ಉ.ಕರ್ನಾಟಕದಲ್ಲಿ ಲಿಂಗಾಯತ-ವೀರಶೈವ ಮತ ವಿಭಜನೆ ತಡೆಯಲು ಅಮಿತ್ ಶಾ ಮಠಯಾತ್ರೆ

ಲಿಂಗಾಯತ ಧರ್ಮಕ್ಕೆ ಉ.ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಇದರಿಂದ ಮತ ವಿಭಜನೆ ಆಗಬಹುದೆಂಬ ಭಯದಲ್ಲಿರುವ ಬಿಜೆಪಿ ಅಧ್ಯಕ್ಷರು, ಮತದಾರರನ್ನು ಭೇಟಿ ಆಗುವುದಕ್ಕಿಂತ ಹೆಚ್ಚಾಗಿ, ಲಿಂಗಾಯತ-ವೀರಶೈವ ಮಠಾಧೀಶರ ಭೇಟಿಗೇ ಮೊದಲ ಆದ್ಯತೆ ಕೊಟ್ಟಿರುವುದು ಗಮನಾರ್ಹ

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಸಾರಿರುವ ಬಿಜೆಪಿ, ಅದಕ್ಕಾಗಿ ನಡೆಸುತ್ತಿರುವ ಕಸರತ್ತು ಇದೀಗ ಬಹಿರಂಗವಾಗಿಯೇ ಕಾಣಸಿಗುತ್ತಿದೆ. ಬಿಜೆಪಿ ತನ್ನ ಈ ಗುರಿ ಸಾಧನೆಗಾಗಿ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರಗಿಂತಲೂ ಮಠಾಧೀಶರನ್ನೇ ಹೆಚ್ಚಾಗಿ ನೆಚ್ಚಿಕೊಂಡಂತಿದೆ.

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಡೆ ಇಂತಹ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮತಗಳು ವಿಭಜನೆಯಾಗಬಹುದು ಎಂಬ ಭಯದಲ್ಲಿರುವ ಶಾ, ಮತದಾರರನ್ನು ಭೇಟಿಯಾಗಿ ಮತ ಕೇಳುವುದಕ್ಕಿಂತಲೂ ಹೆಚ್ಚಾಗಿ ಲಿಂಗಾಯತ ಹಾಗೂ ವೀರಶೈವ ಮಠಾಧೀಶರನ್ನು ಭೇಟಿಯಾಗಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡುತ್ತಿರುವುದೇ ಹೆಚ್ಚಾಗಿದೆ.

ಹುಬ್ಬಳ್ಳಿಯಲ್ಲಿರುವ ವೀರಶೈವ ಪರಂಪರೆಯ ಮೂರು ಸಾವಿರ ಮಠದಲ್ಲಿ ಸುಮಾರು 40ಕ್ಕೂ ಅಧಿಕ ಪ್ರಮುಖ ಮಠಗಳ ಮಠಾಧೀಶರ ಸಭೆ ಕರೆದು, ಲಿಂಗಾಯತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಿ ಎಂದು ಮಠಾಧೀಶರಲ್ಲಿ ಶಾ ಮನವಿ ಮಾಡಿದ್ದಾರೆ. ಅಲ್ಲದೆ, ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕೂಡ ಮಠಾಧೀಶರಿಗೆ ನೀಡಿದ್ದಾರಂತೆ.

“ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಮಠಗಳಿಗೆ ಯಾವುದೇ ತಾರತಮ್ಯ ಮಾಡದೆ, ಸಾಕಷ್ಟು ಅನುದಾನ ನೀಡಿದ್ದಾರೆ. ಅನುದಾನ ನೀಡುವ ಸಂದರ್ಭದಲ್ಲಿ ಲಿಂಗಾಯತ ಹಾಗೂ ವೀರಶೈವ ಎಂಬ ಒಂದೇ ಒಂದು ಬೇಧ ಮಾಡಿಲ್ಲ. ಎಲ್ಲ ಮಠಗಳಿಗೆ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಕೇವಲ ಮತಕ್ಕಾಗಿ ಲಿಂಗಾಯತ ಹಾಗೂ ವೀರಶೈವ ಎಂದು ಒಡೆದು ಆಳುತ್ತಿದೆ ಎನ್ನುವುದನ್ನು ಮತದಾರರಿಗೆ ಮನವರಿಕೆ ಮಾಡಿ,” ಎಂದು ಶಾ, ಮಠಾಧೀಶರಿಗೆ ಕಿವಿಮಾತು ಹೇಳಿದ್ದಾರೆ. ಇದಕ್ಕೆ ಮಠಾಧೀಶರು ಕೂಡ ಒಪ್ಪಿಗೆ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಯ ಹಿಂದೆ ಇರುವ ಲಿಂಗಾಯತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ವಾಗ್ದಾನವನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ.

ಲಿಂಗಾಯತ ಮತಗಳು ವಿಭಜನೆಯಾಗಬಾರದು ಎಂಬ ಕಾರಣದಿಂದಲೇ ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನೇತೃತ್ವ ವಹಿಸಿದ್ದ ನಾಯಕರ ಹಾಗೂ ಮಠಾಧೀಶರ ಕ್ಷೇತ್ರದಲ್ಲಿಯೇ ಸಮಾವೇಶ ನಡೆಸಿ ಜನರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. “ಗದಗದಲ್ಲಿ ಸಮಾವೇಶ ಹಮ್ಮಿಕೊಳ್ಳುವುದರ ಮೂಲಕ ಹಲವು ಮಠಾಧೀಶರು ತಮ್ಮ ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಂತಹ ಸ್ವಾಮೀಜಿಗಳ ಹಿಂದೆ ಭಕ್ತರು ನಿಲ್ಲಬಾರದು,” ಎಂದು ಹೇಳಿ, ಪರೋಕ್ಷವಾಗಿ ತೊಂಟದಾರ್ಯ ಶ್ರೀಗಳನ್ನು ಹಣಿಯುವ ಕೆಲಸ ಮಾಡಿದ್ದಾರೆ.

ಇನ್ನೊಂದೆಡೆ, ಸಚಿವ ವಿನಯ್ ಕುಲಕರ್ಣಿ ಅವರ ಕ್ಷೇತ್ರದ ಪ್ರಮುಖ ಹಳ್ಳಿಗಳಲ್ಲಿ ರೋಡ್ ಶೋ ಹಾಗೂ ಸಮಾವೇಶ ಹಮ್ಮಿಕೊಳ್ಳುವುದರ ಮೂಲಕ ಗೂಂಡಾಗಳಿಗೆ ಮತ ನೀಡಬೇಡಿ. ಕೊಲೆಗಡುಕರು ಯಾವುದೇ ಮೂಲೆಯಲ್ಲಿದ್ದರೂ ಸರಿ ಅವರನ್ನು ಜೈಲಿಗೆ ಅಟ್ಟುತ್ತೇವೆ ಎಂಬ ಮಾತನ್ನು ಹೇಳಿರುವ ಅಮಿತ್ ಶಾ, ಲಿಂಗಾಯತ ಮತದಾರರಲ್ಲಿ ಕಾಂಗ್ರೆಸ್‌ ಕುರಿತು ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾರಸ್ಯಕರ ಎಂದರೆ, ಶಾ ಅವರ ಭಾಷಣದಲ್ಲಿ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಸಾಧನೆಗಳೇ ಕಾಣುತ್ತಿಲ್ಲ. ಬದಲಾಗಿ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗಿಯಾಗಿದ್ದ ನಾಯಕರ ಚಾರಿತ್ರ್ಯವಧೆಯೊಂದೇ ಕಾಣುತ್ತಿದೆ.

ಆದರೂ ಅಮಿತ್ ಶಾ ಅವರಿಗೆ ಮಾತ್ರ ಬಿಜೆಪಿ ನಾಯಕರ ಕಾರ್ಯವೈಖರಿ ಕುರಿತು ಸಮಾಧಾನ ಇದ್ದಂತೆ ಕಾಣುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರ ಪ್ರಚಾರ ಕಾರ್ಯ, ಸಂಘಟನೆ ಶಾಗೆ ಇಷ್ಟವಾಗಿಲ್ಲ ಎಂಬಂತೆ ಕಾಣುತ್ತಿದೆ. ಕಾರಣ, ಪ್ರವಾಸದ ಉದ್ದಗಲಕ್ಕೂ ನಡೆದ ರೋಡ್ ಶೋ, ಸಮಾವೇಶದ ನಂತರ ಅಮಿತ್ ಶಾ ದುಗುಡ, ಆತಂಕ ಹಾಗೂ ಒತ್ತಡದಲ್ಲಿಯೇ ಇರುವಂತೆ ಕಾಣುತ್ತಿದ್ದರು. ಆ ಸಂದರ್ಭದಲ್ಲಿ ಭೇಟಿಯಾಗಲೂ ಬರುತ್ತಿದ್ದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಿಡಿಮಿಡಿಗೊಳ್ಳುವ ದೃಶ್ಯ ಕೂಡ ಸಾಮಾನ್ಯವಾಗಿತ್ತು. ಮಾತನಾಡಿಸಲು ಬರುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೂ ಸಿಡಿಮಿಡಿಗೊಂಡಿದ್ದರು.

ಆದರೆ, ಮಠಾಧೀಶರೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮುಖದಲ್ಲಿ ಸ್ವಲ್ಪಮಟ್ಟಿಗೆ ನಗೆ ಆವರಿಸಿರುತ್ತಿತ್ತು. ಇದನ್ನು ಗಮನಿಸಿದರೆ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕೆಂಬ ಬಿಜೆಪಿಯ ಕನಸಿಗೆ ರಾಜ್ಯದಲ್ಲಿ ಪೂರಕ ವಾತಾವರಣ ಇಲ್ಲವೇನೋ ಎಂಬ ಅನುಮಾನ ಶಾ ಅವರಿಗೆ ಪ್ರಚಾರದ ಸಂದರ್ಭದಲ್ಲಿಯೇ ಗೋಚರವಾದಂತೆ ಕಾಣುತ್ತಿದೆ ಎಂದು ಮತದಾರರು ಗೇಲಿ ಮಾಡುತ್ತಿದ್ದಾರೆ. ಚುನಾವಣೆಯ ಹೊಸ್ತಿಲದಲ್ಲಿರುವ ಈ ಸಂದರ್ಭದಲ್ಲಿಯೇ ಅಮಿತ್ ಶಾ ಅವರಲ್ಲಿ ಆತಂಕ ಮನೆ ಮಾಡಿರುವುದು ಕೂಡ ಬಿಜೆಪಿಯ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ಇದನ್ನೂ ಓದಿ : ಕಾಂಗ್ರೆಸ್‌ ಒಡೆದು ಆಳುವ ನೀತಿ ಪ್ರದರ್ಶಿಸುತ್ತಿದೆ: ಅಮಿತ್ ಶಾ ಆರೋಪ

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ ಮಾತ್ರ ಮಹದಾಯಿ ಹೋರಾಟದ ಕುರಿತು ಚಕಾರವೆತ್ತುತ್ತಿಲ್ಲ. ಅಮಿತ್ ಶಾ ಅವರ ಪ್ರತಿಯೊಂದು ಭಾಷಣದ ಸಂದರ್ಭದಲ್ಲಿ ಈ ಭಾಗದ ರೈತರು ಈಗಲಾದರೂ ಮಹದಾಯಿ ವಿಷಯದ ಕುರಿತು ಮಾತನಾಡಬಹುದು ಎಂಬ ಕಾಯುತ್ತಿದ್ದಾರೆ. ಆದರೆ, ಕೇವಲ ಮತಗಳ ಮೇಲೆಯೇ ಕಣ್ಣಿಟ್ಟಿರುವ ಬಿಜೆಪಿ, ಲಿಂಗಾಯತ ಮತಗಳನ್ನಷ್ಟೇ ಕ್ರೂಢಿಕರಿಸುವ ಕೆಲಸ ಮಾಡುತ್ತಿದೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ನಿಂದ ನಡೆದ ಜನಾಶೀರ್ವಾದ ಸಮಾವೇಶದ ಸಂದರ್ಭದಲ್ಲಿಯೂ ರಾಹುಲ್ ಗಾಂಧಿ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡದೆ ತೆರಳಿದ್ದರು. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹದಾಯಿ ವಿಷಯದ ಕುರಿತು ಮಾತನಾಡದೆ, ಕೇವಲ ಲಿಂಗಾಯತ ಮತಗಳ ಕುರಿತು ಮಾತನಾಡುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More