ಧರಣಿಗೆ ಕುಳಿತ ಅಮಿತ್‌ ಶಾಗೆ ಸ್ಪಪಕ್ಷದ ಕಾರ್ಯಕರ್ತರ ಬಂಡಾಯದ ಬಿಸಿ

ಈಗಾಗಲೇ ರಾಜ್ಯ ಪ್ರವಾಸದ ವೇಳೆ ವಿವಿಧ ಕಾರಣಗಳಿಗೆ ಮುಜುಗರ ಅನುಭವಿಸುತ್ತಲೇ ಇರುವ ಅಮಿತ್ ಶಾ, ಮಂಗಳವಾರವೂ ಅಂಥದ್ದೇ ಮುಜುಗರ ಅನುಭವಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಧರಣಿ ಕೂತಿದ್ದ ರಾಷ್ಟ್ರೀಯ ನಾಯಕರಿಗೆ ಸ್ಥಳೀಯ ಕಾರ್ಯಕರ್ತರ ಬಂಡಾಯ ಎದುರಾಗಿದ್ದು ಗಮನಾರ್ಹ

ಕಾಂಗ್ರೆಸ್‌ ಪಕ್ಷವೂ ಸೇರಿದಂತೆ ಉಳಿದ ವಿಪಕ್ಷಗಳು ಸಂಸತ್ತಿನಲ್ಲಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ದೆಹಲಿಯಲ್ಲಿ ಪ್ರಧಾನಿಯವರು ಉಪವಾಸ ಕುಳಿತರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಗೆ ಕುಳಿತರು. ಕಾಂಗ್ರೆಸ್‌ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುವ ಉಮೇದಿಯಲ್ಲಿದ್ದ ರಾಷ್ಟ್ರೀಯ ಅಧ್ಯಕ್ಷ ಶಾ ಅವರಿಗೆ ತಮ್ಮದೇ ಪಕ್ಷದ ಕಾರ್ಯಕರ್ತರ ಬಂಡಾಯದ ಬಿಸಿ ತಟ್ಟಿತು.

ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದವರನ್ನೇ ಮೂಲೆಗುಂಪು ಮಾಡಿ ಟಿಕೆಟ್‌ಗಾಗಿ ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಹಲವು ಕಾರ್ಯಕರ್ತರು, ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದರು.

ಈಗಾಗಲೇ ರಾಜ್ಯ ಪ್ರವಾಸದ ವೇಳೆ ವಿವಿಧ ಕಾರಣಗಳಿಗೆ ಮುಜುಗರ ಅನುಭವಿಸುತ್ತಲೇ ಇರುವ ಅಮಿತ್ ಶಾ, ಮಂಗಳವಾರವೂ ಪುನಾವರ್ತನೆಯಾಯಿತು. “ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ವಿಳಾಸವೇ ಇರಲಿಲ್ಲ. ಮೊದಲ ಬಾರಿಗೆ ನಾನು ಗೆದ್ದು, ಕ್ಷೇತ್ರದಲ್ಲಿ ಬಿಜೆಪಿ ಉಳಿಯುವಂತೆ ಮಾಡಿದ್ದೇನೆ. ಈಗ ನನ್ನನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಏ.19ಕ್ಕೆ ನಾನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ,” ಎಂದು ಸೀಮಾ ಮಸೂತಿ ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲೆಯ ಪ್ರವಾಸಕ್ಕೆ ಬಂದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಬೇಕೆಂದಿದ್ದ ಅಮಿತ್ ಶಾ ಅವರಿಗೆ ಮಾಜಿ ಶಾಸಕಿಯ ಬಂಡಾಯ, ಸ್ವಪಕ್ಷೀಯರ ಪ್ರತಿಭಟನೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ, ಅವರೇ ಖುದ್ದಾಗಿ ಮಸೂತಿ ಅವರನ್ನು ಭೇಟಿ ಮಾಡಿ ಬಂಡಾಯ ಶಮನಗೊಳಿಸಲು ಪ್ರಯತ್ನಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಕ್ಷೇತ್ರವನ್ನು ಹೊರತುಪಡಿಸಿದರೆ, ಧಾರವಾಡ ಜಿಲ್ಲೆಯಲ್ಲಿನ ಇನ್ನಿತರ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ಭರವಸೆ ಕಾಣಸಿಗುತ್ತಿಲ್ಲ. ಹೀಗಾಗಿ, ಹೇಗಾದರೂ ಮಾಡಿ ಮ್ಯಾಜಿಕ್ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಕರೆತರುತ್ತಿದ್ದಾರೆ ಎನ್ನಲಾಗುತ್ತಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗಿಯಾಗಿ ನಾಯಕನಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು ಸೋಲಿಸಬೇಕೆಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ, ಅಮಿತ್ ಶಾ ಅವರ ಪ್ರವಾಸವನ್ನು ಹೆಚ್ಚಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿಯೇ ಆಯೋಜಿಸಿದೆ. ಜಾತಿ ಲೆಕ್ಕಾಚಾರ ಗಮನಿಸುವುದಾದರೂ ಸಚಿವ ವಿನಯ್ ಕುಲಕರ್ಣಿ ಪ್ರತಿನಿಧಿಸುತ್ತಿರುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 1 ಲಕ್ಷದಷ್ಟು ಲಿಂಗಾಯತ ಮತಗಳೇ ಇವೆ. ಹೀಗಾಗಿ ಲಿಂಗಾಯತ ಮತಗಳ ನಾಯಕನಾಗಿ ವಿನಯ ಕುಲಕರ್ಣಿ ಹೊರಹೊಮ್ಮಬಾರದು ಎಂಬುದು ಅಮಿತ್ ಶಾ ಅವರ ಪ್ರವಾಸ ತಂತ್ರ. ಮತದಾರರ ಲೆಕ್ಕಾಚಾರಗಳೇ ಬೇರೆ ಇವೆ ಎಂಬುದನ್ನು ಬಂಡಾಯ ಎದ್ದಿರುವ ಕಾರ್ಯಕರ್ತರು ಹೇಳುತ್ತಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಒಡೆದು ಆಳುವ ನೀತಿ ಪ್ರದರ್ಶಿಸುತ್ತಿದೆ: ಅಮಿತ್ ಶಾ ಆರೋಪ

ಬಂಡಾಯ ಶಮನಗೊಳಿಸುವ ಹೊಣೆಯನ್ನು ಉತ್ತರ ಕರ್ನಾಟಕದ ನಾಯಕರ ತಲೆಗೆ ಕಟ್ಟಿ, ಶಾ ತಮ್ಮ ಪ್ರವಾಸ ಮುಂದುವರಿಸಿದ್ದಾರೆ. ಜಿಲ್ಲೆಯ ಪ್ರಮುಖ ಮಠಗಳಿಗೆ ಭೇಟಿ ಮಾಡುವುದರ ಮೂಲಕ ಲಿಂಗಾಯತ ಮತಗಳು ಸೇರಿದಂತೆ ಮಠಾಧೀಶರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಹುಬ್ಬಳ್ಳಿಯಲ್ಲಿನ ಪ್ರಮುಖ ಮಠವಾಗಿರುವ ಸಿದ್ಧಾರೂಢ ಮಠದಿಂದಲೇ ಜಿಲ್ಲೆಯ ಪ್ರವಾಸ ಪ್ರಾರಂಭಿಸಿದ್ದಾರೆ. ಆ ನಂತರ ಧಾರವಾಡದ ಮುರುಘಾಮಠ ಸೇರಿದಂತೆ ಹಲವು ಪ್ರಮುಖ ಮಠಗಳನ್ನು ಭೇಟಿ ಮಾಡಿದರು.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More