ಉಪವಾಸದಂತಹ ಸಾತ್ವಿಕ ಹಾದಿ ತುಳಿಯುವ ನೈತಿಕ ವರ್ಚಸ್ಸು ಮೋದಿ ಅವರಿಗಿದೆಯೆ?

ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಮೇಲೆ ಆರೋಪಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಉಪವಾಸ ನಡೆಸಿದೆ. ಇದೀಗ ಅದೇ ಉಪವಾಸ ಹಾದಿಯನ್ನು ನರೇಂದ್ರ ಮೋದಿ ತುಳಿಯುವುದು ಏನನ್ನು ಸೂಚಿಸುತ್ತದೆ?

೨೦೧೯ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸ್ಪರ್ಧೆಯೂ ತೀವ್ರವಾಗಿದ್ದು, ರಾಜಕೀಯ ಪಕ್ಷಗಳ ನಾಯಕರು ಕೀಳು ಮಟ್ಟದ ರಾಜಕೀಯಕ್ಕೆ ಇಳಿಯಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಜನರು ಸಾಮಾಜಿಕ ತಾಣಗಳಲ್ಲಿ ಕಳವಳ ವ್ಯಕ್ತಪಡಿಸುತ್ತಿದ್ದರು. ಕೆಲವರಂತೂ ದೊಂಬಿ ಮತ್ತು ಗಲಭೆ ಇನ್ನು ಮುಂದೆ ಹೆಚ್ಚಾಗುವ ನಿರೀಕ್ಷೆಯನ್ನೂ ಇಟ್ಟಿದ್ದಾರೆ. ಆದರೆ ವಿಚಿತ್ರವೆನ್ನುವಂತೆ ಇದೀಗ ರಾಜಕೀಯ ಪಕ್ಷಗಳು ಸತ್ಯಾಗ್ರಹ ದಾರಿಯನ್ನು ತುಳಿದು ತಮ್ಮ ವಿರೋಧಿಗಳಿಗೆ ತಿರುಗೇಟು ಕೊಡುತ್ತಿವೆ. ಇದೇ ಸೋಮವಾರದಂದು ನವದೆಹಲಿಯ ರಾಜ್‌ಘಾಟ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್, ಬಿಜೆಪಿಯ ಕೋಮುವಾದಿ ನಡೆ ಮತ್ತು ಸಂಸತ್ ಕಲಾಪಗಳಿಗೆ ಅವಕಾಶ ಕೊಡದೆ ಇರುವ ನೀತಿ ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡಿದರೆ, ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸತ್ ಕಲಾಪಗಳು ನಡೆಯದಿರಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. “ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ವಿರೋಧಿಯಾಗಿರುವ ಬಿಜೆಪಿ ಧೋರಣೆಗಳ ವಿರುದ್ಧ ಸಾಂಕೇತಿಕವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ,” ಎಂದು ರಾಹುಲ್ ಗಾಂಧಿ ಅಧಿಕೃತವಾಗಿ ಉಪವಾಸ ಸತ್ಯಾಗ್ರಹ ಮುಕ್ತಾಯದ ನಂತರ ಹೇಳಿಕೆ ನೀಡಿದ್ದರು. ಇದೀಗ ಬಿಜೆಪಿಯೂ ನರೇಂದ್ರ ಮೋದಿ ನೇತೃತ್ವದಲ್ಲಿ ಏಪ್ರಿಲ್ ೧೨ರಂದು ಉಪವಾಸ ಸತ್ಯಾಗ್ರಹ ಮಾಡುತ್ತಿದೆ. ರಾಜಕೀಯ ಪಕ್ಷಗಳ ಈ ಹೊಸ ವರಸೆ ಏನನ್ನು ಸೂಚಿಸುತ್ತದೆ?

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್‌ಘಾಟ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ತಕ್ಷಣ ಬಿಜೆಪಿಯೂ ಉಪವಾಸಕ್ಕೆ ಒಂದು ಕಾರಣವನ್ನು ಕಂಡುಕೊಂಡ ಹಾಗಿದೆ. ಹೀಗಾಗಿ ‘ಉಪವಾಸ’ ಎನ್ನುವ ಮಹಾತ್ಮ ಗಾಂಧಿಯವರು ಜಗತ್ತಿಗೆ ನೀಡಿರುವ ಅಸ್ತ್ರವನ್ನು ಮುಂದಿನ ಲೋಕಸಭಾ ಚುನಾವಣಾ ಸಮಯದಲ್ಲಿ ಶಕ್ತಿಯಾಗಿ ಬಳಕೆ ಮಾಡುವ ಪ್ರಯತ್ನದಲ್ಲಿ ಪ್ರಮುಖ ಪಕ್ಷಗಳು ಸ್ಪರ್ಧೆಯಲ್ಲಿವೆಯೇ ಎಂದೂ ಅನುಮಾನ ಬರುತ್ತಿದೆ. ಉಪವಾಸ ಸತ್ಯಾಗ್ರಹದ ಅಸ್ತ್ರವನ್ನೇ ಅಣ್ಣಾ ಹಜಾರೆಯವರು ೨೦೧೩ರಲ್ಲಿ ಯಶಸ್ವಿಯಾಗಿ ಕಾಂಗ್ರೆಸ್ ವಿರುದ್ಧ ಬಳಸಿದ್ದರು. ಅವರ ಉಪವಾಸದ ಲಾಭ ಪಡೆದುಕೊಂಡು ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾದರೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡಿತು. ಈ ಬಾರಿ ಮಾತ್ರ ಅಣ್ಣಾ ಹಜಾರೆ ಉಪವಾಸದ ದಾರಿಯನ್ನು ಹಿಡಿದು ಬಿಜೆಪಿ ಮುಖ್ಯಮಂತ್ರಿಯ ಮಾತಿಗೆ ಒಪ್ಪಿಕೊಂಡು ಹಿಂದೆ ಸರಿದರು.

ಏಪ್ರಿಲ್ ೧೨ರ ಬಿಜೆಪಿಯ ಉಪವಾಸ ಸತ್ಯಾಗ್ರಹವನ್ನು ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಒಂದು ಉಪವಾಸ ತಂತ್ರವನ್ನು ಬಳಸಿಕೊಳ್ಳುವ ವ್ಯಕ್ತಿಗಳು ಮತ್ತು ಅವರ ಉದ್ದೇಶಗಳು. ಮತ್ತೊಂದು ಉಪವಾಸಕ್ಕೆ ಅವರು ನೀಡುವ ಕಾರಣಗಳು. ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೇವಲ ಸಾಂಕೇತಿಕವಾಗಿತ್ತು ಎಂದು ಬಿಜೆಪಿ ದೂಷಿಸಿದ್ದನ್ನು ಒಪ್ಪಿಕೊಳ್ಳೋಣ. ಆದರೆ ಬಿಜೆಪಿ ಏಕೆ ಕಾಂಗ್ರೆಸ್ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿದೆ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.

ಇದನ್ನೂ ಓದಿ : ನರೇಂದ್ರ ಮೋದಿ ಮತ್ತು ಎ ಬಿ ವಾಜಪೇಯಿಗೆ ಭೂಮಿ ಮತ್ತು ಆಕಾಶದ ವ್ಯತ್ಯಾಸ | ಶರದ್ ಯಾದವ್ ಸಂದರ್ಶನ

ಮುಖ್ಯವಾಗಿ ನರೇಂದ್ರ ಮೋದಿಯವರು ಉಪವಾಸದಂತಹ ಸಾತ್ವಿಕ ಹಾದಿಯನ್ನು ತುಳಿಯುವ ನೈತಿಕ ವರ್ಚಸ್ಸು ಹೊಂದಿದ್ದಾರೆಯೇ? ಮಹಾತ್ಮ ಗಾಂಧಿಯಂತಹ ವ್ಯಕ್ತಿ ಜಗತ್ತಿಗೆ ಪರಿಚಯಿಸಿದ ಉಪವಾಸ ಸತ್ಯಾಗ್ರಹದ ಹಾದಿ ಅವರ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿತ್ವದ ಜೊತೆಗೆ ಮಿಳಿತಗೊಂಡು ಒಂದು ಬಲಿಷ್ಠ ಶಸ್ತ್ರವಾಗಿ ಬ್ರಿಟಿಷ್ ವ್ಯವಸ್ಥೆಯ ವಿರುದ್ಧ ಯಶಸ್ವೀ ಹೋರಾಟವನ್ನು ಆಯೋಜಿಸಲು ನೆರವಾಗಿತ್ತು. ಆದರೆ ಪ್ರಧಾನಿ ಮೋದಿಯವರಿಗೆ ಅದೇ ಸಾತ್ವಿಕ ವರ್ಚಸ್ಸು ಇದೆಯೆ? ೨೦೧೯ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿಯವರು ಹೊಸ ವರ್ಚಸ್ಸನ್ನು ತಮ್ಮ ಸುತ್ತ ಹರಡಿಕೊಳ್ಳುವ ಕಪಟಸೂತ್ರವನ್ನು ಹೆಣೆಯುತ್ತಿದ್ದಾರೆಯೇ ಅಥವಾ ಮೋದಿಯವರು ಇದನ್ನು ಮೋದಿ ಬ್ರಾಂಡ್‌ಗೆ ಹೊಸ ಆಯಾಮವನ್ನು ಕಟ್ಟಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆಯೆ? ಹಿಂದೆ ಗುಜರಾತ್‌ನಲ್ಲಿ ಸದ್ಬಾವನಾ ರ‍್ಯಾಲಿಯನ್ನು ಆಯೋಜಿಸಿದ ನರೇಂದ್ರ ಮೋದಿಯವರು ಅಲ್ಪಸಂಖ್ಯಾತ ಸಮುದಾಯ ತಮಗೆ ತೊಡಿಸಲು ಪ್ರಯತ್ನಿಸಿದ ಅವರ ಟೋಪಿಯನ್ನು ಪಡೆದುಕೊಳ್ಳಲು ನಿರಾಕರಿಸಿದರು. ಅಲ್ಲದೆ, ಗೋಧ್ರಾ ನಂತರದ ಗಲಭೆಗಳ ಬಗ್ಗೆ ಅವರು ಇಂದಿಗೂ ಒಂದೂ ಪಶ್ಚಾತ್ತಾಪದ ಶಬ್ದವನ್ನು ಆಡಿಲ್ಲ. ಇಂತಹ ಆತ್ಮವಂಚನೆಯ ತಂತ್ರಗಳು ಚುನಾವಣೆ ಗೆಲ್ಲುವ ಯಶಸ್ವೀ ಸೂತ್ರವಾಗುವುದೇ ಎನ್ನುವುದೂ ಮುಖ್ಯ ಪ್ರಶ್ನೆ.

ದೇಶದಲ್ಲಿ ಗೋ ಹತ್ಯೆ ಹೆಸರಲ್ಲಿ ಅಸಂಖ್ಯಾತರು, ದಲಿತರ ಕೊಲೆಗಳು ಆಗಿವೆ. ಹಾಡಹಗಲೇ ಜನಸಮೂಹ ಅಖ್ಲಾಕ್ ಎಂಬುವವರ ಮನೆಗೆ ನುಗ್ಗಿ ದನದ ಮಾಂಸ ತಿಂದ ಆರೋಪ ಹೊರಿಸಿ ಆತನನ್ನು ಕೊಲೆ ಮಾಡುತ್ತದೆ. ಆಗ ಮೌನವ್ರತ ಆಚರಿಸಿದ ನರೇಂದ್ರ ಮೋದಿಯವರು, ಅಖ್ಲಾಕ್ ಬಗ್ಗೆ ಇದುವರೆಗೂ ಒಂದು ಪಶ್ಚಾತ್ತಾಪದ ಮಾತನ್ನೂ ಆಡಲಿಲ್ಲ. ಉತ್ತರಪ್ರದೇಶದ ಒಬ್ಬ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯ ಮೇಲೆ ಕರುಣೆ ಬಾರದೆ ಇರಬಹುದು. ಆದರೆ ತಮ್ಮ ವೋಟ್ ಬ್ಯಾಂಕ್ ಆಗಿರುವ ದಲಿತರ ಮೇಲೂ ಮೋದಿಯವರಿಗೆ ಕರುಣೆ ಬರಲಿಲ್ಲವೆ? ತಮ್ಮದೇ ರಾಜ್ಯ ಗುಜರಾತ್‌ನ ಊನಾದಲ್ಲಿ ದಲಿತರ ಮೇಲೆ ಹಲ್ಲೆ ನಡೆದಾಗ ಅವರ ಬಾಯಿಂದ ಒಂದೂ ಪಶ್ಚಾತ್ತಾಪದ ಹೇಳಿಕೆ ಹೊರಬರಲಿಲ್ಲ. ನೋವನ್ನೂ ಅವರು ಪ್ರಕಟಿಸಲಿಲ್ಲ. ಹಾಗಿರುವಾಗ ಇತ್ತೀಚೆಗೆ ನರೇಂದ್ರ ಮೋದಿಯವರು “ಬಹಳ ನೋವಾಗಿದೆ” ಎನ್ನುವ ಮಾತುಗಳನ್ನು ಆಗಾಗ್ಗೆ ಕೆಲವು ಪ್ರಕರಣಗಳಲ್ಲಿ ತಮ್ಮ ಮೂಲಗಳ ಮೂಲಕ ಪ್ರಕಟಿಸುವುದು ಏಕೆ? ಪ್ರತಿಮೆಗಳ ನಾಶ, ಚುನಾವಣೆ ನಂತರ ಗಲಭೆ ವಿಚಾರದಲ್ಲಿ ನಾವು ಇದನ್ನು ನೋಡಿದ್ದೇವೆ. ಸಾತ್ವಿಕ ವರ್ಚಸ್ಸನ್ನು ಬೆಳೆಸಿಕೊಳ್ಳಲು ಹೋಗುತ್ತಿರುವ ನರೇಂದ್ರ ಮೋದಿಯವರು ತಮ್ಮ ಪಕ್ಷದ ಮೇಲಿರುವ ಹಿಂಸಾಚಾರ ಆರೋಪದ ಕರಿನೆರಳನ್ನು ಕೊಡವಿಕೊಳ್ಳಬಲ್ಲರೆ?

ಅದೇನೇ ಇರಲಿ, ಸಂಸತ್ತು ಸ್ಥಗಿತವಾದಾಗ ನರೇಂದ್ರ ಮೋದಿಯವರಿಗೆ ಬಹಳ ನೋವಾಗಿದೆ. ಹೀಗಾಗಿ ಉಪವಾಸ ಮಾಡುತ್ತಿದ್ದಾರೆ. ಆದರೆ ಸಂಸತ್ತು ನಡೆಸಬೇಕಾದ ನೈತಿಕ ಹೊಣೆಗಾರಿಕೆ ಇರುವುದು ಯಾರ ಮೇಲೆ? “ವಿರೋಧ ಪಕ್ಷಗಳು ಕೆಲವು ವಿಷಯಗಳನ್ನು ಹಿಡಿದು ಸಂಸತ್ತಿನ ಕಾರ್ಯಕಲಾಪಗಳಿಗೆ ಅಡ್ಡಿ ಮಾಡಿದರು ಎಂದು ಆರೋಪಿಸುವುದು ತಾಂತ್ರಿಕವಾಗಿ (ಟೆಕ್ನಿಕಲಿ) ಸರಿಯೆನಿಸಬಹುದು. ಸಂಸತ್ತು ಉತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮ ಮಸೂದೆಗಳನ್ನು ಅಂಗೀಕರಿಸಿದರೆ ಅದರ ಶ್ರೇಯಸ್ಸನ್ನು ಸರ್ಕಾರ ವಿರೋಧಪಕ್ಷಗಳಿಗೆ ಕೊಡಲಿದೆಯೇ? ಉಪವಾಸ ಸತ್ಯಾಗ್ರಹ ಮಾಡಬೇಕಾದ ಅಗತ್ಯ ಸರ್ಕಾರಕ್ಕೆ ಯಾವಾಗ ಬರುತ್ತದೆ? ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸತ್ತಿನ ಕಾರ್ಯಕಲಾಪ ಸುಗಮವಾಗಿ ನಡೆಸುವಂತಾಗಬೇಕು. ಸಮಸ್ಯೆ ಸೃಷ್ಟಿಸುವ ವಿರೋಧ ಪಕ್ಷಗಳ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ತನ್ನ ಈ ಬದ್ಧತೆಯಲ್ಲಿ ವಿಫಲವಾದಾಗ ಈ ಸಮಸ್ಯೆ ಉದ್ಭವಿಸುತ್ತದೆ,” ಎನ್ನುತ್ತಾರೆ ನವದೆಹಲಿಯಲ್ಲಿ ಸಂಸತ್ ವ್ಯವಹಾರಗಳನ್ನು ವರದಿ ಮಾಡುವ ಹೆಸರು ಹೇಳಲಿಚ್ಛಿಸದ ಮುಖ್ಯವಾಹಿನಿ ಪತ್ರಕರ್ತರು. ಸಂಸತ್ ವ್ಯವಹಾರಗಳನ್ನು ವರದಿ ಮಾಡುವ ಮತ್ತೊಬ್ಬ ಪತ್ರಕರ್ತರೂ ಇದೇ ರೀತಿಯ ಉದಾಹರಣೆಗಳನ್ನು ಕೊಡುತ್ತಾರೆ. “ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸದನದ ಕಲಾಪಗಳು ನಡೆಯಬೇಕು ಎನ್ನುವ ಉದ್ದೇಶದಿಂದ ಸಂಸದರಿಗೆ ಭೋಜನ ಕೂಟವೊಂದನ್ನು ಆಯೋಜಿಸುವುದಾಗಿ ಘೋಷಿಸಿದ್ದರು. ಆದರೆ ನಂತರ ಅವರ ನಿಲುವೇ ಬದಲಾಯಿತು. ಅವರು ಭೋಜನಕೂಟವನ್ನು ರದ್ದುಪಡಿಸಿ, ‘ಸಂಸದರು ನನ್ನ ಮಾತೇ ಕೇಳುವುದಿಲ್ಲ. ಇನ್ನು ಭೋಜನಕೂಟದಿಂದ ಏನು ಪ್ರಯೋಜನ’ ಎಂದು ಸುಮ್ಮನಾದರು” ಎನ್ನುತ್ತಾರೆ ಮತ್ತೊಬ್ಬ ಪತ್ರಕರ್ತರು.

ಹೀಗಾಗಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸಂಸದರ ಉಪವಾಸ ಸತ್ಯಾಗ್ರಹ ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನವಾಗಿ ಕಾಣಿಸುತ್ತದೆ. ಅಲ್ಲದೆ, ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಸಂಸತ್ ಕಲಾಪಗಳಿಗೆ ತೊಂದರೆ ಮಾಡಿಯೇ ಇಲ್ಲವೆ? ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ಮಾಡಿದ್ದಾದರೂ ಏನು? ಸಂಸತ್ತು ಕಾರ್ಯ ಕಲಾಪ ಸುಗಮವಾಗಿ ನಡೆಯುವ ಅವಕಾಶ ಕೊಟ್ಟಿತೆ? ಮನಮೋಹನ್ ಸಿಂಗ್ ಸರ್ಕಾರ ಅಧಿಕಾರದಲ್ಲಿದ್ದಾಗ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿಯವರನ್ನು ಒಲಿಸಿಕೊಂಡು ಸಂಸತ್ತನ್ನು ನಡೆಸಲು ಕಾಂಗ್ರೆಸ್ ಪ್ರಯತ್ನಿಸಿಲ್ಲವೆ?

ಈ ಬಾರಿ ಕಾಂಗ್ರೆಸ್ ನೀರವ್ ಮೋದಿ ಹಾಗೂ ಸುಪ್ರೀಂಕೋರ್ಟ್ ನ್ಯಾಯಾಧೀಶರ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದೆ. ಇದರ ಜೊತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ತಮಿಳುನಾಡಿನ ಕಾವೇರಿ ಗಲಭೆಗಳೂ ಸಂಸತ್ತಿನ ಕಲಾಪಗಳನ್ನು ನುಂಗಿ ಹಾಕಿವೆ. ಈ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನವನ್ನೇಕೆ ಮೋದಿ ಸರ್ಕಾರ ಮಾಡಿಲ್ಲ? ಹಿಂದೆ ಕ್ಯಾಗ್ ವರದಿ ವಿಚಾರವಾಗಿ ಬಿಜೆಪಿ ಸಂಸತ್ತಿನ ಕಲಾಪಗಳನ್ನು ನಡೆಸಲು ಅವಕಾಶ ನೀಡದೆ ಇದ್ದಾಗ, ಸ್ವತಃ ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೇ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಆದಿಯಾಗಿ ಬಿಜೆಪಿಯ ಹಿರಿಯ ನಾಯಕರು ಅನೇಕರು ಸಂಸತ್ ಕಲಾಪಗಳಿಗೆ ಅಡ್ಡಿ ಮಾಡುವುದು ತಮ್ಮ ಹಕ್ಕು ಎಂದೂ ಹೇಳಿದ್ದರು. ಹೀಗಿರುವಾಗ ಈಗ ಸಂಸತ್ ಕಲಾಪಗಳನ್ನು ನಡೆಸಲು ವಿಫಲವಾದ ಬಿಜೆಪಿ ಸರ್ಕಾರ ಅದಕ್ಕೆ ವಿಪಕ್ಷಗಳನ್ನು ದೂರುವುದು ಸರಿಯೆ? ಪ್ರಧಾನಿ ಮೋದಿಯವರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸಂಸತ್ತು ಒಂದೂ ಪೂರ್ಣ ಸದನವನ್ನು ಕಾಣದೆ ಕೊನೆಗೊಂಡಿರುವುದರ ನೈತಿಕ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನುಳಿದಂತೆ, ಉಪವಾಸದ ತಂತ್ರ ಅವರ ವರ್ಚಸ್ಸಿಗೆ ಎಂತಹ ಗರಿಮೆಯನ್ನು ಕೊಡಲಿದೆ ಎನ್ನುವ ಪ್ರಶ್ನೆಗೆ ಮುಂದಿನ ಲೋಕಸಭಾ ಚುನಾವಣೆಯೇ ಉತ್ತರಿಸಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More