ಟ್ವಿಟರ್ ಸ್ಟೇಟ್‌ | ಆಲೂಗಡ್ಡೆಯನ್ನು ಜವಾರಿ ಕೋಳಿ ಎಂದ ಯಡಿಯೂರಪ್ಪ!

“ರಾಹುಲ್ ಗಾಂಧಿ ಅವರು ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯುವ ‘ಎಲೆಕ್ಷನ್ ಹಿಂದೂ.” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ವ್ಯಂಗ್ಯವಾಡಿದ್ದಾರೆ. ಆದರೆ, ದೇವಾಲಯಕ್ಕೆ ಹೋಗುವ ಮೊದಲು ತಿಂದಿದ್ದು ಕೋಳಿಯಲ್ಲ ಆಲೂಗಡ್ಡೆ ಎನ್ನುತ್ತಿದೆ ಕಾಂಗ್ರೆಸ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಚುನಾವಣಾ ಪ್ರವಾಸದ ಸಂದರ್ಭದಲ್ಲಿ ತಿನ್ನುತ್ತಿರುವ ಆಹಾರವೂ ಬಿಜೆಪಿಯ ನಾಯಕರಿಗೆ ಚರ್ಚೆಯ ವಿಷಯವಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಜವಾರಿ ಕೋಳಿ ತಿಂದಿದ್ದಾರೆ ಎನ್ನುವುದೇ ವಿವಾದಕ್ಕೆ ಕಾರಣವಾಗಿದೆ. “ರಾಹುಲ್ ಗಾಂಧಿ ಅವರು ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯುವ 'ಎಲೆಕ್ಷನ್ ಹಿಂದೂ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ ಎನ್ನುವುದು ತಿಳಿದ ಕೂಡಲೇ ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ಯಡಿಯೂರಪ್ಪ ಟೀಕೆಗಳನ್ನು ಟ್ವಿಟರ್‌ನಲ್ಲಿ ಹರಿಯಬಿಟ್ಟರು. ರಾಹುಲ್ ಗಾಂಧಿ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದಂದಿನಿಂದ #ElectionHindu ಎನ್ನುವ ಹ್ಯಾಷ್‌ಟ್ಯಾಗ್ ಬಳಸಿಕೊಂಡು ಟ್ವೀಟ್ ಮಾಡುತ್ತಿರುವ ಯಡಿಯೂರಪ್ಪ ಅವರು, ಮಾಂಸಾಹಾರ ತಿಂದಿರುವ ಸುದ್ದಿ ಬಂದ ಕೂಡಲೇ ಅದನ್ನೂ ಜನರ ಧಾರ್ಮಿಕ ಸಂವೇದನೆಗಳನ್ನು ಪ್ರಚೋದಿಸುವ ನಿಟ್ಟಿನಲ್ಲಿ ಬಳಸಿಕೊಂಡರು. ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ಗುರಿ ಮಾಡಿ ಬಿ ಎಸ್ ಯಡಿಯೂರಪ್ಪ ಅವರು ಈ ಬಾರಿ ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡುವಾಗ ಸದಾ ಅವರು #10PercentCM ಎನ್ನುವ ಹ್ಯಾಷ್‌ಟ್ಯಾಗ್ ಬಳಸುತ್ತಾರೆ. “ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯೋ #10PercentCM ಒಂದೆಡೆಯಾದರೆ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ #ElectionHindu ಮತ್ತೊಂದು ಕಡೆ. ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ? ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜಾವಾದ,” ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಆದರೆ, ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋಗುವುದು ಸರಿಯೇ, ತಪ್ಪೇ ಎನ್ನುವ ಪ್ರಶ್ನೆಗೆ ಅವಕಾಶವೇ ನೀಡದ ಕಾಂಗ್ರೆಸ್, ರಾಹುಲ್ ಗಾಂಧಿ ದೇವಸ್ಥಾನಕ್ಕೆ ತೆರಳುವ ಮೊದಲು ಕೋಳಿ ಮಾಂಸ ತಿಂದೇ ಇಲ್ಲ ಎಂದು ಊಟದ ಫೋಟೋಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ. ರಾಹುಲ್ ಗಾಂಧಿಯವರಿಗೆ ಊಟದ ವ್ಯವಸ್ಥೆ ಮಾಡಿದ ಸ್ಥಳೀಯ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಅವರು ಕಾಂಗ್ರೆಸ್ ನಾಯಕರು ಸಂಪೂರ್ಣ ಸಸ್ಯಾಹಾರವನ್ನೇ ಸೇವಿಸಿದ್ದರು ಎಂದು ಫೋಟೋಗಳ ಸಮೇತ ಸಾಬೀತು ಮಾಡಿದ್ದರು. ಹೀಗಾಗಿ, ‘ಮಾಂಸಾಹಾರ ತಿಂದು ದೇವಾಲಯ ಪ್ರವೇಶಿಸಿದ ರಾಹುಲ್ ಗಾಂಧಿ’ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳು, ನಂತರದಲ್ಲಿ, ‘ರಾಹುಲ್ ಗಾಂಧಿ ತಿಂದದ್ದು ಸಸ್ಯಾಹಾರ’ ಎಂದು ಬ್ರೇಕಿಂಗ್ ಸುದ್ದಿಗಳನ್ನು ಪ್ರಸಾರ ಮಾಡಿವೆ!

ಆದರೆ, ಇತ್ತ ಟ್ವಿಟರ್‌ನಲ್ಲಿ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಗಳು ಅಥವಾ ರಾಜ್ಯ ಕಾಂಗ್ರೆಸ್ಸಿಗರ ಟ್ವಿಟರ್ ಖಾತೆಗಳು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿಲ್ಲ. ಬಿಜೆಪಿಯ ಅಧಿಕೃತ ಖಾತೆಗಳೂ ಮತ್ತು ಬಿಜೆಪಿಯ ರಾಜ್ಯ ಖಾತೆಗಳ ನಾಯಕರೂ ಬಿ ಎಸ್ ಯಡಿಯೂರಪ್ಪ ಅವರ ಮಾಂಸಾಹಾರ ಸಂಬಂಧಿತ ಟ್ವೀಟ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಯಡಿಯೂರಪ್ಪ ಅವರ ಇತರ ಟ್ವೀಟ್‌ಗಳನ್ನು ರಿಟ್ವೀಟ್ ಮಾಡುವ ಬಿಜೆಪಿಯ ಅಧಿಕೃತ ಹ್ಯಾಂಡಲ್‌ ಈ ಟ್ವೀಟ್‌ಗೆ ಪ್ರೋತ್ಸಾಹ ನೀಡಿಲ್ಲ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ರಾಜಕೀಯ ಬೆಳವಣಿಗೆಗಳ ಬಗ್ಗೆ ಬಿಜೆಪಿಯ ವೀಕೆಂಡ್‌ ನಿದ್ರೆ!

ಬಿ ಎಸ್ ಯಡಿಯೂರಪ್ಪ ಅವರು ಸುಳ್ಳು ಸುದ್ದಿಗಳನ್ನೇ ನಂಬಿ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಟ್ವಿಟರ್‌ನಲ್ಲಿ ರಾಜ್ಯ ಕಾಂಗ್ರೆಸ್‌ನ ಸ್ಥಳೀಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಮಾಧ್ಯಮ ಸಂಯೋಜಕರಾದ ಎ ಎನ್ ನಟರಾಜ್ ಗೌಡ ಅವರು ಟ್ವೀಟ್‌ಗೆ ಉತ್ತರ ನೀಡಿ, "ಶೇ.80ರಷ್ಟು ಜನತೆಯ ಆಹಾರ ಪದ್ಧತಿ ಮಾಂಸಾಹಾರ. ಎಷ್ಟೋ ಜನ ಮಾಂಸಾಹಾರದ ಮೂಲಕ ಹರಕೆ ತೀರಿಸ್ತಾರೆ. ಕೆಲವರಂತೂ ಮಾಂಸಾಹಾರ ನೈವೇದ್ಯ ಅರ್ಪಿಸುತ್ತಾರೆ,” ಎಂದು ಉತ್ತರಿಸಿದ್ದಾರೆ. ಅಲ್ಲದೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ನೀಡಿದ ಹೇಳಿಕೆಯನ್ನು ತಮ್ಮ ಟ್ವೀಟ್‌ ಜೊತೆಗೆ ಲಗತ್ತಿಸಿದ್ದಾರೆ. “ಜನಾಶೀರ್ವಾದ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ,” ಎಂಬ ಬಿಎಸ್‌ವೈ ಟ್ವೀಟ್ ಬಗ್ಗೆ ಮಾಧ್ಯಮ ಪ್ರತಿಕ್ರಿಯೆ ನೀಡಿದ ಎಚ್‌ ಡಿ ಕುಮಾರಸ್ವಾಮಿ, “ಕೆಲವು ದೇವರಿಗೆ ಮಾಂಸಾಹಾರವೇ ಪ್ರಿಯ. ಮನಸ್ಸು ಶುದ್ಧವಿಲ್ಲದೆ ದೇವಸ್ಥಾನಕ್ಕೆ ಹೋಗಿ ಏನು ಪ್ರಯೋಜನ? ಈ ಬಗ್ಗೆ ನಾನು ಹೆಚ್ಚು ಪ್ರಾಮುಖ್ಯ ನೀಡುವುದಿಲ್ಲ. ನಮ್ಮ ದೇಹವೇ ಒಂದು ಮಾಂಸದ ಮುದ್ದೆ. ಹಾಗಾಗಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು?” ಎಂದು ಪ್ರಶ್ನಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More