ಟ್ವಿಟರ್ ಸ್ಟೇಟ್ | ಬಿಜೆಪಿಗೆ ಪ್ರಬಲ ವಿಪಕ್ಷವಾದ ರಾಹುಲ್ ಟ್ವಿಟರ್ ಖಾತೆ

ಕೇವಲ ಶುಭಾಶಯ, ಭಾಷಣದ ತುಣುಕುಗಳಿಗೆ ಸೀಮಿತವಾಗಿದ್ದ ಟ್ವಿಟರ್ ಖಾತೆ ಈಗ ಎರಡು ಗಂಟೆಯ ಅವಧಿಯೊಳಗೆ ಸಾವಿರಾರು ಮಂದಿಯನ್ನು ಇಂಡಿಯಾ ಗೇಟ್ ಮುಂದೆ ಸೇರುವಂತೆ ಮಾಡುವ ಮಟ್ಟಕ್ಕೆ ಬೆಳೆದಿದೆ. ಟ್ವೀಟ್‌ಗಳನ್ನೇ ಅಸ್ತ್ರವಾಗಿ ಬಿಡುತ್ತಿರುವ ರಾಹುಲ್ ಟ್ವಿಟರ್ ಖಾತೆಯ ಒಂದು ವಿಶ್ಲೇಷಣೆ

ಒಬ್ಬ ವ್ಯಕ್ತಿಯ ಟ್ವಿಟರ್ ಖಾತೆಯಿಂದ ಆತನ ವ್ಯಕ್ತಿತ್ವ ತಿಳಿದುಕೊಳ್ಳಬಹುದೇ? ಹೌದು, ತಿಳಿಯಬಹುದು. ಅದರಲ್ಲೂ, ಟ್ವೀಟ್ ಮಾಡುವ ವ್ಯಕ್ತಿ ರಾಜಕೀಯ ರಂಗಕ್ಕೆ ಸೇರಿದವರಾಗಿದ್ದಲ್ಲಿ, ಅವರು ತಮ್ಮ ವರ್ಚಸ್ಸನ್ನು ಹೇಗೆ ಬೆಳೆಸಿಕೊಳ್ಳಲು ಬಯಸುತ್ತಾರೆ ಎನ್ನುವುದು ಕೂಡ ಅವರ ಟ್ವಿಟರ್ ಖಾತೆ ನೋಡಿದರೆ ತಿಳಿಯುತ್ತದೆ. ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯೂ ಇದಕ್ಕೆ ಹೊರತಲ್ಲ.

ಅತ್ಯಾಚಾರಕ್ಕೆ ಒಳಗಾದ ಉನ್ನಾವ್ ಯುವತಿ ಮತ್ತು ಕಟುವಾ ಬಾಲಕಿಗಾಗಿ ಮಧ್ಯರಾತ್ರಿಯಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಕರೆ ನೀಡಿದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ್ದರು. ಇದೇ ವಿಚಾರವಾಗಿ ಶುಕ್ರವಾರದಂದು ಬೆಳಗ್ಗೆ ರಾಹುಲ್ ಮತ್ತೊಂದು ಟ್ವೀಟ್ ಮಾಡಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯಾಚಾರ ಪ್ರಕರಣಗಳ ಕುರಿತಂತೆ ತಮ್ಮ ಮೌನವನ್ನು ಮುರಿಯುವಂತೆ ಹೇಳಿದ್ದರು. ಕೊನೆಗೂ ವಿಪಕ್ಷಗಳು ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದು ಪ್ರಧಾನಿ ತಮ್ಮ ಮೌನ ಮುರಿದಿದ್ದರು. ಈ ಘಟನೆಗಳು ಯಾವುದೇ ನಾಗರಿಕ ಸಮಾಜ ನಾಚಿಕೆಪಡುವಂಥದ್ದು ಎಂದು ಟ್ವೀಟ್ ಮಾಡಿದ ನರೇಂದ್ರ ಮೋದಿಯವರು, “ನಾವೆಲ್ಲರೂ ಕೂಡಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಅಪರಾಧಿ ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಯಾವ ಅಪರಾಧಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯ ಸಿಕ್ಕೇ ಸಿಗುತ್ತದೆ, ಪೂರ್ಣ ನ್ಯಾಯ ಸಿಕ್ಕುತ್ತದೆ ಎಂದು ನಾನು ದೇಶದ ನಾಗರಿಕರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲು ಬಯಸುತ್ತೇನೆ,” ಎಂದು ಭರವಸೆ ನೀಡಿದ್ದಾರೆ.

ಕೇವಲ ಕೇಂದ್ರದ ಬಿಜೆಪಿ ಸರ್ಕಾರ ಮಾತ್ರವಲ್ಲ, ವಿವಿಧ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧವೂ ರಾಹುಲ್ ಅವರು ತಮ್ಮ ಟ್ವೀಟ್ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ವ್ಯಾಪಂ ಹಗರಣ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧದ ಟ್ವೀಟ್‌ಗಳು, ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ವಿರುದ್ಧದ ಟ್ವೀಟ್‌ಗಳು ಇದಕ್ಕೆ ಸಾಕ್ಷಿ. ಆಗೆಲ್ಲಾ ಬಿಜೆಪಿಗೆ ಹಿಂಜರೆತವಾಗಿದ್ದೂ ಅಷ್ಟೇ ಸತ್ಯ.

ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ತಕ್ಷಣ ರಾಷ್ಟ್ರ ಮಟ್ಟದ ಸುದ್ದಿಯಾಗುವುದು ಮತ್ತು ಎಲ್ಲಾ ಮಾಧ್ಯಮಗಳೂ ಅವುಗಳನ್ನು ಅಧಿಕೃತವಾಗಿ ಪ್ರಸಾರ ಮಾಡುವುದು ಆಡಳಿತ ಸರ್ಕಾರಗಳಿಗೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ವಾಸ್ತವದಲ್ಲಿ ರಾಹುಲ್ ಗಾಂಧಿ ಅವರ ಬಹುತೇಕ ಟ್ವೀಟ್‌ಗಳಿಗೆ ಬಿಜೆಪಿಯ ಅಧಿಕೃತ ಖಾತೆಗಳು, ನಾಯಕರು ಟ್ವೀಟ್ ಮೂಲಕ ಉತ್ತರಿಸಿಯೇ ಇರುತ್ತಾರೆ. ಅವರ ಕೆಲವೊಂದು ಟ್ವೀಟ್‌ಗಳಿಗೆ ಬಿಜೆಪಿ ಪತ್ರಿಕಾಗೋಷ್ಠಿ ನಡೆಸಿ ಉತ್ತರಿಸಿರುವ ಉದಾಹರಣೆಗಳೂ ಇವೆ. ಹೀಗಾಗಿ, ವಾಸ್ತವದಲ್ಲಿ ಅವರ ಟ್ವಿಟರ್ ಖಾತೆಯು ಒಂದು ರೀತಿಯಲ್ಲಿ ತಾನೇ ಒಂದು ಪ್ರಬಲ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾತನಾಡುವುದು ಅಪರೂಪವಾಗಿರಬಹುದು ಅಥವಾ ಸಂಸತ್ತು ನಡೆಯುವುದೂ ಕನಿಷ್ಠ ದಿನಗಳೇ ಆಗಿರುವಾಗ, ಬಹಳಷ್ಟು ವಿಚಾರಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿಯೇ ನಾಯಕರ ನಡುವೆ ಚರ್ಚೆಯಾಗುತ್ತವೆ. ಮೊದಲೇ ಸುದ್ದಿ ಮಾಧ್ಯಮಗಳಿಂದ ಸ್ವತಃ ಅಂತರವನ್ನು ಕಾಪಾಡಿಕೊಂಡು ಬಂದಿರುವ ರಾಹುಲ್ ಗಾಂಧಿ ಬೆರಳೆಣಿಕೆಯ ಸಂದರ್ಭಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ, ಅಪರೂಪಕ್ಕೊಮ್ಮೆ ಪತ್ರಕರ್ತರಿಗೆ ಸಂದರ್ಶನ ಕೊಡುತ್ತಾರೆ. ಹೀಗಾಗಿ, ಪಕ್ಷದ ಅಧ್ಯಕ್ಷರಾಗಿ ಸಕ್ರಿಯವಾಗಿ ಆಡಳಿತ ಪಕ್ಷದ ನೀತಿಗಳನ್ನು ಜನರ ಮುಂದಿಡಲು ಒಂದು ಮಾಧ್ಯಮ ಅವರಿಗೆ ಬೇಕಾಗಿತ್ತು. ಅವರು ಟ್ವಿಟರ್ ಸಾಮಾಜಿಕ ತಾಣವನ್ನು ಆ ಮಾಧ್ಯಮವಾಗಿ ಮತ್ತು ಸರ್ಕಾರದ ವಿರುದ್ಧದ ಪ್ರಬಲ ಅಸ್ತ್ರವಾಗಿ ಆರಿಸಿಕೊಂಡಿರುವ ಹಾಗೆ ಕಾಣಿಸುತ್ತದೆ. ಅವರು ಟ್ವಿಟರ್ ಖಾತೆಯನ್ನು ಬಳಸಿಕೊಳ್ಳುತ್ತಿರುವ ರೀತಿ ಅದನ್ನೇ ಸೂಚಿಸುತ್ತದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಉಪವಾಸಕ್ಕೆ ಮುಂದಾಗಿ ಅಪಹಾಸ್ಯಕ್ಕೆ ಈಡಾದ ಪ್ರಧಾನಿ ಮೋದಿ

ಇತ್ತೀಚೆಗೆ, ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ‘ಆಫೀಸ್‌ ಆಫ್ ಆರ್‌ಜಿ’ ಎನ್ನುವ ಹೆಸರಿನ ಬದಲಾಗಿ ‘ರಾಹುಲ್ ಗಾಂಧಿ’ ಆಗಿ ಬದಲಾಗಿದೆ. ಅಲ್ಲದೆ, ತಮ್ಮ ಟ್ವಿಟರ್ ಖಾತೆಯ ಮೂಲಕ ಸ್ವತಃ ಒಂದು ವರ್ಚಸ್ಸನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರ ಟ್ವೀಟ್‌ಗಳು ಚತುರ, ಬುದ್ಧಿವಂತಿಕೆಯ, ತೀಕ್ಷ್ಣತೆ ಇರುವ ಮತ್ತು ನಿತ್ಯದ ಆಗುಹೋಗುಗಳಿಗೆ ನೀಡುವ ಪ್ರತಿಕ್ರಿಯೆಯಾಗಿಯೂ ಇರುತ್ತದೆ. ಕೆಲವೊಮ್ಮೆ ಕೊಂಕುಮಾತುಗಳಲ್ಲಿಯೂ ಸರ್ಕಾರದ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿದ್ದಿದೆ. ಹಾಗೆಂದು, ತಾವು ಯಾವ ವಿಚಾರದ ಬಗ್ಗೆ ಪ್ರತಿಕ್ರಿಯಿಸಬೇಕು ಮತ್ತು ಯಾವುದರ ಬಗ್ಗೆ ಮೌನವಾಗಿರಬೇಕು ಎನ್ನುವುದನ್ನೂ ಬಹಳ ಜಾಗರೂಕವಾಗಿ ನಿಭಾಯಿಸುತ್ತಾರೆ. ಇತ್ತೀಚೆಗೆ, ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಕಾಂಗ್ರೆಸ್ ಪರ ಟ್ವೀಟ್‌ಗಳನ್ನು ಮಾಡುತ್ತಿದ್ದ ಕೆಲವು ಕಾರ್ಯಕರ್ತರನ್ನು ಭೇಟಿಯಾಗಿದ್ದರು. ನಂತರ ಅದು ದೊಡ್ಡ ವಿವಾದವಾಗಿ ಪರಿಣಮಿಸಿತ್ತು. ಸುದ್ದಿವಾಹಿನಿಗಳು ಆ ಕಾರ್ಯಕರ್ತರು ಸಾಮಾಜಿಕ ತಾಣಗಳಲ್ಲಿ ಬೈಗುಳ, ಕೆಟ್ಟ ಶಬ್ದಗಳನ್ನು ಬಳಸುತ್ತಿರುವ ಬಗ್ಗೆ ವರದಿ ಮಾಡಿದವು. ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ತಾಣದ ಮುಖ್ಯಸ್ಥೆ ಹಾಗೂ ಇತರ ನಾಯಕರು, ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಟ್ವಿಟರ್ ಕಾರ್ಯಕರ್ತರ ಮೇಲೆ ಮಾಡಿದ ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದ್ದರು. ಆದರೆ, ರಾಹುಲ್ ಗಾಂಧಿ ಈ ವಿಚಾರವಾಗಿ ಇಂದಿಗೂ ಮೌನ ಮುರಿದಿಲ್ಲ. ವಾಸ್ತವದಲ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಗಳು ಅಥವಾ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಶಿಸ್ತು ಮತ್ತು ನೈತಿಕ ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಸದಾ ಅವರು ಎಚ್ಚರಿಸುತ್ತಲೇ ಬಂದಿದ್ದಾರೆ, ಸ್ವತಃ ಅದೇ ರೀತಿ ನಡೆದುಕೊಳ್ಳುತ್ತಾರೆ. ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಅವರು, ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ಮೋದಿಯವರ ಬಗ್ಗೆ ಬಳಸಿದ ಭಾಷೆ ಮತ್ತು ಶೈಲಿಯನ್ನು ತೀಕ್ಷ್ಣವಾಗಿ ವಿರೋಧಿಸಿ ಟ್ವೀಟ್ ಮಾಡಿದ್ದಲ್ಲದೆ, ತಕ್ಷಣ ಅವರ ಮೇಲೆ ಕ್ರಮ ಕೈಗೊಂಡರು. ಕಾಂಗ್ರೆಸ್ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಆಗಾಗ್ಗೆ ತಿಳಿಸಲೂ ಟ್ವಿಟರ್ ಬಳಸುತ್ತಾರೆ.

ಮುಖ್ಯವಾಗಿ, ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಿಜೆಪಿ ಸರ್ಕಾರಗಳು, ನಾಯಕರ ಹಗರಣಗಳು ಮತ್ತು ಭ್ರಷ್ಟಾಚಾರ ಆರೋಪಗಳನ್ನು ಸದಾ ಚಾಲ್ತಿಯಲ್ಲಿರುವಂತೆ ಮಾಡುತ್ತದೆ. ಬಿಜೆಪಿ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿದಿರುವ ರಾಫೇಲ್ ಹಗರಣ ಇರಬಹುದು ಅಥವಾ ಇತ್ತೀಚೆಗಿನ ಪೀಯೂಶ್ ಗೋಯೆಲ್ ಹಗರಣವರೆಗಿನ ಎಲ್ಲ ವಿಷಯಗಳನ್ನೂ ಅವರು ತಮ್ಮ ಟ್ವೀಟ್‌ಗಳ ಮೂಲಕ ಜನರ ಮುಂದಿಟ್ಟಿದ್ದಾರೆ. ಬ್ಯಾಂಕ್‌ಗಳ ಹಗರಣಗಳ ಬಗ್ಗೆಯೂ ಅವರು ಪದೇಪದೇ ಟ್ವೀಟ್‌ಗಳ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಎಲ್ಲೋ ಯಾವುದೋ ಆಯ್ದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನರ ಮನಸ್ಸಿನಿಂದ ದೂರವಾಗಬಹುದಾಗಿದ್ದ ಈ ಹಗರಣಗಳು ಸಂಸತ್ತಿನಲ್ಲಿ ಪ್ರಶ್ನೆಯಾಗಿರಲೇ ಇಲ್ಲ. ಪ್ರಶ್ನೆ ಮಾಡಲು ಸಂಸತ್ತು ನಡೆಯಲೇ ಇಲ್ಲ. ಹೀಗಿರುವಾಗ, ಅವುಗಳನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಟ್ವೀಟ್‌ಗಳ ಮೂಲಕ ಆಡಳಿತ ಪಕ್ಷಕ್ಕೆ ಚುರುಕು ಮುಟ್ಟಿಸಲು ಕಾರಣವಾಗಿದೆ ರಾಹುಲ್ ಗಾಂಧಿಯ ಟ್ವಿಟರ್ ಖಾತೆ. ಅವರ ಜೊತೆಗೆ ಮೋದಿ ಮತ್ತು ಬಿಜೆಪಿ ವಿರೋಧಿಗಳೂ ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ ನಿಜ. ಆದರೆ, ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ಬಿಜೆಪಿ ನೀತಿಗಳನ್ನು ಪ್ರಶ್ನಿಸಿದಾಗ ಸಿಕ್ಕ ಪ್ರತಿಕ್ರಿಯೆ ಇತರರಿಗೆ ಸಿಗುವುದಿಲ್ಲ ಎನ್ನುವುದನ್ನೂ ಗಮನಿಸಬೇಕು.

ತಮ್ಮ ಕೋರ್ ವೋಟರ್ಸ್ ಅಥವಾ ಮತಬ್ಯಾಂಕ್ ಬಗ್ಗೆಯೂ ಟ್ವಿಟರ್ ಮೂಲಕ ಅವರು ಅತಿ ಕಾಳಜಿ ವ್ಯಕ್ತಪಡಿಸಿದ್ದಾರೆ. ದಲಿತರ ಮೇಲಿನ ಹಲ್ಲೆ, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ದಲಿತರು ಪ್ರತಿಭಟನೆ ನಡೆಸಿರುವುದು, ರೈತರ ಬಗ್ಗೆ ಕಾಳಜಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಮೊದಲಾದ ವಿಚಾರಗಳು ಚುನಾವಣಾ ಕಣದಲ್ಲಿ ಹೆಚ್ಚು ಚಾಲ್ತಿಯಲ್ಲಿರುತ್ತದೆ. ಬಿಜೆಪಿ ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಂಥ ಪ್ರಮುಖ ರಾಜ್ಯದಲ್ಲಿ ದಲಿತ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ತಮ್ಮ ಈ ಮತಬ್ಯಾಂಕ್ ಮರಳಿ ಪಡೆಯುವ ನಿಟ್ಟಿನಲ್ಲೂ ತಾವು ‘ದಲಿತಪರ’, ‘ರೈತಪರ’, ‘ನ್ಯಾಯಪರ’ ಎನ್ನುವ ವರ್ಚಸ್ಸನ್ನು ತಮ್ಮ ಸುತ್ತ ಬೆಳೆಸಿಕೊಳ್ಳಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿರುವುದು ಅವರ ಟ್ವಿಟರ್ ಖಾತೆಯಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬಕ್ಕೆ ಶುಭ ಹೇಳುವುದನ್ನು ಮರೆಯಲಿಲ್ಲ. ಮತದಾರರನ್ನು ಒಲಿಸಿಕೊಳ್ಳುವ ಇಂತಹ ಹಲವು ಗಿಮಿಕ್‌ಗಳನ್ನೂ ಅವರ ಟ್ವಿಟರ್ ಖಾತೆ ಆಗಾಗ್ಗೆ ಮಾಡುತ್ತಿರುತ್ತದೆ.

ಇತ್ತೀಚೆಗೆ ಮೃದು ಹಿಂದುತ್ವದ ಕಡೆಗೆ ವಾಲುತ್ತಿರುವ ಆರೋಪ ರಾಹುಲ್ ಗಾಂಧಿಯವರ ಮೇಲಿದೆ. ಆದರೆ, ರಾಹುಲ್ ಗಾಂಧಿಯ ಟ್ವಿಟರ್ ಖಾತೆಯು ಜಾತ್ಯತೀತ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಇತ್ತೀಚೆಗೆ ದೆಹಲಿಯ ಐಎಎಸ್ ಅಧಿಕಾರಿಗಳು ಅಂತರ್ಜಾತೀಯ ಪ್ರೇಮ ವಿವಾಹವಾದಾಗ ಅದನ್ನು ಟ್ವೀಟ್ ಮಾಡಿ ಶುಭ ಹಾರೈಸಿರುವುದೂ ಈ ನಿಟ್ಟಿನಲ್ಲಿ ಪ್ರಮುಖವಾದ ಬೆಳವಣಿಗೆ. ಅಲ್ಲದೆ, ಕೋಮುಗಲಭೆಯ ಸಂದರ್ಭದಲ್ಲಿ ತಮ್ಮ ಮಕ್ಕಳು ಗಲಭೆಯಲ್ಲಿ ಕೊಲೆಯಾದರೂ ಕೋಮು ಸಾಮರಸ್ಯವನ್ನು ಬೇಡಿದ ಮುಸ್ಲಿಂ ಮತ್ತು ಹಿಂದೂ ವ್ಯಕ್ತಿಗಳ ಮಾತುಗಳನ್ನು ಕೊಂಡಾಡಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ದೇಶದ ಹಲವೆಡೆ ಪ್ರತಿಮೆಗಳನ್ನು ನಾಶ ಮಾಡಿ ಗಲಭೆ ಎಬ್ಬಿಸಲು ಪ್ರಯತ್ನಿಸಿದ ದುಷ್ಕರ್ಮಿಗಳ ವಿರುದ್ಧವೂ ಅವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್‌ಗಳ ಮೂಲಕ ತಮ್ಮ ಮತ್ತೊಂದು ಮುಖವನ್ನು ಜಗತ್ತಿಗೆ ಪ್ರಕಟಿಸಿದ್ದಾರೆ. ಅವರ ಈ ಮುಖ ವಾಸ್ತವದಲ್ಲಿ ಬಹಳ ಆಪ್ತ ವರ್ಗದವರಿಗೆ ಮಾತ್ರ ತಿಳಿದಿತ್ತು. ಆರಂಭದಲ್ಲಿ ರಾಹುಲ್ ಗಾಂಧಿ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವುದು ಯಾರು ಎನ್ನುವ ಬಗ್ಗೆಯು ಹಲವು ಚರ್ಚೆಗಳಾಗಿದ್ದವು. ಈ ಚರ್ಚೆಗೆ ಉತ್ತರವೆನ್ನುವಂತೆ ರಾಹುಲ್ ಗಾಂಧಿ ತಮ್ಮ ನಾಯಿ ಜೊತೆ ಆಟವಾಡುವ ಒಂದು ಸಣ್ಣ ವಿಡಿಯೋ ಕ್ಲಿಪ್ ಟ್ವೀಟ್ ಮಾಡಿದ್ದರು. ಚತುರ, ತಮಾಷೆಯ ಉತ್ತರವಾಗಿದ್ದ ಈ ಟ್ವೀಟ್ ಬಹಳ ಜನಪ್ರಿಯವಾಗಿತ್ತು. ಅಲ್ಲದೆ, ರಾಹುಲ್ ಗಾಂಧಿ ಜಾಣ್ಮೆಯಿಂದ ಕೊಂಕು ಮಾತನ್ನೂ ಕೊಂಕು ಅನ್ನಿಸದ ರೀತಿಯಲ್ಲಿ ವ್ಯಂಗ್ಯವಾದ ಟ್ವೀಟ್‌ಗಳನ್ನು ಮಾಡುವುದು ಅವರ ವ್ಯಕ್ತಿತ್ವದ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ತನ್ನನ್ನು ಜನರು ದ್ವೇಷಿಸಿದರೂ ತಾವು ಅವರನ್ನು ದ್ವೇಷಿಸುವುದಿಲ್ಲ ಎನ್ನುವಂತಹ ರಾಹುಲ್ ಗಾಂಧಿ ಟ್ವೀಟ್‌ಗಳು ಅವರ ಪ್ರೀತಿಗೆ ಪ್ರಾಮುಖ್ಯತೆ ನೀಡುವ ವ್ಯಕ್ತಿತ್ವದ ಪರಿಚಯವಾಗಿತ್ತು. ಕೆಲವೊಮ್ಮೆ ತಮ್ಮ ಟ್ವಿಟರ್ ಖಾತೆ ಮೂಲಕ ಅಚಾನಕ್ ಆಗಿ ತಪ್ಪು ಸಂಖ್ಯೆ ಹೋದಾಗ ಅದಕ್ಕಾಗಿ ಕ್ಷಮೆಯನ್ನೂ ವಿಶಿಷ್ಟ ರೀತಿಯ ಕೊಂಕಲ್ಲದ ಜಾಣ್ಮೆಯಲ್ಲಿ ಕೇಳಿದ್ದರು. ಹಾಗೆಯೇ ಅವರು ದಾರುಣ ದುರಂತಗಳ ಸಂದರ್ಭದಲ್ಲಿ ಮಾನವೀಯವಾಗಿ ಪ್ರತಿಕ್ರಿಯಿಸಿದ್ದೂ ಇದೆ.

ಆದರೆ, ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ಆರಂಭದಲ್ಲಿ ದಿಕ್ಕು ತಪ್ಪಿದ ದೋಣಿಯಂತೆ ಕಾರ್ಯನಿರ್ವಹಿಸುತ್ತಿದ್ದದ್ದೂ ನಿಜ. ರಾಹುಲ್ ಟ್ವಿಟರ್ ಖಾತೆ ತೆರೆದ ತಕ್ಷಣ ಹೆಚ್ಚಾಗಿ ಅದರಲ್ಲಿ ಶುಭಾಶಯಗಳೇ ತುಂಬಿರುತ್ತಿದ್ದವು. ಹಬ್ಬಗಳು ಬಂದಾಗ ಶುಭಾಶಯ ಹೇಳುವುದು, ಪುಣ್ಯತಿಥಿಗಳಿಗೆ ವಿಷಾದ ಸೂಚಿಸುವುದು ಮತ್ತು ರಾಹುಲ್ ಗಾಂಧಿಯವರು ವಿವಧೆಡೆ ಮಾಡಿದ ಭಾಷಣಗಳು, ಅವರ ಕಾರ್ಯಕ್ರಮಗಳನ್ನು ತಿಳಿಸುವ ವೇದಿಕೆಯಾಗಿತ್ತು. ಆದರೆ, ನಿಧಾನವಾಗಿ ರಾಹುಲ್ ಗಾಂಧಿ ಸ್ವತಃ ಅದನ್ನು ಬಳಸಲು ಆರಂಭಿಸಿದ ನಂತರ ಅವರ ಟ್ವಿಟರ್ ಖಾತೆ ಹೊಸ ಸ್ವರೂಪ ಪಡೆದುಕೊಂಡಿದೆ. ಇಂದು ಅದು ಒಂದು ಯಶಸ್ವಿ ವಿರೋಧ ಪಕ್ಷದ ಕೆಲಸಗಳನ್ನೇ ಮಾಡುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More