ಕಾವೇರಿ ನೆಪದಲ್ಲಿ ಮೋದಿ ವಿರುದ್ಧ ಮತ್ತೆ ಮೊಳಗಿದ ದಕ್ಷಿಣ ರಾಜ್ಯಗಳ ಆಕ್ರೋಶ

ಏ.12ರಂದು ಚೆನ್ನೈನಲ್ಲಿ ಮೋದಿ ಅವರನ್ನು ಬರಮಾಡಿಕೊಂಡಿದ್ದು ಕಾವೇರಿ ಪ್ರತಿಭಟನೆಯ ಕಪ್ಪು ಬಾವುಟಗಳು. ಈ ಪ್ರತಿಭಟನೆ ದಕ್ಷಿಣದ ಅಸಮಾಧಾನದ ಪ್ರತೀಕವೂ ಆಗಿತ್ತು. ಕಾವೇರಿ ವಿವಾದದ ಅತೃಪ್ತಿ ಹೊರಹಾಕುತ್ತಿದ್ದ ಹ್ಯಾಶ್‌ಟ್ಯಾಗ್ #GoBackModi ಬಹುದಿನಗಳಿಂದ ಸುದ್ದಿಯಲ್ಲಿದೆ

ಏಪ್ರಿಲ್ 12ರ ಬೆಳಗ್ಗೆ ಚೆನ್ನೈನಲ್ಲಿ ಕಪ್ಪು ಬಾವುಟಗಳು ಹಾಗೂ ‘ಗೋ ಬ್ಯಾಕ್ ಮೋದಿ’ ಎಂಬ ಶಬ್ದಗಳನ್ನು ಹೊತ್ತ ದೊಡ್ಡ ಬಲೂನು ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಕಾಯುತ್ತಿದ್ದವು. ನಗರದ ಹೊರವಲಯದಲ್ಲಿ ಸೇನಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಲು ಅವರು ಬಂದಿದ್ದರೂ ಪ್ರತಿಭಟನೆಯ ಕಾವಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಕಾವೇರಿ ವಿವಾದದ ಅತೃಪ್ತಿಯನ್ನು ಹೊರಹಾಕುತ್ತಿದ್ದ ಹ್ಯಾಶ್‌ಟ್ಯಾಗ್ #GoBackModi ಬಹುದಿನಗಳಿಂದಲೂ ಸುದ್ದಿ ಮಾಡುತ್ತಿತ್ತು. ಅದಕ್ಕಿಂತಲೂ ಹೆಚ್ಚು ಜನರನ್ನು ಸೆಳೆದದ್ದು ವಿಶಿಷ್ಟ ಘೋಷಣೆಗಳನ್ನು ಒಳಗೊಂಡ ಪ್ರತಿಭಟನೆ. ಪ್ರಧಾನಿ ಮೋದಿಯವರ ಬಗೆಗಿನ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳ ಅಸಮಾಧಾನವನ್ನು ಆ ಪ್ರತಿಭಟನೆ ಹೊರಹಾಕುತ್ತಿತ್ತು.

ತಮಿಳುನಾಡು ಮತ್ತು ಕರ್ನಾಟಕವನ್ನು ಬಹುಹಿಂದಿನಿಂದಲೂ ಭಾವನಾತ್ಮಕವಾಗಿ ಕಲಕುವ ಕಾವೇರಿ ಸಮಸ್ಯೆ ಬಿಜೆಪಿಯ ಸಂಕಷ್ಟದ ದಿನಗಳಲ್ಲೂ ತಲೆ ಎತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಕಾವೇರಿ ಸಮಸ್ಯೆ ಕುರಿತಂತೆ ಎರಡೂ ರಾಜ್ಯಗಳು ಒಪ್ಪುವಂತಹ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಕಾವೇರಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ವಿಳಂಬ ಧೋರಣೆ ಅನುಸರಿಸಿದ್ದು ಸಹಜವಾಗಿಯೇ ತಮಿಳುನಾಡಿನ ಆಕ್ರೋಶಕ್ಕೆ ಕಾರಣವಾಯಿತು. ರಾಜಕೀಯ ಪಕ್ಷಗಳು, ಚಿತ್ರೋದ್ಯಮ ಸೇರಿದಂತೆ ವಿವಿಧ ಗುಂಪುಗಳು ಪ್ರತಿಭಟನೆಗೆ ಧ್ವನಿಗೂಡಿಸಿದವು. ಪ್ರತಿಭಟನೆಯ ಬಿಸಿ ತಟ್ಟುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು ಚೆನ್ನೈನಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಅದಕ್ಕಿಂತಲೂ ಹೆಚ್ಚಾಗಿ, ಕಾವೇರಿ ವಿವಾದ ಹಲವು ತಮಿಳು ಸಮಸ್ಯೆಗಳ ಧ್ವನಿಯಾಯಿತು. ತಮಿಳು ಸ್ವಾಭಿಮಾನ ಹಾಗೂ ಪ್ರತಿಷ್ಠೆ ಮತ್ತೆ ತಲೆ ಎತ್ತಿತು. ಸ್ವಲ್ಪ ದಿನಗಳಿಂದ ಗೈರಾಗಿದ್ದ ರಾಜ್ಯದ ರಾಜಕೀಯ ಅಸ್ಮಿತೆಯೂ ತನ್ನ ಅಸ್ತಿತ್ವವನ್ನು ಸಾರಿತು. ಹಿಂದಿ ವಿರೋಧಿ ಪ್ರತಿಭಟನೆಗಳ ಇತಿಹಾಸದೊಂದಿಗೆ ರಾಜ್ಯದಲ್ಲಿ ಹಿಂದಿ ಪಕ್ಷವೆಂದು ಗುರುತಿಸಿಕೊಂಡಿರುವ ಬಿಜೆಪಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತಮಿಳುನಾಡಿನ ಪ್ರತಿಭಟನೆಯ ಧ್ವನಿ ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಬರುತ್ತಿರುವ ಸಂದೇಶಗಳನ್ನೂ ಹೆಚ್ಚಿಸುತ್ತಿದೆ. ಅಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ವಿರೋಧಿಗಳು ಮಾತ್ರವಲ್ಲದೆ ತನ್ನ ಮಿತ್ರರಿಂದಲೇ ರಾಜಕೀಯ ಬಿಸಿ ಎದುರಿಸಬೇಕಾದ ಸ್ಥಿತಿ ಬಿಜೆಪಿಗೆ ಇದೆ.

ಕರ್ನಾಟಕದಲ್ಲಿ ಬಿಜೆಪಿಯ ಪ್ರಬಲ ಎದುರಾಳಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಚುನಾವಣಾ ಪ್ರಚಾರ ಗಮನಿಸಿದರೆ, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ದಿನೇದಿನೇ ಬಿಜೆಪಿ ಕುಗ್ಗುತ್ತಿರುವಂತೆ ಕಾಣುತ್ತಿದೆ. ಜಾತಿ ಮತ್ತಿತರ ಲೆಕ್ಕಚಾರದೊಂದಿಗೆ ರಾಜ್ಯದ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟ ಸಿದ್ದರಾಮಯ್ಯ, ಮೋದಿ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸುವ ಬಿಜೆಪಿ ಯತ್ನಕ್ಕೆ ತಡೆಯೊಡ್ಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೂ ನೀರವ್ ಮೋದಿ ಹಗರಣ, ರಾಫೆಲ್ ಒಪ್ಪಂದ ಅವ್ಯವಹಾರ ಮತ್ತಿತರ ಕಾರಣಗಳಿಂದಾಗಿ ಅದು ತನಗೇ ತಿರುಗುಬಾಣವಾಗುತ್ತಿದೆ. ಬಿಜೆಪಿಗೆ ಈವರೆಗಿನ ಅತ್ಯಂತ ಅಪಾಯಕಾರಿ ಹೊಡೆತವೆಂದರೆ, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನಿರ್ಧಾರ. ಇದು ಸ್ವತಃ ಲಿಂಗಾಯತರಾಗಿರುವ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರೆಗೆ ಹೂಡಿದ ನೇರ ಬಾಣ. ಲಿಂಗಾಯತರ ಗುಂಪು ಬಿಜೆಪಿಯನ್ನು ಬೆಂಬಲಿಸದೆ ಕಾಂಗ್ರೆಸ್ಸಿನತ್ತ ವಾಲುತ್ತದೆಯೇ ಇಲ್ಲವೇ ಎಂಬ ಚರ್ಚೆಗಳು ನಡೆಯುತ್ತಿದ್ದರೂ, ಬಿಜೆಪಿ ಇದಕ್ಕೆ ಸೂಕ್ತ ಉತ್ತರ ನೀಡಲು ತಡವರಿಸುತ್ತಿದೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೂ ಏಕತೆಯ ಕಲ್ಪನೆಯನ್ನು ನೇರವಾಗಿ ಪ್ರಶ್ನಿಸುವ ಮತ್ತು ಸಿದ್ದರಾಮಯ್ಯ ಕೈ ಬಲಪಡಿಸುವ ಯತ್ನ. ಬಹಿರಂಗವಾಗಿ ವಿರೋಧಿಸುವವರು ಮಾತ್ರ ಈ ಕ್ರಮ ಕಾಂಗ್ರೆಸ್ಸಿಗೆ ಲಾಭದಾಯಕವಾಗಲಿದೆ ಎಂದು ಅರ್ಥೈಸಬಹುದು.

ಬಿಜೆಪಿಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಷ್ಟೇ ಸವಾಲೆಸೆಯುತ್ತಿಲ್ಲ. ಸಿದ್ದರಾಮಯ್ಯ ಹೊಸ ನಾಡಧ್ವಜವನ್ನು ವಿನ್ಯಾಸಗೊಳಿಸಿ ಎಲ್ಲ ಶಾಲಾ-ಕಾಲೇಜುಗಳಲ್ಲಿ ಅದನ್ನು ಕಡ್ಡಾಯ ಮಾಡುವ ಮೂಲಕ ನಾಡಪ್ರೇಮವನ್ನು, ಸ್ಥಳೀಯ ಅಸ್ಮಿತೆಯನ್ನು ವೃದ್ಧಿಸುವ ಚಾತುರ್ಯ ಮೆರೆದಿದ್ದಾರೆ. ಹೀಗಾಗಿ, ಬಿಜೆಪಿ ಇದಕ್ಕೆ ಅಪಸ್ವರ ಎತ್ತುವುದು ಅಸಾಧ್ಯವಾಯಿತು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇದನ್ನು ತನ್ನತ್ತ ಸೆಳೆಯದೆ ಇರುವುದು ಹಾಗೂ ಹಿಂದಿ ಮಾತನಾಡುವ ಅಮಿತ್ ಶಾ ಮತ್ತು ಮೋದಿ ಅವರಿಂದಾಗಿ ಸಿದ್ದರಾಮಯ್ಯ ಜನತೆಯ ಕಣ್ಣಿಗೆ ಮಣ್ಣಿನ ಮಗನಾಗಿ ತೋರುತ್ತಿರುವಂತಿದೆ.

15ನೇ ಹಣಕಾಸು ಆಯೋಗದ ಹೊಸ ಮಾರ್ದರ್ಶಿ ಸೂತ್ರದನ್ವಯ ರಾಜ್ಯಗಳಿಗೆ ಕೇಂದ್ರದ ಆದಾಯ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಧ್ವನಿ ಎತ್ತಿದವರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. 1971ರ ಜನಗಣತಿಯ ಬದಲು 2011ರ ಜನಗಣತಿಯನ್ನು ಆಧರಿಸಿ ಆದಾಯ ಹಂಚಿಕೆ ನಡೆಯಬೇಕು ಎಂದು ದಕ್ಷಿಣ (ಜನಸಂಖ್ಯೆಯನ್ನು ನಿಯಂತ್ರಿಸುತ್ತಿರುವ) ರಾಜ್ಯಗಳು ಬಯಸುತ್ತವೆ ಎಂದು ವಾದಿಸಿದ ಸಿದ್ದರಾಮಯ್ಯ, ಅದಕ್ಕಾಗಿ ಕೇರಳ, ಆಂಧ್ರಪ್ರದೇಶ ಮುಖ್ಯಮಂತ್ರಿಗಳನ್ನೂ ಒಗ್ಗೂಡಿಸಿದರು. ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆಯೂ ಕೈಜೋಡಿಸಿತು. ತಡವಾಗಿಯಾದರೂ ಎಐಎಡಿಎಂಕೆ ಓಗೊಟ್ಟಿತು.

ರಾಜಕೀಯ ಪಂಡಿತರ ಪ್ರಕಾರ, ಆಂಧ್ರಪ್ರದೇಶದಲ್ಲಿ ಮೋದಿಯವರ ಸ್ಥಿತಿ ತಮಿಳುನಾಡಿಗಿಂತಲೂ ಭಿನ್ನ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಮೋದಿ ದ್ರೋಹ ಬಗೆದಿದ್ದಾರೆ ಎಂದು ಕೆಲವರು ಬಿಂಬಿಸುತ್ತಿದ್ದು, ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದಾರೆ. ತಮ್ಮ ಹೊಸ ರಾಜ್ಯದ ರಾಜಧಾನಿಯನ್ನಾಗಿ ಅಮರಾವತಿಯನ್ನು ರೂಪಿಸುವ ಚಂದ್ರಬಾಬು ನಾಯ್ಡು ನಿರ್ಧಾರಕ್ಕೆ ಕೇಂದ್ರ ಸಮ್ಮತಿ ಸೂಚಿಸಲಿಲ್ಲ. ಪರಿಣಾಮ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕರ್ನಾಟಕದಲ್ಲಿರುವ ತೆಲುಗು ಭಾಷಿಕರಿಗೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿದ್ದಾಗಿದೆ.

ಚೆನ್ನೈ ಭೇಟಿ ಸಂದರ್ಭದಲ್ಲಿ ಪ್ರಧಾನಿ 15ನೇ ಹಣಕಾಸು ಆಯೋಗದ ಕುರಿತು ಮಾತನಾಡುತ್ತ, ದಕ್ಷಿಣದ ಭಾವನೆಗಳಿಗೆ ಸ್ಪಂದಿಸಬೇಕಾದ ಅನಿವಾರ್ಯತೆಯನ್ನು ಒಪ್ಪಿಕೊಂಡರು. ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದ ರಾಜ್ಯಗಳಿಗೆ ಉತ್ತೇಜನ ನೀಡುವತ್ತ ಗಮನಹರಿಸಬೇಕೆಂದು ಹಣಕಾಸು ಆಯೋಗಕ್ಕೆ ಸೂಚಿಸಿರುವುದಾಗಿ ಅವರು ಹೇಳಿದರು. ಆದರೆ, 2019ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಈ ಹೇಳಿಕೆಯೊಂದೇ ದಕ್ಷಿಣದ ಅತೃಪ್ತಿಯನ್ನು ಹೋಗಲಾಡಿಸದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More