ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೊರತಾದ ರಾಜಕೀಯ ಸಂಘಟನೆಗಳ ಒಲವುಗಳೇನು?

ಚುನಾವಣೆಯಂದರೆ ರಾಷ್ಟ್ರೀಯ ಮತ್ತು ಪ್ರಮುಖ ಪ್ರಾದೇಶಿಕ ಪಕ್ಷಗಳ ಹಣಾಹಣಿ ಮಾತ್ರವಲ್ಲ. ಸಿದ್ಧಾಂತ, ಚಳವಳಿ, ಪರ್ಯಾಯ ಮಾದರಿಗಳ ಹೋರಾಟವೂ ಹೌದು. ಈ ನಿಟ್ಟಿನಲ್ಲಿ ಜನಾಂದೋಲನ ಮಹಾಮೈತ್ರಿ, ಆಪ್‌, ಎಡಪಕ್ಷಗಳು ಮತ್ತು ಸಂಘಟನೆಗಳ ಕಾರ್ಯತಂತ್ರ, ನಡೆ, ನಿಲುವೇನು ಎಂಬುದರ ವಿಶ್ಲೇಷಣೆ ಇಲ್ಲಿದೆ

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಂದಾಣಿಕೆ, ಮೈತ್ರಿ, ತಂತ್ರ ಮತ್ತು ಪ್ರತಿತಂತ್ರದ ರಾಜಕಾರಣ ಬಿರುಸು ಪಡೆದುಕೊಂಡಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ರಾಷ್ಟ್ರೀಯ ನಾಯಕರನ್ನು ಅಖಾಡಕ್ಕೆ ಇಳಿಸುವ ಮೂಲಕ ಅಧಿಕೃತ ಮತಬೇಟೆ ಆರಂಭಿಸಿವೆ.

ಕಿಂಗ್‌ಮೇಕರ್‌ ಕನಸು ಕಾಣುತ್ತಿರುವ ಜೆಡಿಎಸ್‌ ಈಗಾಗಲೇ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಾರ್ಟಿ (ಬಿಎಸ್‌ಪಿ) ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಎಡಪಕ್ಷಗಳ ಕೇಂದ್ರ ನಾಯಕರ ಜೊತೆ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌ ಡಿ ದೇವೇಗೌಡ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಎಡಪಕ್ಷಗಳು ಮೈತ್ರಿ ಮತ್ತು ಹೊಂದಾಣಿಕೆಗೆ ಸಂಬಂಧಿಸಿದಂತೆ ಭಿನ್ನ ನಿಲುವು ತಳೆದಿವೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನಿರ್ಧಾರಕೈಗೊಳ್ಳುವ ಸ್ವಾತಂತ್ರ್ಯವನ್ನು ಎಡಪಕ್ಷಗಳ ಕೇಂದ್ರ ನಾಯಕತ್ವವು ಸ್ಥಳೀಯ ಘಟಕಗಳಿಗೆ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದ ಭಾರತೀಯ ಕಮ್ಯುನಿಸ್ಟ್‌ ಪಕ್ಷವು (ಸಿಪಿಐ) ಬಿಜೆಪಿಯನ್ನು ಸೋಲಿಸಲು ಪ್ರಜಾಸತ್ತಾತ್ಮಕ ನಂಬಿಕೆಗಳ ಮೇಲೆ ಗೌರವ ಹೊಂದಿರುವ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲು ನಿರ್ಧಾರ ಮಾಡಿರುವುದಾಗಿ ತಿಳಿಸಿದೆ. ಇದರ ಮುಂದುವರಿದ ಭಾಗವಾಗಿ ಸಿಪಿಐ ನಾಯಕರು ಈಚೆಗೆ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವುದು, ವಿರೋಧಿಗಳ ಓಟುಗಳು ಒಡೆಯುವುದನ್ನು ತಪ್ಪಿಸುವುದು ಹಾಗೂ ಇದರ ನೇತೃತ್ವವನ್ನು ಕಾಂಗ್ರೆಸ್‌ ಮುನ್ನಡೆಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜ್ಯ ಪ್ರವಾಸದಲ್ಲಿರುವುದರಿಂದ ಈ ಸಂಬಂಧ ನಿರ್ಣಯವಾಗಿಲ್ಲ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಮತ್ತು ಸಿಪಿಐ ಹೊಂದಾಣಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ, "ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಬಿ ಎಸ್‌ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಬಿ. ಶ್ರೀರಾಮುಲು ಅವರು ಬಿಎಸ್‌ಆರ್‌ ಪಕ್ಷದ ಮೂಲಕ ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಇದರಿಂದ ಸುಮಾರು ೫೭ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ೫ ಸಾವಿರ ಮತಗಳಿಗೂ ಕಡಿಮೆ ಅಂತರದಲ್ಲಿ ಗೆದ್ದಿತ್ತು. ಈಗ ಈ ಇಬ್ಬರೂ ಬಿಜೆಪಿಗೆ ಮರಳಿರುವುದರಿಂದ ಕಾಂಗ್ರೆಸ್‌ಗೆ‌ ಹೊಡೆತ ಬೀಳಲಿದೆ. ಈ ದೃಷ್ಟಿಯಿಂದ ಕಾಂಗ್ರೆಸ್‌ ಎಡಪಕ್ಷಗಳು ಹಾಗೂ ಉಳಿದ ಸಮಾನ ಮನಸ್ಕ ಪಕ್ಷಗಳ ಜೊತೆ ಹೊಂದಾಣಿಕೆ ಮುಂದಾಗುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮನವಿ ನೀಡಿದ್ದೇವೆ. ಕಾಂಗ್ರೆಸ್‌ನಿಂದ‌ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,” ಎಂದಿದ್ದಾರೆ.

ಈಚೆಗೆ, ದೆಹಲಿಯಲ್ಲಿ ಯುಪಿಎ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಸೋನಿಯಾ ಗಾಂಧಿ ಅವರು ಬಿಜೆಪಿ ಸೋಲಿಸಲು ಸಮಾನಮನಸ್ಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದಿದ್ದರು. ಇದಕ್ಕೆ ವಿರುದ್ಧ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಸ್ವಂತ ಬಲದಿಂದ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದು, ಸೋನಿಯಾ ಗಾಂಧಿ ಅವರ ಮಾತುಗಳು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ ಎನ್ನುವ ಮೂಲಕ ಹೊಂದಾಣಿಕೆ, ಮೈತ್ರಿ ಸಾಧ್ಯತೆಯ ಬಗ್ಗೆ ಭಿನ್ನ ನಡೆ ಇಟ್ಟಿದ್ದಾರೆ.

ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಸಾಧ್ಯವಾಗದೆ ಇದ್ದರೆ ಸಾಹಿತಿ, ಪ್ರಗತಿಪರ ಹೋರಾಟಗಾರ ದೇವನೂರು ಮಹಾದೇವ, ಶಾಸಕ ಪುಟ್ಟಣ್ಯಯ್ಯ ಅವರು ಇರುವ ಸ್ವರಾಜ್‌ ಇಂಡಿಯಾ, ಜನಸಂಗ್ರಾಮ ಪರಿಷತ್‌, ಜೆಡಿಯು ಸೇರಿದಂತೆ ವಿವಿಧ ಸಂಘಟನೆಗಳನ್ನೊಳಗೊಂಡ ಜನಾಂದೋಲನ ಮಹಾಮೈತ್ರಿ ಮೂಲಕ ಚುನಾವಣೆ ಎದುರಿಸುವ ಮತ್ತೊಂದು ಸಾಧ್ಯತೆಯನ್ನು ಸಿಪಿಐ ಹೊಂದಿದೆ. ಇದೇ ನಿಲುವನ್ನು ಸಿಪಿಎಂ ಪಕ್ಷ ಹೊಂದಿದೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಪಿಎಂ ಸ್ಪಷ್ಟವಾಗಿ ಹೇಳಿದೆ. “೨೫ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಚರ್ಚೆ, ಮಾತುಕತೆ ನಡೆಯುತ್ತಿದೆ. ಆದರೆ, ಯಾವುದೂ ಸ್ಪಷ್ಟವಾಗಿಲ್ಲ. ಬಿಜೆಪಿ ಸೋಲಿಸಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಭಿನ್ನತೆ ಇಲ್ಲ. ಅಂತೆಯೇ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,” ಎಂದು ಸಿಪಿಎಂ ಮುಖಂಡ ಶ್ರೀರಾಮ ರೆಡ್ಡಿ ಸಾರಾಸಗಟವಾಗಿ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಹೆಗಲನ್ನು ಅಲಂಕರಿಸಲಿದೆಯೇ ಪುಟ್ಟಣ್ಣಯ್ಯನವರ ಹಸಿರು ಶಾಲು?

ಇದೆಲ್ಲದರ ಮಧ್ಯೆ, ಕಾಂಗ್ರೆಸ್‌ನ ಸಾಂಪ್ರದಾಯಿಕ‌ ಮತಬ್ಯಾಂಕ್‌ ಆದ ಮುಸ್ಲಿಂ ಸಮುದಾಯದ ವೋಟು ಛಿದ್ರಗೊಳಿಸಲು ತಂತ್ರ ಹೂಡಿರುವ ಬಿಜೆಪಿಯು, ಮುಸ್ಲಿಂ ಸಮುದಾಯದ ವಿವಾದಿತ ನಾಯಕ ಅಸಾದುದ್ದೀನ್‌ ಓವೈಸಿ ನೇತೃತ್ವದ ಆಲ್‌ ಇಂಡಿಯಾ ಮಜ್ಲಿಸ್‌-ಎ-ಇತ್ತೇಹಾದುಲ್‌ ಮುಸ್ಲಿಮಿನ್‌ (ಎಐಎಂಐಎಂ) ಜೊತೆ ಒಳಒಪ್ಪಂದ ಮಾಡಿಕೊಂಡಿದ್ದು, ಎಐಎಂಐಎಂ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎನ್ನಲಾಗಿದೆ. ಇದರ ಜೊತೆಗೆ ತೆಲಂಗಾಣ ಮೂಲದ ಮಹಿಳಾ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನೌಹೆರಾ ಶೇಖ್‌ ನೇತೃತ್ವದಲ್ಲಿ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿಗೂ (ಎಂಇಪಿ) ಬಿಜೆಪಿ ಪರೋಕ್ಷ ಬೆಂಬಲ ನೀಡಿದೆ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿದೆ.

ಇನ್ನು, ಅರವಿಂದ್ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು (ಎಎಪಿ) ಏಕಾಂಗಿಯಾಗಿ ಚುನಾವಣಾ ಅಖಾಡಕ್ಕಿಳಿಯಲು ಸಿದ್ಧತೆಯಲ್ಲಿ ತೊಡಗಿದೆ. ಸುಮಾರು ೧೮೦-೨೦೦ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಗೆಲ್ಲುವುದಕ್ಕಿಂತಲೂ ಕಾಂಗ್ರೆಸ್‌ ಮತ್ತು ಬಿಜೆಪಿಯ ಭ್ರಷ್ಟ ನಾಯಕರನ್ನು ಸೋಲಿಸುವುದು ಹಾಗೂ ಎಎಪಿ ಪ್ರಚಾರ ಮಾಡುವುದು ಅದರ ಉದ್ದೇಶ. ಇದರ ಜತೆಗೆ ಜನಾಂದೋಲನ ಮಹಾಮೈತ್ರಿಯ ಆಯ್ದ ಅಭ್ಯರ್ಥಿಗಳಿಗೂ ಬೆಂಬಲ ನೀಡಲಾಗುವುದು ಎಂದಿರುವ ಎಎಪಿಯು, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕರೆ ತರಲಾಗುವುದು ಎಂದು ಹೇಳಿದೆ. "೨೦೧೪ರ ಲೋಕಸಭಾ ಚುನಾವಣೆಯಲ್ಲಿ ೨೮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಆನಂತರ ರಾಜ್ಯದಲ್ಲಿ ನಡೆದ ಯಾವುದೇ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಿಲ್ಲ. ಈಗ ಕನಿಷ್ಠ ೨೫ ಸ್ಥಾನ ಗೆಲ್ಲುವ ಗುರಿ ಇದ್ದು, ಜೆಸಿಬಿಯ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಭ್ರಷ್ಟರ ವಿರುದ್ಧ ಹೋರಾಡುವುದೇ ನಮ್ಮ ಗುರಿ,” ಎಂದು ಎಎಪಿಯ ರಾಜಕೀಯ ವ್ಯವಹಾರಗಳ ಉಸ್ತುವಾರಿ ಶಿವಕುಮಾರ್‌ ಚಂಗಲರಾಯ ಹೇಳಿದ್ದಾರೆ.

ಎಡಪಕ್ಷಗಳು, ಎಎಪಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸದೇ ಇದ್ದರೂ ಒಂದಷ್ಟು ಓಟುಗಳನ್ನು ಪಡೆಯುವ ಮೂಲಕ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಮರ್ಮಾಘಾತ ನೀಡಬಹುದು. ಎಡಪಕ್ಷಗಳು ಹಲವು ಸಂಘಟನೆ ಹಾಗೂ ಚಳವಳಿಗಳ ಜೊತೆ ಗುರುತಿಸಿಕೊಂಡಿರುವುದರಿಂದ ಹಲವು ಕಡೆ ಒಂದು ಮಟ್ಟದ ಪ್ರಾಬಲ್ಯ ಹೊಂದಿವೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವಕ್ಕೆ ಇದೊಂದು ನಿರ್ಣಾಯಕ ಹೋರಾಟವಾಗಿದ್ದು, ಜೆಡಿಎಸ್‌ಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ದಕ್ಷಿಣ ಭಾರತದಲ್ಲಿ ಹಿಡಿತ ಸಾಧಿಸಲು ಹಣವಣಿಸುತ್ತಿರುವ ಬಿಜೆಪಿಗೂ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಅಷ್ಟೇ ಮುಖ್ಯವಾಗಿದೆ. ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇರುವುದರಿಂದ ರಾಜಕೀಯ ಸಮೀಕರಣ ಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More