ಸಿಎಂ ಸಿದ್ದರಾಮಯ್ಯನವರ ಅಹಿಂದ ಹುಲಿ ಸವಾರಿಯ ಸವಾಲು, ಸಾಧ್ಯತೆಗಳೇನು?

ತಳ ಸಮುದಾಯಗಳ ವ್ಯಾಪಕ ರಾಜಕೀಯ ಪ್ರಜ್ಞೆ, ಕೋಮು ರಾಜಕಾರಣಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಅಹಿಂದ ಕುರಿತ ಆತಂಕ ಭವಿಷ್ಯದಲ್ಲಿ ಹುಟ್ಟಿಸಬಹುದಾದ ರಾಜಕೀಯ ಸಾಧ್ಯತೆಗಳು ಕುತೂಹಲಕಾರಿಯಾಗಿವೆ. ಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತ ಚುರುಕುನೋಟ ಇಲ್ಲಿದೆ

“ಕೆಲವರು ನನ್ನನ್ನು ಉದ್ದೇಶಪೂರ್ವಕವಾಗಿ ಅಹಿಂದ ಮುಖ್ಯಮಂತ್ರಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲಿ ಅವರೂ ಇಲ್ಲ, ಇವರೂ ಇಲ್ಲ ಎಂಬಂತಹ ಸ್ಥಿತಿ ಬರುತ್ತದೆಯೋ ಎಂದು ಚಿಂತೆಯಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಸೋಮವಾರ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಚುನಾವಣೆ ಹೊಸ್ತಿಲಲ್ಲಿ ಯಾಕೆ ಈ ಭೀತಿಗೊಳಗಾಗಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟವಲ್ಲ. ಆದರೆ, ಅಹಿಂದ ವರ್ಗಗಳ ಸಂಘಟನೆಯ ಮೂಲಕವೇ ಕಳೆದ ಹತ್ತು ವರ್ಷಗಳಲ್ಲಿ ತಮ್ಮ ರಾಜಕೀಯ ಬಲವೃದ್ಧಿಗೊಳಿಸಿಕೊಂಡಿರುವ ನಾಯಕರೊಬ್ಬರು, ಅಧಿಕಾರದ ಕುರ್ಚಿಯಲ್ಲಿ ಕೂತ ಬಳಿಕ, ತಾವು ಯಾವುದರ ಬಲದ ಮೇಲೆ ಆ ಸ್ಥಾನಕ್ಕೆ ಏರಿದ್ದರೋ ಅದೇ ತಮಗೆ ಮುಳುವಾಗಬಹುದು ಎಂಬ ಆತಂಕಕ್ಕೆ ಒಳಗಾಗಲು ಕಾರಣವೇನು ಎಂಬುದು ಇಲ್ಲಿ ಗಮನಿಸಬೇಕಾದ ಪ್ರಶ್ನೆ.

ಸುಮಾರು ಹನ್ನೆರಡು ವರ್ಷಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ವರಿಷ್ಠರು ತಮ್ಮನ್ನು ರಾಜಕೀಯವಾಗಿ ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಅಭದ್ರತೆ ಕಾಡಲಾರಂಭಿಸಿದಾಗ ಸಿದ್ದರಾಮಯ್ಯ ಅವರಿಗೆ ಒದಗಿಬಂದದ್ದು ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತದ ಸಂಘಟನೆಯ ಬಲ. ಪಕ್ಷದ ಚೌಕಟ್ಟಿನ ಹೊರನಿಂತು ರಾಜ್ಯಾದ್ಯಂತ ಅಹಿಂದ ವರ್ಗಗಳ ಸಮಾವೇಶ, ರ‍್ಯಾಲಿಗಳನ್ನು ನಡೆಸಿದ ಅವರು, ತಮಗಿರುವ ಜನಬೆಂಬಲವನ್ನು ಒರೆಗೆ ಹಚ್ಚಿದ್ದಷ್ಟೇ ಅಲ್ಲ, ತಮ್ಮ ರಾಜಕೀಯ ಬುನಾದಿಯನ್ನು ಹಿಗ್ಗಿಸಿಕೊಂಡಿದ್ದರು.

ಆವರೆಗೆ ಕುರುಬರ ನಾಯಕ, ರೈತರ ನಾಯಕ, ಹಳೇಮೈಸೂರು ಭಾಗದ ನಾಯಕ, ಹಿಂದುಳಿದ ವರ್ಗಗಳ ನಾಯಕ ಎಂಬಂತಹ ವಿಶೇಷಣಗಳಿಗೆ ಸೀಮಿತವಾಗಿದ್ದ ಸಿದ್ದರಾಮಯ್ಯ, ಅಹಿಂದ ರ್‍ಯಾಲಿಗಳ ಬಳಿಕ ಅಹಿಂದ ನಾಯಕರಾಗಿ ಬದಲಾದರು. ಆ ಮೂಲಕ ಅವರ ರಾಜಕೀಯ ಪ್ರಭಾವಲಯ ಕೂಡ ವಿಸ್ತರಿಸಿತು. ಒಬ್ಬ ಉತ್ತಮ ಹಣಕಾಸು ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ರೈತ ಹೋರಾಟದ ಹಿನ್ನೆಲೆಯ ನಾಯಕರಾಗಿ ಅವರು ಗಳಿಸಿದ ವರ್ಚಸ್ಸು ಮತ್ತು ಮನ್ನಣೆಗಳು ಅವರಿಗೆ ತಂದುಕೊಡದೆ ಇದ್ದ ರಾಜಕೀಯ ಬಲವನ್ನು ಈ ಅಹಿಂದ ಸಂಘಟನೆ ತಂದುಕೊಟ್ಟಿತು.

ವಿಪರ್ಯಾಸವೆಂದರೆ, ಅದೇ ಅಹಿಂದ ಬಲ ಅವರನ್ನು ಜೆಡಿಎಸ್‌ನಿಂದ ಹೊರಬೀಳುವಂತೆ ಮಾಡಿತು ಮತ್ತು ಕಾಂಗ್ರೆಸ್‌ಗೆ ಪ್ರವೇಶವನ್ನೂ ಸುಲಭವಾಗಿಸಿಕೊಟ್ಟಿತು. ಅಷ್ಟೇ ಅಲ್ಲದೆ, ಕಾಂಗ್ರೆಸ್‌ನೊಳಗೆ ಕಾಲಿಟ್ಟ ಬಳಿಕ ಅವರ ಕಾಲಿಗೆ ತೊಡರಿಕೊಂಡ ಮೂಲ ಕಾಂಗ್ರೆಸ್ಸಿಗರು, ವಲಸೆ ನಾಯಕರು ಎಂಬಂತಹ ಧೋರಣೆ, ಜಾತಿ ಲೆಕ್ಕಾಚಾರ ಮುಂತಾದ ಆತಂಕಗಳನ್ನು ದೂರಮಾಡಿದ್ದು ಕೂಡ ಅವರಿಗಿದ್ದ ಈ ಅಹಿಂದ ಬಲವೇ. ಮುಖ್ಯಮಂತ್ರಿಯಾಗಿ ಅವರ ಮೊದಲ ಬಜೆಟ್‌ನಿಂದ ಈವರೆಗಿನ ಬಜೆಟ್‌ಗಳಲ್ಲೂ ಅಹಿಂದ ವರ್ಗಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳು ಸಾಕಷ್ಟು ಢಾಳಾಗಿಯೇ ಇದ್ದವು. ಆ ಮೂಲಕ ಅಹಿಂದ ವರ್ಗಗಳಿಗೆ ಬಲ ತುಂಬುವ ಯತ್ನವನ್ನು ಮಾಡಿದೆ ಎಂಬುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ.

ಹಾಗಿದ್ದರೂ, ಅಧಿಕಾರಾವಧಿಯ ಅಂತಿಮ ಗಳಿಗೆಯಲ್ಲಿ, ಚುನಾವಣೆಯ ಹೊತ್ತಿನಲ್ಲಿ ಮುಖ್ಯಮಂತ್ರಿಗಳಿಗೆ ಯಾಕೆ ಇತ್ತ ಅಹಿಂದ ವರ್ಗದವರು ತಮ್ಮ ಕೈಹಿಡಿಯದೆ, ಅತ್ತ ಉಳಿದ ಸಮುದಾಯಗಳೂ ಕೈಬಿಟ್ಟರೆ ಏನು ಗತಿ ಎಂಬ ಆತಂಕ ಯಾಕೆ ಕಾಡುತ್ತಿದೆ ಎಂಬ ಪ್ರಶ್ನೆ ಸಹಜ. ಜಾತಿ ವ್ಯವಸ್ಥೆಯನ್ನು ಮೀರಿ ಬೆಳೆಯಲಾಗದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಿತಿಯ ಪರಿಣಾಮ ಇದು ಎಂದರೆ ಉತ್ಪ್ರೇಕ್ಷೆಯಾಗಲಾರದು. ಏಕೆಂದರೆ, ಸದ್ಯದ ಚುನಾವಣಾ ವ್ಯವಸ್ಥೆಯಲ್ಲಿ ನಾಯಕನೊಬ್ಬ ತನ್ನ ಜನಕಲ್ಯಾಣ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳು, ಭವಿಷ್ಯದ ಸಮಾಜ ಕಟ್ಟುವ ಕನಸುಗಳನ್ನೇ ನೆಚ್ಚಿ ಜಯ ಗಳಿಸುವ ಸ್ಥಿತಿ ಇಲ್ಲ. ಇವೆಲ್ಲವನ್ನೂ ಮೀರಿ ಅಂತಿಮವಾಗಿ ಮತಯಂತ್ರದ ಬಳಿ ಮತದಾರರನ ಬೆರಳ ತುದಿಯನ್ನು ನಿಯಂತ್ರಿಸುವ ಶಕ್ತಿ ಜಾತಿ, ಕೋಮು, ಧರ್ಮಗಳೇ ಎಂಬುದು ಬಹುತೇಕ ವಾಸ್ತವ. ಜೊತೆಗೆ, ಚುನಾವಣೆ ಹೊಸ್ತಿಲಲ್ಲಿ ಮತದಾರರ ಮನಸ್ಸನ್ನು ಪ್ರಭಾವಿಸುವ ಮಾಧ್ಯಮ; ಅದರಲ್ಲೂ ಈ ಹೊತ್ತಿನ ಸಾಮಾಜಿಕ ಜಾಲತಾಣಗಳ ಹಿಂದೆ ಕೆಲಸ ಮಾಡುವ ಮೇಲ್ಜಾತಿ ಮತ್ತು ಮೇಲ್ವರ್ಗದ ಮನಸ್ಥಿತಿಗಳು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಗೆಗೆ ಹೊಂದಿರುವ ಪೂರ್ವಗ್ರಹಗಳು ಎಂಥವು ಎಂಬುದು ಕೂಡ ಚುನಾವಣೆಯ ದಿಕ್ಕನ್ನು ನಿರ್ಧರಿಸುತ್ತವೆ.

ಹಾಗೇ, ಹಲವು ಜಾತಿ ಮತ್ತು ಜನಾಂಗಗಳ ಒಂದು ಸಮಾಜದಲ್ಲಿ ಒಂದು ನಿರ್ದಿಷ್ಟ ಜಾತಿ-ಜನಾಂಗಗಳ ಪರ ರಾಜಕೀಯ ಧೋರಣೆಗಳು ಇತರ ಜಾತಿ- ಜನಾಂಗಗಳಲ್ಲಿ ಹುಟ್ಟಿಸುವ ಅಭದ್ರತೆ, ಅಸಮಾಧಾನ, ಅಸಹನೆಗಳು ಕೂಡ ಚುನಾವಣೆ ಹೊತ್ತಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಮತ್ತು ತಮ್ಮದೇ ಮಿತಿಯಲ್ಲಿ ಮತಯಂತ್ರಗಳ ಗುಂಡಿಗಳನ್ನು ನಿರ್ಧರಿಸುತ್ತವೆ.

ಹಾಗಾಗಿ, ರಾಜಕೀಯವಾಗಿ ಒಂದು ಹಂತದವರೆಗೆ ದೊಡ್ಡ ಶಕ್ತಿಯಾಗಿ ಒದಗಿಬರುವ ಜಾತಿ ಮತ್ತು ಸಮುದಾಯಗಳ ಸಂಘಟನೆಯ ಬಲ, ಆ ಬಳಿಕ ದೊಡ್ಡ ತೊಡಕಾಗಿ ಅಡರಿಕೊಳ್ಳುತ್ತದೆ. ರಾಜಕೀಯವಾಗಿ ಮೇಲೆತ್ತಿದ ಸಮುದಾಯಗಳೊಂದಿಗೆ ಗಟ್ಟಿಯಾಗಿ ನಿಲ್ಲಲೂ ಆಗದ, ಇತರ ಸಮುದಾಯಗಳನ್ನು ಅಪ್ಪಿಕೊಳ್ಳಲೂ ಆಗದ ಸಂದಿಗ್ಧತೆ ನಾಯಕನಲ್ಲಿ ಆತಂಕ, ಭೀತಿಗೆ ಕಾರಣವಾಗುತ್ತದೆ.

ಆದರೆ, ಜಾತಿ ಬಲವಿಲ್ಲದ ಮತ್ತು ತನ್ನ ಜಾತಿಯವರಿಗೆ ಮಾತ್ರ ಸೀಮಿತವಾಗಿ ಉಳಿಯದ ದೇವರಾಜ ಅರಸು ಅಂಥವರಿಗೆ ಬಹುಶಃ ಈ ಆತಂಕ ಎದುರಾಗಲಿಲ್ಲ ಮತ್ತು ಜಾತಿ-ಸಮುದಾಯದ ಬಲದ ಮೇಲೆ ಅವರು ಅಧಿಕಾರದ ಕುರ್ಚಿಗೆ ಏರಿರಲಿಲ್ಲ. ಬಡವರ ಪರ ಎಂಬ ಭಾವನೆ ಅವರಿಗೆ ರಾಜಕೀಯ ನೇತಾರರಾಗಿ ಬಲ ತುಂಬಿತ್ತು. ಅಧಿಕಾರಕ್ಕೆ ಏರಿದ ಬಳಿಕ ಅವರು ಹಿಂದುಳಿದ ವರ್ಗದ ಒಳಗೇ ಅತಿ ಹಿಂದುಳಿದ ಮತ್ತು ನಿರ್ಲಕ್ಷಿತ ಜಾತಿ-ಜನಾಂಗಗಳ ನಾಯಕರನ್ನು ಗುರುತಿಸಿ ಅಧಿಕಾರ ಕೊಟ್ಟರು. ಭೂ ಸುಧಾರಣೆಯಂಥ ಕಾನೂನು ವಿಷಯದಲ್ಲೂ ಅವರ ಗಮನ ಇದ್ದದ್ದು ಇಂತಹ ನಿರ್ಲಕ್ಷಿತ ಕಡುಬಡವ ಸಮುದಾಯಗಳ ಕಡೆಗೇ.

ಜೊತೆಗೆ, ಅರಸು ಅವರು ಆಡಳಿತದ ಚುಕ್ಕಾಣಿ ಹಿಡಿದ ಹೊತ್ತಿಗೆ ಇದ್ದ ಸಮಾಜವಾದಿ ರಾಜಕೀಯ ವಾತಾವರಣ ಕೂಡ ಅವರನ್ನು ಇತರ ಜಾತಿ-ಜನಾಂಗಗಳ ಅಸಹನೆಯಿಂದ ಪಾರು ಮಾಡಿತು. ಒಟ್ಟೂ ಸಮಾಜದ ಏಳಿಗೆಯ ಆಶಯದ ಸಮಾಜವಾದ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಒಂದು ವಾತಾವರಣವಾಗಿ ಇದ್ದಂತಹ ದಿನಗಳವು. ಹಾಗಾಗಿ, ಹಿಂದುಳಿದ ವರ್ಗಗಳ, ದಲಿತರ ಮತ್ತು ಬಡವರ ಪರವಾದ ಅರಸು ಧೋರಣೆಗಳು ಅವರಿಗೆ ಬಹುಶಃ ರಾಜಕೀಯ ಅಪಾಯವನ್ನು ತಂದೊಡ್ಡಲಿಲ್ಲ.

ಆದರೆ, ಇಂದು ಪರಿಸ್ಥಿತಿ ಭಿನ್ನ. ಪ್ರತಿ ಹಿಂದುಳಿದ, ದಲಿತ ಜಾತಿಗಳಲ್ಲೂ ಇಂದು ರಾಜಕೀಯ ಪ್ರಜ್ಞೆ ಮೂಡಿದೆ. ತಮ್ಮ ಹಕ್ಕುಗಳಿಗಾಗಿ, ತಮ್ಮ ಪಾಲಿಗಾಗಿ ಸೆಣೆಸುವ ರಾಜಕೀಯ ಅರಿವು ಇದೆ. ಅದೇ ಹೊತ್ತಿಗೆ ಮತ್ತೊಂದು ಜಾತಿ-ಜನಾಂಗಗಳು ತಮ್ಮ ಪಾಲನ್ನು ಕಿತ್ತುಕೊಂಡಿವೆ ಎಂಬ ಅಸಹನೆಯ, ಅಸಮಾಧಾನ ಕೂಡ ಸಮಾಜದ ಕೆಲವು ಜಾತಿ-ಜನಾಂಗಗಳಲ್ಲಿ ಬಲವಾಗಿದೆ. ಹಾಗಾಗಿ, ಇದು ರಾಜಕೀಯವಾಗಿ ಸವಾಲಿನ ಹೊತ್ತು. ಒಂದು ಜಾತಿ, ಜನಾಂಗ, ಸಮುದಾಯದ ನಾಯಕರಾಗಿ ಗುರುತಿಸಿಕೊಳ್ಳುವುದು ಎಷ್ಟು ಲಾಭವನ್ನು ತರಬಲ್ಲದೋ, ಅಷ್ಟೇ ಅಪಾಯವನ್ನೂ, ನಷ್ಟವನ್ನೂ ತರುವ ಸಂದಿಗ್ಧತೆಯ ಹೊತ್ತು ಇದು. ಜೊತೆಗೆ, ಧರ್ಮಕಾರಣದ ಅಲೆ ಕೂಡ ಸಮಾಜದಲ್ಲಿ ಉಬ್ಬರದ ಸ್ಥಿತಿಯಲ್ಲಿದೆ. ಧರ್ಮಕಾರಣದ ಅಲೆಯ ಮೇಲೆಯೇ ಒಂದು ಪಕ್ಷವನ್ನು ಸಂಪೂರ್ಣ ಬದಿಗೊತ್ತಿ, ಪ್ರತಿಪಕ್ಷರಹಿತವಾದ ರಾಜಕೀಯ ವ್ಯವಸ್ಥೆಯನ್ನು ತರಬಹುದು ಎಂಬಷ್ಟರಮಟ್ಟಿಗೆ ಒಮ್ಮುಖ ಜನಾದೇಶವನ್ನು ನೀಡುವ ಮಟ್ಟಿಗೆ ಪರಿಸ್ಥಿತಿ ಕೋಮುಮಯವಾಗಿದೆ.

ಬಹುಶಃ ಉತ್ತರ ಪ್ರದೇಶದ ಬಿಎಸ್‌‌ಪಿ ಮತ್ತು ಎಸ್‌ಪಿ ರಾಜಕೀಯ ಪಕ್ಷಗಳ ನಾಯಕರು ಈ ಅಪಾಯವನ್ನು ಬಹಳ ಆರಂಭದಲ್ಲೇ ಗ್ರಹಿಸಿದ್ದರು. ಹಾಗಾಗಿಯೇ ಮಾಯಾವತಿ ಮತ್ತು ಮುಲಾಯಂ ಸಿಂಗ್ ದಶಕಗಳ ಹಿಂದೆಯೇ ತಮ್ಮ ರಾಜಕೀಯ ಬದ್ಧತೆಯ ನೆಲೆಯಲ್ಲಿ ಹಿಗ್ಗಿಸಿಕೊಂಡು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಜೊತೆಯಲ್ಲಿ ಬ್ರಾಹ್ಮಣರೂ ಸೇರಿದಂತೆ ಇತರ ಮುಂದುವರಿದ ಮತ್ತು ಪ್ರಭಾವಿ ವರ್ಗಗಳನ್ನೂ ಒಳಗೊಳ್ಳುವಂತೆ ಮಾಡಿದರು. ಈ ಸಾಮಾಜಿಕ ಕಸಿಯ ರಾಜಕೀಯ ಪ್ರಯೋಗಗಳು ಕೂಡ ಕೋಮುವಾದಿ ರಾಜಕಾರಣದ ಮುಂದೆ ಅಲ್ಲಿ ಬಹಳ ಕಾಲ ನಡೆಯಲಿಲ್ಲ ಎಂಬುದು ಈಗ ಇತಿಹಾಸ.

ಇದನ್ನೂ ಓದಿ : ಹಾಸನದಲ್ಲೇ ಜೆಡಿಎಸ್ ಬಗ್ಗುಬಡಿಯಲು ತಂತ್ರ ಹೆಣೆದಿದ್ದಾರೆಯೇ ಸಿದ್ದರಾಮಯ್ಯ?

ಇಂತಹ ಹೊತ್ತಲ್ಲಿ, ನಿರ್ದಿಷ್ಟ ಜಾತಿ-ಜನಾಂಗಗಳ ರಾಜಕೀಯ ವಾರಸುದಾರಿಕೆಯ ಹಕ್ಕುಪತ್ರಿಪಾದಿಸುತ್ತಲೇ ಅಧಿಕಾರದ ಗದ್ದುಗೆ ಗಟ್ಟಿಗಳಿಸುವ ಚುನಾವಣಾ ರಾಜಕೀಯ ಕದನದಲ್ಲಿ ಜಯಪಡೆಯುವುದು ಸುಲಭವಲ್ಲ. ಅಂತಹ ರಾಜಕೀಯ ಸವಾಲು ಈಗ ಸಿದ್ದರಾಮಯ್ಯ ಅವರ ಮುಂದಿದೆ. ಆ ಅರ್ಥದಲ್ಲಿ, ಐದು ವರ್ಷಗಳ ಅಧಿಕಾರದ ಬಳಿಕ, ಅವರ ಸರ್ಕಾರದ ನೀತಿ-ನಿರೂಪಣೆಗಳನ್ನು ಕೋಮು ರಾಜಕಾರಣಕ್ಕೆ ಒಡ್ಡಿಕೊಂಡಿರುವ, ರಾಜಕೀಯ ಹಕ್ಕುದಾರಿಕೆಯ ಧಾವಂತಕ್ಕೆ ಬಿದ್ದಿರುವ ಸಮಾಜ ಹೇಗೆ ಸ್ವೀಕರಿಸಿದೆ ಎಂಬ ಕುತೂಹಲಕ್ಕೂ ಈ ಚುನಾವಣೆ ಉತ್ತರ ನೀಡಲಿದೆ. ಹಾಗಾಗಿ, ಸಿದ್ದರಾಮಯ್ಯ ಅವರ ಈ ಆತಂಕ ಮುಂದಿನ ದಿನಗಳಲ್ಲಿ ನಿರೂಪಿಸಬಹುದಾದ ರಾಜಕೀಯ ಸಾಧ್ಯತೆಯ ಮೇಲೆ ಕುತೂಹಲವಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More