೨ಜಿ ಯಿಂದ ೪ಜಿ ವರೆಗೆ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ

ದಾವಣಗೆರೆಯಲ್ಲಿ ಲಂಬಾಣಿ ನೃತ್ಯದೊಂದಿಗೆ ಆರಂಭವಾದ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆ, ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವನ, ಅಸಂಘಟಿತ ಕಾರ್ಮಿಕರ ನೋವು ಮತ್ತು ಕಾಲೇಜು ಯುವಕ-ಯುವತಿಯರ ಅಭಿಮಾನದ ಕೇಕೆಯೊಂದಿಗೆ ಅಂತ್ಯಕಂಡಿತು

ಒಂದು ಪ್ಲೇಟ್ ಬೆಣ್ಣೆದೋಸೆಗೆ ತಗಲುವ ವೆಚ್ಚ ಮತ್ತು ಬರುವ ಲಾಭದಂತಹ ಸಾಮಾನ್ಯ ಸಂಗತಿಯಿಂದ, ೨ಜಿಯಿಂದ ೪ಜಿಗೆ ಬದಲಾದ ದ್ವಿಚಕ್ರ ವಾಹನ ತಂತ್ರಜ್ಞಾನ ಬಡ ಮೆಕಾನಿಕ್‌ಗಳ ಬದುಕಿನ ಮೇಲೆ ಎಳೆದ ಬರೆಯಂತಹ ತಂತ್ರಜ್ಞಾನ ಬದಲಾವಣೆಯ ತೆರೆಮರೆಯ ಪೆಟ್ಟುಗಳು, ಜಿಎಸ್‌ಟಿ- ನೋಟು ರದ್ದತಿಯಂತಹ ದುಡುಕಿನ ಕ್ರಮಗಳ ಅವಾಂತರದವರೆಗೆ ಹಲವು ವಿಷಯಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಐದನೇ ಸುತ್ತಿನ ಜನಾಶೀರ್ವಾದ ಯಾತ್ರೆಯ ಎರಡನೇ ದಿನದ ಹೈಲೈಟ್ಸ್‌.

ಶಿವಮೊಗ್ಗದಲ್ಲಿ ಮುದ್ದುಕಂದನ ಮುದ್ದು ಮಾಡುವುದರೊಂದಿಗೆ ಆರಂಭವಾಗಿದ್ದ ಅವರ ಯಾತ್ರೆ, ಪ್ರೀತಿ ಮತ್ತು ವಿಶ್ವಾಸದಿಂದ ದೇಶ ಕಟ್ಟುವ ಮಾತಿನೊಂದಿಗೆ ಸಮಾಪ್ತಿಗೊಂಡಿತ್ತು. ಆದರೆ, ದಾವಣಗೆರೆಯಲ್ಲಿ ಲಂಬಾಣಿ ನೃತ್ಯ, ಹಳ್ಳಿಯ ಯುವಕನ ಅಭಿಮಾನದ ಸೆಲ್ಫಿಯೊಂದಿಗೆ ಆರಂಭವಾದ ಅವರ ಜನಾಶೀರ್ವಾದ ಯಾತ್ರೆ, ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವನ, ತಂತ್ರಜ್ಞಾನದ ಬದಲಾವಣೆಯೊಂದಿಗೆ ಬದುಕಿನ ಭದ್ರತೆ ಕಳೆದುಕೊಳ್ಳುತ್ತಿರುವ ಅಸಂಘಟಿತ ಕಾರ್ಮಿಕರ ನೋವು ಮತ್ತು ಕಾಲೇಜು ಯುವಕ-ಯುವತಿಯರ ಅಭಿಮಾನದ ಕೇಕೆಯೊಂದಿಗೆ ಅಂತ್ಯಕಂಡಿತು.

ಶಿವಮೊಗ್ಗದಲ್ಲಿ ಮಂಗಳವಾರ ಸುಡುಬಿಸಿಲ ನಡುವೆಯೂ ರೋಡ್ ಶೋ ಮತ್ತು ಕಾರ್ನರ್ ಮೀಟಿಂಗ್ ಮುಗಿಸಿ, ದಾವಣಗೆರೆ ಜಿಲ್ಲೆಯತ್ತ ಯಾತ್ರೆ ಬೆಳೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ನ್ಯಾಮತಿ, ಹೊನ್ನಾಳಿ, ಹರಿಹರದಲ್ಲಿ ರೋಡ್ ಶೋ ಮುಗಿಸಿ, ಸಂಜೆ ದಾವಣಗೆರೆ ನಗರದಲ್ಲಿ ಭಾರೀ ಸಮಾವೇಶ ನಡೆಸಿದರು.

ಅದಕ್ಕೂ ಮುನ್ನ ಮಾರ್ಗಮಧ್ಯೆ ಹರಿಹರ ಸಮೀಪದ ಕನಕ ಗುರುಪೀಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಕಾಗಿನೆಲೆ ಕನಕಗುರುಪೀಠದ ಸ್ವಾಮೀಜಿಗಳ ಆಶೀರ್ವಚನ ಪಡೆದರು. ಕಾಂಗ್ರೆಸ್ ನಾಯಕನಿಗೆ ಗುರುಗಳು ಕರಿಯ ಕಂಬಳಿ ಹೊದೆಸಿ ಸನ್ಮಾನಿಸಿ ಆಶೀರ್ವದಿಸಿದರು.

ಮೋದಿ ಅವರ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರಗಳಿಗೆ ಅವಕಾಶ ಮಾಡಿಕೊಟ್ಟು ಕಣ್ಣುಮುಚ್ಚಿ ಕುಳಿತಿರುವುದು, ಸುಳ್ಳುಗಳ ಮೇಲೆ ಸುಳ್ಳು ಹೇಳಿ ದೇಶದ ಜನತೆಗೆ ವಂಚಿಸಿರುವುದು ಸೇರಿದಂತೆ ಹಲವು ವಿಚಾರಗಳನ್ನು ರಾಹುಲ್ ಈ ಸಮಾವೇಶದಲ್ಲಿ ಪ್ರಸ್ತಾಪಿಸಿದರು. “ನಾವು ಸುಳ್ಳು ಹೇಳಲ್ಲ, ಸುಳ್ಳು ಹೇಳುವುದು ನಮ್ಮ ಸಂಪ್ರದಾಯವಲ್ಲ. ಅದು ಏನಿದ್ದರೂ ಆರೆಸ್ಸೆಸ್ ಗರಡಿಯಲ್ಲಿ ಪಳಗಿದವರು ಹುಟ್ಟುಗುಣ. ನಮ್ಮದು ಮನ್‌ಕೀ ಬಾತ್ ಅಲ್ಲ. ನಾವು ಮಾತನಾಡಿ ನಿಮ್ಮನ್ನು ಮರಳು ಮಾಡುವುದಿಲ್ಲ. ಬದಲಾಗಿ ಕೆಲಸ ಮಾಡಿ ತೋರಿಸುತ್ತೇವೆ. ಹಾಗಾಗಿ ನಮ್ಮದು ಜನ ಸಾಮಾನ್ಯರ, ಬಡವರ, ದಲಿತರ, ರೈತರ, ಯುವಕರ ಮತ್ತು ಮಹಿಳೆಯರ ಸರ್ಕಾರ. ಬಂಡವಾಶಶಾಹಿಗಳ ಸರ್ಕಾರವಲ್ಲ,” ಎಂದು ರಾಹುಲ್ ಹೇಳಿದರು.

ದಾವಣಗೆರೆ ಮತ್ತು ಹರಿಹರದಲ್ಲಿ ತಮಗೆ ಸಿಕ್ಕ ವರ್ಣರಂಜಿತ ಸ್ವಾಗತ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಕಂಡು ಖುಷಿಯಾಗಿದ್ದ ರಾಹುಲ್‌, ಜನರತ್ತ ಕೈಬೀಸಿ ಅವರ ಖುಷಿಪಡಿಸಿದರು.

ರಾತ್ರಿ ದಾವಣಗೆರೆ ಬಾಪೂಜಿ ವಸತಿಗೃಹದಲ್ಲಿ ತಂಗಿದ್ದ ಅವರು, ಮಾರನೇ ದಿನ ಅಲ್ಲಿಯೇ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಸಮತಿ ಅಧ್ಯಕ್ಷರ ಸಭೆ ನಡೆಸಿದರು. ಸಭೆಯಲ್ಲಿ ದಾವಣಗೆರೆ ಸಮಾವೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶಿವಮೊಗ್ಗದಲ್ಲಿ ಸಾಕಷ್ಟು ಜನ ಸೇರಿದ್ದರೂ, ತಮ್ಮ ನಿರೀಕ್ಷೆಗೆ ತಕ್ಕಂತೆ ಜನ ಸೇರಿಸುವಲ್ಲಿ ಲೋಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಆ ಬಳಿಕ, ಹರಿಹರದ ಹುತಾತ್ಮ ಯೋಧ ಜಾವೀದ್ ಅವರ ಕುಟುಂಬ ವರ್ಗದವರನ್ನು ಭೇಟಿಯಾದ ರಾಹುಲ್‌ ಗಾಂಧಿ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ, ಅಸಂಘಟಿತ ಕಾರ್ಮಿಕರ ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕಾರ್ಮಿಕ ನಾಯಕರು, ತಮ್ಮ ವಿವಿಧ ಸಮಸ್ಯೆಗಳ ಕುರಿತು ರಾಹುಲ್ ಬಳಿ ಚರ್ಚಿಸಿದರು. ಪ್ರಮುಖವಾಗಿ, ಮೋಟರ್ ಸೈಕಲ್ ಮತ್ತು ಬೈಕ್ ಮೆಕಾನಿಕ್ ವೃತ್ತಿನಿರತರು, ೪ಜಿ ಮಾದರಿಯ ಹೊಸ ವಾಹನಗಳು ಮಾರುಕಟ್ಟೆಗೆ ಬಂದಿರುವುದರಿಂದ ೨ಜಿ ಮಾದರಿಯ ದ್ವಿಚಕ್ರ ವಾಹನ ರಿಪೇರಿ ಪರಿಣಿತರಾದ ತಮಗೆ ಉದ್ಯೋಗನಷ್ಟದ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ದ್ವಿಚಕ್ರ ವಾಹನ ತಯಾರಕರು ಸಂಪೂರ್ಣ ೪ಜಿ ತಂತ್ರಜ್ಞಾನದ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಆದರೆ, ನಮಗೆ ೨ಜಿ ವಾಹನ ತಂತ್ರಜ್ಞಾನ ಮಾತ್ರ ಗೊತ್ತಿದೆ. ಕಂಪನಿಗಳು ೪ಜಿ ವಾಹನ ದುರಸ್ತಿಯ ಕುರಿತು ತಮಗೆ ತರಬೇತಿ, ಮಾರ್ಗದರ್ಶನ ನೀಡುತ್ತಿಲ್ಲ. ಜೊತೆಗೆ, ವಾಹನಗಳಿಗೆ ವರ್ಷಗಟ್ಟಲೆ ಉಚಿತ ಸರ್ವೀಸ್ ಮಾಡಿಕೊಡುತ್ತಿರುವುದರಿಂದ ವಾಹನ ರಿಪೇರಿಯನ್ನೇ ವೃತ್ತಿಮಾಡಿಕೊಂಡಿರುವ ತಮ್ಮ ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅವರ ಮಾತುಗಳನ್ನು ಸಮಾಧಾನದಿಂದ ಆಲಿಸಿದ, ರಾಹುಲ್ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಬಳಿಕ ಜಿಎಸ್‌ಟಿ, ನೋಟು ರದ್ದತಿ ಮತ್ತಿತರ ಕೇಂದ್ರ ಸರ್ಕಾರ ಆರ್ಥಿಕ ನೀತಿಗಳ ಕುರಿತು ಆಯ್ದ ಉದ್ಯಮಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ರಾಹುಲ್‌ ಗಾಂಧಿ, ಮೋದಿಯವರ ಅವಸರದ ಮತ್ತು ತಪ್ಪು ಕ್ರಮಗಳಿಂದಾಗಿ ಇಡೀ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಅಪಾಯದಲ್ಲಿದೆ. ನೀರವ್ ಮೋದಿಯಂತಹ ಸಾಲುಸಾಲು ಹಣಕಾಸು ವಂಚನೆ ಪ್ರಕರಣಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ಮೌನ ಪರೋಕ್ಷವಾಗಿ ದೇಶದ ಅರ್ಥವ್ಯವಸ್ಥೆಗೆ ಪೆಟ್ಟು ಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ದ್ವೇಷ, ಸೇಡಿನ ಮೇಲೆ ಏನನ್ನೂ ಕಟ್ಟಲಾಗದು ಎಂದ ರಾಹುಲ್

ಬಳಿಕ ದಾವಣಗೆರೆಯ ರಾಮ್‌ ಅಂಡ್ ಕೋ ಸರ್ಕಲ್‌ ಸಮೀಪದ ವಿಜಿ ಬೆಣ್ಣೆದೋಸೆ ಹೋಟೆಲಿನಲ್ಲಿ ದಾವಣಗೆರೆ ಬೆಣ್ಣೆ ದೋಸೆ ಸವಿದ ಕಾಂಗ್ರೆಸ್ ನಾಯಕ, ಹೋಟೆಲ್‌ ಮಾಲೀಕ ವಿಜಿ ಅವರೊಂದಿಗೆ ಬೆಣ್ಣೆದೋಸೆ ಮತ್ತು ಹೋಟೆಲ್ ವಹಿವಾಟಿನ ಬಗ್ಗೆ ಕೆಲ ಸಮಯ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಯಮ್ಮ, ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್‌ನ ಕೆಲವು ನಾಯಕರು ಕೂಡ ರಾಹುಲ್ ಅವರೊಂದಿಗೆ ಬೆಣ್ಣೆದೋಸೆಯ ರುಚಿ ನೋಡಿದರು.

ಆ ಸಂದರ್ಭದಲ್ಲಿ ತಮ್ಮನ್ನು ನೋಡಲು ನೆರೆದಿದ್ದ ಯುವಕ-ಯುವತಿಯರತ್ತ ಕೈಬೀಸಿ, ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯತ್ತ ಪ್ರಯಾಣ ಬೆಳೆಸಿದರು. ದಾವಣಗೆರೆಯಿಂದ ನೇರ ಹೊಳಲ್ಕೆರೆಗೆ ತೆರಳಿದ ರಾಹುಲ್ ಯಾತ್ರೆ, ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮತ್ತೆ ಬಿಜೆಪಿ ಮತ್ತು ವಿವಿಧ ಹಣಕಾಸು ಹಗರಣಗಳ ಕುರಿತು ಪ್ರಸ್ತಾಪಿಸಿದರು. ನೀರವ್ ಮೋದಿ ಮತ್ತಿತರ ವಂಚನೆಗಳ ಬಗ್ಗೆ, ರಾಫೇಲ್ ವ್ಯವಹಾರದ ಬಗ್ಗೆ ಯಾಕೆ ಪ್ರಧಾನಿ ಮೋದಿ ಮೌನವಹಿಸಿದ್ದಾರೆ? ಎಂದು ಕುಟುಕಿದರು. ಹೊಳಲ್ಕೆರೆ ರೋಡ್ ಶೋ ಬಳಿಕ ಜನಾಶೀರ್ವಾದ ಯಾತ್ರೆ ತುಮಕೂರಿಗೆ ತೆರಳಿತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More