ತಿಪಟೂರು ಶಾಸಕರಾಗಿ ಪ್ರತಿ ಬಾರಿ ಆಯ್ಕೆ ಆಗುವವರು ಕೊಬ್ಬರಿ ವರ್ತಕರೇ!

ತಿಪಟೂರು ತಾಲೂಕು ಸದಾ ಬದಲಾಗುತ್ತಲೇ ಬರುತ್ತಿದೆ. ಒಮ್ಮೆ ಆರಿಸಿ ಬಂದವರು ಮತ್ತೊಮ್ಮೆ ಆರಿಸಿ ಬಂದಿಲ್ಲ ಎಂಬುದು ಈ ವಿಧಾನಸಭಾ ಕ್ಷೇತ್ರದ ವಿಶೇಷ. ಈ ಬಾರಿ ತಿಪಟೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದು ಹೋಗಿರುವುದು ಬಿಜೆಪಿ ವಲಯದಲ್ಲಿ ಹುಮ್ಮಸ್ಸು ಮೂಡಿಸಿದೆ

ತಿಪಟೂರು ವಿಧಾನಸಭಾ ಕ್ಷೇತ್ರ ಕೊಬ್ಬರಿಗೆ ಹೆಸರು ಮಾಡಿದ ತಾಲೂಕು. ಇದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿಬಂದಿದೆ. ಬಾಲ್ ಕೊಬ್ಬರಿ ಮತ್ತು ತಿನ್ನುವ ಕೊಬ್ಬರಿಗೆ ಈ ತಾಲೂಕು ದೇಶದಲ್ಲೇ ಫೇಮಸ್. ಏಷ್ಯಾದ ಅತಿದೊಡ್ಡ ಎರಡನೇ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇಂಥ ತಾಲೂಕಿನಲ್ಲಿ ಕೊಬ್ಬರಿ ವರ್ತಕರದ್ದೇ ಯಾವಾಗಲೂ ಮೇಲುಗೈ. 2013ರವರೆಗೆ ಆಯ್ಕೆಯಾಗಿರುವ ಎಲ್ಲ ಶಾಸಕರು ಕೊಬ್ಬರಿ ವರ್ತಕರೇ ಎಂಬುದು ಇತಿಹಾಸದ ದಾಖಲೆ. ಈ ದಾಖಲೆಯನ್ನು ಮರಿಯಲು ಇಂದಿಗೂ ಆಗಿಲ್ಲ. ಕೊಬ್ಬರಿ ಮಾರುಕಟ್ಟೆಯಲ್ಲಿ ಹಿಡಿತ ಹೊಂದಿದ ಕುಳಗಳೇ ಶಾಸಕರಾಗಿ ಆಯ್ಕೆಯಾಗಿದ್ದು ಕೊಬ್ಬರಿ ಮಾರುಕಟ್ಟೆ ಮತ್ತು ಆಡಳಿತವನ್ನು ನಿಯಂತ್ರಿಸಿಕೊಂಡು ಬರುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ತಿಪಟೂರು ಕ್ಷೇತ್ರಕ್ಕೆ ೧೯೫೭ರಲ್ಲೇ ಮೊದಲ ಚುನಾವಣೆ ನಡೆದಿದೆ. ಆಗ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಕೆ ಪಿ ರೇವಣ್ಣಸಿದ್ದಪ್ಪ ಆಯ್ಕೆ ಆದರು ಎಂಬುದು ಚುನಾವಣಾ ಫಲಿತಾಂಶಗಳ ಅಂಕಿ-ಅಂಶಗಳಿಂದ ತಿಳಿದುಬರುತ್ತದೆ. ಅಂದರೆ, ಆರಂಭದ ದಿನಗಳಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ತುಮಕೂರು ಜಿಲ್ಲೆಯಲ್ಲಿ ಬಲಿಷ್ಠವಾಗಿತ್ತು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದಲ್ಲ ಒಂದು ಅವಧಿಯಲ್ಲಿ ಪ್ರಜಾ ಸೋಷಿಯಲಿಸ್ಟ್ ಅಭ್ಯರ್ಥಿಗಳು ಆಯ್ಕೆಯಾಗಿರುವುದನ್ನು ಕಾಣಬಹುದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಕಾಂಗ್ರೆಸ್ (ಐ) ಮತ್ತು ಕಾಂಗ್ರೆಸ್ (ಒ) ಹಸುವಿನ ಚಿಹ್ನೆಯ ಮೇಲೂ ಸ್ಪರ್ಧಿಸಿ ಗದ್ದು ಬಂದಿದ್ದಾರೆ. ಈಗ ಕೇವಲ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಾತ್ರ ಸಕ್ರಿಯ ರಾಜಕಾರಣ ಮಾಡುತ್ತಿವೆ.

೧೯೬೭ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (ಒ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂ ಎಸ್ ನೀಲಕಂಠಸ್ವಾಮಿ ಆಯ್ಕೆಯಾಗಿದ್ದರು. ೧೯೭೨ನಲ್ಲಿ ಎಂ ಟಿ ಮಂಜುನಾಥ್ ಕಾಂಗ್ರೆಸ್‌ನಿಂದ ಗೆದ್ದುಬಂದಿದ್ದರು. ೧೯೭೮ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ (ಐ) ಹಸ್ತದ ಗುರುತು ಚಿಹ್ನೆಯಡಿ ವಿ ಎಲ್ ಶಿವಪ್ಪ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ೧೯೮೩ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಗಂಗಾಧರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಕೋಟೆಯಂತಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಕೂಡ ಆಳ್ವಿಕೆ ನಡೆಸಿದ್ದಾರೆ. ೧೯೮೩ರಲ್ಲಿ ಬಿಜೆಪಿ ಶೇ.೫ರಷ್ಟು ಮತ ಪಡೆದು ಮುಂದಿನ ಚುನಾವಣೆಯಲ್ಲಿ ಅದರ ಮತ ಗಳಿಕೆ ಪ್ರಮಾಣವನ್ನು ಹೆಚ್ಚಿಕೊಂಡಿರುವುದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

೧೯೮೫ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಚಂದ್ರಶೇಖರಯ್ಯ ೩೬,೫೯೪ ಅಂದರೆ, ಶೇ.೫೧.೨೪ರಷ್ಟು ಮತ ಪಡೆದು ಆಯ್ಕೆಯಾದರೆ, ೧೯೮೯ರಲ್ಲಿ ಕಾಂಗ್ರೆಸ್‌ನಿಂದ ಟಿ ಎಂ ಮಂಜುನಾಥ್ ಗೆದ್ದು ಬಂದಿದ್ದಾರೆ. ಅವರು ೬೧,೦೫೨ ಮತ ಪಡೆದು ವಿಧಾನಸಭೆ ಪ್ರವೇಶಿಸಿದ್ದರು. ೧೯೯೪ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೊಬ್ಬರಿ ವರ್ತಕ ಬಿ ನಂಜಾಮರಿ ೪೩,೭೬೯ (ಶೇ.೪೭.೧೧) ಮತದಿಂದ ಆರಿಸಿ ಬಂದಿದ್ದರು. ತುಮಕೂರು ಕ್ಷೇತ್ರವನ್ನು ಹೊರತುಪಡಿಸಿದರೆ ತಿಪಟೂರು ಕ್ಷೇತ್ರದಲ್ಲಿ ಎರಡು ದಶಕದ ಹಿಂದೆಯೇ ಅನ್ನಪೂರ್ಣಮ್ಮ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ೨೯.೮೨ ಮತ ಗಳಿಸಿರುವುದು ಇತಿಹಾಸದಲ್ಲಿ ದಾಖಲೆಯಾಗಿದೆ. ೧೯೯೯ರಲ್ಲಿ ಕಾಂಗ್ರೆಸ್‌ನಿಂದ ಕೆ ಷಡಕ್ಷರಿ ೪೬,೪೮೯ (ಶೇ.೪೯.೨೮) ಗೆದ್ದಿದ್ದರೆ, ಬಿಜೆಪಿಯ ನಂಜಾಮರಿ ೪೩,೭೪೨ (ಶೇ.೪೬.೩೭) ಮತ ಗಳಿಸಿ ಎರಡನೇ ಸ್ಥಾನಕ್ಕಿಳಿದು ಪರಾಭವಗೊಂಡಿದ್ದರು.

೨೦೦೪ರ ವಿಧಾನಸಭಾ ಚುನಾವಣೆಯ ವೇಳೆಗೆ ಬಿಜೆಪಿಯಲ್ಲಿದ್ದ ನಂಜಾಮರಿ ಜೆಡಿಎಸ್ ಪ್ರವೇಶ ಪಡೆದು ೪೬,೯೯೬ ಮತಗಳಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಕೆ ಷಡಕ್ಷರಿ ೩೦,೧೭೩ ಮತ ಪಡೆದು ಠೇವಣಿ ಉಳಿಸಿಕೊಂಡಿದ್ದರು. ೨೦೦೮ರ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಹಾಗೂ ಕೊಬ್ಬರಿ ವರ್ತಕ ಬಿ ಸಿ ನಾಗೇಶ್ ೪೬,೦೩೪ (ಶೇ,೩೭.೯೧) ಮತದೊಂದಿಗೆ ಎರಡನೇ ಬಾರಿಗೆ ಕಮಲ ಅರಳುವಂತೆ ಮಾಡಿದರು. ಕಾಂಗ್ರೆಸ್‌ನ ಕೆ ಷಡಕ್ಷರಿ, ೩೯,೧೬೯ (ಶೇ.೩೨.೨೫) ಮತ ಪಡೆದು ಶೇಕಡ ೫ರಷ್ಟು ಪ್ರಮಾಣದ ಮತಗಳಲ್ಲಿ ಪರಾಭವಗೊಂಡಿದ್ದರು. ನಂಜಾಮರಿ ೧೫.೬೦ರಷ್ಟು ಮತ ಪಡೆದು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟರು.

ಇದನ್ನೂ ಓದಿ : ಚುನಾವಣಾ ಕಣ | ಕಲ್ಯಾಣದಲ್ಲಿ ಖೂಬಾಗೆ ಬಿಜೆಪಿ ಟಿಕೆಟ್, ಮರಾಠ ಸಮುದಾಯದ ಬಂಡಾಯ

೨೦೧೩ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ ಷಡಕ್ಷರಿ ೫೬,೮೧೭ (ಶೇ.೪೦.೫೧) ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಷಡಕ್ಷರಿ ಸಚಿವರಾಗಲಿಲ್ಲ. ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದರೂ, ಅವರಿಗೆ ಸಹಕಾರ ಖಾತೆಯನ್ನು ಕೊಡುತ್ತಾರೆ ಎಂಬ ಭರವಸೆ ಹುಸಿಯಾಯಿತು. ಈ ಅವಧಿಯಲ್ಲಿ ಬಿಜೆಪಿಯ ಬಿ ಸಿ ನಾಗೇಶ್ ೪೫,೨೧೫ ಮತಗಳನ್ನು ದಾಖಲಿಸಿ ಎರಡನೇ ಸ್ಥಾನಕ್ಕೆ ಕುಸಿದರು. ಬಿಜೆಪಿಯಿಂದ ಜೆಡಿಎಸ್‌ಗೆ ಜಿಗಿದಿದ್ದ ಲೋಕೇಶ್ವರ್, ಬಿಜೆಪಿಯ ಮತಬುಟ್ಟಿಗೆ ಕೈಹಾಕಿ ೨೮,೬೬೭ ಅಂದರೆ, ಶೇ.೨೦.೪೪ರಷ್ಟು ಮತ ಪಡೆದು ಬಿಜೆಪಿ ಸೋಲಲು ಕಾರಣರಾದರು ಎಂಬುದನ್ನು ಮರೆಯುವಂತಿಲ್ಲ.

ತಿಪಟೂರು ತಾಲೂಕಿನ ರಾಜಕೀಯ ಸ್ಥಿತಿಗತಿ ಸದಾ ಬದಲಾಗುತ್ತಲೇ ಬರುತ್ತಿದೆ. ಒಮ್ಮೆ ಆರಿಸಿ ಬಂದವರು ನಿರಂತರವಾಗಿ ಆರಿಸಿ ಬಂದಿಲ್ಲ. ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ವರ್ತಕರೇ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ಈ ಬಾರಿ ತಿಪಟೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದು ಹೋಗಿರುವುದು ಬಿಜೆಪಿ ವಲಯದಲ್ಲಿ ಹುಮ್ಮಸ್ಸು ಮೂಡಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More