ಬಿಎಸ್‌ವೈ ಪುತ್ರ ವಿಜಯೇಂದ್ರ ಶಿವಮೊಗ್ಗದಲ್ಲೇ ಏಕೆ ಸ್ಪರ್ಧಿಸಲಿಲ್ಲ ಗೊತ್ತೇ?

ಯಡಿಯೂರಪ್ಪ ಪುತ್ರ ವಿಜಯೇಂದ್ರ ತವರು ಜಿಲ್ಲೆ ಶಿವಮೊಗ್ಗವನ್ನು ಬಿಟ್ಟು ಮೈಸೂರಿಗೆ ಯಾಕೆ ವಲಸೆ ಹೋದರು? ಈ ರಾಜಕೀಯ ತಂತ್ರಗಾರಿಕೆಯ ಹಿಂದಿನ ಮರ್ಮವೇನು? ಯಡಿಯೂರಪ್ಪ ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ಈಗ ಹೆಚ್ಚು ಕೇಳಿಬರತೊಡಗಿವೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಮರ್ಮಾಘಾತ ನೀಡಲು ಬಿಜೆಪಿ ಅವರ ಸ್ವಂತ ಕ್ಷೇತ್ರ ವರುಣಾದಲ್ಲಿ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ತಮ್ಮ ಕ್ಷೇತ್ರದಲ್ಲಿ ಈ ಬಾರಿ ಅವರ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಸಜ್ಜಾಗುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಮ್ಮ ಎರಡನೇ ಪುತ್ರ ವಿಜಯೇಂದ್ರ ಅವರನ್ನು ಅಭ್ಯರ್ಥಿಯಾಗಿ ಎದುರಾಗಿಸಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿರುವ ವಿಜಯೇಂದ್ರ, ಸಾಕಷ್ಟು ತಂತ್ರಗಾರಿಕೆಗಳನ್ನು ಹೆಣೆದಿದ್ದು, ಸಿಎಂ ಪುತ್ರನಿಗೆ ಮಾಜಿ ಸಿಎಂ ಪುತ್ರ ಭರ್ಜರಿ ಪೈಪೋಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಕ್ಷೇತ್ರದಲ್ಲಿ ಈಗಾಗಲೇ ಗೃಹಪ್ರವೇಶ ಮಾಡಿರುವ ವಿಜಯೇಂದ್ರ, ಶಿಕಾರಿಪುರದಿಂದ ಮೈಸೂರಿಗೆ ತಮ್ಮ ಅಧಿಕೃತ ನಿವಾಸದ ವಿಳಾಸವನ್ನು ಬದಲಾಯಿಸಿಕೊಂಡಿದ್ದಾರೆ. ಆ ಮೂಲಕ ಮತದಾರರಲ್ಲಿ ತಾನು ಹೊರಗಿನವನಲ್ಲ ಎಂಬ ಭರವಸೆ ತುಂಬುವ ಪ್ರಯತ್ನವೂ ನಡೆದಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರುಜಿಲ್ಲೆಯ ಜನ ತಮ್ಮ ಮನೆಮಗನ ಎದುರು, ಹೊರಗಿನಿಂದ ಬಂದ ವಲಸಿಗರಿಗೆ ಮಣೆ ಹಾಕುತ್ತಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ಹಾಗಾದರೆ, ಬಿಜೆಪಿ ಮತ್ತು ಯಡಿಯೂರಪ್ಪ, ವಿಜಯೇಂದ್ರ ಅವರನ್ನೇ ಏಕೆ ವರುಣಾದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು? ವಿಜಯೇಂದ್ರ ತವರು ಜಿಲ್ಲೆ ಶಿವಮೊಗ್ಗವನ್ನು ಬಿಟ್ಟು ಮೈಸೂರಿಗೆ ಯಾಕೆ ವಲಸೆ ಹೋದರು? ಈ ರಾಜಕೀಯ ತಂತ್ರಗಾರಿಕೆಯ ಹಿಂದಿನ ಮರ್ಮವೇನು? ಇಂತಹ ಪ್ರಶ್ನೆಗಳು ಮೂಡುವುದು ಸಹಜ. ಅದರಲ್ಲೂ ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ಈಗ ಹೆಚ್ಚು ಕೇಳಿಬರತೊಡಗಿವೆ.

ಹಾಗೆ ನೋಡಿದರೆ, ಶಿವಮೊಗ್ಗದಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ಕೂಡ ರಾಜಕೀಯವಾಗಿ ಯಡಿಯೂರಪ್ಪ ಅವರಿಗೆ ನಿರಾಳ ಪರಿಸ್ಥಿತಿ ಇಲ್ಲ. ಒಂದು ಕಾಲದಲ್ಲಿ ರಾಮ-ಲಕ್ಷ್ಮಣರಂತೆ ಬಿಜೆಪಿಯನ್ನು ರಾಜ್ಯಾದ್ಯಂತ ಸುತ್ತಾಡಿ ಕಟ್ಟಿದ ಮಿತ್ರ ಕೆ ಎಸ್‌ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಹಳಸಿದ್ದೇ ಈ ಕುಟುಂಬ ರಾಜಕಾರಣದ ಕಾರಣಕ್ಕೆ ಎಂಬುದು ಗುಟ್ಟೇನಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಪ್ರಭಾವ ಬಳಸಿ ತಮ್ಮ ಮೊದಲ ಪುತ್ರ ರಾಘವೇಂದ್ರ ಅವರನ್ನು ಎಸ್‌ ಬಂಗಾರಪ್ಪ ವಿರುದ್ಧ ಕಣಕ್ಕಿಳಿಸಿದಾಗಲೇ ಬಿಜೆಪಿಯ ರಾಮ-ಲಕ್ಷ್ಮಣರ ನಡುವಿನ ಕಂದಕ ಬಾಯ್ದೆರೆದಿತ್ತು. ಅದು ಅವರಿಬ್ಬರ ಮಟ್ಟಿಗೆ ಮಾತ್ರ ಸೀಮಿತವಾಗದೆ, ಸಹಜವಾಗೇ ಇಡೀ ಜಿಲ್ಲೆಯ ಪಕ್ಷ ಸಂಘಟನೆಯೇ ಇಬ್ಭಾಗವಾಗಿತ್ತು. ಆಗ ಪಕ್ಷದೊಳಗಿನ ದೊಡ್ಡ ಮಟ್ಟದ ಭಿನ್ನಮತ ಶಮನಕ್ಕೆ ರಾಷ್ಟ್ರೀಯ ನಾಯಕರೇ ಮಧ್ಯಪ್ರವೇಶಿಸಿದ್ದರು.

ಆ ಬಳಿಕ, ರಾಘವೇಂದ್ರ ಸಂಸದರಾಗಿ ಐದು ವರ್ಷವಿದ್ದರೂ ಜಿಲ್ಲೆಯ ಜನಸಾಮಾನ್ಯರ ನಡುವೆ ನಾಯಕರಾಗಿ ಬೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಲಿಲ್ಲ. ಬಳಿಕ ೨೦೧೪ರಲ್ಲಿ ಯಡಿಯೂರಪ್ಪ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಲೋಕಸಭೆಗೆ ಕಾಲಿಟ್ಟಾಗ ನಡೆದ ಉಪಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಚುನಾವಣೆಗೆ ರಾಘವೇಂದ್ರ ಅಭ್ಯರ್ಥಿಯಾದರು. ಆಗಲೂ, ಅವರು ಗೆಲುವು ಪಡೆದದ್ದು ತಮ್ಮ ವೈಯಕ್ತಿಕ ವರ್ಚಸ್ಸಿಗಿಂತ ತಂದೆಯ ಪ್ರಭಾವದಿಂದಲೇ ಎಂಬುದು ಅವರ ಆಪ್ತರು ಕೂಡ ಮುಕ್ತಮನಸ್ಸಿನಿಂದ ಹೇಳುವ ಮಾತು.

ಶಿಕಾರಿಪುರ ಉಪಚುನಾವಣೆಯಲ್ಲಿ ರಾಘವೇಂದ್ರ ಅಭ್ಯರ್ಥಿ ಎಂದು ಘೋಷಣೆಯಾದಾಗಲೂ ಶಿವಮೊಗ್ಗ ಬಿಜೆಪಿಯಲ್ಲಿ ಅಪಸ್ವರ, ಅಸಮಾಧಾನದ ಮಾತು ಕೇಳಿಬಂದಿತ್ತು. ಜೊತೆಗೆ, ಕೆಜೆಪಿ ಮತ್ತು ಬಿಜೆಪಿ ಸಂಘರ್ಷ ಕೂಡ ಆಗಿನ್ನೂ ಸಂಪೂರ್ಣ ಆರಿರಲಿಲ್ಲ. ಅದರಲ್ಲೂ ಆರ್‌ಎಸ್‌ಎಸ್‌ ಹಿನ್ನೆಲೆಯ ನಾಯಕರ ನಡುವೆ ಯಡಿಯೂರಪ್ಪ ಅವರ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಭಾರಿ ಆಕ್ರೋಶವೇ ವ್ಯಕ್ತವಾಗಿತ್ತು. ಆದರೂ, ಅಂತಹ ಅಂಶಗಳು ಸ್ವತಃ ಯಡಿಯೂರಪ್ಪ ಅವರ ಭದ್ರಕೋಟೆಯಾದ ಶಿಕಾರಿಪುರದಲ್ಲಿ ಅವರ ಗೆಲುವಿಗೆ ಅಡ್ಡಿಯಾಗಲಿಲ್ಲ. ಏಕೆಂದರೆ, ಶಿಕಾರಿಪುರದಲ್ಲಿ ಬಿಜೆಪಿ ಎಂದರೆ ಬಿಎಸ್‌ವೈ, ಬಿಎಸ್‌ವೈ ಎಂದರೆ ಬಿಜೆಪಿ.

ಈ ಬಾರಿಯ ಚುಣಾವಣೆಯ ಹೊತ್ತಿಗೆ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ ಮತ್ತು ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು ಖಚಿತವಾಗುತ್ತಿದ್ದಂತೆಯೇ, ಎರಡು ವರ್ಷದ ಹಿಂದಿನಿಂದಲೇ ಬಿ ವೈ ರಾಘವೇಂದ್ರ ತಂದೆಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಬದಲಿ ಕ್ಷೇತ್ರ ಹುಡುಕಿಕೊಳ್ಳುವ ಕಾರ್ಯಾಚರಣೆಗೆ ಇಳಿದಿದ್ದರು. ಕೆಲವು ತಿಂಗಳು ಹಾವೇರಿ, ರಾಣೆಬೆನ್ನೂರು, ಹಿರೇಕೆರೂರುಗಳಲ್ಲಿ ಸುತ್ತುಹಾಕಿದರು. ಆದರೆ, ಎಲ್ಲಿಯೂ ಅವರಿಗೆ ತಾವು ಅಲ್ಲಿ ನಿಂತು ಗೆದ್ದುಬರಬಲ್ಲೆವು ಎಂಬ ಭರವಸೆ ಹುಟ್ಟಲಿಲ್ಲ. ಹಾಗಾಗಿ ಅ ಯೋಚನೆ ಕೈಬಿಟ್ಟರು ಎಂಬ ಮಾತಿದೆ. ಆ ಬಳಿಕ, ನೆರೆಯ ಸೊರಬದಲ್ಲಿ ನಿಲ್ಲುವ ಯೋಚನೆ ಕೂಡ ಮಾಡಿದ್ದರು. ಆದರೆ, ಅಲ್ಲಿ ಅಷ್ಟರಲ್ಲಾಗಲೇ ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ ಅವರನ್ನು ಕಮಲ ಪಾಳೆಯಕ್ಕೆ ಸೆಳೆದು, ಅವರಿಗೇ ವಿಧಾನಸಭಾ ಟಿಕೆಟ್‌ ನೀಡುವ ಮಾತು ಕೊಟ್ಟಾಗಿತ್ತು. ಹಾಗಾಗಿ ಆ ಯೋಜನೆ ಕೂಡ ಕೈಗೂಡಲಿಲ್ಲ.

ಈ ನಡುವೆ, ಕುಟಂಬದ ವ್ಯವಹಾರ ವಹಿವಾಟುಗಳಿಗೆ ಸೀಮಿತವಾಗಿದ್ದ ಎರಡನೇ ಪುತ್ರ ವಿಜಯೇಂದ್ರ ಕೂಡ, ತನಗೂ ಒಂದು ಐಡೆಂಟಿಟಿ ಬೇಕು, ಈ ಬಾರಿ ತಾನೇ ಅಭ್ಯರ್ಥಿಯಾಗುತ್ತೇನೆ ಎಂದು ೨೦೧೪ರ ಶಿಕಾರಿಪುರ ಉಪ ಚುನಾವಣೆಯಲ್ಲಿಯೇ ತಗಾದೆ ತೆಗೆದಿದ್ದರು. ಆಗ ಯಡಿಯೂರಪ್ಪ, “ಸದ್ಯಕ್ಕೆ ರಾಜಕೀಯ ಬೇಡ, ಮುಂದೆ ನೋಡೋಣ,” ಎಂದು ಮಗನ ಬೇಡಿಕೆಯನ್ನು ಬದಿಗೊತ್ತಿದ್ದರು. ಆದರೆ, ವಿಜಯೇಂದ್ರ ಅವರಿಗೆ ತಂದೆ ಮತ್ತು ಸಹೋದರನಂತೆ ತಾನೂ ರಾಜಕೀಯ ನಾಯಕನಾಗಿ ತನ್ನದೇ ವರ್ಚಸ್ಸು ಬೆಳೆಸಿಕೊಳ್ಳಬೇಕು ಎಂಬ ಉಮೇದು ಕಡಿಮೆಯಾಗಿರಲಿಲ್ಲ ಎಂಬುದು ಅವರ ಕುಟುಂಬದ ಆಪ್ತರ ಅನಿಸಿಕೆ.

ಇದನ್ನೂ ಓದಿ : ಕುಟುಂಬ ರಾಜಕಾರಣದ ಬಗ್ಗೆ ಮಾತಾಡೋ ನೈತಿಕತೆ ಕಳೆದುಕೊಳ್ಳಲಿದ್ದಾರೆಯೇ ಬಿಎಸ್‌ವೈ?

ಇದೀಗ ಒಂದು ವರ್ಷದಿಂದಲೇ ವಿಜಯೇಂದ್ರ ಅವರ ರಾಜಕೀಯ ಪ್ರವೇಶ ಕುಟುಂಬದ ಚರ್ಚೆಯಲ್ಲಿತ್ತು. ಶಿಕಾರಿಪುರ, ಸೊರಬ ಕ್ಷೇತ್ರಗಳ ಪೈಕಿ ಒಂದು ಕಡೆ ಅವರಿಗೆ ಟಿಕೆಟ್‌ ಕೊಡಿಸುವ ಬಗ್ಗೆ ಆರಂಭದಲ್ಲಿ ಯಡಿಯೂರಪ್ಪ ಯೋಚಿಸಿದ್ದರು. ಆದರೆ, ಈಗಾಗಲೇ ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ತಮ್ಮ ಆಪ್ತರಿಗೆ ಕೊಡಿಸುವ ವಿಷಯದಲ್ಲಿ ಈಶ್ವರಪ್ಪ ಸಿಡಿದೆದ್ದಿದ್ದಾರೆ. ಟಿಕೆಟ್ ವಿಷಯದಲ್ಲೇ ಬಂಡಾಯವೆದ್ದು ರಾಯಣ್ಣ ಬ್ರಿಗೇಡ್‌ ಕಟ್ಟಿ ತಮ್ಮ ವಿರುದ್ಧ ಸಡ್ಡು ಹೊಡೆಯುತ್ತಿದ್ದಾರೆ. ಅವರ ಆ ತಂತ್ರಗಾರಿಕೆ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ತಗ್ಗಿಸುತ್ತಿದೆ. ಅಲ್ಲದೆ, ಹೈಕಮಾಂಡ್ ಮಟ್ಟದಲ್ಲೂ ತಮಗೆ ಹಿನ್ನಡೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಯಡಿಯೂರಪ್ಪ ವಿಜಯೇಂದ್ರ ಅವರಿಗೆ ಈ ಬಾರಿಯೂ ರಾಜಕೀಯ ಪ್ರವೇಶ ಬೇಡ ಎಂದಿದ್ದರು ಎನ್ನಲಾಗಿದೆ.

ಆದರೆ, ಯಾವಾಗ ವರುಣಾದಲ್ಲಿ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರರನ್ನು ಕಣಕ್ಕಿಳಿಸಲಿದ್ದಾರೆ ಎಂಬುದು ಖಚಿತವಾಯಿತೋ, ಆಗ ಯಡಿಯೂರಪ್ಪ ಅವರ ಆಪ್ತರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಉಪಾಯ ಕೊಟ್ಟರು! ಅತ್ತ ಸಿದ್ದರಾಮಯ್ಯ ಪುತ್ರನ ಎದುರು ಕಣಕ್ಕಿಳಿಯುವ ಸಮಬಲದ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಬಿಜೆಪಿಯ ನಿರೀಕ್ಷೆಯೂ ಫಲಿಸಿತು, ಇತ್ತ ರಾಜಕೀಯ ಪ್ರವೇಶದ ವಿಜಯೇಂದ್ರ ಅವರ ಆಕಾಂಕ್ಷೆಯೂ ನೆರವೇರಿತು ಎಂಬ ಸೂತ್ರದಲ್ಲಿ ಈ ಹೊಸ ಉಪಾಯ ಜಾರಿಯಾಯಿತು.

ಆ ಮೂಲಕ, ಸಿಎಂ ಪುತ್ರನ ಸ್ಥಾನಮಾನಕ್ಕೆ ತಕ್ಕಂತೆ ಮಾಜಿ ಸಿಎಂ ಪುತ್ರ ವರುಣಾದ ಕಣಕ್ಕಿಳಿದರು. ಅದೇ ಹೊತ್ತಿಗೆ, ಶಿವಮೊಗ್ಗದಿಂದ ದೂರವಾಗಿ ಮೈಸೂರಿನಲ್ಲಿ ಪುತ್ರನ ರಾಜಕೀಯ ಪ್ರವೇಶ ಮಾಡಿಸುವ ಮೂಲಕ ಪಕ್ಷದೊಳಗಿನ ಆಂತರಿಕ ಬಂಡಾಯ, ಭಿನ್ನಮತಗಳಿಂದಲೂ ಪಾರಾದ ಸಮಾಧಾನ ಕೂಡ ಯಡಿಯೂರಪ್ಪ ಅವರದ್ದಾಯಿತು. ಹಾಗಾಗಿ, ಈಗ ವರುಣಾದಲ್ಲಿ ವಿಜಯೇಂದ್ರರ ಚುನಾವಣಾ ಸಾಹಸ ಪಕ್ಷಕ್ಕೂ ಲಾಭ ಹಾಗೂ ವೈಯಕ್ತಿಕವಾಗಿ ಯಡಿಯೂರಪ್ಪ ಕುಟುಂಬಕ್ಕೂ ಅನುಕೂಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More