ಕೋಮು ರಾಜಕಾರಣದ ಪುತ್ತೂರಿನ ನೆಲದಲ್ಲಿ ಕಮಲ ಅರಳಿದ- ಮುದುಡಿದ ಕಥೆ

ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಜನ, ‘ಕಾಂಗ್ರೆಸ್ ನಾಯಕಿ- ಬಿಜೆಪಿ ಶಾಸಕಿ’ ಎಂದು ವಿಮರ್ಶಿಸುತ್ತಾರೆ. ಅತ್ತ ಜನತಾ ಕ್ರಾಂತಿರಂಗ, ಬಾಬರಿ ಮಸೀದಿ ಧ್ವಂಸ ಪ್ರಕರಣದಂತಹ ವಿದ್ಯಮಾನಗಳೂ ಇಲ್ಲಿನ ರಾಜಕಾರಣವನ್ನು ಪ್ರಭಾವಿಸಿವೆ. ಪುತ್ತೂರು ರಾಜಕಾರಣದ ದಿನಗಳ ಝಲಕ್ ಇಲ್ಲಿದೆ

ಮತೀಯವಾದದ ಪ್ರಯೋಗಶಾಲೆ ಎಂದು ಈಗ ದಕ್ಷಿಣ ಕನ್ನಡವನ್ನು ಕರೆಯಲಾಗುತ್ತಿದೆ. ಆದರೆ ಅಂತಹದೊಂದು ಹಣೆಪಟ್ಟಿ ಹಲವು ದಶಕಗಳ ಹಿಂದೆಯೇ ಪುತ್ತೂರಿಗೆ ಲಭಿಸಿತ್ತು. ಕ್ಷೇತ್ರದ ರಾಜಕಾರಣಕ್ಕೆ ಕೋಮುವಾದಿ ಪ್ರವೃತ್ತಿ ತನ್ನದೇ ಆದ ಕೊಡುಗೆ ನೀಡಿದೆ. ಕಾಂಗ್ರೆಸ್ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಅದು ಚಿಮ್ಮುಹಲಗೆಯಾಗಿದೆ. ಕಳೆದ ಎರಡು ದಶಕಗಳಿಂದ ಇಲ್ಲಿ ಕೋಮುವಾದಿ ಪ್ರಯೋಗಗಳು ನಡೆಯುತ್ತಿಲ್ಲವಾದರೂ ಅದರ ಪ್ರಭಾವ ರಾಜಕೀಯದ ಮೇಲೆ ಇನ್ನೂ ದಟ್ಟವಾಗಿದೆ. ಆರ್‌ಎಸ್‌ಎಸ್‌ ಮುಖಂಡ ಉರಿಮಜಲು ರಾಮಭಟ್, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಬಿಜೆಪಿಯಿಂದ, ವಿನಯಕುಮಾರ್ ಸೊರಕೆ ಕಾಂಗ್ರೆಸ್‌ನಿನಿಂದ ಹಾಗೂ ಶಕುಂತಲಾ ಶೆಟ್ಟಿ ಈ ಎರಡೂ ಪಕ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಕ್ಷೇತ್ರವನ್ನು ಸದ್ಯ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ಸಿನ ಶಕುಂತಲಾ ಶೆಟ್ಟಿ ಮೂಲತಃ ಆರ್‌ಎಸ್‌ಎಸ್‌ ಹಿನ್ನೆಲೆಯವರು. ಬಿಜೆಪಿಯಿಂದ ಶಾಸಕಿಯಾಗಿ ಆಯ್ಕೆಯಾದವರು. “ಶಕುಂತಲಾ ಕಾಂಗ್ರೆಸ್ ನಾಯಕಿ ಮತ್ತು ಬಿಜೆಪಿ ಶಾಸಕಿ,” ಎಂದು ಜನ ಮಾತನಾಡಿಕೊಳ್ಳುವಷ್ಟು ಸಖ್ಯವನ್ನು ಅವರು ಬಿಜೆಪಿಯೊಂದಿಗೆ ಹೊಂದಿದ್ದಾರೆ. ಯಾವ ಪಕ್ಷದಲ್ಲಿದ್ದರೂ ಗೆಲ್ಲುತ್ತಾರೆ ಅವರು ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ ಈ ಬಾರಿ ಕಾಂಗ್ರೆಸ್ಸಿನಲ್ಲಿ ಅವರಿಗೆ ಸಾಕಷ್ಟು ವಿರೋಧ ಇದೆ. ಬಣ ರಾಜಕಾರಣದ ಬಿಸಿ ಕಾಡುತ್ತಿದೆ. ಇತ್ತ ಶಕುಂತಲಾ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಅಭ್ಯರ್ಥಿ ಬಿಜೆಪಿಯಲ್ಲಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಶಕುಂತಲಾ ಶೆಟ್ಟಿ ಅವರ ಹೆಸರು ಕ್ಷೇತ್ರದಲ್ಲಿ ಮೊದಲು ಕೇಳಿ ಬಂದಿದ್ದು 2004ರಲ್ಲಿ. ಅದಕ್ಕೂ ಮೊದಲು ಅಂದರೆ 1994ರಲ್ಲಿ ಬಂಟ್ವಾಳ ಕ್ಷೇತ್ರದ ರಮಾನಾಥ್ ರೈ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. 1999ರಲ್ಲಿಯೂ ಇದೇ ಇತಿಹಾಸ ಮರುಕಳಿಸಿತ್ತು. 2004ರಲ್ಲಿ ಬಂಟ್ವಾಳದಿಂದ ಸ್ಪರ್ಧಿಸುವುದನ್ನು ಕೈಬಿಟ್ಟ ಶಕುಂತಲಾ ಪುತ್ತೂರಿನತ್ತ ವಾಲಿದರು. 2004ರಲ್ಲಿ ಕಾಂಗ್ರೆಸ್ಸಿನ ಎನ್ ಸುಧಾಕರ ಶೆಟ್ಟಿ (ಪಡೆದ ಮತಗಳು 54,007) ಅವರನ್ನು ಶಕುಂತಲಾ (65,119) ಸೋಲಿಸುತ್ತಾರೆ. ಆದರೆ ಆಂತರಿಕ ಘರ್ಷಣೆಯಿಂದಾಗಿ ಮುಂದಿನ ಚುನಾವಣೆ ಹೊತ್ತಿಗೆ ಅಂದರೆ 2008ರಲ್ಲಿ ಬಿಜೆಪಿಯ ಟಿಕೆಟ್ ಕಳೆದುಕೊಳ್ಳುವ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ. ಆಗ ಬಿಜೆಪಿಯ ಮಲ್ಲಿಕಾ ಪ್ರಸಾದ್ (46,605) ಕಾಂಗ್ರೆಸ್ಸಿನ ಬೊಂದಾಳ ಜಗನ್ನಾಥ ಶೆಟ್ಟಿ (45,180) ಅವರನ್ನು ಕೇವಲ 1425 ಮತಗಳ ಅಂತರದಿಂದ ಸೋಲಿಸುತ್ತಾರೆ. (ಮಲ್ಲಿಕಾ ಅವರು ಕ್ಷೇತ್ರದ ಪ್ರಭಾವಿ ಮುಖಂಡ ಡಾ. ಪ್ರಸಾದ್ ಭಂಡಾರಿ ಅವರ ಪತ್ನಿ. ವಿನಯ ಕುಮಾರ್ ಸೊರಕೆ ಮತ್ತು ಭಂಡಾರಿ ನಡುವೆ ಇದ್ದ ವೈಮನಸ್ಸು ಮಲ್ಲಿಕಾ ಅವರನ್ನು ಸ್ಪರ್ಧಿಸುವಂತೆ ಮಾಡಿತ್ತು.) ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ 24,990 ಮತಗಳನ್ನು ಪಡೆದ ಶಕುಂತಲಾ ಅವರ ಯಶಸ್ಸನ್ನು ಇಲ್ಲಿನ ಜನತೆ ನೆನಪಿಸಿಕೊಳ್ಳುತ್ತಾರೆ. ಬಿಜೆಪಿಯಿಂದ ಹೊರಬಿದ್ದಿದ್ದ ಶಕುಂತಲಾ ಅವರನ್ನು ಕಳೆದ ಬಾರಿಯ ಚುನಾವಣೆಯಲ್ಲಿ (2013ನೇ ಇಸವಿ) ಕಾಂಗ್ರೆಸ್ ಬರಮಾಡಿಕೊಳ್ಳುತ್ತದೆ. 1994ರಿಂದ 2008ರವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಗೆಲುವು ಕಾಣದೆ ಕಂಗಾಲಾಗಿದ್ದ ಕಾಂಗ್ರೆಸ್ಸಿಗೆ ಶಕುಂತಲಾ ಸ್ಪರ್ಧೆ ಅನಿವಾರ್ಯವಾಗಿತ್ತು. ಬಿಜೆಪಿಯ ಈಗಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಮಠಂದೂರು (62,056) ಅವರನ್ನು ಸೋಲಿಸುವ ಶಕುಂತಲಾ ಪಡೆದದ್ದು 66,345 ಮತಗಳು.

ಪುತ್ತೂರಿನ ವರ್ಣಮಯ ರಾಜಕಾರಣದ ಅಧ್ಯಾಯ ಆರಂಭವಾಗುವುದು ಉರಿಮಜಲು ರಾಮಭಟ್ ಅವರಿಂದ. ರಾಮಭಟ್ ಆರ್‌ಎಸ್‌ಎಸ್ ನ ಬಹುದೊಡ್ಡ ಹೆಸರು. ಈಗಲೂ ಸಂಘದಲ್ಲಿ ಅವರ ಪ್ರಭಾವ ದಟ್ಟವಾಗಿದೆ. ತಮ್ಮ ಸೋದರ ಸಂಬಂಧಿ ಕಲ್ಲಡ್ಕ ಪ್ರಭಾಕರ್ ಭಟ್ ಅವರೊಂದಿಗಿನ ಭಿನ್ನಾಭಿಪ್ರಾಯ, ಮೃದು ರಾಜಕಾರಣ, ಜನರನ್ನು ತಲುಪುವ ಹೆಚ್ಚುಗಾರಿಕೆಯ ಕಾರಣಕ್ಕಾಗಿ ದಕ್ಷಿಣ ಕನ್ನಡದಲ್ಲಿ ಅವರಿಗೊಂದು ಪ್ರತ್ಯೇಕ ಸ್ಥಾನವಿದೆ. ಡಿ.ವಿ. ಸದಾನಂದಗೌಡ ಸೇರಿದಂತೆ ಅನೇಕರು ರಾಮಭಟ್ ಶಿಷ್ಯರು ಹಾಗೂ ಪ್ರಭಾಕರ್ ಭಟ್ ಆಪ್ತರು.

1972ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ರಾಮಭಟ್ (25,751) ಕಾಂಗ್ರೆಸ್ಸಿನ ಬೆಟ್ಟ ಪರಮೇಶ್ವರ ಭಟ್ (25,109) ಅವರನ್ನು ತೀರಾ ಕಡಿಮೆ ಅಂತರದಲ್ಲಿ (ಮತಗಳ ಅಂತರ 642) ಗೆದ್ದರು. ಅದು 1983ನೇ ಇಸವಿ. ಜನತಾಪಕ್ಷ, ಬಿಜೆಪಿ ಮತ್ತಿತರ ಪಕ್ಷಗಳು ಸೇರಿ ರೂಪಿಸಿದ ಜನತಾ ಕ್ರಾಂತಿರಂಗದ ಅಲೆ ಜೋರಾಗಿದ್ದ ಸಮಯ. ಕಾಂಗ್ರೆಸ್ಸಿನ ಬಿ. ಸಂಕಪ್ಪ ರೈ (25,189) ಅವರನ್ನು ರಾಮಭಟ್ (26,618) ಮಣಿಸಿ ಶಾಸಕರಾದರು. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಇದು ರಾಜ್ಯದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಹೆಗಡೆಯವರ ರಾಜಕೀಯ ಜೀವನ ಮುಗಿಯಿತು ಎಂದು ಅನೇಕರು ಭಾವಿಸಿದರು. ಆದರೆ 1985ರಲ್ಲಿ ಹೆಗಡೆ ಸ್ಪಷ್ಟ ಬಹುಮತದಿಂದ ಜನತಾಪಕ್ಷವನ್ನು ಗೆಲ್ಲಿಸಿದರು. ಇದರ ಪರಿಣಾಮ ಪುತ್ತೂರಿನ ಮೇಲೂ ಆಗಿತ್ತು. ರಾಮಭಟ್ಟರು (16,606), ಕಾಂಗ್ರೆಸ್ಸಿನ ವಿನಯಕುಮಾರ್ ಸೊರಕೆ (37,426) ಎಂಬ ಕಾಂಗ್ರೆಸ್ಸಿನ ಯುವ ಮುಖಂಡನ ಎದುರು ಸೋಲನುಭವಿಸಿದರು. ಅಲ್ಲಿಂದ ನಂತರ ರಾಮಭಟ್ ಚುನಾವಣಾ ರಾಜಕೀಯದಿಂದ ನೇಪಥ್ಯಕ್ಕೆ ಸರಿಯುತ್ತಾರೆ. ಹುಟ್ಟೂರು ಪುತ್ತೂರಾದರೂ ಮಂಗಳೂರು, ಬೆಂಗಳೂರು ಎಂದು ಓಡಾಡಿಕೊಂಡಿದ್ದ ಸೊರಕೆ ಅವರನ್ನು ಕ್ಷೇತ್ರದ ಜನ ಗುರುತಿಸಿ ಬೆಂಬಲಿಸಿದ್ದು ವಿಶೇಷ. 1989ರಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡರನ್ನು (42,134) ಸೋಲಿಸುವ ಮೂಲಕ ಸೊರಕೆ (43,695) ಕ್ಷೇತ್ರದ ಶಾಸಕರಾದರು. ನಂತರ ಕ್ಷೇತ್ರ ಬದಲಿಸಿದ ಅವರು ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಸಂಸದರಾಗಿಯೂ ಗೆದ್ದು ಬಂದರು.

ಬಾಬರಿ ಮಸೀದಿ ಧ್ವಂಸ ಮತ್ತು ಆ ನಂತರದ ಬೆಳವಣಿಗೆಗಳು ದಟ್ಟವಾಗಿದ್ದ 90ರ ದಶಕವದು. ರಾಮಮಂದಿರ ನಿರ್ಮಾಣ ಘೋಷಣೆ, ರಥಯಾತ್ರೆಯ ಪರಿಣಾಮಗಳು ಪುತ್ತೂರನ್ನೂ ಪ್ರಭಾವಿಸಿದ್ದವು. ಆ ಅಲೆಯಲ್ಲಿ ಗೆದ್ದು ಬಂದದ್ದು ಡಿ.ವಿ. ಸದಾನಂದ ಗೌಡರು (53,015). ಸೊರಕೆ (52,611) ಅವರನ್ನು ಮಣಿಸಿದ ಗೌಡರು 1999ರಲ್ಲಿಯೂ ಮತ್ತೆ ಗೆದ್ದು ಬಂದರು. ಎನ್ ಸುಧಾಕರ ಶೆಟ್ಟಿ ವಿರುದ್ಧ 7293 ಮತ ಪಡೆದು ವಿಜಯಿಯಾದರು. ವಿರೋಧಪಕ್ಷದ ಉಪನಾಯಕರೂ ಆದರು. ನಂತರ 2004ರಲ್ಲಿ ಗೌಡರು ಸಂಸದರಾಗಿದ್ದು, ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಯಡಿಯೂರಪ್ಪನವರ ಬಳಿಕ ಮುಖ್ಯಮಂತ್ರಿಯೂ ಆದದ್ದು ಇತಿಹಾಸ.

ಇದನ್ನೂ ಓದಿ : ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಕಾರುಬಾರು

ಉರಿಮಜಲು ರಾಮಭಟ್ ಶಾಸಕರಾಗುವುದಕ್ಕೂ ಮೊದಲು ಕ್ಷೇತ್ರ ಮೂರು ಚುನಾವಣೆಗಳನ್ನು ಕಂಡಿತ್ತು. 1967ರಲ್ಲಿ ಕಾಂಗ್ರೆಸ್ಸಿನ ವಿ ಶೆಟ್ಟಿ 21,534 ಮತಗಳನ್ನು ಪಡೆದು ರಾಮಭಟ್ಟರನ್ನು (25,109) ಸೋಲಿಸಿದ್ದರು. 1962ರಲ್ಲಿ ಕೆ. ವೆಂಕಟ್ರಮಣ ಗೌಡ (14259) ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸ್ವತಂತ್ರ ಪಕ್ಷದ ಉಗ್ಗಪ್ಪ ಶೆಟ್ಟಿ ಅವರನ್ನು (8163) ಸೋಲಿಸಿದ್ದರು. 1957ರಲ್ಲಿ ಸುಳ್ಯ ಒಳಗೊಂಡು ದ್ವಿಸದಸ್ಯ ಕ್ಷೇತ್ರವಾಗಿದ್ದ ಪುತ್ತೂರು ಕಾಂಗ್ರೆಸ್ಸಿನ ಸುಬ್ಬಯ್ಯ ನಾಯಕರನ್ನು ವಿಧಾನಸಭೆಗೆ ಚುನಾಯಿಸಿ ಕೆ. ವೆಂಕಟ್ರಮಣ ಗೌಡರು 28,691 ಮತಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿತ್ತು.

ಪುತ್ತೂರಿನ ರಾಜಕೀಯ ವಿನ್ಯಾಸ ಬಹುವಿಶಿಷ್ಟವಾದುದು. ಜಾತಿ ರಾಜಕಾರಣದ ಜೊತೆಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ವಿದ್ಯಮಾನಗಳಿಗೆ ಇಲ್ಲಿನ ಮತದಾರರು ಬಹುಬೇಗ ತೆರೆದುಕೊಂಡಿರುವುದೂ ಇದೆ. 1957ರಿಂದ 2013ರವರೆಗೆ ಒಟ್ಟು 12 ವಿಧಾನಸಭಾ ಚುನಾವಣೆಗಳಿಗೆ ಕ್ಷೇತ್ರ ಸಾಕ್ಷಿಯಾಗಿದೆ. ಒಮ್ಮೆ ಮಾತ್ರ ಇಲ್ಲಿ ಜನತಾಪಕ್ಷ ಗೆದ್ದಿತ್ತು. ಉಳಿದಂತೆ ಸೋಲು ಗೆಲುವಿನ ಹಾವು ಏಣಿಯಾಟ ನಡೆದಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More