ವಿಡಿಯೋ ಸ್ಟೋರಿ | ಜನರ ಆಶೀರ್ವಾದದ ಜೊತೆ ಹುಲಿಗೆಮ್ಮನ ಕೃಪೆ ಬೇಡಿದ ರಾಹುಲ್

ಗುಜರಾತ್ ಚುನಾವಣೆ ಸಂದರ್ಭದಲ್ಲಿ ರಾಹುಲ್ ನಡೆಸಿದ ದೇಗುಲಗಳ ಸರಣಿ ಭೇಟಿ ಟೀಕೆ-ಟಿಪ್ಪಣಿ ಸಹಿತ ದೊಡ್ಡ ಚರ್ಚೆಯಾಗಿತ್ತು. ಕರ್ನಾಟಕದ ಚುನಾವಣಾ ಯಾತ್ರೆಯುದ್ದಕ್ಕೂ ರಾಹುಲ್ ಇದೇ ಪ್ರಚಾರ ವೈಖರಿಯ ರಾಜಕೀಯ ಪ್ರಯೋಗವನ್ನು ಮುಂದುವರಿಸುವಂತೆ ಕಾಣುತ್ತಿದೆ

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶವನ್ನಿಟ್ಟುಕೊಂಡು ರಾಜ್ಯದಲ್ಲಿ ‘ಜನಾಶೀರ್ವಾದ ಯಾತ್ರೆ’ ಆರಂಭಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಭೆ, ರೋಡ್ ಶೋಗಳ ಜೊತೆಜೊತೆಗೇ ದೇಗುಲ, ಮಠಮಾನ್ಯಗಳ ಭೇಟಿಯನ್ನೂ ಮಾಡುತ್ತಿದ್ದಾರೆ. ಗುಜರಾತ್ ಚುನಾವಣೆ ಸಂದರ್ಭದಲ್ಲಿ ರಾಹುಲ್ ನಡೆಸಿದ ದೇಗುಲಗಳ ಸರಣಿ ಭೇಟಿಯನ್ನು 'ಟೆಂಪಲ್ ರನ್’, ‘ಮೃದು ಹಿಂದುತ್ವ’ ಎಂದೆಲ್ಲ ಬಿಂಬಿಸಲಾಗಿತ್ತು. ಸಮರ್ಥನೆ, ಟೀಕೆ-ಟಿಪ್ಪಣಿ ಸಹಿತ ದೊಡ್ಡ ಚರ್ಚೆಯೂ ನಡೆದಿತ್ತು. ಅದೇನಿದ್ದರೂ, ಈ ಪ್ರಯೋಗ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ನೀಡಿದ್ದು ಫಲಿತಾಂಶದಲ್ಲಿ ವ್ಯಕ್ತವಾಗಿತ್ತು. ಆದ್ದರಿಂದಲೇ, ಕರ್ನಾಟಕದ ಚುನಾವಣಾ ಯಾತ್ರೆಯುದ್ದಕ್ಕೂ ರಾಹುಲ್ ಇದೇ ಪ್ರಚಾರ ವೈಖರಿಯ ರಾಜಕೀಯ ಪ್ರಯೋಗವನ್ನು ಮುಂದುವರಿಸುವಂತೆ ಕಾಣುತ್ತಿದೆ.

ಕರ್ನಾಟಕ ಪ್ರವಾಸದ ಮೊದಲ ಹಂತದ ಮೊದಲ ದಿನವಾದ ಶನಿವಾರ (ಫೆ.10) ಕೊಪ್ಳಳ ಜಿಲ್ಲೆಯ ಹುಲಿಗಿ ಗ್ರಾಮದ ಹುಲಗೆಮ್ಮ ದೇವಸ್ಥಾನ ಹಾಗೂ ಶ್ರೀಗವಿಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಜನಾಶೀರ್ವಾದ ಯಾತ್ರೆಗೆ ಮಧ್ಯಾಹ್ನ ಚಾಲನೆ ನೀಡಿ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಅಲ್ಲಿಂದ ನೇರ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿದ ಅವರಿಗೆ, ಡೊಳ್ಳು ಕುಣಿತ ಹಾಗೂ ಕಂಚಿಮೇಳದ ಸ್ವಾಗತ ದೊರೆಯಿತು.

ದೇವಿಯ ದರ್ಶನ ಪಡೆದು, ದೇವಸ್ಥಾನದ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಪಡೆದ ರಾಹುಲ್, ತೀರ್ಥ-ಪ್ರಸಾದ ಸ್ವೀಕರಿಸಿದರು. ದೇಗುಲಕ್ಕೆ ಪ್ರಥಮ ಬಾರಿಗೆ ಆಗಮಿಸಿದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ ಹಾಗೂ ಡಿ ಕೆ ಶಿವಕುಮಾರ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಡೊಳ್ಳು ಕಲಾವಿದರಿಗೆ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸಾಥ್ ನೀಡಿದ್ದು ಗಮನ ಸೆಳೆಯಿತು. ನಂತರ, ಕೊಪ್ಪಳದ ಗವಿಮಠಕ್ಕೆ ತೆರಳಿದ ರಾಹುಲ್, ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಮಠದ ವಿಶೇಷತೆಗಳ ಬಗ್ಗೆ ಮಾಹಿತಿ ಪಡೆದು, ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಭೇಟಿ ಮಾಡಿ ಮಾತನಾಡಿದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More