ಕೊರಟಗೆರೆ; ಪರಮೇಶ್ವರ್ ಮತ್ತು ಸುಧಾಕರ್ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ ಪರಮೇಶ್ವರ್ ಮತ್ತು ಜೆಡಿಎಸ್‌ನ ಸುಧಾಕರ್ ಲಾಲ್ ನಡುವಿನ ಹಣಾಹಣಿಯಲ್ಲಿ ಪರಮೇಶ್ವರ್ ಸೋತಿದ್ದರು. ಆದರೆ, ಈ ಬಾರಿ ಕ್ಷೇತ್ರದ ಜನರ ಜೊತೆಗೆ ಬೆರೆಯುವ ತಂತ್ರ ಬಳಸಿ ಗೆಲುವಿನ ಪ್ರಯತ್ನದಲ್ಲಿದ್ದಾರೆ ಪರಮೇಶ್ವರ್‌

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯದ್ದೇ ನಿರ್ಣಾಯಕ. ಕ್ಷೇತ್ರ ಮರುವಿಂಗಡಣೆಗೂ ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದಾಗ ಜಿದ್ದಾಜಿದ್ದಿ ಕಣವಾಗಿತ್ತು. ಕ್ಷೇತ್ರ ಪುನರ್ ವಿಂಗಡನೆಯ ಬಳಿಕ ಈ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಮಧುಗಿರಿಯಿಂದ ವಲಸೆ ಬಂದ ಪರಮೇಶ್ವರ್, ಒಂದು ಬಾರಿ ಗೆದ್ದು ಒಂದು ಬಾರಿ ಸೋತಿದ್ದಾರೆ. ಜೆಡಿಎಸ್‌ನ ಸುಧಾಕರ್ ಲಾಲ್ ಈಗಿನ ಶಾಸಕ.

೧೯೭೮ರವರೆಗೆ ಕೊರಟಗೆರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ೧೯೫೭ರಿಂದ ೧೯೭೮ರವರೆಗೆ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪ್ರಭಾವ ಎಷ್ಟಿತ್ತೆಂಬುದು ತೋರಿಸುತ್ತದೆ. ೧೯೮೩ ಮತ್ತು ೧೯೮೫ರಲ್ಲಿ ಎರಡು ಬಾರಿಯೂ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸಿ ವೀರಣ್ಣ ಆಯ್ಕೆಯಾಗಿದ್ದರು. ನಾಯಕ ಸಮುದಾಯದ ಸಿ ವೀರಣ್ಣ ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆ ಆಗುವುದು ಸಾಮಾನ್ಯದ ಮಾತಲ್ಲ. ಜನತಾ ಪಕ್ಷದ ಪ್ರಭಾವ ಇದ್ದ ಕ್ಷೇತ್ರ ಇದು. ಬಳಿಕ ರಾಜಕೀಯ ಚಿತ್ರಣವೇ ಬದಲಾಗಿರುವುದು ಕಂಡುಬರುತ್ತದೆ.

೧೯೮೯ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೀರಭದ್ರಯ್ಯ ೩೫,೬೮೪ ಮತ (ಶೇ.೩೭.೮೪) ಪಡೆದು ಆಯ್ಕೆ ಆಗಿದ್ದರು. ೧೯೯೪ರಲ್ಲಿ ಚನ್ನಿಗಪ್ಪ ಜನತಾದಳದಿಂದ ೩೫,೬೭೨ (ಶೇ.೩೩.೫೬) ಮತ ಗಳಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ವೆಂಕಟಾಚಲಯ್ಯ ೨೭,೯೩೯ ಮತ ಗಳಿಸಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಅವರು ಶೇ.೨೬.೨೮ರಷ್ಟು ಮತ ಪಡೆದಿದ್ದರು. ಜನತಾದಳ ಒಡೆದು ಜಾತ್ಯತೀತ ಜನತಾದಳ ಮತ್ತು ಜನತಾದಳ (ಯು) ಆಗಿದ್ದ ಸಂದರ್ಭದಲ್ಲಿ ೧೯೯೯ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸಿ ಚನ್ನಿಗಪ್ಪ ಸ್ಪರ್ಧಿಸಿ ಗೆದ್ದುಬಂದಿದ್ದರು. ೩೩,೫೫೮ ಮತ ಅಂದರೆ, ಶೇಕಡವಾರು ೩೧.೭೧ರಷ್ಟು ಮತ ಗಳಿಸಿದ್ದರು. ಕಾಂಗ್ರೆಸ್‌ ಸಿ ವೀರಭದ್ರಯ್ಯ ೩೨,೮೫೨ ಮತ ಪಡೆದು ಸೋಲನ್ನು ಅನುಭವಿಸಿದ್ದರು. ಅವರು ಶೇ.೩೧.೭೧ರಷ್ಟು ಮತ ಪಡೆದಿದ್ದರು.

೨೦೦೪ರಲ್ಲಿ ಜೆಡಿಎಸ್‌ನಿಂದ ಸಿ ಚನ್ನಿಗಪ್ಪ ಪುನರ್ ಆಯ್ಕೆಯಾದರು. ಸಿ ವೀರಣ್ಣ ಜೆಡಿಯುನಿಂದ ಸ್ಪರ್ಧಿಸಿ ಸೋತರು. ಚನ್ನಿಗಪ್ಪ ೪೧,೮೨೬ ಮತ ಪಡೆದರೆ, ವೀರಣ್ಣ ೩೮,೮೩೨ ಮತ ಪಡೆದು ಸೋಲು ಕಂಡರು. ಕಾಂಗ್ರೆಸ್‌ನ ರಂಗಸ್ವಾಮಿ ೨೫,೭೪೫ ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಶಾಸಕರಾಗಿ ಆಯ್ಕೆಯಾದ ಚನ್ನಿಗಪ್ಪ ಸಚಿವರಾಗಿಯೂ ಕೆಲಸ ಮಾಡಿದರು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಇದ್ದರು.

೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿ ಮಾರ್ಪಡಿಸಲಾಯಿತು. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲು ಕ್ಷೇತ್ರವನ್ನಾಗಿ ಘೋಷಿಸಲಾಯಿತು. ಆಗ ಮಧುಗಿರಿಯಲ್ಲಿದ್ದ ಜಿ ಪರಮೇಶ್ವರ್ ಕೊರಟಗೆರೆ ಕ್ಷೇತ್ರಕ್ಕೆ ಬಂದರು. ಈ ಚುನಾವಣೆಯಲ್ಲಿ ಪರಮೇಶ್ವರ್ ೪೯,೨೭೬ ಮತ ಅಂದರೆ, ಶೇ. ೩೮.೬೫ರಷ್ಟು ಮತ ತಮ್ಮದಾಗಿಸಿಕೊಂಡರು. ಸಾಮಾನ್ಯ ಕಾರ್ಯಕರ್ತರಾಗಿದ್ದ ವಾಲೆ ಚಂದ್ರಯ್ಯ ಜೆಡಿಎಸ್‌ನಿಂದ ಸ್ಪರ್ಧಿಸಿ ೩೭,೭೧೯ ಮತ ಗಳಿಸಿದರು. ಮೊದಲ ಬಾರಿಗೆ ಸ್ಪರ್ಧೆಗೆ ಇಳಿದ ವಾಲೆ ಚಂದ್ರಯ್ಯ, ೨೯.೫೯ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಬಳಿಕ ಅವರು ಬಿಜೆಪಿಗೆ ಜಿಗಿದರು. ಅಂದು ಬಿಜೆಪಿಯಲ್ಲಿದ್ದ ಗಂಗಹನುಮಯ್ಯ ೩೧,೭೪೫ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿಸಿದ್ದರು.

ಇದನ್ನೂ ಓದಿ : ಜೆ ಎಚ್ ಪಟೇಲ್‌ ರಾಜಕೀಯ ಬದುಕು ರೂಪಿಸಿದ ಚನ್ನಗಿರಿ ಮತಕ್ಷೇತ್ರದ ಚರಿತ್ರೆ

೨೦೧೩ರ ಚುನಾವಣೆ ಜಿ ಪರಮೇಶ್ವರ್ ಪಾಲಿಗೆ ಕಹಿ ಘಟನೆ. ಗೆದ್ದರೆ ಮುಖ್ಯಮಂತ್ರಿಯಾಗುವ ಕನಸು ಹೊತ್ತಿದ್ದ ಪರಮೇಶ್ವರ್ ಚುನಾವಣೆಯಲ್ಲಿ ಸೋತರು. ಸೋತರು ಎನ್ನುವುದಕ್ಕಿಂತ ಸ್ವಪಕ್ಷೀಯರೇ ಸೋಲಿಸಿದರು ಎಂಬ ಆಪಾದನೆ ಇದೆ. ಪರಮೇಶ್ವರ್ ಅವರು ಜನಸಾಮಾನ್ಯರ ಜೊತೆಗೆ ಬೆರೆಯುವುದರಲ್ಲಿ ಸ್ವಲ್ಪ ಹಿಂದೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ. ಕ್ಷೇತ್ರದಿಂದ ಜನರು ಮನೆಗೆ ಬಂದರೆ ಅವರನ್ನು ಭೇಟಿ ಮಾಡಿ ಮಾತನಾಡಿಸುವುದೂ ಇಲ್ಲ ಎಂಬ ಆರೋಪಗಳು ಪರಮೇಶ್ವರ್ ಮೇಲಿವೆ. ಹೀಗಾಗಿ, ಜನರು ಬೇಸತ್ತು ಹೋಗಿದ್ದರು ಎಂಬುದು ಆಪ್ತರ ಅಳಲು. ಇಂತಹ ಆರೋಪಗಳನ್ನು ಹೋಗಲಾಡಿಸಲು ಪರಮೇಶ್ವರ್ ದಲಿತ ಮನೆಯಲ್ಲಿ ವಾಸ್ತವ್ಯ ಹೂಡಿದರು. ಕೊರಟಗೆರೆ ಕ್ಷೇತ್ರದ ಮೂರ್ನಾಲ್ಕು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ, ತಾವು ಸಾಮಾನ್ಯರೊಂದಿಗೆ ಬೆರೆಯುವುದಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನವನ್ನು ಮಾಡಿದರು.

೨೦೧೩ರ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಸುಧಾಕರ್ ಲಾಲ್ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿದಾಗ ಅವರು ಅತಿ ಹೆಚ್ಚು ೭೨,೨೨೯ ಮತ ಗಳಿಸಿ ಆಯ್ಕೆಯಾಗಿ, ಪರಮೇಶ್ವರ್ ಅವರನ್ನು ಸುಲಭವಾಗಿ ಮಣಿಸಿದರು. “ಸಾಮಾನ್ಯರು ಮೊಬೈಲ್ ಕರೆ ಮಾಡಿದರೂ ಲಾಲ್ ಸ್ವೀಕರಿಸಿ ಮಾತನಾಡುತ್ತಾರೆ, ಯಾವಾಗ ಬೇಕಾದರೂ ಕೈಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಲಾಲ್ ಅವರನ್ನು ಗೆಲ್ಲಿಸಿದ್ದೇವೆ,” ಎಂಬುದು ಕ್ಷೇತ್ರದ ಮತದಾರರ ಮಾತು.

ಒಟ್ಟಾರೆ, ಕೊರಟಗೆರೆ ಕ್ಷೇತ್ರದಲ್ಲಿ ಸುಧಾಕರ್ ಲಾಲ್ ಮತ್ತು ಜಿ ಪರಮೇಶ್ವರ್ ನಡುವೆ ತೀವ್ರ ಪೈಪೋಟಿ ಇದೆ. ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೈ ಎಚ್ ಹುಚ್ಚಯ್ಯ ಅಭ್ಯರ್ಥಿಯಾಗಿದ್ದಾರೆ. ಇವರೂ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪರಮೇಶ್ವರ್ ಆಯ್ಕೆಯಾದರೆ ದಲಿತ ಮುಖ್ಯಮಂತ್ರಿ ಚರ್ಚೆ ಮತ್ತೆ ಮುನ್ನೆಲೆಗೆ ಬರುತ್ತದೆ. ಪರಮೇಶ್ವರ್ ಅದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More