ಬಿಎಸ್‌ಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲು ಕಾರಣವೇನಿರಬಹುದು?

ದೇವೇಗೌಡರು ಬಿಎಸ್ಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣಗಳೇನು ಎಂದು ಹಿಂದಿನ ಚುನಾವಣಾ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಬಿಎಸ್ಪಿ ಸಾಮರ್ಥ್ಯದ ಹಲವು ವಿಚಾರಗಳು ಬೆಳಕಿಗೆ ಬರುತ್ತವೆ. ಈ ಕಾರಣದಿಂದಲೇ ಜೆಡಿಎಸ್‌, ಬಿಎಸ್‌ಪಿ ಜೊತೆ ಮೈತ್ರಿಗೆ ನಿರ್ಧರಿಸಿರುವಂತಿದೆ

ಜೆಡಿಎಸ್ ವರಿಷ್ಠ ದೇವೇಗೌಡರು ಎಲ್ಲಾ ಪಕ್ಷಗಳನ್ನು ಬಿಟ್ಟು ಬಿಎಸ್ಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇಕೆ ಎನ್ನುವುದು ರಾಜ್ಯದ ಜನತೆಯ ಕುತೂಹಲ ಕೆರಳಿಸಿದೆ. ರಾಷ್ಟ್ರೀಯ ಪಕ್ಷ ಬಿಎಸ್ಪಿ ತನ್ನ ಮಿತ್ರ ಎನ್ನುವುದಷ್ಟೇ ಇದರ ಹಿಂದಿರುವ ಮಾನದಂಡವಲ್ಲ. ರಾಜ್ಯದಲ್ಲಿ ದಲಿತ ಮತಗಳನ್ನು ಪರಿಣಾಮಕಾರಿಯಾಗಿ ಸೆಳೆಯಬಲ್ಲದು ಎಂಬುದರ ಜೊತೆಗೆ ಸಿಪಿಐ, ಸಿಪಿಎಂ ರೀತಿಯ ಇತರೆ ರಾಷ್ಟ್ರೀಯ ಪಕ್ಷಗಳಿಗಿಂತಲೂ ಇದರ ಬಲಾಬಲ ಉತ್ತಮವಾಗಿದೆ. ಅಲ್ಲದೆ ಅದು ತನ್ನ ಪಕ್ಷಕ್ಕೆ ಮಾರಕವಾಗಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ದೇವೇಗೌಡರು ಮೈತ್ರಿಗೆ ಮುಂದಾಗಿರಬಹುದು, ಅಲ್ಲದೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಲ್ಲುವ ಮತಗಳು ಬಿಎಸ್ಪಿಗೆ ಒಲಿದರೆ ತನಗೆ ಲಾಭ ಹೆಚ್ಚು ಎಂಬ ಲೆಕ್ಕಾಚಾರ ಇದರ ಹಿಂದೆ ಕೆಲಸ ಮಾಡಿರಬಹುದು. ಕಳೆದ ಚುನಾವಣೆಗಳಲ್ಲಿಯ ಬಿಎಸ್ಪಿ ಬಲಾಬಲವೂ ದೇವೇಗೌಡರ ಮೈತ್ರಿಯ ಗುಟ್ಟಿಗೆ ಪುಷ್ಠಿ ನೀಡುವಂತಿದೆ.

ಕಾನ್ಸಿರಾಂ ಅವರು 1984ರಲ್ಲಿ ಬಿಎಸ್‌ಪಿ ಸ್ಥಾಪಿಸಿದರು. ಅದಾದ ಕೇವಲ ಐದು ವರ್ಷಗಳಲ್ಲಿ ರಾಜ್ಯದಲ್ಲೂ ಬಿಎಸ್ಪಿ ಕಣಕ್ಕಿಳಿಯಲು ಆರಂಭಿಸಿತು. 1989ರಿಂದ 2013ರವರೆಗಿನ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸಿದೆ. 1994ರಲ್ಲಿ ಬೀದರ್ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿಯ ಸಯ್ಯದ್ ಝುಲ್ಫಿಕರ್ ಹಶ್ಮಿ (25,433) ಜನತಾದಳದ ಅಮೃತರಾವ್ ಚಿಮ್ಕೋಡ್ (21,881) ವಿರುದ್ಧ ಗೆದ್ದು ಬಂದಿದ್ದರು. ಅದು ಮಾತ್ರವೇ ಬಿಎಸ್ಪಿಗೆ ಇದುವರೆಗೆ ಸಂದಿರುವ ಪೂರ್ಣ ಪ್ರಮಾಣದ ಜಯ.

2013ರ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಸ್ಪರ್ಧಿಸಿದ್ದ ಬಿಎಸ್ಪಿಯ ಎನ್. ಮಹೇಶ್ (37,209) ಕಾಂಗ್ರೆಸ್ಸಿನ ಎಸ್. ಜಯಣ್ಣ (47,402) ವಿರುದ್ಧ ಸೋತರಾದರೂ ಅವರ ಸ್ಪರ್ಧೆ ಗಮನಾರ್ಹವಾಗಿತ್ತು. 2008ರಲ್ಲಿ ಬೀದರ್ ನಲ್ಲಿ ಕಾಂಗ್ರೆಸ್ಸಿನ ಗುರುಪಾದಪ್ಪ ನಾಗಮಾರಪಳ್ಳಿ (33567) ವಿರುದ್ಧ ಬಿಎಸ್ಪಿಯ ರಹೀಂಖಾನ್ ಕೇವಲ 2930 ಮತಗಳ ಅಂತರದಿಂದ ಸೋತು ತುರುಸಿನ ಪೈಪೋಟಿ ನೀಡಿದ್ದರು. ಹನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಎಸ್ಪಿಯ ಪರಿಮಳಾ ನಾಗಪ್ಪ (36,383) ಕಾಂಗ್ರೆಸ್ಸಿನ ಆರ್. ನರೇಂದ್ರ ಅವರ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ : ಜೆಡಿಎಸ್‌-ಬಿಎಸ್‌ಪಿ ಮೈತ್ರಿಯು ಗೆಲ್ಲುವ ರಾಜಕಾರಣವೋ, ಸೋಲಿಸುವ ತಂತ್ರವೋ?

ರಾಜ್ಯದಲ್ಲಿ ಬಿಎಸ್ಪಿ ಸ್ಪರ್ಧಿಸುವ ಸ್ಥಾನಗಳ ಸಂಖ್ಯೆ ಕೂಡ ಗಮನಾರ್ಹ. ಇಲ್ಲಿ ಬಿಜೆಪಿ ಕಾಂಗ್ರೆಸ್ ಹೊರತುಪಡಿಸಿ ಬೇರೆ ಪಕ್ಷಗಳೊಂದಿಗೆ ಹೋಲಿಕೆ ಮಾಡಿದಾಗ ಬಿಎಸ್ಪಿಯ ಸ್ಪರ್ಧಿಸುವ ಸಾಮರ್ಥ್ಯ ಅರ್ಥವಾಗುತ್ತದೆ. 2013ರ ಚುನಾವಣೆಯಲ್ಲಿ ಬಿಜೆಪಿ 223, ಕಾಂಗ್ರೆಸ್ 224 ಬಿಎಸ್ಪಿ 175 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಸಿಪಿಐ 8, ಸಿಪಿಎಂ 16, ಎನ್ ಸಿಪಿ 24 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು. 2008ರಲ್ಲಿ ಬಿಜೆಪಿ 224, ಕಾಂಗ್ರೆಸ್ 222 ಹಾಗೂ ಬಿಎಸ್ಪಿ 217 ಸ್ಥಾನಗಳಲ್ಲಿ ಅಭ್ಯರ್ಥಿಗಳ ಬಲಾಬಲ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದವು. ಆಗ ಸಿಪಿಐನ 8 ಮತ್ತು ಸಿಪಿಎಂನ 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2004ರಲ್ಲಿ ಬಿಎಸ್ಪಿ 102 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿ 198, ಕಾಂಗ್ರೆಸ್ 224, ಸಿಪಿಐ ಹಾಗೂ ಸಿಪಿಎಂನಿಂದ ತಲಾ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1999ರಲ್ಲಿ 85 ಸ್ಥಾನಗಳಲ್ಲಿ ಬಿಎಸ್ಪಿ ಸ್ಪರ್ಧಿಸಿದರೆ ಸಿಪಿಎಂ 10, ಸಿಪಿಐ 8, ಜೆಡಿಎಸ್ 203, ಜೆಡಿಯು 112, ಕಾಂಗ್ರೆಸ್ 222 , ಬಿಜೆಪಿ 149 ಅಭ್ಯರ್ಥಿಗಳ ಭವಿಷ್ಯವನ್ನು ಒರೆಗೆ ಹಚ್ಚಿದ್ದವು. 1994ರಲ್ಲಿ ಬಿಎಸ್ಪಿ 77, ಬಿಜೆಪಿ 223, ಸಿಪಿಐ 8 ಸಿಪಿಎಂ 13, ಕಾಂಗ್ರೆಸ್ 221, ಜನತಾದಳ 221 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದವು. 1989ರಲ್ಲಿ ಚುನಾವಣಾ ಆಯೋಗದ ಪ್ರಕಾರ ಇನ್ನೂ ಗುರುತಿಸಿಕೊಂಡಿರದ ಪಕ್ಷವಾಗಿದ್ದ ಬಿಎಸ್ಪಿ ಸ್ಪರ್ಧಿಸಿದ್ದು 5 ಸ್ಥಾನಗಳಲ್ಲಿ.

ತಾನು ಗೆಲ್ಲದಿದ್ದರೂ ಇತರರಿಗೆ ಮುಳುವಾಗಬಲ್ಲ ತನ್ನಂತಹ ಇತರೆ ಪಕ್ಷಗಳಿಗೆ ಹೋಲಿಸಿದರೆ, ಪಕ್ಷದ ಮತ ಸೆಳೆಯುವ ಶಕ್ತಿ ಕೂಡ ಅಧಿಕ. 2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ 2,84,768 ಮತಗಳನ್ನು ಪಡೆದಿತ್ತು. ಸಿಪಿಎಂ 68,775 ಮತಗಳನ್ನು ಪಡೆದರೆ ಸಿಪಿಐ 25,450 ಮತಗಳಿಗೆ ತೃಪ್ತಿಪಟ್ಟುಕೊಂಡವು. ಎನ್ ಸಿಪಿ 18,886 ಮತದಾರರನ್ನು ಮಾತ್ರ ತನ್ನೆಡೆಗೆ ಸೆಳೆದಿತ್ತು. ಅರ್ಥಾತ್ ಕಾಂಗ್ರೆಸ್, ಬಿಜೆಪಿ ಬಳಿಕ ಅತ್ಯಧಿಕ ಮತ ಗಳಿಸಿದ ಮೂರನೇ ಪಕ್ಷವಾಗಿ ಬಿಎಸ್ಪಿ ಹೊರಹೊಮ್ಮಿತ್ತು. 2008ರಲ್ಲಿ ಬಿಎಸ್ಪಿ ಪಡೆದದ್ದು 7,16,770 ವೋಟುಗಳನ್ನು. ಸಿಪಿಎಂ 61,687 ಮತಗಳನ್ನು ಪಡೆದರೆ ಸಿಪಿಐ 29,831 ಮತಗಳನ್ನು ಸೆಳೆಯಲು ಮಾತ್ರ ಸಫಲವಾಯಿತು. 2004ರಲ್ಲಿ 4,37,564 ಮತಗಳು ಬಿಎಸ್ಪಿ ಪರವಾಗಿ ಚಲಾವಣೆಯಾಗಿದ್ದವು. ಸಿಪಿಎಂ 92,081 ಸಿಪಿಐ 26,223 ಮತಗಳನ್ನು ಪಡೆದಿದ್ದವು. 1999ರಲ್ಲಿ ಅದು ಪಡೆದ ಮತಗಳ ಒಟ್ಟು ಸಂಖ್ಯೆ 2,08,820. ಅತಿಹೆಚ್ಚು ಮತಪಡೆದ ಐದನೇ ಪಕ್ಷ ಎಂಬ ಹೆಗ್ಗಳಿಕೆ ಅದರದಾಗಿತ್ತು. ಆ ವರ್ಷ ಜೆಡಿಎಸ್(23,16,885) ಜೆಡಿಯು(30,06,253), ಕಾಂಗ್ರೆಸ್(90,77,815) ಬಿಜೆಪಿ (45,98,741) ಮತಗಳಿಕೆಯಲ್ಲಿ ಮುಂದಿದ್ದವು. ಆದರೆ ಸಿಪಿಐ (27,730) ಸಿಪಿಎಂಗಿಂತಲೂ (84979) ಬಿಎಸ್ಪಿಯೇ ಹೆಚ್ಚು ಜನರ ಒಲವು ಗಳಿಸಿತ್ತು. 1994ರಲ್ಲಿಯೂ ಬಿಎಸ್ಪಿ ಎಡಪಕ್ಷಗಳಿಗಿಂತ ಮುಂದಿತ್ತು. ಬಿಎಸ್ಪಿ 1,60,607, ಸಿಪಿಎಂ 1,01,982, ಸಿಪಿಐ 46819 ಮತಗಳನ್ನು ಪಡೆದಿದ್ದವು. 1989ರಲ್ಲಿ ಆಗಷ್ಟೇ ಕಣಕ್ಕಿಳಿದಿದ್ದ ಬಿಎಸ್ಪಿ 7586 ಮತಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಜನತಾಪಕ್ಷ, ಜನತಾದಳ, ಸಿಪಿಐ, ಸಿಪಿಎಂ ಕಾಂಗ್ರೆಸ್ಸಿಗೆ ಮತದಾರರು ಹೆಚ್ಚು ಮನಸೋತದ್ದುಂಟು.

ಜೆಡಿಎಸ್ ಈ ಬಾರಿ ಬಿಎಸ್ಪಿ ಜತೆ ಶೇ 10ರಷ್ಟು ಸೀಟುಗಳನ್ನು ಬಿಎಸ್ಪಿಗೆ ಬಿಟ್ಟುಕೊಡುವ ಮೂಲಕ ಒಪ್ಪಂದ ಮಾಡಿಕೊಂಡಿದೆ. 202 ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸಿದರೆ ಬಿಎಸ್ಪಿಯ 22 ಅಭ್ಯರ್ಥಿಗಳು ರಾಜ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇಲ್ಲೊಂದು ಸ್ವಾರಸ್ಯಕರ ಅಂಶವಿದೆ. ಯಾವುದೇ ಪಕ್ಷ ಹೆಚ್ಚು ಮತದಾರರನ್ನು ಸೆಳೆದ ಮಾತ್ರಕ್ಕೆ ಗೆಲ್ಲುವುದಿಲ್ಲ. ಉದಾಹರಣೆಗೆ 2008ರಲ್ಲಿ ಅತ್ಯಧಿಕ ಮತಗಳು ಕಾಂಗ್ರೆಸ್ (90,91,364) ಪರವಾಗಿ ಚಲಾವಣೆಯಾಗಿದ್ದವು. ಬಿಜೆಪಿ 88,57,754 ಮತಗಳನ್ನು ಗಳಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಗೆದ್ದದ್ದು ಕೇವಲ 80 ಸ್ಥಾನಗಳಲ್ಲಿ. ಬಿಜೆಪಿ 110 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಬಿಎಸ್ಪಿ ಪರವಾಗಿ ಹೆಚ್ಚು ಮತಗಳು ಬಿದ್ದಿವೆ ಎಂದ ಮಾತ್ರಕ್ಕೆ ಅದು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದರ್ಥವಲ್ಲ. ಆದರೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೀಳಲಿರುವ ಮತಗಳನ್ನು ವಿಭಜಿಸುವುದರಲ್ಲಿ ಅದು ನಿರ್ಣಾಯಕ ಪಾತ್ರವಹಿಸಲಿದೆ. ಪಕ್ಷ ಗೆಲ್ಲದಿದ್ದರೇನಂತೆ ಮತ್ತೊಬ್ಬರನ್ನು ಸೋಲಿಸುವಷ್ಟು ಸಮರ್ಥವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಜೊತೆಗೆ ಜಾತಿಬಲದ ಕಾರಣಕ್ಕೆ ಇದು ಮುಖ್ಯ ಪಕ್ಷ. ದಲಿತ ಮತಗಳನ್ನು ಸೆಳೆಯುವಂತಹ ಮತ್ತೊಂದು ರಾಜಕೀಯ ಪಕ್ಷ ರಾಜ್ಯದಲ್ಲಿ ಇಲ್ಲದೇ ಇರುವುದರಿಂದ ಸದ್ಯಕ್ಕೆ ದಲಿತರ ಮೇಲೆ ಅದರ ಪ್ರಭಾವ ಹೆಚ್ಚು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More