ತ್ರಿಪುರದಲ್ಲಿ ಮಾಣಿಕ್ ಸರ್ಕಾರ್ ಆಡಳಿತ ನಿಜಕ್ಕೂ ಏನನ್ನೂ ಸಾಧಿಸಿಲ್ಲವೇ?

ತ್ರಿಪುರ ರಾಜ್ಯದಲ್ಲಿ ಫೆ.18ರಿಂದ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಹೇಗಾದರೂ ಮಾಡಿ ಇಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಬೇಕೆಂಬುದು ಬಿಜೆಪಿ ಕನಸು. ಇತ್ತೀಚೆಗೆ ಪ್ರಧಾನಿ ಮೋದಿ, ತ್ರಿಪುರದ ಈವರೆಗಿನ ಅಭಿವೃದ್ಧಿ ಏನೇನೂ ಅಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಅದು ಎಷ್ಟು ನಿಜ? ಇಲ್ಲಿದೆ ಅಸಲಿ ವಿಷಯ

ತ್ರಿಪುರ ಎಂಬ ಪುಟ್ಟ ರಾಜ್ಯವು ಭಾರತದ ರಾಜಕಾರಣದಲ್ಲಿ ಸವಾಲಿನಂತೆ, ಬೆರಗಿನಂತೆ ಕಾಣಿಸಿಕೊಳ್ಳುತ್ತಲೇ ಬಂದಿದೆ. ೩೬,೭೩,೯೧೭ದಷ್ಟು ಜನಸಂಖ್ಯೆ ಹೊಂದಿರುವ ಈ ರಾಜ್ಯವು ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಪರಿಶಿಷ್ಟ ಪಂಗಡದವರನ್ನು ಹೊಂದಿದೆ. ಬೆಟ್ಟಗುಡ್ಡಗಳಲ್ಲಿ ಅರಳಿನಿಂತ ಈ ತ್ರಿಪುರ ಸಂಪನ್ಮೂಲಗಳ ಕೊರತೆಯಿಂದಲೂ ವಿಭಜನಕಾರಿಗಳ ಉಗ್ರವಾದಿಗಳ ಬೆದರಿಕೆಯಿಂದಲೂ ನರಳುತ್ತಿದ್ದಿದ್ದು ಹೌದು. ಒಂದೆಡೆ, ಅಕ್ಷರಗಳ ಅರಿವಿನೊಂದಿಗೆ ಜನತೆಯು ಚಳವಳಿಯ ತೆಕ್ಕೆಗೆ ಬಂದರೆ ಇನ್ನೊಂದೆಡೆ, ಇದಕ್ಕೆ ವಿರುದ್ಧವಾಗಿ ಪ್ರತ್ಯೇಕತೆಯ ಶಕ್ತಿಗಳು ರಾಜಕೀಯ ರಂಗದಲ್ಲಿ ಹಿಡಿತ ಸಾಧಿಸಲು ಹವಣಿಸಿದ್ದರಿಂದ ತ್ರಿಪುರ ಸಾಕಷ್ಟು ಸೆಣಸಿದೆ. ರಕ್ತಸಿಕ್ತ ಚರಿತ್ರೆಯಲ್ಲಿ ರೈತರು, ಮಹಿಳೆಯರು ಯವಕರು ಹುತಾತ್ಮರಾಗಿದ್ದಿದೆ.

ಅಧ್ಯಾತ್ಮಿಕ ಮುಖವಾಡದಲ್ಲಿ ಅಲ್ಲಿನ ಜನತೆಯನ್ನು ಒಡೆಯಲು ಪ್ರಯತ್ನಿಸಿದ್ದು ಇದೆ. ಬುಡಕಟ್ಟು ಮತ್ತು ಬುಡಕಟ್ಟೇತರ ನಡುವೆ ವೈರುದ್ಧ್ಯ ಹುಟ್ಟಿಸಲಾಯಿತು. ಹಾಗೆಯೇ, ಬೆಂಗಾಲಿ ಮತ್ತು ಬೆಂಗಾಲಿಯೇತರ ಜನತೆಯನ್ನುಪರಸ್ಪರ ಎತ್ತಿಕಟ್ಟುವ ಹುನ್ನಾರವೂ ಹೆಣೆಯಲಾಗಿತ್ತು.  ಅನನ್ಯತೆಯ ಪ್ರಶ್ನೆಯನ್ನು ನಿರಂತರ ದಾಳವಾಗಿ ಬಳಸುತ್ತ ಬಂದ ರಾಜಕೀಯ ಸಂಗತಿಗಳು ತ್ರಿಪುರದಲ್ಲಿ ನಡೆದಿವೆ. ಇವೆಲ್ಲವೂ ಜನತೆಯ ಅನ್ನದ, ಅಕ್ಷರದ, ಉದ್ಯೋಗದ, ಅಭಿವೃದ್ಧಿಯ ಪ್ರಶ್ನೆಗಳಾಗದೆ ಭಾವನಾತ್ಮಕ ಸಂಗತಿಗಳ ನೆರವಿನಿಂದಲೇ ತ್ರಿಪುರವನ್ನು ಆಳುವ ಮನೋಭಾವ ಹೊಂದಿದ್ದನ್ನು ಜನತೆ ಕ್ರಮೇಣ ಅರ್ಥ ಮಾಡಿಕೊಂಡರು. ಹೀಗಾಗಿ, ರಾಜ್ಯದ ಯಾವ ಮೂಲೆಗೆ ಹೋದರೂ ಆರ್ಥಿಕ ಪ್ರಶ್ನೆಯೊಂದಿಗೆ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಪ್ರತಿಕ್ರಿಯಿಸುತ್ತಾರೆ.

ತೀವ್ರ ರಾಜಕೀಯ ತಿಳಿವಳಿಕೆಯೊಂದಿಗೆ ಇಂದಿನ ಸರಕಾರದ ಧೋರಣೆಯನ್ನು ಮೆಚ್ಚುತ್ತಲೂ, ವಿಮರ್ಶಿಸುತ್ತಲೂ, ಟೀಕಿಸುತ್ತಲೂ ಪ್ರತಿಕ್ರಿಯೆ ಮಾಡುವರೆಂದರೆ, ಜನರಿಗೆ ಅಷ್ಟರಮಟ್ಟಿಗೆ ರಾಜಕೀಯ ವಿಶ್ಲೇಷಣಾತ್ಮಕ ದೃಷ್ಟಿಕೋನ ಲಭ್ಯವಾಗಿದೆ ಎಂದೇ ಅರ್ಥ. ತ್ರಿಪುರದಲ್ಲಿ ಜನರು ಚಳವಳಿಯಲ್ಲಿ ತೊಡಗುವಿಕೆ ಆರಂಭವಾಗಿದ್ದು ಬುಡಕಟ್ಟುಗಳಲ್ಲಿ ಮತ್ತು ಬುಡಕಟ್ಟೇತರ ಜನಸಮುದಾಯದಲ್ಲಿ ಅಕ್ಷರ ಕಲಿಯುವ ಮೂಲಕ. ಇಂತಹ ಅಕ್ಷರದ ಆಂದೋಲನ ಆರಂಭ ಮಾಡಿದ್ದು ದಶರಥ ದೇಬ್ ಬರ್ಮಾ. ನಂತರದಲ್ಲಿ ಇವರೇ ಎಡಪಕ್ಷಗಳ ನಾಯಕರಾಗಿ ತ್ರಿಪುರದ ಮುಖ್ಯಮಂತ್ರಿಯಾದರು.

ಹಿಂದಿ ಭಾಷಾ ಹೇರಿಕೆಯ ಭಯದಲ್ಲಿ ಇತರ ರಾಜ್ಯಗಳ ಮಾತೃಭಾಷೆಗಳು ಬಳಲುತ್ತಿದ್ದರೆ, ತ್ರಿಪುರದಲ್ಲಿ ಮಾತ್ರ ಬುಡಕಟ್ಟು ಭಾಷೆಯಾದ ಕೋಕಬರೊವನ್ನು ಮುನ್ನೆಲೆಗೆ ತರಲಾಗಿದೆ ಮತ್ತು ಕೋಕಬರೊ ಭಾಷೆಯಲ್ಲಿಯೇ ಶಿಕ್ಷಣವನ್ನೂ ಕೊಡಲಾಗುತ್ತಿದೆ. ಮಾತ್ರವಲ್ಲ, ಭಾಷೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ಅಕಾಡೆಮಿಯನ್ನು ಮತ್ತು ರಾಜ್ಯ ಬುಡಕಟ್ಟು ಮ್ಯೂಸಿಯಂ ಅನ್ನು ಸ್ಥಾಪಿಸಲಾಗಿದೆ. ಈ ಎರಡೂ ಸಂಸ್ಥೆಗಳ ಮೂಲಕ ಬುಡಕಟ್ಟು ಜನತೆಯ ಅಸ್ಮಿತೆಯ ಅನನ್ಯತೆಯನ್ನು ಸಂರಕ್ಷಿಸುವ ಕೈಂಕರ್ಯವನ್ನು ರಾಜ್ಯ ಸರಕಾರವು ಕೈಗೊಂಡಿದೆ. ಬಹುಸಾಂಸ್ಕೃತಿಕ ಪರಂಪರೆಯ ನೈಜ ಬದುಕಿನ ಅನಾವರಣವು ತ್ರಿಪುರದಲ್ಲಿ ನೋಡಲು ಸಾಧ್ಯ. ಏಕಸಂಸ್ಕೃತಿ ಭಾಷೆಯ ಧಾಳಿಯ ಭೀತಿಯಲ್ಲಿ ಮಾತೃಭಾಷೆಗಳು ಸ್ಥಳೀಯ ಸಾಂಸ್ಕೃತಿಕ ಪರಂಪರೆಯು ಅಳಿವಿನತ್ತ ಜಾರುತ್ತಿರುವ ಹೊತ್ತಿನಲ್ಲಿ ತ್ರಿಪುರ ಅಚ್ಚರಿಯೇ ಸರಿ.

ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ ನಿವಾರಣೆಯಲ್ಲಿ ಇತರ ರಾಜ್ಯಗಳಗೆ ಹೋಲಿಸಿ ನೋಡಿದರೂ ತ್ರಿಪುರದಲ್ಲಿ ಅಚ್ಚರಿ ಇಣುಕುತ್ತದೆ. ದೇಶದ ಮಟ್ಟದಲ್ಲಿ ಬಡತನ ನಿವಾರಣೆಯ ಪ್ರಮಾಣ ಶೇ.೩೪ ಇದ್ದರೆ, ತ್ರಿಪುರ ರಾಜ್ಯದಲ್ಲಿ ಶೇ.೬೨ರಷ್ಟು ಬಡತನದ ಕುಸಿತವಾಗಿದೆ. ತ್ರಿಪುರದಲ್ಲಿ ಕೇವಲ ಶೇ.೧೪ರಷ್ಟು ಜನತೆಯು ಬಡತನರೇಖೆಯ ಕೆಳಗಿನವರು. ಇವರನ್ನೂ ಆರ್ಥಿಕವಾಗಿ ಮೇಲೆತ್ತಲು ಯೋಜನೆಗಳನ್ನು ರೂಪಿಸಲಾಗಿದೆ. ಬುಡಕಟ್ಟು ಸಮುದಾಯಕ್ಕೆ ಸಂವಿಧಾನದ ಐದು ಮತ್ತು ಆರನೆಯ ಪರಿಚ್ಛೇದದಡಿ ವಿಶೇಷ ಹಕ್ಕನ್ನು ಕೊಡಲಾಗಿದೆ.

ರಾಜ್ಯ ಸರಕಾರದಂತೆಯೇ ಕಾರ್ಯನಿರ್ವಹಿಸುವ ಟಿಟಿಎಎಡಿಸಿ (ದಿ ಟ್ರೈಬಲ್ ಎರಿಯಾ ಅಟಾನಮಸ್ ಡೆವಲಪಮೆಂಟ್ ಕೌನ್ಸಿಲ್), ಬುಡಕಟ್ಟು ಸಮುದಾಯಗಳನ್ನು ಮೇಲೆತ್ತಲು ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಸ್ಥಳೀಯ ಸಮಿತಿಗಳನ್ನು ಪ್ರಜಾಪ್ರಭುತ್ವ ನೆಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ರಾಜ್ಯ ಸರಕಾರವು, ಅವುಗಳ ಮೂಲಕವೇ ಆರ್ಥಿಕ ಸಬಲೀಕರಣವನ್ನು ಜಾರಿ ಮಾಡಿಸಿದೆ. ಜನತೆಯನ್ನು ಒಳಗೊಳ್ಳುವ ಪ್ರಕ್ರಿಯೆಯಿಂದ ತಳಹಂತದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವುದು. ತನ್ಮೂಲಕವೇ ಜನತೆಯ ಆರ್ಥಿಕ ಮಟ್ಟ ಹೆಚ್ಚಲು ಸಾಧ್ಯವಾಗುವುದು. ಆದರೆ, ಕೇಂದ್ರದ ಮೋದಿ ಸರಕಾರವು ಪರಿಶಿಷ್ಟ ಜಾತಿಯವರಿಗಾಗಿ ಇರುವ ಟ್ರೈಬಲ್ ಸಬ್ ಪ್ಲ್ಯಾನ್ (ಟಿಎಸ್ಪಿ) ಮತ್ತು ಸ್ಪೆಷಿಯಲ್ ಕಾಂಪೊನೆಂಟ್ ಪ್ಲ್ಯಾನ್‌ಗೆ ಧಕ್ಕೆ ತಂದಿದೆ. ಆದರೆ, ತ್ರಿಪುರ ಸರಕಾರ ಮಾತ್ರ ಕೇಂದ್ರ ಸರಕಾರದ ಧೋರಣೆಯನ್ನು ಧಿಕ್ಕರಿಸಿ, ಜನಸಂಖ್ಯೆಗೆ ಅನುಗುಣವಾಗಿ ಹಣಕಾಸು ಪಡೆಯುವುದು ಬುಡಕಟ್ಟು ಜನರ ಹಕ್ಕಾಗಿದೆ ಎಂದು ಪ್ರತಿಪಾದಿಸಿ, ಶೇ.೩೧ರಷ್ಟು ಮೊತ್ತವನ್ನು ನಿರಂತರವಾಗಿ ಬಿಡುಗಡೆ ಮಾಡುತ್ತಿದೆ.

ಅತ್ಯಂತ ಕಡಿಮೆ ಉಳುಮೆಯೋಗ್ಯ ಭೂಮಿ ಹೊಂದಿದ್ದರೂ ೨೦೦೯ರಿಂದೀಚೆಗೆ ಕೃಷಿ ಸಹ ಅಭಿವೃದ್ಧಿ ಹೊಂದುತ್ತಿದೆ. ಹಣ್ಣು, ತರಕಾರಿ ಮತ್ತು ಮಸಾಲೆ ವಸ್ತುಗಳ ಉತ್ಪಾದನೆಯು ಶೇ.೬೮ರಷ್ಟು ಏರಿಕೆ ಕಂಡಿದೆ. ತ್ರಿಪುರ ಈಗ ರಬ್ಬರ್ ಉತ್ಪಾದನೆಯಲ್ಲಿ ಕೇರಳದ ನಂತರ ಎರಡನೆಯ ಸ್ಥಾನಕ್ಕೇರಿದೆ. ಅಕ್ಕಿ ಇಳುವರಿಯಲ್ಲಿ ಗುಜರಾತ್ ಶೇ.೩೬ ಹೆಚ್ಚಳ ಕಂಡರೆ, ತ್ರಿಪುರ ಶೇ.೪೦ರಷ್ಟು ಹೆಚ್ಚಳ ಕಂಡಿದೆ (ದೇಶದಲ್ಲಿ ಶೇ.೨೦ರಷ್ಟು ಮಾತ್ರ ಹೆಚ್ಚಳವಿದೆ). ೨೦೦೯-೨೦೧೬ರ ಅವಧಿಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಮಾಡಿದೆ. ಈ ಮೂಲಕ ರೈತರನ್ನು, ಕೃಷಿ ಕೂಲಿಕಾರರನ್ನು ಆರ್ಥಿಕ ಭದ್ರತೆಯೆಡೆಗೆ ಧಾಪುಗಾಲಿಡುವಂತೆ ಮಾಡಲಾಗಿದೆ. ಕೃಷಿಕೂಲಿ ಕಾರ್ಮಿಕರು ದಿನಕ್ಕೆ ೪೦೦ರಿಂದ ೪೫೦ ರು. ಕೂಲಿ ಪಡೆಯುವರು. ಈ ಪ್ರಮಾಣವು ಇತರ ಅನೇಕ ರಾಜ್ಯಗಳಿಗಿಂತಲೂ (ಗುಜರಾತ್‌, ಮಧ್ಯಪ್ರದೇಶ, ಛತ್ತಿಸಗಢ, ಜಾರ್ಖಂಡ್ ಇತ್ಯಾದಿ) ಹೆಚ್ಚಿದೆ.

ತ್ರಿಪುರವು ಎರಡನೆಯ ಅತಿ ದೊಡ್ಡ ಸಾಕ್ಷರ ನಾಡಾಗಿದೆ. ಶೇ.೯೭.೨೨ರಷ್ಟಿದೆ ಸಾಕ್ಷರತೆ. ಮಹಿಳಾ ಸಾಕ್ಷರತೆ ಪ್ರಮಾಣ ಶೇ.೭೧.೬ರಷ್ಟಿದೆ. ದೇಶದಲ್ಲಿ ಈ ಪ್ರಮಾಣವು ಶೇ.೪೯.೪ರಷ್ಟಿದೆ. ಗರ್ಭಿಣಿಯರು ಹೆರಿಗೆಗೂ ಮುನ್ನವೇ ಉಳಿದುಕೊಳ್ಳಲು ಮಾಯೆರ್ ಘರ್ (ತಾಯಿ ಕೋಣೆ) ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ಸಂರಕ್ಷಣೆಯಲ್ಲಿಯೂ ತ್ರಿಪುರ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿನ ಅಭಿವೃದ್ಧಿಯನ್ನೇ ಪ್ರಧಾನ ಆದ್ಯತೆಯಾಗಿ ಪರಿಗಣಿಸಿದೆ.

ಇದನ್ನೂ ಓದಿ : ತ್ರಿಪುರಾ ಸಿಎಂ ಮಾಣಿಕ್‌ ಸರ್ಕಾರ್ ಬಳಿ ಇರುವುದು ಕೇವಲ ೩,೯೩೦ ರುಪಾಯಿ!

ಕೈಗಾರಿಕಾ ಬೆಳವಣಿಗೆಯಲ್ಲೂ ತ್ರಿಪುರ ಉತ್ತಮ ಸ್ಥಾನ ಕಾಯ್ದುಕೊಂಡಿದೆ. ಹಾಗೆ ನೋಡಿದರೆ, ತ್ರಿಪುರ ರಾಜ್ಯಕ್ಕೆ ಸಾರಿಗೆ-ಸಂಪರ್ಕಕ್ಕೆಅನುಕೂಲಕರ ಮಾರ್ಗವಿಲ್ಲ. ಸಿಂಗಲ್ ಗೇಜ್ ರೈಲುಮಾರ್ಗವು ವಿಳಂಬದ ದಾರಿಯಾಗಿದೆ. ರಸ್ತೆ ಮಾರ್ಗವಂತೂ ಇನ್ನೂ ವಿಳಂಬವೇ. ಹೀಗಿದ್ದಾಗ, ಕೈಗಾರಿಕೆಗಳನ್ನು ಹೇಗೆ ಅಭಿವೃದ್ದಿಗೊಳಿಸುವುದು? ಉತ್ಪನ್ನವಾದ ವಸ್ತುಗಳ ಆಮದು, ರಫ್ತಿಗೆ ಅವಕಾಶವೇ ಇಲ್ಲದಂಥ ಭೌಗೋಳಿಕ ಪ್ರದೇಶ ಹೊಂದಿದ್ದು ಹೌದು. ಆದರೆ, ರೈಲುಮಾರ್ಗಕ್ಕಾಗಿ ಅಲ್ಲಿನ ಸರಕಾರವು ಬಹಳ ಶ್ರಮಿಸಿದರೂ ಕೇಂದ್ರ ಸರಕಾರದ ತಾರತಮ್ಯ ಧೋರಣೆಯ ಕಾರಣದಿಂದ ತಡವಾಗಿ ಸಾಕಾರಗೊಂಡಿದೆ. ತ್ರಿಪುರದ ರಾಜಧಾನಿ ಅಗರ್ತಲಾ ೨೦೦೮ರಲ್ಲಿ ರೈಲು ಸಂಕರ್ಪ ಪಡೆದಿದೆ.

ಸಾಕಷ್ಟು ಅಡ್ಡಿ-ಆತಂಕ ಎದುರಿಸುತ್ತ ನಿರುದ್ಯೋಗ ನಿವಾರಿಸುವುದು ಸರಕಾರಕ್ಕೊಂದು ಸವಾಲೇ. ಒಂದೆಡೆ, ಕೇಂದ್ರ ಸರಕಾರದ ತಾರತಮ್ಯ ಧೋರಣೆ ಮತ್ತು ನವ ಉದಾರವಾದ ನೀತಿ, ಹೀಗೆ ಇಕ್ಕೆಲದಿಂದಲೂ ನಿರುದ್ಯೋಗದ ದಾಳಿ ಎದುರಿಸುತ್ತಿದೆ. ಆದಾಗ್ಯೂ, ಒಟ್ಟು ಜನಸಂಖ್ಯೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಉದ್ಯೋಗ ಪಡೆದುಕೊಂಡವರ ಪ್ರಮಾಣವು ಇತರ ರಾಜ್ಯಗಳಿಗೆ ಹೋಲಿಸಿದರೆ ಗಮನಾರ್ಹ ಪ್ರಗತಿ ಕಂಡುಬರುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More