ಆರೆಸ್ಸೆಸ್‌ ಬಣವೊಂದು ತೊಗಾಡಿಯಾ ಮೂಲೆಗುಂಪು ಮಾಡಲು ಯತ್ನಿಸಿತೇ?

1964ರಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾದ ದಿನದಿಂದಲೂ ನಡೆಯದ ಅಧ್ಯಕ್ಷೀಯ ಚುನಾವಣೆ ಈ ಬಾರಿ ಏರ್ಪಟ್ಟಿದೆ. ಆರೆಸ್ಸೆಸ್ ಖುದ್ದು ನಿಂತು ಈ ಚುನಾವಣೆ ನಡೆಸುತ್ತಿದೆ. ಇದು ತೊಗಾಡಿಯಾ ಅವರನ್ನು ಮೂಲೆಗುಂಪು ಮಾಡುವ ಯತ್ನವಿರಬಹುದು ಎನ್ನುತ್ತದೆ ‘ಸ್ಕ್ರಾಲ್’ ಜಾಲತಾಣದ ವರದಿ

ಪ್ರವೀಣ್ ತೊಗಾಡಿಯಾ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷರಾಗಿ ಮುಂದುವರಿಯಲು ಆರ್‌ಎಸ್‌ಎಸ್‌ನ ಒಂದು ಗುಂಪು ಬಿಡುತ್ತಿಲ್ಲವೇ ಎಂಬ ಅನುಮಾನವೊಂದು ಸುಳಿದಾಡುತ್ತಿದೆ. ವಿಎಚ್‌ಪಿಗೆ ನಡೆಯಲಿರುವ ಚುನಾವಣೆ ಈ ಅನುಮಾನವನ್ನು ಮತ್ತಷ್ಟು ಬಲಗೊಳಿಸಿದೆ. ಸಂಘಪರಿವಾರದ ಅಂಗವಾದ ಆರ್‌ಎಸ್‌ಎಸ್‌ನ ಒಂದು ಗುಂಪು ಮತ್ತೊಂದು ಸಂಘಟನೆಯಾದ ವಿಎಚ್‌ಪಿಯ ತೊಗಾಡಿಯಾ ಅವರನ್ನು ವಜಾಗೊಳಿಸಲು ಕೆಲ ವರ್ಷಗಳಿಂದ ಯತ್ನಿಸುತ್ತಿತ್ತು. ಆರ್‌ಎಸ್‌ಎಸ್‌ನ ಆ ಒಂದು ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಕಟವರ್ತಿಯಾಗಿತ್ತು. ತೊಗಾಡಿಯಾರ ಮೋದಿ ವಿರೋಧಿ ನಿಲುವು ಆರ್‌ಎಸ್‌ಎಸ್‌ನ ಆ ಗುಂಪಿನ ಅಸಮಾಧಾನಕ್ಕೆ ಕಾರಣವಾಗಿ ಅವರನ್ನು ಹತ್ತಿಕ್ಕಲು ಯತ್ನಿಸಿತ್ತು. ಆದರೆ, 2017ರ ಡಿಸೆಂಬರ್‌ನಲ್ಲಿ ಆರ್‌ಎಸ್‌ಎಸ್‌ನ ಮಹಾ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಅವರು ತೊಗಾಡಿಯಾ ಪರ ಮಧ್ಯಸ್ಥಿಕೆ ವಹಿಸಿದ ಪರಿಣಾಮ ಪರಿಸ್ಥಿತಿ ಹದಗೆಡುವುದು ತಪ್ಪಿತ್ತು. ಆದರೆ, ತಿಂಗಳುಗಳು ಉರುಳಿದಂತೆ ಈ ಸಮೀಕರಣ ಹಳಿ ತಪ್ಪಿದ್ದು, ತೊಗಾಡಿಯಾರಿಗೆ ಸಂಕಷ್ಟ ಎದುರಾಗಿದೆ ಎಂದು ‘ಸ್ಕ್ರಾಲ್’ ಜಾಲತಾಣ ವರದಿ ಮಾಡಿದೆ.

ಕೆಲ ದಿನಗಳ ಹಿಂದೆ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಧಾನಿಗೆ ನಿಕಟವರ್ತಿಯಾಗಿದ್ದ ದತ್ತಾತ್ರೇಯ ಹೊಸಬಾಳೆ ಅವರ ಹೆಸರು ಕೇಳಿಬಂದಿತ್ತು. ಆದರೆ, ಇದ್ದಕ್ಕಿದ್ದಂತೆ ಆ ಸ್ಥಾನವನ್ನು ಜೋಶಿ ಅವರಿಗೆ ನೀಡಲಾಯಿತು. ಜೋಶಿಯವರ ಈ ಯಶಸ್ಸಿನ ಹಿಂದೆ ಒಂದು ಗುಟ್ಟಿತ್ತು; ತೊಗಾಡಿಯಾ ಅವರಿಗೆ ಮಣೆ ಹಾಕದಿದ್ದರೆ ಮಾತ್ರ ಜೋಶಿ ಅವರಿಗೆ ಸ್ಥಾನ ಬಿಟ್ಟುಕೊಡಲು ಪ್ರಧಾನಿ ಪರವಾಗಿದ್ದ ಆರ್‌ಎಸ್‌ಎಸ್‌ನವರು ಮುಂದಾಗಿದ್ದರು ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ತೋರುತ್ತಿದೆ ಎಂಬುದಾಗಿ ಜಾಲತಾಣ ಹೇಳಿದೆ.

ಅದಕ್ಕೆ ಪುಷ್ಟಿ ನೀಡುವಂತೆ ಇದೇ ಏ.14, 15ರಂದು ಗುರುಗ್ರಾಮದಲ್ಲಿ ವಿಎಚ್‌ಪಿಯ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ತೊಗಾಡಿಯಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವಾದರೂ ಅದರ ಫಲಿತಾಂಶ ಅವರ ನಡೆಯ ಮೇಲೆ ಪರಿಣಾಮ ಬೀರಲಿದೆ. ಪರಿಷತ್ತಿನ ಸದಸ್ಯರು ಆಯ್ಕೆ ಮಾಡುವ ಅಧ್ಯಕ್ಷರು ಬಳಿಕ ಕಾರ್ಯಾಧ್ಯಕ್ಷರ ಹೆಸರು ಸೂಚಿಸುತ್ತಾರೆ. ಸಂಘಟನೆಯನ್ನು ಮುನ್ನಡೆಸುವವರು ಕಾರ್ಯಾಧ್ಯಕ್ಷರೇ ಆಗಿರುತ್ತಾರೆ. 2011ರ ಡಿಸೆಂಬರಿನಲ್ಲಿ ತಮ್ಮ ಅನುಯಾಯಿ ಜಿ ರಾಘವ ರೆಡ್ಡಿ ಅವರ ಮೂಲಕ ತೊಗಾಡಿಯಾ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಾ.11ರಂದು ನಾಗಪುರದಲ್ಲಿ ಜೋಶಿ ಅವರನ್ನು ನಾಲ್ಕನೇ ಬಾರಿಗೆ ಆರ್‌ಎಸ್‌ಎಸ್‌ನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಬಳಿಕ ತೊಗಾಡಿಯಾ ಅವರನ್ನು ಹತ್ತಿಕ್ಕುವ ಕೆಲಸ ಆರಂಭವಾಯಿತು ಎಂದು ಆರೆಸ್ಸೆಸ್ ಮತ್ತು ವಿಎಚ್‌ಪಿಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಮರುದಿನ ರೆಡ್ಡಿ ಅವರಿಗೆ ಪತ್ರವೊಂದನ್ನು ಬರೆದ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ತಿಗೆ ಚುನಾವಣೆ ನಡೆಸುವ ಪ್ರಸ್ತಾವವಿದ್ದು ತಮ್ಮ ಸಲಹೆ ಅಗತ್ಯವಿದೆ ಎಂದು ತಿಳಿಸಿತು. ಮಾ.13ರ ಸಂಜೆ 5ರೊಳಗಾಗಿ ಸಲಹೆಯನ್ನು ಸೂಚಿಸತಕ್ಕದ್ದು ಎಂದು ಹೇಳಿತು. “ಅಷ್ಟು ಕ್ಷಿಪ್ರವಾಗಿ ಉತ್ತರಿಸಬೇಕು ಎಂದು ಹೇಳಿದ್ದು ರೆಡ್ಡಿ ಅವರಿಗೆ ಆಘಾತ ಉಂಟುಮಾಡಿತು. ಆದರೆ ಗಡುವಿಗೆ ಐದು ನಿಮಿಷಗಳಿಗೆ ಮುನ್ನ ಇಮೇಲ್ ಮೂಲಕ ರೆಡ್ಡಿ ತಮ್ಮ ಸಲಹೆಗಳನ್ನು ರವಾನಿಸಿದರು,” ಎಂದು ಅವರಿಗೆ ಆಪ್ತರಾದ ಪರಿಷತ್ತಿನ ಮುಖಂಡರೊಬ್ಬರು ಜಾಲತಾಣಕ್ಕೆ ಮಾಹಿತಿ ನೀಡಿದ್ದಾರೆ.

ಮಾ.15ರಂದು ವಿಎಚ್‌ಪಿ ಮಹಾ ಕಾರ್ಯದರ್ಶಿ ದಿನೇಶ್ ಚಂದ್ರ ಅವರ ಸಹಿಯುಳ್ಳ ಪತ್ರವೊಂದು ರೆಡ್ಡಿ ಅವರನ್ನು ತಲುಪಿತು. ಅದರಲ್ಲಿ ಏ.14ರಂದು ಪರಿಷತ್ತಿಗೆ ಚುನಾವಣೆ ನಡೆಸಲು ನಿರ್ಧರಿಸಿರುವ ಉಲ್ಲೇಖವಿತ್ತು. ಆರ್‌ಎಸ್‌ಎಸ್‌ ಚುನಾವಣೆಯನ್ನು ತನಗೆ ಬೇಕಾದಂತೆ ನಡೆಸಬಾರದು ಎಂದು ರೆಡ್ಡಿ ಬಯಸಿದ್ದರು.

1964ರಲ್ಲಿ ಸ್ಥಾಪನೆಯಾದ ದಿನದಿಂದಲೂ ವಿಎಚ್ ಪಿಗೆ ಅಧ್ಯಕ್ಷೀಯ ಚುನಾವಣೆ ನಡೆದಿರಲಿಲ್ಲ. ಸದಾ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಪದ್ಧತಿ ಇತ್ತು. ಆದರೆ, ತೊಗಾಡಿಯಾ-ರೆಡ್ಡಿ ಆಡಳಿತ ಕುರಿತು ಸಂಘಟನೆಯೊಳಗೆ ಬಲವಾದ ಬೆಂಬಲ ವ್ಯಕ್ತವಾದಂತೆ ನಿರ್ಧಾರಗಳು ಬದಲಾದವು. ಆರೆಸ್ಸೆಸ್ ಚುನಾವಣೆಗೆ ಬದ್ಧವಾಗಿದೆ ಎಂದು ಆ ಮುಖಂಡರು ತಿಳಿಸಿದ್ದು, ರೆಡ್ಡಿ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ವಿ ಎಸ್ ಕೋಕ್ಜೆ ಅವರನ್ನು ತರಲು ಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ : ಮೋದಿಯವರ ‘ಕಾಂಗ್ರೆಸ್ ಮುಕ್ತ ಭಾರತ’ ಕುರಿತು ಇದೀಗ ಎಚ್ಚೆತ್ತುಕೊಂಡ ಆರೆಸ್ಸೆಸ್

ಡಿ.29ರಂದು ಭುವನೇಶ್ವರದಲ್ಲಿ ನಡೆದ ವಿಎಚ್‌ಪಿ ಸಮಾವೇಶದಲ್ಲಿಯೇ ಮೋದಿ ಲಾಬಿ ರೆಡ್ಡಿ ಬದಲಿಗೆ ಕೋಕ್ಜೆ ಗದ್ದುಗೆ ಏರಲಿ ಎಂದು ಬಯಸಿತ್ತು. ಆದರೆ, ಅದು ಯಶಸ್ವಿಯಾಗಿರಲಿಲ್ಲ. ಡಿಸೆಂಬರಿನಲ್ಲಿ ಮೋದಿ ಲಾಬಿ ಯಶಸ್ವಿಯಾಗದಿದ್ದರೂ ಸುರೇಶ್ ಭಯ್ಯಾಜಿ, ಕೋಕ್ಜೆ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೆಸ್ಸೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಇದೆಲ್ಲದರ ನಡುವೆ, “ಸಂಘಟನೆಯೊಳಗೆ ತೊಗಾಡಿಯಾ ಪ್ರಭಾವ ಮುಂದುವರಿಯಬಹುದು. ಆದರೆ, ಅವರು ಜೋಶಿ ಅವರನ್ನು ಇನ್ನು ಮುಂದೆ ಗಣನೆಗೆ ತೆಗೆದುಕೊಂಡೇ ಹೆಜ್ಜೆ ಇಡಬೇಕಾದೀತು. ಈ ನಡೆ ಕೂಡ ತೊಗಾಡಿಯಾರ ಏಕಾಂಗಿ ಹೋರಾಟಗಳಂತೆಯೇ ಇರಬಹುದು,” ಎಂದು ‘ಸ್ಕ್ರಾಲ್’ ಜಾಲತಾಣ ವಿಶ್ಲೇಷಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More