ರೆಡ್ಡಿ ಗಂಟು ಬೇಕು, ನಂಟು ಬೇಡ; ಶ್ರೀರಾಮುಲುವಿನ ನಂಟು ಬೇಕು, ಆದರೆ...

ಹಿಂದೆ ಜನಾರ್ದನ ರೆಡ್ಡಿ ನೆರಳಾಗಿ ಮಾತ್ರವೇ ಕಾಣುತ್ತಿದ್ದ ಶ್ರೀರಾಮುಲು ಇಂದು ಪ್ರಬಲ ಸಮುದಾಯದ ಮುಖಂಡನಾಗಿ ಹೊರಹೊಮ್ಮಿದ್ದಾರೆ. ವಿಪರ್ಯಾಸವೆಂದರೆ, ಸಮುದಾಯದ ಅಭಿಮಾನವಿದ್ದರೂ ಅದನ್ನು ರಾಜಕೀಯ ಶಕ್ತಿಯಾಗಿ ಬಳಸಲು ಶ್ರೀರಾಮುಲು ಹೊಂದಿರುವ ‘ನಂಟು’ಗಳು ಬಿಡುತ್ತಿಲ್ಲ!

ಜನಬೆಂಬಲ ಇರುವ ನಾಯಕರಿಗೆ ಧನಬಲವೂ, ಧನಬಲವಿರುವ ನಾಯಕರಿಗೆ ಜನಬಲವೂ ಒದಗಿ ಬರುವುದು ರಾಜಕಾರಣದಲ್ಲಿ ಅಷ್ಟು ಸುಲಭವಲ್ಲ. ಹೀಗಾಗಿಯೇ ಪ್ರಬಲ ಸಮುದಾಯಗಳಿಗೆ ಸೇರಿದ ರಾಜಕಾರಣಿಗಳು ಧನಾಢ್ಯರೂ ಆದಾಗ ಸಹಜವಾಗಿಯೇ ತಮ್ಮ ವಾರಿಗೆಯ ಇತರೆ ರಾಜಕಾರಣಿಗಳಿಗಿಂತ ಶರವೇಗದಲ್ಲಿ ಮುಂದೆ ಸಾಗಿಬಿಡುತ್ತಾರೆ, ನೋಡುನೋಡುತ್ತಲೇ ರಾಜಕೀಯವಾಗಿ ಬಲಾಢ್ಯರಾಗುತ್ತಾರೆ. ಆದರೆ, ಜನಬಲ, ಧನಬಲ ಎರಡೂ ಇದ್ದರೂ ಸನ್ನಿವೇಶಗಳು ವ್ಯತಿರಿಕ್ತವಾಗಿದ್ದರೆ ಅಂತಹ ರಾಜಕಾರಣಿ ಅಗೆಯದೆ ಉಳಿದ ‘ಗಣಿ’ಯಾಗುತ್ತಾನೆ, ಬಳಕೆಯಾಗದ ಅಸ್ತ್ರವಾಗುತ್ತಾನೆ. ಅಂಥದ್ದೇ ಒಂದು ಅಗೆಯದ ಗಣಿಯಾಗಿ, ಬಳಕೆಯಾಗದ ಅಸ್ತ್ರವಾಗಿ ಸದ್ಯಕ್ಕೆ ರಾಜ್ಯರಾಜಕಾರಣದಲ್ಲಿ ಕಂಡುಬರುತ್ತಿರುವುದು ನಾಯಕ ಸಮುದಾಯದ ಶ್ರೀರಾಮುಲು.

ಗಣಿರೆಡ್ಡಿಗಳ ಭಂಟನಾಗಿ ಕರ್ನಾಟಕದ ರಾಜಕಾರಣದಲ್ಲಿ ಧುತ್ತನೆ ಕಾಣಿಸಿಕೊಂಡ ಶ್ರೀರಾಮುಲು, ತಮ್ಮ ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ರೆಡ್ಡಿಯ ನೆರಳಾಗಿ ಮಾತ್ರವೇ ಪರಿಚಿತರಾಗಿದ್ದವರು. ಜನಾರ್ದನ ರೆಡ್ಡಿಯ ಬಲಗೈ ಭಂಟ ಎನ್ನುವುದರಾಚೆಗೆ ಶ್ರೀರಾಮುಲುಗೆ ರಾಜಕಾರಣದಲ್ಲಿ ತನ್ನದೇ ಆದ ಒಂದು ವ್ಯಕ್ತಿತ್ವವೇನೂ ಆರಂಭದ ದಿನಗಳಲ್ಲಿ ಮೂಡಿರಲಿಲ್ಲ. ವ್ಯಕ್ತಿ ಒಳ್ಳೆಯವನೇ ಆದರೂ ಬಳ್ಳಾರಿಯ ಜಿದ್ದಾಜಿದ್ದಿನ ರಾಜಕಾರಣದಲ್ಲಿ ಭಂಟರು ಮಾಡುವ ‘ಸ್ವಾಮಿಕಾರ್ಯ’ಗಳೆಲ್ಲವನ್ನೂ ಮುಗಿಬಿದ್ದು ಮಾಡುತ್ತಲೇ ಸ್ಥಳೀಯ ‘ಶಕ್ತಿ’ ರಾಜಕಾರಣದ ಭಾಗವಾಗಿದ್ದರು ಎನ್ನುವ ನೆನಪು ಬಳ್ಳಾರಿಯ ಹಳೆಯ ತಲೆಮಾರಿನ ಮತದಾರರಲ್ಲಿದೆ.

ಬಳ್ಳಾರಿಯಲ್ಲಿ ರೆಡ್ಡಿಗಳ ಪಾರುಪತ್ಯ ಏರುಗತಿಯಲ್ಲಿ ಸಾಗಿ, ರಾಜ್ಯವನ್ನು ವ್ಯಾಪಿಸಿ ಅಷ್ಟೇ ವೇಗವಾಗಿ ಕಂದಕದೆಡೆಗೂ ಜಾರಿತು. ಹೀಗಾದಾಗ ಮೊದಲಿಗೆ ರಾಜಕಾರಣದಲ್ಲಿ ಅತಂತ್ರವಾದಂತೆ ಕಂಡದ್ದು ಸಹ ಶ್ರೀರಾಮುಲುವೇ ಆಗಿದ್ದರು. ಅಷ್ಟೊತ್ತಿಗಾಗಲೇ ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ತನ್ನದೇ ಅದ ಸ್ಥಾನವನ್ನು ಹೊಂದಿದ್ದ ಶ್ರೀರಾಮುಲುವನ್ನು ರಾಜಕೀಯವಾಗಿ ಪ್ರಸ್ತುತವಾಗಿರಿಸಿದ್ದು ರಾಜಕಾರಣದಲ್ಲಿ ಅಷ್ಟಾಗಿ ಕಾಣಸಿಗದ ಅಮಾಯಕವೆನಿಸುವ ಮುಗ್ಧತೆ ಹಾಗೂ ಪಕ್ಷಾತೀತವಾಗಿ ಸಂಪಾದಿಸಿದ್ದ ಸ್ನೇಹ. ಶ್ರೀರಾಮುಲು ಮುಗ್ಧತೆ ಸಹಜವೋ, ಆರೋಪಿತವೋ ಎನ್ನುವ ಬಗ್ಗೆ ಇಂದಿಗೂ ರಾಜಕಾರಣದಲ್ಲಿ ಚರ್ಚೆಗಳಿವೆ. ಅದೇನೇ ಇದ್ದರೂ, ರಾಜಕಾರಣದಲ್ಲಿ ಶ್ರೀರಾಮುಲು ರೆಡ್ಡಿಗಳ ನೆರಳಿನಾಚೆಗೆ ತನ್ನದೇ ಆದ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಹಕಾರಿಯಾದದ್ದು ಆತನ ಬೆನ್ನಿಗೆ ಸದಾಕಾಲ ನಿಂತ ನಾಯಕ ಸಮುದಾಯ. ಶ್ರೀರಾಮುಲುಗೆ ಇರುವ ಜಾತಿ ಬಲವನ್ನು ರಾಜಕಾರಣದ ಆರಂಭದ ದಿನಗಳಿಂದಲೂ ಗುರುತಿಸಿ, ಅದನ್ನು ರಾಜಕೀಯವಾಗಿ ಗಟ್ಟಿಗೊಳಿಸುವುದಕ್ಕೆ ಮುಂದಾದವರು ಮಾಜಿ ಸಚಿವ ಜನಾರ್ದನ ರೆಡ್ಡಿ. ತನ್ನ ಬೆನ್ನ ಹಿಂದೆ ಇಲ್ಲದ ಜನಬಲವನ್ನು ಶ್ರೀರಾಮುಲು ಮೂಲಕ ಪಡೆಯುವ ಪ್ರಯತ್ನದಲ್ಲಿ ರೆಡ್ಡಿ ಸಾಕಷ್ಟು ಸಫಲರಾದರು ಕೂಡ. ಶ್ರೀರಾಮುಲುವನ್ನು ಮುಂದಿರಿಸಿಕೊಂಡೇ ನಾಯಕ ಜನಾಂಗದ ಬಾಹುಳ್ಯವಿರುವ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಯಾದಗಿರಿ, ರಾಯಚೂರಿನ ಹಲವು ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ರೆಡ್ಡಿ ಮುಂದಾದರು. ಇದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆದರು. ರೆಡ್ಡಿಯ ರಾಜಕೀಯ ಮಹತ್ವಾಕಾಂಕ್ಷೆಯ ಕಾರಣಕ್ಕೆ ಶ್ರೀರಾಮುಲು ಆರಂಭದ ದಿನಗಳಲ್ಲಿ ತಾನು ಪ್ರತಿನಿಧಿಸುವ ವಾಲ್ಮೀಕಿ ಸಮುದಾಯಕ್ಕೆ ತನ್ನನ್ನು ಹೆಚ್ಚೆಚ್ಚು ಕೊಟ್ಟುಕೊಳ್ಳುವ ಅನಿವಾರ್ಯತೆ ಎದುರಾಯಿತು. ಮುಂಚಿನಿಂದಲೂ ಹಿಂದುಳಿದ ಸಮುದಾಯಗಳ ನಡುವೆಯೇ ಬೆಳೆದಿದ್ದರಿಂದಾಗಿ ಶ್ರೀರಾಮುಲುಗೆ ತನ್ನ ಸಮುದಾಯವೂ ಅಲ್ಲದೆ, ಎಲ್ಲ ಹಿಂದುಳಿದ ಸಮುದಾಯಗಳೊಂದಿಗೆ ಸಹಜವಾಗಿ ಬೆರೆಯುವುದು ಸಾಧ್ಯವಾಯಿತು. ಇದು ಸಹಜವಾಗಿಯೇ ಈ ಸಮುದಾಯಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ನಾಯಕ ಸಮುದಾಯದಲ್ಲಿ ವಿಶೇಷ ಮೆಚ್ಚುಗೆ ಗಳಿಸತೊಡಗಿತು.

ಇದನ್ನೂ ಓದಿ : ರೆಡ್ಡಿ ಪಾಳೆಯಕ್ಕೆ ಮರ್ಮಾಘಾತ; ಬಿಜೆಪಿಯನ್ನು ಮುಗಿಸುವರೇ ಶ್ರೀರಾಮುಲು?

ಒಮ್ಮೆ ಗಣಿಕುಣಿಕೆ ಬಿಗಿಯಾಗಿ ಜನಾರ್ದನರೆಡ್ಡಿ ಬಂದಿಖಾನೆಯಲ್ಲಿ, ನ್ಯಾಯಾಲಯಗಳ ಕಟಕಟೆಯಲ್ಲಿ ಸಮಯ ಕಳೆಯಬೇಕಾದಾಗ ಶ್ರೀರಾಮುಲು ಅನಿವಾರ್ಯವಾಗಿ ರಾಜಕೀಯವಾಗಿ ತನ್ನ ಸ್ಥಾನಮಾನಗಳೇನು ಎನ್ನುವ ಕಡೆ ಗಮನಹರಿಸಬೇಕಾಯಿತು. ತನ್ನ ಸಮುದಾಯದೊಳಗೂ ಹೆಚ್ಚೆಚ್ಚು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವ, ಪ್ರಭಾವಿಯಾಗಿ ಹೊರಹೊಮ್ಮುವ ಅನಿವಾರ್ಯತೆಯೂ ಎದುರಾಯಿತು. ಇದೆಲ್ಲದರ ಒಟ್ಟು ಪರಿಣಾಮ ಇಂದು ಶ್ರೀರಾಮುಲು ರೆಡ್ಡಿಗಳ ಪಾಳೆಯದಲ್ಲಿಯೇ ಇದ್ದರೂ ರೆಡ್ಡಿಗಳ ನೆರಳಾಗಿ ಕಾಣುವುದಿಲ್ಲ. ಬದಲಿಗೆ, ನಾಯಕ ಸಮುದಾಯದ ಪ್ರಮುಖ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಸಮುದಾಯವೊಂದು ವ್ಯಕ್ತಿಯೊಬ್ಬನಲ್ಲಿ ನಾಯಕನನ್ನು ಕಂಡುಕೊಂಡಾಗ ಆತನೂ ಸಹ ತನ್ನನ್ನು ಹೆಚ್ಚೆಚ್ಚು ಸಮುದಾಯಕ್ಕೆ ತೆತ್ತುಕೊಳ್ಳಬೇಕಾಗುತ್ತದೆ. ಸಮುದಾಯದ ರಾಜಕೀಯ ಆಶೋತ್ತರಗಳನ್ನು ತನ್ನ ರಾಜಕಾರಣದ ಭಾಗವಾಗಿಸಿಕೊಳ್ಳಬೇಕಾಗುತ್ತದೆ. ಇದೆಲ್ಲವನ್ನೂ ಮತ್ತೊಬ್ಬರ ರಾಜಕೀಯ ನೆರಳಿನಲ್ಲಿದ್ದುಕೊಂಡು ಮಾಡಲಾಗುವುದಿಲ್ಲ. ಹಾಗಾಗಿಯೇ ಇಂದು ಶ್ರೀರಾಮುಲುಗೆ ರೆಡ್ಡಿಗಳ ಹೊರತಾಗಿಯೂ ರಾಜಕೀಯ ಚಲಾವಣೆಯಿದೆ. ಎಲ್ಲಿಯವರೆಗೆ ಸಮುದಾಯದ ಬಲವನ್ನು ಶ್ರೀರಾಮುಲು ಹೊಂದಿರುತ್ತಾರೋ ಅಲ್ಲಿಯವರೆಗೂ ಅವರು ರಾಜ್ಯ ರಾಜಕಾರಣದ ಪಗಡೆಯಕಾಯಿಯಾಗಿಯೇ ಇರುತ್ತಾರೆ. ಕರ್ನಾಟಕದ ಪ್ರಸಕ್ತ ರಾಜಕಾರಣದಲ್ಲಿ ಹೇಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಯಾವ ಪಕ್ಷಗಳಿಗೂ ಬೇಡದವರೋ, ಅದಕ್ಕೆ ವ್ಯತಿರಿಕ್ತವಾಗಿ ಶ್ರೀರಾಮುಲು ಎಲ್ಲ ಪಕ್ಷಗಳಿಗೂ ಬೇಕಾದವರು.

ಆದರೆ, ಇದೇ ವೇಳೆ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ಸಂದಿಗ್ಧಗಳೂ ಇವೆ. ರೆಡ್ಡಿಗಳ ದುಡ್ಡು ಬೇಕು, ರೆಡ್ಡಿಗಳಿಗೆ ಅಂಟಿರುವ ಕಳಂಕ ಬೇಡ; ಶ್ರೀರಾಮುಲುವಿನ ಜನಬಲ ಬೇಕು, ಆದರೆ ಶ್ರೀರಾಮುಲು ಹೊಂದಿರುವ ‘ಸಂಗ’ ಬೇಡ ಎನ್ನುವಂತಿದೆ ರಾಜ್ಯ ರಾಜಕಾರಣದಲ್ಲಿನ ಸದ್ಯದ ಸ್ಥಿತಿ. ಬಿಜೆಪಿಯಂತೂ ಸ್ಪಷ್ಟವಾಗಿ ಜನಾರ್ದನ ರೆಡ್ಡಿಗೆ ಪಕ್ಷದಲ್ಲಿ ಯಾವುದೇ ಅಧಿಕೃತ ಸ್ಥಾನಮಾನಗಳನ್ನು ನೀಡುವುದಿಲ್ಲವೆನ್ನುವುದನ್ನು ಹಿಂದೆಯೇ ತಿಳಿಸಿತ್ತು. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇದೇ ಮಾತನ್ನು ಇತ್ತೀಚೆಗೆ ಮತ್ತೊಮ್ಮೆ ಪುನರಾವರ್ತಿಸಿದ್ದಾರೆ. ಸಂಘಟನೆಯ ವಿಚಾರದಲ್ಲಿಯಾಗಲಿ, ಚುನಾವಣಾ ನಿರ್ವಹಣೆಯ ವಿಚಾರದಲ್ಲಿಯಾಗಲಿ ಯಾವುದೇ ಅಧಿಕೃತ ಸ್ಥಾನಮಾನಗಳು ಪಕ್ಷದಿಂದ ಸಿಗುವುದಿಲ್ಲ, ಎನ್ನುವುದು ಜನಾರ್ದನ ರೆಡ್ಡಿಯ ಪಾಲಿಗೆ ಕಹಿ ಸತ್ಯ. ಆದರೆ, ಸಂಪನ್ಮೂಲದ ವಿಚಾರಕ್ಕೆ ಬಂದಾಗ ಇದೇ ಕಟ್ಟಳೆ ಅನ್ವಯಿಸುವುದಿಲ್ಲ! ಪಕ್ಷದಿಂದ ಪೂರ್ವದಲ್ಲಿ ಪಡೆದಿರುವ ಲಾಭಗಳಿಗೆ ಋಣಸಂದಾಯ ಮಾಡಬೇಕಾದ ಹೊತ್ತು ಇದಾಗಿದೆ. ಬಹುಮುಖ್ಯವಾಗಿ ತಮಗೆ ದೊರೆತಿರುವ ‘ಸ್ವಾತಂತ್ರ್ಯ’ವೆನ್ನುವುದು ಸುಲಭಕ್ಕೆ ದಕ್ಕಿದ್ದಲ್ಲ ಎನ್ನುವುದನ್ನು ಸರಳುಗಳ ಹಿಂದೆ ಸಾಕಷ್ಟು ಸಮಯ ಸವೆಸಿದ ರೆಡ್ಡಿಯವರ ನೆನಪಿನಲ್ಲಿವೆ. ಹಾಗಾಗಿಯೇ ‘ಗಂಟು - ನಂಟು’ಗಳ ವ್ಯಾಮೋಹ ಮೀರಿ ಜನಾರ್ದನ ರೆಡ್ಡಿಯವರು ಸದ್ಯದ ಪರಿಸ್ಥಿತಿಯಲ್ಲಿ ಮುಂದುವರೆಯುವುದು ಅನಿವಾರ್ಯ ಎನ್ನುವ ಅಭಿಪ್ರಾಯ ಬಿಜೆಪಿಯಲ್ಲಿದೆ. ಇದೇ ವೇಳೆ, ರೆಡ್ಡಿಯವರನ್ನು ಅಪಾಯಕ್ಕೊಡ್ಡಿ ಯಾವುದೇ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿಯಾಗಲಿ, ಇಚ್ಛೆಯಾಗಲಿ ಶ್ರೀರಾಮುಲು ಅವರಲ್ಲಿಲ್ಲ.

ಈ ಸಂಕೀರ್ಣ ಸನ್ನಿವೇಶದಿಂದಾಗಿ ಸದ್ಯದ ಮಟ್ಟಿಗಂತೂ ರಾಜಕಾರಣದಲ್ಲಿ ಒಂದೇ ದೋಣಿಯ ಪಯಣದಲ್ಲಿರುವ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಅಗಲುವುದು ಕಷ್ಟ. ಹೀಗಾಗಿಯೇ ಸಮುದಾಯದ ಬಲ, ಬೆಂಬಲ ಏನೇ ಇದ್ದರೂ ಅದನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ಶ್ರೀರಾಮುಲುವಿಗೆ ಸಾಧ್ಯವಾಗುತ್ತಿಲ್ಲ. ಇದೇ ವೇಳೆ, ಸಮುದಾಯದ ಬಲವೆನ್ನುವುದು ಎಲ್ಲಕಾಲಕ್ಕೂ ಕೆಲವೇ ನಾಯಕರ ಹಿಂದೆ ಇರುತ್ತದೆ ಎನ್ನುವುದೂ ರಾಜಕಾರಣದಲ್ಲಿನ ಸತ್ಯವೇ ಆಗಿದೆ. ರಾಜಕೀಯ ಸನ್ನಿವೇಶಗಳು ಬದಲಾದಂತೆ, ನಾಯಕರ ವರ್ಚಸ್ಸುಗಳಲ್ಲಿ ಏರಿಳಿತವಾಗುತ್ತವೆ, ಸಮುದಾಯಗಳು ಆರಿಸಿಕೊಳ್ಳುವ ನಾಯಕರೂ ಬದಲಾಗುತ್ತಾ ಹೋಗುತ್ತಾರೆ. ಕೆಲವೇ ವರ್ಷಗಳ ಕೆಳಗೆ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರೆನ್ನುವಂತೆ ಬಿಂಬಿತರಾದ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇಂದು ಸಮುದಾಯದ ಬೆಂಬಲವನ್ನು ಅದೇ ಮಟ್ಟದಲ್ಲಿ ಉಳಿಸಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆ ಸ್ವತಃ ಬಿಜೆಪಿಯಲ್ಲಿಯೇ ಉದ್ಭವಿಸಿದೆ. ಹೀಗಾಗಿಯೇ, ರಾಜಕಾರಣದ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಶ್ರೀರಾಮುಲು ಅವರು ಬಹುಶಃ ಬಳಕೆಯಾಗದ ಅಸ್ತ್ರವಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು ಗೋಚರಿಸುತ್ತಿದೆ.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More