ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಗ್ಗಜಗ್ಗಾಟದಲ್ಲಿ ಏನೆಲ್ಲ ನಡೆದಿದೆ?

ಕಾಂಗ್ರೆಸ್‌ ಟಿಕೆಟ್‌ ಪಟ್ಟಿ ಬಿಡುಗಡೆಗೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮ ವಲಯದಲ್ಲಿ ಹತ್ತು ಹಲವು ಸುದ್ದಿಗಳು ಹರಿದಾಡತೊಡಗಿವೆ. ಅವುಗಳ ಸತ್ಯಾಸತ್ಯತೆ ಬಗ್ಗೆ ಗೊಂದಲವಿದೆ. ಆದರೆ, ಇದರಾಚೆಗೆ ರಾಜ್ಯದ ಹಿರಿಯ ಕಾಂಗ್ರೆಸ್‌ ಮುಖಂಡರ ಆಪ್ತ ವಲಯಗಳಲ್ಲಿ ಕೇಳಿಬರುತ್ತಿರುವ ಮಾತುಗಳೇನು?

ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಆಖೈರುಗೊಳಿಸಲು ಕಾಂಗ್ರೆಸ್‌ ಪಕ್ಷದ ಕೇಂದ್ರ ಚುನಾವಣಾ ಸಮಿತಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಸುದೀರ್ಘ ಸಭೆಗಳನ್ನು ನಡೆಸಿದೆ. ಈ ವೇಳೆ ರಾಜ್ಯದ ಹಿರಿಯ ನಾಯಕರ ನಡುವೆ ನಡೆದಿದೆ ಎನ್ನಲಾದ ವಾಗ್ಯುದ್ಧ, ಹಗ್ಗಜಗ್ಗಾಟಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಇದರ ಬೆನ್ನಿಗೇ, ಮುಖ್ಯಮಂತ್ರಿಯವರು ದೆಹಲಿಯಲ್ಲಿ ಶನಿವಾರ ಪ್ರತಿಕ್ರಿಯಿಸುತ್ತ, “ಗೊಂದಲವಿರುವುದು ಮಾದ್ಯಮಗಳಲ್ಲಿಯೇ ಹೊರತು ನಮ್ಮ ನಡುವೆ ಅಲ್ಲ,” ಎನ್ನುವ ಮೂಲಕ ಟಿಕೆಟ್‌ ವಿಚಾರದಲ್ಲಿ ಹಿರಿಯ ನಾಯಕರ ನಡುವೆ ಬಿರುಕು ಮೂಡಿಸುವಂಥ ಅಥವಾ ವಾಗ್ವಾದಕ್ಕೆ ಕಾರಣವಾಗುವಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎನ್ನುವ ಅರ್ಥವನ್ನು ಹೊಮ್ಮಿಸಿದ್ದಾರೆ.

ಹಾಗಾದರೆ, ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸುವ ವೇಳೆ ನಡೆದಿರುವ ತಳಮಳಗಳೇನು ಎನ್ನುವ ಬಗ್ಗೆ ಗಮನಿಸಿದರೆ, ಕೆಲವೊಂದು ಅಚ್ಚರಿಯ ಸಂಗತಿಗಳು ಕೇಳಿಬರುತ್ತವೆ; ನಾಲ್ಕು ಗೋಡೆಗಳ ನಡುವೆ ನಡೆದಿರುವ ಬೆಳವಣಿಗೆಗಳನ್ನು ಅಲ್ಲಿದ್ದವರು ಖಚಿತಪಡಿಸದೆ ನಿಖರ ಎಂದು ಹೇಳಲಾಗದು. ಈ ನಡುವೆಯೂ ಟಿಕೆಟ್‌ ಹಂಚಿಕೆಯಲ್ಲಿ ಭಾಗಿಯಾಗಿದ್ದ ಹಿರಿಯ ನಾಯಕರ ಆಪ್ತವಲಯಗಳಲ್ಲಿ ಕೇಳಿ ಬರುತ್ತಿರುವ ಕೆಲ ಮಾಹಿತಿಗಳನ್ನು ಇಲ್ಲಿ ಗಮನಿಸಬಹುದು.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್
  • ಸಿದ್ದರಾಮಯ್ಯನವರು ಪಕ್ಷದ ಹೈಕಮಾಂಡ್‌ ಮುಂದೆ ರಾಜ್ಯದ ಹಿರಿಯ ನಾಯಕರು ಪ್ರಮುಖ ಪ್ರತಿಪಕ್ಷದ ನಾಯಕರೊಬ್ಬರ ನಡುವೆ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಚರ್ಚಿಸಿರುವ ಧ್ವನಿಮುದ್ರಿಕೆಯನ್ನು ಕೇಳಿಸಿದ್ದಾರೆ ಎನ್ನಲಾಗಿದೆ. ತಾವು ತಂದಿರುವ ಅಭ್ಯರ್ಥಿಗಳ ಪಟ್ಟಿಗೆ ಹಿರಿಯ ನಾಯಕರು ತೊಡರುಗಾಲು ಹಾಕುತ್ತಿರುವುದರ ಹಿಂದಿನ ಉದ್ದೇಶವೇನು ಎನ್ನುವುದನ್ನು ಈ ಮೂಲಕ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.
  • ಮೀಸಲು ಕ್ಷೇತ್ರಗಳಲ್ಲಿ ನೀಡಲಾಗುವ ದಲಿತ ಅಭ್ಯರ್ಥಿಗಳ ಟಿಕೆಟ್‌ ವಿಚಾರದಲ್ಲಿ, ಇದೇ ಮೊದಲ ಬಾರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್‌ಗಳನ್ನು ದೊರಕಿಸಿಕೊಡುವ ಆಶ್ವಾಸನೆಯನ್ನು ರಾಜ್ಯದ ಎಡಗೈ ಸಮುದಾಯದ ಮುಖಂಡರಿಗೆ ಮುಖ್ಯಮಂತ್ರಿಗಳು ನೀಡಿದ್ದರು. ಇದರ ಭಾಗವಾಗಿಯೇ ರಾಜ್ಯದ ಎಡಗೈ ಸಮುದಾಯದ ಹಿರಿಯ ಮುಖಂಡರು ನೀಡಿದ್ದ ಪಟ್ಟಿಯನ್ನೂ ಒಯ್ದಿದ್ದರು. ಆದರೆ, ಬಲಗೈ ಸಮುದಾಯದ ರಾಜ್ಯ ನಾಯಕರು ತಮ್ಮ ಹಕ್ಕನ್ನು ಮಂಡಿಸಿ ಒಂದೆಡೆ ಪಟ್ಟು ಹಿಡಿದರೆ, ಮತ್ತೊಂದೆಡೆ, ಸ್ವತಃ ಮುಖ್ಯಮಂತ್ರಿಗಳೇ ತಾವು ಅಭಯ ಕೊಟ್ಟಿರುವ ಕೆಲವು ಸ್ಪೃಶ್ಯ ದಲಿತ ಜಾತಿಗಳ ಮುಖಂಡರಿಗೆ ಟಿಕೆಟ್‌ ನೀಡುವ ಸಲುವಾಗಿ ಎಡಗೈ ಸಮುದಾಯದ ಪಟ್ಟಿಯಲ್ಲಿ ಬದಲಾವಣೆಗೆ ಮುಂದಾದರು. ಆ ಮೂಲಕ ಎಡಗೈ, ಬಲಗೈ ಎರಡೂ ಸಮುದಾಯಗಳ ಹಿರಿಯ ನಾಯಕರನ್ನು ತಳಮಳಕ್ಕೆ ದೂಡಿದರು ಎನ್ನಲಾಗಿದೆ.
  • ಮುಖ್ಯಮಂತ್ರಿಯವರು ೧೫೦ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿಯನ್ನು ಒಯ್ದಿದ್ದರ ಬಗ್ಗೆ ರಾಜ್ಯದ ಪ್ರಮುಖ ನಾಯಕರಲ್ಲಿ ತೀವ್ರ ಅಸಮಾಧಾನವಿದೆ. ಪಕ್ಷದ ಮೇಲೆ ಏಕವ್ಯಕ್ತಿ ಸ್ವಾಮ್ಯವನ್ನು ಸಾಧಿಸುವ ಉದ್ದೇಶ ಮುಖ್ಯಮಂತ್ರಿ ಹೊಂದಿದ್ದಾರೆ. ಪಕ್ಷ ಏಕವ್ಯಕ್ತಿ ಕೇಂದ್ರಿತವಾಗುವತ್ತ ಹೆಚ್ಚು ವಾಲುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
  • ಲಿಂಗಾಯತ ಅಭ್ಯರ್ಥಿಗಳನ್ನು ಆಖೈರುಗೊಳಿಸುವ ವಿಚಾರದಲ್ಲಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕದ ಹಿರಿಯ ಲಿಂಗಾಯತ-ವೀರಶೈವ ಮುಖಂಡರ ಸಲಹೆಗಳನ್ನಾಗಲೀ, ಆ ಭಾಗದ ಹಿರಿಯ ನಾಯಕರ ಸಲಹೆಗಳನ್ನಾಗಲೀ, ಮುಖ್ಯಮಂತ್ರಿಗಳು ಕೇಳುವ ಗೋಜಿಗೆ ಹೋಗಿರಲಿಲ್ಲ. ಇದು ಸಹ ಹಿರಿಯ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
  • ಒಂದೇ ಹಂತದಲ್ಲಿ ಪಟ್ಟಿಯನ್ನು ಪ್ರಕಟಿಸುವ ಉದ್ದೇಶವನ್ನು ಹೈಕಮಾಂಡ್‌ ಹೊಂದಿದ್ದು, ಎಲ್ಲ ಗೊಂದಲಗಳಿಗೆ ತೆರೆ ಎಳೆದು ೨೨೪ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಆಖೈರು ಮಾಡುವ ಉದ್ದೇಶವನ್ನು ಹೈಕಮಾಂಡ್ ಹೊಂದಿದೆ. ಇದಕ್ಕೆ ಪೂರಕವಾಗಿ ಚುನಾವಣಾ ಸಮಿತಿ ನಡೆದುಕೊಳ್ಳುತ್ತಿದೆ. ಇದು ಪಟ್ಟಿಯ ಬಿಡುಗಡೆ ಸ್ವಲ್ಪ ವಿಳಂಬವಾಗಲು ಕಾರಣ ಎನ್ನುವ ವ್ಯಾಖ್ಯಾನವಿದೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More