ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್‌ವೈ ಅಥವಾ ಅಮಿತ್ ಶಾ?

ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್‌ವೈ ಎಂದು ಬಿಜೆಪಿ ಒಪ್ಪಿಕೊಂಡಿದ್ದರೂ, ಅವರು ಚುನಾವಣೆ ಗೆದ್ದುಕೊಡುತ್ತಾರೆ ಎನ್ನುವ ಸಂಪೂರ್ಣ ನಂಬಿಕೆ ಪಕ್ಷದಲ್ಲಿ ಇದ್ದ ಹಾಗಿಲ್ಲ. ಹೀಗಾಗಿ, ಅವರನ್ನು ಸ್ಟಾರ್ ಪ್ರಚಾರಕರೆಂದು ಬಿಂಬಿಸುತ್ತಲೂ ಇಲ್ಲ. ಇದಕ್ಕೆ ಬಿಜೆಪಿಯ ಟ್ವಿಟಿರ್ ಖಾತೆಯೇ ತಾಜಾ ಸಾಕ್ಷಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ತಾಣಗಳಲ್ಲಿ ಜನರನ್ನು ಸೆಳೆಯುವ ವಿಚಾರವಾಗಿ ಹಿಂದೆಂದಿಗಿಂತಲೂ ಪೈಪೋಟಿ ಹೆಚ್ಚಾಗಿದೆ. ಮುಖ್ಯವಾಗಿ, ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಟ್ವಿಟರ್ ಪೈಪೋಟಿ ಬಹಳ ಜೋರಾಗಿದೆ. ಎರಡೂ ಪಕ್ಷಗಳ ಅಧಿಕೃತ ಟ್ವಿಟರ್ ಖಾತೆಗಳು ವ್ಯವಹರಿಸುವ ರೀತಿಯಲ್ಲಿಯೇ ಇವುಗಳ ಆದ್ಯತೆಯೂ ಸ್ಪಷ್ಟವಾಗಿ ಕಾಣುತ್ತದೆ.

ಬಿಜೆಪಿ ಕರ್ನಾಟಕಕ್ಕಾಗಿ ಬಳಸುವ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಮಿತ್ ಶಾ ಅವರ ಫೋಟೋವೇ ಹೋಂಪೇಜ್‌ನಲ್ಲಿ ರಾರಾಜಿಸುತ್ತದೆ. ಇತ್ತ ಕಾಂಗ್ರೆಸ್‌ನ ಕರ್ನಾಟಕದ ಟ್ವಿಟರ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಅವರ ಫೋಟೋವನ್ನು ಹೋಂಪೇಜ್‌ನಲ್ಲಿ ದೊಡ್ಡದಾಗಿ ಹಾಕಲಾಗಿದೆ. ಒಂದು ಮೂಲೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಫೋಟೋ ಇದೆ.

ಈ ವಿದ್ಯಮಾನಗಳನ್ನು ಗಮನಿಸಿದಲ್ಲಿ ಒಂದು ವಿಚಾರ ಸ್ಪಷ್ಟವಾಗುತ್ತದೆ. ಬಿಜೆಪಿಯು ಕರ್ನಾಟಕದಲ್ಲಿ ತನ್ನ ಚುನಾವಣಾ ಪ್ರಚಾರದ ಮುಖವಾಗಿ ಅಮಿತ್ ಶಾ ಅವರನ್ನೇ ಮುಂದೆ ಮಾಡಿದೆ. ಅಮಿತ್ ಶಾ ಅವರೇ ಪಕ್ಷದ ಸ್ಟಾರ್ ಪ್ರಚಾರಕ. ಹೀಗಾಗಿ, ಬಿಜೆಪಿ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಮೇಲೆಯೇ ಹೆಚ್ಚು ಗಮನ ನೀಡಿ ಕರ್ನಾಟಕದಲ್ಲಿ ಗೆಲುವಿನ ಸೂತ್ರ ಹೆಣೆಯುತ್ತಿದೆ. ಕೇಂದ್ರ ಸರ್ಕಾರ ವಿವಿಧ ಸಮುದಾಯಗಳಿಗೆ ಮಾಡಿರುವ ಕೆಲಸಗಳ ವಿವರಗಳನ್ನೂ ಬಿಜೆಪಿ ಕರ್ನಾಟಕ ಖಾತೆ ಆಗಾಗ್ಗೆ ತಿಳಿಸುತ್ತಿರುವುದೂ ಇದನ್ನೇ ಸೂಚಿಸುತ್ತದೆ. ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಎಂದು ಒಪ್ಪಿಕೊಂಡು ಜನರ ಮುಂದಿಡುತ್ತಿದ್ದರೂ, ಅವರು ಚುನಾವಣೆ ಗೆದ್ದುಕೊಡುತ್ತಾರೆ ಎನ್ನುವ ಸಂಪೂರ್ಣ ನಂಬಿಕೆ ಪಕ್ಷದಲ್ಲಿ ಇದ್ದ ಹಾಗಿಲ್ಲ. ಹೀಗಾಗಿ ಅವರನ್ನು ಸ್ಟಾರ್ ಪ್ರಚಾರಕರೆಂದು ಬಿಂಬಿಸುತ್ತಲೂ ಇಲ್ಲ.

ಇತ್ತ, ಕಾಂಗ್ರೆಸ್ ಪಕ್ಷ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸಿನ ಮೇಲೆಯೇ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಟ್ವಿಟರ್ ಖಾತೆ ಪರಿಶೀಲಿಸಿದರೆ, ರಾಹುಲ್ ಗಾಂಧಿ ಅವರ ಪ್ರಚಾರ ವಿವರಗಳು ಇದ್ದರೂ, ಮುಖ್ಯವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆಯ ಬಗ್ಗೆಯೇ ಹೆಚ್ಚು ವಿವರಗಳಿವೆ. ಅಲ್ಲದೆ, ಸ್ಥಳೀಯ ವಿಚಾರಗಳನ್ನೇ ಪ್ರಮುಖವಾಗಿ ಮುಂದಿಡುತ್ತಿದೆ. ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ಬಳಸಿಕೊಂಡರೂ, ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಮೇಲೆಯೇ ಗಮನ ಕೇಂದ್ರೀಕರಿಸಿ ಚುನಾವಣೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ.

ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಗುರುತಿಸಿರುವ ರೀತಿಯಲ್ಲಿಯೂ ಕೇಂದ್ರ ವರ್ಸಸ್ ರಾಜ್ಯ ಸರ್ಕಾರದ ಸಾಧನೆಗಳೇ ಮುಖ್ಯವಾಗಿ ಚರ್ಚೆಗೆ ಒಳಗಾಗಿವೆ. ಕಾಂಗ್ರೆಸ್ ಟ್ವಿಟರ್ ಖಾತೆ ಬಿಜೆಪಿಯ ಕೇಂದ್ರ ಮತ್ತು ಇತರ ರಾಜ್ಯಗಳಲ್ಲಿರುವ ಸರ್ಕಾರಗಳ ವೈಫಲ್ಯವನ್ನು ಎತ್ತಿಹಿಡಿಯುವ ಟ್ವೀಟ್‌ಗಳನ್ನೇ ಆಗಾಗ್ಗೆ ಹಾಕುತ್ತಿದೆ. ಅತ್ತ ಬಿಜೆಪಿ ಟ್ವಿಟರ್ ಖಾತೆ ಸಂಪೂರ್ಣವಾಗಿ ತನ್ನ ಟೀಕೆಯನ್ನು ಸ್ಥಳೀಯ ಕಾಂಗ್ರೆಸ್ ಸರ್ಕಾರದ ಮೇಲೆಯೇ ಗುರಿ ಮಾಡಿದೆ. ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಸಚಿವರು ಮತ್ತು ಆಡಳಿತದ ವೈಫಲ್ಯವನ್ನು ಎತ್ತಿತೋರಿಸುವ ಪ್ರಯತ್ನ ಮಾಡಿದೆ.

ಕಾಂಗ್ರೆಸ್ ಹಾಕಿಕೊಂಡಿರುವ ಪಿನ್ಡ್ ಟ್ವೀಟ್ ಕೂಡ ಇದಕ್ಕೆ ಉತ್ತಮ ಉದಾಹರಣೆ. ಬಿಜೆಪಿಯ ಜಂಗಲ್ ರಾಜ್ ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ, ಶಿವಸೇನಾ ನಾಯಕರನ್ನು ಕೊಲೆ ಮಾಡಿರುವ ಆರೋಪದಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಬಂಧನಕ್ಕೆ ಒಳಗಾಗಿರುವುದು ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ ಮಹಿಳೆಯ ಅತ್ಯಾಚಾರ ಆರೋಪ ಎದುರಿಸುತ್ತಿರುವುದು, ಸರ್ಕಾರ ಅದೇ ಮಹಿಳೆಯ ತಂದೆಯನ್ನು ಬಂಧಿಸಿರುವ ವಿಚಾರಗಳನ್ನು ತನ್ನ ಪ್ರಥಮ ಟ್ವೀಟ್‌ನಲ್ಲಿ ಕಾಂಗ್ರೆಸ್ ಟೀಕಿಸಿದೆ. ಬದಲಾವಣೆ ತರುವ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ಯಾವ ರೀತಿಯ ನ್ಯಾಯವನ್ನು ರಾಜ್ಯಗಳಲ್ಲಿ ನೀಡುತ್ತಿದೆ ಎನ್ನುವುದನ್ನು ಉದಾಹರಣೆ ನೀಡಿ ಕಾಂಗ್ರೆಸ್ ಟ್ವಿಟರ್ ಖಾತೆ ಟೀಕಿಸಿದೆ.

ಬಿಜೆಪಿಯ ಟ್ವಿಟರ್ ಖಾತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಟೀಕಿಸುವ ಟ್ವೀಟ್ ಅನ್ನು ತನ್ನ ಪಿನ್ಡ್ ಟ್ವೀಟ್ ಅಥವಾ ಪ್ರಥಮ ಟ್ವೀಟ್ ಆಗಿ ಮುಂದಿಟ್ಟಿದೆ. ಅಲ್ಲದೆ, ಮೇ ೧೫ರಂದು ಬಿಜೆಪಿ ಬಹುಮತದಲ್ಲಿ ಗೆದ್ದುಬರಲಿದೆ ಮತ್ತು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರ ಆಡಳಿತಕ್ಕೆ ಕೊನೆ ಹಾಡಲಿದೆ ಎಂದು ಹೇಳಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಒಂದು ಹೆಜ್ಜೆಯಷ್ಟೇ ನಾವು ಹಿಂದಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಬಿಜೆಪಿಯ ಮುಖ್ಯ ಗುರಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದೇ ಆಗಿದೆ ಎನ್ನುವುದು ಅದರ ಟ್ವಿಟರ್ ದಾಳಿಗಳನ್ನು ಗಮನಿಸಿದರೆ ಖಚಿತವಾಗುತ್ತದೆ.

ಪಕ್ಷಗಳ ಅಧಿಕೃತ ಟ್ವಿಟರ್ ಖಾತೆಗಳು ಮಾತ್ರವಲ್ಲ, ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಟ್ವಿಟರ್ ಖಾತೆಗಳಲ್ಲೂ ಇದೇ ರೀತಿಯ ಟ್ರೆಂಡ್ ಕಾಣಬಹುದು. ಆರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟ್ವಿಟರ್ ಖಾತೆಗಳಲ್ಲಿ ಪರಸ್ಪರರ ಸಾಧನೆ ಮತ್ತು ವೈಫಲ್ಯಗಳ ವಿಚಾರವಾಗಿ ಬಹಿರಂಗ ವಾದ-ವಿವಾದ ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ಕಾಂಗ್ರೆಸ್‌ನ ಬಹುತೇಕ ನಾಯಕರು ಮತ್ತು ಅಧಿಕೃತ ಖಾತೆಗಳು ಕರ್ನಾಟಕೇತರ ಬಿಜೆಪಿ ನಾಯಕರನ್ನೇ ಟೀಕಿಸುತ್ತವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಪ್ರಮುಖವಾಗಿ ಕಾಂಗ್ರೆಸ್ ನಾಯಕರ ಟೀಕೆಗೆ ಒಳಗಾಗಿದ್ದರೂ, ಅಮಿತ್ ಶಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಮತ್ತು ಇನ್ನೂ ಇತರ ಬಿಜೆಪಿ ನಾಯಕರ ವೈಫಲ್ಯಗಳನ್ನು ವಿವರಿಸುವ ಟೀಕೆಗಳನ್ನು ಕಾಂಗ್ರೆಸ್ ಟ್ವಿಟರ್ ಖಾತೆಗಳು ಮುಖ್ಯವಾಗಿ ಗುರಿ ಮಾಡಿವೆ.

ಇದನ್ನೂ ಓದಿ : ಸಂಕಲನ | ಅಮಿತ್‌ ಶಾ ಚುನಾವಣಾ ತಂತ್ರಗಾರಿಕೆ ಕುರಿತು ‘ದಿ ಸ್ಟೇಟ್’ ಪ್ರಕಟಿಸಿದ ಲೇಖನಗಳು

ಬಿಜೆಪಿಯ ನಾಯಕರು ತಮ್ಮ ಟ್ವಿಟರ್ ಖಾತೆಗಳಲ್ಲಿ ಮುಖ್ಯವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರನ್ನೇ ಗುರಿ ಮಾಡಿಕೊಂಡಿವೆ. ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದಲ್ಲಿದ್ದಾಗ ಮಾತ್ರ ಬಿಜೆಪಿ ಟ್ವಿಟರ್ ಖಾತೆಗಳ ಟೀಕೆಗೆ ಗುರಿಯಾಗುತ್ತಾರೆ. ಉಳಿದಂತೆ ಬಿಜೆಪಿ ನಾಯಕರು ಮುಖ್ಯವಾಗಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸಚಿವರ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಸಾಮಾನ್ಯವಾಗಿ ರಾಹುಲ್ ಗಾಂಧಿ ವಿಚಾರವಾಗಿ ಟೀಕಿಸಲು ಕೇಂದ್ರ ಸರ್ಕಾರದ ಸಚಿವರನ್ನೇ ಬಿಜೆಪಿ ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಎಂದಿಗೂ ಟ್ವಿಟರ್ ಮೂಲಕ ರಾಹುಲ್ ಗಾಂಧಿಯವರ ಮೇಲೆ ನೇರವಾಗಿ ಟೀಕಿಸಿದ್ದು ಕಡಿಮೆ. ಆದರೆ ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ಅಮಿತ್ ಶಾ ಈ ಸಂಪ್ರದಾಯವನ್ನು ಮುರಿದಿದ್ದಾರೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತ ದಲಿತರ ಬಗ್ಗೆ ಕೇಂದ್ರ ಸರ್ಕಾರ ತೋರಿಸಿರುವ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದರು. ಈ ವಿಚಾರವಾಗಿ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಅಮಿತ್ ಶಾ ಟ್ವಿಟರ್ ಬಳಸಿ ರಾಹುಲ್ ಗಾಂಧಿಗೆ ಉತ್ತರಿಸಿದ್ದರು. ಅಲ್ಲದೆ, ಹಿಂದೆಂದೂ ತಮ್ಮ ಸರ್ಕಾರವನ್ನು ಅಥವಾ ತಮ್ಮನ್ನು ಸಮರ್ಥಿಸಿಕೊಳ್ಳುವ ಡಿಫೆನ್ಸ್ ಮೋಡ್‌ಗೆ ಅಮಿತ್ ಶಾ ಹೋಗಿರಲಿಲ್ಲ. ಈ ಚುನಾವಣೆಯಲ್ಲಿ ಬಹಳ ಬಾರಿ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯನವರು ತಮ್ಮನ್ನು ಹಿಂದೂ ಅಲ್ಲ, ಜೈನ್ ಎಂದು ಹೇಳಿದಾಗಲೂ ಅಮಿತ್ ಶಾ ತಕ್ಷಣವೇ ತಮ್ಮ ಧರ್ಮ ಮತ್ತು ಆಚರಣೆಯನ್ನು ಸಮರ್ಥಿಸಿಕೊಂಡಿದ್ದರು.

ಒಟ್ಟಾರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಧಿಕೃತ ಟ್ವಿಟರ್ ಖಾತೆಗಳನ್ನು ಗಮನಿಸಿದಲ್ಲಿ, ಬಿಜೆಪಿ ತನ್ನ ರಾಷ್ಟ್ರೀಯ ಅಸ್ಮಿತೆಯನ್ನು ಸಮರ್ಥಿಸಿಕೊಳ್ಳುತ್ತ, ಕರ್ನಾಟಕದ ಹಿತಾಸಕ್ತಿ ಕಾಪಾಡುವ ಭರವಸೆ ನೀಡಲು ಪ್ರಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್ ಸ್ಥಳೀಯ ಭಾಷೆ, ನೆಲ-ಜಲ, ಸಂಸ್ಕೃತಿಯ ರಕ್ಷಕ ಪಕ್ಷವೆಂದು ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿ, ಸದ್ಯದ ಮಟ್ಟಿಗೆ ಬಿಜೆಪಿಯ ಚುನಾವಣಾ ಪ್ರಚಾರವು ಅಮಿತ್ ಶಾ ಅವರನ್ನು ಮುಂದು ಮಾಡಿ ಯಡಿಯೂರಪ್ಪನವರನ್ನು ಹಿಂದಿನ ಸಾಲಿನಲ್ಲಿ ಕೂರಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More