ಅಣ್ಣಾ ಆಂದೋಲನದ ಸೋಲು ಅವರ ಸೋಲಲ್ಲ, ಭಾರತದ ಜನಸಾಮಾನ್ಯರ ಸೋಲು

ಆರೂವರೆ ವರ್ಷದ ಹಿಂದೆ ಅಣ್ಣಾ ಹೋರಾಟವನ್ನು ‘ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ’ವೆಂದೂ, ಆಂದೋಲನದ ಮೊದಲ ಗೆಲುವನ್ನು ‘ದೇಶದ ಜನಸಾಮಾನ್ಯರ ದಿಗ್ವಿಜಯ’ ಎಂದೂ ಬಣ್ಣಿಸಲಾಗಿತ್ತು. ಆದರೆ, ಈ ನಡುವೆ ಅದು ನಗಣ್ಯವಾಗಿ ಕುಸಿದುಹೋಗಿದ್ದು ಯಾಕೆ? ಈ ಏಳುಬೀಳಿನ ಹಾದಿಯ ಪಾಠಗಳೇನು?

“ಇವತ್ತಿನವರೆಗೆ ಭಾರತೀಯರು ದೇಶದಲ್ಲಿ ಭ್ರಷ್ಟಾಚಾರವನ್ನು ತೊಲಗಿಸುವುದು ಸಾಧ್ಯವೇ ಇಲ್ಲ ಎಂದುಕೊಂಡಿದ್ದರು. ಅದು ನಮ್ಮ ಡಿಎನ್‌ಎನಲ್ಲಿ ಸೇರಿಹೋಗಿರುವ ವಾಸ್ತವ ಎಂದೇ ಭಾವಿಸಿದ್ದರು. ಆದರೆ, ಭ್ರಷ್ಟಾಚಾರದ ಅಂತ್ಯ ಇಂದಿನಿಂದ ಆರಂಭವಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಅದು ಭ್ರಷ್ಟಾಚಾರವನ್ನು ಕಡಿಮೆ ಮಾಡಲಿದೆ...”

-ಈ ಮಾತನ್ನು ಹೇಳಿದವರು ದೇಶದ ಪ್ರಮುಖ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ದೀಪಾಂಕರ್ ಗುಪ್ತಾ. ಸಂದರ್ಭ; ಲೋಕಪಾಲ ಕಾಯ್ದೆ ಜಾರಿ ಸೇರಿದಂತೆ ಭ್ರಷ್ಟಾಚಾರ ವಿರೋಧಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರದ ಅಂದಿನ ಯುಪಿಎ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರು ತಮ್ಮ ೧೨ ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟ ಕ್ಷಣ. ಅಣ್ಣಾ ಅವರ ಭಾರಿ ಜನಬೆಂಬಲದ ಹೋರಾಟಕ್ಕೆ ಮಣಿದ ಸರ್ಕಾರ ಲೋಕಪಾಲ ಮಸೂದೆಯ ಪರಿಣಾಮಕಾರಿ ಜಾರಿಗೆ ಪೂರಕವಾಗಿ ಸಂಸತ್ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ, ಅಣ್ಣಾ ಹೋರಾಟವನ್ನು ‘ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ’ವೆಂದೂ, ಆಂದೋಲನದ ಆ ಗೆಲುವನ್ನು ‘ದೇಶದ ಜನಸಾಮಾನ್ಯರ ದಿಗ್ವಿಜಯ’ ಎಂದೂ ಬಣ್ಣಿಸಲಾಗಿತ್ತು.

ದೀಪಾಂಕರ್ ಗುಪ್ತಾ ಅವರ ಹೇಳಿಕೆ ಮತ್ತು ಅಣ್ಣಾ ಹೋರಾಟವನ್ನು ಮಾಧ್ಯಮಗಳು, ಹೋರಾಟಗಾರರು, ರಾಜಕೀಯ ವಿಶ್ಲೇಷಕರು, ಬುದ್ದಿಜೀವಿಗಳು ಮತ್ತು ಬಹಳ ಮುಖ್ಯವಾಗಿ ಟಿವಿ ಆ್ಯಂಕರುಗಳು ಬಣ್ಣಿಸಿದ ಪದಪುಂಜಗಳನ್ನು ಗಮನಿಸಿದರೆ, ಆರೂವರೆ ವರ್ಷಗಳ ಹಿಂದೆ ಆ ಹೋರಾಟ ಹುಟ್ಟಿಸಿದ ಭರವಸೆ ಮತ್ತು ಒಂದುಬಗೆಯ ನಿರಾಳತೆಯ ಅರಿವಾಗದೆ ಇರದು.

ಎಂದೂ ಸಾರ್ವಜನಿಕ ಹಿತಾಸಕ್ತಿಯ ವಿಷಯಕ್ಕೆ ತಲೆಕೆಡಿಸಿಕೊಳ್ಳದ ಐಟಿ-ಬಿಟಿ ಉದ್ಯೋಗಿಗಳು, ಕಾರ್ಪರೇಟ್ ಉದ್ಯಮಿಗಳು, ಹೈಫೈ ಬುದ್ದಿಜೀವಿಗಳು ಕೂಡ ಅಣ್ಣಾ ಅವರ ಆ ಹೋರಾಟ ಹುಟ್ಟಿಸಿದ್ದ ಭರವಸೆಗೆ ತಲೆಬಾಗಿ ರಸ್ತೆಗಿಳಿದು ನಿರಶನದ ಪಾಳಿಗೆ ಸೇರಿದ್ದರು. ದೇಶದ ಪ್ರತಿ ನಗರ, ಪಟ್ಟಣ, ಬೀದಿ, ಮೈದಾನ, ವೃತ್ತಗಳಲ್ಲೂ ಮಾರ್ದನಿಸಿದ ಅಣ್ಣಾ ಅವರ ಅಂದಿನ ಹೋರಾಟ, ಅಂದಿನ ಯುಪಿಎ ಸರ್ಕಾರ ಇಡಿಯಾಗಿ ಮಂಡಿಯೂರುವಂತೆ ಮಾಡಿತ್ತು ಮತ್ತು ಆ ಮೂಲಕ ದೇಶದ ಭ್ರಷ್ಟಾಚಾರದ ಇತಿಹಾಸಕ್ಕೆ ಒಂದು ಅಂತ್ಯ ಹಾಡುವ, ಜನಸಾಮಾನ್ಯರ ದಶಕಗಳ ಹತಾಶೆ ಮತ್ತು ಆಕ್ರೋಶಕ್ಕೆ ಮುಕ್ತಿ ಹಾಡುವ ಭಾರಿ ಭರವಸೆಯನ್ನೂ ಹುಟ್ಟುಹಾಕಿತ್ತು. ಭ್ರಷ್ಟಮುಕ್ತ ಭಾರತದ ಕನಸು ಕೈಗೂಡಿದ ನಿರಾಳತೆ ಕಂಡಿತ್ತು.

ಆದರೆ, ಅಂದಿನ ಯುಪಿಎ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಅದೇ ಹೋರಾಟ ಹುಟ್ಟಿಸಿದ ಅಧಿಕಾರ ವಿರೋಧಿ ಅಲೆಯನ್ನು ಜೀವಂತವಾಗಿಡುವಲ್ಲಿ ಯಶಸ್ವಿಯಾದ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅದೇ ಭ್ರಷ್ಟಾಚಾರ ಮುಕ್ತ ಭಾರತದ ಆಶ್ವಾಸನೆ ನೀಡಿ ೨೦೧೪ರ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಲೋಕಪಾಲ ಹೋರಾಟಕ್ಕೆ ಬೆಂಬಲ ನೀಡಿದ್ದ ಅದೇ ಪಕ್ಷದ ಸರ್ಕಾರ, ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂಬ ಹೆಗ್ಗಳಿಕೆಯ ಮೋದಿ ಅವರೇ ಆ ಸರ್ಕಾರದ ಚುಕ್ಕಾಣಿ ಹಿಡಿದಿದ್ದರೂ ಲೋಕಪಾಲ ಕಾಯ್ದೆ ಜಾರಿ ನಿಜವಾಗಿಲ್ಲ.

ಆರೂವರೆ ವರ್ಷಗಳಲ್ಲಿ ಎರಡು ಬಾರಿ ನಿರಶನ ನಡೆಸಿದ ಅಣ್ಣಾ, ಮೊನ್ನೆ ತಾನೆ ಮೂರನೇ ಬಾರಿಯ ತಮ್ಮ ನಿರಶನವನ್ನು ಕೂಡ ಮುಕ್ತಾಯಗೊಳಿಸಿದ್ದಾರೆ. ಹಿಂದಿನ ಎಲ್ಲ ಬಾರಿಯಂತೆ ಈ ಬಾರಿಯೂ, “ಇದು ನಮ್ಮ ನಿರಶನದ ಅಂತ್ಯವಲ್ಲ; ಕೇವಲ ವಿರಾಮವಷ್ಟೇ. ಸರ್ಕಾರ ಆರು ತಿಂಗಳಲ್ಲಿ ತನ್ನ ಮಾತಿನಂತೆ ನಡೆದುಕೊಂಡು ಲೋಕಪಾಲ ಕಾಯ್ದೆ ಜಾರಿಗೆ ತರದಿದ್ದಲ್ಲಿ ಮತ್ತೆ ನಿರಶನ ಆರಂಭಿಸಲಾಗುವುದು,” ಎಂದು ಹೇಳಿದ್ದಾರೆ. ಅಣ್ಣಾ ಅವರ ನಿರಶನದ ನಿರ್ಧಾರ, ಧ್ಯೇಯ, ಉದ್ದೇಶ ಮತ್ತು ನಿರಂತರ ಸರ್ಕಾರಗಳು ಭ್ರಷ್ಟಮುಕ್ತ ಭಾರತದ ಅವರ ಆಶಯಕ್ಕೆ ಸ್ಪಂದಿಸುತ್ತಿರುವ ರೀತಿ ಸೇರಿದಂತೆ ಎಲ್ಲವೂ ಕಳೆದ ಆರೂವರೆ ವಸಂತಗಳಲ್ಲಿ ಬಹುತೇಕ ಒಂದೇ ರೀತಿಯಲ್ಲಿವೆ. ಮಹತ್ವದ ಬದಲಾವಣೆಗಳೇನೂ ಆಗಿಲ್ಲ.

ಆದರೆ, ಮಹತ್ವದ ಬದಲಾವಣೆಯಾಗಿರುವುದು ಅಣ್ಣಾ ಹೋರಾಟವನ್ನು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವಾಗಿ ಬಿಂಬಿಸಿದ್ದ ಮಾಧ್ಯಮಗಳು (ವಿಶೇಷವಾಗಿ ಟಿವಿ ಮಾಧ್ಯಮ) ಹಾಗೂ ಅವರ ಎಡಬಲಕ್ಕೆ ಕಾಣಿಸಿಕೊಂಡಿದ್ದ ಅವರ ಹೋರಾಟದ ಕಟ್ಟಾಳುಗಳ ವರಸೆಯಲ್ಲಿ. ಅಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಅವರ ಚಳವಳಿಯನ್ನು ಕಣ್ಣುಮಿಟುಕಿಸದೆ ಮನೆಮನೆಗೆ ಪ್ರಸಾರ ಮಾಡಿದ ಟಿವಿ ವಾಹಿನಿಗಳ ಕಣ್ಣು ಈ ಬಾರಿ ಕುರುಡಾಗಿದೆ. ಅಂದು ಅವರ ಎಡಬಲದಲ್ಲಿ ನಿಂತು ಭ್ರಷ್ಟಾಚಾರದ ವಿರುದ್ಧ ಘರ್ಜಿಸಿದ್ದ ಹುಲಿಗಳು ಈಗ ಆಯಕಟ್ಟಿನ ತಾಣಗಳಲ್ಲಿ ನಿರಾಳವಾಗಿ ನಿದ್ದೆಹೋಗಿವೆ. ಅಣ್ಣಾ ಜಪ ಮಾಡುತ್ತ ದೇಶದ ಮೂಲೆಮೂಲೆಯಿಂದ ರಾಮಲೀಲಾ ಮೈದಾನಕ್ಕೆ ಲಗ್ಗೆ ಇಟ್ಟಿದ್ದ ಲಕ್ಷಾಂತರ ಯುವಕ-ಯುವತಿಯರು (ವಿಶೇಷವಾಗಿ ಐಟಿ-ಬಿಟಿ ಉದ್ಯೋಗಿಗಳು) ಈಗ ಅಂತಹದ್ದೊಂದು ಹೋರಾಟ ನಡೆದಿತ್ತು ಎಂಬುದನ್ನೇ ಮರೆತಿರುವ ಅಮಲಿಗೆ ಜಾರಿದ್ದಾರೆ (ಅದು ‘ಭಕ್ತಿ’ಯ ಅಮಲೇ ಎಂದು ಕೇಳಿದರೆ ಕುಚೋದ್ಯವಾದೀತು!).

ಹಾಗಾಗಿ, ಮೊನ್ನೆ ಮಾ.೨೩ರಿಂದ ೨೯ರವರೆಗೆ ಆರು ದಿನಗಳ ಕಾಲ ಅದೇ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಅಣ್ಣಾ ಅವರು ನಿರಶನ ಕೂತಾಗ ಅವರಿಗೆ ದನಿಗೂಡಿಸಿದವರು ಕೇವಲ ಕೆಲವೇ ನೂರು ಮಂದಿ ಮಾತ್ರ. ಅದರಲ್ಲೂ ಬಹುತೇಕ ರೈತರು ಮತ್ತು ಕೃಷಿಕಾರ್ಮಿಕರು ಮಾತ್ರ ಅಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಉಳಿದಂತೆ ದೇಶದ ವ್ಯವಸ್ಥೆ ಬದಲಾವಣೆಯ ಸಂಕಲ್ಪ ಮಾಡಿದ್ದ ಕಾರ್ಪೊರೇಟ್ ಉದ್ಯಮಿ-ಉದ್ಯೋಗಿಗಳಾಗಲೀ, ‘ಇಂಗ್ಲಿಷ್’ ಬುದ್ದಿಜೀವಿಗಳಾಗಲೀ ಅತ್ತ ಮುಖ ಕೂಡ ಹಾಕಲಿಲ್ಲ. ಸಹಜವಾಗೇ ಮಾಧ್ಯಮಗಳ ಕ್ಯಾಮೆರಾಗಳು ಆ ಕಡೆ ಕಣ್ಣು-ಕಿವಿ ಒಡ್ಡಲೂ ಇಲ್ಲ. ಯೋಗೇಂದ್ರ ಯಾದವ್ ಹೊರತುಪಡಿಸಿ, ಅರವಿಂದ್ ಕೇಜ್ರಿವಾಲ್ (ಅಣ್ಣಾ ಅವರೇ ಅವರನ್ನು ಬಹಿಷ್ಕರಿಸಿದ್ದರು!), ಕಿರಣ್ ಬೇಡಿ, ಬಾಬಾ ರಾಮ್‌ದೇವ್, ಪ್ರಶಾಂತ್ ಭೂಷಣ್, ಮೇಧಾ ಪಾಟ್ಕರ್, ನ್ಯಾ.ಸಂತೋಷ್‌ ಹೆಗ್ಡೆ ಮುಂತಾದ ಒಂದು ಕಾಲದ ಅಣ್ಣಾ ಬೆಂಬಲಿಗರು ಕೂಡ ಈ ಬಾರಿ ತಮ್ಮ ‘ಬಿಡುವಿರದ ಕಾರ್ಯದೊತ್ತಡ’ದ ನಡುವೆ ಪುರುಸೊತ್ತು ಮಾಡಿಕೊಳ್ಳಲಿಲ್ಲ! ಭೂಷಣ್ ಮತ್ತು ಮೇಧಾ ಅವರಂತೂ ದೆಹಲಿಯಲ್ಲೇ ಇದ್ದರೂ ರಾಮಲೀಲಾ ಮೈದಾನದತ್ತ ಮುಖ ಹಾಕಲಿಲ್ಲ! ಹಾಗಾದರೆ, ಅಣ್ಣಾ ಆಂದೋಲನ ಕೇವಲ ಆರು ವರ್ಷಗಳಲ್ಲೇ ತನ್ನ ಕಾವು ಕಳೆದುಕೊಂಡಿದ್ದು ಯಾಕೆ? ನಿಜವಾಗಿಯೂ ಆಗಿದ್ದೇನು? ಇಂತಹ ಸಹಜ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಸರಳವಿಲ್ಲ.

ದೇಶದ ನಗರವಾಸಿ ಮಧ್ಯಮ ವರ್ಗದ ಪಾಲಿನ ‘ಮಹಾನ್ ಕ್ರಾಂತಿ’ಯಂತೆ ಕಂಡುಬಂದಿದ್ದ, ಮಾಧ್ಯಮಗಳ ಪಾಲಿನ ರೋಚಕ ಟಿಆರ್‌ಪಿ ಕಾಮಧೇನುವಾಗಿದ್ದ ಅಣ್ಣಾ ಆಂದೋಲನ ಇದೀಗ ಆ ಇಬ್ಬರಿಗೂ (ಮಧ್ಯಮ ವರ್ಗ ಮತ್ತು ಮಾಧ್ಯಮ) ಅಪಥ್ಯವಾಗಿದೆ. ಹಾಗಾಗಿ, ಮಹಾರಾಷ್ಟ್ರದ ರೈತ ಹೋರಾಟ ಸೇರಿದಂತೆ ಇತ್ತೀಚಿನ ಕೆಲವು ವರ್ಷಗಳಲ್ಲಿ ದೇಶ ಕಂಡ ರೈತ, ದಲಿತ ಹೋರಾಟಗಳ ಒಂದಂಶದ ಜನ ಕೂಡ ಅಣ್ಣಾ ಅವರ ಜೊತೆ ಈ ಬಾರಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ, ಅಣ್ಣಾ ಅವರು ಉತ್ತರ ಭಾರತದಲ್ಲಿ ಕೊಯ್ಲಿನ ಸಂದರ್ಭದಲ್ಲಿ ಹೋರಾಟ ಹಮ್ಮಿಕೊಂಡರು ಮತ್ತು ಹೋರಾಟದ ದಿನಾಂಕವನ್ನು ಏಕಪಕ್ಷೀಯವಾಗಿ ಅವರೇ ನಿರ್ಧರಿಸಿದರು ಎಂಬಂಥ ಕಾರಣಗಳನ್ನೂ ನೀಡಲಾಗುತ್ತಿದೆ. ಆದರೆ, ಆರೂವರೆ ವರ್ಷಗಳ ಹಿಂದೆ ಅವರೊಂದಿಗೆ ರಾಮಲೀಲಾ ಮೈದಾನದಲ್ಲಿ ಕೂತಿದ್ದವರಲ್ಲಿ ರೈತರು, ಗ್ರಾಮೀಣರ ಸಂಖ್ಯೆ ನಗಣ್ಯ ಎಂಬುದನ್ನು ಮರೆಯಲಾಗದು. ಈ ಹಿನ್ನೆಲೆಯಲ್ಲಿ ಈ ಆಂದೋಲನದ ವೈಫಲ್ಯದ ಹಿಂದೆ ಬೇರೆ ಕಾರಣಗಳಿರಲೇಬೇಕು.

ಮೊದಲನೆಯದಾಗಿ, ೨೦೧೧ರಲ್ಲಿ ಕಾಂಗ್ರೆಸ್ ನೇತೃತ್ವದ ಎರಡು ಅವಧಿಯ ಸರ್ಕಾರದ ಕೊನೆಯ ದಿನಗಳಲ್ಲಿ ಹೊರಬಂದ ಸಾಲು-ಸಾಲು ಭ್ರಷ್ಟಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ, ಲೋಕಪಾಲ ನೇಮಕಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಹೋರಾಟದ ಉದ್ದೇಶ ಸಕಾರಣವಾಗಿತ್ತು. ಆದರೆ, ಆ ಹೋರಾಟಕ್ಕೆ ಬೆಂಬಲವಾಗಿ ನಿಂತವರಲ್ಲಿ ಬಹುತೇಕರಿಗೆ ತಮ್ಮದೇ ವೈಯಕ್ತಿಕ ಅಜೆಂಡಾಗಳಿದ್ದವು. ಅಂತಹ ಅಜೆಂಡಾಗಳು ಅಣ್ಣಾ ಅವರ ಸರಳ ಮತ್ತು ನೇರ ಧ್ಯೇಯ-ಗುರಿಗಳಿಗಿಂತ ಭಿನ್ನವಾಗಿದ್ದವು. ಕೇಜ್ರಿವಾಲ್ ಮತ್ತು ಹಲವು ಆಪ್ ನಾಯಕರು ಹಾಗೂ ಕಿರಣ್ ಬೇಡಿಯಂತಹವರಿಗೆ ಇದ್ದ ರಾಜಕೀಯ ಅಧಿಕಾರದ ಮಹತ್ವಾಕಾಂಕ್ಷೆ ಆ ನಿಟ್ಟಿನಲ್ಲಿ ಎದ್ದುಕಾಣುವ ಒಂದು ಉದಾಹರಣೆಯಷ್ಟೇ. ಉಳಿದವರಿಗೂ ಅವರದ್ದೇ ಆದ ಅಜೆಂಡಾಗಳಿದ್ದವು. ಅವು ಕೆಲವರಿಗೆ ವೈಯಕ್ತಿಕವಾಗಿರಬಹುದು, ಕೆಲವರಿಗೆ ಸಾರ್ವಜನಿಕ ಉದ್ದೇಶದವಾಗಿರಬಹುದು.

ಹಾಗೇ, ಆ ಹೊತ್ತಿಗೆ ಕಾಂಗ್ರೆಸ್ ಸಂಸ್ಕೃತಿ ಮತ್ತು ಅದರ ಆಡಳಿತ ವೈಖರಿಯ ಕುರಿತು ದೇಶಾದ್ಯಂತ ಮಧ್ಯಮ ವರ್ಗ ಮತ್ತು ಕಾರ್ಪೊರೆಟ್ ವಲಯದಲ್ಲಿ ಹುಟ್ಟಿದ್ದ ಒಂದು ರೀತಿಯ ಅಸಹನೆ ಅಥವಾ ಅಸಮಾಧಾನವೂ ಕಟ್ಟೆಯೊಡೆದ ಆಕ್ರೋಶದಂತೆ ಅಣ್ಣಾ ಹೋರಾಟಕ್ಕೆ ನೀರೆರೆದಿತ್ತು. ಜೊತೆಗೆ, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ, ಈ ಹೋರಾಟವನ್ನು ತನ್ನ ಚುನಾವಣಾಪೂರ್ವ ಪ್ರಚಾರಾಂದೋಲನವನ್ನಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೋರಾಟದ ಹೊತ್ತಲ್ಲೇ ಅಣ್ಣಾ ಅವರನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಅಣ್ಣಾ ನಿರಶನ ನಿಲ್ಲಿಸಿದ ಬಳಿಕ ೨೦೧೧ರ ಆಂದೋಲನ ಮುಂದುವರಿದ ರೀತಿಯೇ ಈ ಆರೋಪಗಳನ್ನು ನಿಜ ಮಾಡಿತ್ತು ಎಂಬುದು ಇತಿಹಾಸದ ಭಾಗ. ಕಿರಣ್ ಬೇಡಿ ಅವರು ಎಲ್ಲಿ ರಾಜಕೀಯ ಆಶ್ರಯ ಪಡೆದರು? ಕಾಂಗ್ರೆಸ್ ವಿರುದ್ಧದ ರಾಜಕೀಯ ಬಲವಾಗಿ ಬಳಕೆಗೆ ಬಂದ ಆಮ್ ಆದ್ಮಿ ಪಕ್ಷ ಕೊನೆಗೆ ಬಿಜೆಪಿಗೆ ತಿರುಗುಬಾಣವಾಗಿದ್ದು ಹೇಗೆ? ತಮ್ಮ ನಾಟಕೀಯ ಹೋರಾಟದ ವರಸೆಯ ಮೂಲಕ ಇಡೀ ಆಂದೋಲನವನ್ನು ಸಮರಸದೃಶಗೊಳಿಸಿದ್ದ ಬಾಬಾ ರಾಮ್‌ದೇವ್ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಯೋಗ ಶಿಬಿರಗಳ ಮೂಲಕ ಯಾರ ಪರ ಪ್ರಚಾರ ನಡೆಸಿದರು ಮತ್ತು ಅದಕ್ಕೆ ಪ್ರತಿಯಾಗಿ ಅವರು ಏನೆಲ್ಲ ಪಡೆದರು? ಎಂಬ ಪ್ರಶ್ನೆಗಳು ಮತ್ತು ಅದಕ್ಕೆ ಸಿಗಬಹುದಾದ ಉತ್ತರ ಇನ್ನೂ ಇಡಿಯಾಗಿ ಕಾಲಚಕ್ರದಲ್ಲಿ ಹೂತುಹೋಗಿಲ್ಲ.

ಅಂದರೆ, ಅಣ್ಣಾ ಅವರಂಥ ಅಸಲಿ ದೇಶಭಕ್ತರ, ಅಪಾರ ಜನ ಕಾಳಜಿಯ ಜೀವಗಳ ಸರಳ ಮತ್ತು ಅಹಿಂಸಾ ಚಳವಳಿಯೊಂದು ಹೀಗೆ ಎಲ್ಲ ಅವಕಾಶವಾದಿಗಳ ಪಾಲಿನ ಕಾಮಧೇನುವಾದದ್ದು ಇತಿಹಾಸದ ವ್ಯಂಗ್ಯ. ಆ ಕಾರಣಕ್ಕೆ ಈ ಆಂದೋಲನದ ಪಾಠಗಳು ಕೂಡ ಶತಮಾನಗಳ ಕಾಲ ಮತ್ತೆ-ಮತ್ತೆ ಯೋಚನೆಗೆ ಹಚ್ಚುವಂಥವು ಕೂಡ. ಒಬ್ಬ ಪ್ರಾಮಾಣಿಕ, ಜನಪರ ಕಾಳಜಿಯ, ಗಾಂಧಿವಾದಿ ಮುಗ್ಧ ವ್ಯಕ್ತಿ ಗಳಿಸಿದ ಜನಮನ್ನಣೆ, ಅಭಿಮಾನಗಳನ್ನೇ ಮೆಟ್ಟಿಲಾಗಿಸಿಕೊಂಡು ರಾಜಕೀಯ ಶಕ್ತಿಗಳು ಹೇಗೆ ಅಧಿಕಾರದ ಕುರ್ಚಿಗೆ ಏರುತ್ತವೆ ಎಂಬುದಕ್ಕೂ ಇದೊಂದು ಐತಿಹಾಸಿಕ ನಿದರ್ಶನ.

ಅದೇ ಹೊತ್ತಿಗೆ, ರೋಚಕ ಘಟನೆಗಳ ಬೆನ್ನು ಬಿದ್ದಿರುವ ಟಿವಿ ಮಾಧ್ಯಮ ಹಾಗೂ ತೆರೆಮರೆಯ ಕಾಣದ ಕೈಗಳ ಕೈಗೊಂಬೆಯಾಗಿರುವ ಸಾಮಾಜಿಕ ಜಾಲತಾಣಗಳೇ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರಬಲ ಹತಾರಗಳಾಗಿರುವ ಹೊತ್ತಲ್ಲಿ, ಒಬ್ಬ ರಾಜಕೀಯ-ಸಾಮಾಜಿಕ ಹೋರಾಟಗಾರನಿಗೆ ಜನಸಂಘಟನೆ, ರಾಜಕೀಯ ಸ್ಪಷ್ಟತೆಗಳಷ್ಟೇ ಇದ್ದರೆ ಸಾಲದು. ತನ್ನ ಹೋರಾಟ, ಚಳವಳಿ ತನಗೇ ಅರಿವಿಲ್ಲದಂತೆ ಮತ್ತೊಬ್ಬರ ದಾಳವಾಗಿ ಬಳಕೆಯಾಗದಂತೆ ಎಚ್ಚರಿಕೆ ವಹಿಸುವ ತಂತ್ರಗಾರಿಕೆ ಕೂಡ ಅಗತ್ಯ ಎಂಬುದನ್ನೂ ಈ ಆಂದೋಲನ ಹೇಳಿಕೊಟ್ಟಿದೆ. ಅಂದರೆ, ಹೋರಾಟಗಾರ ಹೋರಾಟಗಳನ್ನು ಸಂಘಟಿಸಿದರೆ ಅಷ್ಟೇ ಸಾಲದು, ಆ ಹೋರಾಟ ಯಾರದೋ ಕೆಲವರು ಅಜೆಂಡಾಗಳಿಗೆ ಬಳಕೆಯಾಗದಂತೆ, ಸಂಪೂರ್ಣವಾಗಿ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ, ಮಾಧ್ಯಮ ಮತ್ತು ಜೊತೆಗಾರರ ಪಳಗಿಸುವ ಕಲೆ ಕೂಡ ಗೊತ್ತಿರಬೇಕು.

ಇದನ್ನೂ ಓದಿ : ಭ್ರಷ್ಟಾಚಾರ ಪ್ರಕರಣ; ಲ್ಯಾಟಿನ್ ಅಮೆರಿಕದ ಜನಪ್ರಿಯ ನಾಯಕ ಲೂಲಾ ಜೈಲುಪಾಲು

ಆದರೆ, ಇಂತಹ ಪಾಠಗಳ ಜೊತೆಗೆ, ಈ ಆಂದೋಲನದ ಸೋಲು ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲು ಕೂಡ. ಏಕೆಂದರೆ, ಹೋರಾಟವೊಂದನ್ನು ಅದು ಎತ್ತುವ ಪ್ರಶ್ನೆಗಳು ಘನತೆ ಮತ್ತು ಗಹನತೆಯ ಮೇಲೆ ಅಳೆಯದೆ, ಅದರಿಂದ ತಮಗೇನು ಲಾಭವಾಗಲಿದೆ (ಮಾಧ್ಯಮಗಳಿಗೆ ಟಿಆರ್‌ಪಿ ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಲಾಭ) ಎನ್ನುವುದರ ಮೇಲೆ ಅದರ ಯಶಸ್ಸು-ವೈಫಲ್ಯಗಳನ್ನು ನಿರೂಪಿಸುವ ನಾಜೂಕಿನ ವಿದ್ಯೆ ಈಗ ಜನಸಾಮಾನ್ಯರ ಕೈಯಲ್ಲಿಲ್ಲ; ಬದಲಾಗಿ, ಅದು ಮಾಧ್ಯಮ ಮತ್ತು ಮಾಧ್ಯಮದ ಪ್ರೀತಿಯ ರಾಜಕೀಯ ಪಕ್ಷಗಳ ಕೈಯಲ್ಲಿದೆ!

ಹಾಗಾಗಿ, ಅಣ್ಣಾ ಆಂದೋಲನದ ಏಳುಬೀಳು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಾರ್ವಜನಿಕ ಬದುಕು ಸಾಗುತ್ತಿರುವ ಹಾದಿಯ ದಿಕ್ಸೂಚಿಯಾಗಿಯೂ ಕಾಣುತ್ತಿವೆ. ಆ ಅರ್ಥದಲ್ಲಿ ಇದು ಅಣ್ಣಾ ಅವರ ಸೋಲಲ್ಲ, ಭಾರತದ ಜನಸಾಮಾನ್ಯರ ಸೋಲು ಕೂಡ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More