ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಕಾರುಬಾರು

ರಾಜ್ಯ ಚುನಾವಣೆ ಇತಿಹಾಸದಲ್ಲಿ ಅಧಿಕ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವುದು 1967ರಲ್ಲಿ. ಈ ಚುನಾವಣೆ ಫಲಿತಾಂಶ ಪ್ರಕಟವಾದಾಗ 41 ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ಪಕ್ಷೇತರಾಗಿ ಗೆದ್ದಿದ್ದರು

ಪಕ್ಷ ರಾಜಕಾರಣದ ನಡುವೆಯೂ ವ್ಯಕ್ತಿ ಆಧಾರಿತ ರಾಜಕಾರಣ ದೇಶದ ಪ್ರತಿ ಚುನಾವಣೆಗಳಲ್ಲೂ ತನ್ನ ಅಸ್ತಿತ್ವವನ್ನು ದಾಖಲಿಸುತ್ತ ಬಂದಿದೆ. ಇದಕ್ಕೆ ಕರ್ನಾಟಕ ಚುನಾವಣೆಗಳು ಕೂಡ ಹೊರತಾಗಿಲ್ಲ. 1952ರಿಂದ 2013ರವರೆಗೆ ನಡೆದ 14 ವಿಧಾನಸಭಾ ಚುನಾವಣೆಯಲ್ಲಿ ಪ್ರತಿಬಾರಿಯೂ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುತ್ತಲೇ ಬಂದಿದ್ದಾರೆ. ಕೆಲವು ಸಂದರ್ಭದಲ್ಲಿ ಪಕ್ಷೇತರರ ಬೆಂಬಲದಿಂದ ಸರ್ಕಾರಗಳು ರಚನೆಯಾಗಿದ್ದು ಉಂಟು.

ಕರ್ನಾಟಕ ಚುನಾವಣಾ ಇತಿಹಾಸದಲ್ಲಿ ಅಧಿಕ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವುದು 1967ರಲ್ಲಿ. ಈ ಚುನಾವಣೆ ಫಲಿತಾಂಶ ಪ್ರಕಟವಾದಾಗ 44 ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರು. ಆ ಸಂದರ್ಭದಲ್ಲಿ 216 ವಿಧಾನಸಭಾ ಕ್ಷೇತ್ರಗಳಿದ್ದವು. ಇದರಲ್ಲಿ ಕಾಂಗ್ರೆಸ್ 126 ರಲ್ಲಿ ಗೆಲುವು ಸಾಧಿಸಿತ್ತು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರ ಪಾತ್ರ ನಿರ್ಣಾಯಕವಾಗಿದ್ದು ಗಮನಾರ್ಹ. ಆ ವೇಳೆ ಭಾರತೀಯ ಜನತಾ ಪಕ್ಷ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 80 ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ, ಯಾವುದೇ ಪಕ್ಷಕ್ಕೂ ಬಹುಮತ ದೊರಕದ ಕಾರಣ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಈ ಸಂದರ್ಭದಲ್ಲಿ ಆರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅತಿ ಕಡಿಮೆ ಸಂಖ್ಯೆಯಲ್ಲಿ ಪಕ್ಷೇತರರು ಗೆದ್ದಿರುವುದು ಇದೇ ಸಂದರ್ಭದಲ್ಲಿ ಎಂಬುದು ವಿಶೇಷ.

ಇನ್ನು, 1957ರ ಚುನಾವಣೆಯಲ್ಲಿ 35 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಸರ್ಕಾರವನ್ನು ಬಹುಮತ ಪಡೆದ ಕಾಂಗ್ರೆಸ್ ಸ್ಥಾಪಿಸಿತ್ತು. ಒಟ್ಟಾರೆ 271 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಶೇ.28.74 ರಷ್ಟು ಮತಗಳು ಪಕ್ಷೇತರ ಅಭ್ಯರ್ಥಿಗಳಿಗೆ ಹಂಚಿಹೋಗಿತ್ತು. 1983ರಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಬಹುಬೇಡಿಕೆ ಬಂದಿರುವುದನ್ನು ಕಾಣಬಹುದು.

ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸನ್ನು ಹಿಂದಿಕ್ಕಿ ಜನತಾ ಪಕ್ಷ ಮುನ್ನಲೆಗೆ ತಂದ ಚುನಾವಣೆ 1983ರ ಚುನಾವಣೆ. 95 ಕ್ಷೇತ್ರಗಳಲ್ಲಿ ಜನತಾ ಪಕ್ಷ ಗೆದ್ದಿತ್ತು. ಇಲ್ಲಿ 22 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ರಾಮಕೃಷ್ಣ ಹೆಗಡೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದು ಈ ಚುನಾವಣೆ ಮೂಲಕ ಎಂಬುದು ಗಮನಾರ್ಹ.

1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ 11 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 1962 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. 1972 ರ ಚುನಾವಣೆಯಲ್ಲೂ 20 ಪಕ್ಷೇತರ ಅಭ್ಯರ್ಥಿಗಳು ಗೆಲುವು ಕಂಡಿದ್ದನ್ನು ಕಾಣಬಹುದು. 1978ರ ಚುನಾವಣೆ ವೇಳೆಗೆ ಕೆಲವು ಪಕ್ಷಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗುರುತಿಸಿಕೊಂಡಿದ್ದರಿಂದ ಗೆಲುವಿನ ಸಂಖ್ಯೆ 10ಕ್ಕೆ ಇಳಿಯಿತು.

ಎರಡು ದಶಕಗಳ ವಿಧಾನಸಭಾ ಚುನಾವಣೆಯನ್ನು ಗಮನಿಸಿದಾಗ ಪಕ್ಷೇತರ ಅಭ್ಯರ್ಥಿಗಳಿಗೆ ಬಹಳ ಬೆಲೆ ಬಂದಿದ್ದು 2008ರಲ್ಲಿ. ಪಕ್ಷೇತರ ಅಭ್ಯರ್ಥಿಗಳ ಬೆಂಬಲದಿಂದ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದರು. 1994ರ ಚುನಾವಣೆಯಲ್ಲಿ 18 ಮತ್ತು 1999 ರ ಚುನಾವಣೆಯಲ್ಲಿ 19 ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದರಿಂದ ಇವರು ನಿರ್ಣಾಯಕರಾಗಲಿಲ್ಲ.

1985 ರಲ್ಲಿ ಪಕ್ಷೇತರರು 13 ಕ್ಷೇತ್ರಗಳಲ್ಲಿ ಹಾಗೂ 1989 ರ ಚುನಾವಣೆಯಲ್ಲಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದರು. ಆದರೆ, ಈ ಎರಡು ಚುನಾವಣೆಗಳಲ್ಲಿ ಕೂಡ ಜನತಾ ಪಕ್ಷ ಮತ್ತು ಕಾಂಗ್ರೆಸ್ ಬಹುಮತ ಸಾಧಿಸಿದ್ದರಿಂದ ಪಕ್ಷೇತರರು ಕೂಡ ಇಲ್ಲಿ ಅಷ್ಟು ಪರಿಣಾಮ ಬೀರಲಿಲ್ಲ.

ಇದನ್ನೂ ಓದಿ : ಶಿರೂರು ಶ್ರೀ ಸಂದರ್ಶನ | ಟಿಕೆಟ್ ಕೊಟ್ಟರೆ ಬಿಜೆಪಿ, ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿ

2004ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು 13 ಸ್ಥಾನಗಳನ್ನು ಗೆದ್ದಿದ್ದರು. ಆದರೆ, ಯಾವ ಪಕ್ಷವೂ ಬಹುಮತ ಸಾಧಿಸಿರಲಿಲ್ಲ. ಪರಿಣಾಮ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಎಚ್ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಕಳೆದ ಚುನಾವಣೆಯಲ್ಲಿ 9 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ, ಕಾಂಗ್ರೆಸ್ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಸಾಧಿಸಿಕೊಂಡು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ. ಆದರೆ, ಸಿಎಂ ಸಿದ್ದರಾಮಯ್ಯ ಈ ಹಿಂದೆ ಪಕ್ಷೇತರ ಅಭ್ಯರ್ಥಿ ಎಂಬುದು ಕೂಡ ಗಮನಾರ್ಹ. 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರು ನಿಂತು ಕಾಂಗ್ರೆಸ್ಸಿನ ಜಯದೇವರಾಜ್ ಅರಸ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು 1962 ರಲ್ಲಿ ಹೊಳೆನರಸಿಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಕಂಡಿದ್ದನ್ನು ಇಲ್ಲಿ ನೆನೆಯಬಹುದು.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More