ಆ ಪ್ರೊಫೆಸರ್ ತೆಲಂಗಾಣ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವುದೇಕೆ?

ಹೋರಾಟದ ಮೂಲಕ ಗಮನ ಸೆಳೆದ ಮೇಷ್ಟ್ರೊಬ್ಬರು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಅವರು ಕಟ್ಟಿರುವ ಹೊಸ ಪಕ್ಷವು ಕೆಸಿಆರ್ ಅವರ ಟಿಆರ್‌ಎಸ್‌ಗೆ ಸಡ್ಡು ಹೊಡೆಯುತ್ತಿದೆ. ಮೇಷ್ಟ್ರು ತಿರುಗಿಬಿದ್ದ ಹಿನ್ನೆಲೆ ಕೂಡ ಅತ್ಯಂತ ರೋಚಕ ಕಥಾನಕ

ರಣರಣ ಬಿಸಿಲಿನ ಊರುಗಳು, ಬಂಡೆಕಲ್ಲುಗಳ ಬೆಂಗಾಡು, ಮಳೆ ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಪ್ರತಿವರ್ಷ ಬಿಸಿಲಿನ ತಾಪಕ್ಕೆ ಸಾಯುವವರು ಅದೆಷ್ಟೋ ಮಂದಿ. ಅಂತಹ ಭೂಪ್ರದೇಶವೊಂದು ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿ ಸಾಕಾರವಾಗುತ್ತದೆ ಎಂದು ಅನೇಕರು ಹಂಬಲಿಸಿದ್ದುಂಟು. ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದು ತ್ಯಾಗ, ಬಲಿದಾನಗಳು ನಡೆದದ್ದುಂಟು. ಪರಿಣಾಮವಾಗಿ ಉದಯಿಸಿತು ತೆಲಂಗಾಣ ರಾಜ್ಯ.

ರಾಜ್ಯ ರಚನೆಗಾಗಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಹೋರಾಟ ಮಾಡಿದ್ದರಲ್ಲಿ ಅನುಮಾನವೇ ಇಲ್ಲ. ಆದರೆ ಅದರ ಎಲ್ಲ ಫಲ ದಕ್ಕಿದ್ದು ಮಾತ್ರ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಿಗೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿತ್ತು. ರಾವ್ ಅವರದು ಏರಿದ ಏಣಿಯನ್ನೇ ಒದೆಯುವ ಸ್ವಭಾವ ಎಂದು ಜನ ಮಾತನಾಡಿಕೊಳ್ಳುವುದುಂಟು. ತೆಲಂಗಾಣ ರಾಜ್ಯ ರಚನೆಯಾದರೆ ಕಾಂಗ್ರೆಸ್ಸಿನೊಂದಿಗೆ ತೆಲಂಗಾಣ ರಾಷ್ಟ್ರ ಸಮಿತಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದ ಕೆಸಿಆರ್ ಕೊನೆಗೆ ಮಾತು ತಪ್ಪಿದರು. ಯುಪಿಎ ಮೈತ್ರಿಕೂಟದಿಂದಲೂ ಹೊರಬಂದರು. ಇತ್ತ ರಾಜ್ಯ ರಚನೆಗಾಗಿ ಹೋರಾಡಿದ ತಮ್ಮದೇ ಒಡನಾಡಿಗಳನ್ನೂ ದೂರವಿಟ್ಟರು. ಮಗನನ್ನು ರಾಜಕಾರಣಕ್ಕೆ ತರುವ ಕನಸು ಕಂಡು ವಂಶ ರಾಜಕಾರಣದ ಸುಳಿವು ನೀಡಿದರು. ತೆಲಂಗಾಣದ ಪ್ರಥಮ ಮುಖ್ಯಮಂತ್ರಿಯ ಇಂಥ ನಡೆ ಅನೇಕರ ಆಕ್ರೋಶಕ್ಕೆ ಕಾರಣವಾಯಿತು. ಹಾಗೆ ಆಕ್ರೋಶಗೊಂಡು ಬಂಡೆದ್ದವರಲ್ಲಿ ಪ್ರೊ.ಮುದ್ದಸಾನಿ ಕೋದಂಡರಾಮ ರೆಡ್ಡಿ ಕೂಡ ಒಬ್ಬರು.

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಬೋಧಿಸುತ್ತಿದ್ದ ಕೋದಂಡರಾಮ ರೆಡ್ಡಿ ಈಗ ‘ತೆಲಂಗಾಣದ ಕೇಜ್ರಿವಾಲ್’ ಎಂದೇ ಜನಜನಿತ. ರಾವ್ ಅವರಿಗೆ ಸಡ್ಡು ಹೊಡೆದು ತೆಲಂಗಾಣ ಜನ ಸಮಿತಿ (ಟಿಜಿಎಸ್) ಎಂಬ ಹೊಸ ಪಕ್ಷ ಕಟ್ಟಿದ್ದಾರೆ ರೆಡ್ಡಿ. ಸಹಜವಾಗಿಯೇ ಅವರು ಸುದ್ದಿಯ ಕೇಂದ್ರಬಿಂದು. ಎಲ್ಲೆಡೆ ತೆಲಂಗಾಣ ಜನ ಸಮಿತಿ ತುಳಿಯುವ ಹಾದಿಯ ಬಗ್ಗೆ ಚರ್ಚೆ. ಅವರು ಕೇಜ್ರಿವಾಲರ ಆಮ್ ಆದ್ಮಿ ಪಕ್ಷದ ರೀತಿಯಲ್ಲಿ ಮುಂದುವರಿಯುವರೇ? ಟಿಆರ್‌ಎಸ್ ಬಿಟ್ಟು ಟಿಜೆಎಸ್ ಬೆಂಬಲಿಸಿದರೆ ಜನತೆಗೆ ಆಗುವ ಲಾಭಗಳೇನು ಎಂಬುದರ ಸುತ್ತಲೇ ಚರ್ಚೆಗಳು ಗಿರಕಿ ಹೊಡೆಯುತ್ತಿವೆ.

ಒಂದರ್ಥದಲ್ಲಿ ರೆಡ್ಡಿಯವರು ರಾವ್ ಅವರ ರಾಜಕೀಯ ಗುರು ಕೂಡ. ತೆಲಂಗಾಣ ರಾಷ್ಟ್ರ ಸಮಿತಿ ಅಸ್ತಿತ್ವಕ್ಕೆ ಬಂದಾಗ ಅದಕ್ಕೆ ಬೆನ್ನೆಲುಬಾಗಿ ರೆಡ್ಡಿ ಹಾಗೂ ಪ್ರೊ.ಜಯಶಂಕರ್ ಇರಬೇಕು ಎಂದು ಸ್ವತಃ ರಾವ್ ಬಯಸಿದ್ದರು. ಇಡೀ ಸಂಘಟನೆಯನ್ನು ಒಡೆಯಬೇಕು ಎಂದು ಅಂದಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಯತ್ನಿಸಿದ್ದಾಗ ಅದನ್ನು ತಡೆದದ್ದು ಈ ಇಬ್ಬರು ಮೇಷ್ಟ್ರುಗಳೇ. ಉಸ್ಮಾನಿಯಾ ಮತ್ತು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಜ್ಯ ರಚನೆಯ ಹೋರಾಟಕ್ಕೆ ವಿದ್ಯಾರ್ಥಿಗಳು ಧುಮುಕುವಂತೆ ಪ್ರೇರೇಪಿಸಿದ್ದು ಇದೇ ರೆಡ್ಡಿ. ತೆಲಂಗಾಣ ಜಂಟಿ ಕ್ರಿಯಾ ಸಮಿತಿಯನ್ನು ಮುಂದುವರಿಸಬೇಕೇ ಬೇಡವೇ ಎಂಬಲ್ಲಿಂದ ಎದ್ದ ಭಿನ್ನಾಭಿಪ್ರಾಯಗಳು ಈಗ ಪ್ರತ್ಯೇಕ ಪಕ್ಷ ಕಟ್ಟುವವರೆಗೂ ಮುಂದುವರಿದಿವೆ. ಸಮಿತಿ ಅಸ್ತಿತ್ವದಲ್ಲಿರಲಿ ಎಂದು ಅದರ ಅಧ್ಯಕ್ಷರೂ ಆಗಿದ್ದ ರೆಡ್ಡಿ ಬಯಸಿದರೆ, ಬೇಡ ಎಂದು ರಾವ್ ಸೂಚಿಸಿದ್ದರು. ಆ ಮೂಲಕ ಗುರುವಿಗೇ ತಿರುಮಂತ್ರ ಹಾಕಿದ್ದರು.

ಟಿಆರ್‌ಎಸ್‌ಗೆ ಹೋಲಿಸಿದರೆ ಜಂಟಿ ಕ್ರಿಯಾ ಸಮಿತಿ ಮೊದಲಿನಿಂದಲೂ ಕ್ರಾಂತಿಕಾರಿಯಾಗಿತ್ತು. ರಸ್ತೆ ತಡೆ, ರೈಲು ತಡೆ ಚಳವಳಿಗಳು, ಹೆದ್ದಾರಿಯಲ್ಲೇ ಅಡುಗೆ ಮಾಡಿ ಪ್ರತಿಭಟನೆ, ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆಕೊಟ್ಟ ‘ಸಕಲ ಜನುಲ ಸಮ್ಮೆ’ ರೀತಿಯ ಆಂದೋಲನಗಳ ಮೂಲಕ ಜನರನ್ನು ಸಂಘಟಿಸುವ ಕಾರ್ಯ ನಡೆಯಿತು. ಕವಿಗಳು, ವಕೀಲರು, ಶಿಕ್ಷಕರು, ರೈತರು, ಪತ್ರಕರ್ತರು ಹೀಗೆ ಸಮಾಜದ ನೂರೆಂಟು ವರ್ಗಗಳು ರಾಜ್ಯ ರಚನೆಗೆ ಧುಮುಕುವಲ್ಲಿ ರೆಡ್ಡಿ ಅವರ ಪಾತ್ರ ಮಹತ್ವದ್ದಾಗಿತ್ತು.

‘ನೀರು-ನಿಧಿ-ನಿಯಮಗಳು’ ಘೋಷಣೆಯಡಿ ಬಹುಮತ ಪಡೆದು ಅಧಿಕಾರಕ್ಕೆ ಬಂದ (ಒಟ್ಟು 119 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಆರ್‌ಎಸ್ ಗೆದ್ದದ್ದು 63 ಸ್ಥಾನಗಳನ್ನು) ಚಂದ್ರಶೇಖರ ರಾವ್ ಅವರಿಗೆ ಸದನದ ಒಳಗಾಗಲೀ ಹೊರಗಾಗಲೀ ವಿರೋಧಿಗಳೇ ಇಲ್ಲದಂತಾಯಿತು. ವಿರೋಧ ಒದಗಬಹುದಾಗಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜೊತೆ ಒಪ್ಪಂದ ಮಾಡಿಕೊಂಡರು. ನಾಲ್ವರು ಪಕ್ಷೇತರ ಶಾಸಕರು ಅವರ ಕೈ ಹಿಡಿದರು. ತೆಲಂಗಾಣ ಜಂಟಿ ಕ್ರಿಯಾ ಸಮಿತಿಯೊಂದೇ ರಾವ್ ಅವರ ಎದುರಿದ್ದ ದೊಡ್ಡ ತಡೆಗೋಡೆ. ಅದರಲ್ಲಿದ್ದ ವಿದ್ಯಾರ್ಥಿ ಮುಖಂಡರು, ಕವಿಗಳು, ಚಿಂತಕರು ಹಾಗೂ ನೌಕರರ ಸಂಘದ ನಾಯಕರನ್ನು ತಮ್ಮತ್ತ ಸೆಳೆಯುವಲ್ಲಿ ಅವರು ಸಫಲರಾದರು.

ಇದನ್ನೂ ಓದಿ : ತೆಲಂಗಾಣ ಸಿಎಂ ಕೆಸಿಆರ್ ಕೇಂದ್ರದ ವಿರುದ್ಧ ದಿಢೀರನೆ ಸಿಡಿದೇಳಲು ಏನು ಕಾರಣ?

ಆದರೆ, ಕೋದಂಡರಾಮ ರೆಡ್ಡಿ ಅವರನ್ನು ಅಲುಗಾಡಿಸುವುದು ಮಾತ್ರ ಸಾಧ್ಯವಾಗಲಿಲ್ಲ. ಮಹಬೂಬ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಆರ್‌ಎಸ್ ಅನ್ನು ಬೆಂಬಲಿಸಲು ರೆಡ್ಡಿ ನಿರಾಕರಿಸಿದರು. ಪರಿಣಾಮ, ಸುಲಭವಾಗಿ ಆ ಕ್ಷೇತ್ರ ಬಿಜೆಪಿಯ ತುತ್ತಾಯಿತು. ನಂತರ ಜಂಟಿ ಕ್ರಿಯಾ ಸಮಿತಿ ರಾಜಕೀಯವಾಗಿ ತಟಸ್ಥ ಧೋರಣೆ ಅನುಸರಿಸುವುದಾಗಿ ರಾವ್ ಅವರಿಗೆ ಭರವಸೆ ನೀಡಿತಾದರೂ, ಇಬ್ಬರ ನಡುವಿನ ಬಿರುಕುಗಳು ಹೆಚ್ಚುತ್ತಲೇ ಹೋದವು. ರಾಜ್ಯ ರಚನೆ ಕುರಿತಂತೆ ಪಠ್ಯಪುಸ್ತಕಗಳಲ್ಲೂ ಟಿಆರ್‌ಎಸ್‌ಗೆ ದಕ್ಕಿದ ಆದ್ಯತೆ ಜಂಟಿ ಕ್ರಿಯಾ ಸಮಿತಿಗೆ ದೊರೆಯಲಿಲ್ಲ. ದಿನಗಳೆದಂತೆ ಜಂಟಿ ಕ್ರಿಯಾ ಸಮಿತಿಯ ಪ್ರಸ್ತುತತೆಯ ಬಗ್ಗೆ ಪ್ರಶ್ನೆಗಳೆದ್ದವು. ಕೆಲವರು ರಾಜಕೀಯವಾಗಿ ಅದು ಮುಂದುವರಿಯುವುದು ಬೇಡ ಎಂದರೆ, ಮತ್ತೆ ಕೆಲವರು ಜನಕಲ್ಯಾಣಕ್ಕೆ ಶ್ರಮಿಸಲಿ ಎಂದರು. ಇತ್ತ, ತೆಲಂಗಾಣ ಸರ್ಕಾರವೇ ಕೋದಂಡರಾಮ ರೆಡ್ಡಿಯವರನ್ನು ಬಂಧಿಸಲು ಮುಂದಾಯಿತು. ಅವರ ಅನೇಕ ಹೋರಾಟಗಳನ್ನು ನಾನಾ ಬಗೆಯಲ್ಲಿ ಹತ್ತಿಕ್ಕಲು ಯತ್ನಿಸಿತು.

ಈ ಎಲ್ಲ ಬೆಳವಣಿಗೆಗಳ ಪರಿಣಾಮ ಎಂಬಂತೆ, ಕೋದಂಡರಾಮ ರೆಡ್ಡಿ ನೇತೃತ್ವದಲ್ಲಿ ತೆಲಂಗಾಣ ಜನ ಸಮಿತಿ ಉದಯಿಸಿದೆ. 2019ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವುದಾಗಿ ಹೇಳಿಕೊಳ್ಳಲಾಗುತ್ತಿದೆ. ರಾಜ್ಯ ರಚನೆಯ ಅಲೆಗಿಂತಲೂ ನಿರುದ್ಯೋಗ, ಮೂಲಸೌಕರ್ಯ ಸಮಸ್ಯೆಗಳು ದೊಡ್ಡದಾಗಿ ತೆಲಂಗಾಣವನ್ನು ಕಾಡುತ್ತಿವೆ. ಇದೆಲ್ಲ ಮತವಾಗಿ ಪರಿವರ್ತನೆಯಾದರೆ ರೆಡ್ಡಿ ಅವರಿಗೆ ಖಂಡಿತ ವರದಾನವಾಗಲಿದೆ. ಆದರೆ, ಕೆಸಿಆರ್ ರಾಜಕೀಯ ಚಾಣಾಕ್ಷ. ಎಂಥ ಸಣ್ಣ ಅವಕಾಶವನ್ನೂ ತನ್ನೆಡೆಗೆ ಸೆಳೆಯಬಲ್ಲ ತಂತ್ರಗಾರಿಕೆ ಅವರಲ್ಲಿದೆ. ಅಲ್ಲದೆ, ತಮ್ಮ ಮಗ ಕೆ ಟಿ ರಾಮರಾವ್ ಅವರನ್ನು ಶತಾಯಗತಾಯ ಮುಖ್ಯಮಂತ್ರಿ ಮಾಡಬೇಕೆಂಬ ಕನಸು ಕಾಣುತ್ತಿದ್ದಾರೆ. ಈಗ ಇರುವ ಪ್ರಶ್ನೆ, ಜನಮನ್ನಣೆ ದೊರೆಯುವುದು ಮೇಷ್ಟ್ರ ಪಾಠಕ್ಕೋ ಅಥವಾ ಚಾಣಾಕ್ಷರ ಚದುರಂಗದಾಟಕ್ಕೋ ಎಂಬುದು!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More