾಜ್ಯ ಬಿಜೆಪಿ ನಾಯಕರಾದ ಜಗದೀಶ್‌ ಶೆಟ್ಟರ್, ಕೆ ಎಸ್ ಈಶ್ವರಪ್ಪ ಅವರಿಂದ ರಾಹುಲ್ ಗಾಂಧಿ ವಿಚಾರವಾಗಿ ಒಂದು ಟ್ವೀಟ್ ಕೂಡ ಬರಲಿಲ್ಲ. ಸಾಮಾನ್ಯವಾಗಿ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಬಿಜೆಪಿ ಶಾಸಕ ಸಿಟಿ ರವಿ #ElectionHindu ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಒಂದು ಟ್ವೀಟ್ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಇನ್ಯಾವುದೇ ಹ್ಯಾಷ್‌ಟ್ಯಾಗ್‌ಗೆ ನೆರವಾಗಲಿಲ್ಲ. ಆದರೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರ ವಿರುದ್ಧ ಎಂದಿನ ಧ್ವೇಷಪೂರಿತ ಟ್ವೀಟ್‌ಗಳನ್ನು ಮಾತ್ರ ಸಾಕಷ್ಟು ಹಾಕಿದ್ದಾರೆ. ಅದನ್ನು ಹೊರತುಪಡಿಸಿದರೆ, ಬಿ ಎಸ್ ಯಡಿಯೂರಪ್ಪನವರು ಮಾತ್ರ ಒಬ್ಬಂಟಿ ಸೈನಿಕರಂತೆ ಸರಣಿ ಟ್ವೀಟ್‌ಗಳನ್ನು ಹಾಕುತ್ತ ರಾಹುಲ್ ಗಾಂಧಿ ಕಾರ್ಯಕ್ರಮ, ಭಾಷಣ ಮತ್ತು ಕಾಂಗ್ರೆಸ್ ವಿರುದ್ಧ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ.

ವಾಸ್ತವದಲ್ಲಿ ಬಿಜೆಪಿಯ ಸಾಮಾಜಿಕ ತಾಣಗಳ ಹೊಣೆ ಹೊತ್ತುಕೊಂಡಿರುವುದು ಕೆಲವು ಕಾರ್ಪೋರೆಟ್ ಸಂಸ್ಥೆಗಳು. ಆ ಸಂಸ್ಥೆಗಳು ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮೇಲೆ ಹೆಚ್ಚು ಗಮನ ಕೊಡುತ್ತವೆ. ಅಲ್ಲದೆ, ಶನಿವಾರ ಮತ್ತು ಭಾನುವಾರದಂದು ಸಾಮಾನ್ಯ ಕಾರ್ಪೋರೇಟ್ ಸಂಸ್ಕೃತಿಯಂತೆ ರಜಾ ಮೋಜಿನಲ್ಲಿರುತ್ತಾರೆ ಸಿಬ್ಬಂದಿಗಳು. ಕಳೆದ ಭಾನುವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಿದಾಗಲು ಇದೇ ಸಮಸ್ಯೆಯಿಂದಾಗಿ ಸಾಮಾಜಿಕ ತಾಣದಲ್ಲಿ ಬಿಜೆಪಿ ನೀರಸವಾಗಿತ್ತು. ಹೀಗಾಗಿ ಚುನಾವಣಾ ಸಂದರ್ಭಗಳಲ್ಲಿ, ವೀಕೆಂಡ್‌ಗಳಲ್ಲಿಯೂ ಸಕ್ರಿಯವಾಗಿ ರಾಜಕೀಯ ಚಟುವಟಿಕೆಗಳು ಇದ್ದಾಗ ಬಿಜೆಪಿಯ ಸಾಮಾಜಿಕ ತಾಣ ನಿದ್ದೆ ಮಾಡುತ್ತಿದೆ ಎಂದಾಯಿತು!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More