ಒಕ್ಕೂಟ ವ್ಯವಸ್ಥೆಯ ದೌರ್ಬಲ್ಯ ಎತ್ತಿಹಿಡಿಯಿತೇ ಕಾಂಗ್ರೆಸ್ ಚಾರ್ಜ್‌ಶೀಟ್?

ಕನ್ನಡ ಅಸ್ಮಿತೆ, ಮಹದಾಯಿ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ, ಎಚ್ಎ‌ಎಲ್‌ಗೆ ಪ್ರಾಮುಖ್ಯತೆ ಸಿಗದಿರುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮರ ನಡೆದಿದೆ. ಇದು ಒಕ್ಕೂಟ ವ್ಯವಸ್ಥೆಯ ಕಲ್ಪನೆಯ ವಿಚಾರಗಳ ಚರ್ಚೆ ಮುಖ್ಯವಾಹಿನಿಗೆ ಬಂದಿರುವ ಸೂಚನೆಯೇ?

ಕಳೆದ ಎರಡು ದಿನಗಳಿಂದ ಟ್ವಿಟರ್‌ನಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ರಾಜ್ಯದಲ್ಲಿ ಪ್ರಚಾರಾಭಿಯಾನ ನಡೆಸುತ್ತಿದೆ. ಸೋಮವಾರದಂದು ಬಿಜೆಪಿ ಕರ್ನಾಟಕಕ್ಕೆ ಮಾಡಬಹುದಾಗಿದ್ದು, ಮಾಡದೆ ಇರುವ ಕಾರ್ಯಗಳ ವಿವರಗಳನ್ನು ನೀಡಿದ ಕಾಂಗ್ರೆಸ್, 'ಚಾರ್ಜ್‌ಶೀಟ್' ಹೆಸರಿನಲ್ಲಿ ಆರೋಪ ಪಟ್ಟಿಯನ್ನು ದಾಖಲಿಸಿತ್ತು. ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಅಧಿಕಾರದಲ್ಲಿರುವಾಗ ಮಾಡಿರುವ ಅನರ್ಥಗಳ ವಿವರ ನೀಡುವ ಪ್ರಚಾರಾಭಿಯಾನವನ್ನು ಕಾಂಗ್ರೆಸ್ ಮಾಡಿದೆ. ಈ ಹಿನ್ನೆಲೆಯಲ್ಲಿ #KarnatakaVirodhiBJP ಹ್ಯಾಷ್‌ಟ್ಯಾಗ್‌ನಲ್ಲಿ ಮುಖ್ಯವಾಗಿ ಚರ್ಚೆಯಾದ ಚಾರ್ಜ್‌ಶೀಟ್‌ಗಳೆಂದರೆ ಕನ್ನಡ ಮತ್ತು ಕನ್ನಡ ನಾಡಿಗೆ ಸಂಬಂಧಿಸಿದ ವಿಷಯ. ಸಾಮಾನ್ಯವಾಗಿ ಬಿಜೆಪಿ ಮೇಲಿನ ರಾಜಕೀಯ ಆರೋಪಗಳು ಪಕ್ಷವಾರು ನಿಷ್ಟರ ನಡುವೆ ಸಮರಕ್ಕೆ ಕಾರಣವಾಗಿದೆ. ಆದರೆ ಕನ್ನಡದ ಅಸ್ಮಿತೆ, ಹೆಮ್ಮೆ ಮತ್ತು ಕನ್ನಡಿಗರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳು ರಾಜಕೀಯ ಪಕ್ಷಗಳನ್ನು ಮೀರಿ ಟ್ವಿಟರ್‌ನಲ್ಲಿ ಚರ್ಚೆಯಾಗಿವೆ.

ಮುಖ್ಯವಾಗಿ, ಐಬಿಪಿಎಸ್ (ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್) ಎನ್ನುವ ಬ್ಯಾಂಕಿಂಗ್ ಸಿಬ್ಬಂದಿಗಳ ಆಯ್ಕೆಯ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಹಾಕಿರುವ ಟ್ವಿಟರ್ ಚಾರ್ಜ್‌ಶೀಟ್ ಅತ್ಯಧಿಕ ಪ್ರಮಾಣದಲ್ಲಿ ಚರ್ಚೆಯಾಗಿದೆ. “ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಿಬ್ಬಂದಿ ಆಯ್ಕೆ ಪರೀಕ್ಷೆಗಳಿಗಾಗಿ ಇರುವ ಐಬಿಪಿಎಸ್ ನಿಯಮಗಳು ಸುಧಾರಣೆಗೊಂಡಿವೆ ಮತ್ತು ಈಗ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತಿದೆ. ಆದರೆ, ಕನ್ನಡದಲ್ಲಿ ಇಲ್ಲ. ಇದು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಮುಖ್ಯಮಂತ್ರಿ ಪತ್ರವನ್ನೂ ಬರೆದಿದ್ದಾರೆ. ಆದರೆ, ನಿಯಮ ಬದಲಾವಣೆಗೆ ಕ್ರಮ ಕೈಗೊಂಡಿಲ್ಲ,” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಹೇಳಿದೆ.

ಈ ಟ್ವೀಟ್‌ಗೆ ಉತ್ತರ ನೀಡಿದ ಕರ್ನಾಟಕ ಬಿಜೆಪಿ, “ಐಬಿಪಿಎಸ್ ಪರೀಕ್ಷೆ ೨೦೧೪ರಿಂದ ಆರಂಭವಾಗಿರುವುದೇ? ನಿಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ಏಕೆ ಕಲ್ಪಿಸಿಲ್ಲ. ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಆರಂಭವಾದ ನೀಟ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ನೀಡಲಾಗಿದೆ,” ಎಂದು ಟ್ವೀಟ್ ಮಾಡಿದೆ.

ಬಿಜೆಪಿ ಆರೋಪಕ್ಕೆ ಉತ್ತರಿಸಿದ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ತಾಣದ ಕಾರ್ಯಕರ್ತರಾದ್ ಶ್ರೀವತ್ಸ, “ಬಿಜೆಪಿ ಕರ್ನಾಟಕ ಅರ್ಧ ಸತ್ಯ ಹೇಳುತ್ತಿದೆ. ೨೦೧೪ಕ್ಕೆ ಮೊದಲು ಪರೀಕ್ಷೆ ಬರೆಯುವವರು ಕರ್ನಾಟಕದ ನಿವಾಸಿಯಾಗಿರಬೇಕು ಅಥವಾ ಕರ್ನಾಟಕದಲ್ಲಿ ೧೦ರವರೆಗೆ ಅಥವಾ ೧೨ನೇ ತರಗತಿವರೆಗೆ ಕಲಿತಿರಬೇಕು ಎನ್ನುವ ನಿಯಮವಿತ್ತು. ಆದರೆ, ೨೦೧೪ರಲ್ಲಿ ಪರೀಕ್ಷೆ ಬರೆಯಲು ಕನ್ನಡಿಗರಾಗಿರುವ ಅಗತ್ಯವಿಲ್ಲ ಎಂದು ಬದಲಿಸಲಾಗಿತ್ತು. ಹೀಗಾಗಿ, ಯಾವುದೇ ರಾಜ್ಯದ ಅಭ್ಯರ್ಥಿಗೆ ಪರೀಕ್ಷೆ ಬರೆಯುವ ಅವಕಾಶ ಲಭಿಸಿ, ಕನ್ನಡಿಗರ ಹಿತಾಸಕ್ತಿಗೆ ಧಕ್ಕೆಯಾಗಿದೆ,” ಎಂದು ವಿವರಿಸಿ ಟ್ವೀಟ್ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕನ್ನಡಿಗರ ನಡುವೆ ಟ್ವಿಟರ್ ಚರ್ಚೆ ನಡೆದು, ನ್ಯಾಯಕ್ಕಾಗಿ ಟ್ವೀಟಿಗರು ಮೊರೆ ಇಟ್ಟಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್‌ | ಕಾವೇರಿ ತೀರ್ಪಿಗೆ ತಮಿಳರ ಅಸಮಾಧಾನ, ಕನ್ನಡಿಗರು ಸಮಾಧಾನ

ಟ್ವಿಟರ್‌ನಲ್ಲಿ ಚರ್ಚೆಯಾದ ಮತ್ತೊಂದು ಪ್ರಮುಖ ವಿಚಾರವೆಂದರೆ, ಕರ್ನಾಟಕದಲ್ಲಿ ನೆಲೆನಿಂತಿರುವ ವೈಮಾನಿಕ ಸಂಸ್ಥೆಯಾಗಿರುವ ಎಚ್ಎಎಲ್ಗೆ ಬಿಜೆಪಿ ಅಧಿಕಾರದಲ್ಲಿ ಮೋಸವಾಗುತ್ತಿದೆ ಎನ್ನುವುದು. “೭೦ ವರ್ಷಗಳಿಂದ ಭಾರತೀಯ ವಾಯುಸೇನೆಗೆ ವಿಮಾನಗಳನ್ನು ನಿರ್ಮಿಸುತ್ತಿರುವ ಬೆಂಗಳೂರಿನಲ್ಲಿರುವ ಎಚ್‌ಎಎಲ್‌ಗೆ ಸಿಗಬೇಕಾಗಿರುವ ಶಸ್ತ್ರಾಸ್ತ್ರ ಒಪ್ಪಂದವನ್ನು ಅಂಬಾನಿಗೆ ನೆರವಾಗುವ ಉದ್ದೇಶದಿಂದ ತಪ್ಪಿಸಲಾಗಿದೆ. ರಫೇಲ್ ಗುತ್ತಿಗೆಯನ್ನು ಅಂಬಾನಿಗೆ ನೀಡಲಾಗಿದೆ. ಹಾಗೆ ಕರ್ನಾಟಕದ ಯುವಕರಿಗೆ ಉದ್ಯೋಗವನ್ನು ತಪ್ಪಿಸಲಾಗಿದೆ,” ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ಈ ಆರೋಪಕ್ಕೆ ಉತ್ತರಿಸಿದ ಬಿಜೆಪಿ ಕರ್ನಾಟಕ ಟ್ವಿಟರ್ ಖಾತೆ, “ನಾವು ಗುಬ್ಬಿಯಲ್ಲಿ ಎಚ್‌ಎಎಲ್‌ನ ಹೆಲಿಕಾಪ್ಟರ್ ನಿರ್ಮಾಣ ವಿಭಾಗವನ್ನು ಆರಂಭಿಸುತ್ತಿದ್ದೇವೆ. ಇದು ಕರ್ನಾಟಕದ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಲಿದೆ. ಸಂಸ್ಥೆಯನ್ನು ಬಲಪಡಿಸುವುದು ನಮ್ಮ ಕಾರ್ಯಶೈಲಿ. ನೀವು ಸಂಸ್ಥೆಯನ್ನು ನಾಶ ಮಾಡುವತ್ತ ಕಾರ್ಯನಿರ್ವಹಿಸಿದ್ದೀರಿ,” ಎಂಬ ಉತ್ತರವನ್ನು ನೀಡಿದೆ. ಈ ಹಿನ್ನೆಲೆಯಲ್ಲೂ ಸಾಕಷ್ಟು ಟ್ವಿಟರ್ ಚರ್ಚೆಗಳಾಗಿವೆ. ಎಚ್ಎ‌ಎಲ್‌ನಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳೇ ಇರುವುದಿಲ್ಲ ಎಂದು ಟ್ವೀಟಿಗರು ಬೇಸರಪಟ್ಟಿದ್ದಾರೆ.

‍ಚಾರ್ಜ್‌ಶೀಟ್‌ ಹಿನ್ನೆಲೆಯಲ್ಲಿ ನಡೆದ ಮತ್ತೊಂದು ಪ್ರಮುಖ ಚರ್ಚೆಯೆಂದರೆ, ಮಹದಾಯಿ ನೀರು ಹಂಚಿಕೆ ವಿಚಾರ. “ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮೋದಿ ಸರ್ಕಾರವನ್ನು ಕರ್ನಾಟಕ ಸರ್ಕಾರ ವಿನಂತಿಸಿಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವಂತೆಯೂ ಮೋದಿಯವರನ್ನು ಕೇಳಿಕೊಂಡಿದ್ದರು. ಆದರೆ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ತುಟಿಯನ್ನೇ ಬಿಚ್ಚಿರಲಿಲ್ಲ,” ಎಂದು ಕರ್ನಾಟಕ ಕಾಂಗ್ರೆಸ್ ಖಾತೆ ಟ್ವೀಟ್ ಮಾಡಿದೆ. ಇದಕ್ಕೆ ಉತ್ತರಿಸಿದ ಬಿಜೆಪಿ ಕರ್ನಾಟಕ ಖಾತೆ, “ಸೋನಿಯಾ ಗಾಂಧಿಯವರು ಸಾರ್ವಜನಿಕವಾಗಿ ಮಹದಾಯಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಮಹದಾಯಿ ವಿಚಾರವಾಗಿ ಕಾಂಗ್ರೆಸ್ ದ್ವಂದ್ವನೀತಿ ಅನುಸರಿಸುತ್ತದೆ,” ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಸಾಮಾಜಿಕ ತಾಣಗಳ ಕಾರ್ಯಕರ್ತರ ನಡುವೆ ಸಾಕಷ್ಟು ಟ್ವಿಟರ್ ಚರ್ಚೆ ನಡೆದಿದೆ.

ಕರ್ನಾಟಕ ಕಾಂಗ್ರೆಸ್ ಹಾಕಿದ ಚಾರ್ಜ್‌ಶೀಟ್‌ ಟ್ವೀಟ್‌ಗಳನ್ನು ಟ್ವೀಟ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಖಾತೆಯು, “ಕರ್ನಾಟಕ ಬಿಜೆಪಿಗೆ ಕನ್ನಡಿಗರನ್ನು ಬಾಧಿಸುವ ವಿಚಾರಗಳ ಬಗ್ಗೆ ಉತ್ತರಿಸುವ ಧೈರ್ಯವಿದೆಯೆ? ಅವರು ನಮ್ಮ ಭಾಷೆ, ಸಂಸ್ಕೃತಿ, ಮತ್ತು ನೀರನ್ನು ಗೌರವಿಸಲು ಸಾಧ್ಯವಿಲ್ಲ. ಅವರು ಚುನಾವಣೆ ಗೆಲ್ಲಲು ಧ್ರುವೀಕರಣಕ್ಕಾಗಿ ಸುಳ್ಳು ಸುದ್ದಿಗಳನ್ನು ಹರಡುವಲ್ಲಿ ನಿರತರಾಗಿದ್ದಾರೆ,” ಎಂದು ಟ್ವೀಟ್ ಮಾಡಿದೆ. ಇದಕ್ಕೆ ಉತ್ತರಿಸಿದ ಬಿಜೆಪಿ ಕರ್ನಾಟಕ ಖಾತೆಯು, “ಧೈರ್ಯ ಏಕೆ? ಸರ್, ನಾವು ಎಲ್ಲಾ ಆರೋಪಗಳಿಗೂ ಉತ್ತರಿಸಿದ್ದೇವೆ. ನೀವು ನಿದ್ದೆ ಮಾಡುತ್ತಿರಬೇಕು. ಬಿಸಿ ಕಾಫಿ ಕುಡಿಯಿರಿ. ಅದು ನಿಮಗೆ ನಮ್ಮ ಟೈಮ್‌ಲೈನ್‌ನಲ್ಲಿರುವ ಉತ್ತರಗಳನ್ನು ನೋಡುವ ಧೈರ್ಯ ಕೊಡಬಹುದು,” ಎಂದು ಟ್ವೀಟ್ ಮಾಡಿದೆ.

ಈ ಹಿನ್ನೆಲೆಯಲ್ಲಿ, ಬಿ ಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ನಡುವೆಯೂ ಟ್ವಿಟರ್ ಸಮರ ನಡೆದಿದೆ. “ಶೀಘ್ರದಲ್ಲಿಯೇ ಮಾಜಿಯಾಗಲಿರುವ, ಎಲ್ಲರನ್ನೂ ಬಲ್ಲವರಂತೆ ವರ್ತಿಸುವ ನೀವು ಬಿಜೆಪಿ ಕೊಟ್ಟ ಉತ್ತರ ಗ್ರಹಿಸಲಾಗದೆ ಇದ್ದದ್ದು ಆಶ್ಚರ್ಯ. ದಯವಿಟ್ಟು ಕರ್ನಾಟಕದ ಪ್ರಗತಿಯ ಬಗ್ಗೆ ನಿಮ್ಮ ಹಿನ್ನಡೆಯನ್ನು ನಾನು ಮುಂದಿಡುವುದನ್ನು ನೋಡಿ,” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮಾಜಿ ಸಿಎಂ ಅವರೇ, ಕೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿಯ ವೈಫಲ್ಯಗಳನ್ನು ನಾವು ಪಟ್ಟಿ ಮಾಡಿದ್ದೇವೆ. ನಿಮಗೆ ಚಾರ್ಜ್‌ಶೀಟ್‌ ಅರ್ಥವಾಗಿಲ್ಲ ಎಂದೆನಿಸುತ್ತದೆ. ಮತ್ತೊಮ್ಮೆ ಓದಿ,” ಎಂದು ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಸಾಮಾಜಿಕ ತಾಣದ ಕಾರ್ಯಕರ್ತರ ನಡುವೆಯೂ ಸಾಕಷ್ಟು ಚರ್ಚೆಗಳಾಗಿವೆ. ಮುಖ್ಯವಾಗಿ ಕನ್ನಡಿಗ ವಸಂತ ಶೆಟ್ಟಿಯವರು ಇಲ್ಲಿ ಒಳ್ಳೇ ವಿಷಯವನ್ನು ಗುರುತಿಸಿದ್ದಾರೆ. “ಕರ್ನಾಟಕದಲ್ಲಿ ನಿಧಾನವಾಗಿ ರಾಜ್ಯ ಮತ್ತು ರಾಷ್ಟ್ರ ಎನ್ನುವ ಒಕ್ಕೂಟ ವ್ಯವಸ್ಥೆಯ ಕಲ್ಪನೆಗೆ ಸಂಬಂಧಿಸಿದ ವಿಷಯಗಳು ಮುಖ್ಯವಾಹಿನಿಯಲ್ಲಿ ಚರ್ಚೆಯಾಗುತ್ತಿದೆ. ಸಾಹಿತ್ಯದಿಂದ ರಾಜಕೀಯವರೆಗೆ ಒಕ್ಕೂಟ ವ್ಯವಸ್ಥೆಯ ಅರ್ಥೈಸುವಿಕೆ ಬಹಳ ದುರ್ಬಲವಾಗಿದೆ,” ಎಂದು ವಸಂತ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಅವರು ಈ ನಿಟ್ಟಿನಲ್ಲಿ ಮಾಡಿದ ಸಮೀಕ್ಷೆಯಲ್ಲಿ ಬಹಳಷ್ಟು ಮಂದಿ ತಮ್ಮ ಅಭಿಪ್ರಾಯವನ್ನೂ ನೀಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More