ಬಿಜೆಪಿ ದ್ವಿತೀಯ ಪಟ್ಟಿಯಲ್ಲಿ ಹಾಲಪ್ಪ, ರೇಣುಕಾಚಾರ್ಯ, ಸಿ ಸಿ ಪಾಟೀಲಗೆ ಟಿಕೆಟ್

ಬಿಜೆಪಿ ಸೋಮವಾರ ೮೨ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು ೧೫೪ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು, ಇನ್ನೂ ೭೦ ಸ್ಥಾನಗಳಿಗೆ ಕಮಲ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಬಿಜೆಪಿಯ ೨ನೇ ಪಟ್ಟಿಯಲ್ಲಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್‌ ಪ್ರಸ್ತಾಪವಿಲ್ಲ‌

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಸೋಮವಾರ ಎರಡನೇ ಹಂತದಲ್ಲಿ ೮೨ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಮುರುಗೇಶ ನಿರಾಣಿ, ಎಂ ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ, ಕಳಕಪ್ಪ ಬಂಡಿ, ಸಿ ಸಿ ಪಾಟೀಲ್‌ ಅವರ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್‌ ಸಮ್ಮತಿ ಸೂಚಿಸಿದೆ. ಇನ್ನು ಎರಡನೇ ಪಟ್ಟಿಯಲ್ಲಿ ಒಬ್ಬರೇ ಒಬ್ಬ ಮಹಿಳೆ ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್‌ ನೀಡದಿರುವುದು ವಿಶೇಷ.

ದೇಶದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿಯೇ ಬಿಜೆಪಿಯು ಸೋಮವಾರ ಬಿಡುಗಡೆ ಮಾಡಿರುವ ತನ್ನ ಎರಡನೇ ಪಟ್ಟಿಯಲ್ಲಿ ಈ ಹಿಂದೆ ರಾಜ್ಯದ ಮಹಿಳೆಯರ ಕೆಂಗಣ್ಣಿಗೆ ತುತ್ತಾಗಿದ್ದ ಮೂವರು ಮಾಜಿ ಶಾಸಕರಿಗೆ ಟಿಕೆಟ್‌ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವರಾದ ಹರತಾಳು ಹಾಲಪ್ಪ, ರೇಣುಕಾಚಾರ್ಯ, ಸಿ ಸಿ ಪಾಟೀಲ್‌ ಅವರ ವಿರುದ್ಧ ಬಿಜೆಪಿ ಸರ್ಕಾರ ಅವಧಿಯಲ್ಲಿ ಗಂಭೀರ ಆಪಾದನೆಗಳು ಕೇಳಿ ಬಂದಿದ್ದವು.

ಮಾಜಿ ಸಚಿವ ಹರತಾಳು ಹಾಲಪ್ಪ ಅವರ ವಿರುದ್ಧ ಸ್ನೇಹಿತನ ಪತ್ನಿಯ ವಿರುದ್ಧದ ಅತ್ಯಾಚಾರದ ಅರೋಪ ಕೇಳಿ ಬಂದಿತ್ತಾದರೂ ಸೂಕ್ತ ಸಾಕ್ಷ್ಯಗಳ ಕೊರತೆಯಿಂದಾಗಿ ಸ್ಥಳೀಯ ಜಿಲ್ಲಾ ನ್ಯಾಯಾಲಯ ಅವರನ್ನು ಕಳೆದ ವರ್ಷವಷ್ಟೇ ದೋಷಮುಕ್ತರನ್ನಾಗಿಸಿ ತೀರ್ಪು ನೀಡಿತ್ತು. ಹಾಲಪ್ಪ ಹಿಂದಿನ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಯಡಿಯೂರಪ್ಪನವರಿಗೆ ಅವರು ತೋರಿದ್ದ ಈ ನಿಷ್ಠೆಯೇ ಈ ಬಾರಿ ಅವರ ಕೈ ಹಿಡಿದಿದೆ ಎನ್ನಲಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಅವರ ವಿರುದ್ಧ ನರ್ಸ್‌ ಜಯಲಕ್ಷ್ಮಿ ಅವರು ಲೈಂಗಿಕ ಕಿರುಕುಳದ ಗಂಭೀರ ಅರೋಪ ಮಾಡಿದ್ದರು. ಪ್ರಕರಣ ಅರಂಭದಲ್ಲಿ ಸಾಕಷ್ಟು ಸದ್ದು ಮಾಡಿತಾದರೂ ನಂತರದ ದಿನಗಳಲ್ಲಿ ರಾಜಿಸಂಧಾನದೊಂದಿಗೆ ಹಿನ್ನೆಲೆಗೆ ಸರಿದಿತ್ತು. ತದನಂತರ ಚುನಾವಣೆಯಲ್ಲಿ ರೇಣುಕಾಚಾರ್ಯ ಕೆಜೆಪಿಯಿಂದ ಹೊನ್ನಾಳಿ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದರಾದರೂ ಸೋಲನುಭವಿಸಿದ್ದರು. ಇನ್ನು ನರಗುಂದ ಕ್ಷೇತ್ರದಿಂದ ಟಿಕೆಟ್‌ ಪಡೆದಿರುವ ಸಿ ಸಿ ಪಾಟೀಲ್ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭಾ ಅಧಿವೇಶನದ ವೇಳೆ ಅಂದಿನ ತಮ್ಮ ಸಹ ಸದಸ್ಯರಾದ ಲಕ್ಷ್ಮಣ ಸವದಿ ಹಾಗೂ ಕೃಷ್ಣ ಪಾಲೇಮಾರ್‌ ಅವರ ಜೊತೆಗೂಡಿ ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಆರೋಪ ಎದುರಿಸಿದ್ದರು. ಈ ಪ್ರಕರಣವೂ ಸಹ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಸಿ ಸಿ ಪಾಟೀಲ್‌ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಗಳಿಸಿ ಸ್ಪರ್ಧಿಸಿದ್ದರಾದರೂ ಕ್ಷೇತ್ರದ ಮತದಾರರು ತಿರಸ್ಕರಿಸಿದ್ದರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಇದಾಗಲೇ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಸಿಕ್ಕಿದೆ. ಹಿಂದಿನ ಬಾರಿಯೂ ಸಹ ಅವರು ಅಥಣಿ ಕ್ಷೇತ್ರದಿಂದ ಗೆದ್ದು ಬಂದಿದ್ದರು.

ಗೆಲ್ಲುವ ಶಕ್ತಿಯೊಂದೇ ಮಾನದಂಡ ಎಂದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಕೆಲ ತಿಂಗಳ ಹಿಂದೆ ರಾಜ್ಯದ ವಿಧಾನಸಭಾ ಚುನಾವಣಾ ತಯಾರಿಗೆಂದು ಮೊದಲ ಬಾರಿಗೆ ಆಗಮಿಸಿದ್ದ ವೇಳೆಯೇ ಸ್ಪಷ್ಟವಾಗಿ ಹೇಳಿದ್ದನ್ನು ಮೇಲಿನ ಪ್ರಕರಣಗಳ ಹಿನ್ನೆಲೆಯಲ್ಲಿ ಗಮನಿಸಬಹುದು. ಉಳಿದಂತೆ ಸೋಮವಾರ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಒಟ್ಟು ೮ ಸಚಿವರಿಗೆ ೧೭ ಮಾಜಿ ಶಾಸಕರಿಗೆ ಹಾಗೂ ೧೬ ಹೊಸ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಇದಲ್ಲದೆ ಗಂಭೀರ ಭ್ರಷ್ಟಾಚಾರದ ಆರೋಪದ ಪ್ರಕರಣಗಳನ್ನು ಎದುರಿಸುತ್ತಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಶಿವಮೊಗ್ಗ ರಾಜಕಾರಣದ ವಿಷಯವನ್ನು ಗಮನಿಸುವುದಾದರೆ ಸಾಗರದಲ್ಲಿ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ನಡುವೆ ಟಿಕೆಟ್‌ಗೆ ಇತ್ತೀಚೆಗೆ ಭಾರಿ ಪೈಪೋಟಿ ನಡೆದಿತ್ತು. ಈಗ ಹಾಲಪ್ಪ ಅವರಿಗೆ ಮಣೆ ಹಾಕಿರುವುದರಿಂದ ಸಹಜವಾಗಿಯೇ ಗೋಪಾಲಕೃಷ್ಣ ಅವರ ನಡೆ ಕುತೂಹಲ ಮೂಡಿಸಿದೆ. ಉಳಿದಂತೆ ಬಳ್ಳಾರಿ ನಗರದಲ್ಲಿ ಗಣಿ ಅಕ್ರಮದ ಆರೋಪಿ ಜನಾರ್ದನ ರೆಡ್ಡಿ ಅವರ ಸಹೋದರ ಜಿ ಸೋಮಶೇಖರ ರೆಡ್ಡಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಬೀದರ್‌ನಲ್ಲಿ ನಾಗಮಾರಪ್ಪಳ್ಳಿ ಅವರ ಪುತ್ರ ಸೂರ್ಯಕಾಂತ ಅವರ ಉಮೇದುವಾರಿಕೆಗೆ ಒಪ್ಪಿಗೆ ದೊರೆತಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಜೇಷ್ಠ ಪುತ್ರ ಕುಮಾರ ಬಂಗಾರಪ್ಪ ಅವರಿಗೆ ಟಿಕೆಟ್‌ ಹಂಚಿಕೆ ಮಾಡಲಾಗಿದ್ದು, ಜೆಡಿಎಸ್‌ನಿಂದ ಬಂಗಾರಪ್ಪ ಅವರ ಮತ್ತೊಬ್ಬ ಪುತ್ರ ಮಧು ಬಂಗಾರಪ್ಪ ಕಣಕ್ಕಿಳಿಯುತ್ತಿರುವುದರಿಂದ ಇಲ್ಲಿ ಭಾರಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಕುಮಾರ ಬಂಗಾರಪ್ಪ ಅವರು ಈಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ನೆಲ‌ ನರೇಂದ್ರಬಾಬು ಅವರಿಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಸ್ಪರ್ಧೆಗೆ ಒಪ್ಪಿಗೆ ನೀಡಲಾಗಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಸ್ಪರ್ಧೆಗೆ ಬಿಜೆಪಿ ಒಲವು ತೋರಿದ್ದು, ಹನೂರಿನಲ್ಲಿ ಪ್ರೀತಮ್‌ ನಾಗಪ್ಪ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಟಿಕೆಟ್‌ ಮಂತ್ರ: ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’

ಕಳೆದ ಸೋಮವಾರ (ಏ.೯) ಪಕ್ಷವು ೭೨ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ ಮೂವರು ಮಹಿಳೆಯರಿಗೆ ಟಿಕೆಟ್‌ ನೀಡಲಾಗಿತ್ತು. ಎರಡು ಪಟ್ಟಿಗಳಿಂದ ೧೫೪ ಹುರಿಯಾಳುಗಳ ಹೆಸರನ್ನು ಅಖೈರುಗೊಳಿಸಿರುವ ಬಿಜೆಪಿಯು ಇನ್ನೂ ೭೦ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಬೇಕಿದೆ.

82 ಅಭ್ಯರ್ಥಿಗಳ ಪಟ್ಟಿ

 • ಚಿಕ್ಕೋಡಿ ಸದಲಗಾ - ಅಣ್ಣಾ ಸಾಹೇಬ್‌ ಜೊಲ್ಲೆ
 • ಗೋಕಾಕ - ಅಶೋಕ ಪೂಜಾರಿ
 • ಯಮಕನಮರಡಿ - ಮಾರುತಿ ಅಷ್ಟಗಿ
 • ರಾಮದುರ್ಗ - ಮಹದೇವಪ್ಪ ಯಾದವಾಡ
 • ತೇರದಾಳ - ಸಿದ್ದು ಸವದಿ
 • ಜಮಖಂಡಿ - ಶ್ರೀಕಾಂತ ಕುಲಕರ್ಣಿ
 • ಬೀಳಗಿ - ಮುರುಗೇಶ ನಿರಾಣಿ
 • ಬಾಗಲಕೋಟೆ - ವೀರಣ್ಣ ಚರಂತಿಮಠ
 • ಹುನಗುಂದ - ದೊಡ್ಡನಗೌಡ ಪಾಟೀಲ
 • ದೇವರ ಹಿಪ್ಪರಗಿ - ಸೋಮನಗೌಡ ಪಾಟೀಲ್‌ (ಸಾಸನೂರ)
 • ಇಂಡಿ - ದಯಾಸಾಗರ್‌ ಪಾಟೀಲ್‌
 • ಜೇವರ್ಗಿ - ದೊಡ್ಡಪ್ಪನಗೌಡ ಪಾಟೀಲ್‌ ನರಿಬೋಳ
 • ಯಾದಗಿರಿ - ವೆಂಕಟರೆಡ್ಡಿ ಮುದ್ನಾಳ
 • ಗುರುಮಠಕಲ್‌ - ಸಾಯಬಣ್ಣ ಬೋರಬಂಡಾ
 • ಸೇಡಂ - ರಾಜಕುಮಾರ್ ಪಾಟೀಲ್‌ ತೇಲ್ಕೂರ್‌
 • ಕಲಬುರ್ಗಿ ಉತ್ತರ - ಚಂದ್ರಕಾಂತ್‌ ಪಾಟೀಲ್‌
 • ಬೀದರ್‌ - ಸೂರ್ಯಕಾಂತ ನಾಗಮಾರಪ್ಪಳ್ಳಿ
 • ಭಾಲ್ಕಿ - ಡಿ ಕೆ ಸಿದ್ದರಾಮ
 • ಮಸ್ಕಿ - ಬಸವನಗೌಡ ತುರುವಿಹಾಳ
 • ಕನಕಗಿರಿ - ಬಸವರಾಜ ದಾಧೇಸಾಗುರ್‌
 • ಗಂಗಾವತಿ - ಪರಣ್ಣ ಮುನವಳ್ಳಿ
 • ಯಲಬುರ್ಗಾ - ಹಾಲಪ್ಪ ಬಸಪ್ಪ ಆಚಾರ್‌
 • ಕೊಪ್ಪಳ - ಸಿ ವಿ ಚಂದ್ರಶೇಖರ್‌
 • ಶಿರಹಟ್ಟಿ - ರಾಮಣ್ಣ ಲಮಾಣಿ
 • ಗದಗ - ಅನಿಲ್‌ ಮೆಣಸಿನಕಾಯಿ
 • ರೋಣಾ - ಕಳಕಪ್ಪ ಬಂಡಿ
 • ನರಗುಂದ - ಸಿ ಸಿ ಪಾಟೀಲ್‌
 • ನವಲಗುಂದ - ಶಂಕರಗೌಡ ಪಾಟೀಲ್‌ ಮುನೇನಕೊಪ್ಪ
 • ಕಲಘಟಗಿ - ಮಹೇಶ ತೆಂಗಿನಕಾಯಿ
 • ಹಳಿಯಾಳ - ಸುನಿಲ್ ಹೆಗಡೆ
 • ಭಟ್ಕಳ - ಸುನಿಲ್‌ ನಾಯ್ಕ್‌
 • ಯಲ್ಲಾಪುರ - ವಿ ಎಸ್‌ ಪಾಟೀಲ್‌
 • ಬ್ಯಾಡಗಿ - ವಿರುಪಾಕ್ಷಪ್ಪ ಬಳ್ಳಾರಿ
 • ಹಡಗಲಿ - ಚಂದ್ರ ನಾಯ್ಕ್‌
 • ಹಗರಿಬೊಮ್ಮನಹಳ್ಳಿ - ನೇಮಿರಾಜ್‌ ನಾಯ್ಕ್‌
 • ಶಿರಗುಪ್ಪ - ಎಂ ಎಸ್‌ ಸೋಮಲಿಂಗಪ್ಪ
 • ಬಳ್ಳಾರಿ - ಸಣ್ಣ ಫಕೀರಪ್ಪ
 • ಬಳ್ಳಾರಿ ನಗರ - ಜಿ ಸೋಮಶೇಖರ ರೆಡ್ಡಿ
 • ಚಳ್ಳಕೆರೆ - ಕೆ ಟಿ ಕುಮಾರಸ್ವಾಮಿ
 • ಹೊಳಲ್ಕೆರೆ - ಎಂ ಚಂದ್ರಪ್ಪ
 • ಚನ್ನಗಿರಿ - ಮದಾಳು ವಿರೂಪಾಕ್ಷಪ್ಪ
 • ಹೊನ್ನಾಳಿ - ಎಂ ಪಿ ರೇಣುಕಾಚಾರ್ಯ
 • ಶಿವಮೊಗ್ಗ ಗ್ರಾಮೀಣ - ಅಶೋಕ ನಾಯ್ಕ್‌
 • ತೀರ್ಥಹಳ್ಳಿ - ಅರಗ ಜ್ಞಾನೇಂದ್ರ
 • ಸೊರಬ - ಕುಮಾರ ಬಂಗಾರಪ್ಪ
 • ಸಾಗರ - ಹರತಾಳು ಹಾಲಪ್ಪ
 • ಬೈಂದೂರು - ಬಿ ಸುಕುಮಾರ್‌ ಶೆಟ್ಟಿ
 • ಕಡೂರು - ಬೆಳ್ಳಿ ಪ್ರಕಾಶ್‌
 • ಚಿಕ್ಕನಾಯಕನಹಳ್ಳಿ - ಜೆ ಸಿ ಮಧುಸ್ವಾಮಿ
 • ತಿಪಟೂರು - ಬಿ ಸಿ ನಾಗೇಶ್‌
 • ತುರುವೇಕೆರೆ - ಮಸಾಲೆ ಜಯರಾಂ
 • ತುಮಕೂರು ನಗರ - ಜಿ ಬಿ ಜ್ಯೋತಿ ಗಣೇಶ್‌
 • ಕೊರಟಗೆರೆ - ವೈ ಹುಚ್ಚಯ್ಯ
 • ಗುಬ್ಬಿ - ಬೆಟ್ಟಸ್ವಾಮಿ
 • ಶಿರಾ - ಬಿ ಕೆ ಮಂಜುನಾಥ
 • ಮಧುಗಿರಿ - ಎಂ ಆರ್‌ ಹುಲಿನಾಯ್ಕರ್‌
 • ಚಿಕ್ಕಬಳ್ಳಾಪುರ - ಡಿ ಮಂಜುನಾಥ್‌
 • ಬಂಗಾರಪೇಟೆ - ಬಿ ಪಿ ವೆಂಕಟಮುನಿಯಪ್ಪ
 • ಕೋಲಾರ - ಓಂ ಶಕ್ತಿಚಲಪತಿ
 • ಮಾಲೂರು - ಎಸ್‌ ಎನ್‌ ಕೃಷ್ಣಯ್ಯಶೆಟ್ಟಿ
 • ಕೆ ಆರ್‌ ಪುರಂ - ನಂದೀಶ್‌ ರೆಡ್ಡಿ
 • ಬ್ಯಾಟರಾಯನಪುರ - ಎ ರವಿ
 • ಮಹಾಲಕ್ಷ್ಮಿ ಲೇಔಟ್‌ - ನೆ ಲ ನರೇಂದ್ರ ಬಾಬು
 • ಶಿವಾಜಿ ನಗರ - ಕಟ್ಟಾ ಸುಬ್ರಹ್ಮಣ್ಯ ನಾಯ್ಡು
 • ಶಾಂತಿ ನಗರ - ವಾಸುದೇವ ಮೂರ್ತಿ
 • ವಿಜಯ ನಗರ - ಎಚ್ ರವೀಂದ್ರ
 • ದೊಡ್ಡಬಳ್ಳಾಪುರ - ಜೆ ನರಸಿಂಹ ಸ್ವಾಮಿ
 • ಮಾಗಡಿ - ಹನುಮಂತರಾಜು
 • ಮಳವಳ್ಳಿ - ಬಿ ಸೋಮಶೇಖರ್‌
 • ಅರಕಲಗೂಡು - ಎಚ್‌ ಯೋಗ ರಮೇಶ್‌
 • ಬೆಳ್ತಂಗಡಿ - ಹರೀಶ್‌ ಪೂಂಜಾ
 • ಮೂಡಬಿದರೆ - ಉಮಾನಾಥ್‌ ಕೋಟ್ಯಾನ್‌
 • ಭಂಟ್ವಾಳ - ಯು ರಾಜೇಶ್‌ ನಾಯಕ್‌
 • ಪುತ್ತೂರು - ಸಂಜೀವ್‌ ಮತ್ತಂದೂರ್‌
 • ಪಿರಿಯಾಪಟ್ಟಣ - ಎಸ್‌ ಮಂಜುನಾಥ್‌
 • ಹೆಗ್ಗಡದೇವನಕೋಟೆ - ಸಿದ್ದರಾಜು
 • ನಂಜನಗೂಡು - ಹರ್ಷವರ್ಧನ್‌
 • ನರಸಿಂಹರಾಜ - ಎಸ್‌ ಸತೀಶ್ (ಸಂದೇಶ್‌ ಸ್ವಾಮಿ)
 • ಹನೂರು - ಡಾ ಪ್ರೀತಮ್‌ ನಾಗಪ್ಪ
 • ಕೊಳ್ಳೇಗಾಲ - ಜಿ ಎನ್‌ ನಂಜುಂಡಸ್ವಾಮಿ
 • ಚಾಮರಾಜನಗರ - ಪ್ರೊ ಮಲ್ಲಿಕಾರ್ಜುನಪ್ಪ
 • ಗುಂಡ್ಲುಪೇಟೆ - ಎಚ್ ಎಸ್‌ ನಿರಂಜನಕುಮಾರ್‌
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More