ಸೊರಗಿದ ಕಾಂಗ್ರೆಸ್, ಬಿಜೆಪಿ; ಜೆಡಿಎಸ್ ಹುರಿಯಾಳುಗಳ ಕಾರುಬಾರು

ತುರುವೇಕೆರೆಯಲ್ಲಿ ಜೆಡಿಎಸ್‌ನಿಂದ ಎಂ ಟಿ ಕೃಷ್ಣಪ್ಪ ಅಭ್ಯರ್ಥಿಯೆಂದು ಘೋಷಣೆಯಾಗಿದೆ. ಹೀಗಾಗಿ ಅವರು ಪ್ರಚಾರ ಕೈಗೊಂಡಿದ್ದಾರೆ. ಆದರೆ ಬಿಜೆಪಿಗೆ ಮಸಾಲಾ ಜಯರಾಂ ಸ್ಪರ್ಧಿಸಿದರೆ ಕೆಜೆಪಿ ಮತ್ತು ಬಿಜೆಪಿ ಪ್ರಶ್ನೆ ಎದುರಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಮನೆಮಾಡಿದೆ

ತುರುವೇಕೆರೆಯ ರಾಜಕೀಯ ಲೆಕ್ಕಾಚಾರ ಅನೇಕ ಏಳುಬೀಳುಗಳನ್ನು ಕಂಡಿದೆ. ೧೯೫೭ರಲ್ಲಿ ಮೊದಲ ಚುನಾವಣೆ ನಡೆದು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಬಿ ಹುಚ್ಚೇಗೌಡರು ಎರಡು ಬಾರಿ ಆಯ್ಕೆಯಾಗಿರುವುದು ವಿಶೇಷ. ಈ ಅವಧಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟು ನಂತರ ಚಿಗಿತುಕೊಂಡಿರುವುದನ್ನು ಅಂಕಿಅಂಶಗಳಿಂದ ಕಾಣಬಹುದು. ಪಕ್ಷೇತರ ಅಭ್ಯರ್ಥಿ ಇಲ್ಲಿ ಆರಿಸಿ ಬಂದಿರುವುದು ಇಲ್ಲವೆಂದೇ ಹೇಳಬೇಕು. ಪ್ರಜಾ ಸೋಷಿಯಲಿಸ್ಟ್ ಪಕ್ಷ, ಕಾಂಗ್ರೆಸ್, ಜನತಾ ದಳ ಮತ್ತು ಬಿಜೆಪಿ ಅಧಿಕಾರ ಹಂಚಿಕೊಂಡಿವೆ. ಒಕ್ಕಲಿಗರು, ಬಣಜಿಗರು, ಬೆಸ್ತರು, ಗೊಲ್ಲರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಲಿಂಗಾಯತರು ಮತ್ತು ಇತರ ಸಣ್ಣಪುಟ್ಟ ಜಾತಿ ಜನರು ಇಲ್ಲಿನ ಮತದಾರರು.

ತಾಲೂಕಿನಲ್ಲಿ ಒಕ್ಕಲಿಗರದೇ ಪ್ರಾಬಲ್ಯ. ಇದುವರೆಗೆ ತಾಲೂಕಿನಲ್ಲಿ ಆಯ್ಕೆಯಾಗಿರುವ ಬಹುತೇಕ ಶಾಸಕರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ೧೯೬೭, ೧೯೭೨, ೧೯೭೮ ಮತ್ತು ೧೯೮೩ ಕಾಂಗ್ರೆಸ್ ನಿರಂತರವಾಗಿ ಆಯ್ಕೆ ಆಗುತ್ತ ಬಂದಿರುವುದು ಕಾಂಗ್ರೆಸ್ ಪ್ರಾಬಲ್ಯವಿದ್ದ ಕ್ಷೇತ್ರ ಎಂಬುದನ್ನು ತೋರಿಸುತ್ತದೆ. ಈ ಅವಧಿಯಲ್ಲಿ ಕಾಂಗ್ರೆಸ್‌ನ ಎಂ ಎನ್ ರಾಮಣ್ಣ, ಬೈರಪ್ಪಾಜಿ ಗೆದ್ದು ಬಂದಿದ್ದಾರೆ.

ತುರುವೇಕೆರೆ ತಾಲೂಕಿನಲ್ಲಿ ಬಲಿಷ್ಠ ನಾಯಕರೆಂದು ಗುರುತಿಸಿಕೊಂಡವರು ಎಚ್ ಬಿ ನಂಜೇಗೌಡ. ೧೯೯೪ ಜನತಾ ದಳ ಅಧಿಕಾರ ಅವಧಿಯಲ್ಲಿ ಎಚ್ ಬಿ ನಂಜೇಗೌಡ ಆಯ್ಕೆಯಾಗಿ ಬಂದರು. ಆದರೆ ಕೇವಲ ೫ ವರ್ಷ ಮಾತ್ರ ಶಾಸಕರಾಗಿದ್ದರು.

ನಂತರ ಬದಲಾದ ರಾಜಕೀಯ ಕಾಲಮಾನದಲ್ಲಿ ೧೯೯೯ರಲ್ಲಿ ಬಿಜೆಪಿಯ ಎಂ ಡಿ ಲಕ್ಷ್ಮೀನಾರಾಯಣ್ ಮೊದಲ ಬಾರಿಗೆ ಆಯ್ಕೆ ಆಗಿ ಬಂದರು. ಅವರು ಪಡೆದ ಮತ ಪ್ರಮಾಣ ೩೮೧೨೨ ಅಂದರೆ ಶೇ.೪೦.೪೬ರಷ್ಟು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಂ ಟಿ ಕೃಷ್ಣಪ್ಪ ಅದೇ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ೨೨,೭೯೦ (ಶೇ.೨೪.೧೯) ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ಕೋಟೆಯಾಗಿದ್ದ ತುರುವೇಕೆರೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದು ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ೧೨,೬೫೦ (೧೩.೪೩) ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಅಂದರೆ ಈ ಅವಧಿಯಿಂದಲೇ ಕಾಂಗ್ರೆಸ್ ಮತ ಪ್ರಮಾಣ ಕಡಿಮೆಯಾಗುತ್ತಾ ಬಂದು ಅದು ತಾಲೂಕಿನಲ್ಲಿ ಸೊರಗಿ ಹೋಗಿರುವುದು ಈಗ ಇತಿಹಾಸವಾಗಿ ಉಳಿದಿದೆ.

೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ ಟಿ ಕೃಷ್ಣಪ್ಪ ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು ೩೯,೯೩೪ ಮತಗಳನ್ನು ಪಡೆದು ಆಯ್ಕೆಯಾದರು. ಮೊದಲ ಬಾರಿಗೆ ಜೆಡಿಎಸ್ ಖಾತೆ ತೆರೆದರೂ ಎಂ ಟಿ ಕೃಷ್ಣಪ್ಪ ಪ್ರತಿಪಕ್ಷ ಸ್ಥಾನದಲ್ಲೇ ಕುಳಿತುಕೊಳ್ಳಬೇಕಾಯಿತು. ಬಿಜೆಪಿಯ ಎಂ ಡಿ ಲಕ್ಷ್ಮೀನಾರಾಯಣ್ ಯಡಿಯೂರಪ್ಪನವರ ಕೃಪಾ ಕಟಾಕ್ಷದಿಂದ ಟಿಕೆಟ್ ಪಡೆದು ೩೦, ೭೭೬ ಮತಗಳನ್ನು ಗಳಿಸಿ ಗೆದ್ದರು. ಇದೇ ಮೊದಲ ಗೆಲುವು ಮತ್ತೆ ಯಾವುದೇ ಚುನಾವಣೆಯಲ್ಲೂ ಅವರು ಮರುಆಯ್ಕೆ ಆಗಲಿಲ್ಲ. ಬಿಜೆಪಿಯೂ ಕೂಡ ತಾಲೂಕಿನಲ್ಲಿ ಸೊರಗುತ್ತ ಜೆಡಿಎಸ್ ಬಲ ಹೆಚ್ಚಿಸಿಕೊಂಡೇ ಬಂತು.

೨೦೦೮ ವಿಧಾನಸಭಾ ಚುನಾವಣೆಯಲ್ಲಿ ನವರಸ ನಾಯಕ ಜಗ್ಗೇಶ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಬಂದರು. ಅವರು ೪೭,೮೪೯ ಪಡೆದು (ಶೇ.೩೭.೪೯) ಆಯ್ಕೆಯಾದರೂ ಅವರು ಕಾಂಗ್ರೆಸ್ನಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಈ ಅವಧಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ ಡಿ ಲಕ್ಷ್ಮೀನಾರಾಯಣ ೩೮,೩೨೩ ಮತ ಗಳಿಸಿ ಶೇಕಡ ೩೦.೦೨ರಷ್ಟು ಪಡೆದು ಎರಡನೇ ಸ್ಥಾನ ಗಳಿಸಿಕೊಂಡರು. ಜೆಡಿಎಸ್‌ನ ಎಂ ಟಿ ಕೃಷ್ಣಪ್ಪ ೩೫,೪೫೯ ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಆಗ ಕಾಂಗ್ರೆಸ್ ಶಾಸಕರಾಗಿದ್ದ ಜಗ್ಗೇಶ್ ಬದಲಾದ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ನಂತರ ನಡೆದ ಚುನಾವಣೆಯಲ್ಲಿ ಪರಾಭವಗೊಂಡರು. ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿಂದಲೇ ಬಿಜೆಪಿಯ ಪತನ ಆರಂಭವಾಗಿದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲೇ ಇಲ್ಲ.

೨೦೧೩ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದು ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ನ ಎಂ ಟಿ ಕೃಷ್ಣಪ್ಪ ಮರು ಆಯ್ಕೆಯಾದರು. ಅವರು ೬೬,೦೮೯ ಮತ ಪಡೆದು ಶೇ.೪೭.೧೮ ಮತಪ್ರಮಾಣ ದಾಖಲಿಸಿದರು. ಅವರ ಪ್ರತಿಸ್ಪರ್ಧಿ ಕೆಜೆಪಿಯ ಮಸಾಲಾ ಜಯರಾಂ ಮೊದಲ ಬಾರಿಗೆ ಸ್ಪರ್ಧೆಯೊಡ್ಡಿ ೫೭,೧೬೪ ಮತ ಅಂದರೆ ಶೇ.೪೦ರಷ್ಟು ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇದನ್ನೂ ಓದಿ : ಕೊರಟಗೆರೆ; ಪರಮೇಶ್ವರ್ ಮತ್ತು ಸುಧಾಕರ್ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ

ಹಲವು ರಾಜಕೀಯ ಏರಿಳಿತಗಳ ನಡುವೆ ಬಿಜೆಪಿಯಲ್ಲಿದ್ದ ಎಂ ಡಿ ಲಕ್ಷ್ಮೀನಾರಾಯಣ್ ಆ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಎಂ ಟಿ ಕೃಷ್ಣಪ್ಪ ಜೆಡಿಎಸ್ ಶಾಸಕರಾದರು. ಇವರಿಬ್ಬರ ನಡುವೆ ಪೈಪೋಟಿ ಇದೆ. ಎಂ ಡಿ ಲಕ್ಷ್ಮೀನಾರಾಯಣ್ ಕಾಂಗ್ರೆಸ್‌ಗೆ ಸೇರಿರುವುದು ಬಲ ತಂದಿದೆ. ಆದರೂ ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಕಾಂಗ್ರೆಸ್ ಸಾಂಪ್ರದಾಯಕ ಮತಗಳಿದ್ದರೂ ಸೂಕ್ತ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್ ಸೊರಗಿದೆ. ಇದೇ ವೇಳೆ ಬಿಜೆಪಿ ತೊರೆದು ಹಲವರು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ತುರುವೇಕೆರೆಯಲ್ಲಿ ಜೆಡಿಎಸ್‌ನಿಂದ ಎಂ ಟಿ ಕೃಷ್ಣಪ್ಪ ಅಭ್ಯರ್ಥಿಯೆಂದು ಘೋಷಣೆಯಾಗಿದೆ. ಹೀಗಾಗಿ ಅವರು ಪ್ರಚಾರ ಕೈಗೊಂಡಿದ್ದಾರೆ. ಆದರೆ ಬಿಜೆಪಿಗೆ ಮಸಾಲಾ ಜಯರಾಂ ಸ್ಪರ್ಧಿಸಿದರೆ ಕೆಜೆಪಿ ಮತ್ತು ಬಿಜೆಪಿ ಪ್ರಶ್ನೆ ಎದುರಾಗಲಿದೆ. ಇದು ಮತ ಪ್ರಮಾಣ ಇಳಿಕೆಗೆ ಕಾರಣವಾಗಬಹುದು.

ಇನ್ನು, ಕಾಂಗ್ರೆಸ್‌ನಿಂದ ಸೂಕ್ತ ಅಭ್ಯರ್ಥಿ ಯಾರೆಂಬುದನ್ನು ಘೋಷಣೆ ಮಾಡದಿರುವುದು ಕಾರ್ಯಕರ್ತರಲ್ಲಿ ಗೊಂದಲ ಇದೆ. ಕಾಂಗ್ರೆಸ್‌ಗೆ ಎಂ ಡಿ ಲಕ್ಷ್ಮೀನಾರಾಯಣ್ ಬಲ ತಂದಿದ್ದರೂ ಅಭ್ಯರ್ಥಿ ಇಲ್ಲದಿರುವ ಕೊರತೆ ಕಾರ್ಯಕರ್ತರನ್ನು ಕಾಡತೊಡಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More