‘ಧರ್ಮ’ಕಾರಣದ ಚದುರಂಗದ ಆಟದಲ್ಲಿ ದಾಳಗಳಾಗಲಿವೆಯೇ ಗುರು-ವಿರಕ್ತ ಮಠಗಳು

ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯದ ಮತದಾರರು ನೇರವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದ್ದಾರೆ. ‘ವಚನ ಭ್ರಷ್ಟತೆ’ಯ ರಾಜಕೀಯ ಪ್ರಹಸನದಲ್ಲಿ ಬಿಎಸ್‌ವೈ ಪರ ನಿಂತು ಬಿಜೆಪಿಯನ್ನು ಗೆಲ್ಲಿಸಿದ ಸಮುದಾಯ, ಆನಂತರ ಅವರ ಕೆಜೆಪಿ ಸಾಹಸಕ್ಕೂ ಜೊತೆಯಾಗುವ ಮೂಲಕ ಬಿಜೆಪಿಯನ್ನು ವಿರೋಧ ಪಕ್ಷದ ಸಾಲಿನಲ್ಲಿ ಕೂಡಿಸಿತು. ಹಾಗಾದರೆ, ಈಗ ‘ಸ್ವತಂತ್ರ ಧರ್ಮ’ದ ವಿಚಾರದಲ್ಲಿ ಸಮುದಾಯ ಏನು ನಿರ್ಧರಿಸಲಿದೆ?

ಲಿಂಗಾಯತ ಧರ್ಮದ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಬಂದಾಗಿನಿಂದ ಅದು ಮತಗಣಿತದ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ. ರಾಜ್ಯ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವಂತೆ ಶಿಫಾರಸ್ಸು ಮಾಡಿರುವುದರ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳು ವಿರಕ್ತ ಹಾಗೂ ವೀರಶೈವ ಮಠಗಳಿಂದ ವ್ಯಕ್ತವಾಗುತ್ತಿವೆ.

ಸಹಜವಾಗಿಯೇ ಹೊರಗೆ ನಿಂತು ಇದೆಲ್ಲವನ್ನೂ ಗಮನಿಸುತ್ತಿರುವವರಿಗೆ ರಾಜಕೀಯವಾಗಿ ಇದು ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಕುತೂಹಲವಿದೆ. ಇಷ್ಟೊಂದು ಮಠಾಧೀಶರು ಪರ-ವಿರೋಧದ ಚರ್ಚೆಗಳಲ್ಲಿ ಪಾಲ್ಗೊಂಡಿರುವಾಗ ಸಾಮಾನ್ಯ ಲಿಂಗಾಯತ ಅನುಯಾಯಿಗಳಲ್ಲಿ ಈ ವಿಚಾರವಾಗಿ ಗೊಂದಲ ಮೂಡಿರಬಹುದೇ ಎನ್ನುವ ಅನುಮಾನವೂ ಈ ಸಂದರ್ಭದಲ್ಲಿ ಮೂಡದೆ ಇರದು. ಅದರಲ್ಲಿಯೂ ಲಿಂಗಾಯತ ಧರ್ಮದ ಪರವಾದ ಮಠಾಧೀಶರ ಅಭಿಪ್ರಾಯಗಳನ್ನು ಕಾಂಗ್ರೆಸ್‌ ಮುಂದು ಮಾಡುತ್ತಾ ಇದಕ್ಕೆ ಬಹುಸಂಖ್ಯಾತ ಲಿಂಗಾಯತರ ಅಭಿಪ್ರಾಯವಿದೆ ಎನ್ನುತ್ತಿದ್ದರೆ, ವೀರಶೈವ ಮಠಾಧೀಶರ ಅಭಿಪ್ರಾಯಗಳನ್ನು ಬಿಜೆಪಿ ಮುಂದು ಮಾಡುವ ಮೂಲಕ ‘ಇದು ಧರ್ಮವನ್ನು ಒಡೆಯುವ ಪ್ರಯತ್ನ’ ಎಂದು ಬಿಂಬಿಸುತ್ತಿರುವುದು ಸಮುದಾಯದ ಮೇಲೆ ಏನು ಪರಿಣಾಮ ಬೀರಬಹುದು ಎನ್ನುವ ಚರ್ಚೆ ಸಾಮಾಜಿಕ ವಲಯದಲ್ಲಿದೆ.

ರಾಜಕಾರಣದಲ್ಲಿ ಅಂತಿಮವಾಗಿ ಎಲ್ಲ ನಿರ್ಧಾರಗಳಿಗೂ ಮಹತ್ವ ಬರುವುದು ಅವುಗಳಿಗಿರುವ ಮತ ಕ್ರೋಢೀಕರಣದ ಶಕ್ತಿಯಿಂದ. ಈ ಹಿನ್ನೆಲೆಯಲ್ಲಿ ಗಮನಿಸಿದರೆ ಚುನಾವಣಾ ದಿನಾಂಕ ಹತ್ತಿರವಾದಂತೆ ಕಾಂಗ್ರೆಸ್‌ನಲ್ಲಿ ಪಕ್ಷವು ಲಿಂಗಾಯತ ಧರ್ಮದ ವಿಚಾರದಲ್ಲಿ ಇರಿಸಿದ ಹೆಜ್ಜೆ ಎಲ್ಲ ರೀತಿಯಿಂದಲೂ ಸರಿಯಾಗಿದೆ ಎನ್ನುವ ಭಾವನೆ ದಟ್ಟವಾಗುತ್ತಿದೆ. ಆದರೆ, ಇದೇ ಬಗೆಯ ಹುಮ್ಮಸ್ಸು ಬಿಜೆಪಿಯಲ್ಲಿ ಕಾಣುತ್ತಿಲ್ಲ. ‘ಧರ್ಮವನ್ನು ಒಡೆದ’ ವಿಚಾರವನ್ನು ಮುಂದಿಟ್ಟುಕೊಂಡು ಲಿಂಗಾಯತ ಪ್ರಾಬಲ್ಯವಿರುವ ಭಾಗಗಳಲ್ಲಿ ಮತದಾರರ ಮುಂದೆ ಹೋಗುವ ಅದರ ಪ್ರಯತ್ನಕ್ಕೆ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಂತೆ ಕಾಣಿಸುತ್ತಿಲ್ಲ.

ಈಚೆಗೆ ನಡೆದ ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧೀಶರಾದ ವೇದಿಕೆಯ ಸಭೆಯಲ್ಲಿ ಕರ್ನಾಟಕದಲ್ಲಿ ಲಿಂಗಾಯತ ಧರ್ಮಕ್ಕೆ ಯಾರು ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿದ್ದಾರೋ ಹಾಗೂ ಮುಂದೆಯೂ ಈ ವಿಚಾರದಲ್ಲಿ ಬೆಂಬಲವಾಗಿ ನಿಲ್ಲುತ್ತಾರೋ ಅವರಿಗೆ ಮಹಾಸಭಾ ಹಾಗೂ ವೇದಿಕೆ ಬೆಂಬಲ ನೀಡಲಿದೆ ಎನ್ನುವ ಮೂಲಕ ಮಹಾಸಭಾ ಮತ್ತು ವೇದಿಕೆ ಕಾಂಗ್ರೆಸ್‌ಗೆ ತಮ್ಮ ಪರೋಕ್ಷ ಬೆಂಬಲ ನೀಡಿವೆ. ಬಸವ ಧರ್ಮ ಪೀಠದ ಮಾತೆ ಮಹಾದೇವಿ ಅವರಂತೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಲಿಂಗಾಯತ ಸಮುದಾಯಕ್ಕೆ ಕರೆ ನೀಡಿದ್ದರು. ಇನ್ನು ತೋಂಟದ ಸಿದ್ದಲಿಂಗ ಸ್ವಾಮಿಗಳು, ಪಂಚಮಸಾಲಿ ಲಿಂಗಾಯತ ಮಠದ ಜಯಮೃತ್ಯಂಜಯ ಸ್ವಾಮಿಯವರು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆಯನ್ನು ತಿರಸ್ಕರಿಸುವ ಮಾತನಾಡಿದ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರದುರ್ಗದ ಮುರುಘಾ ಶರಣರು ಅಮಿತ್ ಶಾ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ನೀಡುವಂತೆ ಲಿಖಿತ ಮನವಿ ಸಲ್ಲಿಸಿದ್ದರು. ಬೇಲಿ ಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿಯವರು ಲಿಂಗಾಯತ ಧರ್ಮದ ವಿಷಯ ಚುನಾವಣಾ ಪ್ರೇರಿತವಲ್ಲ. ಮೋದಿ ಅವರು ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದು ವರದಿಯಾಗಿದೆ. ಮೇಲಿನ ಈ ಎಲ್ಲ ವಿರಕ್ತ ಪರಂಪರೆಗೆ ಸೇರಿದ ಮಠಾಧೀಶರ ಹೇಳಿಕೆಗಳು ಲಿಂಗಾಯತ ಧರ್ಮದ ಪರವಾಗಿಯೇ ಇವೆ. ಇದು ಕಾಂಗ್ರೆಸ್‌ಗೆ ಅನುಕೂಲಕರವಾಗಬಹುದು.

ಮತ್ತೊಂದೆಡೆ ಪಂಚಪೀಠಗಳ ಮುಖ್ಯಸ್ಥರು ವ್ಯತಿರಿಕ್ತ ಹೆಜ್ಜೆಗಳನ್ನಿರಿಸಿದ್ದಾರೆ. ಇದಾಗಲೇ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಶ್ರೀಗಳು ಮಾತೆ ಮಹಾದೇವಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಇತ್ತೀಚೆಗೆ ವೀರಶೈವ ಸಮುದಾಯದ ಗುರುಪರಂಪರೆಯ ತರಬೇತಿ ಕೇಂದ್ರವಿರುವ ಬಾದಾಮಿಯ ಶಿವಯೋಗಿ ಮಂದಿರಕ್ಕೆ ಅಮಿತ್‌ ಶಾ ಭೇಟಿ ನೀಡಿದ್ದರು. ಈ ವೇಳೆ ಶಿವಯೋಗಿ ಮಂದಿರದ ಸಂಗನ ಬಸವ ಸ್ವಾಮಿಗಳು, ಶ್ರೀಶೈಲ, ಕಾಶಿ, ಉಜ್ಜಯಿನಿ, ದಿಂಗಾಲೇಶ್ವರ ಸ್ವಾಮಿಗಳ ಸಹಿತ ವೀರಶೈವ ಮಠಗಳ ಸುಮಾರು ೬೦ ಸ್ವಾಮಿಗಳನ್ನು ಅವರು ಭೇಟಿ ಮಾಡಿದ್ದರು. ಇದೇ ಸಂದರ್ಭದಲ್ಲಿಯೇ ಶಾ ಅವರು “ಧರ್ಮ ವಿಭಜನೆಗೆ ಅವಕಾಶ ನೀಡುವುದಿಲ್ಲ” ಎನ್ನುವ ಅರ್ಥದ ಮಾತುಗಳನ್ನಾಡಿದರು ಎನ್ನಲಾಗಿದೆ. ಇದಾಗಲೇ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು, “ವಿಕೃತ ಆನಂದಕ್ಕಾಗಿ ಕೆಲವರು ಧರ್ಮ ವಿಭಜನೆ ಮಾಡುತ್ತಿದ್ದಾರೆ. ಇದಕ್ಕೆ ಕಾಲವೇ ಉತ್ತರಿಸಲಿದೆ,” ಎಂದಿದ್ದಾರೆ. ಧರ್ಮ ಒಡೆದವರಿಗೆ ಉತ್ತರವನ್ನು ನೀಡಲು ಮುಂದಿನ ಚುನಾವಣೆಯಲ್ಲಿ ಸಿದ್ಧತೆ ನಡೆದಿದೆ. ಪಂಚಪೀಠಗಳು ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿಲ್ಲ ಎಂದು ತಿಳಿಸಿದ್ದಾರೆ. ಅದೇನೇ ಇದ್ದರೂ ಪಂಚಪೀಠಗಳ ಈ ನಿಲುವು ಬಿಜೆಪಿಯ ನಿಲುವಿಗೆ ಪೂರಕವಾದದ್ದು ಎನ್ನುವ ಅಭಿಪ್ರಾಯವಂತೂ ಇದೆ.

ಕೆಲ ಪ್ರಮುಖ ಲಿಂಗಾಯತ ಮಠಗಳು ಈ ಬಗ್ಗೆ ಇನ್ನೂ ನಿಖರ ನಿಲುವನ್ನು ತಳೆದಿಲ್ಲವಾದರೂ ಸೂಚ್ಯವಾಗಿ, ಸಾಂಕೇತಿಕವಾಗಿ ತಮ್ಮ ನಿಲುವುನ್ನು ಪ್ರದರ್ಶಿಸಿವೆ. ಸಿದ್ದಗಂಗಾ ಮಠವು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿರುವುದನ್ನು ಸ್ವಾಗತಿಸಿದ್ದು, ಅಲ್ಪಸಂಖ್ಯಾತರ ಸೌಲಭ್ಯಗಳು ಸಮಾಜಕ್ಕೆ ಸಿಕ್ಕರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ. ಮೈಸೂರಿನ ಸುತ್ತೂರು ಮಠದ ವಿಷಯವನ್ನೇ ನೋಡುವುದಾದರೆ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮುಂಚೂಣಿಗೆ ಬಂದಾಗ ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಯವರು ಮೌನವಹಿಸಿದರು. ಆದರೆ, ವಿರಕ್ತ ಪರಂಪರೆಯ ತಮ್ಮ ಮಠದ ಜಾತ್ರಾಮಹೋತ್ಸವದ ಮೊದಲ ದಿನದ ಧಾರ್ಮಿಕ ಸಭೆಗೆ ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿಯವರಿಗೆ ಆಹ್ವಾನ ನೀಡಿದರು. ಮಠದ ಜಾತ್ರಾಮಹೋತ್ಸವದ ಉತ್ಸವದಲ್ಲಿ ಈವರೆಗೆ ಪಂಚಪೀಠಗಳ ಮಠಾಧೀಶರನ್ನು ಕರೆದ ಉದಾಹರಣೆ ಇರಲಿಲ್ಲ. ಹಾಗಾಗಿ, ಈ ಬೆಳವಣಿಗೆಯನ್ನು, ‘ವೀರಶೈವ - ಲಿಂಗಾಯತ’ ಎರಡೂ ಒಂದೇ ಎನ್ನುವ ಸಂದೇಶವನ್ನು ಮಠ ಈ ಮುಖಾಂತರ ನೀಡಿದೆ ಎನ್ನಲಾಯಿತು. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಂಭಾಪುರಿ ಶ್ರೀಗಳ ಮಾತುಗಳೂ ಇದಕ್ಕೆ ಪೂರಕವಾಗಿಯೇ ಇದ್ದವು. ಆದರೆ, ಅದೇ ಮಹೋತ್ಸವದಲ್ಲಿ ಮತ್ತೊಂದು ದಿನದ ವಿಚಾರ ಸಂಕಿರಣದ ವೇಳೆ ಸಾಣೆಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಸ್ವಾಮಿಯವರು ರಂಭಾಪುರಿ ಸ್ವಾಮಿಯವರ ಹೇಳಿಕೆಗೆ ತಿರುಗೇಟು ನೀಡಿದರು. ಇದೆಲ್ಲ ನಡೆದರೂ, ಸುತ್ತೂರು ಶ್ರೀಗಳು ಮಾತ್ರ ಈವರೆಗೆ ಈ ವಿಚಾರದಲ್ಲಿ ತಮ್ಮ ಮೌನ ಮುರಿದಿಲ್ಲ.

ಈ ವಿಚಾರದಲ್ಲಿ ಮತ್ತಷ್ಟು ಮಾಹಿತಿಗೆ ಮುಂದಾಗುವುದಕ್ಕೂ ಮುನ್ನ ಲಿಂಗಾಯತ ಸಮುದಾಯದ ಜನಸಂಖ್ಯೆ ಹಾಗೂ ಪ್ರಾದೇಶಿಕ ಬಾಹುಳ್ಯದ ಸ್ವರೂಪವನ್ನು ಪೂರಕವಾಗಿ ಇಲ್ಲಿ ಗಮನಿಸಬಹುದು. ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಅಧಿಕೃತ ಅಂಕಿಅಂಶಗಳು ಈವರೆಗೆ ಬಹಿರಂಗಗೊಂಡಿಲ್ಲವಾದರೂ ಮಾಧ್ಯಮಗಳಲ್ಲಿ ಇದಾಗಲೇ ವರದಿಯಾಗಿರುವ, ಅಧಿಕೃತವೆನ್ನಲಾದ ‘ಸೋರಿಕೆ’ಯ ಮಾಹಿತಿಯನ್ನು ಆಧರಿಸುವುದಾದರೆ ಪ್ರಸ್ತುತ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಜನಸಂಖ್ಯೆ 59 ಲಕ್ಷದ ಆಸುಪಾಸಿನಲ್ಲಿದೆ. ಇದು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.೯.೮ರಷ್ಟು ಎನ್ನಲಾಗುತ್ತಿದೆ. ದಲಿತ (೧.೦೭ ಕೋಟಿ - ಶೇ.೧೮), ಹಾಗೂ ಮುಸ್ಲಿಂ (೭೫ ಲಕ್ಷ - ೧೨.೫%) ಸಮುದಾಯುಗಳ ನಂತರ ಮೂರನೆಯ ಅತಿದೊಡ್ಡ ಸಮುದಾಯವಾಗಿ ಲಿಂಗಾಯತ ಸಮುದಾಯ ಕಂಡುಬರುತ್ತದೆ.

ಲಿಂಗಾಯತ ಸಮುದಾಯದ ಒಳಪಂಗಡಗಳ ಪ್ರಾದೇಶಿಕ ಬಾಹುಳ್ಯವನ್ನು ಗಮನಿಸುವುದಾದರೆ ಬಣಜಿಗ ಒಳಪಂಗಡವು ಬೀದರ್, ಗುಲ್ಬರ್ಗ‌, ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ - ಧಾರವಾಡ, ಗದಗ್ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಬ್ಬಿದ್ದರೆ, ಪಂಚಮಸಾಲಿ ಸಮುದಾಯವು ಸಹ ಬಿಜಾಪುರ, ಹುಬ್ಬಳ್ಳಿ ಧಾರವಾಡ, ಗದಗ್, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮತ್ತೊಂದು ಪ್ರಮುಖ ಪಂಗಡವಾದ ಸಾದ ಲಿಂಗಾಯತ ಸಮುದಾಯವು ದಾವಣಗೆರೆ, ಚಿತ್ರದುರ್ಗ ಭಾಗಗಳಲ್ಲಿ ಹೆಚ್ಚಿದ್ದರೆ, ರಡ್ಡಿ ಲಿಂಗಾಯತ ಸಮುದಾಯವು ರಾಯಚೂರು, ಯಾದಗಿರಿ, ಬಳ್ಳಾರಿ ಮುಂತಾದ ಗಡಿಭಾಗದ ಜಿಲ್ಲೆಗಳಲ್ಲಿ ಹಬ್ಬಿದೆ. ಈ ಪ್ರಮುಖ ಒಳಪಂಗಡಗಳು ಮಾತ್ರವೇ ಅಲ್ಲದೆ, ನೊಣಬ ಲಿಂಗಾಯತ, ಒಕ್ಕಲಿಗ ಲಿಂಗಾಯತ, ಕುಂಬಾರ ಲಿಂಗಾಯತ, ಹಡಪದ, ಶಿವಸಿಂಪಿ ಮುಂತಾದ ಹತ್ತು ಹಲವು ಒಳಪಂಗಡಗಳು ರಾಜ್ಯಾದ್ಯಂತ ಚದುರಿದಂತೆ ಹರಡಿವೆ. ಆಚರಣೆಗಳ ವಿಷಯದಿಂದ ಗಮನಿಸುವುದಾದರೆ

ಲಿಂಗಾಯತ ಸಮುದಾಯವು ಬಸವಾದಿ ಶರಣರ ತತ್ವಗಳಿಗೆ ನಿಷ್ಠವಾಗಿದ್ದು, ವೇದೋಪನಿಷತ್‌ಗಳಿಂದ ವಿಮುಖವಾಗಿದೆ.

ಇನ್ನು ಲಿಂಗಾಯತ ಸಮುದಾಯವು ಗುರುಸ್ಥಾನದಲ್ಲಿ ಪರಿಗಣಿಸುವ ವೀರಶೈವ ಸಮುದಾಯವು ಬಾಹುಳ್ಯದ ದೃಷ್ಟಿಯಿಂದ ಕಡಿಮೆಯಿದ್ದು ರಾಜ್ಯಾದ್ಯಂತ ಚದುರಿದಂತಿದೆ. ಉತ್ತರ ಕರ್ನಾಟಕದ ಹೋಲಿಕೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಸಾಂದ್ರವಾಗಿದೆ. ಆಚರಣೆಗಳ ದೃಷ್ಟಿಯಿಂದ ವೇದ, ಆಗಮ, ಉಪನಿಷತ್ ಹಾಗೂ ಪುರಾಣಗಳ ತತ್ವಗಳನ್ನು ಆಧರಿಸಿ ವೈದಿಕ ಆಚರಣೆಗೆ ಹೆಚ್ಚಿನ ಒತ್ತು ನೀಡುತ್ತದೆ.

ಇನ್ನು ‘ಮತ’ರಾಜಕಾರಣದ ವಿಷಯಕ್ಕೆ ಬರುವುದಾದರೆ,ಕಾಂಗ್ರೆಸ್‌ನೊಳಗೆ ಲಿಂಗಾಯತ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ನಿಲ್ಲಿಸುವ ಚಿಂತನೆ ಕಾಂಗ್ರೆಸ್‌ನಲ್ಲಿದೆ. ಲಿಂಗಾಯತ ಅಭ್ಯರ್ಥಿಯ ಕಾರಣ ಒಂದೆಡೆಯಾದರೆ, ಮತ್ತೊಂದೆಡೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ ಕಾಂಗ್ರೆಸ್‌ನ ನಿಲುವಿನ ಕಾರಣದಿಂದ ಈ ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದವರು ಕಾಂಗ್ರೆಸ್‌ ಅಭ್ಯರ್ಥಿಯ ಕೈ ಹಿಡಿಯಲಿದ್ದಾರೆ. ಇದರೊಟ್ಟಿಗೆ ಪಕ್ಷದ ಸಾಂಪ್ರದಾಯಿಕ ಮತದಾರರು, ಹಿಂದುಳಿದ ವರ್ಗಗಳ ಮತಗಳೂ ಸೇರಿದರೆ ಗೆಲುವು ಕಷ್ಟವಾಗದು ಎನ್ನುವ ಭಾವನೆ ಇದೆ.

ಇದನ್ನೂ ಓದಿ : ಲಿಂಗಾಯತ ಧರ್ಮ ಸಂಕಟ; ಬೀಸೋ ದೊಣ್ಣೆಯಿಂದ ಪಾರಾಗಲು ಶಾ ಪ್ರಯತ್ನ

ಇತ್ತ ಬಿಜೆಪಿ ಇದನ್ನೊಂದು ಹಿಂದೂಧರ್ಮ ವಿರೋಧಿ ನಡೆ, ವೀರಶೈವ - ಲಿಂಗಾಯತ ಸಮುದಾಯಗಳನ್ನು ಒಡೆಯುವ ಹುನ್ನಾರವಾಗಿ ಬಿಂಬಿಸುವ ಮೂಲಕ ಕಾಂಗ್ರೆಸ್‌ನತ್ತ ಸವರ್ಣೀಯರ ಮತಗಳು ಜಾರದಂತೆ ಎಚ್ಚರವಹಿಸುವ ತಂತ್ರಗಾರಿಕೆಯತ್ತ ಗಮನಹರಿಸಿದೆ. ಕಳೆದ ಹಲವು ಚುನಾವಣೆಗಳಿಂದ ಕಮಲ ಹಿಡಿಯುತ್ತಾ ಬಂದಿರುವ ಲಿಂಗಾಯತ ಸಮುದಾಯ ಅಷ್ಟು ಸುಲಭವಾಗಿ ತನ್ನನ್ನು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಮತಗಳು ಒಡೆದರೂ ಅದರ ಪ್ರಮಾಣ ಕಡಿಮೆ ಇರಲಿದೆ ಎನ್ನುವ ಭಾವನೆಯಲ್ಲಿದೆ. ಆದರೆ, ಪ್ರಮುಖವಾಗಿ ಇಲ್ಲಿ ಗಮನಿಸಬೇಕಿರುವುದು, ಹಿಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಹೋಳಾಗಿ ಕೆಜೆಪಿ ಅಸ್ತಿತ್ವಕ್ಕೆ ಬರುವ ಮೂಲಕ ಮತವಿಭಜನೆಗೆ ಕಾರಣವಾಗಿತ್ತು. ಒಟ್ಟು ಚಲಾವಣೆಯಾದ ಮತಗಳಲ್ಲಿ ಬಿಜೆಪಿ ಶೇ.೧೯.೮೯ ಪಡೆದರೆ ಕೆಜೆಪಿ ಶೇ.೯.೭೯ ಮತ ಪಡೆದಿತ್ತು. ಯಡಿಯೂರಪ್ಪನವರ ಕಾರಣಕ್ಕೆ ಲಿಂಗಾಯತ ಮತ ವಿಭಜನೆ ಗಣನೀಯವಾಗಿ ಆಯಿತು ಎನ್ನುವ ಅನಿಸಿಕೆ ಬಿಜೆಪಿಯಲ್ಲಿ ಇದ್ದದ್ದು ನಿಜ. ಇದೀಗ ಯಡಿಯೂರಪ್ಪನವರು ಬಿಜೆಪಿಯ ತೆಕ್ಕೆಯಲ್ಲಿಯೇ ಇದ್ದರೂ ಲಿಂಗಾಯತ ಧರ್ಮದ ಕಾರಣಕ್ಕಾಗಿ ಮತ್ತೊಮ್ಮೆ ಲಿಂಗಾಯತ ಮತಗಳು ಒಡೆಯುವ ಸಂಭವ ದಟ್ಟವಾಗಿ ಕಾಣುತ್ತಿದೆ. ಇದನ್ನು ತಡೆಯಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ ಎನ್ನುವ ನಂಬಿಕೆ ಪಕ್ಷದ ವರಿಷ್ಠರಿಗೆ ಇಲ್ಲ. ಅಲ್ಲದೆ, ಹೀಗೆ ಚದರುವ ಮತಗಳ ಪ್ರಮಾಣ ಎಷ್ಟಿರಲಿದೆ ಎನ್ನುವುದು ಅಂದಾಜಿಗೂ ದಕ್ಕುತ್ತಿಲ್ಲ.

ಇತ್ತ ಕಾಂಗ್ರೆಸ್‌ನಲ್ಲಿಯೂ ಸಹ ಈ ಸ್ವಿಂಗ್ ಪ್ರಮಾಣ ಎಷ್ಟಿರಬಹುದು ಎನ್ನುವ ಅಂದಾಜು ಲಭ್ಯವಿಲ್ಲ. ಲಿಂಗಾಯತ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಲಿಂಗಾಯತ ಅಭ್ಯರ್ಥಿಯು ನಿಂತರೆ ಈ ‘ಸ್ವಿಂಗ್’ ಪ್ರಮಾಣ ಗರಿಷ್ಠ ವಾಗಬಹುದು, ಅದೇ ವೇಳೆ ಅಲ್ಪಸಂಖ್ಯಾತರು ಹಾಗೂ ದಲಿತ ಅಭ್ಯರ್ಥಿಗಳು ಪಕ್ಷದ ಅಭ್ಯರ್ಥಿಯಾಗಿ ನಿಲ್ಲುವ ಕ್ಷೇತ್ರಗಳಲ್ಲಿ ಈ ಪ್ರಮಾಣ ನಗಣ್ಯವಾಗಬಹುದು ಎನ್ನುವುದು ಊಹೆ. ಇದೇ ಕಾರಣಕ್ಕೆ ಇದೀಗ ಲಿಂಗಾಯತ ಧರ್ಮದ ವಿಚಾರವಾಗಿ ತಾನು ತೆಗೆದುಕೊಂಡ ನಿರ್ಧಾರದ ಗರಿಷ್ಠ ಲಾಭ ಪಡೆಯಬೇಕೆಂದರೆ ಟಿಕೆಟ್‌ ಹಂಚಿಕೆ ಮಾಡುವಾಗ ಹೆಚ್ಚು ಲೆಕ್ಕಾಚಾರದಿಂದ ಹೆಜ್ಜೆ ಇಡಬೇಕು ಎನ್ನುವ ಅಭಿಪ್ರಾಯ ಕಾಂಗ್ರೆಸ್‌ನಲ್ಲಿ ಮೂಡಿದೆ.

ಸನ್ನಿವೇಶದ ಈ ಸೂಕ್ಷ್ಮಗಳು ಸಹಜವಾಗಿಯೇ ಲಿಂಗಾಯತ ಹಾಗೂ ವೀರಶೈವ ಮಠಗಳ ಚುನಾವಣಾ ಪ್ರಸ್ತುತತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಹಾಗಾಗಿಯೇ, ಕಾಂಗ್ರೆಸ್‌ ಹಾಗೂ ಬಿಜೆಪಿಯ ಮುಖಂಡರು ಈ ಮಠಗಳಿಗೆ ಮತ್ತೆ ಮತ್ತೆ ಎಡತಾಕ ತೊಡಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More