ಜಿ ಪರಮೇಶ್ವರ್ ಸೀಕ್ರೆಟ್ ಡೈರಿ | ಸಿಎಂ ಆಗೋಕೆ ಎಲ್ಲ ಪ್ಲಾನು ಮಾಡ್ಕೊಂಡಿದೀನಿ

ದೇವ್ರೇ ಆದಷ್ಟು ಬೇಗ ನನ್ನ ಆಸೆ ಈಡೇರಿಸು ತಂದೆ. ಒಂದು ವೇಳೆ ನಾನು ಅಂದ್ಕೊಂಡಿದ್ನಾ ಮಾಡೋಕೆ ನಿನ್ನಿಂದ ಸಾಧ್ಯವಿಲ್ಲ ಅಂತಂದ್ರೆ ಇಬ್ರು ಒಂದ್‌ ಕೆಲ್ಸ ಮಾಡೋಣ, ನಾನು ರಾಜ್ಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ನೀನು ನಿನ್ನ ದೇವರ ಪಟ್ಟಕ್ಕೆ ರಾಜೀನಾಮೆ ಕೊಡು!

ಬರೋ ಎಲೆಕ್ಷನಲ್ಲಿ ನಮ್ಮ ಪಕ್ಷ ಗೆದ್ದು, ದಿಢೀರ್ ಅಂತ ನಾನೇ ಸಿಎಂ ಆಗ್ಬೇಕು ಅನ್ನೋ ಸಂದರ್ಭ ಬಂದ್‌ ಬಿಟ್ರೆ?!‌ ಒಂದು ವೇಳೆ ಹಂಗೇನಾದ್ರು ಆದ್ರೆ ಖುಷಿ ಹೆಚ್ಚಾಗಿ ನನ್ ತಲೆನೇ ಓಡೋದಿಲ್ಲ. ಅದ್ಕೆ ಸಿಎಂ ಆದ ತಕ್ಷಣಕ್ಕೆ ಏನೇನ್‌ ಕಾರ್ಯಗಳನ್ನ ಜಾರಿಗೆ ತರ್ಬೇಕು ಅಂತ ಇವಾಗ್ಲೇ ಡೈರಿನಲ್ಲಿ ಪಟ್ಟಿ ಮಾಡ್ಬಿಟ್ಟಿದೀನಿ.

ಮುಖ್ಯವಾಗಿ ಮೂರು ವಿಚಾರಗಳು ಸದ್ಯ ನನ್‌ ತಲೆನಲ್ಲಿದಾವೆ. ಮೊದಲನೇಯದ್ದು ನಮ್ಮ ಕೊರಟಗೆರೆ ಹೂವಿನ ಮಾರ್ಕೆಟ್ ಸಿಕ್ಕಾಪಟ್ಟೆ ಫೇಮಸ್‌. ಮುಂಬೈ-ಪುಣೆಗೂ ಅಲ್ಲಿಂದ ಹೂವು ಪಾರ್ಸಲ್ ಹೋಗುತ್ತೆ. ಆದ್ರೆ ಆ ಹೂವಿನ ಮಾರ್ಕೆಟ್‌ ಅನ್ನ ಇಲ್ಲಿವರೆಗು ಯಾರೂ ಇಂಪ್ರೂ ಮಾಡೇ ಇಲ್ಲ. ನಾನೂ ಮಾಡ್ಬಹುದಿತ್ತು. ಆದ್ರೆ ಸಿಎಂ ಆದ್ಮೇಲೆನೇ ಮಾಡ್ಬೇಕು ಅಂತ ನಾನು ಸುಮ್ನಿದೀನಿ. ಇದು ನಾನು ಮಾಡೋ ಮೊದಲನೇ ಕೆಲ್ಸ.

ಎರಡನೇದು ಮುಖ್ಯವಾಗಿ ಏನಂತಂದ್ರೆ ಸಿದ್ರಾಮಯ್ಯನವರು ಇಂದಿರಾ ಕ್ಯಾಂಟೀನ್‌ ಮಾಡ್ದಂಗೆ ನಾನು ‘ಸೋನಿಯಾ ಫಾಸ್ಟ್‌ ಫುಡ್’‌ ಶುರು ಮಾಡ್ತೀನಿ. ಈಗ ಕ್ಯಾಂಟೀನ್‌ಗಳಿಗಿಂತ ಫಾಸ್ಟ್ ಫುಡ್‌ಗಳೇ ಜಾಸ್ತಿ ನಡೆಯೋದು. ಅದ್ಕೆ ‘ಇಂದಿರಾ ಕ್ಯಾಂಟೀನ್‌’ಗಿಂತ, ‘ಸೋನಿಯಾ ಫಾಸ್ಟ್ ಫೂಡ್‌’ಗೆ ಹೆಚ್ಗೆ, ಅಂದ್ರೆ ಅವರಿಗಿಂತ ನನಗೆ ಹೆಚ್ಗೆ ಹೆಸರು ಬಂದ್ರು ಬರಬಹುದು.

ಇನ್ನು ಮೂರನೇದು ‘ಸೌಭಾಗ್ಯ ಯೋಜನೆ ಶುರು ಮಾಡೋದು. ಅವರದ್ದು ‘ಭಾಗ್ಯ’ ಆದ್ರೆ ನಂದು ‘ಸೌಭಾಗ್ಯ’ ಯೋಜನೆ. ನಾನೇನಾದ್ರು ಸಿಎಂ ಆದ್ರೆ ರಾಜ್ಯದ ಜನಕ್ಕೆ ಸೌಭಾಗ್ಯಗಳ ಯೋಜನಾ ಭಾಗ್ಯವನ್ನೇ ಶುರು ಮಾಡ್ತೀನಿ. ಇದ್ರಲ್ಲಿ ಗೃಹಿಣೆಯರಿಗೆ ಹೊಗೆಯಿಲ್ಲದ ಒಲೆ ಸೌಭಾಗ್ಯ ಯೋಜನೆ, ವಯಸ್ಸಾದವರಿಗೆ ಹುಲಿಮನೆ ಸೆಟ್‌ ಸೌಭಾಗ್ಯ ಯೋಜನೆ. ಇತ್ಯಾದಿ, ಇತ್ಯಾದಿ ಯೋಜನೆಗಳು ಬರುತ್ತವೆ.

ಸೋ, ಇದು ನಾನು ಮುಖ್ಯಮಂತ್ರಿಯಾದ್ರೆ ಮಾಡಬೇಕಾಗಿರುವ ಮೂರು ಪ್ರಮುಖ ಮತ್ತು ಮುಖ್ಯ ಕೆಲಸಗಳು. ಹೌದು ನಾನೇನೂ ಇಷ್ಟೆಲ್ಲ ಆಸೆ ಇಟ್ಕೊಂಡಿದೀನಿ ನಿಜಾ, ಆದ್ರೆ ಬರೋ ಎಲೆಕ್ಷನ್‌ನಲ್ಲಿ ನಮ್‌ ಪಕ್ಷ ಗೆದ್ದು, ನಾನೇ ಮುಖ್ಯಮಂತ್ರಿಯಾಗ್ತೇನಾ?

ಚೇ, ನಾನು ಡಾ.ಪರಮೇಶ್ವರ್ ಹೋಗಿ ಸಿಎಂ ಪರಮೇಶ್ವರ್‌ ಆಗೋದಾದ್ರು ಯಾವಾಗ? ದೇವ್ರೇ ಆದಷ್ಟು ಬೇಗ ನನ್ನ ಆಸೆ ಈಡೇರಿಸು ತಂದೆ. ಒಂದು ವೇಳೆ ಈಡೇರಸ್ಲಿಕ್ಕೆ ಆಗೋದಿಲ್ಲ ಅಂತಂದ್ರೆ ಡಿಸಿಎಂ ಆದ್ರು ಮಾಡ್ಸು. ಕೊನೆಗೆ ಅದೂ ನಿನ್ನಿಂದ ಸಾಧ್ಯವಿಲ್ಲ ಅಂತಂದ್ರೆ ಇಬ್ರು ಒಂದ್‌ ಕೆಲ್ಸ ಮಾಡೋಣ, ನಾನು ರಾಜ್ಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ನೀನು ನಿನ್ನ ದೇವರ ಪಟ್ಟಕ್ಕೆ ರಾಜೀನಾಮೆ ಕೊಡು. ನನನ್ನ ಮುಖ್ಯಮಂತ್ರಿ ಮಾಡದೇ ಹೋದ್ರೆ ನೀನ್ಯಾಕೆ ದೇವರಾಗಿರಬೇಕು? ಅಲ್ವಾ?

ಏನೇ ಆದ್ರು ನಿನ್‌ ಮೇಲೆ ನಂಗೆ ನಂಬಿಕೆ ಇಲ್ಲ ಬಿಡು. ಕಳೆದ ಎಲೆಕ್ಷನ್‌ನಲ್ಲಿ ಯಾವಾಗ್ ನನ್‌ ಸೋಲಿಸಿದೋ ಅವಾಗ್ಲೇ ನಿನ್‌ ಮೇಲಿನ ನಂಬಿಕೆ ಕಳ್ಕೊಂಡಿದೀನಿ. ಅದಕ್ಕಾಗಿನೇ ಈ ಬಾರಿ ನಿನಗಿಂತ ಹೆಚ್ಚಾಗಿ ನನ್ ಕ್ಷೇತ್ರದ ಜನಗಳ ಕೈ ಮುಗೀತಿದೀನಿ. ನನ್ನ ಹಣೆಬರಹವನ್ನ ನೀವೇ ಬರೆಯಬೇಕು ಅಂತ ಜನಗಳಲ್ಲಿ ಬೇಡಿಕೊಳ್ತಿದೀನಿ. ಆ ನನ್ನ ಕ್ಷೇತ್ರದ ಜನ್ರು ಈ ಸರಿನಾದ್ರು ಏನ್‌ ಮಾಡ್ತಾರೋ ನೋಡೋಣ.

ನಾನು ಪಕ್ಷದ ಅಧ್ಯಕ್ಷನಾದ್ಮೇಲೆ ಪಕ್ಷವನ್ನ ಹೆಚ್ಚು ಬೆಳಸಬೇಕೆಂಬ ಕಾರಣಕ್ಕೆ ‘ಕಾಂಗ್ರೆಸ್ ನಡಿಗೆ ಜನರ ಕಡೆಗೆ’ ಅಂತ ಹೋದೆ, ಆ ನಡಿಗೆಯಿಂದ ಪಕ್ಷಕ್ಕೆ ಹೆಚ್ಚು ಪ್ರಚಾರನೂ ಸಿಕ್ತು. ಆದ್ರೆ ನನ್‌ ಜನ್ರು ಮಾತ್ರ ಕಳೆದ ಎಲೆಕ್ಷನ್‌ನಲ್ಲಿ ನನ್ನ ಸೋಲಿಸಿ, ‘ಪರಮೇಶ್ವರ್ ನಡಿಗೆ ಮನೆ ಕಡೆಗೆ’ ಅಂತ ಶಾಸನ ಬರೆದ್ರು. ಆದ್ರೆ ಈ ಬಾರಿ ಜನ ನನಗೇ ಆಶೀರ್ವಾದ ಮಾಡ್ತಾರೆ ಅನ್ನೋ ನಂಬಿಕೆ ಇದೆ. ಯಾಕೆಂದ್ರೆ ನನ್ ತಪ್ಪನ್ನ ತಿದ್ಕೊಂಡಿದೀನಿ, ಬದಲಾಗಿದ್ದೇನೆ. ಕ್ಷೇತ್ರದ ಜನಗಳ ಮಧ್ಯೆ ಓಡಾಡಿದೀನಿ, ಬಡವರ ಮನೆಗೆ ಹೋಗಿ ಗ್ರಾಮವಾಸ್ತವ್ಯ ಮಾಡಿದೀನಿ. ಆದ್ರೆ ಅಲ್ಲಿ ನಿದ್ದೆ ಬರ್ಲಿಲ್ಲ ಆ ಮಾತು ಬೇರೆ.

ಇದನ್ನೂ ಓದಿ : ಬಿಎಸ್‌ವೈ ಸೀಕ್ರೆಟ್ ಡೈರಿ | ಊಟ ಚೆನ್ನಾಗಿತ್ತು, ಈಶ್ವರಪ್ಪನ ನೋಟಾನೇ ಚೆನ್ನಾಗಿರ್ಲಿಲ್ಲ!

ಅಲ್ಲಾ ಶಿವಾ, ಮತ್ತೊಮ್ಮೆ ನಿಮ್ಮ ಪಕ್ಷಾನೇ ಅಧಿಕಾರಕ್ಕೆ ಬರುತ್ತಾ ಅಂತ ಯಾರಾದ್ರು ಕೇಳಿದ್ರೆ, ಧೈರ್ಯವಾಗಿ ಹೌದು ಅಂತ ಹೇಳೋಕ್ಕಾಗ್ತಿಲ್ಲ ನಂಗೆ, ಯಾಕೆಂದ್ರೆ ನಾನೇ ಗೆಲ್ತೇನಾ ಅನ್ನೋ ನಂಬಿಕೆ ಇಲ್ವಲಾ. ಒಂದ್‌ ಕೆಲ್ಸ ಮಾಡಿದ್ರೆ ಹೆಂಗೆ? ಹೆಂಗೂ ಸಿಎಂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತಿಲ್ವಾ, ನಾನೂ ಅಧ್ಯಕ್ಷ ಕಣ್ರಿ, ನಾನು ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ತೀನಿ. ಯಾವುದಾದ್ರು ಒಂದ್ರಲ್ಲಿ ಗೆದ್ದೇ ಗೆಲ್ತೀನಿ. ಅಯ್ಯೋ ಬೇಡಪ್ಪಾ, ಮತ್ತೆ ಎರಡರಲ್ಲೂ ಸೋತ್‌ ಬಿಟ್ರೇ ಏನ್ ಮಾಡೋದು. ಹಂಗೇನಾದ್ರು ಆದ್ರೆ ಮತ್ತೆ ಇದ್ದಿರೋ ಅಧ್ಯಕ್ಷ ಕುರ್ಚಿನೂ ಹೋಗಿ ಬಿಟ್ಟೀತು.

ನಾನು ಚಿಕ್ಕವನಾಗಿದ್ದಾಗ ನಮ್ಮೂರಿನ ರೈಲ್ವೇ ಟ್ರ್ಯಾಕ್ ಮೇಲೆ ಸ್ನೇಹಿತರೆಲ್ಲ ಸೇರಿ ಟ್ರೈನ್‌ ಮಾಡ್ಕೊಂಡು ಓಡ್ತಿದ್ವಿ. ಆಗ ನನ್‌ ಬೆನ್ನಿಗೆ ನನ್ನ ಸ್ನೇಹಿತರಿದ್ದಾರೆ ಅನ್ನೋ ಫೀಲ್‌ ಇತ್ತು. ಹೀಗಾಗಿ ಟ್ರೈನ್‌ ಬರುತ್ತೆ ಅಂತ ಗೊತ್ತಿದ್ರು ಭಯ ಇರ್ತಿರ್ಲಿಲ್ಲ. ಇಲ್ಲೂ ಹಳಿ ಮೇಲೆನೇ ಓಡ್ತಿದೀನಿ. ಆದ್ರೆ ಬೆನ್ನಿಗೆ ಮಾತ್ರ ಯಾರೂ ಇಲ್ವಾ ಅನ್ನೋ ಫೀಲ್‌ ಆಗ್ತಿದೆ. ನಾನು ಇತ್ಲಾಗೆ ಇಂಜಿನ್‌ನೂ ಅಲ್ಲ ಬೋಗಿನೂ ಅಲ್ಲ ಅನ್ನೋ ಪರಿಸ್ಥಿತಿ. ಪಕ್ಷದ ಅಧ್ಯಕ್ಷನಾಗಿದ್ರು ಕೂಡ ಅನಾಥನಾದ್ನಾ?

ನಮ್ಮ ಪಕ್ಷದಲ್ಲಿ ಹೇಗಾಗಿದೆಯಂದ್ರೆ ಇತ್ತೀಚೆಗೆ ಕಾರ್ಯಕರ್ತರಿಗಿಂತ ಲೀಡರ್‌ಗಳೇ ಜಾಸ್ತಿಯಾಗಿದ್ದಾರೆ. ಅಧ್ಯಕ್ಷ ನಾನಾದ್ರು ಯಾರು ಏನ್‌ ಬೇಕಾದ್ರು ಮಾಡ್ಬಹುದು. ಬೇಡ ನನಗೆ.. ಈ ರೀತಿ ಇರೋ ಅಧ್ಯಕ್ಷ ಸ್ಥಾನ ಬೇಡ. ಅದೇನಾದ್ರು ಆಗ್ಲಿ ಈ ಬಾರಿ ಎಲೆಕ್ಷನ್‌ನಲ್ಲಿ ಗೆಲ್ಲೋವರೆಗೂ ಸುಮ್ನೆ ಇರ್ತೇನೆ. ಗೆದ್ಮೇಲೆ ನನ್‌ ವರಸೆ ಏನು ಅನ್ನೋದನ್ನ ತೋರುಸ್ತೇನೆ. ಕೊನೆ ಪಕ್ಷ ಡಿಸಿಎಂ ಆದ್ರು ಆಗೇ ಆಗ್ತೀನಿ. ಸುಮ್ನೆ ಕೂರೋದಿಲ್ಲ ನಾನು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More