ಕಲ್ಯಾಣ ನಾಡಿನಲ್ಲಿ ಮುಕ್ತಾಯ ಕಾಣಲಿದೆ ರಾಹುಲ್ ಜನಾಶೀರ್ವಾದ ಯಾತ್ರೆ

ಕರ್ನಾಟಕದಲ್ಲಿ 4 ದಿನಗಳ ಪ್ರವಾಸ ಕೈಗೊಂಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಯಾತ್ರೆ ಇಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಅಂತ್ಯಗೊಳ್ಳಲಿದೆ. ಕಾಂಗ್ರೆಸ್, ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವುದು ಈ ಭೇಟಿಯ ಉದ್ದೇಶ ಎಂಬ ಮಾತು ಕೇಳಿಬಂದಿವೆ

ಹೈದ್ರಾಬಾದ್ ಕರ್ನಾಟಕದಲ್ಲಿ ಸತತ ನಾಲ್ಕು ದಿನಗಳ ಪ್ರವಾಸ ಕೈಗೊಂಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆ ಇಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಅಂತ್ಯಗೊಳ್ಳಲಿದೆ. ‘ವಿಶ್ವದ ಪ್ರಥಮ ಪಾರ್ಲಿಮೆಂಟ್’ ಎಂದೇ ಖ್ಯಾತಿ ಪಡೆದ ಬಸವಕಲ್ಯಾಣದ ಅನುಭವ ಮಂಟಪಕ್ಕೆ ರಾಹುಲ್ ಮಧ್ಯಾಹ್ನ ಭೇಟಿ ನೀಡಲಿದ್ದಾರೆ. ನಂತರ ೧೨.೩೦ಕ್ಕೆ ನಗರದ ಮೈದಾನದಲ್ಲಿ ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ತರುವಾಯ ಬೀದರ್ ವಾಯುನೆಲೆಯಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಲಿದ್ದಾರೆ.

ಇದನ್ನೂ ಓದಿ : ಜನಾಶೀರ್ವಾದ ಯಾತ್ರೆ ಮಧ್ಯೆ ರೈತರಿಗೆ ಮುಖಾಮುಖಿಯಾದ ರಾಹುಲ್ ಗಾಂಧಿ

ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಯಾವುದೇ ಪತ್ರಿಭಟನೆ, ಗೊಂದಲಕ್ಕೆ ಅವಕಾಶ ನೀಡದ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಎಸ್‌ಪಿ ಡಿ ದೇವರಾಜ್ ನೇತೃತ್ವದಲ್ಲಿ ಸುಮಾರು ೨೫೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕಲ್ಯಾಣ ನಾಡಿನಲ್ಲಿ ಎತ್ತ ನೋಡಿದರೂ ಪೊಲೀಸರು. ಇನ್ನು, ರಾಯಚೂರಿನ ಸಿಂಧನೂರಿನಲ್ಲಿ ನಡೆದಂತಹ ಹೋರಾಟ, ಪತ್ರಿಭಟನೆಗೆ ಇಲ್ಲಿ ಅವಕಾಶವೇ ನೀಡುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ರಾಹುಲ್ ಪ್ರವಾಸವು ಮಧ್ಯಾಹ್ನ 12ಕ್ಕೆ ಕಲಬುರಗಿಯಿಂದ ಕಲ್ಯಾಣಕ್ಕೆ ಹೆಲಿಕಾಪ್ಟರ್ ಮೂಲಕ ಸಾಗಲಿದೆ. ೧೨.೧೫ಕ್ಕೆ ಬಸವಕಲ್ಯಾಣ ನಗರ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬರಲಿದ್ದಾರೆ. ನಂತರ ಅನುಭವ ಮಂಟಪಕ್ಕೆ ಭೇಟಿ ನೀಡಿ ದರ್ಶನ, ಅನುಭವ ಮಂಟಪದಿಂದ ಬಸ್‌ನಲ್ಲಿ ಥೇರ್ ಮೈದಾನದವರೆಗೆ ರೋಡ್‌ ಶೋ, ಥೇರ್ ಮೈದಾನದಲ್ಲಿ ಪಕ್ಷದ ಬೃಹತ್‌ ಸಮಾವೇಶದಲ್ಲಿ ಭಾಷಣ, ಬಸವಕಲ್ಯಾಣ ಹೆಲಿಪ್ಯಾಡ್‌ನಿಂದ ಬೀದರ್ ವಾಯುಪಡೆಯ ಕೇಂದ್ರ, ಬೀದರ್ ವಾಯುನೆಲೆಯಿಂದ ವಿಶೇಷ ವಿಮಾನದ ಮೂಲಕ ಹೊಸದಿಲ್ಲಿಯತ್ತ ಪ್ರಯಾಣ ಬೆಳಸಲಿದ್ದಾರೆ ರಾಹುಲ್ ಗಾಂಧಿ.

ಅನುಭವ ಮಂಟಪ ದರ್ಶನ ನಂತರ, ಅನುಭವ ಮಂಟಪ ಟ್ರಸ್ಟ್ ವತಿಯಿಂದ ಅಧ್ಯಕ್ಷ ಬಸವಲಿಂಗ ಪಟ್ಟದೇವರಿಂದ ಗೌರವ ಸನ್ಮಾನ‌‌ವಿದೆ. ಅಹಿಂದ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಿರುವ ಕಾಂಗ್ರೆಸ್, ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವುದು ಈ ಭೇಟಿಯ ಉದ್ದೇಶ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ, ಸಮಾವೇಶದಲ್ಲೇ ಕಲ್ಯಾಣ ನಾಡಿನಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಘೋಷಣೆಯ ತೀರ್ಮಾನದ ನಿರೀಕ್ಷೆ ಇದೆ. ನೂತನ ಅನುಭವ ಮಂಟಪಕ್ಕೆ ೬೫೦ ಕೋಟಿ ರು. ಮೀಸಲಿಡುವ ಘೋಷಣೆಯೂ ಆಗಲಿದೆ ಎನ್ನಲಾಗಿದೆ. ಜೊತೆಗೆ, ಕಲ್ಯಾಣ ನಾಡಿನ ಶರಣ ಸ್ಮಾರಕ ಅಭಿವೃದ್ಧಿ ದೃಷ್ಟಿಯಿಂದ ಭಾರಿ ಪ್ರಮಾಣದ ಅನುದಾನ ಘೋಷಣೆಯನ್ನೂ ನಿರೀಕ್ಷಿಸಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More