ತೆರಿಗೆ ಹಂಚಿಕೆಯ ಹೊಸ ಸೂತ್ರದ ಕುರಿತು ದಕ್ಷಿಣ ರಾಜ್ಯಗಳ ಸಭೆ ಹೇಳಿದ್ದೇನು?

ಕೇರಳದ ತಿರುವನಂತಪುರದಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಹಣಕಾಸು ಸಚಿವರ ಸಭೆಯು 15ನೇ ಹಣಕಾಸು ಆಯೋಗದ ಪ್ರಸ್ತಾವಿತ ತೆರಿಗೆ ಹಂಚಿಕೆ ಮಾರ್ಗದರ್ಶಿ ಸೂತ್ರಗಳು ತಂದೊಡ್ಡುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತಿದೆ. ಆ ಸೂತ್ರದ ಮರುಪರಿಶೀಲನೆಗಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲೂ ನಿರ್ಧರಿಸಿದೆ 

15ನೇ ಹಣಕಾಸು ಆಯೋಗದ ಪ್ರಸ್ತಾವಿತ ತೆರಿಗೆ ಹಂಚಿಕೆ ಮಾರ್ಗದರ್ಶಿ ಸೂತ್ರಗಳ ಬಗ್ಗೆ ದಕ್ಷಿಣ ಭಾರತದ ಕೆಲವು ರಾಜ್ಯಗಳು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿವೆ. ಪ್ರಸಕ್ತ ಹಣಕಾಸು ಆಯೋಗದ ಪ್ರಸ್ತಾವಿತ ತೆರಿಗೆ ಹಂಚಿಕೆ ಮಾರ್ಗದರ್ಶಿ ಸೂತ್ರಗಳ ಕುರಿತು ಚರ್ಚಿಸಲು ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಸಭೆಯನ್ನು ಕೇರಳ ಸರ್ಕಾರ ಇತ್ತೀಚೆಗೆ ಆಯೋಜಿಸಿತ್ತು. ಈ ಸಭೆಯಲ್ಲಿ ಕರ್ನಾಟಕದ ಕೃಷಿ ಸಚಿವ ಕೃಷ್ಣ ಬೈರೇ ಗೌಡ, ಆಂಧ್ರಪ್ರದೇಶ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಮತ್ತು ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಪಾಲ್ಗೊಂಡು, ಹಣಕಾಸು ಆಯೋಗದ ತೆರಿಗೆ ಹಂಚಿಕೆ ಹೊಸ ಮಾರ್ಗದರ್ಶಿ ಸೂತ್ರಗಳಿಂದಾಗುವ ಅನನುಕೂಲಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ನಡೆದ ಈ ಸಭೆಯು 15ನೇ ಹಣಕಾಸು ಆಯೋಗದ ಪ್ರಸ್ತಾವಿತ ತೆರಿಗೆ ಹಂಚಿಕೆ ಮಾರ್ಗದರ್ಶಿ ಸೂತ್ರಗಳು ತಂದೊಡ್ಡುವ ಅನ್ಯಾಯಗಳನ್ನು ವಿಸ್ತಾರವಾಗಿ ದಾಖಲಿಸಿರುವ ವರದಿ ಸಿದ್ಧಪಡಿಸಿ, ಹಣಕಾಸು ಆಯೋಗದ ಪ್ರಸ್ತಾವಿತ ತೆರಿಗೆ ಹಂಚಿಕೆ ಸೂತ್ರಗಳನ್ನು ಮರುಪರಿಶೀಲಿಸುವಂತೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.

ಹಾಗೆಯೇ 15 ನೇ ಹಣಕಾಸು ಆಯೋಗದ ಹೊಸ ನೀತಿ ನಿಯಮಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಉಂಟಾಗುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೋರಾಟವನ್ನು ಕಟ್ಟಲು ನಿರ್ಧರಿಸಲಾಗಿದ್ದು, ಮುಂದಿನ ಹೋರಾಟಕ್ಕೆ ಮತ್ತಷ್ಟು ರಾಜ್ಯಗಳ ಬೆಂಬಲ ಪಡೆದುಕೊಳ್ಳಲು ಸಭೆ ನಿರ್ಣಯಿಸಿದೆ.

ಕೇರಳದ ಹಣಕಾಸು ಸಚಿವ ಟಿ ಎಂ ಥಾಮಸ್‌ ಐಸಕ್, “15ನೇ ಹಣಕಾಸು ಆಯೋಗ ರಾಜ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಅಳೆಯುವ ಬದಲು ಹೇಗೆ ತೆರಿಗೆ ಹಣ ಹಂಚಬೇಕು ಎಂಬುದರ ಬಗ್ಗೆ ಚರ್ಚಿಸಬೇಕು. ಅದನ್ನು ಬಿಟ್ಟು, ರಾಜ್ಯಗಳಲ್ಲಿ ಆದಾಯದ ಕೊರತೆ ಎದುರಾದಾಗ ಕೇಂದ್ರ ಸರ್ಕಾರ ಅನುದಾನ ನೀಡುವುದನ್ನು ಮುಂದುವರೆಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ವಿಚಾರ ನಡೆಸುತ್ತಿದೆ. ಈ ಮೂಲಕ ರಾಜ್ಯಗಳು ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಸಾಲದ ಬೇಡಿಕೆ ಇಟ್ಟಾಗ ಅದನ್ನು ಶೇ.1.7ಕ್ಕೆ ತಗ್ಗಿಸಲು ಈ ಆಯೋಗದ ಮೂಲಕ ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಇದು ಜಾರಿಯಾದಲ್ಲಿ ರಾಜ್ಯಗಳ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ,” ಎಂದು ವಿವರಿಸಿದರು.

15 ನೇ ಹಣಕಾಸು ಆಯೋಗವು 1971ರ ಜನಗಣತಿ ದತ್ತಾಂಶದ ಆಧಾರವಾಗಿ ತೆರಿಗೆ ಹಂಚುವ ಬದಲು 2011ರ ಜನಗಣತಿ ಮಾಹಿತಿ ಆಧಾರವಾಗಿ ಇಟ್ಟುಕೊಂಡು ತೆರಿಗೆ ಹಂಚಲು ಮುಂದಾಗಿದೆ. ಜನಸಂಖ್ಯಾ ನಿಯಂತ್ರಣಕ್ಕೆ ದಕ್ಷಿಣ ಭಾರತದ ರಾಜ್ಯಗಳು ಕಟ್ಟುನಿಟ್ಟಾದ ನಿಯಮಾವಳಿ ರೂಪಿಸಿಕೊಂಡು ಅನುಷ್ಠಾನ ಮಾಡಿದ್ದರಿಂದ ಹಣಕಾಸಿನ ಆಯೋಗದ ಶಿಫಾರಸು ದಕ್ಷಿಣದ ರಾಜ್ಯಗಳಿಗೆ ಸಹಜವಾಗಿಯೇ ಅನ್ಯಾಯ ಮಾಡುತ್ತದೆ ಎಂಬುದು ಸಭೆಯಲ್ಲಿ ವ್ಯಕ್ತವಾದ ಆತಂಕ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯನ್ನು ದಕ್ಷಿಣದ ರಾಜ್ಯಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿವೆ. ಹೀಗಾಗಿ, ಜನಸಂಖ್ಯೆ ಪ್ರಮಾಣ ಕೂಡ ನಿಯಂತ್ರಣಕ್ಕೆ ಬಂದಿದೆ. ಒಂದು ವೇಳೆ, 2011ರ ಜನಗಣತಿ ಆಧಾರದ ಮೇಲೆ ಅನುದಾನ ಹಂಚಿಕೆಗೆ ಮಾಡಿದಲ್ಲಿ ದಕ್ಷಿಣದ ರಾಜ್ಯಗಳಿಗೆ ದೊರೆಯುವ ಅನುದಾನ ಕಡಿಮೆಯಾಗಲಿದೆ. ಉತ್ತರದ ರಾಜ್ಯಗಳಿಗೆ ಒಂದು ರೀತಿಯಲ್ಲಿ ಇದು ವರವಾಗಿಯೂ ಪರಿಣಮಿಸಲಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಹಣಕಾಸು ಆಯೋಗದ ಮೂಲಕ ಜನಸಂಖ್ಯೆ ನಿಯಂತ್ರಣ ತಂದ ರಾಜ್ಯಗಳಿಗೆ ಬರೆ ಎಳೆಯಲು ಹೊರಟಿದೆ ಎನ್ನುವ ಆರೋಪಗಳು ಸಭೆಯಲ್ಲಿ ವ್ಯಕ್ತವಾದವು.

ಕರ್ನಾಟಕ ಕೃಷಿ ಸಚಿವ ಕೃಷ್ಣ ಬೈರೇ ಗೌಡ ಅವರು ಆ ಚರ್ಚೆಯನ್ನು ವಿಸ್ತರಿಸುತ್ತ, “15ನೇ ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರಗಳು ಜಾರಿಯಾದಲ್ಲಿ ಅಭಿವೃದ್ಧಿಯೆಡೆಗೆ ದಾಪುಗಾಲಿಡುತ್ತಿರುವ ದಕ್ಷಿಣದ ರಾಜ್ಯಗಳಿಗೆ ಭಾರಿ ಹಿನ್ನಡೆ ಉಂಟಾಗಲಿದೆ. ಒಟ್ಟಾರೆ, ಈ ನೀತಿ ಹಿಂದೆ ಬಿಜೆಪಿಯೇತರ ರಾಜ್ಯಗಳ ಅಭಿವೃದ್ಧಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹಣಕಾಸು ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ,” ಎಂದು ದೂರಿದರು.

15 ನೇ ಹಣಕಾಸು ಆಯೋಗ ಹೊಸ ಸೂತ್ರಗಳು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿವೆ. ಇದರಿಂದ ಸಹಜವಾಗಿಯೇ ದಕ್ಷಿಣ ಭಾರತದ ರಾಜ್ಯಗಳ ಅಭಿವೃದ್ಧಿ ಏರುಪೇರಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರದ ತಾರತಮ್ಯದ ನೀತಿಗಳೇ ಕಾರಣ ಎಂದು ಇಡೀ ಸಭೆ ಆರೋಪಿಸಿದೆ. ಮುಂದೆ ನಡೆಯುವ ಹೋರಾಟದ ಬಗ್ಗೆಯೂ ಸಭೆ ಸ್ಪಷ್ಟವಾಗಿ ತಿಳಿಸಿದ್ದು, “ನಮ್ಮ ಹೋರಾಟ ಉತ್ತರ ಭಾರತದ ರಾಜ್ಯಗಳ ವಿರುದ್ಧ ಅಲ್ಲ. ಹಾಗೆಯೇ, ಬಿಜೆಪಿ ಆಡಳಿತ ಇರುವ ರಾಜ್ಯಗಳ ವಿರುದ್ಧವೂ ಅಲ್ಲ. ಹಾಗಾಗಿ ಈ ಹಣಕಾಸಿನ ಆಯೋಗದಿಂದ ತೊಂದರೆಗೆ ಒಳಗಾಗುವ ಉತ್ತರದ ರಾಜ್ಯಗಳು ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ನಮ್ಮೊಂದಿಗೆ ಕೈಜೋಡಿಸಬಹುದು,” ಎಂದಿದೆ.

ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾರೆ. ಆದರೆ, ಅನುದಾನ ಕೊಡುವಲ್ಲಿ ಮಾತ್ರ ಸರ್ವಾಧಿಕಾರಿ ಧೋರಣೆ ತಾಳುತ್ತಾರೆ. ಇವರ ಈ ನಡೆ ಕೆಲವು ರಾಜ್ಯಗಳನ್ನು ದುರ್ಬಲಗೊಳಿಸುವ ತಂತ್ರವಾಗಿದೆ. ಈಗ ಎಲ್ಲರೂ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳುವ ಸೂಕ್ತ ಸಮಯ ಬಂದಿದೆ,” ಎಂದಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಭೆಯ ಉದ್ಘಾಟನೆ ಭಾಷಣದಲ್ಲಿ, “ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸಿನ ಸಂಬಂಧಗಳನ್ನು ಹಣಕಾಸು ಆಯೋಗ ನಿಭಾಯಿಸುತ್ತದೆ. ಆದರೆ, ಇದೇ ದಾರಿ ತಪ್ಪಿದರೆ ಹೇಗೆ? 15 ನೇ ಹಣಕಾಸು ಆಯೋಗವು ಸಂವಿಧಾನಾತ್ಮಕ ನಿಯಮಗಳ ಅಡಿಯಲ್ಲಿ ತನ್ನ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿಕೊಳ್ಳಬೇಕು. ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಉಳಿಸುಕೊಳ್ಳುವ ನಿಟ್ಟಿನಲ್ಲಿ 15ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳನ್ನು ಮರುರೂಪಿಸಲು ರಾಷ್ಟ್ರಪತಿಗಳು ಮುಂದಾಗಬೇಕು,” ಎಂದು ಕೋರಿದರು.

ಇತ್ತ, ಕಾಂಗ್ರೆಸ್‌ ಮುಖಂಡ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು 15ನೇ ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕೇಂದ್ರವನ್ನು ಕಟುವಾಗಿ ತರಾಟೆಗೆ ತಗೆದುಕೊಂಡಿದ್ದು, “15ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಗಳಿಗೆ ತೆರಿಗೆ ಹಂಚಿಕೆ ವಿಚಾರವಾಗಿ ಕೆಲವು ನಿಯಮಗಳನ್ನು ತಿರುಚಲಾಗಿದೆ. ಇದು ಸಹಜವಾಗಿಯೇ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸುತ್ತಿರುವ ರಾಜ್ಯಗಳಿಗೆ ಹಿನ್ನಡೆ ತರಲಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

15ನೇ ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಎದ್ದಿರುವ ಚರ್ಚೆಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರತಿಕ್ರಿಯಿಸಿದ್ದು, “15ನೇ ಹಣಕಾಸು ಆಯೋಗವು ಯಾವುದೇ ಪ್ರದೇಶಗಳ ವಿರುದ್ಧ ತಾರತಮ್ಯ ಹೊಂದಿಲ್ಲ,” ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮಧ್ಯೆ, ಪ್ರಧಾನಿ ಮೋದಿ ಕೂಡ, “ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಈ ಸೂತ್ರ ಲಾಭದಾಯಕ ಆಗಲಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ದಕ್ಷಿಣ ರಾಜ್ಯಗಳ ನಾಯಕರು ಸ್ವಾಯತ್ತತೆ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕಿದೆ

“ಉತ್ತರ ಭಾರತದ ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ಮತ್ತು ದೆಹಲಿಯ ಸರ್ಕಾರಗಳನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಮುಂದಿನ ಸಭೆಯಲ್ಲಿ ಈ ರಾಜ್ಯದ ಹಣಕಾಸು ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ಸಭೆಗೆ ಬೆಂಬಲ ವ್ಯಕ್ತಪಡಿಸಿದ್ದರೂ ಪ್ರತಿನಿಧಿಗಳನ್ನು ಕಳಿಸಿಲ್ಲ. ಮುಂದೆ ನಡೆಯುವ ಸಭೆಯಲ್ಲಿ ಕಳುಹಿಸಿಕೊಡಬಹುದೆಂಬ ನಿರೀಕ್ಷೆ ಇದೆ,” ಎಂದು ಕೇರಳ ಹಣಕಾಸು ಸಚಿವ ಥಾಮಸ್‌ ಐಸಕ್ ಅವರು ಮಾಧ್ಯಮಗಳಿಗೆ ತಿಳಿಸಿದರು.

15ನೇ ಹಣಕಾಸು ಆಯೋಗದ ತೆರಿಗೆ ಹಂಚಿಕೆ ಕುರಿತ ಮಾರ್ಗದರ್ಶಿ ಸೂತ್ರಗಳ ತಾರತಮ್ಯ ನೀತಿ ವಿರುದ್ಧ ಹೋರಾಟ ನಡೆಸಲು ಇನ್ನು ಮೂರು-ನಾಲ್ಕು ವಾರಗಳಲ್ಲಿ ವಿಶಾಖಪಟ್ಟಣದಲ್ಲಿ ಮತ್ತೊಂದು ಸಭೆ ನಡೆಸಲು ಸಭೆ ನಿರ್ಧರಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More