ಟಿಕೆಟ್ ಹಂಚಿಕೆಯಲ್ಲಿ ವಲಸಿಗರಿಗೆ ಮಣೆ; ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ

ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲ ಸುತ್ತಿನಲ್ಲಿ ಬಿಜೆಪಿಯು 72 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ಬಂಡಾಯದ ಬಿಸಿ ಪಕ್ಷದೊಳಗೆ ಭುಗಿಲೆದ್ದಿದೆ. ವಲಸಿಗರಿಗೆ ಮಣೆಹಾಕಿದ ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾರ್ಯಕರ್ತರ ಆಕ್ರೋಶವನ್ನು ಪಕ್ಷ ಎದುರಿಸುವಂತಾಗಿದೆ

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಮೊದಲ ಸುತ್ತಿನಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಪಟ್ಟಿ ಬಹಿರಂಗಗೊಳಿಸಿದ ಬೆನ್ನಲ್ಲೇ ಬಂಡಾಯದ ಬಿಸಿ ಪಕ್ಷದೊಳಗೆ ಭುಗಿಲೆದ್ದಿದೆ. ಕೆಲ ಕ್ಷೇತ್ರಗಳಲ್ಲಿ ಆಂತರಿಕ ಬಂಡಾಯ ಕಂಡು ಬಂದರೆ ವಲಸಿಗರಿಗೆ ಮಣೆಹಾಕಿದ ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾರ್ಯಕರ್ತರ ಆಕ್ರೋಶವನ್ನು ಬಿಜೆಪಿ ಎದುರಿಸುವಂತಾಗಿದೆ.

ಕಾಂಗ್ರೆಸ್ ತೊರೆದು ಕಮಲ ಪಾಳಯ ಸೇರಿಕೊಂಡಿರುವ ಮೂವರು ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಪಕ್ಷ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನದಿಂದ ಹೊರಬಂದ ಐವರು ಬಿಜೆಪಿ ಸೇರಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇತ್ತ, ಪಕ್ಷೇತರು ಇಬ್ಬರು ಹಾಗೂ ಸಮಾಜವಾದಿ ಪಕ್ಷದ ಒಬ್ಬರಿಗೆ ಟಿಕೆಟ್ ಹಂಚಿಕೆಯಾಗಿದೆ. ಈ ವಲಸಿಗರ ಹನ್ನೊಂದು ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರಾಗಿರುವ ನಿಷ್ಠಾವಂತ ಕಾರ್ಯರ್ತರು ಸಹಜವಾಗಿಯೇ ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ.

ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿ ಗಮನಿಸಿದಾಗ ಗೆಲುವಿಗೆ ಹೆಚ್ಚಿನ ಪೈಪೋಟಿ ಒಡ್ಡಬಹುದಾದ ಅಭ್ಯರ್ಥಿಗಳು ಕಣದಲ್ಲಿರುವಂತೆ ತೋರುತ್ತಿದೆ. ಈ ಪಟ್ಟಿ ಪ್ರಕಟವಾಗುತ್ತಿದ್ದಂತೆ ಟಿಕೆಟ್ ವಂಚಿತ ಆಕಾಂಕ್ಷಿಗಳ ಕಣ್ಣು ಸಹಜವಾಗಿಯೇ ಕೆಂಪಾಗಿದ್ದು, ಬೆಂಗಳೂರು, ಚಿತ್ರದುರ್ಗ, ಹಾವೇರಿ, ಬೆಳಗಾವಿ, ಮಡಿಕೇರಿ ಮತ್ತು ವಿಜಯಪುರ ಆದಿಯಾಗಿ ಹಲವು ಕ್ಷೇತ್ರಗಳ ಹಾಲಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಸದ್ಯ ಎಂಟು ಜನರು ಬಂಡಾಯ ಎದ್ದಿದ್ದಾರೆ. ಕೆಲವರು ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬಿಬಿಎಂಪಿ ಮಾಜಿ ಸದಸ್ಯ ಎನ್ ಆರ್ ರಮೇಶ್ ಅವರು ರಾಜಧಾನಿಯ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದರು. ಆದರೆ, ಇವರ ಬದಲು ಉದ್ಯಮಿ ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಬೇಸರಗೊಂಡಿರುವ ರಮೇಶ್ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಅವರ ಬೆಂಬಲಿಗ ರಾಜೇಂದ್ರ ನಾಯ್ಡು ಎಂಬುವರು ಯಡಿಯೂರಪ್ಪ ಮನೆ ಮುಂದೆಯೇ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕೂಡ ನಡೆದಿದೆ.

ಗರುಡಾಚಾರ್ ಅವರು ಕಳೆದ ಬಾರಿ ಬಿಜೆಪಿ ಮೂಲಕ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇವರಾಜ್ ವಿರುದ್ಧ 13,059 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಕೊಡುವುದು ಅನುಮಾನ ಎನ್ನುವ ಮಾತುಗಳು ಚಾಲ್ತಿಯಲ್ಲಿದ್ದವು. ಹೀಗಾಗಿ ಎನ್ ಆರ್ ರಮೇಶ್ ಅವರು ಕ್ಷೇತ್ರದಲ್ಲಿ ಚಟುವಟಿಕೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಸಿಗದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಮತ್ತೊಂದೆಡೆ ರಾಜಧಾನಿಯ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಜಿ ಎಚ್ ರಾಮಚಂದ್ರ ಅವರು ಆಂತರಿಕವಾಗಿ ಬಂಡಾಯ ಎದ್ದಿದ್ದಾರೆ. ರಾಮಚಂದ್ರ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಿಂದೆ ಎರಡು ಬಾರಿ ಕೂಡ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಟಿಕೆಟ್ ಪಡೆಯಲು ಅವರು ಪ್ರಯತ್ನ ನಡೆಸಿದ್ದರು. ಇದರ ಮಧ್ಯೆಯೇ ನಟ ಗಣೇಶ್ ಪತ್ನಿ ಹಾಗೂ ಬಿಜೆಪಿ ರಾಜ್ಯ ಮಹಿಳಾ ಮೊರ್ಚಾ ಅಧ್ಯಕ್ಷೆ ಶಿಲ್ಪಾ ಗಣೇಶ್ ಅವರು ಈ ಕ್ಷೇತ್ರದ ಆಕಾಂಕ್ಷಿ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೀಗ ಇವರಿಬ್ಬರನ್ನು ಬದಿಗೊತ್ತಿ ಪಿ ಎಂ ಮುನಿರಾಜು ಗೌಡ ಅವರು ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ 3ನೇ ಬಾರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ರಾಮಚಂದ್ರ ಅವರು ಅಸಮಾಧಾನಗೊಂಡಿದ್ದು, ವಲಸಿಗರಿಗೆ ಪಕ್ಷದ ನಾಯಕರು ಮಣೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಉತ್ತರ ಕರ್ನಾಟಕದಲ್ಲೂ ಬಿಜೆಪಿ ವಿರುದ್ಧ ಬಂಡಾಯದ ಬಿಸಿ ಭುಗಿಲೆದ್ದಿದೆ. ಬೈಲಹೊಂಗಲ ಕ್ಷೇತ್ರದ ಮೂಲಕ 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ ಮೆಟಗುಡ್ಡ ಅವರು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಳೆದ ಬಾರಿ ಕೆಜೆಪಿ ಮೂಲಕ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾದ ವಿಶ್ವನಾಥ್ ಪಾಟೀಲ್ ಅವರಿಗೆ ಟಿಕೆಟ್ ದೊರಕಿದೆ. ಇದು ಸಹಜವಾಗಿಯೇ ಮೆಟಗುಡ್ಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಸಮಾಧಾನಗೊಂಡಿರುವ ಅವರ ಅಭಿಮಾನಿಗಳು ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಮೆಟಗುಡ್ಡ ಅವರು ಬಿಜೆಪಿಯಿಂದ ಸ್ಪರ್ಧಿಸಿ ವಿಶ್ವನಾಥ್ ಪಾಟೀಲ್ ವಿರುದ್ಧ 3,621 ಮತಗಳ ಅಂತರದಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್ ದೊರೆತಿಲ್ಲ ಎನ್ನಲಾಗಿದೆ. ಮೆಟಗುಡ್ಡ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಸಂಸದ ಬಿ ಶ್ರೀರಾಮುಲು ಅವರಿಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಕೊಡುವ ನಿರೀಕ್ಷೆ ಇತ್ತು. ಆದರೆ, ಅನಿರೀಕ್ಷಿತವಾಗಿ ಅವರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದೆ. ಶ್ರೀರಾಮುಲು ಅವರ ಆಪ್ತರಾಗಿರುವ ಎಸ್ ತಿಪ್ಪೇಸ್ವಾಮಿ ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಕಳೆದ ಬಾರಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಮೂಲಕ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣ ಅವರನ್ನು 7,169 ಮತಗಳ ಅಂತರದಲ್ಲಿ ಸೋಲಿಸಿದ್ದರು. ಹೀಗಾಗಿ ಈ ಬಾರಿ ಟಿಕೆಟ್ ಸಿಗುವುದು ಖಚಿತ ಎಂದೇ ನಂಬಿದ್ದರು. ಆದರೆ, ಇವರಿಗೂ ಟಿಕೆಟ್ ಕೈ ತಪ್ಪಿದ್ದು, ಅಸಮಾಧಾನ ಹೊರಹಾಕಿದ್ದಾರೆ. ಅವರ ಬಂಡಾಯ ಶ್ರೀರಾಮುಲು ಅವರ ಹೆಗಲೇರಿದೆ.

ಲಿಂಗಾಯತ ಸಮುದಾಯದ ಪ್ರಬಲ ನಾಯಕಲ್ಲಿ ಒಬ್ಬರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಜೆಡಿಎಸ್ ನಿಂದ ಕರೆತಂದು ವಿಜಯಪುರ ನಗರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಿದೆ. ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಕೂಡ ಬಂಡಾಯ ಎದ್ದಿದ್ದಾರೆ. ಕಳೆದ ಬಾರಿ ಪಟ್ಟಣಶೆಟ್ಟಿ ಅವರು ಕಾಂಗ್ರೆಸ್ ವಿರುದ್ಧ 22,380 ಮತಗಳ ಅಂತರದಲ್ಲಿ ಸೋತಿದ್ದರು. ಜೊತೆಗೆ ಯತ್ನಾಳ ಕೂಡ ಕಳೆದ ಬಾರಿ ಕಾಂಗ್ರೆಸ್ ವಿರುದ್ಧ 9,380 ಮತಗಳ ಅಂತರದಲ್ಲಿ ಸೋತಿದ್ದರೂ ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕವಾಗಿರುವುದರಿಂದ ಈ ಬಾರಿ ಯತ್ನಾಳ್ ಅವರು ಕಾಂಗ್ರೆಸ್‌ಗೆ ಸ್ಪರ್ಧೆಯೊಡ್ಡಬಹುದೆಂಬ ನಿರೀಕ್ಷೆಯೊಂದಿಗೆ ಬಿಜೆಪಿ ಅವರನ್ನು ಕಣಕ್ಕಿಳಿಸಿದೆ. ಯತ್ನಾಳ್ ಅವರು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ನಂತರದಲ್ಲಿ ನಾಯಕರ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ 2015 ರಲ್ಲಿ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟಿಸಿತ್ತು. ತದನಂತರದಲ್ಲಿ ಇವರು ಜೆಡಿಎಸ್ ಸೇರಿದ್ದರು.

ಇತ್ತ ಬಸವಕಲ್ಯಾಣದಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಕೂಡ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಅವರಿಗೂ ಕೂಡ ಬಿಜೆಪಿ ಟಿಕೆಟ್ ನೀಡಿದೆ. ಇಲ್ಲಿಯ ಆಕಾಂಕ್ಷಿ ಎಂ ಜಿ ಮುಳೆ ಬಂಡಾಯ ಎದ್ದಿದ್ದಾರೆ. ಮುಳೆ ಅವರು ಕಳೆದ ಬಾರಿ ಬಿಎ‌್ಸ‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಖೂಬಾ ವಿರುದ್ಧ 19,280 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ ಮುಳೆ ಅವರಿಗಿಂತ ಖೂಬಾ ಪ್ರಬಲ ಅಭ್ಯರ್ಥಿ ಎಂಬ ಲೆಕ್ಕಾಚಾರದಲ್ಲಿ ಮುಳೆ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎನ್ನಲಾಗಿದೆ.

ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ಇತ್ತೀಚೆಗೆ ಬಿಜೆಪಿ ಸೇರಿಕೊಂಡು ಮುದ್ದೇಬಿಹಾಳದ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಇತ್ತ, ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಂಗಳಾದೇವಿ ಬಿರಾದರ್ ಪಕ್ಷದ ವಿರುದ್ಧ ಬಂಡಾಯದ ಮಾತುಗಳನ್ನಾಡುತ್ತಿದ್ದಾರೆ. ಬಿರಾದರ್ ಅವರಿಗೆ ಕಳೆದ ಬಾರಿ ಕೂಡ ಈ ಕ್ಷೇತ್ರದಿಂದ ಟಿಕೆಟ್ ಲಭಿಸಿರಲಿಲ್ಲ. 2008 ಹಾಗೂ 2004 ರ ಚುನಾವಣೆಯಲ್ಲಿ ಬಿಜೆಪಿಯಿಂದ ಅವರು ಸ್ಪರ್ಧಿಸಿದ್ದರಾದರೂ ಎರಡು ಬಾರಿ ಸೋಲು ಕಂಡಿದ್ದರು.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರನ್ನು ಕಾಂಗ್ರೆಸ್ ಉಚ್ಛಾಟಿಸಿದ ಬಳಿಕ ನಡಹಳ್ಳಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ಗುರುತಿಸಿಕೊಂಡರು. ನಂತರದಲ್ಲಿ ಏಕಾಏಕಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿ ಮುದ್ದೇಬಿಹಾಳ ಕ್ಷೇತ್ರದ ಟಿಕೆಟ್ ಕೂಡ ಪಡೆದುಕೊಂಡಿರುವುದು ಸಹಜವಾಗಿಯೇ ಮಂಗಳಾದೇವಿ ಬಿರಾದಾರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮುದ್ದೇಬಿಹಾಳದಲ್ಲಿ ಸತತ ನಾಲ್ಕು ಅವಧಿಗೂ ಕಾಂಗ್ರೆಸ್ ಮೇಲುಗೈ ಸಾಧಿಸುತ್ತ ಬಂದಿದೆ. ಈ ಬಾರಿ ಕಾಂಗ್ರೆಸ್ ಉಚ್ಛಾಟಿತ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಹೆಚ್ಚುವ ನಿರೀಕ್ಷೆ ಇದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಇಲ್ಲಿಯೂ ಕೂಡ ಆಂತರಿಕ ಬಂಡಾಯ ಎದ್ದಿದೆ. ಈ ಬಾರಿಯೂ ಕೂಡ ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಘೋಷಿಸಿದೆ. ಬಂಡಾಯ ಎದ್ದಿರುವ ಸೋಮಣ್ಣ ಬೇವಿನಮರದ ಅವರು 2004 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರದಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಜೆಪಿ ಈ ಕ್ಷೇತ್ರದ ಮೂಲಕ ನಿಲ್ಲಿಸುತ್ತ ಬಂದಿದ್ದು, ಬೊಮ್ಮಾಯಿ ಕೂಡ ಗೆಲ್ಲುತ್ತಲೇ ಬಂದಿದ್ದಾರೆ. 2008 ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ 12,862 ಮತಗಳ ಅಂತರದಲ್ಲಿ ಗೆದ್ದಿದ್ದರು. ಹಾಗೆಯೇ ಕಳೆದ ಚುನಾವಣೆಯಲ್ಲಿ ಕೂಡ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು 9,503 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿ ಆಯ್ಕೆ ಆಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಬೊಮ್ಮಾಯಿ ತಮ್ಮ ಗೆಲುವಿನ ಸ್ಥಿರತೆ ಉಳಿಸಿಕೊಳ್ಳಬಹುದೆಂಬ ನಿರೀಕ್ಷೆಯನ್ನು ಬಿಜೆಪಿ ಹೊಂದಿದ್ದು, ಹೀಗಾಗಿ ಸೋಮಣ್ಣ ಬೇವಿನಮರದ ಅವರನ್ನು ಕಡೆಗಣಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಳಿದ ವಲಸಿಗರ ಲೆಕ್ಕಾಚಾರ

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕುಟುಂಬ ವಿರುದ್ಧ ಸದಾ ಬಂಡಾಯ ಸಾರುತ್ತ ಬಂದ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು, ಆರುಬಾರಿ ಶಾಸಕರಾದರೂ ಸಚಿವ ಸ್ಥಾನ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದಕ್ಕೆ ಖರ್ಗೆ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿ ಕಾಂಗ್ರೆಸ್ ತೊರೆದು ಕಮಲ ಪಾಳಯ ಸೇರಿದ್ದಾರೆ. ಅವರಿಗೆ ಮಣೆ ಹಾಕಿರುವ ಬಿಜೆಪಿ ಅಫಜಲಪುರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದೆ. ಈ ಬೆಳವಣಿಗೆ ನಿರೀಕ್ಷಿತ ಎಂದು ಅರಿತಂತಿರುವ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದ ಮಾಜಿ ಶಾಸಕ ಎಂ ವೈ ಪಾಟೀಲ್ ಅವರು ಕೆಲವು ದಿನಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಎಂ ವೈ ಪಾಟೀಲ್ ಅವರನ್ನು ಈ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದ್ದೇ ಆದಲ್ಲಿ ಮತ್ತೆ ಇವರಿಬ್ಬರ ಮಧ್ಯೆಯೇ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಜನತಾ ಪಕ್ಷದ ಮೂಲಕ ರಾಜಕೀಯ ಆರಂಭಿಸಿರುವ ಎಂ ವೈ ಪಾಟೀಲ್ ಅವರು 1978 ರ ಚುನಾವಣೆಯಲ್ಲಿ ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರದಲ್ಲಿ ಅವರು ಕಾಂಗ್ರೆಸ್ ಸೇರಿಕೊಂಡರಾದರೂ ಅಲ್ಲಿ ನೆಲೆಯೂರದೇ ಮುಂದೆ ಜೆಡಿಎಸ್ ಸೇರಿಕೊಂಡು, 2004 ರ ಚುನಾವಣೆಯಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2008 ಚುನಾವಣೆ ಹೊತ್ತಿಗೆ ಬಿಜೆಪಿ ಸೇರಿಕೊಂಡರು. ಎರಡು ದಶಕದಲ್ಲಿ ಗುತ್ತೇದಾರ್ ಮತ್ತು ಪಾಟೀಲ್ ವಿರುದ್ಧ ಸದಾ ಈ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಡುತ್ತಲೇ ಬಂದಿದೆ. ಪಾಟೀಲ್ ಅವರಿಗೆ ಇದು ಕೊನೆ ಚುನಾವಣೆ ಎಂದೇ ಕ್ಷೇತ್ರದ ಮತದಾರರು ಮಾತನಾಡಿಕೊಳ್ಳುತ್ತಿದ್ದು, ಹಾಗಾಗಿ ಈ ಬಾರಿ ಗುತ್ತೇದಾರ್ ಅವರಿಗೆ ಪಾಟೀಲ್ ಅವರು ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆ ಇದೆ ವಿಶ್ಲೇಷಣೆಗಳು ಕ್ಷೇತ್ರದ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

ಇತ್ತ, ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಈ ಕ್ಷೇತ್ರ ಬಿಜೆಪಿಗೆ ಈ ಬಾರಿ ದುಬಾರಿಯಾಗುವ ಸಾಧ್ಯತೆ ಇದೆ. ಇದನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ಎಚ್ ಆರ್ ಗವಿಯಪ್ಪ ಅವರನ್ನು ಸೆಳೆದು ಬಿಜೆಪಿ ಕರೆತಂದು ಈ ಕ್ಷೇತ್ರದಿಂದ ಟಿಕೆಟ್ ಕೂಡ ನೀಡಿದೆ. ಆನಂದ್‌ ಸಿಂಗ್ ಅವರು ಈ ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದು, 2008 ರಲ್ಲಿ ಗವಿಯಪ್ಪ ಅವರನ್ನು 26,497 ಮತಗಳ ಅಂತರದಲ್ಲಿ ಸೋಲಿಸಿದ್ದರು.

ಆಳಂದ ಕ್ಷೇತ್ರದ ಮೂಲಕ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಸುಭಾಷ್ ಗುತ್ತೇದಾರ್ ಅವರು ಈ ಬಾರಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದು, ಅವರಿಗೂ ಕೂಡ ಬಿಜೆಪಿ ಮಣೆ ಹಾಕಿದೆ. ಅವರದೇ ಕ್ಷೇತ್ರವಾದ ಆಳಂದಕ್ಕೆ ಈ ಬಾರಿ ಅಭ್ಯರ್ಥಿಯಾಗಿ ಘೋಷಿಸಿದೆ. ಇತ್ತ ಯಡಿಯೂರಪ್ಪ ಅವರ ಆಪ್ತ ಬಿ ಆರ್ ಪಾಟೀಲ್ ಅವರು ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸುಭಾಷ್ ಗುತ್ತೇದಾರ್ ಅವರನ್ನು 17,114 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿದ್ದರು. ಈಗವರು ಯಡಿಯೂರಪ್ಪ ಬಳಗವನ್ನು ತೊರೆದಿರುವ ಕಾಂಗ್ರೆಸ್ ಸೇರಿಕೊಂಡಿದ್ದರಿಂದ ಸುಭಾಷ್ ಗುತ್ತೇದಾರ್ ಎಷ್ಟರ ಮಟ್ಟಿಗೆ ಪೈಪೋಟಿ ನೀಡಬಹುದು ಎಂಬುದು ಕೂತುಹಲ ಮೂಡಿಸಿದೆ.

ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಮತ್ತೋರ್ವ ವಲಸಿಗ ಶಾಸಕ ಶಿವರಾಜ್ ಪಾಟೀಲ್ ಅವರಿಗೆ ರಾಯಚೂರು ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಮೊದಲ ಪಟ್ಟಿಯಲ್ಲಿ ಪ್ರಕಟಿಸಿದೆ. ಕಳೆದ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಅಭ್ಯರ್ಥಿ ಸಯೇದ್ ಯಾಸಿನ್ ಅವರನ್ನು 7,871 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿದ್ದರು. ಮತ್ತೊಂದೆಡೆ ಲಿಂಗಸೂರಿನ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಅವರು ಬಿಜೆಪಿ ಸೇರಿದ್ದರಿಂದಾಗಿ ಅವರಿಗೂ ಈ ಕ್ಷೇತ್ರದ ಮೂಲಕ ಟಿಕೆಟ್ ನೀಡಿದೆ. 2008 ರಲ್ಲಿ ಅವರು ಇದೇ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ನಂತರದಲ್ಲಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು.

ಇನ್ನು, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಈ ಬಾರಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ. 2008 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ ಜಿ ಗೋವಿಂದಪ್ಪ ಅವರನ್ನು 1,168 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾಗಿದ್ದರು. ತದನಂತರದಲ್ಲಿ ಬಿಜೆಪಿ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸಿತ್ತು. ಆ ವೇಳೆ ಗೂಳಿಹಟ್ಟಿ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರು ಕೂಡ ಆಗಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಅವರು ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ ಜಿ ಗೋವಿಂದಪ್ಪ ವಿರುದ್ಧ 2,000 ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲು ಕಂಡರು. ಈ ಬಾರಿ ಅವರು ಅಧಿಕೃತವಾಗಿ ಬಿಜೆಪಿ ಸೇರಿಕೊಂಡಿದ್ದರಿಂದ ಕಾಂಗ್ರೆಸ್ ವಿರುದ್ಧ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ : ವಿಡಿಯೋ | ಯತ್ನಾಳ್‌ಗೆ ಟಿಕೆಟ್, ಬಿಜೆಪಿ ನಡೆಗೆ ಪಟ್ಟಣಶೆಟ್ಟಿ ಅಸಮಾಧಾನ

ಮತ್ತೋರ್ವ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮತ್ತೆ ಬಿಜೆಪಿಗೆ ಮರಳಿದ್ದಾರೆ. ಕುಂದಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಅವರನ್ನು ಪಕ್ಷ ಘೋಷಿಸಿದೆ. 2008 ರಲ್ಲಿ ಶ್ರೀನಿವಾಸ ಶೆಟ್ಟಿ ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು 25,083 ಮತಗಳ ಅಂತರದಲ್ಲಿ ಸೋಲಿಸಿದ್ದರು. ನಂತರದಲ್ಲಿ ಕಳೆದ ಚುನಾವಣೆ ಹೊತ್ತಿದೆ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಾಡಿ ಶಿವಶರ್ಮ ಶೆಟ್ಟಿ ಅವರನ್ನು 40,611 ಬಾರಿ ಮತಗಳ ಅಂತರದಲ್ಲಿ ಸೋಲಿಸಿ ಎರಡನೇ ಬಾರಿಯೂ ಶಾಸಕರಾಗಿದ್ದರು.

ಇತ್ತ ರಾಮನಗರ ಜಿಲ್ಲೆಯ ಚನ್ನಪಟ್ಟಣ ಶಾಸಕ ಸಿ ಪಿ ಯೋಗೇಶ್ವರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. 2008 ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಶಾಸಕರಾಗಿ ಆಯ್ಕೆ ಆಗಿದ್ದರು. ನಂತರದಲ್ಲಿ ಇವರು ಕಾಂಗ್ರೆಸ್ ತೊರೆದು ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೂಲಕ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದರು. ತದನಂತರದಲ್ಲಿ ಮತ್ತೆ ಅವರು ಕಾಂಗ್ರೆಸ್ ಸೇರಿಕೊಂಡು ಈಗ ಕಾಂಗ್ರೆಸ್ಸಿನೊಂದಿಗೆ ಮತ್ತೊಮ್ಮೆ ಮುನಿಸಿಕೊಂಡು ಬಿಜೆಪಿ ಸೇರಿದ್ದಾರೆ. ಇವರಿಗೆ ಬಿಜೆಪಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನೀಡಿದೆ. ಗಮನಾರ್ಹ ಸಂಗತಿ ಎಂದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದು ಈ ಕ್ಷೇತ್ರ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More