ಎಸ್ ಎಂ ಕೃಷ್ಣ ಎಂಬ ಒಂದು ಕಾಲದ ಪ್ರಭಾವಿ ನಾಯಕನ ಹೊಯ್ದಾಟ

ಬಿಜೆಪಿಗೆ ಎಸ್ಎಂಕೆ ಕೊಡುಗೆ ಏನು ಎಂಬ ಪ್ರಶ್ನೆಯ ಜೊತೆಯಲ್ಲೇ, ಬಿಜೆಪಿ ಎಸ್‌ಎಂಕೆ ಅವರಿಗೆ ಏನು ಕೊಡುಗೆ ಕೊಟ್ಟಿತು ಎಂಬ ಉತ್ತರವಿರದ ಪ್ರಶ್ನೆಯೂ ಎದುರಾಗುತ್ತಿದೆ. ಈ ನಡುವೆ, ರಾಜ್ಯ ರಾಜಕಾರಣದ ಆಟದಲ್ಲಿ ಎಸ್‌ಎಂಕೆ ಈಗ ಚಲಾವಣೆ ಉಳಿಸಿಕೊಂಡಿದ್ದಾರೆಯೇ ಎಂಬುದೂ ಪ್ರಶ್ನಾರ್ಹ ಸಂಗತಿ

ಎಸ್ ಎಂ ಕೃಷ್ಣ; ೯೦ರ ದಶಕದಲ್ಲಿ ಕರ್ನಾಟಕದ ರಾಜಕಾರಣದ ಪ್ರಭಾವಿ ಹೆಸರು ಮತ್ತು ಕರ್ನಾಟಕದ ಕಾಂಗ್ರೆಸ್ಸಿನ ವರ್ಚಸ್ವಿ ಮುಖ. ಮುಖ್ಯಮಂತ್ರಿಯಾಗಿಯೂ ರಾಜ್ಯದ ಹಲವು ಮಹತ್ವದ ಬದಲಾವಣೆಗೆ ಕಾರಣರಾದವರು. ೧೯೯೯ ಮತ್ತು ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಾರಥ್ಯ ವಹಿಸಿ, ತಮ್ಮ ಪಾಂಚಜನ್ಯ ಯಾತ್ರೆಯ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಕೂಡ ಅವರದ್ದು. ಬಳಿಕ ಕೇಂದ್ರ ಸಚಿವರಾಗಿಯೂ ಮನಮೋಹನ್‌ ಸಿಂಗ್ ಅವರ ಸಂಪುಟದಲ್ಲಿ ಕೆಲಸ ಮಾಡಿದವರು. ಬಳಿಕ ಮಹಾರಾಷ್ಟ್ರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದವರು.

ಕಳೆದ ವರ್ಷ, ನಾಲ್ಕೂವರೆ ದಶಕದ ತಮ್ಮ ಕಾಂಗ್ರೆಸ್ ನಂಟು ತೊರೆದು ಬಿಜೆಪಿಯ ತೆಕ್ಕೆಗೆ ಸರಿದಿದ್ದರು. ಶಾಸಕನಿಂದ ಸಚಿವ, ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲ ಹುದ್ದೆಗಳವರೆಗೆ ಯಾವುದೇ ಒಬ್ಬ ಪ್ರಭಾವಿ ನಾಯಕ ಪಡೆಯಬಹುದಾದ ಎಲ್ಲ ಸ್ಥಾನಮಾನಗಳನ್ನು ಪಡೆದ ಬಳಿಕವೂ ಕಾಂಗ್ರೆಸ್‌ ತಮ್ಮನ್ನು ನಿರ್ಲಕ್ಷಿಸಿದೆ ಎಂಬ ಕಾರಣವೊಡ್ಡಿ ಕಮಲ ಪಾಳೆಯಕ್ಕೆ ಸೇರಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈ ಎಂದಿದ್ದರು.

ಸಹಜವಾಗೇ ಆಗ ಕೃಷ್ಣ ಅವರ ಈ ನಡೆ ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮತ್ತು ಬಿಸಿ ಚರ್ಚೆಗೆ ಕಾರಣವಾಗಿತ್ತು. ಒಂದು ಪಕ್ಷದಿಂದ ತಮ್ಮ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ಪಡೆದ ನಾಯಕನೊಬ್ಬ ಇಳಿವಯಸ್ಸಿನಲ್ಲಿ ಹೀಗೆ ಪಕ್ಷ ತನ್ನನ್ನು ನಿರ್ಲಕ್ಷಿಸಿದೆ ಎಂದು ಪಕ್ಷಾಂತರ ಮಾಡಿದ್ದು ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಹಾಗೇ, ರಾಜ್ಯದ ಪ್ರಭಾವಿ ಒಕ್ಕಲಿಗ ನಾಯಕ ಬಿಜೆಪಿಗೆ ಸೇರಿರುವುದು ಆ ಪಕ್ಷ ದುರ್ಬಲವಾಗಿರುವ ಹಳೇ ಮೈಸೂರು ಭಾಗದಲ್ಲಿ ದೊಡ್ಡ ಬಲ ತಂದುಕೊಡಲಿದೆ ಎಂಬ ವಿಶ್ಲೇಷಣೆಗಳೂ ಕೇಳಿಬಂದಿದ್ದವು. ಆ ಕಾರಣಕ್ಕೆ ಕೃಷ್ಣ ಅವರ ಆ ನಡೆ ನೇರವಾಗಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ದೊಡ್ಡ ಪೆಟ್ಟು ಕೊಡಲಿದೆ ಎಂಬ ಮಾತುಗಳೂ ಇದ್ದವು.

ರಾಜ್ಯ ಬಿಜೆಪಿಯ ಒಂದು ಬಣ ಕೃಷ್ಣ ಅವರ ಪಕ್ಷ ಸೇರ್ಪಡೆಯನ್ನು ವ್ಯಂಗ್ಯ ಮತ್ತು ಕುಹಕದಿಂದ ನೋಡಿದರೆ, ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂದು ಮತ್ತೊಂದು ಬಣ ಸಂಭ್ರಮಿಸಿತ್ತು. ಅದರಲ್ಲೂ, ಬೆಂಗಳೂರು ಮತ್ತು ಮಂಡ್ಯ-ಮೈಸೂರು ಭಾಗದ ಕೆಲವು ನಾಯಕರಂತೂ, ಈ ಬಾರಿಯ ಚುನಾವಣೆಯಲ್ಲಿ ಅಲ್ಲಿನ ಮೂರ್ನಾಲ್ಕು ಜಿಲ್ಲೆಗಳ ಸುಮಾರು ೨೮ ಕ್ಷೇತ್ರಗಳಲ್ಲಿ ಕಮಲ ಅರಳುವುದು ನಿಶ್ಚಿತ ಎಂದೇ ಹೇಳಿದ್ದರು.

ಇದೀಗ ಒಂದು ವರ್ಷದ ಬಳಿಕ ಹಿಂತಿರುಗಿ ನೋಡಿದರೆ, ಬಿಜೆಪಿಗೆ ಎಸ್‌ಎಂಕೆ ಅವರ ಕೊಡುಗೆ ಏನು ಎಂಬ ಪ್ರಶ್ನೆಯ ಜೊತೆಜೊತೆಯಲ್ಲೇ, ಬಿಜೆಪಿ ಎಸ್‌ಎಂಕೆ ಅವರಿಗೆ ಏನು ಕೊಡುಗೆ ಕೊಟ್ಟಿತು ಎಂಬ ಉತ್ತರವಿರದ ಪ್ರಶ್ನೆಯೂ ಎದುರಾಗುತ್ತಿದೆ. ಒಂದು ವರ್ಷದಲ್ಲಿ ಕೃಷ್ಣ ಅವರು ಪಕ್ಷದ ಕಚೇರಿಗೆ ಭೇಟಿ ನೀಡಿದ್ದು ಒಂದೇ ಒಂದು ಬಾರಿಯಾದರೆ, ಮಂಡ್ಯದ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಹೈಕಮಾಂಡ್‌ನೊಂದಿಗೆ ವೇದಿಕೆ ಹಂಚಿಕೊಂಡದ್ದು ಬಿಟ್ಟರೆ, ಉಳಿದಂತೆ ಅವರು ಬಿಜೆಪಿಯ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು. ವರ್ಷದ ಹಿಂದೆ ಪಕ್ಷ ಸೇರ್ಪಡೆಯ ಹೊತ್ತಲ್ಲಿ ಒಂದಿಷ್ಟು ಸುದ್ದಿಯಾಗಿದ್ದು ಬಿಟ್ಟರೆ ಉಳಿದಂತೆ ಆ ಮುನ್ನ ಮತ್ತು ಆ ಬಳಿಕವೂ ಕೃಷ್ಣ ನೇಪಥ್ಯದಲ್ಲೇ ಇದ್ದರು.

ರಾಜ್ಯ ಚುನಾವಣೆಯ ಕಾವು ಕಳೆದ ಆರೇಳು ತಿಂಗಳಿಂದಲೇ ಜೋರಾಗಿದ್ದರೂ, ಒಂದು ಕಾಲದ ಪ್ರಭಾವಿ ನಾಯಕ ಕೃಷ್ಣ ಅವರು ಬಿಜೆಪಿಯ ಚುನಾವಣಾ ರ್ಯಾಲಿಗಳಿಂದ ಮಾತ್ರವಲ್ಲ; ಬಹುತೇಕ ರಾಜಕಾರಣದ ನಿತ್ಯದ ವಿದ್ಯಮಾನಗಳಿಂದಲೂ ಹೊರಗುಳಿದಿದ್ದರು. ವಯೋಸಹಜ ಅನಾರೋಗ್ಯ ಮತ್ತಿತರ ಕಾರಣಗಳಿಂದ ಅವರು ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಬಿಜೆಪಿ ತಮ್ಮನ್ನು ಮೂಲೆಗುಂಪು ಮಾಡಿರುವ ಹಿನ್ನೆಲೆಯಲ್ಲಿ ನೊಂದ ಕೃಷ್ಣ ಮುಂಬೈ ಸೇರಿದ್ದಾರೆ. ಜೊತೆಗೆ, ಬಿಜೆಪಿ ಸೇರಿದ ಆರು ತಿಂಗಳಲ್ಲೇ ತಮ್ಮ ಅಳಿಯನ ವಿರುದ್ಧ ಐಟಿ ದಾಳಿ ನಡೆದದ್ದು ಕೂಡ ಅವರಿಗೆ ಸಾಕಷ್ಟು ನೋವು ನೀಡಿದೆ ಎಂಬ ಮಾತುಗಳು ಅವರ ಆಪ್ತ ವಲಯದಿಂದಲೇ ಕೇಳಿಬರುತ್ತಿವೆ.

ಈ ನಡುವೆ, ಬಿಜೆಪಿ ತಮ್ಮನ್ನು ನಡೆಸಿಕೊಂಡ ವರಸೆಯಿಂದ ಬೇಸತ್ತಿರುವ ಕೃಷ್ಣ ಅವರು ಮತ್ತೆ ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ. ಈಗಾಗಲೇ ಆ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕರ್ನಾಟಕ ಉಸ್ತುವಾಗಿ ವೇಣುಗೋಪಾಲ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯೂ ಆಗಿದೆ. ಪ್ರಮುಖವಾಗಿ ಅವರ ಸಾಂಪ್ರದಾಯಿಕ ತವರು ಕ್ಷೇತ್ರ ಮದ್ದೂರಿನಿಂದ ತಮ್ಮ ಕುಟುಂಬದ ಒಬ್ಬರಿಗೆ ಚುನಾವಣಾ ಟಿಕೆಟ್‌ ನೀಡಬೇಕು ಎಂಬ ತಮ್ಮ ಆಕಾಂಕ್ಷೆಗೆ ಕೇಸರಿ ಪಡೆಯಲ್ಲಿ ಬೆಲೆ ಸಿಗಲಿಲ್ಲ ಎಂದು ನೊಂದುಕೊಂಡಿರುವ ಅವರಿಗೆ, ಕಾಂಗ್ರೆಸ್ ನಾಯಕರು ಆ ಷರತ್ತು ಈಡೇರಿಸುವ ಭರವಸೆ ನೀಡಿದ್ದಾರೆ. ಈ ಮಾತುಕತೆಗೆ ಪ್ರಮುಖವಾಗಿ ಅವರ ಆಪ್ತ, ಸಚಿವ ಡಿ ಕೆ ಶಿವಕುಮಾರ್ ಅವರೇ ವೇದಿಕೆ ಸಜ್ಜುಗೊಳಿಸಿದ್ದರು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಚರ್ಚೆ ಹುಟ್ಟುಹಾಕಿದೆ.

ಆದರೆ, ಇಂತಹದ್ದೊಂದು ಸುದ್ದಿ ಸುದ್ದಿವಾಹಿನಿಗಳ ಮೂಲಕ ಬಿತ್ತರವಾಗುತ್ತಲೇ ಅತ್ತ ಮುಂಬೈನಿಂದ ಸ್ಪಷ್ಟನೆ ನೀಡಿರುವ ಎಸ್‌ಎಂಕೆ ಅವರು, “ಇದೊಂದು ವದಂತಿಯಾಗಿದ್ದು, ತಾವು ಬಿಜೆಪಿ ತೊರೆಯುವ ಪ್ರಶ್ನೆ ಇಲ್ಲ. ಮೋದಿ ನಾಯಕತ್ವದಲ್ಲಿ ತಮಗೆ ಅಚಲ ನಂಬಿಕೆ ಇದೆ,” ಎಂದು ಹೇಳಿರುವುದಾಗಿ ವರದಿಯಾಗಿದೆ.

ಅಷ್ಟಕ್ಕೂ ಎಸ್‌ ಎಂ ಕೃಷ್ಣ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಯ ಮೂಲ ಯಾರು ಎಂಬ ಪ್ರಶ್ನೆಗೆ ಉತ್ತರ ಊಹಿಸುವುದು ಕಷ್ಟವೇನಲ್ಲ. ಚುನಾವಣಾ ಹೊಸ್ತಿಲಲ್ಲಿ ಒಂದು ಪಕ್ಷದ ಟಿಕೆಟ್‌ ವಿಷಯದಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲ ಎಂದಾಗ, ಗುರುತರ ಹೊಣೆಗಾರಿಕೆಗಳು ಸಿಗಲಿಲ್ಲ ಎಂದಾಗ ರಾಜಕೀಯ ನಾಯಕರು ಇಂತಹ ಪಕ್ಷಾಂತರದ ಊಹಾಪೋಹಗಳನ್ನು ಸ್ವತಃ ತಾವೇ ಹರಿಯಬಿಟ್ಟು ತಮ್ಮ ರಾಜಕೀಯ ನಿರೀಕ್ಷೆಗಳನ್ನು ಈಡೇರಿಸಿಕೊಳ್ಳುವುದು ಸಾಮಾನ್ಯ. ಅಂತಹದ್ದೊಂದು ತಂತ್ರಗಾರಿಕೆಯ ಭಾಗವೇ ಕೃಷ್ಣ ಅವರ ಈ ಕಾಂಗ್ರೆಸ್ ಸೇರ್ಪಡೆ ವದಂತಿ ಎಂಬುದನ್ನು ಕಾದುನೋಡಬೇಕಿದೆ.

ಅಷ್ಟಕ್ಕೂ, ಬಿಜೆಪಿಯ ಹೈಕಮಾಂಡ್‌ ಕೃಷ್ಣ ಅವರನ್ನು ವರ್ಷದ ಹಿಂದೆ ಅವರ ಪಕ್ಷ ಸೇರ್ಪಡೆಯ ಹೊತ್ತಲ್ಲಿ ನಿರೀಕ್ಷಿಸಿದ ಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದ್ದಾರೆಯೇ ಎಂಬುದು ಕೂಡ ಚರ್ಚಾಸ್ಪದ. ಏಕೆಂದರೆ, ೨೮ ಕ್ಷೇತ್ರಗಳಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸುವ ವರ್ಚಸ್ವಿ ನಾಯಕ ಎಂಬುದು ಹೈಕಮಾಂಡಿಗೆ ಮನವರಿಕೆಯಾಗಿದ್ದರೆ ಅವರಿಗೆ ಚುಣಾವಣಾ ಹೊಸ್ತಿಲಲ್ಲಾದರೂ ಯಾವುದಾದರೂ ಗುರುತರ ಹೊಣೆಗಾರಿಕೆ ನೀಡಬೇಕಿತ್ತಲ್ಲವೇ? ಆ ಮೂಲಕ ಅವರ ವರ್ಚಸ್ಸು ಮತ್ತು ರಾಜಕೀಯ ಅನುಭವನ್ನು ಬಳಸಿಕೊಂಡು ಕರ್ನಾಟಕದ ಮಿಷನ್ ೧೫೦ ನಿಜ ಮಾಡಲು ಹೈಕಮಾಂಡ್‌ ಯೋಚಿಸಬೇಕಿತ್ತಲ್ಲವೇ? ಆದರೆ, ಅಂತಹದ್ದು ಈವರೆಗೆ ಆಗಿಲ್ಲ.

ಅಂದರೆ, ರಾಜ್ಯದ ಹಿರಿಯ ರಾಜಕೀಯ ನೇತಾರ ಈಗ ಚಲಾವಣೆ ಕಳೆದುಕೊಂಡ ನಾಣ್ಯ ಎಂಬುದು ಬಿಜೆಪಿ ಹೈಕಮಾಂಡ್‌ ಗ್ರಹಿಕೆಯೇ? ಎಂಬ ಪ್ರಶ್ನೆ ಕೂಡ ಏಳುತ್ತದೆ. ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಖಾತೆಯಂತಹ ಪ್ರಭಾವಿ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಎಡವಿದ ಹಿನ್ನೆಲೆಯಲ್ಲಿ ಖಾತೆ ಕಳೆದುಕೊಂಡ ಬಳಿಕ ಕಳೆದ ಒಂದು ದಶಕದ ಅವರ ಸಾರ್ವಜನಿಕ ಜೀವನವನ್ನು ಗಮನಿಸಿದವರು, ಒಂದು ವೇಳೆ ಬಿಜೆಪಿ ನಾಯಕರು ಅಂತಹ ನಿರ್ಧಾರಕ್ಕೆ ಬಂದಿದ್ದರೂ ಅಚ್ಚರಿಪಡುವಂಥದ್ದೇನೂ ಇಲ್ಲ ಎನ್ನಬಹುದು.

ಹಾಗಾದರೆ, ವರ್ಷದ ಹಿಂದೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಆ ವಾಸ್ತವ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ. ಆದರೆ, ರಾಜಕೀಯದಲ್ಲಿ ಮೇಲ್ನೋಟದ ತೆರೆಗಳು ಒಂದು ದಿಕ್ಕಿನಲ್ಲಿದ್ದರೆ, ಆಳದ ಒಳಸುಳಿಗಳು ಮತ್ತೊಂದು ದಿಕ್ಕಿನಲ್ಲಿರುತ್ತವೆ ಎಂಬುದು ಗುಟ್ಟೇನಲ್ಲ. ಸ್ವತಃ ರಾಜಕೀಯ ಪ್ರಭಾವಳಿ ಕಳೆಗುಂದಿರುವ ಮತ್ತು ಉಘೇ ಎನ್ನುವ ನಾಯಕರ ಪಡೆಯೂ ಜೊತೆಗಿಲ್ಲದ ಎಸ್‌ಎಂಕೆ, ಇದೀಗ ರಾಜಕೀಯ ಸಂಧ್ಯಾಕಾಲಕ್ಕೆ ತಲುಪಿದ್ದಾರೆ ಎಂಬುದರ ಅರಿವಿದ್ದೂ, ತಮಗೆ ಸ್ವತಃ ಅನುಕೂಲವಾಗದಿದ್ದರೂ ಪರವಾಗಿಲ್ಲ; ತಮ್ಮ ಎದುರಾಳಿಗೆ ಅನನುಕೂಲವಾದರೆ ಅದೇ ಲಾಭ ಎಂಬ ಲೆಕ್ಕಾಚಾರದ ಮೇಲೆ ಬಿಜೆಪಿ ನಾಯಕರು ಅವರಿಗೆ ವೀಳ್ಯ ನೀಡಿರಬಹುದು.

ಇದನ್ನೂ ಓದಿ : ಚುನಾವಣಾ ಕಣ | ಕಲ್ಯಾಣದಲ್ಲಿ ಖೂಬಾಗೆ ಬಿಜೆಪಿ ಟಿಕೆಟ್, ಮರಾಠ ಸಮುದಾಯದ ಬಂಡಾಯ

ಏಕೆಂದರೆ, ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ ಎಸ್‌ ಎಂಕೆ ಪಕ್ಷ ತೊರೆದು ಬಿಜೆಪಿಗೆ ಸೇರುತ್ತಾರೆ ಎಂಬುದು ಕನಿಷ್ಟ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಪೆಟ್ಟುಕೊಡಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಆದರೆ, ಆ ಲೆಕ್ಕಾಚಾರ ಎಷ್ಟರಮಟ್ಟಿಗೆ ನಿಜವಾಯಿತು ಎಂಬುದಕ್ಕೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಣ್ಣೆದುರಿಗಿದೆ. ಹಾಗಾಗಿ, ಉಪಚುನಾವಣೆಯ ಫಲಿತಾಂಶದ ಬಳಿಕವೇ ಬಿಜೆಪಿಯಲ್ಲಿ ಕೃಷ್ಣ ಅವರನ್ನು ಬದಿಗೆ ಸರಿಸಲಾಗಿದೆ ಎಂಬ ಮಾತುಗಳೂ ಇವೆ.

ಒಟ್ಟಾರೆ, ಸದ್ಯ ಎಸ್‌ಎಂಕೆ ಅವರದ್ದು ಈಗ ಇಲ್ಲಿ ಇರಲಾರೆ, ಅಲ್ಲಿಗೆ ಹೋಗಲಾರೆ ಎಂಬ ಹೊಯ್ದಾಟದ ಹೊತ್ತು. ಎಲ್ಲಿದ್ದರೂ ಅಂತಹ ವ್ಯತ್ಯಾಸವೇನೂ ಆಗಲಾರದು ಎಂಬುದು ರಾಜ್ಯ ರಾಜಕಾರಣದ ಸದ್ಯದ ಗೈರತ್ತು!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More