ಚಾಣಕ್ಯಪುರಿ | ಸಿದ್ದರಾಮಯ್ಯ ಬಗ್ಗೆ ಬಿಎಸ್‌ವೈಗೆ ಬಂದಿರುವ ಅನುಮಾನವೇನು?

ಸಿದ್ದರಾಮಯ್ಯ ಹಲವು ಬಾರಿ ‘ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ’ ಎಂದು ಹೇಳಿದ್ದಾರೆ. ಆದರೆ ಬಿ ಎಸ್ ಯಡಿಯೂರಪ್ಪ ಅವರಿಗೆ ಈ ಬಗ್ಗೆ ನಂಬಿಕೆ ಇಲ್ಲ. ಬಿಜೆಪಿ-ಜೆಡಿಎಸ್ ನಾಯಕರನ್ನು ದಾರಿ ತಪ್ಪಿಸಲು ಸಿದ್ದರಾಮಯ್ಯ ಹೀಗೆ ಹೇಳುತ್ತಿದ್ದಾರೆ ಎನ್ನುವುದು ಯಡಿಯೂರಪ್ಪನವರ ಅಂದಾಜು

ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ 'ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ' ಎಂದು ಹೇಳಿದ್ದಾರೆ. ಆದರೆ ಬಿ ಎಸ್ ಯಡಿಯೂರಪ್ಪ ಅವರಿಗೆ ಈ ಬಗ್ಗೆ ನಂಬಿಕೆ ಇಲ್ಲವಂತೆ. “ಬಿಜೆಪಿ-ಜೆಡಿಎಸ್ ನಾಯಕರನ್ನು ದಾರಿ ತಪ್ಪಿಸಲು ಹಾಗೆ ಹೇಳುತ್ತಿದ್ದಾರೆ. ಅವರು ಯಾವ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ,” ಎನ್ನುವುದು ಯಡಿಯೂರಪ್ಪ ಅವರ ಬಲವಾದ ನಂಬುಗೆ. ಟಿಕೆಟ್ ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದ ಯಡಿಯೂರಪ್ಪ ತಮ್ಮ ಈ ಅನುಮಾನವನ್ನು ಹಂಚಿಕೊಂಡರು. ಕಡೆಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು ಅಥವಾ ಬಾದಾಮಿಯಲ್ಲಿ ಅಖಾಡಕ್ಕಿಳಿಯಬಹುದು ಎಂಬ ಅಂದಾಜು ಅವರದು. ಅದರಿಂದಾಗಿ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಿಗೆ ಇನ್ನೂ ಬಿಜೆಪಿಯ ರಣತಂತ್ರ ಸಿದ್ಧವಾಗಿಲ್ಲವಂತೆ. ಇಷ್ಟೆಲ್ಲ ಹೇಳಿದ ಯಡಿಯೂರಪ್ಪ, ತಮ್ಮ ಪುತ್ರ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕೂಡುವ ಬಗ್ಗೆ ಮಾತ್ರ ಬಾಯಿ ಬಿಡಲಿಲ್ಲ. ಆದರೆ ಅವರ ಮಾತುಗಳಲ್ಲಿ ಒಂದು ಅಂಶ ಬಹಳ ಸ್ಪಷ್ಟವಾಗಿತ್ತು; ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿದ್ದ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಅಲ್ಲಿಂದ ತೆರವುಗೊಳಿಸಿದ ಮೇಲೆ ಮೈಸೂರಿನ ಭಾಗದಲ್ಲಿ ವಿಜಯೇಂದ್ರ ಅವರನ್ನು ಲಿಂಗಾಯತ ಸಮುದಾಯದ ನಾಯಕನನ್ನಾಗಿ ರೂಪಿಸಲು ಇದು ಸುವರ್ಣವಕಾಶ!

‘ಉಗ್ರಸ್ವರೂಪಿ ಪಂಚ ಪಾಂಡವರು’

ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಸಂಸದರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಶಾಸಕ ಸಿ ಟಿ ರವಿ ರಾಜ್ಯ ಬಿಜೆಪಿ ಪಾಲಿನ ಪಂಚ ಪಾಂಡವರಂತೆ. ಇವರೈವರನ್ನು ಪ್ರತ್ಯೇಕ ಕೆಟಗರಿಗೆ ಹಾಕಲು ಇವರ ಉಗ್ರಸ್ವರೂಪದ ಮಾತಿನ ಶೈಲಿಯೇ ಕಾರಣವಂತೆ. ಇವರಾಡುವ ಮಾತುಗಳು ಪ್ರತಿ ಬಾರಿಯೂ ಪಕ್ಷಕ್ಕೆ ಲಾಭ ತಂದುಕೊಡುವುದಿಲ್ಲ. ಇತ್ತೀಚೆಗಂತೂ ಲಾಭಕ್ಕಿಂತ ನಷ್ಟವೇ ಹೆಚ್ಚು. ಅದರಿಂದಾಗಿ ಪಕ್ಷದ ಕೆಲ ಹಿರಿಯರು ಇವರಿಗೆ 'ಮಾತಿನ ಮೇಲೆ ನಿಗಾ ಇರಲಿ' ಎಂದು ಎಚ್ಚರಿಸಿದ್ದಾರೆ. ಆದರೆ, ಹಿರಿಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ. ಹಾಗಂತ ಇವರ ಮೇಲೆ ಕ್ರಮ ಕೈಗೊಳ್ಳಲೂ ಸಾಧ್ಯವಿಲ್ಲ. ಕಾರಣ, ರಾಜ್ಯದ ಬೇರೆ ಪ್ರಮುಖ ನಾಯಕರಿಗಿಂತ ಇವರೇ ಚೆನ್ನಾಗಿ ಮಾತನಾಡುತ್ತಾರೆ, ಯುವಕರನ್ನು ಆಕರ್ಷಿಸುವ ರೀತಿ ಮಾತನಾಡುತ್ತಾರೆ, ಚಪ್ಪಾಳೆ ಗಿಟ್ಟಿಸುತ್ತಾರೆ. ಆದುದರಿಂದ ಸಪ್ಪೆ ಮಾತನಾಡುವ ಹಿರಿಯರಿಗಿಂತ ಉಗ್ರಸ್ವರೂಪಿ ಭಾಷಣ ಮಾಡುವ ಈ ಪಂಚ ಪಾಂಡವರೇ ಪರವಾಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆಯಂತೆ.

ಹಿಡಿದರೆ ಬಿಡದ ಎಂ ಬಿ ಪಾಟೀಲ್

ಎಂ ಬಿ ಪಾಟೀಲ್ ಹಿಡಿದ ಕೆಲಸವನ್ನು ಬಿಡದ ಅಸಾಮಿಯಂತೆ. ಹಾಗಂತ ಪಾಟೀಲರ ಸ್ನೇಹಿತರೊಬ್ಬರು ದೆಹಲಿಯ ಕಾಂಗ್ರೆಸ್ ನಾಯಕರೊಬ್ಬರಿಗೆ ಹೇಳಿದ್ದಾರೆ. "ಎಂ ಬಿ ಪಾಟೀಲ್ ಮೊದಲು ನೀರಾವರಿ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸ್ಕೊಂಡಿದ್ದರು. ತಲೆಗೆ ನೀರಾವರಿ ಹುಳ ಬಿಟ್ಟುಕೊಂಡ ಪಾಟೀಲರು, ತಮ್ಮ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಿಗೆ ತಲೆ ತಿಂದು ಅವರಿಂದ ನೀರಾವರಿ ವಿಷಯದ ಮೇಲೆ ಪಿಎಚ್‌ಡಿ ಮಾಡಿಸಿದರು. ಜೊತೆಜೊತೆಗೆ ತಾವು ಕೂಡ ಅಧ್ಯಯನ ಮಾಡಿದರು. ಆನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ ಖಾತೆಯನ್ನೇ ಕೇಳಿ ಪಡೆದರು. ಹಿಂದಿನ ಸರ್ಕಾರದಲ್ಲಿ ಕೃಷ್ಣಾ ನದಿ ವಿಷಯವಾಗಿ ಮಾತನಾಡಿದ್ದ ಎಂ ಬಿ ಪಾಟೀಲರು, ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದರು. ಹಾಗಾಗಿ ಎಂ ಬಿ ಪಾಟೀಲ್ ಕೇಳಿದ್ದೇ ತಡ ಸಿದ್ದರಾಮಯ್ಯ ಮರುಮಾತನಾಡದೆ ಜಲಸಂಪನ್ಮೂಲ ಇಲಾಖೆಯನ್ನು ಕೊಟ್ಟಿದ್ದರು. ನಂತರ ಪಾಟೀಲರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ತಲೆಗೆ ಹತ್ತಿತು. ವಾಸ್ತವದಲ್ಲಿ ಎಂ ಎಂ ಕಲಬುರ್ಗಿಯವರು ಬಿತ್ತಿದ ಬೀಜವದು. ಕಲಬುರ್ಗಿಯವರು ತೀರಿಕೊಂಡ ನಂತರವೂ ಪಾಟೀಲರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹೋರಾಡುತ್ತಿದ್ದಾರೆ,” ಎಂದು ಪಾಟೀಲರ ಬಗ್ಗೆ ಅವರ ಸ್ನೇಹಿತರು ಪೂರ್ಣಪಾಠ ಒಪ್ಪಿಸಿದ್ದಾರಂತೆ.

ಚಿತ್ರಾನ್ನ ಕೇಳಿದ್ದೆ, ಚಿಕನ್ ಬಿರಿಯಾನಿ ಕೊಟ್ರು!

ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಎಲ್ ಹನುಮಂತಯ್ಯ, ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಂಡಿದ್ದರು. ತಮಗೇ ಟಿಕೆಟ್ ಕೊಡಿಸುವಂತೆ ಎಡ-ಬಲ ಎನ್ನದೆ ಎಲ್ಲ ನಾಯಕರನ್ನೂ ಎಡತಾಕಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿತು. ರಾಜ್ಯಸಭಾ ಸದಸ್ಯರಾಗಿ ಮೊದಲ ಸಲ ದೆಹಲಿಗೆ ಬಂದಿದ್ದ ಅವರು, ಆತ್ಮೀಯರೊಂದಿಗೆ ಮಾತನಾಡುತ್ತಿದ್ದರು. ಮಾತಿನ ಮಧ್ಯೆ, “ನೆಲಮಂಗಲದಿಂದ ವಿಧಾನಸಭೆಗೆ ಹೋಗಬಯಸಿದ್ದ ನೀವು ನೇರಾನೇರ ರಾಜ್ಯಸಭೆಗೆ ಬಂದಿರುವುದು ಹೇಗೆ ಅನಿಸ್ತಿದೆ?” ಎಂಬ ಪ್ರಶ್ನೆ ತೂರಿಬಂತು. ಅದಕ್ಕೆ ಅವರು ನೀಡಿದ ಉತ್ತರ ಹೀಗಿತ್ತಂತೆ; “ಚಿತ್ರಾನ್ನ ಕೇಳಿದ್ದೆ, ಚಿಕನ್ ಬಿರಿಯಾನಿ ಕೊಟ್ಟಿದ್ದಾರೆ!”

ಇದನ್ನೂ ಓದಿ : ಚಾಣಕ್ಯಪುರಿ | ಕರ್ನಾಟಕಕ್ಕೆ ಬಂದಾಗೆಲ್ಲ ಅಮಿತ್ ಶಾ ಸಿಟ್ಟಾಗುವುದೇಕೆ ಗೊತ್ತೇ?

ರೇವಣ್ಣ ಹೇಳಿದ ಎರಡು ಇಡ್ಲಿ, ಒಂದು ವಡೆ ಕತೆ

ಮಾಜಿ ಸಚಿವ ಎಚ್ ಡಿ ರೇವಣ್ಣ ವಿಶಿಷ್ಟ ಮತ್ತು ವಿಚಿತ್ರ ವ್ಯಕ್ತಿ. ಅವರು ಗೊತ್ತಿರುವುದನ್ನು ಗೊತ್ತು ಅಂತ ಅಥವಾ ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಅಂತ ಹೇಳುವವರಲ್ಲ. ಬೇಕಂತಲೇ ದಡ್ಡತನ ಪ್ರದರ್ಶಿಸುತ್ತಾರೆ. ಆ ಮೂಲಕ ಎದುರಿದ್ದವರನ್ನು ದಡ್ಡರನ್ನಾಗಿ ಮಾಡುತ್ತಾರೆ. ಮಾತುಮಾತಿಗೂ, "ನನ್ನದೇನಿಲ್ಲ ಎಲ್ಲಾ ದೊಡ್ಡವರದು,” ಎನ್ನುತ್ತಾರೆ. 'ದೊಡ್ಡವರು' ರೇವಣ್ಣ ಪಾಲಿಗೆ ಗುರಾಣಿಯೂ ಹೌದು, ಅಸ್ತ್ರವೂ ಹೌದು. ಇಂಥ ರೇವಣ್ಣ ಚಳಿಗಾಲದಲ್ಲೊಮ್ಮೆ ದೆಹಲಿಗೆ ಬಂದಿದ್ದರು. ಚಳಿ ತಡೆಯಲಾಗದೆ ಬಿಸಿಲು ಕಾಯಿಸಿಕೊಳ್ಳುತ್ತಿದ್ದರು. ಹಾಗೇ ನಿದ್ದೆ ಬಂದಿತ್ತು. ಬಾಯಿಂದ ಜೊಲ್ಲು ಸುರಿದಿತ್ತು. ಅಷ್ಟೊತ್ತಿಗೆ ಅಚಾನಕ್ಕಾಗಿ ದೇವೇಗೌಡರ ಮನೆಗೆ ಪತ್ರಕರ್ತರು ದಾಂಗುಡಿ ಇಟ್ಟರು. ಒಳಗೆ ದೇವೇಗೌಡರಿದ್ದಾರೋ ಇಲ್ಲವೋ ಎನ್ನುವುದನ್ನು ರೇವಣ್ಣ ಅವರಿಂದಲೇ ತಿಳಿಯಬೇಕಾಗಿತ್ತು. ನಿದ್ರೆಗೆ ಜಾರಿದ್ದ ರೇವಣ್ಣನವರನ್ನು ಎಚ್ಚರಿಸುತ್ತಿದ್ದಂತೆ ಪೂರ್ವಜನ್ಮದ ಪ್ರಾಣಸ್ನೇಹಿತರನ್ನು ಬರಮಾಡಿಕೊಳ್ಳುವಂತೆ ಆತ್ಮೀಯವಾಗಿ ಆಹ್ವಾನಿಸಲು ಪ್ರಯತ್ನಿಸಿದರು. ದೇವೇಗೌಡರು ಇದ್ದಾರೋ ಇಲ್ಲವೋ ಎನ್ನುವುದನ್ನು ಹೇಳುವುದಕ್ಕೆ ಹತ್ತದಿನೈದು ನಿಮಿಷ ತೆಗೆದುಕೊಂಡರು. “ಅವರು ಬ್ಯುಸಿ, ಬಹಳ ಮುಖ್ಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವವರಿದ್ದಾರೆ. ಬಹಳ ಮುಖ್ಯವಾದ ವಿಚಾರವೊಂದನ್ನೇ ಚರ್ಚೆ ಮಾಡುತ್ತಾರೆ. ಅದು ಅವರಿಗಾಗಿ ಅಲ್ಲ, ನನಗಾಗಿಯೂ ಅಲ್ಲ, ರಾಜ್ಯದ ಜನರಿಗಾಗಿ. ದೇವೇಗೌಡರು ಏನನ್ನೂ ತಮಗಾಗಿ ಮಾಡಿಕೊಳ್ಳುವವರಲ್ಲ,” ಎಂಬಿತ್ಯಾದಿ ಕತೆಗಳನ್ನು ಹೇಳಿದರು. “ಅದ್ಸರಿ, ನೀವ್ಯಾಕೆ ದೆಹಲಿಗೆ ಬಂದಿದ್ದೀರಿ?” ಎಂದು ಕೇಳಿದರೆ, ಆ ಪ್ರಶ್ನೆಗೂ ನನಗೂ ಏನೇನೂ ಸಂಬಂಧ ಇಲ್ಲ ಎನ್ನುವಂತೆ ಬೇರೆ ಇನ್ನೇನನ್ನೋ ಹೇಳಲೊರಟರು. ಅವರನ್ನು ರಾಜ್ಯ ರಾಜಕಾರಣದ ಹಳಿಗೆ ತರಲು ತಿಣುಕಾಡಿ, ಕಡೆಗೆ ಸಿಕ್ಕ ಅವಕಾಶ ಬಿಡಬಾರದು ಅಂತ ಒಂದೇ ಏಟಿಗೆ ನಾಲ್ಕೈದು ಪ್ರಶ್ನೆಗಳನ್ನು ಪೋಣಿಸಿಟ್ಟರೆ ರೇವಣ್ಣ ಕೊಟ್ಟ ಒಂದೇ ಉತ್ತರ: "ನನಗೇನು ಗೊತ್ತು ಸಾರ್, ದೊಡ್ಡವರು ದಿಲ್ಲಿಗೆ ಬಾ ಅಂದ್ರು. ಬಂದಿದೀನಿ. ಬೆಳಗ್ಗೆ ಎರಡು ಇಡ್ಲಿ, ಒಂದು ವಡೆ ತರಿಸ್ಕೊಟ್ಟಿದ್ರು. ತಿಂದ್ಬುಟ್ಟು ಬಿಸಿಲು ಕಾಯಿಸ್ಕೊತಾ ಕೂತಿದಿನಿ!”

ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
Editor’s Pick More