೧೩ ಚುನಾವಣೆಗಳ ಮತದಾರ, ಮತದಾನ, ಮತಹಂಚಿಕೆ ಪ್ರಮಾಣದ ಏರಿಳಿಕೆ

ಕಳೆದ ೧೩ ಚುನಾವಣೆಗಳಲ್ಲಿ ರಾಜ್ಯದ ಪ್ರಮುಖ ಪಕ್ಷಗಳ ಮತಗಳಿಗೆ ಏರಿಳಿತ ನೋಡಿದರೆ ಒಂದೆರಡು ಚುನಾವಣೆಗಳಲ್ಲಿ ಹಿಂದೆ ಬಿದ್ದಿದ್ದರ ಹೊರತಾಗಿ ಕಾಂಗ್ರೆಸ್ ಪಕ್ಷವೇ ಮುಂಚೂಣಿಯಲ್ಲಿದೆ. ೨೦೦೮ರಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದಾಗಲೂ ಕಾಂಗ್ರೆಸ್ ಮತಗಳಿಗೆ ಮುನ್ನಡೆ ಕಾಯ್ದುಕೊಂಡಿತ್ತು

ಕರ್ನಾಟಕ ವಿಧಾನಸಭೆಗೆ ನಡೆದ ೧೩ ಚುನಾವಣೆಗಳಲ್ಲಿ ಶೇ.೭೦ಕ್ಕಿಂತ ಹೆಚ್ಚು ಮತದಾನ ನಡೆದದ್ದು ಎರಡೇ ಬಾರಿ. ೧೯೭೮ರಲ್ಲಿ ಶೇ.೭೧.೯ ಮಂದಿ ಹಕ್ಕು ಚಲಾಯಿಸಿದ್ದರು. ನಂತರ, ೨೦೧೩ರಲ್ಲಿ ಶೇ.೭೧.೮೩ ಮಂದಿ ಮತದಾನ ಮಾಡಿದರು. ಈ ಎರಡು ಬಾರಿಯೂ ಕಾಂಗ್ರೆಸ್ ಬಹುಮತ ಪಡೆದದ್ದು ಇನ್ನೊಂದು ವಿಶೇಷ. ಅಂತೆಯೇ, ಮತಗಳಿಕೆ ಏರಿಳಿತ ಮತ್ತು ಎರಡು ಚುನಾವಣೆಗಳಲ್ಲೆ (೧೯೮೫/ ೧೯೯೪) ಹಿಂದೆ ಬಿದ್ದಿದ್ದರ ಹೊರತು ಹೆಚ್ಚು ಅವಧಿಯಲ್ಲಿ ಕಾಂಗ್ರೆಸ್ ಪಕ್ಷವೇ ಮುನ್ನಡೆ ಕಾಯ್ದುಕೊಂಡಿದೆ. ೨೦೦೮ರಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಿದರೂ, ಮತ ಗಳಿಕೆಯಲ್ಲಿ ಕಾಂಗ್ರೆಸ್ ಪಕ್ಷವೇ ಮುಂದಿತ್ತು.

೧೯೫೭ರ ಚುನಾವಣೆಯಲ್ಲಿ ಒಟ್ಟು ೧ ಕೋಟಿಗಿಂತ ತುಸು ಹೆಚ್ಚಿದ್ದ (೧,೦೦,೦೬,೯೩೧) ಮತದಾರರ ಸಂಖ್ಯೆ ೨೦೧೩ರ ವೇಳೆಗೆ ೪,೦೩,೬೩,೭೩೯ಕ್ಕೆ ಹೆಚ್ಚಿತ್ತು. ಐದು ವರ್ಷದ ನಂತರ, ಈಗದು ೪.೯೬ ಕೋಟಿಗೆ ಹೆಚ್ಚಿದೆ. ಮತ ಪಟ್ಟಿ ಅಂತಿಮಗೊಳ್ಳುವ ವೇಳೆಗೆ ಇನ್ನಷ್ಟು ಹೊಸ ಮತದಾರರು ಸೇರಲಿದ್ದಾರೆ. ಅಂದರೆ, ಹಿಂದೆಂದಿಗಿಂತ ಹೆಚ್ಚು ಹೊಸ ಮತದಾರರು ಈ ಬಾರಿ ಹಕ್ಕು ಚಲಾವಣೆ ವ್ಯಾಪ್ತಿಗೆ ಬರುತ್ತಿದ್ದಾರೆ.

೧೯೫೭ರಿಂದ ೧೯೭೮ರವರೆಗೆ ಕಾಂಗ್ರೆಸ್ ಪಕ್ಷವೇ ಶೇಕಡಾವಾರು ಮತಗಳಿಕೆಯಲ್ಲಿ ಮುಂದಿತ್ತು. ೧೯೫೭ರಲ್ಲಿ ೧.೦೬ ಕೋಟಿ ಮತದಾರರ ಪೈಕಿ ಶೇ.೬೪ .೧೬ ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಕಾಂಗ್ರೆಸ್ ಶೇ.೫೨.೦೮ ( ೩೩,೪೩,೮೩೯), ಪಿಎಸ್ಪಿ ಶೇ.೧೯.೧೭ ಮತ್ತು ಇತರೆ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಶೇ.೨೮.೭೪ ಮತ ಪಡೆದಿದ್ದರು. ೧೯೬೨ರಲ್ಲಿ ಮತದಾರರ ಸಂಖ್ಯೆ ಏಳು ಸಾವಿರ ಹೆಚ್ಚಿದರೆ, ಮತದಾನ ಪ್ರಮಾಣ ಶೇ.೫೯ಕ್ಕೆ, ಕಾಂಗ್ರೆಸ್ ಮತಗಳಿಕೆ ಶೇ.೫೦.೨೨ಕ್ಕೆ (೩೧,೬೪,೮೧೧ ) ಕುಸಿದಿತ್ತು. ಇತರರು ಶೇ.೩೨.೪೭,ಪಕ್ಷೇತರರು ಶೇ.೧೭.೩೧ ಮತ ಗಳಿಸಿದ್ದರು. ೧೯೬೭ರಲ್ಲಿ ಮತದಾರರು ಸುಮಾರು ೧೩ ಸಾವಿರ ಹೆಚ್ಚಿದರು. ಶೇ.೬೩.೧ಕ್ಕೆ ಮತದಾನ ಸುಧಾರಿಸಿತು. ಆದರೆ, ಕಾಂಗ್ರೆಸ್ ಪಕ್ಷದ ಮತಗಳಿಕೆ ಪ್ರಮಾಣ ಮತ್ತಷ್ಟು ( ಶೇ.೪೮.೪೩/ ಪಡೆದ ಮತ ೩೬,೩೬,೩೭೪ ) ಕುಸಿಯಿತು. ಪಕ್ಷೇತರರು ಶೇ.೨೮.೩೬,ಇತರರು ಶೇ.೨೩.೨೧ ಮತ ಹಂಚಿಕೆ ಮಾಡಿಕೊಂಡಿದ್ದರು.

೧೯೭೨ ರಲ್ಲಿದ್ದ ಒಂದೂವರೆ ಕೋಟಿ (೧,೫೦,೮೪,೩೮೮) ಮತದಾರರ ಪೈಕಿ ಶೇ.೬೧.೫೭ ಹಕ್ಕು ಚಲಾಯಿಸಿದ್ದರು. ಕಾಂಗ್ರೆಸ್ (ಪಡೆದ ಮತ: ೪೬,೯೮, ೮೨೪/ ಶೇ.೫೨.೧೭) ಮತಗಳಿಕೆ ಕೊಂಚ ಸುಧಾರಿಸಿತು. ೧೯೭೮ರಲ್ಲಿ ಮತದಾರರ ಸಂಖ್ಯೆ ಸುಮಾರು ೨೯ ಸಾವಿರ ಹೆಚ್ಚಿತು. ಅತಿ ಹೆಚ್ಚು ಶೇ.೭೧.೯ ಮತದಾನ ನಡೆದಿದ್ದು ವಿಶೇಷ.

ಹಕ್ಕು ಚಲಾಯಿಸಿದ ೧,೨೮,೭೯, ೯೬೯ ಮತದಾರರ ಪೈಕಿ ೫೫,೪೩,೭೫೬ ( ಶೇ.೪೪.೨೫) ಮತದಾರರು ಕಾಂಗ್ರೆಸ್ (ಐ)ಗೆ ಜೈ ಎಂದಿದ್ದರು. ಆಗ ತಾನೆ ರಂಗಪ್ರವೇಶ ಮಾಡಿದ್ದ ಜನತಾಪಕ್ಷ ಶೇ.೩೭.೯೫ ಮತ (೪೫,೫೪,೧೧೪) ಪಡೆದು ಗಮನ ಸೆಳೆದಿತ್ತು.

೧೯೮೩ರಲ್ಲಿ ಮತದಾರರ ಸಂಖ್ಯೆ ೨ ಕೋಟಿ ದಾಟಿತು. ೨,೦೧,೭೨,೧೩೩ ಮತದಾರರಲ್ಲಿ ಶೇ. ೬೫.೬೭ ಮಂದಿ ಹಕ್ಕು ಚಲಾಯಿಸಿದ್ದರು. ಯಾವ ಪಕ್ಷಕ್ಕೆ ಬಹುಮತ ಬಂದಿರಲಿಲ್ಲವಾದರೂ, ಮತಗಳಿಕೆಯಲ್ಲಿ ಕಾಂಗ್ರೆಸ್ ಮುಂದಿತ್ತು. ಕಾಂಗ್ರೆಸ್ ೫೨,೨೧,೪೧೯ (ಶೇ. ೪೦.೪೨)ಮತ್ತು ಜನತಾ ಪಕ್ಷ ೪೨,೭೨,೩೧೮ ಮತ ಗಳಿಸಿತ್ತು. ಆದರೆ, ೧೯೮೫ರ ವೇಳೆಗೆ ಜನತಾಪಕ್ಷ ಆ ವರೆಗಿನ ಕಾಂಗ್ರೆಸ್ ಆದಿಪತ್ಯವನ್ನು ಮುರಿಯಿತು. ಜನತಾಪಕ್ಷ ಶೇ.೪೩.೬೦ (೬೪,೧೮,೭೯೫) ಮತ ಪಡೆದರೆ, ಕಾಂಗ್ರೆಸ್ ಪಾಲಿಗೆ ಶೇ.೪೦.೮೨ (೬೦,೦೯,೪೬೧) ಮತ ಹಂಚಿಕೆಯಾಗಿತ್ತು.೨,೨೨,೮೧,೩೬೬ ಮತದಾರರ ಪೈಕಿ ಶೇ.೭೬.೨೫ ಮಂದಿ ಹಕ್ಕು ಚಲಾಯಿಸಿದ್ದರು. ಆದರೆ, ೧೯೮೯ರಲ್ಲಿ ಜನತಾ ಪರಿವಾರದ ಒಡಕಿನ ಲಾಭ ಪಡೆದ ಕಾಂಗ್ರೆಸ್ ಮತ್ತೆ ಮುನ್ನೆಲೆಗೆ ಬಂದಿತು. ಚಲಾಯಿತ ೧,೪೯,೮೪,೬೯೮ ಮತಗಳಲ್ಲಿ ಶೇ.೪೩.೭೬ (೭೯,೯೦,೧೪೨ ಮತ) ಮಂದಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ, ಶೇ.೨೭.೦೮ (೪೯,೪೩,೮೫೪) ಮಂದಿ ಜನತಾದಳಕ್ಕೆ ಮತ ನೀಡಿದ್ದರು.

ಇದನ್ನೂ ಓದಿ : ಕಳೆದ ೧೩ ಚುನಾವಣೆಗಳಲ್ಲಿ ಕರ್ನಾಟಕದ ಜನಮತ ಹೇಗೆಲ್ಲ ವರ್ತಿಸಿದೆ ಗೊತ್ತೇ?

೧೯೯೪ರ ಹೊತ್ತಿಗೆ ಮತದಾರರ ಸಂಖ್ಯೆ ೩ ಕೋಟಿ ದಾಟಿತ್ತು. ಈ ಬಾರಿ ಕಾಂಗ್ರೆಸ್ ಮತ್ತೆ ಹಿನ್ನಡೆ ಸಾಧಿಸಿತು. ಒಟ್ಟು ೩,೦೮,೩೫,೪೧೫ ಮತದಾರರ ಪೈಕಿ ಶೇ. ೬೮.೫೯ ಮಂದಿ ಮತದಾನ ಮಾಡಿದ್ದರು. ಶೇ.೩೩.೫೪ (೬೯,೪೪,೪೬೪) ಮತ ಜನತಾದಳ ಕ್ಕೆ, ಶೇ.೨೬.೯೫ (೫೫,೮೦,೪೭೩) ಮತಗಳು ಕಾಂಗ್ರೆಸ್‌ಗೆ ಹಂಚಿಕೆಯಾಗಿದ್ದವು. ಬಿಜೆಪಿ ಶೇ.೧೬. ೯೯ ಮತ ಪಡೆದು ಗಮನ ಸೆಳೆದಿತ್ತು. ೧೯೯೯ರಲ್ಲಿ ಚಲಾಯಿತ ೨,೩೧,೯೪,೨೮೩ (ಶೇ.೬೭.೬೫) ಮತಗಳಲ್ಲಿ ಶೇ.೪೦.೮೪ (೯೦,೭೭,೮೧೫) ಮತ ಕಾಂಗ್ರೆಸ್ ಗೆ, ಶೇ.೨೦.೬೯ (೪೫,೯೮,೭೪೧) ಮತ ಬಿಜೆಪಿಗೆ ಚಲಾವಣೆಯಾಗಿದ್ದವು. ೨೦೦೪ ರಲ್ಲಿ ೩,೮೫,೮೬,೭೫೪ ಮತದಾರರ ಪೈಕಿ ಶೇ.೬೫.೧೭ ಮಂದಿ ಮತದಾನ ಮಾಡಿದ್ದರು. ಯಾರಿಗೂ ಬಹುಮತ ಬರಲಿಲ್ಲ. ಕಾಂಗ್ರೆಸ್ ಮತಗಳಿಕೆ ಶೇ.೩೫.೨೭ ( ೮೮,೬೧,೯೫೯) ಕ್ಕೆ ಕುಸಿದರೂ ಮುಂದಿತ್ತು. ಬಿಜೆಪಿ ಗಳಿಕೆ ಶೇ.೨೮.೩೩ (೭೧,೧೮,೬೫೮)ಕ್ಕೆ ಹೆಚ್ಚಿತ್ತು.

೨೦೦೮ರಲ್ಲಿ ಮತದಾರರ ಸಂಖ್ಯೆ ೪ ಕೋಟಿ ದಾಟಿತು. ಬಿಜೆಪಿ ಹೆಚ್ಚು (೧೧೦) ಸ್ಥಾನ ಗಳಿಸಿದರೂ, ಮತ ಗಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮುಂದಿತ್ತು. ೪,೦೩,೬೩,೭೨೫ ಮತದಾರರ ಪೈಕಿ ಶೇ.೬೪.೯೮ ಮಂದಿ ಹಕ್ಕು ಚಲಾಯಿಸಿದ್ದರು. ಬಿಜೆಪಿ ಶೇ.೩೩.೮೬ (೮೮,೫೭,೭೫೪),ಕಾಂಗ್ರೆಸ್ ಶೇ.೩೪.೭೬ (೯೦,೯೧,೩೬೪) ಮತ ಹಂಚಿಕೊಂಡವು. ಜೆಡಿಎಸ್ ಮತ ಗಳಿಕೆ ಪ್ರಮಾಣ ಶೇ.೧೮.೯೬ಕ್ಕೆ ಕುಸಿದಿತ್ತು. ೨೦೧೩ರಲ್ಲಿ ೩೩ ಸಾವಿರ ಮತದಾರರು ಹೆಚ್ಚಿದ್ದರು. ಚಲಾಯಿತ ೩,೧೩,೮೧, ೧೩೬ (ಶೇ.೭೧.೮೩) ಮತಗಳಲ್ಲಿ ಶೇ.೩೬.೫೯ (೧,೧೪,೭೩,೦೨೫) ಮತ ಕಾಂಗ್ರೆಸ್ ಗೆ, ಶೇ.೨೦.೧೯ ( ೬೩,೨೯, ೧೫೮) ಮತ ಜೆಡಿಎಸ್ ಗೆ, ಶೇ.೧೯.೮೯ ಮತ ಬಿಜೆಪಿಗೆ ಹಂಚಿಕೆಯಾಗಿದ್ದವು.

ಮೊದಲ ಚುನಾವಣೆಯಿಂದ ಈವರೆಗೆ ಒಂದೆರಡು ಬಾರಿಯ ಹೊರತು ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ೧೯೫೭ರಲ್ಲಿ ೫೬೧ ಹುರಿಯಾಳುಗಳಿದ್ದರೆ, ೨೦೧೩ರ ವೇಳೆಗೆ ಈ ಸಂಖ್ಯೆ ೨೯೪೮ಕ್ಕೆ ಹೆಚ್ಚಿತ್ತು. ಈ ಮಧ್ಯದ ಚುನಾವಣಾವಾರು ಅಭ್ಯರ್ಥಿಗಳ ಏರಿಳಿಕೆ ಸಂಖ್ಯೆ ಹೀಗಿದೆ; ೧೯೬೨-೬೭೯/ ೧೯೬೭- ೭೨೭/ ೧೯೭೨-೮೨೦ /೧೯೭೮- ೧೧೬೫/ ೧೯೮೩- ೧೩೬೫/೧೯೮೫- ೧೭೯೫/ ೧೯೮೯- ೨೦೪೩/ ೧೯೯೪- ೨೪೯೭/ ೧೯೯೯- ೧೩೪೧ /೨೦೦೪- ೧೭೧೫/ ೨೦೦೮- ೨೨೪೨.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More