ಟ್ವಿಟರ್ ಸ್ಟೇಟ್ | ಉಪವಾಸಕ್ಕೆ ಮುಂದಾಗಿ ಅಪಹಾಸ್ಯಕ್ಕೆ ಈಡಾದ ಪ್ರಧಾನಿ ಮೋದಿ

ವಾಸ್ತವದಲ್ಲಿ ಪ್ರಾಮುಖ್ಯತೆ ನೀಡಬೇಕಾದ ಸಾಮೂಹಿಕ ಅತ್ಯಾಚಾರದಂತಹ ಹಲವು ಪ್ರಕರಣಗಳ ವಿಷಯದಲ್ಲಿ ಮೌನ ವಹಿಸಿ, ಇದೀಗ ಸಂಸತ್ತಿನ ಕಲಾಪ ನಡೆಸಲು ವಿಫಲವಾಗಿದ್ದಕ್ಕೆ ಪ್ರತಿಯಾಗಿ ಉಪವಾಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಬಹಳಷ್ಟು ಟ್ವೀಟಿಗರು ಟೀಕಿಸಿದ್ದಾರೆ

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಕಲಾಪ ತಡೆದು ಪ್ರಜಾಸತ್ತೆಯ ಮೇಲೆ ದಾಳಿ ನಡೆಸುತ್ತಿರುವ ವಿರೋಧಪಕ್ಷಗಳ ವಿರುದ್ಧ ಒಂದು ದಿನ ಉಪವಾಸ ಇರುವಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ಸಂಸದರಿಗೆ ಕರೆ ಕೊಟ್ಟಿದ್ದಾರೆ. ಪ್ರಧಾನಿಯವರು ಕೊಟ್ಟಿರುವ ಈ ಉಪವಾಸ ಕರೆಯನ್ನು ಪತ್ರಕರ್ತರು, ಲೇಖಕರು, ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ. ಸ್ವತಃ ಅವರ ಪಕ್ಷದ ಕೆಲವರು ಸಂಸದರು, ಪ್ರಧಾನಿಯವರ ಉಪವಾಸ ಕರೆಯ ವಿರುದ್ಧ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

“ಸರ್, ನಿಮ್ಮ ಉಪವಾಸದ ಹಿಂದಿನ ಕಾರಣವೇನು? ಸಂಸತ್ತು ಸುಗಮವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಹಾಗಿದ್ದರೆ, ಅದಕ್ಕೆ ಸಂಪೂರ್ಣವಾಗಿ ವಿರೋಧಪಕ್ಷಗಳೇ ಹೊಣೆಗಾರರೇ? ನಾವು ಹಿಂದೆ ವಿರೋಧ ಪಕ್ಷಗಳಲ್ಲಿದ್ದಾಗ ಸಂಸತ್ತು ಕಾರ್ಯನಿರ್ವಹಿಸದಂತೆ ವಾರಗಟ್ಟಲೆ, ತಿಂಗಳುಗಟ್ಟಲೆ ತಡೆದಿದ್ದೇವೆ ಅಲ್ಲವೇ?” ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಪ್ರಧಾನಿ ಮೋದಿ ಅವರನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯವಾದಿಯಾಗಿರುವ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, “ಪ್ರಧಾನಿ ಮತ್ತು ಅವರ ಸರ್ಕಾರವೇ ಸಂಪೂರ್ಣವಾಗಿ ಸಂಸತ್ತು ಕಾರ್ಯ ನಿರ್ವಹಿಸದೆ ಇರಲು ಜವಾಬ್ದಾರರು. ಅವಿಶ್ವಾಸ ನಿರ್ಣಯದ ವಿರುದ್ಧ ಚರ್ಚೆ ಅವರಿಗೆ ಬೇಕಾಗಿರಲಿಲ್ಲ. ಅದರ ಮೇಲೆ ಚರ್ಚೆ ನಡೆಸಿದ್ದಲ್ಲಿ ನೀರವ್ ಮೋದಿ ಮತ್ತು ಇತರ ಬ್ಯಾಂಕ್ ಹಗರಣಗಳು, ರಫೇಲ್ ಒಪ್ಪಂದ, ಪೀಯೂಷ್ ಹಗರಣ, ಎಸ್ಎಸ್‌ಸಿ/ಸಿಬಿಎಸ್‌ಸಿ ಸೋರಿಕೆಗಳು, ಉದ್ಯೋಗಗಳು, ರೈತರ ವಿಚಾರವಾಗಿ ಸರ್ಕಾರದ ವೈಫಲ್ಯಗಳು ಬಹಿರಂಗವಾಗಿರುತ್ತಿದ್ದವು. ಈಗ ಮೋದಿ ಅದರ ವಿರುದ್ಧವೇ ಉಪವಾಸ ಮಾಡುತ್ತಿದ್ದಾರೆಯೇ?” ಎಂದು ಹೇಳಿದ್ದಾರೆ.

ಪ್ರಜಾಸತ್ತೆಯನ್ನು ಉಳಿಸಿಕೊಳ್ಳಲು ಉಪವಾಸ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಅಭಿಪ್ರಾಯವನ್ನು ಪತ್ರಕರ್ತರೂ ವಿರೋಧಿಸಿದ್ದಾರೆ. “ಒಂದು ಬಹುಮತವಿರುವ ದೇಶದ ಆಡಳಿತ ಪಕ್ಷ ೨೦ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅಂತಹ ಪಕ್ಷವೊಂದು ಪ್ರಜಾಪ್ರಭುತ್ವವನ್ನು ರಕ್ಷಿಸಲು ಉಪವಾಸ ಕೂರುತ್ತಿದೆ. ಯಾರಿಂದ ಪ್ರಜಾಪ್ರಭುತ್ವವನ್ನು ಅದು ರಕ್ಷಿಸಿಕೊಳ್ಳುತ್ತಿದೆ? ಸ್ವತಃ ತನ್ನಿಂದಲೇ ರಕ್ಷಿಸಿಕೊಳ್ಳುತ್ತಿದೆಯೆ? ಸದನ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಇರುವುದು ಸರ್ಕಾರದ ಮೇಲಲ್ಲವೆ? ಮೋದಿ ಸರ್ಕಾರ ಈಗ ವಿರೋಧ ಪಕ್ಷದ ಮೇಲೆ ಭಯಬಿದ್ದು ಓಡುತ್ತಿದೆಯೇ?” ಎಂದು ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಪ್ರಶ್ನಿಸಿದ್ದಾರೆ. ಕೇರಳದ ಸುವೊಜಿತ್ ಟ್ವೀಟ್ ಮಾಡಿ, “ನರೇಂದ್ರ ಮೋದಿಯವರು ತಮ್ಮ ಪಕ್ಷ ವ್ಯವಸ್ಥಿತವಾಗಿ ಹೇಗೆ ಸಂಸತ್ತಿನ ಕಾರ್ಯಕಲಾಪವನ್ನು ತಡೆದಿದೆ ಎನ್ನುವುದನ್ನು ಜನರಿಗೆ ತೋರಿಸಲೆಂದು ಉಪವಾಸ ಮಾಡುತ್ತಿದೆ. ಇದಾದ ನಂತರ ಅವರು ಪ್ರತಿಭಟನೆಗಾಗಿ ರಾಜೀನಾಮೆ ಸಲ್ಲಿಸಬೇಕು” ಎಂದು ಅಪಹಾಸ್ಯ ಮಾಡಿದ್ದಾರೆ. ಪ್ರಧಾನಿಯವರ ಈ ನಡೆಯನ್ನು ಖಂಡಿಸಿ ಬಹಳಷ್ಟು ಸಾಮಾನ್ಯ ಟ್ವೀಟಿಗರೂ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ವಾಸ್ತವದಲ್ಲಿ ಪ್ರಾಮುಖ್ಯತೆ ನೀಡಬೇಕಾದ ಪ್ರತಿಕ್ರಿಯಿಸಲೇಬೇಕಾದ ಹಲವು ಪ್ರಕರಣಗಳತ್ತ ಮೌನ ವಹಿಸಿ, ಇದೀಗ ಸಂಸತ್ ಕಲಾಪ ನಡೆಸಲು ವಿಫಲವಾಗಿದ್ದಕ್ಕಾಗಿ ಉಪವಾಸ ಮಾಡಿರುವ ಪ್ರಧಾನಿಯವರ ನಡೆಯನ್ನು ಬಹಳಷ್ಟು ಟ್ವೀಟಿಗರು ಟೀಕಿಸಿದ್ದಾರೆ. ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು ಟ್ವೀಟ್ ಮಾಡಿ, ಮಹಾತ್ಮ ಗಾಂಧಿ ಅವರು ಈಗ ಬದುಕಿದ್ದಿದ್ದರೆ ಕಥುವಾದಲ್ಲಿ ಅತ್ಯಾಚಾರಕ್ಕೊಳಗಾದ ಆಸಿಫಾಗಾಗಿ ಉಪವಾಸ ಕೂರುತ್ತಿದ್ದರೇ ವಿನಾ ಚುನಾವಣೆಗೆ ಸಿದ್ಧವಾಗಿರುವ ಕರ್ನಾಟಕದಲ್ಲಿ ಉಪವಾಸ ಮಾಡುತ್ತಿರಲಿಲ್ಲ. ಇಂತಹ ಉಪವಾಸದ ರಾಜಕೀಯದ ಬಗ್ಗೆ ಜನರಿಗೂ ತಿಳಿದಿರುತ್ತದೆ. ನಮ್ಮ ರಾಜಕಾರಣಿಗಳು ಯಾವಾಗ ಪಾಠ ಕಲಿಯಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಲೇಖಕ ತವ್ಲೀನ್ ಸಿಂಗ್ ಅವರೂ ಇದೇ ಮಾದರಿಯ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ. “ನಟರು, ಕ್ರೀಡಾಳುಗಳು, ಲೇಖಕರು, ಪತ್ರಕರ್ತರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖ ಭಾರತೀಯರು ಕಥುವಾದಲ್ಲಿ ಆಸಿಫಾಳ ಕ್ರೂರ ಅತ್ಯಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ರಾಜಕಾರಣಿಗಳು ಮಾತ್ರ ಪ್ರಜಾಸತ್ತೆ ಉಳಿಸುವ ಕಾಳಜಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ,” ಎಂದು ತವ್ಲೀನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಶಾಸಕ, ದಲಿತ ಯುವ ಮುಖಂಡ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ, “ನಮ್ಮ ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಪವಾಸ ಮಾಡಲಿದ್ದಾರೆ. ಅವರು ಹಿಂದುತ್ವ ಕಾರ್ಯಕರ್ತರಿಂದ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಬಾಲಕಿ ಆಸಿಫಾಳಿಗಾಗಿಯೂ ಅವರು ಉಪವಾಸ ಮಾಡುತ್ತಾರೆ ಎಂದುಕೊಂಡಿರುವೆ. ಯೋಗಿ ಆದಿತ್ಯನಾಥ ಸರ್ಕಾರದಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಉನಾವೋದ ಅತ್ಯಾಚಾರದ ಸಂತ್ರಸ್ತೆಗೂ ಅವರು ಉಪವಾಸ ಮಾಡುವ ನಿರೀಕ್ಷೆ ಇದೆ,” ಎಂದು ಅಭಿಪ್ರಾಯ ಪ್ರಕಟಿಸಿದ್ದಾರೆ. ಕೆಲವರು, “ಸಾಮೂಹಿಕ ಅತ್ಯಾಚಾರಗಳ ವಿರುದ್ಧ ಉಪವಾಸ ಮಾಡುವ ನಾಯಕ ನಮಗೆ ಬೇಕು,” ಎಂದು ಅಭಿಪ್ರಾಯದ ಟ್ವೀಟ್‌ಗಳನ್ನು ಹಾಕಿದ್ದಾರೆ. ಕೆಲವರು ಕನಿಷ್ಠ ಉಪವಾಸದ ನೆಪದಲ್ಲಾದರೂ ಬಿಜೆಪಿ ಸಂಸದರನ್ನು ನೋಡುವ ಅವಕಾಶ ರಾಜ್ಯದ ಜನತೆಗೆ ಸಿಗುತ್ತಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : ಉಪವಾಸದಂತಹ ಸಾತ್ವಿಕ ಹಾದಿ ತುಳಿಯುವ ನೈತಿಕ ವರ್ಚಸ್ಸು ಮೋದಿ ಅವರಿಗಿದೆಯೆ?

ಆಪ್ ಪಕ್ಷದ ಸಾಮಾಜಿಕ ತಾಣದ ಸಕ್ರಿಯ ಸದಸ್ಯರೂ ಮೋದಿ ನೇತೃತ್ವದ ಬಿಜೆಪಿ ಸಂಸದರ ಉಪವಾಸವನ್ನು ಟೀಕಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವ್ಯವಸ್ಥೆಯ ವಿರುದ್ಧ ಧರಣಿ ಕೂತಾಗ ಪ್ರಧಾನಿ ನರೇಂದ್ರ ಮೋದಿಯವರು ಅವರ ಬಗ್ಗೆ ಹಾಸ್ಯ ಮಾಡಿದ್ದರು. ಆದರೆ ಇದೀಗ ನರೇಂದ್ರ ಮೋದಿಯವರೂ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಸಂಸತ್ತು ನಡೆಸಲು ಸಾಧ್ಯವಿಲ್ಲದೆ ಉಪವಾಸ ಮಾಡುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರ ಭಾಷಣದ ವಿಡಿಯೋಗಳನ್ನೂ ಟ್ವಿಟರ್‌ನಲ್ಲಿ ಹಾಕಿದ್ದಾರೆ. “ಮಹಿಳಾ ಭದ್ರತೆಗಾಗಿ ಕೇಂದ್ರದ ನೇತೃತ್ವದಲ್ಲಿದ್ದ ಪೊಲೀಸ್ ವ್ಯವಸ್ಥೆಯ ವಿರುದ್ಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಧರಣಿ ಕುಳಿತಾಗ ಪ್ರಧಾನಿ ಮೋದಿಯವರು ಹೇಗೆ ಪ್ರತಿಕ್ರಿಯಿಸಿದ್ದರು ನೆನಪಿಸಿಕೊಳ್ಳಿ. ಈಗ ಮೋದಿಯವರೂ ತಮ್ಮದೇ ಸರ್ಕಾರ ಬಹುಮತವಿದ್ದರೂ ಪ್ರತಿಭಟಿಸುತ್ತಿದ್ದಾರೆ,” ಎಂದು ಆರತಿ ಟ್ವೀಟ್ ಮಾಡಿದ್ದಾರೆ. ಈ ನಡುವೆ ಬಹಳಷ್ಟು ಬಿಜೆಪಿ ಸಂಸದರು ಮತ್ತು ಶಾಸಕರು ಪ್ರಧಾನಿ ಮೋದಿಯವರ ಉಪವಾಸವನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿಯ ಅಧಿಕೃತ ಖಾತೆಗಳು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿವೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಟ್ವೀಟಿಗರು ಬಿಜೆಪಿಯ ನಿಲುವನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳು ಹೀಗಿವೆ.

ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ವ್ಯಂಗ್ಯಚಿತ್ರಕಾರರೂ ಹಬ್ಬ ಆಚರಿಸುತ್ತಿದ್ದಾರೆ. ತಮ್ಮ ಸೃಜನಶೀಲ ಕಾರ್ಟೂನ್‌ಗಳನ್ನು ಅವರು ಟ್ವಿಟರ್‌ನಲ್ಲಿ ಹರಿಯಬಿಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಹಾಸ್ಯಮಯವಾಗಿ ಟ್ವೀಟ್ ಮಾಡುವವರು, ವ್ಯಂಗ್ಯ ಟ್ವೀಟ್‌ಗಳನ್ನು ಹರಿಬಿಡುವುದರಲ್ಲಿ ಪ್ರಸಿದ್ಧರಾಗಿರುವ ಸಿನಿಮಾ ನಿರ್ದೇಶಕ ಶಿರಿಷ್ ಕುಂದರ್ ಅವರಂಥವರು ಸರಣಿ ಟ್ವೀಟ್‌ಗಳಲ್ಲಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ಅಂತಹ ಕೆಲವು ಟ್ವೀಟ್‌ ಹೀಗಿವೆ:

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More