ಸಿಂಧೂರಿ ವರ್ಗಾವಣೆ ಮಾಡುವಂತೆ ಮುಖ್ಯ ಚುನಾವಣಾ ಅಧಿಕಾರಿಗೆ ಸಚಿವ ಮಂಜು ಪತ್ರ

ಹಾಸನ ಉಸ್ತುವಾರಿ ಸಚಿವ ಎ ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಶೀತಲ ಸಮರ ಮುಕ್ತಾಯವಾಗುವ ಹಾಗೆ ಕಾಣಿಸುತ್ತಿಲ್ಲ. ಇತ್ತೀಚೆಗೆ ಸಿಂಧೂರಿ ಅವರು ಮಂಜು ಕಚೇರಿ ಮೇಲೆ ದಾಳಿ ಮಾಡಿದರೆ, ಈಗ ಅವರ ವಿರುದ್ಧ ಮಂಜು ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ

ಹಾಸನ ಜಿಲ್ಲೆಯಲ್ಲಿ ಚುನಾವಣೆ ಕಾವೇರುತ್ತಿರುವ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಇಳಿದಿರುವಂತಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರುದ್ಧ ವೈಯಕ್ತಿಕ ದ್ವೇಷದಿಂದ ಕೆಲಸ ಮಾಡುತ್ತಿದ್ದು, ನಿಷ್ಪಕ್ಷಪಾತ ಚುನಾವಣೆ ನಡೆಸುವ ಉದ್ದೇಶದಿಂದ ತಕ್ಷಣ ಅವರನ್ನು ವರ್ಗಾವಣೆ ಮಾಡುವಂತೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಸಚಿವ ಎ ಮಂಜು ಅವರು ಪತ್ರ ಬರೆದಿದ್ದಾರೆ.

ರೋಹಿಣಿ ಸಿಂಧೂರಿ ಅವರು ತಮ್ಮ ವಿರುದ್ಧ ವೈಯಕ್ತಿಕ ದ್ವೇಷ ಸಾಧನೆಗಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಏ.7ರಂದು ಮುಖ್ಯ ಚುನಾವಣಾಧಿಕಾರಿಗೆ ಮಂಜು ಅವರು ಬರೆದಿರುವ ದೂರಿನ ರೂಪದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಸಚಿವ ಮಂಜು ಅವರ ವಿರುದ್ಧ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರಿ ಕಟ್ಟಡದ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ, ಅರಕಲಗೂಡಿನಲ್ಲಿ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅರಕಲಗೂಡು ತಹಸೀಲ್ದಾರರನ್ನು ಅಮಾನತುಗೊಳಿಸಲಾಗಿದ್ದು, ಸಚಿವ ಎ ಮಂಜು ಅವರಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಮಂಜು ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಚುನಾವಣೆ ಘೋಷಣೆ ನಂತರವೂ ಮುಂದುವರಿದ ಡಿಸಿ ಸಿಂಧೂರಿ-ಮಂಜು ಜಟಾಪಟಿ

“ಹಾಸನದ ಪ್ರವಾಸಿ ಮಂದಿರದ ಕಟ್ಟಡದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ಈ ಸಂಬಂಧ ಸ್ಪಷ್ಟ ಉತ್ತರ ನೀಡಿರುವುದಲ್ಲದೆ, ಚುನಾವಣಾ ನೀತಿಸಂಹಿತೆ ಜಾರಿಯಾದ ದಿನವೇ ಉಸ್ತುವಾರಿ ಸಚಿವರ ಕಚೇರಿಗೆ ಬೀಗ ಹಾಕಲಾಗಿದೆ ಎಂಬುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೂ, ಸುದ್ದಿವಾಹಿನಿಗಳ ವರದಿ ಆಧರಿಸಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳು ನನ್ನ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಇದು ನನ್ನ ರಾಜಕೀಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಾಗಿದೆ,” ಎಂದು ಪತ್ರದಲ್ಲಿ ಸಚಿವ ಮಂಜು ಆರೋಪಿಸಿದ್ದಾರೆ.

“ವಿರೋಧ ಪಕ್ಷಗಳೊಂದಿಗೆ ಕೈ ಜೋಡಿಸಿರುವ ರೋಹಿಣಿ ಸಿಂಧೂರಿ ಅವರು ಸರ್ಕಾರದ ವಿರುದ್ಧವೂ ಸಂಘರ್ಷಕ್ಕಿಳಿದಿದ್ದಾರೆ. ಅಲ್ಲದೆ ಪೂರ್ವಗ್ರಹಪೀಡಿತರಾಗಿ ವರ್ತಿಸುತ್ತಿದ್ದಾರೆ. ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಸ್ಥಾನದಲ್ಲಿದ್ದರೆ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯಲು ಸಾಧ್ಯವಿಲ್ಲ. ಅದ್ದರಿಂದ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಮತ್ತು ನನ್ನ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ರದ್ದು ಮಾಡಲು ಸೂಚಿಸಬೇಕು,” ಎಂದು ಮನವಿ ಮಾಡಿದ್ದಾರೆ.

“ಜಿಲ್ಲಾಧಿಕಾರಿಗಳು ವೈಯಕ್ತಿಕ ದ್ವೇಷ ಸಾಧನೆಗೆ ಮುಂದಾದರೆ ಅದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ,” ಎಂಬುದಾಗಿ ಸಚಿವ ಎ ಮಂಜು ಬಹಿರಂಗವಾಗೇ ಎಚ್ಚರಿಸಿದ್ದರು. ಈ ಎಚ್ಚರಿಕೆ ಹೇಳಿಕೆ ಪ್ರಸಾರವಾದ ನಾಲ್ಕೈದು ದಿನಗಳಲ್ಲೇ ಬಗರ್‌ಹುಕುಂ ಸಾಗುವಳಿ ಅರ್ಜಿಗಳ ಇತ್ಯರ್ಥದ ಆರೋಪದ ಮೇಲೆ ಮತ್ತೊಂದು ನೋಟೀಸನ್ನು ಸಚಿವ ಎ ಮಂಜು ಸ್ವೀಕರಿಸುವಂತಾಗಿದೆ.

ಒಟ್ಟಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವರ್ಗಾವಣೆ ಸಂಬಂಧ ಶುರುವಾದ ಸಚಿವ ಮಂಜು ಮತ್ತು ಜಿಲ್ಲಾಧಿಕಾರಿ ರೋಹಿಣಿ ನಡುವಿನ ಜಟಾಪಟಿ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳತೊಡಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More