ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದ ರಾಹುಲ್

ಜನಾಶೀರ್ವಾದ ಯಾತ್ರೆಯ ಭಾಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳೊಂದಿಗೆ ಮಾತನಾಡಿದರು. ಒಂದು ಕಡೆ ಬಿಜೆಪಿ ಮಠ ಭೇಟಿ ನಡೆಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಅದೇ ಮಾದರಿಯಲ್ಲಿ ಬಿಜೆಪಿಗೆ ತಿರುಗೇಟು ನೀಡಿದರು

ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆಯ ಭಾಗವಾಗಿ ತುಮಕೂರು ಸಿದ್ದಗಂಗಾ ಮಠಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಭೇಟಿ ನೀಡಿ ಶಿವಕುಮಾರ ಶ್ರೀಗಳೊಂದಿಗೆ ಕೆಲ ಕಾಲ ಮಾತನಾಡಿ, ಆಶೀರ್ವಾದ ಪಡೆದರು. ಮಠದಿಂದ ಬಸ್ ಏರಿ ತುಮಕೂರು ವಿಶ್ವವಿದ್ಯಾಲಯದ ಗೇಟ್‌ವರೆಗೆ ಬಂದು ನಂತರ ತೆರದ ವಾಹನ ಏರಿದರು. ತುಮಕೂರು ವಿವಿ ಬಳಿ ಸಾವಿರಾರು ಮಂದಿ ಯುವಜನರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಹುಲ್ ಗಾಂಧಿಯತ್ತ ಕೈಬೀಸಿದರು. ಕೇಕೆ ಹಾಕಿ ರಾಹುಲ್‌ಗೆ ಚಪ್ಪಾಳೆಯ ಸ್ವಾಗತ ನೀಡಿದರು.

ನಿಜವಾಗಿ ರೋಡ್ ಶೋ ಆರಂಭವಾಗಿದ್ದು ಭದ್ರಮ್ಮ ವೃತ್ತದಿಂದ. ಇಲ್ಲಿಯೇ ಕಾಂಗ್ರೆಸ್ ಕಚೇರಿ ಇದ್ದು ಸುಮಾರು ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಯುವಕರು ಸೇರಿದ್ದರು. ರೋಡ್ ಶೋನಲ್ಲಿ ಯುವಕರು ಮತ್ತು ಯುವತಿಯರ ಸಂಭ್ರಮ ಮುಗಿಲು ಮುಟ್ಟಿತ್ತು. ತೆರೆದ ವಾಹನದಲ್ಲಿದ್ದ ರಾಹುಲ್ ಬಿ ಎಚ್ ರಸ್ತೆಯ ಇಕ್ಕೆಲೆಗಳಲ್ಲಿ ನಿಂತಿದ್ದ ಜನರತ್ತ ಕೈಬೀಸಿ ನಮಸ್ಕರಿಸುತ್ತಿದ್ದರು. ಇದಕ್ಕೆ ಜನರು ಕೂಡ ರಾಹುಲ್ ಅವರತ್ತ ನೋಡುತ್ತ, ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದುದು ಕಂಡು ಬಂತು.

ಭದ್ರಮ್ಮ ವೃತ್ತದಿಂದ ಟೌನ್ ಹಾಲ್ ವೃತ್ತಕ್ಕೆ ಬರುವ ವೇಳೆಗೆ ಅಲ್ಲಿ ಜನಸಾಗರವೇ ಸೇರಿತ್ತು. ಸುಮಾರು ೨೦ ಸಾವಿರಕ್ಕೂ ಹೆಚ್ಚು ಮಂದಿ ರಾಹುಲ್ ಬರುತ್ತಿದ್ದಂತೆ ರಾಹುಲ್ ಪರ ಘೋಷಣೆಗಳನ್ನು ಕೂಗಿ ನಾಯಕನನ್ನು ಹುರಿದುಂಬಿಸಿದರು. ಜನರನ್ನು ನೋಡಿದ ರಾಹುಲ್ ಮುಖದಲ್ಲಿ ಮಂದಹಾಸ ಕಾಣಿಸಿತು. ಮಹಿಳೆಯರು, ಮಕ್ಕಳು, ವೃದ್ದರು, ಪುರುಷರು ಅದರಲ್ಲೂ ಯುವಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಸೇರಿತ್ತು. ಯುವ ಮತದಾರರನ್ನು ಸೆಳೆಯುವಲ್ಲಿ ರಾಹುಲ್ ಯಶಸ್ವಿಯಾದಂತೆ ಭಾವವಾಯಿತು.

ಚುನಾವಣಾ ಆಯೋಗ ಯುವ ಮತದಾರರನ್ನು ಸೆಳೆಯಲು ವಿಶೇಷ ಪ್ರಯತ್ನಗಳನ್ನು ನಡೆಸುತ್ತಿರುವ ನಡುವೆಯೇ ರಾಹುಲ್ ತುಮಕೂರು ರೋಡ್ ಶೋ ಅತ್ಯಂತ ಯಶಸ್ವಿಯಾಗಿರುವುದು ಕಾಂಗ್ರೆಸ್ಸಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಕಾಂಗ್ರೆಸ್ ಜಿಲ್ಲಾ ಸಮಿತಿಯೂ ಕೂಡ ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರುತ್ತಾರೆ ಎಂಬುದನ್ನು ನಿರೀಕ್ಷಿಸಿಯೇ ಇರಲಿಲ್ಲ. ನಿರೀಕ್ಷೆಗೂ ಮೀರಿದ ಜನರನ್ನು ನೋಡಿ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿದಂತಾಗಿದೆ. ಈ ಚುನಾವಣೆಯಲ್ಲಿ ಯುವ ಮತದಾರರು ಕಾಂಗ್ರೆಸ್ ನತ್ತ ಮುಖಮಾಡಿದರೆ ಅದರ ಗೆಲುವು ಸುಲಭ.

ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಇರುವುದನ್ನು ಚನ್ನಾಗಿ ಬಳಸಿಕೊಂಡರೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಾರೆ. ಬುಧವಾರ ಸೇರಿದ್ದ ಜನರಿಂದ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುರುಪು ಬಂದಿದೆ. ತುಮಕೂರು ನಗರದಲ್ಲಿ ಹೀಗೆ ಜನ ಸೇರಿರುವುದು ಇದೇ ಮೊದಲ ಬಾರಿಗೆ. ಈವರೆಗೆ ನಡೆದಿರುವ ಸಮಾವೇಶಗಳಲ್ಲಿ ಕೇವಲ ಒಂದೆರಡು ಸಾವಿರ ಮಂದಿ ಮಾತ್ರ ಸೇರುತ್ತಿದ್ದರು. ರಾಹುಲ್‌ ಯಾತ್ರೆಯಲ್ಲಿ ಇಷ್ಟೊಂದು ಜನ ಸೇರಿರುವುದು ಐತಿಹಾಸಿಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಧ್ಯಾಹ್ನ ೨.೩೦ಕ್ಕೆ ಆಗಮಿಸಬೇಕಾಗಿದ್ದ ರಾಹುಲ್ ೩.೧೫ಕ್ಕೆ ತುಮಕೂರು ಪ್ರವೇಶಿಸಿದರು. ಮಠದಿಂದ ಟೌನ್‌ಹಾಲ್‌ಗೆ ಬರುವ ಹೊತ್ತಿಗೆ ಸಂಜೆ ೫.೧೫ ಆಗಿತ್ತು. ಈ ಸಂದರ್ಭದಲ್ಲಿ ಕಿರುಭಾಷಣ ಮಾಡಿದ ರಾಹುಲ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಇದು ಮೋದಿಗಳ ಭಾರತ ಎಂದು ಪ್ರಧಾನಿ ಮೋದಿಯನ್ನು ತಿವಿದರು. ಸಿದ್ದರಾಮಯ್ಯ ಉಚಿತ ಅಕ್ಕಿ ಕೊಟ್ಟಿದ್ದಾರೆ. ಯಡಿಯೂರಪ್ಪ ಏನು ಮಾಡಿದ್ದಾರೆ. ಯುವಕರು ಯೋಚಿಸಬೇಕು ಎಂದು ಸಲಹೆ ಮಾಡಿದರು. ಕಡಿಮೆ ಸಮಯದ ಭಾಷಣ ಮಾಡಿದರು ಪರಿಣಾಮಕಾರಿಯಾಗಿತ್ತು. ಮೋದಿಗೆ ಹಲವು ಪ್ರಶ್ನೆಗಳನ್ನು ಹಾಕಿದರು. ಭಾಷಣದಲ್ಲಿ ಮೋದಿ ವಿರುದ್ದ ವ್ಯಂಗ್ಯ, ಲೇವಡಿ ಮಿಶ್ರಿತ ದಾಟಿಯಲ್ಲಿ ಟೀಕಾಪ್ರಹಾರ ನಡೆಸಿದರು.

ಬಿಜೆಪಿಯ ಹಣಕಾಸು ಸಚಿವ ಅರುಣ್ ಜೇಟ್ಲಿ ನೀರವ್ ಮೋದಿಯ ವಕೀಲರಾಗಿ ಕೆಲಸ ಮಾಡುತ್ತಿದ್ದು ಹಣ ಕೊಳ್ಳೆ ಹೊಡೆದ ಆರೋಪಿಗಳನ್ನು ಬಿಜೆಪಿ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಗಬ್ಬರ್ ಸಿಂಗ್ ಟ್ಯಾಕ್ಸ್, ಕಪ್ಪುಹಣ, ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ ೧೫ ಲಕ್ಷ ಹಣ ಹಾಕಿದ್ದಾರೆ ಎಂಬ ಬಗ್ಗೆ ಆಪಾದನೆ ಮಾಡಿದರು.

ಇದನ್ನೂ ಓದಿ : ೨ಜಿ ಯಿಂದ ೪ಜಿ ವರೆಗೆ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ

ತುಮಕೂರಿನಿಂದ ಸಂಜೆ ೫.೪೫ಕ್ಕೆ ಕುಣಿಗಲ್‌ಗೆ ತೆರೆಳಿದರು. ಕುಣಿಗಲ್‌ನಲ್ಲೂ ಕನಿಷ್ಠ ೧೦ ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. ರಾಹುಲ್ ನೋಡಲು ಜನರು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಎರಡು ಕಡೆ ಹಗ್ಗ ಹಿಡಿದ ಯುವಕರ ತಂಡ ಜನರು ರಾಹುಲ್‌ರತ್ತ ನುಗ್ಗುವುದನ್ನು ನಿಯಂತ್ರಿಸಿದರು. ಯಾವುದೇ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಇದುವರೆಗೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಆದರೂ ರಾಹುಲ್ ರೋಡ್ ಶೋಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಹೆಬ್ಬೂರು, ನಾಗವಲ್ಲಿ ಈ ಭಾಗದ ಕೆಲವೆಡೆ ಅಷ್ಟೊಂದು ಜನ ಕಾಣಲಿಲ್ಲವಾದರೂ ಕುಣಿಗಲ್‌ನಲ್ಲಿ ಜನರ ದುಪ್ಪಟ್ಟು ಸಂಖ್ಯೆ ಕಂಡು ಕಾಂಗ್ರೆಸ್ಸಿಗರು ಖುಷಿಗೊಂಡರು.

ರಾಹುಲ್ ಗಾಂಧಿ ಕೇವಲ ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ನಡೆಸಿರುವುದು ಇಡೀ ಜಿಲ್ಲೆಯಾದ್ಯಂತ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌ರಿಂದ ಬಿಎಸ್‌ವೈಗೆ ಬುದ್ಧಿವಾದ
ಯಡಿಯೂರಪ್ಪನವರ ಇತ್ತೀಚಿನ ಸಾಹಸಗಳಿಗೆ ನಿಜವಾದ ಕಾರಣವೇನು?
ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
Editor’s Pick More