ಸಿದ್ದರಾಮಯ್ಯ ವಿರುದ್ಧ ‘ಬಾದಾಮಿ ರಣತಂತ್ರ’ ಹೆಣೆಯುತ್ತಿದೆ ಬಿಜೆಪಿ ಪಡೆ

ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಬಿಜೆಪಿ ಹೊಸ ರಣತಂತ್ರ ಹೆಣೆಯಲು ಸಿದ್ಧವಾಗಿದೆ. ಲಿಂಗಾಯತ ಸಮುದಾಯದ ವ್ಯಕ್ತಿಗಳಿಗೆ ಹೆಚ್ಚು ಟಿಕೆಟ್ ನೀಡುವ ಮೂಲಕ ಉ.ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆ ಮಾಡುವ ಪ್ರಯತ್ನ ಬಿಜೆಪಿಯದು

ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಂತೆ ರಾಜ್ಯ ರಾಜಕಾರಣದ ಗಮನವೇ ಈ ಕ್ಷೇತ್ರದತ್ತ ಹರಿದಿದೆ. ಸಿದ್ದರಾಮಯ್ಯ ಅವರಿಗೆ ಈ ಕ್ಷೇತ್ರದಲ್ಲಿಯೇ ಮುಖಭಂಗ ಮಾಡಬೇಕೆಂದು ಬಿಜೆಪಿ ರಣತಂತ್ರ ಹೆಣೆಯಲು ಮುಂದಾಗಿದೆ.

ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳಿಗಿಂತಲೂ ಅಹಿಂದ ಮತಗಳೇ ಹೆಚ್ಚು. ಅದರಲ್ಲೂ, ಕುರುಬ ಮತಗಳು ನಿರ್ಣಾಯಕ ಸ್ಥಾನದಲ್ಲಿವೆ. ಕುರುಬ ಮತಗಳೊಂದಿಗೆ ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಮತಗಳು ಹೆಚ್ಚಾಗಿರುವುದರಿಂದಾಗಿಯೇ ಕುರುಬ ಸಮುದಾಯದ ಹಾಲಿ ಶಾಸಕ ಬಿ ಬಿ ಚಿಮ್ಮನಕಟ್ಟಿ 5 ಬಾರಿ ಆಯ್ಕೆಯಾಗಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಹಾಗಾಗಿ, ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯುವ ಹಾಗೂ ಯಾವುದೇ ವಿವಾದಕ್ಕೆ ಸಿಲುಕಿರದ ಸ್ಥಳೀಯ ಪ್ರಭಾವಿ ವ್ಯಕ್ತಿಯನ್ನು ಕಣಕ್ಕೆ ಇಳಿಸಬೇಕೆಂಬ ತಂತ್ರವನ್ನು ಬಿಜೆಪಿ ಹೆಣೆಯತ್ತಿದೆ ಎನ್ನುತ್ತವೆ ಆ ಪಕ್ಷದ ಮೂಲಗಳು.

ಈ ಕಾರಣದಿಂದಾಗಿಯೇ ಏ.13ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದ ಸಂದರ್ಭದಲ್ಲಿ, ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅಮಿತ್ ಶಾ, ಬಿ ಎಸ್ ಯಡಿಯೂರಪ್ಪ, ಸಂತೋಷ್, ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ ಹಾಗೂ ಗೋವಿಂದ ಕಾರಜೋಳ ಭಾಗವಹಿಸಿದ್ದರು. ಸಂಸದ ಪಿ ಸಿ ಗದ್ದಿಗೌಡರ್ ಅವರಿಂದ ಬಾದಾಮಿ ಕ್ಷೇತ್ರದ ಕುರಿತು ಇಂಚಿಂಚು ಮಾಹಿತಿಯನ್ನೂ ಅಮಿತ್ ಶಾ ಹಾಗೂ ಬಿ ಎಸ್ ಯಡಿಯೂರಪ್ಪ ಪಡೆದಿದ್ದಾರೆ. ಕಾಂಗ್ರೆಸ್ ಕೂಡ ಜಾತಿ ಆಧಾರದ ಮೇಲೆಯೇ ಕ್ಷೇತ್ರ ಗೆಲ್ಲಲು ಮುಂದಾಗಿರುವುದರಿಂದಾಗಿ ಜಾತಿಯಿಂದಲೇ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡಬೇಕು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

ಸಿಎಂಗೆ ಸರಿಸಮಾನವಾಗಿ ಸ್ಪರ್ಧೆ ಒಡ್ಡುವ ಸ್ಥಳೀಯ ವ್ಯಕ್ತಿ ಎಂದರೆ, ಸದ್ಯ ಬಿಜೆಪಿ ದೃಷ್ಟಿಯಲ್ಲಿ ಸಂಸದ ಪಿ ಸಿ ಗದ್ದಿಗೌಡರ. ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗುತ್ತಿರುವ ಗದ್ದಿಗೌಡರ, ಯಾವುದೇ ವಿವಾದಕ್ಕೆ ಸಿಲುಕಿಲ್ಲ. ಅಲ್ಲದೆ, ಜಿಲ್ಲೆಯಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಗಾಣಿಗ ಸಮುದಾಯಕ್ಕೆ ಸೇರಿದವರು. ಅಷ್ಟೇ ಅಲ್ಲ ವಿಜಯಪುರ ಜಿಲ್ಲೆಯಲ್ಲಿ ಕೂಡ ಗಾಣಿಗ ಮತಗಳು ನಿರ್ಣಾಯಕ. ಸಿದ್ದರಾಮಯ್ಯ ಸ್ಪರ್ಧೆ ಮಾಡುವುದರಿಂದ ವಿಜಯಪುರ ಮತದಾರರ ಮೇಲೆಯೂ ಪ್ರಭಾವ ಬೀರಲಿದ್ದು, ಗದ್ದಿಗೌಡರ ಸ್ಪರ್ಧೆಯಿಂದ ಗಾಣಿಗ ಸಮುದಾಯದ ಸಂಪೂರ್ಣ ಮತಗಳು ಬಿಜೆಪಿಯ ಬೆನ್ನಿಗೆ ನಿಲ್ಲುತ್ತವೆ. ಇದರೊಂದಿಗೆ ಲಿಂಗಾಯತ ಮತಗಳ ಮೇಲೆ ಹಿಡಿತ ಸಾಧಿಸಬಹುದು ಎಂಬುವುದು ಬಿಜೆಪಿಯ ಲೆಕ್ಕಾಚಾರ.

ಇದನ್ನೂ ಓದಿ : ಕುರುಬ ಸಮುದಾಯದ ಪ್ರಾಬಲ್ಯವಿರುವ ಬಾದಾಮಿ ಕ್ಷೇತ್ರದ ಚುನಾವಣಾ ಇತಿಹಾಸ ಗೊತ್ತೇ?

ಸದ್ಯ ಬಿಜೆಪಿ ಪಾಳೆಯದಲ್ಲಿ ಮಾಜಿ ಶಾಸಕರಾದ ಎಂ ಕೆ ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಮಹಾಂತೇಶ ಮಮದಾಪೂರ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಪಟ್ಟಣಶೆಟ್ಟಿ ಹಾಗೂ ಚಿಮ್ಮನಕಟ್ಟಿ ಕುಟುಂಬಗಳ ನಡುವೆಯೇ ಸ್ಪರ್ಧೆ ನಡೆಯುತ್ತಿತ್ತು. ಈ ಬಾರಿಯೂ ಕೆ ಎಂ ಪಟ್ಟಣಶೆಟ್ಟಿ ಅವರ ಮಗ, ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಅಷ್ಟೊಂದು ಪ್ರಭಾವಿಯಾಗಿ ಕಾಣುತ್ತಿಲ್ಲ. ಅಲ್ಲದೆ, ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಲಿಂಗಾಯತ ಸಮುದಾಯದ ಪ್ರಬಲ ವ್ಯಕ್ತಿಗೆ ಮಣೆ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿರುವ ಕಾರಣ ಸಂಸದ ಗದ್ದಿಗೌಡರ ಮನವೊಲಿಸಲು ಪ್ರಯತ್ನಿಸುತ್ತಿದೆ. ಒಂದು ವೇಳೆ, ಗದ್ದಿಗೌಡರ ಸ್ಪರ್ಧಿಸಲು ಮನಸ್ಸು ಮಾಡದಿದ್ದರೆ ಕ್ಷೇತ್ರ ಗೆದ್ದುಕೊಡುವ ಸಂಪೂರ್ಣ ಜವಾಬ್ದಾರಿಯನ್ನಾದರೂ ಗದ್ದಿಗೌಡರ ವಹಿಸಿಕೊಳ್ಳಲೇಬೇಕು ಎಂಬ ಒತ್ತಡ ಕೂಡ ಅವರ ಮೇಲಿದೆ ಎನ್ನಲಾಗುತ್ತಿದೆ.

ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದು ಕೇವಲ ಅವರ ಗೆಲುವಿಗೆ ಮಾತ್ರ ಅನುಕೂಲವಾಗುವುದಿಲ್ಲ. ಬದಲಾಗಿ, ಲಿಂಗಾಯತ ಮತಗಳ ಬೇಟೆಯೊಂದಿಗೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ವರ್ಚಸ್ಸು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಈ ಯೋಜನೆ ರೂಪಿಸುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More