ಆತಂಕ ಹೆಚ್ಚಾಗಿ ಹಾಸನದಲ್ಲೇ ಎರಡು ಬಾರಿ ‘ವಿಕಾಸ ಪರ್ವ’ ಸಂಘಟಿಸಿದ ಜೆಡಿಎಸ್‌

ಜೆಡಿಎಸ್‌ಗೆ ಅಸ್ತಿತ್ವದ ಅತಂಕ ಶುರುವಾಗಿರುವಂತಿದೆ. ಅದರ ಅಸಹಜ ವರ್ತನೆಯೇ ಇದನ್ನು ಸಾರಿ ಹೇಳುತ್ತಿದೆ. ಸಿದ್ದರಾಮಯ್ಯ ಜನಪ್ರಿಯತೆ, ರಾಹುಲ್ ವಾಗ್ದಾಳಿ, ಮೈತ್ರಿ ಕುರಿತು ಅಮಿತ್ ಶಾ ಖಡಕ್ ನುಡಿಯಿಂದ ಜೆಡಿಎಸ್ ಕೊಂಚ ಮೆತ್ತಗಾಗಿರುವುದು ಮೇಲ್ನೋಟಕ್ಕೇ ಕಾಣುವಷ್ಟು ಸ್ಪಷ್ಟ

ನಿರೀಕ್ಷೆಯಂತೆ ಜಾತ್ಯತೀತ ಜನತಾದಳ ತನ್ನ ಭದ್ರಕೋಟೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಸುರಿವ ಮಳೆಯಲ್ಲೇ ಬೃಹತ್ ಸಮಾವೇಶ ನಡೆಸುವ ಮೂಲಕ ಎದುರಾಳಿ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಯಾವ ಜಾಗದಲ್ಲಿ ನಿಂತು, "ಜೆಡಿಎಸ್ ಬಿಜೆಪಿಯ ಬಿ ಟೀಮ್‌ನಂತೆ ಕೆಲಸ ಮಾಡುತ್ತಿದೆ,” ಎಂದು ಆರೋಪಿಸಿದ್ದರೋ ಅದೇ ಸ್ಥಳದಲ್ಲಿ ನಿಂತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ಅವರು, "ತಮ್ಮದು ಯಾವುದೇ ಪಕ್ಷದ ಬಿ ಟೀಮ್ ಅಲ್ಲ, ಜೆಡಿಎಸ್ ಎ ಟೀಮ್ ಆಗಿ ಈ ಬಾರಿ ಅಧಿಕಾರ ಹಿಡಿಯುವುದು ಖಚಿತ,” ಎಂದು ಸಾರುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರ ತವರು ಜಿಲ್ಲೆಯಲ್ಲಿ ಪಕ್ಷಕ್ಕೆ ಈ ಮಟ್ಟಿಗಿನ ಬೆಂಬಲ ಇರುವುದು ಸಹಜವೇ. ಆದರೆ, ಕೇವಲ 25 ದಿನಗಳ ಅಂತರದಲ್ಲಿ ಹಾಸನದಲ್ಲಿ ಎರಡು ಬಾರಿ ವಿಕಾಸ ಪರ್ವದ ಯಾತ್ರೆ ಸಂಘಟಿಸಿದ ಜೆಡಿಎಸ್‌ನ ಅನಿವಾರ್ಯತೆ ಮತ್ತು ಆತಂಕದ ಸ್ಥಿತಿಯ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಕೊಂಡಿದೆ. ಕಳೆದ ಮಾ.8ರಂದು ಹಾಸನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಜೆಡಿಎಸ್ ವಿಕಾಸ ಪರ್ವದ ಯಾತ್ರೆ ನಡೆದಿತ್ತು. ಅದಾದ 25 ದಿನಗಳ ನಂತರ ಅಂದರೆ, ಏ.2ರಂದು ಮತ್ತೊಂದು ವಿಕಾಸ ಯಾತ್ರೆ ಸಮಾವೇಶ ನಡೆಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿಕೊಂಡರೆ, ಜೆಡಿಎಸ್ ನಿಜಕ್ಕೂ ತನ್ನ ರಾಜಕೀಯ ಅಸ್ತಿತ್ವದ ಕುರಿತು ಆತಂಕಗೊಂಡಿದೆಯೇ ಎಂಬ ಉತ್ತರ ರೂಪದ ಪ್ರಶ್ನೆ ಎದುರಾಗುತ್ತದೆ.

ಮಾ.8ರಂದು ಎಚ್ ಡಿ ಕುಮಾರಸ್ವಾಮಿಯವರ ಜೆಡಿಎಸ್ ವಿಕಾಸ ಪರ್ವದ ಯಾತ್ರೆ ನಡೆದ ಹದಿನಾಲ್ಕು ದಿನಗಳಿಗೆ ಸರಿಯಾಗಿ ಅಂದರೆ, ಮಾ.21ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಾಶೀರ್ವಾದ ಯಾತ್ರೆ ನಡೆಯಿತು. ಅಂದಿನ ಸಮಾವೇಶದ ಮುಖ್ಯ ಆಕರ್ಷಣೆಯಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಥಮ ಬಾರಿಗೆ ಜೆಡಿಎಸ್ ವಿರುದ್ಧ ಮಾತು ಅರಂಭಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಗುರಿಯಾಗಿಸಿಕೊಂಡು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವೆಂಬಂತೆ ಜೆಡಿಎಸ್ ಮತ್ತೊಂದು ವಿಕಾಸ ಪರ್ವ ಯಾತ್ರೆ ಸಮಾವೇಶ ನಡೆಸಿರುವುದು ಸ್ಪಷ್ಟ. ಹಾಗಾದರೆ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ವಾಗ್ದಾಳಿ ಮತ್ತು ಆರೋಪಗಳಿಂದ ಜೆಡಿಎಸ್ ನಿಜಕ್ಕೂ ಹೆದರಿದೆಯೇ?

ಹುಟ್ಟಿದ ನೆಲದಲ್ಲಿ ಮರ ಆಳವಾಗಿ ಬೇರು ಬಿಟ್ಟರೆ ಮಾತ್ರ ಮೇಲೆ ರೆಂಬೆಕೊಂಬೆಗಳನ್ನು ವಿಶಾಲವಾಗಿ ಹರಡಿಕೊಳ್ಳಬಹುದು ಎಂಬ ಸತ್ಯ ಗೊತ್ತಿರುವುದರಿಂದಲೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತವರುನೆಲದಲ್ಲಿ ಪಕ್ಷಕ್ಕೆ ಆಗಬಹುದಾದ ಅಲ್ಪ ಹಾನಿಯನ್ನೂ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಈ ದೂರದೃಷ್ಟಿಯಿಂದಲೇ ಹಾಸನದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ನಿಗದಿಯಾಗಿದ್ದು ಗೊತ್ತಾದ ತಕ್ಷಣವೇ, "ಅವರು ಸಮಾವೇಶ ಮಾಡಿ ಹೋದಮೇಲೆ ನಾವೂ ಒಂದು ಸಮಾವೇಶ ಮಾಡುತ್ತೇವೆ,” ಎಂದು ಮೊದಲೇ ಪ್ರಕಟಿಸಿದ್ದರು. ರಾಜಕೀಯ ಎದುರಾಳಿಗಳ ದಾಳಿಗಳನ್ನು ನಿರ್ಲಕ್ಷಿಸಿದರೆ ಪಕ್ಷದ ಕಾರ್ಯಕರ್ತರ ಆತ್ಮಬಲಕ್ಕೆ ಎಲ್ಲಿ ಕುಂದುಂಟಾಗುತ್ತದೋ ಎಂಬ ಆತಂಕದಿಂದಲೇ ಅವರು ಪ್ರತೀಕಾರದ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಆದರೆ, ಜೆಡಿಎಸ್‌ಗೆ ಅಸ್ತಿತ್ವದ ಅತಂಕ ಶುರುವಾಗಿರುವುದು ರಾಹುಲ್ ಗಾಂಧಿ ಹಾಸನಕ್ಕೆ ಬಂದು ವಾಗ್ದಾಳಿ ನಡೆಸಿದ ನಂತರವಲ್ಲ; ಬದಲಿಗೆ, ಈ ಆತಂಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಹೆಚ್ಚುತ್ತಿದೆ ಎನಿಸಿದ ದಿನದಿಂದಲೇ ಹುಟ್ಟಿಕೊಂಡಿರುವುದು ಎಂಬುದು ಸ್ಪಷ್ಟ. ಈ ಕಾರಣದಿಂದಲೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಗೊಂದಲದಲ್ಲಿದ್ದರೆ, ಜೆಡಿಎಸ್ ಈಗಾಗಲೇ ಮೊದಲ ಹಂತದಲ್ಲಿ ನೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ, ಆ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಚುನಾವಣಾ ಪ್ರಚಾರವನ್ನು ಮುಗಿಸಿದೆ. ಹಿಂದಿನ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆಯ ಅಂತಿಮ ದಿನದವರೆಗೂ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಕೊನೆಯ ಗಳಿಗೆಯಲ್ಲಿ ಪಕ್ಷದ ವತಿಯಿಂದ ‘ಬಿ’ ಫಾರ್ಮ್ ಕೊಡಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣೆ ದಿನಾಂಕ ನಿಗದಿಗೂ ಮುನ್ನವೇ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವುದಕ್ಕೆ ರಾಜಕೀಯ ಅಸ್ತಿತ್ವದ ಭಯವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂದರೆ, ಕಳೆದ ವಿಧಾನಸಭೆ ಚುನಾವಣೆವರೆಗೂ ಜೆಡಿಎಸ್ ಅಭ್ಯರ್ಥಿಯಾಗಲು ಪೈಪೋಟಿ ಇರುತ್ತಿತ್ತು. ಈ ಬಾರಿ ಆ ಪೈಪೋಟಿ ಇಲ್ಲ ಎಂಬುದೇ ಇಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವುದರ ಹಿಂದಿರುವ ಸತ್ಯ. ಈ ಬಾರಿ ಟಿಕೆಟ್ ಕೊಡಲು ತಡಮಾಡಿದರೆ ಎಲ್ಲಿ ತಮ್ಮ ಅಭ್ಯರ್ಥಿಗಳು ವಿಪಕ್ಷಗಳತ್ತ ಮುಖ ಮಾಡುತ್ತಾರೋ ಎಂಬ ಎಚ್ಚರಿಕೆ ಇಲ್ಲಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಹಾಸನದಲ್ಲೇ ಜೆಡಿಎಸ್ ಬಗ್ಗುಬಡಿಯಲು ತಂತ್ರ ಹೆಣೆದಿದ್ದಾರೆಯೇ ಸಿದ್ದರಾಮಯ್ಯ?

ಜೆಡಿಎಸ್ ಆತಂಕ ಮತ್ತಷ್ಟು ಹೆಚ್ಚಲು ಕಾರಣ ಜಾತ್ಯತೀತತೆಯ ಹೊಸ ಹೀರೋ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಹೊಮ್ಮಿರುವುದು. ತಮ್ಮ ಪಕ್ಷದ ಹೆಸರಿನಲ್ಲೇ ‘ಜಾತ್ಯತೀತ’ ಎಂಬ ಪದವಿದ್ದರೂ, ಕೋಮುವಾದಿ ಪಕ್ಷ ಎಂದು ದೂರಲಾಗುವ ಬಿಜೆಪಿ ಜೊತೆ ಸೇರಿ ಒಮ್ಮೆ ಸರ್ಕಾರ ರಚಿಸುವ ಮೂಲಕ ಆ ಪದಕ್ಕೆ ಕಳಂಕ ಮೆತ್ತಿಸಿಕೊಳ್ಳಲಾಗಿದೆ. ಆ ಕಳಂಕವನ್ನು ತೊಡೆಯಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಎಷ್ಟೇ ಪ್ರಯತ್ನಪಟ್ಟರೂ ಅಲ್ಪಸಂಖ್ಯಾತ ಸಮುದಾಯವನ್ನು ಹಿಂದಿನಂತೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ಅದಕ್ಕೆ ಕಾರಣ, ಒಂದು ಕಾಲದ ತಮ್ಮ ಶಿಷ್ಯ ಸಿದ್ದರಾಮಯ್ಯ ಎಂಬುದು ಗೌಡರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿರಬಹುದು.

ಮೊದಲು ಇರುವುದನ್ನು ಉಳಿಸಿಕೊಂಡರೆ, ನಂತರ ಹೊಸದಕ್ಕೆ ಕೈಚಾಚಬಹುದು ಎಂದು ದೇವೇಗೌಡರು ನಿರ್ಧರಿಸಿದಂತಿದೆ. ಹಾಗಾಗಿ ತನ್ನ ಮಡಿಲಲ್ಲಿರುವ ಕ್ಷೇತ್ರಗಳಲ್ಲಿನ ಸಣ್ಣ ಕದಲಿಕೆಗೂ ದೊಡ್ಡದಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌ರಿಂದ ಬಿಎಸ್‌ವೈಗೆ ಬುದ್ಧಿವಾದ
ಯಡಿಯೂರಪ್ಪನವರ ಇತ್ತೀಚಿನ ಸಾಹಸಗಳಿಗೆ ನಿಜವಾದ ಕಾರಣವೇನು?
ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
Editor’s Pick More