ದೇವದುರ್ಗ ಕ್ಷೇತ್ರದಲ್ಲಿ ಈ ಬಾರಿಯೂ ಕುಟುಂಬ ರಾಜಕೀಯದ್ದೇ ಮಾತು

ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಗಮನಾರ್ಹ ಕ್ಷೇತ್ರವೆಂದರೆ ದೇವದುರ್ಗ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳ ಪೈಕಿ ಇಬ್ಬರು ಸಂಬಂಧಿಗಳು ಪ್ರಬಲ ಪೈಪೂಟಿ ನಡೆಸುತ್ತಿದ್ದು, ಮಾವ ವರ್ಸಸ್ ಅಳಿಯ ಸ್ಪರ್ಧೆಯ ಕದನ ಕುತೂಹಲ ಕೆರಳಿಸಿದೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೂಹುರ್ತ ಫಿಕ್ಸ್ ಆಗಿದೆ. ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎನ್ನುವ ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಹಿರಿಯ ನಾಯಕರ ಸ್ಪರ್ಧೆ ಜತೆಗೆ ನಾಯಕರು ತಮ್ಮ ಸುಪುತ್ರನನ್ನು ಕಣಕ್ಕೆ ಇಳಿಸಲು ನಾನಾ ಕಸರತ್ತು ನಡೆಸಿದ್ದಾರೆ. ಈ ಮೂಲಕ 2018ರ ಚುನಾವಣೆ ಕುಟುಂಬ ರಾಜಕಾರಣ ಮುನ್ನುಡಿಯಾಗಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಯಚೂರು ಜಿಲ್ಲೆಯು ಕುಟುಂಬ ರಾಜಕೀಯ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಗಮನಾರ್ಹ ಕ್ಷೇತ್ರವೆಂದರೆ ದೇವದುರ್ಗ ವಿಧಾನಸಭಾ ಕ್ಷೇತ್ರ. ಪರಿಶಿಷ್ಟ ಪಂಗಡ (ಎಸ್ ಟಿ) ಮೀಸಲು ಕ್ಷೇತ್ರವಾಗಿದೆ. ಕ್ಷೇತ್ರದವರಲ್ಲದ ಪರಕೀಯರಿಗೆ ಮಣೆ ಹಾಕಿ ಸಚಿವರನ್ನಾಗಿ ಮಾಡಿದರೂ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಮಾತ್ರ ಕಳಚಿಕೊಂಡಿಲ್ಲ. ಮತ್ತೊಂದೆಡೆ ಕಳೆದ ಒಂದು ದಶಕಗಳಲ್ಲಿ ನಾಲ್ಕು ಚುನಾವಣೆಗಳು ನಡೆದರೂ ಸಂಬಂಧಿಗಳ ನಡುವೆ ಹಣಾಹಣಿ ನಡೆದು ಕ್ಷೇತ್ರದ ಮತದಾರರು ಹೈರಾಣಾಗುವಂತೆ ಮಾಡಿ, ಕುಟುಂಬ ರಾಜಕಾರಣಕ್ಕೆ ಒಪ್ಪಿಕೊಂಡಂತಾಗಿದೆ.

ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿರುವ ಈ ಕ್ಷೇತ್ರದ ಕೆಲವು ಭಾಗ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿಗೆ ಒಳಪಟ್ಟಿದ್ದರೂ ಹೆಚ್ಚಿನ ಒಣಭೂಮಿ ಪ್ರದೇಶವನ್ನು ಹೊಂದಿದೆ. ಹಿಂದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರ, ಕ್ಷೇತ್ರ ಪುನರ್ ವಿಂಗಡಣೆ ನಂತರದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಸ್ಥಳೀಯರು ಅಲ್ಲದೆ ವಲಸೆ ಬಂದವರಿಗೆ ಬಹುತೇಕ ಚುನಾವಣೆಯಲ್ಲಿ ಮಣೆ ಹಾಕಿ, ಸಚಿವರಾಗುವ ಅವಕಾಶ ನೀಡಿದ ಕ್ಷೇತ್ರದಲ್ಲಿ 2008ರಿಂದ ಕ್ಷೇತ್ರದಲ್ಲಿ ರಕ್ತ ಸಂಬಂಧಿಗಳ ನಡುವೆ ಹಣಾಹಣಿ ಆರಂಭವಾಗಿದ್ದು, ಕಳೆದ ಒಂದು ದಶಕದಲ್ಲಿ 4 ಚುನಾವಣೆಗಳನ್ನು ಕಂಡಿದೆ.

1978ರಲ್ಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ನಂತರದಲ್ಲಿ ಜರುಗಿದ ಚುನಾವಣೆಯಲ್ಲಿ ಗೆದ್ದು ಶಾಸಕರಾದವರಲ್ಲಿ ಯಲ್ಲಪ್ಪ ಅಕ್ಕರಕಿಯನ್ನು ಹೊರತು ಪಡಿಸಿ ಎಲ್ಲರೂ ಮಂತ್ರಿಗಳಾಗಿದ್ದರೂ ಅಭಿವೃದ್ಧಿ, ಶೈಕ್ಷಣಿಕ ಹಾಗೂ ಆರ್ಥಿಕತೆಯಲ್ಲಿ ಕ್ಷೇತ್ರ ರಾಜ್ಯದಲ್ಲಿ ಕಟ್ಟಕಡೆಯ ಸ್ಥಾನದಲ್ಲಿದೆ. ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಬಿ ಶಿವಣ್ಣ, ಎ ಪುಷ್ಪಾವತಿ, ಬಿ ಟಿ ಲಲಿತಾನಾಯಕ, ಹನುಮಂತಪ್ಪ ಆಲ್ಕೋಡ, ಕೆ ಶಿವನಗೌಡ ನಾಯಕ ಸಚಿವರಾಗಿದ್ದರು. 1957ರ ನಂತರದಲ್ಲಿ ಜರುಗಿದ ಒಟ್ಟು 15 ಚುನಾವಣೆಯಲ್ಲಿ 8 ಬಾರಿ ಕಾಂಗ್ರೆಸ್, ಬಿಜೆಪಿಗೆ ಹಾಗೂ ಜನತಾದಳ ತಲಾ 2 ಬಾರಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಲಾ ಒಂದು ಬಾರಿ ಜಯಗಳಿಸಿದ್ದಾರೆ.

ಕಾನೂನು ಪದವೀಧರ (ಬಿ ಶಿವಣ್ಣ), ವೈದ್ಯೆ (ಎ ಪುಷ್ಪಾವತಿ), ಸಾಹಿತಿ (ಬಿ ಟಿ ಲಲಿತಾನಾಯಕ), ಹೋರಾಟಗಾರ (ಹನುಮಂತಪ್ಪ ಆಲ್ಕೋಡ) ಮಣೆ ಹಾಕಿದ್ದ ಕ್ಷೇತ್ರದ ಮತದಾರರು ಅನಕ್ಷರಸ್ಥ ಯಲ್ಲಪ್ಪ ಅಕ್ಕರಕಿ(ಎಬೆಟ್ಟು)ಯನ್ನು ಶಾಸಕರನ್ನಾಗಿ ಮಾಡಿದೆ. ತಾತನ ಮತ್ತು ಮೊಮ್ಮಗನ ಸಮರದಲ್ಲಿ ಇಬ್ಬರಿಗೂ ಒಂದೊಂದು ಬಾರಿ ಅವಕಾಶ ನೀಡಿದ್ದಾರೆ.

1952ರಲ್ಲಿ ಕ್ಷೇತ್ರ ಇನ್ನೂ ಆಂಧ್ರ ಪ್ರದೇಶದ ಭಾಗವಾಗಿದ್ದ ಸಂದರ್ಭದಲ್ಲಿ ಕರಿಬಸ್ಸಪ್ಪ ಜೇರಬಂಡಿ ಪ್ರಥಮ ಬಾರಿ ಶಾಸಕರಾಗಿದ್ದರು. ಭಾಷಾವಾರು ಪ್ರಾಂತ ರಚನೆ ನಂತರ 1957ರಲ್ಲಿ ಜರುಗಿದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಿವಣ್ಣ ವಾರದ್ ಜಯಗಳಿಸಿ ಶಾಸಕರಾದರು. 1962ರಲ್ಲಿ ಶರಣಪ್ಪ ಅಂಚೆಸುಗೂರು ಆಯ್ಕೆಯಾಗಿದ್ದು, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಸದಾಶಿವಪ್ಪ ಪಾಟೀಲ್ ಜಯಗಳಿಸುವ ಮೂಲಕ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಿದರು. ಆದರೆ 1972ರಲ್ಲಿ ಜರುಗಿದ ಚುನಾವಣೆಯಲ್ಲಿ ಶರಣಪ್ಪ ಅಂಚೆಸುಗೂರು ಪುನರಾಯ್ಕೆಯಾದರು. ಈ 15 ವರ್ಷಗಳ ಅವಧಿಯಲ್ಲಿ ಇಬ್ಬರು ಗೌಡರ ಮಧ್ಯೆ ಕ್ಷೇತ್ರದಲ್ಲಿ ಸಾಕಷ್ಟು ಜಿದ್ದಾಜಿದ್ದಿ ನಡೆಯುವಂತಾಗಿತ್ತು.

1978ರಲ್ಲಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ನಂತರದಲ್ಲಿ 21 ವರ್ಷಗಳ ಕಾಲ ಅನ್ಯ ಕ್ಷೇತ್ರದಿಂದ ಬಂದ ವಲಸಿಗರಿಗೆ ಮಣೆ ಹಾಕಿದ ಕ್ಷೇತ್ರದ ಮತದಾರರು, ಸ್ಥಳೀಯರು ಸ್ಪರ್ಧಿಸಿದ್ದರೂ ಆಶೀರ್ವಾದ ನೀಡಿರಲಿಲ್ಲ. ಆದರೆ 1999ರಲ್ಲಿ ಸ್ಥಳೀಯರಾಗಿದ್ದ ಕಾಂಗ್ರೆಸ್‌ನ ಯಲ್ಲಪ್ಪ ಅಕ್ಕರಕಿಗೆ ಜಯ ಸಾಧಿಸಿದರು. 1978 ಹಾಗೂ 1983ರಲ್ಲಿ ಕಾಂಗ್ರೆಸ್‌ನ ಬಿ ಶಿವಪ್ಪ ಶಾಸಕರಾಗಿ ಆಯ್ಕೆಯಾಗಿದ್ದು, 1985ರಲ್ಲಿ ಜನತಾಪಕ್ಷದ ಎ ಪುಷ್ಪಾವತಿ ಶಾಸಕರಾಗಿ, ಮಂತ್ರಿಯಾದರು. 1989ರಲ್ಲಿ ಮತ್ತೊಮ್ಮೆ ಬಿ ಶಿವಣ್ಣ ಗೆದ್ದ ಬಂದು ಸಚಿವರಾದರು. 1994ರಲ್ಲಿ ಸಾಹಿತಿ ಜನತಾದಳದಿಂದ ಸ್ಪರ್ಧಿಸಿದ್ದ ಸಾಹಿತಿ ಬಿ.ಟಿ.ಲಲಿತಾನಾಯಕಗೆ ಕ್ಷೇತ್ರ ಮತದಾರರು ಒಲಿದರು. 2004ರಲ್ಲಿ ಜನತಾದಳದ ಹನುಮಂತಪ್ಪ ಆಲ್ಕೋಡ ಗೆಲವು ಸಾಧಿಸಿದರು.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರದಲ್ಲಿ ಕ್ಷೇತ್ರವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾದ ನಂತರದಲ್ಲಿ ಜರುಗಿದ ಚುನಾವಣೆಯಲ್ಲಿ ಜೆಡಿಎಸ್‌ನ ಕೆ ಶಿವನಗೌಡ ನಾಯಕ ತಮ್ಮ ತಾತ ಕಾಂಗ್ರೆಸ್‌ನ ವೆಂಕಟೇಶ ನಾಯಕರಿಗೆ ಸೋಲಿನ ರುಚಿ ತೋರಿಸಿ ಶಾಸಕರಾದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾವ ಬಿ ವಿ ನಾಯಕರನ್ನು ಮಣಿಸಿ, ಶಾಸಕರಾಗಿ ಸಚಿವರಾಗಿ ಆಡಳಿತ ನಡೆಸಿದರು.

ಇದನ್ನೂ ಓದಿ : ಬಂಟ್ವಾಳ ಎಂಬ ಕಾಂಗ್ರೆಸ್ ಕೋಟೆಗೆ ಆಗಾಗ ಲಗ್ಗೆಯಿಟ್ಟವರು ಯಾರು? 

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ ವೆಂಕಟೇಶ ನಾಯಕರಿಗೆ ಜೈ ಎಂದ ಮತದಾರರು, ಬಿಜೆಪಿಯ ಕೆ ಶಿವನಗೌಡ ನಾಯಕರ ಸೋಲಿನ ಕಹಿ ಉಣಿಸಿದರು. ಆದರೆ ಶಾಸಕರಾಗಿದ್ದ ಎ.ವೆಂಕಟೇಶನಾಯಕರ ಅಕಾಲಿಕ ನಿಧನ ತೆರವಾಗಿದ್ದ ಸ್ಥಾನಕ್ಕೆ 2016ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಾವ ಎ ರಾಜಶೇಖರ ನಾಯಕ (ದಿ ವೆಂಕಟೇಶ ನಾಯಕ ಮಗ)ರನ್ನು ಮಣಿಸಿ ಬಿಜೆಪಿಯ ಕೆ ಶಿವನಗೌಡ ನಾಯಕ ಪುನಃ ಶಾಸಕರನ್ನಾಗಿ ಕ್ಷೇತ್ರದ ಮತದಾರರು ಆಯ್ಕೆ ಮಾಡಿದರು.

ರಾಯಚೂರು ಜಿಲ್ಲೆಯ ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರ ಎಂದು ಪ್ರಖ್ಯಾತಿ ಪಡೆದಿರುವ ಅರಕೇರಾ ಗ್ರಾಮದವರು ಹಾಗೂ ಸಂಬಂಧಿಗಳ ನಡುವೆ ನಡೆಯುತ್ತಿರುವ ಹಣಾಹಣಿ ಕಳೆದ ಎರಡು ಸಾರ್ವತ್ರಿಕ ಚುನಾವಣೆ ಹಾಗೂ ಎರಡು ಸಾರಿ ನಡೆದ ಉಪಚುನಾವಣೆಯಲ್ಲಿ ಸಂಬಂಧಿಗಳ ಕದನಕ್ಕೆ ಸಾಕ್ಷಿಯಾಗಿದೆ.. ಪ್ರತಿ ಬಾರಿ ದಿ ವೆಂಕಟೇಶ್ ನಾಯಕ ಕುಟುಂಬ ಹಾಗೂ ಕೆ ಶಿವನಗೌಡ ನಾಯಕ ಮಧ್ಯೆ ನಡೆಯುತ್ತಿದ್ದ ಕುಟುಂಬ ರಾಜಕಾರಣದಲ್ಲಿ ಇದೀಗ ಕೆ ಶಿವನಗೌಡ ನಾಯಕ ಸಂಬಂಧಿ ಜೆಡಿಎಸ್ ನ ಘೋಷಿತ ಅಭ್ಯರ್ಥಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್ ಪೂಜಾರಿ, ಎಂಟ್ರಿಯಿಂದ ಕುಟುಂಬ ರಾಜಕಾರಣವನ್ನು ಮತದಾರರು ಎದುರಿಸಬೇಕಾಗಿದೆ. ಸದ್ಯ ಬಿಜೆಪಿಯ ಅಭ್ಯರ್ಥಿ ಹಾಲಿ ಶಾಸಕ ಕೆ ಶಿವನಗೌಡನ ನಾಯಕ ಟಿಕೆಟ್ ಖಚಿತವಾಗಿದ್ದರೂ ಅಧಿಕೃತ ಘೋಷಣೆ ಬಾಕಿಯಿದೆ. ಇತ್ತ ಕಾಂಗ್ರೆಸ್ ನಿಂದ ಎ ರಾಜಶೇಖರ ನಾಯಕ, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರ ಅಳಿಯ ಶ್ರೀನಿವಾಸ ನಾಯಕ ಕೂಡ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದಾರೆ ಜತೆಗೆ ಸ್ಥಳೀಯ ಮುಖಂಡರು, ಸಂಸದ ಬಿ ವಿ ನಾಯಕ ಸ್ಪರ್ಧೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳ ಪೈಕಿ ಇಬ್ಬರು ಸಂಬಂಧಿಗಳು ಪ್ರಬಲ ಪೈಪೂಟಿ ನಡೆಸುತ್ತಿದ್ದು, ಮಾವ ವರ್ಸಸ್ ಅಳಿಯ ಸ್ಪರ್ಧೆಯ ಕದನ ಕುತೂಹಲ ಕೆರಳಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More