ಶಿರೂರು ಶ್ರೀ ಸಂದರ್ಶನ | ಟಿಕೆಟ್ ಕೊಟ್ಟರೆ ಬಿಜೆಪಿ, ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿ

ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶಿರೂರು ಸ್ವಾಮೀಜಿ ಸಾವನ್ನಪ್ಪಿದ್ದು, ಈ ಬಗ್ಗೆ ಅನುಮಾನಗಳು ಎದ್ದಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಮಾತನಾಡಿ ಗಮನಸೆಳೆದಿದ್ದ ಸ್ವಾಮೀಜಿ ‘ದಿ ಸ್ಟೇಟ್‌’ನೊಂದಿಗೆ ಮಾತನಾಡಿದ್ದರು. ಶ್ರೀಗಳು ನೀಡಿದ ಸಂದರ್ಶನ ಇಲ್ಲಿದೆ

ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದು, ಈ ನಿರ್ಧಾರ ಅಷ್ಟಮಠಗಳ ಚರಿತ್ರೆಯಲ್ಲೇ ಮೊದಲು ಎಂಬ ಮಾತಿದೆ. ಮತ್ತೊಂದೆಡೆ, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶ್ರೀಗಳ ರಾಜಕೀಯ ಪ್ರವೇಶ ಕಾಂಗ್ರೆಸ್ಸಿಗೆ ಲಾಭ ತಂದುಕೊಡಲಿದೆ ಎಂಬುದು ಕೆಲವರಲ್ಲಿ ಅಸಮಾಧಾನ ಸೃಷ್ಟಿಸಿದೆ. ನಾನು ಬಿಜೆಪಿ ವ್ಯಕ್ತಿ ಎಂದು ಹೇಳುವ ಶ್ರೀಗಳು, ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಗೆ ನಿಂತಿರುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ನಿಜವಾದರೂ ಅಂತರಾಳದಲ್ಲಿ ಬೇರೆಯದೇ ವಿಚಾರಗಳಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇವೆಲ್ಲ ಪ್ರಶ್ನೆಗಳನ್ನು ‘ದಿ ಸ್ಟೇಟ್’ ಸ್ವಾಮೀಜಿಯವರ ಮುಂದಿಟ್ಟಿದೆ.

ಚುನಾವಣೆಗೆ ಸ್ಪರ್ಧಿಸಬೇಕು ಎಂದು ಎಂದಿನಿಂದ ಬಯಸಿದ್ದಿರಿ?

ಬಹುವರ್ಷಗಳಿಂದಲೂ ಇಂಥದ್ದೊದು ಆಶಯ ಇತ್ತು. ಆದರೆ, ಮಠದ ಕೆಲಸ ಕಾರ್ಯಗಳಿಂದಾಗಿ ರಾಜಕೀಯ ಪ್ರವೇಶ ಕಾರ್ಯ ಬಾಕಿ ಉಳಿದಿತ್ತು. ಈ ಬಾರಿ ಚುನಾವಣೆಗೆ ನಿಲ್ಲುವುದು ಎಂದು ನಿರ್ಧರಿಸಿ ಒಂದು ತಿಂಗಳಿನಿಂದ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಆಶ್ವಾಸನೆ ಕೊಟ್ಟ ಮಂದಿ ಶೇ.5ರಷ್ಟೂ ಕೆಲಸ ಮಾಡಿಲ್ಲ. ಮಾಡಿದ ಕೆಲಸವೂ ಕಾಟಾಚಾರಕ್ಕೆ ಎಂಬಂತಾಗಿದೆ. ಹಳೆಯ ಶಾಸಕರುಗಳಿಗೆ ಇದ್ದ ತುಡಿತ ಈಗಿನವರಿಗೆ ಇಲ್ಲ. ಇವರು ಮಾಡುತ್ತಿರುವ ಕೆಲಸ ಸಾಕಾಗುತ್ತಿಲ್ಲ. ಮತ ಹಾಕಿದವರು ಇನ್ನು ಮೋಸ ಹೋಗುವುದು ಬೇಡ ಎಂಬುದು ನಮ್ಮ ಅಭಿಪ್ರಾಯ. ಬಿಜೆಪಿಯಲ್ಲಿ ಅವಕಾಶ ಕೊಟ್ಟರೆ ಉತ್ತಮ, ಇಲ್ಲದಿದ್ದರೆ ಪಕ್ಷೇತರನಾಗಿ ನಿಲ್ಲುವುದೆಂದು ತೀರ್ಮಾನಿಸಿದ್ದೇನೆ. ನಾನು ಯಾರಿಗೋ ಬೆಂಬಲ ನೀಡಲು ಚುನಾವಣೆಗೆ ನಿಲ್ಲುತ್ತಿಲ್ಲ. ಬಿಜೆಪಿಯವರು ಹಾಗೆ ಅಪಪ್ರಚಾರ ಮಾಡಬಾರದು. ಅವರಿಗೆ ಕಂಡಂತೆ ಅವರು ಮಾತನಾಡುತ್ತಿದ್ದಾರೆ.

ನಿಮ್ಮ ರಾಜಕೀಯ ಪ್ರವೇಶದ ಹಿಂದೆ ಯಾವ ಒತ್ತಡ ಕೆಲಸ ಮಾಡಿದೆ?

ಸುಮಾರು 40-50 ವರ್ಷಗಳಿಂದ ನಮ್ಮ ಕ್ಷೇತ್ರ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ನೋಡುತ್ತಿದ್ದೇವೆ. ನಾನು ಮುಖ್ಯವಾಗಿ ನರೇಂದ್ರ ಮೋದಿ ಅವರ ಪರವಾಗಿದ್ದೇನೆ. ನಾನು ಮೂಲತಃ ಬಿಜೆಪಿ ಮನುಷ್ಯ. ಎಂದೂ ಕಾಂಗ್ರೆಸ್ಸಿನವನಲ್ಲ. ಆ ವ್ಯಕ್ತಿಯೊಟ್ಟಿಗೆ (ಸಚಿವ ಪ್ರಮೋದ್ ಮಧ್ವರಾಜ್) ಉತ್ತಮವಾಗಿ ಮಾತನಾಡುತ್ತೇನೆ ಎಂಬ ಕಾರಣಕ್ಕೆ ಇವರೆಲ್ಲ (ಜಿಲ್ಲಾ ಬಿಜೆಪಿ) ಸಿಟ್ಟಾಗಿದ್ದಾರೆ ಅಷ್ಟೇ.

ನಿಮ್ಮ ರಾಜಕೀಯ ಪ್ರವೇಶದ ನಿಲುವಿಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರ ಸ್ಪಂದನೆ ಹೇಗಿದೆ?

ರಾಜ್ಯ ಮಟ್ಟದ ನಾಯಕರಿಗೆ ನಾನು ಸ್ಪರ್ಧಿಸುವ ಬಗ್ಗೆ ಒಲವಿಲ್ಲ. ತೊಂದರೆ ಇಲ್ಲ, ಅವರು ಮಾತನಾಡಬೇಕು ಎಂದು ನಾನೇನೂ ಬಯಸುವುದಿಲ್ಲ. ಯಡಿಯೂರಪ್ಪ ಮತ್ತು ಶೋಭಾ ಖುದ್ದಾಗಿ ನಮ್ಮೊಟ್ಟಿಗೆ ಮಾತನಾಡುವುದಾಗಿ ಹೇಳಿದ್ದಾರೆ. ನಾನು ಸ್ಪರ್ಧಿಸುವುದು ಬೇಡ ಎಂದು ಹೇಳುವುದು ಅವರ ಇಂಗಿತ. ಬಿಜೆಪಿಯಲ್ಲಿ ಅಧಿಕಾರ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದು ಖಚಿತ. ಆ ಬಗ್ಗೆ ಈಗಾಗಲೇ ಒಂದು ಸೂತ್ರ ಹಾಕಿಕೊಂಡಿದ್ದೇವೆ.

ರಾಷ್ಟ್ರೀಯ ನಾಯಕರಿಂದ ಒತ್ತಡ ತರಬಹುದಲ್ಲವೇ?

ಹಾಗೆ ಬೇಡಿಕೊಂಡುಹೋಗುವವನು ನಾನಲ್ಲ. ಅವಕಾಶ ಸಿಕ್ಕರೆ ಸಿಗಲಿ ಇಲ್ಲದಿದ್ದರೆ ಬೇಡ. ಅದಕ್ಕೆಲ್ಲ ಸಮಯ ವ್ಯಯಿಸುವ ವ್ಯಕ್ತಿಯಲ್ಲ ನಾನು. ನನಗೆ ಬೆಂಬಲಿಗರು ಸಾಕಷ್ಟಿದ್ದಾರೆ, ಅವರೆಲ್ಲ ಸಹಕಾರ ಕೊಡುತ್ತಾರೆ. ಆ ಬಗ್ಗೆ ಧೈರ್ಯ ಇದೆ.

ಒಂದೆಡೆ ಯೋಗಿ ಆದಿತ್ಯನಾಥರನ್ನು ಅನುಸರಿಸುವೆ ಎನ್ನುತ್ತೀರಿ, ಮತ್ತೊಂದೆಡೆ ಪ್ರಮೋದ್ ಮಧ್ವರಾಜ್ ನನ್ನ ಮಾದರಿ ಎನ್ನುತ್ತೀರಿ. ಏನಿದು ವಿರೋಧಾಭಾಸ?

ನಾನು ಪಕ್ಷಕ್ಕೆ ಮನ್ನಣೆ ಕೊಡುವವನಲ್ಲ, ವ್ಯಕ್ತಿಗೆ ಮನ್ನಣೆ ಕೊಡುವವನು. ಅವರ ಸಾಧನೆ ಸಾಕಷ್ಟಿದೆ, ಹಾಗಾಗಿ ವ್ಯಕ್ತಿಯನ್ನು ಹೊಗಳಿದ್ದೇನೆಯೇ ವಿನಾ ಪಕ್ಷವನ್ನು ಹೊಗಳಿಲ್ಲ. ಮಾಜಿ ಶಾಸಕ ರಘುಪತಿ ಭಟ್ ಕೂಡ ನಮ್ಮ ಆತ್ಮೀಯರೇ.

ನಿಮ್ಮನ್ನು ಚುನಾವಣಾ ಕಣಕ್ಕೆ ಇಳಿಸುವುದರ ಹಿಂದೆ ಸಚಿವ ಪ್ರಮೋದ್ ಮಧ್ವರಾಜ್ ಪಾತ್ರ ಇದೆ ಎಂದು ಜನ ಮಾತನಾಡಿಕೊಳ್ಳುತ್ತಾರಲ್ಲ?

ನೂರಕ್ಕೆ ನೂರು ಇಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಅವರಿಗೆ ಗೊತ್ತೇ ಇರಲಿಲ್ಲ. ಪ್ರಮೋದ್ ನನ್ನನ್ನು ಛೂ ಬಿಟ್ಟಿದ್ದಾರೆ ಎಂದು ಜನ ಮಾತನಾಡುತ್ತಾರೆ. ಇದೆಲ್ಲ ಚುನಾವಣೆ ಸಮಯದಲ್ಲಿ ಸ್ವಾಭಾವಿಕ. ಏನೂ ಮಾಡಲಾಗುವುದಿಲ್ಲ.

ನಿಮ್ಮ ನಿರ್ಧಾರದಿಂದ ಕಾಂಗ್ರೆಸ್ಸಿಗೆ ಪರೋಕ್ಷವಾಗಿ ಲಾಭವಾಗುತ್ತದೆ ಎಂಬ ಮಾತಿದೆಯಲ್ಲ?

ಕಾಂಗ್ರೆಸ್ಸಿಗೆ ಹೇಗೆ ಲಾಭವಾಗುತ್ತದೆ? ನನ್ನ ವೋಟು ನನಗೆ ಸಿಗುತ್ತದೆ, ಅವರ ವೋಟು ಅವರಿಗೆ ಸಿಗುತ್ತದೆ. ಕಾಂಗ್ರೆಸ್ಸಿಗೆ ಲಾಭವಾಗುತ್ತದೆ ಎಂದು ನಾನೆಂದೂ ಹೇಳಿಲ್ಲ, ಬಿಜೆಪಿಯವರು ಹಾಗೆ ಎಣಿಸಿರಬಹುದು ಎಂದು ಹೇಳಿದ್ದೆ.

ನಿಮ್ಮ ನಿಜವಾದ ವೈರಿ ಬಿಜೆಪಿಯೋ ಅಥವಾ ಕಾಂಗ್ರೆಸ್ಸೋ?

ನನಗೆ ಯಾರೂ ವೈರಿಗಳಿಲ್ಲ. ಆದರೆ ಅಧಿಕಾರದಲ್ಲಿರುವವರು ತಮ್ಮ ಅಧಿಕಾರವನ್ನು ಯಾಕೆ ಸದುಪಯೋಗಪಡಿಸಿಕೊಳ್ಳುವುದಿಲ್ಲ?

ಜಿಲ್ಲಾ ಬಿಜೆಪಿ ಮೇಲಷ್ಟೇ ನಿಮಗೆ ಸಿಟ್ಟಿಲ್ಲ, ನಿಮ್ಮ ನಿರ್ಧಾರದ ಹಿಂದೆ ಬೇರೆ-ಬೇರೆ ಅಸಮಾಧಾನಗಳಿವೆ ಎನ್ನುತ್ತಾರಲ್ಲ?

ಅದನ್ನೆಲ್ಲ ಹೇಗೆ ಹೇಳುವುದು. ಇತ್ತೀಚೆಗೆ (ರಘುಪತಿ) ಭಟ್ಟರು ಕೂಡ ನನ್ನ ವಿರುದ್ಧ ಏರುದನಿಯಲ್ಲಿ ಮಾತನಾಡಲು ಶುರುಮಾಡಿದರು. ಆಗ, “ಭಟ್ಟರೇ ಬಿಸಿಯಾಗಬೇಡಿ, ಬಿಸಿಯಾದರೆ ಸಮಸ್ಯೆಯಾಗುತ್ತದೆ,” ಎಂದೆ. ನಾನು ಇದನ್ನೆಲ್ಲ ಮಾತನಾಡಿದರೆ ಬಿಜೆಪಿಗೆ ವಿರುದ್ಧ ಎಂದಾಗುತ್ತದೆ. ಈಗಲೂ ಭಟ್ಟರು ನನ್ನೊಟ್ಟಿಗೆ ಇದ್ದಾರೆ, ಪ್ರಮೋದ್ ಕೂಡ ಇದ್ದಾರೆ. ನನ್ನ ಪರ್ಯಾಯದಲ್ಲಿ ಇಬ್ಬರೂ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು.

ಇಬ್ಬರೂ ನಿಮ್ಮ ಆತ್ಮೀಯರು, ನಿಮಗೆ ಬೇಕಾದವರು. ಹಾಗಿದ್ದರೂ ಈ ಇಬ್ಬರ ಮಧ್ಯೆ ನೀವೇಕೆ ಪ್ರವೇಶಿಸಿದಿರಿ?

ಏನೂ ಆಗುವುದಿಲ್ಲ. ಪದೇಪದೇ ಚುನಾವಣೆಗೆ ನಿಲ್ಲುವ ಅವಕಾಶ ನಮ್ಮಲ್ಲಿದೆ, ವಿದೇಶಗಳಲ್ಲಿ ಇಲ್ಲ. 25-30 ವರ್ಷಗಳ ಕಾಲ ಒಬ್ಬರೇ ಆಳುತ್ತಾರೆ. ಹಾಗಾಗಿ ನಾನೂ ಒಂದು ಸಾಧನೆ ಮಾಡಬೇಕೆಂದಿದ್ದೇನೆ. ಆಗುತ್ತೋ ಇಲ್ಲವೋ ನೋಡುವ. ಡ್ಯಾಮೇಜ್ ಯಾರಿಗೂ ಆಗುವುದಿಲ್ಲ.

ಗೆಲ್ಲುತ್ತೇನೆಂಬ ವಿಶ್ವಾಸ ಇದೆಯೇ?

ನೂರಕ್ಕೆ ನೂರು ವಿಶ್ವಾಸ ಇದೆ. ನನಗೆ ಒಂದೇ ಜಾತಿ, ಮತದ ಅನುಯಾಯಿಗಳಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ನಾನು ಸಹಾಯ ಮಾಡಿದವನು. ಹೀಗೆ ಮಾಡಿದರೆ ಸ್ವಾಮೀಜಿ ಕಾಂಗ್ರೆಸ್ ಪರ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಮುಸ್ಲಿಮರು ಕೃಷ್ಣಮಠದಲ್ಲಿ ಪ್ರಾರ್ಥಿಸಿದಾಗ, ಇಫ್ತಿಯಾರ್ ಕೂಟ ಏರ್ಪಡಿಸಿದಾಗ ಇದೇ ಬಿಜೆಪಿಯವರು ಏನಾದರೂ ಮಾತನಾಡಿದ್ದರಾ? ಸಂವಿಧಾನದ ಬಗ್ಗೆ ವಿವಾದ ಎದ್ದಾಗಲೂ ಇವರು (ಬಿಜೆಪಿ) ತಲೆಹಾಕುವುದಿಲ್ಲ. ಅವರು (ಪೇಜಾವರ ಶ್ರೀ) ಬಿಜೆಪಿಯವರಲ್ಲವೇ? ಅಡ್ವಾಣಿ, ವಾಜಪೇಯಿ ಜೊತೆಗೆ ಇದ್ದವರಲ್ಲವೇ? ಇವರು ಈ ರೀತಿ ಮಾಡಬಹುದಾ? ಇದರಿಂದ ಬಿಜೆಪಿಯವರ ಮನಸ್ಸಿಗೂ ನೋವಾಗಿದೆ.

ಸಂಘಪರಿವಾರ ಏನಾದರೂ ಒತ್ತಡ ಹೇರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದರೆ ಏನು ಮಾಡುವಿರಿ?

ಸಂಘಪರಿವಾರಕ್ಕೆ ನಾನೆಷ್ಟೋ ಸಹಾಯ ಮಾಡಿದೆ. ಅವರಾರೂ ಕೆಲಸ ಮಾಡುತ್ತಿಲ್ಲ. ಹಿಂದೂ ಯುವಸೇನೆ, (ಶ್ರೀ) ರಾಮಸೇನೆ, ಭಜರಂಗದಳಕ್ಕೆ ಸಹಾಯ ಮಾಡುತ್ತಿರುವೆ. ಆದರೆ, ಎಲ್ಲವೂ ನೆಪಮಾತ್ರಕ್ಕೆ ನಡೆಯುತ್ತಿವೆ. ಆರಂಭಶೂರತ್ವ ಮಾತ್ರ. ಚೂರು ಹೆಚ್ಚೂಕಡಿಮೆಯಾದರೆ ಜೈಲಿಗೆ ಹೋಗುವವರು ಸಂಘಪರಿವಾರದ ಕಾರ್ಯಕರ್ತರು. ಆದರೆ, ಯಾರೂ ಅವರನ್ನು ಬಿಡಿಸಲು ಹೋಗುವುದಿಲ್ಲ. ಆಗ ಸಂಘಟನೆ ಮೇಲೆ ಬೇಸರ ಮೂಡುತ್ತದೆ.

ನಿಮ್ಮ ರಾಜಕೀಯ ಪ್ರವೇಶ ನಿರ್ಧಾರಕ್ಕೆ ಅಷ್ಟಮಠಗಳ ಕೆಲವು ಮಠಾಧೀಶರ ಸಮ್ಮತಿ ಇಲ್ಲ ಎಂಬ ಮಾತು ನಿಜವೇ?

ನನಗೆ ಯಾರೂ ಸಮ್ಮತಿಸಬೇಕಾದ ಅಗತ್ಯವಿಲ್ಲ. ನಮಗೆ ಸ್ವಾತಂತ್ರ್ಯ 47ಕ್ಕೇ ಸಿಕ್ಕಿದೆ. ನಾನೇನೂ ತಪ್ಪು ಮಾಡಿಲ್ಲ. ನಮ್ಮ ಸಾಧನೆಗೆ ಕೆಲವರು ಅಡ್ಡಿಮಾಡುತ್ತಿದ್ದಾರೆ ಅಷ್ಟೇ.

ಮಠಾಧೀಶರು ರಾಜಕೀಯ ಪ್ರವೇಶಿಸುವುದರಿಂದ ರಾಜಕೀಯಕ್ಕೆ ಆಗುವ ಲಾಭ ಏನು? ಮಠಗಳಿಗೆ ಆಗುವ ಲಾಭ ಏನು?

ಮಠದ ಅಭಿವೃದ್ಧಿಗಾಗಿ ರಾಜಕೀಯ ಸೇರುತ್ತಿಲ್ಲ. ಮಠಕ್ಕೆ ಉತ್ತಮ ಆರ್ಥಿಕ ಸೌಲಭ್ಯ ಇದೆ. ಆದರೆ, ನಮ್ಮ ಕ್ಷೇತ್ರ ಉದ್ಧಾರ ಆಗಬೇಕು. ‘ಲೋಕಾ ಸಮಸ್ತಾ ಸುಖಿನೋ ಭವಂತು’ ಎಂಬುದು ನಮ್ಮ ಧೋರಣೆ.

ಇದನ್ನೂ ಓದಿ : ಸುಗತ ಸಂಪಾದಕೀಯ | ಚುನಾವಣಾ ರಾಜಕಾರಣಕ್ಕೆ ಧರ್ಮ ಗುರುಗಳು ಬರಬೇಕೆ?
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More