ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್

ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದರೆ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತ ಮುಖ್ಯವಾಗಿ, ಲಿಂಗಾಯತ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ರಾಜಕೀಯ ಎದಿರೇಟು ನೀಡಲೂ ಇದು ಸಹಾಯಕ ಎಂಬ ವಿಶ್ಲೇಷಣೆ ಇದೆ

ಚಾಲುಕ್ಯರ ರಾಜಧಾನಿಯಾಗಿ ಹೆಸರು ಮಾಡಿದ್ದ ಬಾದಾಮಿ, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳ ಪಟ್ಟಿಗೆ ಬಾದಾಮಿ ಕೂಡ ಸೇರ್ಪಡೆಯಾಗಿದೆ.

ಬಾದಾಮಿಯಿಂದ ಕಣಕ್ಕಿಳಿದರೆ ಆಗುವ ಲಾಭಗಳ ಬಗ್ಗೆ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದಾರೆ. ಈ ವೇಳೆ, ಮುಂಬೈ-ಕರ್ನಾಟಕದಲ್ಲಿ ಪ್ರಭಾವ ಬೀರಬಹುದು, ಆ ಮೂಲಕ ಕನಿಷ್ಠ 8ರಿಂದ 10 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲ ಆಗಬಹುದು, ಹಿಂದುಳಿದ ವರ್ಗಗಳ ಮತಗಳನ್ನು ಧ್ರುವೀಕರಣ ಮಾಡಬಹುದು ಎಂದು ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೈಕಮಾಂಡ್ ಸಿದ್ದರಾಮಯ್ಯ ಮಾತಿಗೆ ಒಪ್ಪಿಗೆ ಸೂಚಿಸಿದೆ.

ಬಾದಾಮಿಯ ಹಾಲಿ ಶಾಸಕ ಕಾಂಗ್ರೆಸ್‌ನ ಬಿ ಬಿ ಚಿಮ್ಮನಕಟ್ಟಿ ಈ ಕ್ಷೇತ್ರದಿಂದ ಎಂಟು ಸಲ ಸ್ಪರ್ಧಿಸಿದ್ದು, ಐದು ಸಲ ಗೆಲುವು ಸಾಧಿಸಿದ್ದಾರೆ. ಇಲ್ಲಿ ಚಿಮ್ಮನಕಟ್ಟಿ-ಪಟ್ಟಣಶೆಟ್ಟಿ ಕುಟುಂಬಗಳ ಮಧ್ಯೆ ಮೊದಲಿನಿಂದಲೂ ಚುನಾವಣೆ ಕದನವಿದೆ. ಎಂ ಕೆ ಪಟ್ಟಣಶೆಟ್ಟಿ ಆರು ಸಲ ಚುನಾವಣೆ ಎದುರಿಸಿ ಮೂರು ಸಲ ಗೆದ್ದು, ಮೂರು ಸಲ ಸೋತಿದ್ದಾರೆ. ಈ ಸಲ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಬೇಡವೆಂಬ ಕೂಗು ಕೇಳಿಬಂದಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ, ಭಿನ್ನಮತ ಉಂಟಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದು ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಕಳೆದ ಸಲ 15 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದ್ದ ಚಿಮ್ಮನಕಟ್ಟಿ ಅವರಿಗೆ ಈ ಸಲ ಆರೋಗ್ಯ ಕೈಕೊಟ್ಟಿದ್ದರಿಂದ ಅವರನ್ನು ಚುನಾವಣೆಯಿಂದ ದೂರ ಇಡಲು ವಿರೋಧಿಗಳು ಪ್ರಯತ್ನಿಸುತ್ತಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದು ಅವರಿಗೆಲ್ಲ ಸಮಾಧಾನ ತಂದಿದೆ. ಜೊತೆಗೆ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಬಲವರ್ಧನೆಗೂ ಇದು ಸಹಾಯಕವಾಗಲಿದೆ.

ಹಾಲಿ ಶಾಸಕ ಚಿಮ್ಮನಕಟ್ಟಿ ಈ ಭಾಗದ ಪ್ರಭಾವಿ ಶಾಸಕ ಮತ್ತು ಕುರುಬ ಸಮುದಾಯದ ನಾಯಕ. ಇದೀಗ ಅವರೇ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದು, “ನೀವು ನಾಮಪತ್ರ ಸಲ್ಲಿಸಿ ಹೋಗಿ ಸಾಕು, ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ,” ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದಾರೆ. ಬಾದಾಮಿ ಮತಕ್ಷೇತ್ರದಲ್ಲಿ ಕುರುಬ ಜನಾಂಗದ ಮತದಾರರು ನಿರ್ಣಾಯಕರಾಗಿದ್ದು, ಸಿದ್ದರಾಮಯ್ಯನವರಿಗೆ ಈ ಕ್ಷೇತ್ರದಲ್ಲಿ ಸುಲಭ ಗೆಲುವು ಎಂಬ ವಿಶ್ಲೇಷಣೆ ಇದೆ.

ಕ್ಷೇತ್ರದಲ್ಲಿ ಒಟ್ಟು 2,12,184 ಮತದಾರದಿದ್ದು, ಇದರಲ್ಲಿ 1,07,074, ಪುರುಷರು ಹಾಗೂ 1,05,110 ಮಹಿಳಾ ಮತದಾರರಿದ್ದಾರೆ. ಜಾತಿವಾರು ಲೆಕ್ಕಾಚಾರ ನೋಡುವುದಾದರೆ, ಕುರುಬರು 46 ಸಾವಿರ, ಗಾಣಿಗರು 26 ಸಾವಿರ, ಲಿಂಗಾಯತ 32 ಸಾವಿರ (ಪಂಚಮಸಾಲಿ, ಬಣಜಿಗ), ನೇಕಾರ 17 ಸಾವಿರ, ಎಸ್ಸಿ-ಎಸ್ಟಿ 25 ಸಾವಿರ, ಮುಸ್ಲಿಂ 12 ಸಾವಿರ, ಮರಾಠ ಕ್ಷತ್ರಿಯ 9 ಸಾವಿರ, ವಾಲ್ಮೀಕಿ 13 ಸಾವಿರ, ಬಂಜಾರ 6 ಸಾವಿರ, ರೆಡ್ಡಿ 10 ಸಾವಿರ ಹಾಗೂ ಇತರರು 16 ಸಾವಿರ ಮತದಾರರಿದ್ದು, ಕುರುಬ ಮತದಾರರ ಜೊತೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಸಿಎಂ ಸಿದ್ದರಾಮಯ್ಯ ಬುಟ್ಟಿಗೆ ಬಿದ್ದರೆ ಸುಲುಭವಾಗಿ ಗೆಲ್ಲಬಹುದು ಅನ್ನೋದು ಕಾಂಗ್ರೆಸ್ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯನವರ ಲೆಕ್ಕಾಚಾರ.

ಇದನ್ನೂ ಓದಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾದಾಮಿ ಬಯಕೆ ನಿಜವೋ, ಸುಳ್ಳೋ?

2013ರ ಚುನಾವಣೆಯಲ್ಲಿ ಚಿಮ್ಮನಕಟ್ಟಿ 57,446 ಮತ ಪಡೆದು, ಜೆಡಿಎಸ್‌ನ ಮಹಾಂತೇಶ್ ಗುರುಪಾದಪ್ಪ ವಿರುದ್ಧ 15,113 ಮತಗಳ ಅಂತರದಿಂದ ಜಯ ಗಳಿಸಿದ್ದರು. ಇದರಲ್ಲಿ ಕುರುಬ ಸಮುದಾಯದ ಮತಗಳೇ 46  ಸಾವಿರ ಇದ್ದವು. ಹಾಗಾಗಿ ಅದರೊಟ್ಟಿಗೆ ಇತರ ಸಮುದಾಯಗಳ ಬೆಂಬಲ ಪಡೆದರೆ ಗೆಲುವು ಸಲೀಸಾಗಲಿದೆ ಅನ್ನೋದು ಸಿದ್ದರಾಮಯ್ಯ ಅವರ ಆಲೋಚನೆ. ಬಾದಾಮಿ ಕ್ಷೇತ್ರದಲ್ಲಿ ಚಿಮ್ಮನಕಟ್ಟಿ ಅವರಿಗೆ ಅಪಾರ ಅಂಖ್ಯೆಯಲ್ಲಿ ಬೆಂಬಲಗರಿದ್ದು, ಈ ಕ್ಷೇತ್ರದ ಮೇಲೆ ಅವರಿಗೆ ಪಕ್ಷಕ್ಕಿಂತಲೂ ವೈಯಕ್ತಿಕ ಹಿಡಿತವಿದೆ. ಹಾಗಾಗಿ, ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಎಚ್ಚರಿಕೆಯ ಹೆಚ್ಚೆ ಇಟ್ಟು, ಮೊದಲು ಚಿಮ್ಮನಕಟ್ಟಿ ಅವರ ಮನವೊಲಿಸಿದ ನಂತರವೇ ಸಿಎಂ ಸಿದ್ದರಾಮಯ್ಯನವರ ಸ್ಪರ್ಧೆಗೆ ಒಪ್ಪಿಗೆ ನೀಡಿರುವಂತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಈ ಹಿಂದೆ ಹಲವು ಸಿಎಂ ಅಭ್ಯರ್ಥಿಗಳು ಉಪ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿದ ಉದಾಹರಣೆ ನೆನಪು ಮಾಡಿಕೊಂಡ ಕಾಂಗ್ರೆಸ್ ನಾಯಕರು, ಅದರ ಪರಿಣಾಮದ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ನೀಡುವಾಗ ಎಲ್ಲವನ್ನೂ ಅಳೆದು ತೂಗಿ ಲೆಕ್ಕ ಹಾಕಲಾಗಿದೆ.

ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದರೆ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳ ಮೇಲೆ ಇದರ ಪರಿಣಾಮ ಹೆಚ್ಚಾಗಿ ಆಗುತ್ತದೆ. ಜೊತೆಗೆ, ಲಿಂಗಾಯತ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ರಾಜಕೀಯ ಎದಿರೇಟು ನೀಡಲೂ ಇದು ಸಹಾಯಕವಾಗುತ್ತದೆ. ಬಾದಾಮಿಯ ಶಿವಯೋಗಿ ಮಂದಿರದಲ್ಲಿ ಗುರು, ವಿರಕ್ತರರನ್ನು ಭೇಟಿ ಮಾಡಿದ್ದ ಅಮಿತ್ ಶಾ, ಅವರ ಬೆಂಬಲ ಪಡೆಯಲು ಮುಂದಾಗಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅದೇ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದು ಬಿಜೆಪಿಯತ್ತ ಮಹತ್ವದ ರಾಜಕೀಯ ದಾಳ ಉರುಳಿಸಿದಂತಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More