ಸಂಘ ಪರಿವಾರ ಆತ್ಮವಿಮರ್ಶೆಯ ಹಾದಿಯಲ್ಲಿ ಸಾಗುವುದು ಯಾವಾಗ?

ಮುಂದಿನ ಲೋಕಸಭಾ ಚುನಾವಣೆಗೆ ಇನ್ನೇನು ವರ್ಷ ಬಾಕಿ ಇದೆ ಎಂದಾದಾಗ ಸಂಘ ಪರಿವಾರಕ್ಕೆ ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಮೂಡಿದೆ. ಇದೀಗ ಗೋಹತ್ಯೆ, ಗೋಪಾಲನೆಯ ವಿಚಾರವನ್ನು ಬದಿಗೊತ್ತಿ ದಲಿತರ ಬಗ್ಗೆ ಗಮನಹರಿಸಿ ಎಂದು ಬಿಜೆಪಿಗೆ ನಿರ್ದೇಶನ ನೀಡುತ್ತಿದೆ!

ಸಂಘ ಪರಿವಾರ ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳತ್ತ ಗಮನ ಹರಿಸುವಂತೆ ಸೂಚಿಸಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಮೋದಿಯವರ ಘೋಷಣೆಯಿಂದ ಸಂಘ ಅಂತರ ಕಾಯ್ದುಕೊಂಡ ಬೆನ್ನಲ್ಲೇ ದಲಿತ, ಹಿಂದುಳಿದ ವರ್ಗಗಳ ಪರವಾಗಿ ತಾನಿದ್ದೇನೆ ಎಂದು ಹೇಳುತ್ತಿರುವುದಕ್ಕೆ ಮುಖ್ಯ ಕಾರಣ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ.

ದಲಿತರು ಮತ್ತು ಹಿಂದುಳಿದ ವರ್ಗಗಳು ಸಂಘಪರಿವಾರದ ಚುನಾವಣಾ ರಾಜಕೀಯಕ್ಕೆ ಅತಿಮುಖ್ಯ ಸಾಧನಗಳು. ಈ ಸಮುದಾಯಗಳನ್ನು ಎದುರುಹಾಕಿಕೊಂಡರೆ ಸಂಘ ಪರಿವಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಕಾದ ಕಬ್ಬಿಣ ಬಾಗಲೇಬೇಕು ಎಂಬಂತಿದೆ ಆರೆಸ್ಸೆಸ್ಸಿನ ಸ್ಥಿತಿ. ಜಾತಿ ನಿಂದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ಧಾರ ವಿರೋಧಿಸಿ ದಲಿತರು ಇತ್ತೀಚೆಗೆ ನಡೆಸಿದ ಭಾರಿ ಪ್ರತಿಭಟನೆ, ಅದರ ಮೂಸೆಯಲ್ಲೇ ಬಿಜೆಪಿ ವಿರುದ್ಧ ಎದ್ದ ಅಸಮಾಧಾನ, ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ದಲಿತ ಸಂಸದರೊಬ್ಬರನ್ನು ನಡೆಸಿಕೊಂಡ ರೀತಿ, ಅಂಬೇಡ್ಕರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿದ ಪ್ರಕರಣ ಆರೆಸ್ಸೆಸ್ಸನ್ನು ಕುದಿವ ಕುಲುಮೆಯಲ್ಲಿರಿಸಿರುವುದಂತೂ ನಿಜ. ಅದು ತಿಳಿದೇ ಅನಿವಾರ್ಯವಾಗಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಓಲೈಕೆಗೆ ಸಂಘ ಮುಂದಾಗಿದೆ.

ಅಲ್ಲದೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಲೋಕಸಭೆ ಉಪ ಚುನಾವಣೆ ವೇಳೆ ಬಿಜೆಪಿಯ ಲೆಕ್ಕಾಚಾರವೆಲ್ಲಾ ತಲೆಕೆಳಕಾಗಿತ್ತು. ಬದ್ಧವೈರಿಗಳಂತಿದ್ದ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಯಾರೂ ಊಹಿಸದ ರೀತಿಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದವು. 2019ರ ಚುನಾವಣೆಯಲ್ಲಿಯೂ ಇದು ಮರುಕಳಿಸಿದರೆ ಈಗಾಗಲೇ ಸಂಕಷ್ಟದಲ್ಲಿರುವ ಬಿಜೆಪಿ ಮತ್ತಷ್ಟು ನಷ್ಟ ಅನುಭವಿಸುವ ಸಾಧ್ಯತೆಗಳಿವೆ. ಆರೆಸ್ಸೆಸ್ ದಲಿತರನ್ನು ಒಪ್ಪುತ್ತದೆಯೆ ಅಥವಾ ದಲಿತರು ಆರೆಸ್ಸೆಸ್ಸನ್ನು ಒಪ್ಪುತ್ತಾರೆಯೇ ಎಂಬುದು ಬೇರೆಯೇ ಪ್ರಶ್ನೆ. ಆದರೆ, ಸಂಭವನೀಯ ದಾಳಿ ತಪ್ಪಿಸುವ ಸಂಬಂಧ ಈ ಬಗೆಯ ರಾಜಿಯಂತೂ ಸಂಘಕ್ಕೆ ಅನಿವಾರ್ಯವಾಗಿದೆ.

ಆರೆಸ್ಸೆಸ್ ಸೂಚನೆಯ ಬೆನ್ನಿಗೇ ಪ್ರಧಾನಮಂತ್ರಿ ಗ್ರಾಮೀಣ ಆವಾಸ್, ಉಜ್ವಲ ಹಾಗೂ ಸೌಭಾಗ್ಯ ಯೋಜನೆಗಳನ್ನು ದಲಿತರಿಗೆ ಹಿಂದುಳಿದ ವರ್ಗಗಳಿಗೆ ಮುಟ್ಟಿಸಲು ಉತ್ತರ ಪ್ರದೇಶ ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಇದು ಕೂಡ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ದೂರದೃಷ್ಟಿಯಿಲ್ಲದ ನಡೆ. ದಲಿತರ ಸಮಸ್ಯೆ ಕೇವಲ ಸೌಲಭ್ಯ ಒದಗಿಸುವುದರಿಂದ ಈಡೇರುವುದಿಲ್ಲ ಎಂಬುದು ಸಂಘ ಪರಿವಾರಕ್ಕೆ ಅರಿವಾಗುವುದು ಯಾವಾಗ? ದಲಿತರನ್ನು ಎಂದೂ ಆರೆಸ್ಸೆಸ್ ಮನಃಪೂರ್ವಕವಾಗಿ ಒಪ್ಪಿದ ನಿದರ್ಶನಗಳಿಲ್ಲ. ಸಾಧ್ಯವಾದೆಡೆಯೆಲ್ಲಾ ಸಾಂಸ್ಕೃತಿಕ ಯಜಮಾನಿಕೆ ತೋರುತ್ತ ಶೋಷಿತ ವರ್ಗಗಳ ಮೇಲೆ ಸವಾರಿ ಮಾಡುವುದರತ್ತಲೇ ಅದರ ಒಲವು ಎಂಬ ಆರೋಪಗಳಿವೆ. ಅಲ್ಲದೆ ಸ್ವತಃ ಆರೆಸ್ಸೆಸ್ಸಿನ ಆಯಾಕಟ್ಟಿನ ಸ್ಥಾನಗಳಲ್ಲಿ ಎಷ್ಟು ದಲಿತರು ಹಿಂದುಳಿದ ವರ್ಗಗಳ ಮಂದಿ ಅಧಿಕಾರ ಅನುಭವಿಸುತ್ತಿದ್ದಾರೆ ಎಂಬ ಪ್ರಶ್ನೆಯೂ ಇದೆ. ಹೀಗಿರುವಾಗ ಇಂಥ ನಿರ್ಧಾರಗಳು ಸಂಘಪರಿವಾರವನ್ನು ಅನುಮಾನದ ಕೂಪಕ್ಕೆ ದೂಡುತ್ತವೆ ವಿನಾ ಮತ್ತೇನೂ ಮಾಡಲಾರವು.

ಒಂದು ನಿಟ್ಟಿನಿಂದ ನೋಡಿದರೆ, ಆರೆಸ್ಸೆಸ್ ಚುನಾವಣೆ ಹೊಸ್ತಿಲಿನಲ್ಲಿ ರಕ್ಷಣಾತ್ಮಕ ಆಟದಲ್ಲಿ ತೊಡಗಿದೆ ಎಂದು ಅನ್ನಿಸದೆ ಇರಲಾರದು. ಅದು ಬಿಜೆಪಿಯನ್ನು ಸಾಧ್ಯವಾದಷ್ಟೂ ರಕ್ಷಿಸುವ ಆಟ. ಈ ಆಟಕ್ಕೆ ಪ್ರತಿ ಬಾರಿಯೂ ಪರಿಕರಗಳಾಗುತ್ತಿರುವುದು ದಲಿತರು ಮತ್ತು ಹಿಂದುಳಿದ ವರ್ಗಗಳು. ದಲಿತರು ಹಿಂದುಳಿದ ವರ್ಗಗಳು ಸಮಾನರು ಎಂದು ಹೇಳುವ ಆರೆಸ್ಸೆಸ್ ಉನ್ನಾವೊ ಅತ್ಯಾಚಾರ ಪ್ರಕರಣದಂತಹ ಗಂಭೀರ ಪ್ರಕರಣಗಳು ನಡೆದಾಗಲೂ ಬಿಜೆಪಿಯನ್ನು ವಿಮರ್ಶಾತ್ಮಕವಾಗಿ ನೋಡುವ ಗೋಜಿಗೆ ಹೋಗುವುದಿಲ್ಲ. ಉನ್ನಾವೊ ಪ್ರಕರಣದಲ್ಲಿ ಬಿಜೆಪಿಯ ಶಾಸಕರೊಬ್ಬರ ಹೆಸರು ಕೇಳಿಬರುತ್ತಿದ್ದರೂ ಅದರ ಬಗ್ಗೆ ಆರೆಸ್ಸೆಸ್ಸಿನ ಮೌನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹೀಗಿರುವಾಗ, ದಲಿತರು ಮತ್ತು ಹಿಂದುಳಿದ ವರ್ಗಗಳತ್ತ ಗಮನ ಕೊಡಿ ಎನ್ನುವ ಅದರ ಮಂತ್ರ ಕೇವಲ ಮತದಾರರ ಕಣ್ಣೊರೆಸುವ ತಂತ್ರವಾಗಿ ಕಾಣುತ್ತದೆ. ದಲಿತರ ಸಮಸ್ಯೆ ನಿಜವಾಗಿಯೂ ಆರೆಸ್ಸೆಸ್ಸಿಗೆ ಅರ್ಥವಾಗಬೇಕು ಎಂದರೆ, ಸಂಘದೊಳಗೇ ದಲಿತರಿಗೆ ಪ್ರಾಮುಖ್ಯತೆ ಇರಬೇಕು. ಅದು ಪ್ರಾಯೋಗಿಕವಾಗಿ ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಭಾಗವತ್ ಒಗ್ಗಟ್ಟಿನ ಕರೆಯ ಮೂಲ ಪ್ರಶ್ನಿಸಿದ ಟ್ವೀಟಿಗರು

“ಆರೆಸ್ಸೆಸ್‌ನೊಂದಿಗೆ ಅಂಬೇಡ್ಕರ್ ಉತ್ತಮ ನಂಟು ಹೊಂದಿದ್ದರು,” ಎಂಬುದನ್ನು ಸಂಘ ಪರಿವಾರದ ಸಮರ್ಥಕರು ವಾದಿಸುತ್ತಾರೆ. ಆದರೆ ಅಂಬೇಡ್ಕರ್ ಕಾಲದ ರಾಜಕೀಯ ಸಂದರ್ಭಗಳು ಬೇರೆ ಇದ್ದವು. ಈಗ ಬೇರೆ ಇವೆ. ಅಲ್ಲದೆ, ಆರೆಸ್ಸಿಸ್ಸಿನ ಸಭೆಗಳಲ್ಲಿ ಭಾಗವಹಿಸಿದ ಮಾತ್ರಕ್ಕೆ ಅದರ ಎಲ್ಲ ಕಾರ್ಯಸೂಚಿಗಳನ್ನು ಅವರು ಒಪ್ಪಿದ್ದರು ಎಂದೇನೂ ಇಲ್ಲ. ಹಾಗೆ ನೋಡಿದರೆ, ಅಂಬೇಡ್ಕರ್ ಅವರಿಗಿಂತ ಹಿಂದೂ ಧರ್ಮವನ್ನು ವಿಮರ್ಶಾತ್ಮಕವಾಗಿ ನೋಡಿದ ಮತ್ತೊಬ್ಬ ಹಿಂದೂ ಸಿಗಲಾರರು. ಅಂಬೇಡ್ಕರ್ ಯುಗ ಮುಗಿದು ಅನೇಕ ದಶಕಗಳು ಕಳೆದಿವೆ. ಅಷ್ಟೂ ವರ್ಷಗಳಲ್ಲಿ ಅಗಣಿತ ಸಂಖ್ಯೆಯಲ್ಲಿ ದಲಿತರ ವಿರುದ್ಧ ಸವರ್ಣೀಯರು ಬಲಿಷ್ಠ ಜಾತಿಗಳು ದೌರ್ಜನ್ಯ ನಡೆಸಿವೆ. ಅದೆಲ್ಲ ತಪ್ಪು ಎಂದು ಆರೆಸ್ಸೆಸ್ ಒಮ್ಮೆಯಾದರೂ ಘಂಟಾಘೋಷವಾಗಿ ಹೇಳಿದ್ದರೆ ಎಷ್ಟೋ ದೌರ್ಜನ್ಯ ಪ್ರಕರಣಗಳು ನಿಲ್ಲುತ್ತಿದ್ದವು. ಆರೆಸ್ಸೆಸ್ ಅಂತಹ ಹೇಳಿಕೆಗಳನ್ನು ನೀಡುವುದಿಲ್ಲ. ನೀಡಿದರೂ ಅದು ಚುನಾವಣೆಯ ನಿಮಿತ್ತವೋ ಅಥವಾ ರಾಜಕೀಯ ಲಾಭಕ್ಕಾಗಿಯೋ ಹೊರತು ದೂರದೃಷ್ಟಿಯ, ಉದಾತ್ತ ಕಾಳಜಿಯ ಹಿನ್ನೆಲೆಯಿಂದ ಅಲ್ಲ.

ಗೋರಕ್ಷಣೆ ಮತ್ತು ದಲಿತರು ಹಿಂದುಳಿದ ವರ್ಗಗಳ ರಕ್ಷಣೆಯ ವಿಚಾರ ಪರಸ್ಪರ ವಿರೋಧಾಭಾಸದಿಂದ ಕೂಡಿದೆ. ಎಂದಿಗೂ ಇವು ಒಟ್ಟೊಟ್ಟಿಗೆ ಸಾಗಲಾರವು. ಗೋ ರಕ್ಷಣೆ ಹೆಸರಿನಲ್ಲಿ ನಡೆಯುವ ರಾಜಕೀಯವನ್ನು ನಿಲ್ಲಿಸಿದರೆ ದಲಿತರ ಸ್ಥಿತಿ ತುಸು ಸುಧಾರಿಸಬಹುದು. ಆದರೆ ಹಾಗೆ ಮಾಡಲಾಗದು. ಒಂದು ಸಮುದಾಯದ ಯಜಮಾನಿಕೆಯನ್ನು ತಲೆತಲಾಂತರದಿಂದ ಪೋಷಿಸಿದ ಇನ್ನೊಂದು ಸಮುದಾಯವನ್ನು ಶೋಷಿಸಿದ ಸಾಮಾಜಿಕ ಸ್ಥಿತಿಯೊಂದು ಈಗ ಮೇಲ್ವರ್ಗಕ್ಕೆ ಸವಾಲೆಸೆಯುತ್ತಿದೆ. ಅಲ್ಪಸಂಖ್ಯಾತರನ್ನು ಅಂಕೆಯಲ್ಲಿಡುವ ಉದ್ದೇಶದಿಂದ ಹೊರಟ ಗೋರಕ್ಷಣೆಯ ಕಾರ್ಯಸೂಚಿ ಇತ್ತ ದಲಿತರನ್ನೂ ಶೋಷಿಸುತ್ತಿದೆ. ಒಂದೆಡೆ ಗೋರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ಮತ್ತೊಂದೆಡೆ ದಲಿತರ ಬಗೆಗೆ ಕಾಳಜಿ ಒಟ್ಟೊಟ್ಟಿಗೆ ಸಾಗುತ್ತವೆಯೇ ಎಂಬುದನ್ನು ಪರಾಮರ್ಶಿಸುವ ಅಗತ್ಯವಿದೆ. ಆತ್ಮವಿಮರ್ಶೆಯೊಂದೇ ಬಿಜೆಪಿ ಮತ್ತು ಆರೆಸ್ಸೆಸ್ಸಿಗೆ ಉಳಿದಿರುವ ಮಾರ್ಗ.

2019ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಆರೆಸ್ಸೆಸ್ ಮಾಡಬೇಕಾದದ್ದು ಬಿಜೆಪಿಯನ್ನು ರಕ್ಷಿಸುವ ಯತ್ನವಲ್ಲ, ಬದಲಿಗೆ ಅದನ್ನು ವಿಮರ್ಶಿಸುವ ದಿಟ್ಟ ನಿರ್ಧಾರ. ಮೋದಿ ಆಡಳಿತವನ್ನು ನಿಸ್ಪಕ್ಷಪಾತವಾಗಿ ವಿಶ್ಲೇಷಿಸುವ ಧೈರ್ಯವನ್ನು ಅದು ಪ್ರದರ್ಶಿಸಲೇಬೇಕಿದೆ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ನಡೆಯುತ್ತಿರುವ ಶೋಷಣೆಯನ್ನು ಬಹಿರಂಗವಾಗಿ ಟೀಕಿಸುವ ತೀರ್ಮಾನ ಕೈಗೊಳ್ಳಬೇಕು. ಆದರೆ, ಈ ನಿರ್ಧಾರದಲ್ಲಿ ಸ್ವವಿಮರ್ಶೆಯ ಬೀಜಗಳೂ ಹುದುಗಿವೆ. ಬಿಜೆಪಿಯನ್ನು ವಿಮರ್ಶಿಸುವುದೂ ಒಂದೇ ತನ್ನನ್ನು ಪ್ರಶ್ನಿಸಿಕೊಳ್ಳುವುದೂ ಒಂದೇ ಎನ್ನುವಂತಹ ಸ್ಥಿತಿ ಆರೆಸ್ಸೆಸ್ಸಿಗೆ ಎದುರಾಗುತ್ತದೆ. ಹಾಗಿರುವಾಗ, ಆರೆಸ್ಸೆಸ್ ಅದಕ್ಕೆ ಮುಂದಾಗುತ್ತದೆಯೇ ಎಂಬ ಪ್ರಶ್ನೆ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More