ಗಾಂಧಿ ಹತ್ಯೆ ಸಂಚು | 9 | ಪೊಲೀಸ್ ಅಧಿಕಾರಿಗಳ ಪತ್ರಸಮರ ಬಿಚ್ಚಿಟ್ಟ ಲೋಪಗಳೇನು?

ಗಾಂಧಿ ಹತ್ಯೆಯ ಯತ್ನವಾಗಿ ನಡೆದ ದೆಹಲಿಯ ಬಿರ್ಲಾ ಹೌಸ್ ಬಾಂಬ್ ಸ್ಫೋಟ ಪ್ರಕರಣದ ಕುರಿತ ತನಿಖೆಯ ಬಗ್ಗೆ ಬಾಂಬೆ ಐಜಿ ಎನ್ ಎಂ ಕಾಮ್ಟೆ ಮತ್ತು ಸಿಐಡಿ ಡಿಐಜಿ ಯು ಎಚ್ ರಾಣಾ ನಡುವೆ ನಡೆದ ಪತ್ರ ವ್ಯವಹಾರ ತನಿಖಾ ವ್ಯವಸ್ಥೆಯಲ್ಲಿನ ಹಲವು ಲೋಪಗಳ ಬಗ್ಗೆ ಬೆಳಕು ಚೆಲ್ಲುತ್ತದೆ

ಗಾಂಧಿ ಹತ್ಯೆಯ ಸಂಚು ಮತ್ತು ಆ ಸಂಚಿನಲ್ಲಿ ಯಾರೆಲ್ಲ ಪಾಲುದಾರರು? ಸರ್ಕಾರಕ್ಕೆ ಆ ಸಂಚಿನ ಮಾಹಿತಿ ಮೊದಲೇ ಇತ್ತೇ? ಹಾಗಿದ್ದರೆ ಆ ಸಂಚು ವಿಫಲಗೊಳಿಸಲು ಸರ್ಕಾರ ಏನೆಲ್ಲ ಕ್ರಮ ಕೈಗೊಂಡಿತ್ತು? ಹತ್ಯೆ ಆರೋಪದಲ್ಲಿ ಎಷ್ಟು ಮಂದಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಬಂಧಿಸಲಾಗಿದೆ? ಎಂಬ ಬಹಳ ಆಘಾತಕಾರಿ ಉತ್ತರ ಬಯಸುವ ಪ್ರಶ್ನೆಗಳನ್ನು ಬಾಂಬೆ ವಿಧಾನಸಭೆಯಲ್ಲಿ ಮಂಡಿಸಲು ಅವಕಾಶವೇ ಸಿಗಲಿಲ್ಲ. ಹತ್ಯೆಯ ಕುರಿತ ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಅವರ ಪ್ರಶ್ನೆಗಳಿಗೆ ಉತ್ತರ ನೀಡುವುದು ತನಿಖೆಗೆ ಅಡ್ಡಿಯಾಗಬಹುದು ಎಂಬು ಕಾರಣದಿಂದ, ಗೃಹ ಸಚಿವ ಮೊರಾರ್ಜಿ ದೇಸಾಯಿ ಅವರು ಉತ್ತರ ಸಿದ್ದಪಡಿಸಿದ ಬಳಿಕ ಆ ಲಿಖಿತ ಪ್ರಶ್ನೆಗಳನ್ನು ಕೈಬಿಡಲಾಯಿತು.

ಈ ವಿಷಯದ ಸುತ್ತ ತನಿಖೆ ನಡೆಸಿ ವಿಶ್ಲೇಷಿಸಿದ ನ್ಯಾ.ಕಪೂರ್ ಆಯೋಗ, ತನ್ನ ವರದಿಯಲ್ಲಿ ಬಳಿಕ ಬಾಂಬೆ ಐಜಿ ಎನ್ ಎಂ ಕಾಮ್ಟೆ ಮತ್ತು ಸಿಐಡಿ ಡಿಐಜಿ ಯು ಎಚ್ ರಾಣಾ ನಡುವೆ, ದೆಹಲಿ ಬಿರ್ಲಾ ಹೌಸ್ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯ ಕುರಿತ ಪತ್ರ ವ್ಯವಹಾರವನ್ನು ವಿಶ್ಲೇಷಿಸಿದೆ. ೧೯೪೮ರ ಫೆ.೬ರಂದು ಕಾಮ್ಟೆ, ರಾಣಾ ಅವರಿಗೆ ಮೊದಲ ಪತ್ರ ಬರೆದಿದ್ದು, “ನಿಮಗೂ ಕಳುಹಿಸಿದ ಮದನ್‌ ಲಾಲ್‌ನ ತಪ್ಪೊಪ್ಪಿಗೆ ಹೇಳಿಕೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಿದ್ದು, ಅದರ ಪ್ರಕಾರ ಪೂನಾದ ಕೆಲವರು ಗಾಂಧಿ ಹತ್ಯಗೆ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ, ಮೊದಲನೆಯದಾಗಿ, ಈ ಮಾಹಿತಿ ಸಿಕ್ಕ ಬಳಿಕ ಅಂತಹ ಸಂಚು ನಡೆಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಲು ನೀವು ಯಾವ ಕ್ರಮಕೈಗೊಂಡಿದ್ದಿರಿ? ಮತ್ತು ಎರಡನೆಯದಾಗಿ, ಆ ಸಂಚುಕೋರರು ದೆಹಲಿಗೆ ತೆರಳಿದ್ದರೆ ಅಲ್ಲಿ ಅವರ ಬಂಧನಕ್ಕೆ ಯಾವ ಕ್ರಮ ಕೈಗೊಳ್ಳಲಾಗಿತ್ತು?” ಎಂಬ ಎರಡು ಪ್ರಶ್ನೆಗಳಿಗೆ ವಿವರ ನೀಡುವಂತೆ ಕಾಮ್ಟೆ ತಮ್ಮ ಪತ್ರದಲ್ಲಿ ಸೂಚಿಸಿದ್ದರು.

ಆ ಪತ್ರಕ್ಕೆ ಉತ್ತರವಾಗಿ ರಾಣಾ ೧೯೪೮ರ ಫೆ.೨೪ರಂದು ಕಾಮ್ಟೆ ಅವರಿಗೆ ಪತ್ರ ಬರೆದು, ತನಿಖೆಯ ವಿವರಗಳು, ದೆಹಲಿ ಪೊಲೀಸರು ಮತ್ತು ಬಾಂಬೆ ಸ್ಪೆಷಲ್ ಬ್ರಾಂಚ್ ಹಾಗೂ ಪೂನಾ ಸಿಐಡಿ ಕೈಗೊಂಡ ತನಿಖಾ ಕ್ರಮಗಳನ್ನು ವಿವರಿಸಿದ್ದರು.

ರಾಣಾ ವಿವರಣೆಯ ಪ್ರಕಾರ, ಜ.೨೧ರ ಬೆಳಗ್ಗೆ ಇಬ್ಬರು ದೆಹಲಿ ಪೊಲೀಸರು ತಮ್ಮನ್ನು ಭೇಟಿಯಾಗಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆವರೆಗೆ ತಮಗೆ ಲಭ್ಯವಿರುವ ಮಾಹಿತಿಯ ಬಗ್ಗೆ ವಿವರಿಸಿದಾಗ, ಗಾಂಧಿ ಹತ್ಯಗೆ ಸಂಚು ಮಾಡಿರುವ ಆ ಗುಂಪು ಸಾವರ್ಕರ್ ಬೆಂಬಲಿಗರದ್ದೇ ಇರಬೇಕು ಎಂದು ರಾಣಾ ಹೇಳಿದ್ದರು. ಅಲ್ಲದೆ, ಕೂಡಲೇ ಬಾಂಬೆಯ ಮತ್ತು ಪೂನಾಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ನಗರವಾಲ ಹಾಗೂ ರಾವ್ ಸಾಹಿಬ್ ಗುರ್ತು ಅವರನ್ನು ಭೇಟಿಯಾಗಿ ಮಾಹಿತಿ ಪಡೆಯುವಂತೆಯೂ ರಾಣಾ ಸೂಚಿಸಿದ್ದರು. ಆ ಪ್ರಕಾರ ಇಬ್ಬರು ಅಧಿಕಾರಿಗಳನ್ನು ಬಾಂಬೆ ಮತ್ತು ಪೂನಾಕ್ಕೆ ಕಳುಹಿಸಲಾಗಿತ್ತು. ಆ ಹೊತ್ತಿಗಾಗಲೇ ಬಾಂಬೆ ಪೊಲೀಸರು ಸಂಚುಕೋರರಲ್ಲಿ ಒಬ್ಬನಾದ ಕರ್ಕರೆಯ ಕುರಿತು ಕೆಲವು ಮಾಹಿತಿ ಪಡೆದಿದ್ದರು ಮತ್ತು ಬಾಂಬೆ ನಗರ ಪೊಲೀಸರು ಆ ನಿಟ್ಟಿನಲ್ಲಿ ತನಿಖೆಯನ್ನೂ ಅರಂಭಿಸಿದ್ದರು ಎಂಬುದನ್ನೂ ರಾಣಾ ಹೇಳುತ್ತಾರೆ. ತಮ್ಮನ್ನು ಭೇಟಿ ಮಾಡಿದ ದೆಹಲಿ ಪೊಲೀಸ್ ಅಧಿಕಾರಿಗಳು ನ್ಯಾಷನಲ್ ಹೋಟೆಲಿನಲ್ಲಿ ತಂಗಿದ್ದರು. ಆ ಹೋಟೆಲ್‌, ಗಾಂಧಿ ಹತ್ಯೆ ಸಂಚಿನಲ್ಲಿ ಬಾಂಬೆ ನಗರ ಪೊಲೀಸರು ವಶಕ್ಕೆ ಪಡೆದಿದ್ದ ಅವತಾರ್‌ ಸಿಂಗ್‌ನ ಶೇರ್ ಇ ಪಂಜಾಬ್ ಹೋಟೆಲ್ ಇದ್ದ ಪ್ರದೇಶದಲ್ಲೇ ಇತ್ತು.

ದೆಹಲಿ ಪೊಲೀಸ್ ಅಧಿಕಾರಿಗಳು ತಮ್ಮ ರಿವಾಲ್ವರ್ ಸಹಿತ ಸಮವಸ್ತ್ರದಲ್ಲೇ ಇದ್ದರು ಮತ್ತು ಅವರು ಬಾಂಬೆಗೆ ‘ಕಿರ್ಕರೀ’ ಎಂಬಾತನ ಪತ್ತೆಗಾಗಿ ಬಂದಿದ್ದರೇ ವಿನಾ ‘ಕರ್ಕರೆ’ ಹುಡುಕಿಕೊಂಡು ಅಲ್ಲ. ಅಲ್ಲದೆ, ಸ್ವತಃ ಆ ಅಧಿಕಾರಿಗಳಿಗೆ ಬಾಂಬೆಯ ಬಗ್ಗೆ ಏನೂ ತಿಳಿದಿರಲಿಲ್ಲ. ಆ ಅಧಿಕಾರಿಗಳು ನಗರವಾಲ ಅವರನ್ನು ಭೇಟಿ ಮಾಡಿದಾಗ, ಅವರು ಕೂಡಲೇ ವಾಸ್ತವ್ಯದ ಹೋಟೆಲ್ ಬದಲಿಸುವಂತೆ ಸೂಚಿಸಿದರು. ಆಗ ಅವರಿಗೆ ಬಾಂಬೆ ಸಿಐಡಿಯ ಒಬ್ಬ ಅಧಿಕಾರಿ ಮತ್ತೊಂದು ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ಅಲ್ಲದೆ, ಅವರು ತಮ್ಮನ್ನು ಭೇಟಿ ಮಾಡುವುದಾದರೆ ಮುಫ್ತಿಯಲ್ಲಿಯೇ ಬರಬೇಕು ಎಂದೂ ನಗರವಾಲ ಸಲಹೆ ನೀಡಿದ್ದರು.

ದೆಹಲಿಯಿಂದ ಬಂದಿದ್ದ ಪೊಲೀಸ್ ಅಧಿಕಾರಿಗಳ ತನಿಖಾ ಚಟುವಟಿಕೆಗಳಿಗೆ ಬಾಂಬೆಯಲ್ಲಿ ಯಾವ ನಿರ್ಬಂಧವನ್ನೂ ವಿಧಿಸಲಾಗಿರಲಿಲ್ಲ. ಆದರೆ, ಕರ್ಕರೆ ಬಗ್ಗೆ ಬಾಂಬೆಯ ಬೀದಿಗಳಲ್ಲಿ ವಿಚಾರಿಸಿದರೆ ಯಾವ ಪ್ರಯೋಜನವಿಲ್ಲ. ಏಕೆಂದರೆ, ಆತ ಪೂನಾದವನು. ಅಲ್ಲದೆ, ಆತನ ಕುರಿತು ಈಗಾಗಲೇ ಇಲ್ಲಿ ತನಿಖೆ ಆರಂಭವಾಗಿದೆ ಎಂಬುದನ್ನೂ ಹೇಳಲಾಗಿತ್ತು. ಅವತಾರ್ ಸಿಂಗ್‌ನ ವಿಚಾರಣೆ ನಡೆಸುವಂತೆ ಆ ಅಧಿಕಾರಿಗಳಿಗೆ ಹೇಳಲಾಗಿತ್ತು. ಆದರೆ, ಅವರು ಆ ಬಗ್ಗೆ ಆಸಕ್ತಿ ತೋರಲಿಲ್ಲ. ಬಳಿಕ ಕೂಡಲೇ ಅವರು ವಾಪಸ್ಸಾಗಲು ನಿರ್ಧರಿಸಿದರು. ಈ ಅಧಿಕಾರಿಗಳ ಮೂಲಕ ನಾಗರ್ವಾಲರಿಗೆ ಯಾವ ಸೂಚನೆಯೂ ದೆಹಲಿಯಿಂದ ಬಂದಿರಲಿಲ್ಲ. ಹಾಗಾಗಿ ಅವರೂ ಆ ಅಧಿಕಾರಿಗಳನ್ನು ಅಲ್ಲಿಯೇ ಇರುವಂತೆ ಕೇಳಲೂ ಇಲ್ಲ.

ಬಳಿಕ ರಾಣಾರ ಪತ್ರ, ಮದನ್ ಲಾಲ್‌ ಹೇಳಿಕೆಯ ಕುರಿತು ಪ್ರಸ್ತಾಪಿಸಿದೆ. ಜನವರಿ ೨೩ ಅಥವಾ ೨೪ರವರೆಗೆ ಮನನ್‌ ಲಾಲ್ ಯಾವುದೇ ಮಹತ್ವದ ಸುಳಿವು ನೀಡುವ ಹೇಳಿಕೆ ನೀಡಲೇ ಇಲ್ಲ. ಈ ನಡುವೆ ಆ ಇಬ್ಬರು ಪೊಲೀಸ್ ಅಧಿಕಾರಿಗಳು ಜನವರಿ ೨೪ರಂದು ದೆಹಲಿಗೆ ವಾಪಸಾದರು. ಬಳಿಕ ಜನವರಿ ೨೫ರಂದು ತಮ್ಮನ್ನು (ರಾಣಾ) ಭೇಟಿಯಾದರು. ಆ ಬಳಿಕ ಗುಪ್ತಚರ ದಳ ನಿರ್ದೇಶಕರು (ಡಿಐಬಿ) ತಮ್ಮನ್ನು ಕರೆಸಿಕೊಂಡು ಬಾಂಬೆಯಲ್ಲಿ ಆ ಅಧಿಕಾರಿಗಳಿಗೆ ಮುಕ್ತ ಓಡಾಟಕ್ಕೆ ಯಾಕೆ ಅವಕಾಶ ನೀಡಲಿಲ್ಲ ಎಂದು ಕೇಳಿದರು. ಅದಕ್ಕೆ ತಾವು (ರಾಣಾ) ಬಲವಾದ ಕಾರಣವಿಲ್ಲದೆ ನಗರವಾಲ ಹಾಗೆ ಮಾಡಿರಲಿಕ್ಕಿಲ್ಲ ಎಂದು ವಿವರಿಸಿದ್ದಾಗಿ ಹೇಳಿದ್ದಾರೆ. ಜನವರಿ ೨೫ರಂದೇ ರಾಣಾ ಅವರಿಗೆ ಮದನ್‌ ಲಾಲ್ ಹೇಳಿಕೆಯ ಪ್ರತಿ ನೀಡಲಾಯಿತು. ಅವರು ಅಂದು ರಾತ್ರಿಯೇ ಅವರು ದೆಹಲಿಯಿಂದ ಅಲಹಾಬಾದ್ ಮೂಲಕ ರೈಲು ಪ್ರಯಾಣ ಮಾಡಿ, ೨೭ರ ಮಧ್ಯಾಹ್ನ ಬಾಂಬೆಗೆ ತಲುಪಿದರು. ಅಲ್ಲಿ ಅವರಿಗೆ ನಾಗರ್ವಾಲ ಅವರ ತನಿಖೆಯ ದಿಕ್ಕು ಸರಿಯಾಗಿಯೇ ಇರುವುದು ಗೊತ್ತಾಯಿತು. ಇಡೀ ಪ್ರಕರಣದ ಕುರಿತು ಅವರೊಂದಿಗೆ ಚರ್ಚಿಸಲಾಯಿತು ಮತ್ತು ಈಗಾಗಲೇ ಆಗಿರುವ ತನಿಖೆಯ ವಿವರಗಳನ್ನು ಅವರು ಹಂಚಿಕೊಂಡರು. ಆ ಚರ್ಚೆಯಲ್ಲಿ ಗೊತ್ತಾದ ಒಂದು ಅಂಶವೆಂದರೆ; ನಾಗರ್ವಾಲ ಅವರು ಮದನ್‌ ಲಾಲ್ ಸಹಚರರ ಮಾಹಿತಿಯನ್ನು ಒಂದು ರಹಸ್ಯ ಮೂಲದಿಂದ ಆಗಲೇ ಪಡೆದುಕೊಂಡಿದ್ದರು.

ಆ ಬಳಿಕ ಡಿಐಬಿ ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ, “ಮಹಾತ್ಮ ಗಾಂಧಿಯವರ ಜೀವರಕ್ಷಣೆಗಾಗಿ ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ,” ಎಂದು ಸೂಚಿಸಿತ್ತು. “ಡಿಐಬಿಯ ಆ ಮಾತಿನಲ್ಲೇ, ಈಗಾಗಲೇ ಬಾಂಬೆ ಮತ್ತು ದೆಹಲಿ ಪೊಲೀಸರು ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಿರುವುದು ಸ್ಪಷ್ಟವಾಗುತ್ತಿತ್ತು.” ನಾಗರ್ವಾಲ ಅವರು ಅಹಮದ್‌ ನಗರದಲ್ಲಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಹಮದ್‌ ನಗರ ಮತ್ತು ದೆಹಲಿಯಲ್ಲಿ ಕರ್ಕರೆಯನ್ನು ಪತ್ತೆಮಾಡಲು ಪ್ರಯತ್ನಿಸಲಾಗುತ್ತಿತ್ತು. ಆದರೆ, ಆತ ಅಹಮದ್‌ ನಗರಕ್ಕೆ ವಾಪಸಾಗಲೇ ಇಲ್ಲ. ಮಥುರಾ ಮತ್ತು ಆಗ್ರಾವನ್ನು ಸುತ್ತಿಕೊಂಡು ಆತ ಬಾಂಬೆ ವಾಪಸ್ಸಾಗಿದ್ದ. ಬಳಿಕ ೨೭ರಂದು ದೆಹಲಿಗೆ ತಲುಪಿದ್ದ. ದೆಹಲಿ ಪೊಲೀಸರು ಕೂಡ ನಾಗರ್ವಾಲನ ಹೊರತು ಬೇರೆಯವರ ಬಗ್ಗೆ ಮಾಹಿತಿ ಕೇಳಿರಲಿಲ್ಲ. ಆ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ ಎಲ್ಲಾ ಪ್ರಯತ್ನ ನಡೆದಿತ್ತು. ಪೂನಾ ಮತ್ತು ಅಹಮದ್‌ ನಗರದಲ್ಲಿನ ಕರ್ಕರೆಯ ಸಹಚರರನ್ನು ಪತ್ತೆಮಾಡಬಲ್ಲ ಯಾರನ್ನಾದರೂ ಕಳಿಸುವಂತೆ ನಾಗರ್ವಾಲ ತಮನ್ನು ಕೇಳಿದ್ದರು. ಆ ಹಿನ್ನೆಲೆಯಲ್ಲಿ ತಾವು ಜನವರಿ ೨೮ರಂದು ಪೂನಾಕ್ಕೆ ಹೋಗಿ, ಅಲ್ಲಿನ ಡಿಎಸ್‌ಪಿ ಅವರ ಎಲ್‌ಐಬಿ ಇನ್ಸ್‌ಪೆಕ್ಟರ್ ಅಂಗರ್‌ಕರ್‌ ಅವರನ್ನು ತನಿಖೆಗೆ ನೆರವಾಗಲು ಕಳಿಸುವಂತೆ ಕೇಳಿದ್ದೆ. ಆ ಮಾತುಕತೆ ನಡೆದಿದ್ದ ಜ.೨೯ರಂದು. ಆದರೆ, ಇನ್ಸ್‌ಪೆಕ್ಟರ್ ಅಂಗರ್‌ಕರ್ ಅವರು ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಆಗ ಕೊಲಾಬಾದಲ್ಲಿದ್ದ ಡಿವೈಎಸ್ಪಿ ದೆವುಲ್‌ಕರ್‌ ಅವರಿಗೆ ವೈರ್‌ಲೆಸ್‌ ಸಂದೇಶ ಕಳಿಸಿ ಕೂಡಲೇ ಬರುವಂತೆ ಸೂಚಿಸಲಾಯಿತು. ಅವರು ಜ.೩೦ರ ರಾತ್ರಿ ವಾಪಸ್ಸಾದರು. ಗಾಂಧೀ ಹತ್ಯೆ ಮಾಡಿದ ಹಂತಕರು ಕೇಂದ್ರ ಸಚಿವ ಸಂಪುಟದ ಕೆಲವು ಸಚಿವರ ಮೇಲೂ ದಾಳಿ ಮಾಡಲಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಕೂಡಲೇ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವಿಮಾನದ ಮೂಲಕ ಬಾಂಬೆಗೆ ಕಳಿಸಲಾಯಿತು.

ಇದು ರಾಣಾ ಅವರ ಮೊದಲ ಪತ್ರದ ಸಾರಾಂಶ. ಆದರೆ, ನಂತರ ಗೊತ್ತಾದ ಮಾಹಿತಿಯ ಪ್ರಕಾರ, ಹಂತಕರು ಜನವರಿ ೨೮ರ ಬೆಳಗ್ಗೆಯೇ ಬಾಂಬೆಯಿಂದ ಕಾಲ್ಕಿತ್ತಿದ್ದರು. ರಾಣಾ ಅವರ ಈ ಮೊದಲ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಕಾಮ್ಟೆ ಬರೆದ ಪತ್ರದ ಅಂಶಗಳು ಕೂಡ ಅಷ್ಟೇ ಕುತೂಹಲಕಾರಿ.

೧೯೪೮ರ ಮಾರ್ಚ್ ೬ರಂದು ಕಾಮ್ಟೆ ಬರೆದ ಎರಡನೇ ಪತ್ರದಲ್ಲಿ ಹಾಗೂ ಮೊದಲ ಪತ್ರದಲ್ಲಿ ತಾವು ಕೇಳಿದ ಎರಡು ಪ್ರಶ್ನೆಗಳಿಗೆ ರಾಣಾ ಉತ್ತರ ನಕಾರಾತ್ಮಕವಾಗಿದೆ. ಹಾಗಾಗಿ, ಈ ಕೆಳಗಿನ ನಿರ್ದಿಷ್ಟ ಅಂಶಗಳಿಗೆ ಸ್ಪಷ್ಟ ವಿವರಣೆ ನೀಡುವಂತೆ ರಾಣಾ ಅವರಿಗೆ ಸೂಚಿಸಿದ್ದರು.

ವಿವರಣೆ ಬಯಸಿದ್ದ ಅಂಶಗಳು

  • ಜನವರಿ ೨೧ರಂದು ನಿಮ್ಮನ್ನು(ರಾಣಾ) ಭೇಟಿ ಮಾಡಿದ ಇಬ್ಬರು ಪೊಲೀಸ್ ಅಧಿಕಾರಿಗಳು ನಿರ್ದಿಷ್ಟವಾಗಿ ಏನು ಹೇಳಿದರು ಎಂಬುದು ನಿಮ್ಮ ಪತ್ರದಲ್ಲಿ ಸ್ಪಷ್ಟವಾಗಿಲ್ಲ.
  • ದೆಹಲಿಯಿಂದ ಬಂದ ಇಬ್ಬರು ಅಧಿಕಾರಿಗಳು ಬಾಂಬೆ ಮತ್ತು ಪೂನಾದಲ್ಲಿ ಹೆಚ್ಚಿನ ಮಾಹಿತಿ ತೆಗೆಯುವುದು ದುಸ್ತರ. ಆ ಹಿನ್ನೆಲೆಯಲ್ಲಿ ನೀವು ನಮ್ಮದೇ ಸಿಐಡಿ ಮೂಲಕ ಆ ಮಾಹಿತಿ ಕಲೆಹಾಕಲು ಯಾಕೆ ಪ್ರಯತ್ನಿಸಲಿಲ್ಲ?
  • ಆ ಪೊಲೀಸ್ ಅಧಿಕಾರಿಗಳು ನಾಗರ್ವಾಲ ಅವರನ್ನು ಭೇಟಿ ಮಾಡಿದ ಉದ್ದೇಶದ ಬಗ್ಗೆ ಮಾಹಿತಿ ಇಲ್ಲ.
  • ಮದನ್‌ ಲಾಲ್ ಹೇಳಿಕೆಯನ್ನು ಜನವರಿ ೨೫ರಂದೇ ನಿಮಗೆ (ರಾಣಾ) ನೀಡಲಾಗಿದೆ. ೨೭ರ ರಾತ್ರಿಯವರೆಗೆ ಆ ಬಗ್ಗೆ ಅವರು ತೆಗೆದುಕೊಂಡ ಕ್ರಮವೇನು?
  • ಮದನ್‌ ಲಾಲ್‌ ಸಹಚರರ ಆಪ್ತರ ಮೂಲಕ ನಾಗರ್ವಾಲ ಅವರು ಪಡೆದಿರುವ ಮಾಹಿತಿ ನಿಜವಲ್ಲ. ಏಕೆಂದರೆ, ಅವರಿಗೆ ಸಿಕ್ಕಿರುವುದು ಕರ್ಕರೆ ಹೆಸರು ಮಾತ್ರ. ಉಳಿದವರ ಮಾಹಿತಿ ತೀರಾ ಅಂದಾಜಿನದ್ದು ಅಷ್ಟೇ. ಆದರೆ, ಮದನ್‌ ಲಾಲ್‌ ಹೇಳಿಕೆಯಲ್ಲಿ ಗೋಡ್ಸೆ, ಆಪ್ಟೆ, ಬಾಡ್ಗೆ ಸೇರಿದಂತೆ ಇತರ ಆರೋಪಿಗಳ ವಿವರಗಳನ್ನು ನೀಡಲಾಗಿತ್ತು. ಆದರೂ, ೨೫ರ ಸಂಜೆಯ ಬಳಿಕ ಕೂಡ ನೀವು ಅವರನ್ನು ಬಂಧಿಸುವ ಪ್ರಯತ್ನ ಯಾಕೆ ಮಾಡಿಲ್ಲ?
  • ಮಹಾತ್ಮ ಗಾಂಧಿಯವರ ರಕ್ಷಣೆಯ ವಿಷಯದಲ್ಲಿ ಜನವರಿ ೨೭ರಂದು ಡಿಐಬಿಯೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಕೂಡ ನೀವು (ರಾಣಾ), ದೆಹಲಿಗೆ ನಿಮ್ಮ ಸಿಐಡಿ ಅಧಿಕಾರಿಗಳನ್ನು ಮುಂಜಾಗ್ರತಾ ಕ್ರಮವಾಗಿ ಕಳಿಸಲಿಲ್ಲ. ಮದನ್‌ ಲಾಲ್ ಹೇಳಿಕೆಯಲ್ಲಿ ಬಾಂಬೆ ಪ್ರಾಂತ್ಯದ ಕೆಲವರು ಗಾಂಧಿ ಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದ್ದರೂ ನೀವು ಯಾಕೆ ಆ ಕ್ರಮಕ್ಕೆ ಮುಂದಾಗಲಿಲ್ಲ.
  • ಗಾಂಧಿ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗೆ ಸಂಬಂಧಿಸಿದಂತೆ ಬಾಂಬೆ ಪೊಲೀಸರು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ ಎಂಬುದನ್ನು ಕಾಮ್ಟೆ ಒಪ್ಪಿಲ್ಲ. ಕನಿಷ್ಠ ೨೯ರಂದು ರಾಣಾ ಮಾಡಬಹುದಾಗಿದ್ದ ಒಂದು ಒಳ್ಳೆಯ ಕೆಲಸವೆಂದರೆ; ರಾವ್ ಸಾಹಿಬ್ ಗುರ್ತು ಅವರನ್ನು ತುರ್ತಾಗಿ ಕರೆಸಿಕೊಂಡು ತನಿಖೆಗೆ ನಿಯೋಜಿಸುವುದಾಗಿತ್ತು. ಅದನ್ನು ಕೂಡ ಮಾಡಲಿಲ್ಲ.
  • ಪೊಲೀಸ್ ಅಧಿಕಾರಿಗಳನ್ನು ಬಾಂಬೆ ಕಳಿಸಿದ್ದು ಕಾಮ್ಟೆ ಸೂಚನೆ ಮೇರೆಗೆ ವಿನಃ, ರಾಣಾ ತಮ್ಮ ಪತ್ರದಲ್ಲಿ ಹೇಳಿದಂತೆ ಅವರ ಸೂಚನೆಯ ಮೇಲಲ್ಲ. ಹಾಗಾಗಿ ಆ ಕ್ರಮದ ಬಗ್ಗೆ ಅವರು ತಮ್ಮ ಬೆನ್ನು ತಟ್ಟಿಕೊಳ್ಳುವುದು ಅಗತ್ಯವಿಲ್ಲ.
ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | 8 | ಆರೆಸ್ಸೆಸ್ ಪಾತ್ರ ಕುರಿತ ಪ್ರಶ್ನೆ ಬಾಂಬೆ ಸದನದಲ್ಲಿ ಕೇಳಲೇ ಇಲ್ಲ!

ಕಾಮ್ಟೆ ಅವರ ಈ ಖಾರದ ಪತ್ರಕ್ಕೆ ಪ್ರತ್ಯುತ್ತರವಾಗಿ ರಾಣಾ ಕೂಡ ಏಪ್ರಿಲ್ ೧೫ರಂದು ಮತ್ತೊಂದು ಪತ್ರ ಬರೆದರು. ಆ ಪತ್ರ ಒಳಗೊಂಡ ಮಾಹಿತಿ ಬಾಂಬೆ ಮತ್ತು ದೆಹಲಿ ಪೊಲೀಸರ ನಡುವೆ ಬಾಂಬ್ ಪ್ರಕರಣದ ತನಿಖೆ ವಿಷಯದಲ್ಲಿ ಇದ್ದ ಹಲವು ಹೊಂದಾಣಿಕೆಯ ಲೋಪಗಳನ್ನೂ ಬಯಲು ಮಾಡಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More