ಕಾಂಗ್ರೆಸ್, ಜೆಡಿಎಸ್‌‌ ಮತಬುಟ್ಟಿಗೆ ಕೈಹಾಕಲಿದೆಯೇ ನೌಹೀರಾ ಶೇಖ್‌ರ ಎಂಇಪಿ?

ಉದ್ಯಮಿ ನೌಹೀರಾ ಶೇಖ್‌ ಅವರು ಅಖಿಲ ಭಾರತ ಮಹಿಳಾ ಸಶಕ್ತೀಕರಣ ಪಕ್ಷ (ಎಂಇಪಿ) ಸ್ಥಾಪಿಸಿದ್ದಾರೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಮುಸ್ಲಿಂ ಮತಬುಟ್ಟಿ ಛಿದ್ರಗೊಳಿಸುವುದು, ಆ ಮೂಲಕ ಬಿಜೆಪಿಗೆ ಸಹಾಯ ಮಾಡುವುದು ಅವರ ಉದ್ದೇಶವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ

ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಮಧ್ಯೆ, ಕಂಡುಕೇಳರಿಯದ ಪಕ್ಷಗಳು ಕಣಕ್ಕಿಳಿಯುವ ಮೂಲಕ ಬಲಾಢ್ಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ತಳಮಳ ಉಂಟುಮಾಡಿವೆ. ಮತಬುಟ್ಟಿ ಕಸಿಯುವ ಉದ್ದೇಶದಿಂದ ಪ್ರಮುಖ ರಾಜಕೀಯ ಪಕ್ಷಗಳೇ ಜಾತಿ, ಧರ್ಮ, ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರನ್ನು ಕಣಕ್ಕೆ ಎಳೆದು ತರುವ ಮೂಲಕ ವಿರೋಧಿ ಪಾಳೆಯದ ಸಾಂಪ್ರದಾಯಿಕ ಮತಬ್ಯಾಂಕ್‌ ಅನ್ನು ಚದುರಿಸುವ ತಂತ್ರ ಹೆಣೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಂಥದ್ದೇ ಪ್ರಮುಖ ವಿದ್ಯಮಾನವೊಂದಕ್ಕೆ ರಾಜ್ಯ ಸಾಕ್ಷಿಯಾಗಿದೆ. ಹೈದರಾಬಾದ್‌ನ ಮಹಿಳಾ ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ ನೌಹೀರಾ ಶೇಖ್‌ ಅವರು ಅಖಿಲ ಭಾರತ ಮಹಿಳಾ ಸಶಕ್ತೀಕರಣ ಪಕ್ಷದ (ಎಐಎಂಇಪಿ) ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಎಐಎಂಇಪಿಗೆ ಇದೇ ಮೊದಲ ಚುನಾವಣೆ. ನೌಹೀರಾ ಅವರ ಪಕ್ಷ ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದೆ. ಮಹಿಳಾ ಸಬಲೀಕರಣವೇ ಗುರಿ ಎಂದು ಪಕ್ಷ ಹೇಳಿಕೊಂಡರೂ, ಅದರ ನಡೆ-ನುಡಿಗಳು ಬೇರೆಯದೇ ವಾಸ್ತವ ಪರಿಚಯಿಸುತ್ತವೆ. ನೌಹೀರಾ ಶೇಖ್‌ ಯಾರು, ಅವರು ಈ ಹಿಂದೆ ರಾಜಕೀಯದಲ್ಲಿದ್ದರೇ? ಅವರ ಹಿಂದೆ-ಮುಂದೆ ಅಥವಾ ಬೆಂಬಲಿಗರು ಯಾರು? ಅವರ ಸೈದ್ಧಾಂತಿಕ ನಿಲುಗಳೇನು, ಅವರ ಕುಟುಂಬದ ಹಿನ್ನೆಲೆ ಏನು? ಚುನಾವಣಾ ಕಣಕ್ಕೆ ದೊಡ್ಡಮಟ್ಟದಲ್ಲಿ ಇಳಿಯಲು ಬೇಕಾದ ಹಣ ಎಲ್ಲಿಂದ ಬರುತ್ತದೆ, ಅಷ್ಟಕ್ಕೂ ಜನಬಲ ಎಲ್ಲಿಂದ ತರುತ್ತಾರೆ? ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಹೊಸ ಪಕ್ಷಗಳ ಚಲನವಲನಗಳು ಮತ್ತು ಸೈದ್ಧಾಂತಿಕ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ರಾಜಕೀಯ ತಜ್ಞರು, “ಅವುಗಳು ದೊಡ್ಡ ಪಕ್ಷಗಳ ದಾಳವಾಗಿರುವ ಸಾಧ್ಯತೆಯೇ ಹೆಚ್ಚು. ಇದರಿಂದ ಎಂಇಪಿಯೂ ಹೊರತಾಗಿಲ್ಲದೆ ಇರಬಹುದು,” ಎಂದು ವಿಶ್ಲೇಷಿಸಿದ್ದಾರೆ.

ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಭರ್ಜರಿ ಪ್ರಚಾರ ಆರಂಭಿಸಿರುವ ಎಂಇಪಿಯು, ಲಕ್ಷಾಂತರ ರುಪಾಯಿ ವೆಚ್ಚ ಮಾಡುವ ಮೂಲಕ ಪ್ರಚಾರ ಸಭೆಗಳನ್ನು ನಡೆಸುತ್ತಿದೆ. ಪಕ್ಷದ ನಾಯಕರು ಪಕ್ಷದ ಚಟುವಟಿಕೆಗಳಿಗೆ ಬಗ್ಗೆ ಸ್ಪಷ್ಟವಾಗಿ ಮಾತನಾಡಲೂ ಮುಂದಾಗುತ್ತಿಲ್ಲ. ಪಕ್ಷದ ನಾಯಕಿ ನೌಹೀರಾ ಶೇಖ್‌‌ ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ.

ಚಳವಳಿಯ ಮೂಲಕ ಅಧಿಕಾರಕ್ಕೆ ಬಂದ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಇಂದು ತಲುಪಿರುವ ಸ್ಥಿತಿ ಜನಮಾನಸದಿಂದ ದೂರವಾಗಿಲ್ಲ. ಇಂಥ ಸಂದರ್ಭದಲ್ಲಿ ಎಂಇಪಿಯ ರಾಜಕೀಯ ಅರ್ಥವಾಗದೆ ಇರುವಂಥದ್ದಲ್ಲ. ಇದೆಲ್ಲದರ ಮಧ್ಯೆ, ಮಹಿಳೆಯೊಬ್ಬರು ಪಕ್ಷದ ನೇತೃತ್ವ ವಹಿಸುತ್ತಿರುವುದು ಸ್ವಾಗತಾರ್ಹವಾದರೂ, ನಡೆ-ನುಡಿಗಳು ರಾಜಕೀಯ ದಾಳವೇ ಎಂಬ ಶಂಕೆ ಹುಟ್ಟಿಸಿದೆ.

ಮಹಿಳೆಯರ ಸಬಲೀಕರಣ ಎಂದು ಪಕ್ಷ ಹೇಳಿದರೂ ಮುಸ್ಲಿಂ ಮಹಿಳೆಯರ ಮತ ಸೆಳೆಯುವುದೇ ಎಂಇಪಿಯ ರಹಸ್ಯ ಕಾರ್ಯಸೂಚಿ ಆಗಿರಬಹುದು. ಎಂಇಪಿ ಗೆಲ್ಲದೆ ಇದ್ದರೂ ನಿರ್ಣಾಯಕ ಕ್ಷೇತ್ರಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಸಾವಿರ ಮತ ಪಡೆದರೂ ಅದು ಕಾಂಗ್ರೆಸ್‌ಗೆ ದುಬಾರಿ ಆಗಬಹುದು. ಇದೇ ಮಾತನ್ನು ಕಾಂಗ್ರೆಸ್‌ ನಾಯಕರು ಪುನರುಚ್ಛರಿಸುತ್ತಿದ್ದಾರೆ. ಆದರೆ, ಬಿಜೆಪಿ ಮಾತ್ರ ಅದನ್ನು ಸುತಾರಾಂ ಒಪ್ಪುವುದಿಲ್ಲ.

ದೇಶದ ಬಹುತೇಕ ಕಡೆ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದ್ದು, ಇದರಿಂದ ಲಾಭ ದೊರೆಯುವುದಿಲ್ಲ ಎಂದು ಅರಿತಿರುವ ಉದ್ಯಮಿ ನೌಹೀರಾ ಶೇಖ್‌ ಅವರು ಮೋದಿ ಸರ್ಕಾರದಿಂದ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಮಹಿಳಾ ಸಬಲೀಕರಣದ ನೆಪದಲ್ಲಿ ಮುಸ್ಲಿಂ ಮತ ಸೆಳೆಯಲು ಪಕ್ಷ ಸ್ಥಾಪಿಸಿರಬಹುದು. ಈ ಮೂಲಕ ಬಿಜೆಪಿಗೆ ನೆರವಾಗುವುದು ಅವರ ತಂತ್ರವಾಗಿರಬಹುದು.
ಮುಜಾಫ್ಫರ್‌ ಅಸ್ಸಾದಿ, ರಾಜಕೀಯ ವಿಶ್ಲೇಷಕ

"ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಸಣ್ಣಪುಟ್ಟ ಪಕ್ಷ ಹುಟ್ಟುಹಾಕಿ ಚುನಾವಣಾ ಲಾಭ ಪಡೆಯುವ ಯಾವುದೇ ಉದ್ದೇಶವಿಲ್ಲ. ಆದರೆ, ಕಾಂಗ್ರೆಸ್‌ಗೆ ಸೋಲಿನ ಭೀತಿ ಆರಂಭವಾಗಿದೆ,” ಎಂದು ಬಿಜೆಪಿ ರಾಜ್ಯ ವಕ್ತಾರ ಅಬ್ದುಲ್‌ ಅಜೀಂ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಯುವ ಮುಖಂಡ ರಿಜ್ವಾನ್‌ ಅರ್ಷದ್‌, "ಬಿಜೆಪಿ ಎಷ್ಟೇ ಕುತಂತ್ರ ಮಾಡಿದರೂ ಕಾಂಗ್ರೆಸ್ಸನ್ನು ಸೋಲಿಸಲಾಗದು. ಜನರ ಮುಂದೆ ಬಿಜೆಪಿಯ ಕುತಂತ್ರವನ್ನು ಬಿಚ್ಚಿಡಲಿದ್ದೇವೆ. ಗೊತ್ತುಗುರಿ ಇಲ್ಲದವರನ್ನು ಕರ್ನಾಟಕದ ಪ್ರಜ್ಞಾವಂತ ಜನರು ಆಯ್ಕೆ ಮಾಡುವುದಿಲ್ಲ. ಮುಸ್ಲಿಂ ಮುಖಂಡ ಅಸಾದುದ್ದೀನ್‌ ಒವೈಸಿ ಅವರ ವಿರುದ್ಧ ಬಹಿರಂಗ ಕಾಳಗಕ್ಕಿಳಿಯುವ ಬಿಜೆಪಿ, ಈಗ ಅವರ ಜೊತೆಯೇ ಚುನಾವಣಾ ಹೊಂದಾಣಿಕೆಗೆ ಮುಂದಾಗಿದೆ. ಕಾಂಗ್ರೆಸ್‌ಗೆ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ಭೀತಿಗೊಂಡಿರುವ ಬಿಜೆಪಿಯು ನೌಹೀರಾ ಶೇಖ್ ಬೆನ್ನಿಗೆ ನಿಂತಿದೆ. ಆದರೆ ಬಿಜೆಪಿಯ ತಂತ್ರ ಫಲ ನೀಡದು," ಎಂದಿದ್ದಾರೆ.

ಆದರೆ, ಕಾಂಗ್ರೆಸ್-ಬಿಜೆಪಿ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಂಡಿರುವ ಎಂಇಪಿ ರಾಜ್ಯ ಸಂಚಾಲಕ ಜಾಫರ್‌ ಸಾದಿಕ್‌, "ಬಿಜೆಪಿ ಮತ್ತು ಕಾಂಗ್ರೆಸ್‌ ಯಾವ ಪಕ್ಷವೂ ಮಹಿಳೆಯರಿಗಾಗಿ ಏನೂ ಮಾಡಿಲ್ಲ. ಇದನ್ನು ಸರಿಪಡಿಸಲು ಮಹಿಳೆಯರಿಗೆ ಕೆಲಸ ಮಾಡಲು ಎಂಇಪಿ ಆರಂಭಿಸಲಾಗಿದೆ. ಕರ್ನಾಟಕವಲ್ಲದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಚತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿಯೂ ಎಂಇಪಿ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಲಾಗುವುದು. ಯಾವುದೇ ಪಕ್ಷದ ದಾಳವಾಗಿ ಕೆಲಸ ಮಾಡುವ ಅನಿವಾರ್ಯತೆ ಪಕ್ಷಕ್ಕಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸಾಕಷ್ಟು ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ. ಆದರೆ ಅವರಾರ ಜೊತೆಯೂ ನಾವು ಹೋಗುವುದಿಲ್ಲ,” ಎಂದಿದ್ದಾರೆ.

ಈ ಮಧ್ಯೆ, ಎಂಇಪಿ ಅಖಾಡಕ್ಕೆ ಧುಮುಕಿರುವ ಬೆಳವಣಿಗೆಯನ್ನು ರಾಜಕೀಯ ಪಂಡಿತರು ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. “ಉತ್ತರ ಭಾರತದ ಬಹುತೇಕ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಗೆಲುವು ದಾಖಲಿಸಿರುವ ಬಿಜೆಪಿಯು, ದಕ್ಷಿಣ ಭಾರತದಲ್ಲಿ ಗೆಲುವಿನ ಯಾತ್ರೆ ಮುಂದುವರಿಸಲು ಶತಾಯಗತಾಯ ಯತ್ನ ನಡೆಸಿದೆ. ಒಂದೆಡೆ ಮೋದಿ ಅಲೆ ಮಂಕಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಪ್ರಾದೇಶಿಕ ರಾಜಕಾರಣ, ಜನಪ್ರಿಯ ಯೋಜನೆಗಳಲ್ಲಿ ಮುನ್ನಡೆದಿರುವುದರಿಂದ ಅದನ್ನು ಹಿಂದುತ್ವ, ಅಭಿವೃದ್ದಿ ಮತ್ತು ಭ್ರಷ್ಟಾಚಾರದ ವಿಷಯಗಳ ಮೂಲಕ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಬಿಜೆಪಿಯು, ಇಂಥ ರಾಜಕೀಯ ತಂತ್ರಗಾರಿಕೆ ಅನುಸರಿಸಿರುವ ಸಾಧ್ಯತೆ ಇದೆ. ನೌಹೀರಾ ಅವರ ಮೂಲಕ ಮುಸ್ಲಿಂ ಮತ ಒಡೆಯುವುದು ಬಿಜೆಪಿಯ ತಂತ್ರವಿರಬಹುದು,” ಎಂಬುದು ತಜ್ಞರ ವಿವರಣೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮಾರು ೧.೬೧ ಕೋಟಿ ಪುರುಷರು ಮತದಾನ ಮಾಡಿದ್ದಾರೆ. ೨.೧೪ ಕೋಟಿ ಮಹಿಳಾ ಮತದಾರರ ಪೈಕಿ ೧.೫೧ (ಶೇ.೭೦.೪೬) ಕೋಟಿ ಮಂದಿ ಹಕ್ಕು ಚಲಾಯಿಸಿದ್ದಾರೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.೧೩ರಷ್ಟು ಮುಸ್ಲಿಂ ಸಮುದಾಯದವರಿದ್ದಾರೆ. ಈ ಪೈಕಿ, ಅಂದಾಜು ಶೇ.೪೫ರಷ್ಟು ಮಹಿಳಾ ಮತದಾರರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೊರತಾದ ರಾಜಕೀಯ ಸಂಘಟನೆಗಳ ಒಲವುಗಳೇನು?

ಬಿಜೆಪಿಗೆ ೧೯ ರಾಜ್ಯಗಳಲ್ಲಿ ಅಧಿಕಾರ ದಕ್ಕಿಸಿಕೊಟ್ಟಿರುವ ಮೋದಿ-ಅಮಿತ್‌ ಶಾ ಜೋಡಿ ಹೂಡುವ ಚುನಾವಣಾ ತಂತ್ರಗಳು ಫಲಿತಾಂಶ ಬರುವವರೆಗೂ ಅರ್ಥವಾಗಿದ್ದು ಕಡಿಮೆ. ಈಗ ಎಂಇಪಿ ಎಂಬ ದಾಳವು ಕಮಲ ಅರಳಿಸುವುದೋ, ಕಾಂಗ್ರೆಸ್‌ ಉರುಳಿಸುವುದೋ ಕಾಯ್ದು ನೋಡಬೇಕಿದೆ.

ಅಂದಹಾಗೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ನೌಹೀರಾ ಶೇಖ್‌ ಅವರು ಹೀರಾ ಸಮೂಹ ಸಂಸ್ಥೆಯ ಮುಖ್ಯಸ್ಥೆಯಾಗಿದ್ದಾರೆ. ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಹೀರಾ ಸಂಸ್ಥೆಯ ಪ್ರಧಾನ ಕಚೇರಿ ಹೈದರಾಬಾದ್‌ನಲಿದ್ದು, ಸೌದಿ ಅರೇಬಿಯಾ, ಯುಎಇ, ಘಾನಾ, ಕೆನಡಾ, ಚೀನಾ ಸೇರಿದಂತೆ ೫೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅವರು ಉದ್ಯಮ ಹೊಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More