ಚಾಮುಂಡೇಶ್ವರಿಯಲ್ಲಷ್ಟೆ ಸಿಎಂ ಸ್ಪರ್ಧೆ ನಿರ್ಧಾರದ ಹಿಂದಿನ ಲಾಭ-ನಷ್ಟಗಳೇನು? 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧಾ ಕಣದ ಚರ್ಚೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರಂಭವಾಗಿ ಮತ್ತೆ ಅಲ್ಲಿಗೇ ಬಂದು ನಿಂತಿದೆ. ಈ ಮಧ್ಯೆ ಸೃಷ್ಟಿತ ಗೊಂದಲ, ಎರಡೆರಡು ಕಡೆ ಸ್ಪರ್ಧೆ ಎನ್ನುವ ಚರ್ಚೆಗಳಿಗೆ ತೆರೆ ಬಿದ್ದಿದೆ. ತಂತ್ರ, ಪ್ರತಿತಂತ್ರ ಪ್ರಣೀತ ಕದನ ಕುತೂಹಲ ನೂರ್ಮಡಿಗೊಂಡಿದೆ

ರಾಜಕೀಯ ತಂತ್ರ, ಪ್ರತಿತಂತ್ರಗಳು ಯಾವಾಗ, ಹೇಗೆ ವರ್ತಿಸುತ್ತವೆ ಎನ್ನುವುದನ್ನು ಸುಲಭಕ್ಕೆ ಹೇಳಲಾಗದು. ಯಾವುದೋ ನಿರೀಕ್ಷೆಯಲ್ಲಿ ಉರುಳಿಸಿದ ದಾಳ ಇನ್ನೇನೋ ಫಲಿತಾಂಶ ನೀಡಿ, ದಾಳ ಉರುಳಿಸಿದವರನ್ನು ಮತ್ತು ಎದುರಾಳಿಗಳನ್ನು ಬೇಸ್ತು ಬೀಳಿಸಿದ್ದಕ್ಕೆ ಅಥವಾ ಅಚ್ಚರಿಗೆ ಕೆಡವಿದ್ದಕ್ಕೆ ರಾಜಕೀಯ ಚದುರಂಗದಾಟದಲ್ಲಿ ಅನೇಕ ನಿದರ್ಶನಗಳಿವೆ. ತಮ್ಮ ಸ್ಪರ್ಧಾ ಕ್ಷೇತ್ರದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉರುಳಿಸಿದ ದಾಳ ಕೂಡ ಹೀಗೇ ವರ್ತಿಸಿದೆ. ಆದರೆ, ಇಲ್ಲಿ ದಾಳ ಉರುಳಿಸಿದವರಿಗಿಂತ ಎದುರಾಳಿಗಳೇ ಹೆಚ್ಚು ಬೇಸ್ತು ಬಿದ್ದಂತೆ ತೋರುತ್ತಿದೆ.

ಎರಡು ಅವಧಿ ತಮ್ಮ ಕೈ ಹಿಡಿದಿದ್ದ ವರುಣಾ ಕ್ಷೇತ್ರವನ್ನು ಪುತ್ರನಿಗೆ ಧಾರೆ ಎರೆದು, ರಾಜಕೀಯ ಜನ್ಮ ಮತ್ತು ಮರುಜನ್ಮ ನೀಡಿದ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದಾಗ ಸ್ವತಃ ಅವರ ಹಿಂಬಾಲಕರು, ಹಿತೈಷಿಗಳು ಕೂಡ, “ಇದು ಅಪಾಯಕಾರಿ ನಿರ್ಧಾರ. ಅನಗತ್ಯ ತಾಪತ್ರಯ,’’ ಎಂದೇ ಎಚ್ಚರಿಸಿದ್ದರು. ಬೆನ್ನಿಗೇ, “ಬನ್ನಿ, ಅದು ಹೇಗೆ ಗೆಲ್ತೀರೋ ನೋಡುತ್ತೇವೆ,’’ಎಂದು ರಾಜಕೀಯ ವಿರೋಧಿಗಳೆಲ್ಲ ತೋಳು ತಟ್ಟಿ ಹೂಂಕರಿಸಿದರು. “ಚಾಮುಂಡೇಶ್ವರಿ ಕ್ಷೇತ್ರ ಸ್ವರೂಪ, ಸ್ವಭಾವ ಹಿಂದಿನಂತೆ ಇಲ್ಲ. ಒಕ್ಕಲಿಗ ಮತ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಹಿಂದಿನಂತೆ ಈಗ ಗೆಲುವು ಸುಲಭವಲ್ಲ,’’ ಎನ್ನುವ ವಿಶ್ಲೇಷಣೆಗಳು, ಭೀತಿ ಸೃಷ್ಟಿ ಪ್ರಯತ್ನಗಳು ನಡೆದವು. “ಸಿದ್ದರಾಮಯ್ಯ ಅವರಿಗೆ ವರುಣಾ ಸುರಕ್ಷಿತ ಕ್ಷೇತ್ರ. ಅಲ್ಲಿ ಕಣಕ್ಕಿಳಿದರೆ, ನಿರಾತಂಕವಾಗಿ ರಾಜ್ಯ ಸುತ್ತಿ ಪಕ್ಷದ ಪರ ಪ್ರಚಾರ ಮಾಡಬಹುದು,’’ ಎನ್ನುವ ಸಲಹೆಯೂ ವ್ಯಕ್ತವಾಗಿತ್ತು. ಆದರೆ, ಯಾರು ಏನೇ ಹೇಳಿದರೂ ಸಿದ್ದರಾಮಯ್ಯ ಮಾತ್ರ “ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ ಮಾಡುತ್ತೇನೆ,’’ ಎಂದು ಮತ್ತೆ ಮತ್ತೆ ಹೇಳಿ, ಪ್ರಚಾರವನ್ನೂ ಆರಂಭಿಸಿದ್ದರು.

ಈ ಮಧ್ಯೆ, ಕಳೆದೊಂದು ವಾರದಿಂದ “ ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ,’’ಎನ್ನುವ ಸುದ್ದಿ ಹಬ್ಬಿತು. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬರಷ್ಟೆ ಎರಡು ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದಾರೆ,’’ಎನ್ನುವ ರಾಹುಲ್‌ ಗಾಂಧಿ ಹೇಳಿಕೆ ಆ ಸುದ್ದಿ ಖಚಿತಗೊಳ್ಳುವಂತೆ ಮಾಡಿತು. ಮಾತ್ರವಲ್ಲ, ಬಾಗಲಕೋಟೆ ಜಿಲ್ಲೆ ಮುಖಂಡರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, “ನೀವು ಬಾದಾಮಿಯಿಂದ ಸ್ಪರ್ಧೆ ಮಾಡಿದರೆ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಬಲಬರುತ್ತದೆ,’’ಎನ್ನುವ ಪ್ರಸ್ತಾಪ ಮುಂದಿಟ್ಟರು. ಕ್ಷೇತ್ರದ ಹಾಲಿ ಶಾಸಕ ಚಿಮ್ಮನಕಟ್ಟಿ ಕೂಡ ‘ಸಿಎಂಗಾಗಿ ಕ್ಷೇತ್ರ ತ್ಯಾಗ’ದ ಮಾತುಗಳನ್ನಾಡಿದರು. ಆದರೆ, ಈ ಯಾವ ಸಂದರ್ಭದಲ್ಲೂ ಸಿದ್ದರಾಮಯ್ಯ “ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡುವುದಿಲ್ಲ,’’ ಎಂದು ಹೇಳಲಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಿತ್ತು ಅವರ ವರಸೆ. ಪರಿಣಾಮ, ಸಿದ್ದರಾಮಯ್ಯ ೨ ಕ್ಷೇತ್ರಗಳಲ್ಲಿ ಸ್ಪರ್ಧೆಯ ವಿಷಯ ಗಟ್ಟಿಯಾಗತೊಡಗಿತು. ಇದು ಚಾಮುಂಡೇಶ್ವರಿ ಕಾರ್ಯಕರ್ತರು, ಮುಖಂಡರಲ್ಲಿ ತುಸು ಆತಂಕವನ್ನು, “ಇಲ್ಲಿ ಗೆಲುವು ಕಷ್ಟವಾದರೆ, ಅಲ್ಲಂತೂ ಸುಲಭವಾಗಿ ಗೆಲ್ಲುತ್ತಾರೆ,’’ ಎನ್ನುವ ಸಮಾಧಾನವನ್ನೂ ಹೊಮ್ಮಿಸಿತ್ತು.

ಆದರೆ, ಭಾನುವಾರ ಮಧ್ಯಾಹ್ನದ ವೇಳೆಗೆ ‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸಿಎಂ ಸ್ಪರ್ಧೆ’ ಎನ್ನುವ ಮತ್ತೊಂದು ಸುದ್ದಿ ಹಬ್ಬಿತು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮುಂತಾದವರು ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಡೆ ಹಾಕಿದ್ದಾರೆ ಎನ್ನುವ ಅಂತೆ-ಕಂತೆಗಳು ಆ ಸುದ್ದಿಯ ಜೊತೆ ಸೇರಿಕೊಂಡವು. ಇಳಿ ಸಂಜೆ ನಂತರ ಅಧಿಕೃತ ಮುದ್ರೆಯೊಂದಿಗೆ ಪ್ರಕಟವಾದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಚಾಮುಂಡೇಶ್ವರಿ ಕ್ಷೇತ್ರದಲ್ಲಷ್ಟೆ ಸಿದ್ದರಾಮಯ್ಯ ಅವರ ಸ್ಪರ್ಧೆಯನ್ನು ಖಚಿತಪಡಿಸಿತು. ಜೊತೆಗೇ, ಕ್ಷೇತ್ರ ಆಯ್ಕೆ ವಿಷಯದಲ್ಲಿ ಸಿಎಂ ಅಪಾಯವನ್ನು‌ ಮೈಮೇಲೆಳೆದುಕೊಂಡರೆ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ರಕ್ಷಣಾತ್ಮಕ ಆಟ ಆಡುವ ಅವರ ಇಂಗಿತಕ್ಕೆ ಹೈ ಕಮಾಂಡ್ ಅಡ್ಡಗಾಲು ಹಾಕಿತೆ, ಪಕ್ಷದ ಒಳ ವಿರೋಧಿಗಳು ಸಿದ್ದರಾಮಯ್ಯ ಬಾಲ ಕತ್ತರಿಸುವಲ್ಲಿ ಯಶಸ್ವಿಯಾದರೆ ಅಥವಾ ಈ ಎಲ್ಲ ವಿದ್ಯಮಾನ ನಡೆಯುವಾಗ ಮೌನ ಧರಿಸಿದ್ದ ಸಿದ್ದರಾಮಯ್ಯ ಆ ಮೂಲಕ ಚಾಮುಂಡೇಶ್ವರಿಯಲ್ಲಿ ತಮ್ಮ ಉಮೇದುವಾರಿಕೆ ಬಲಪಡಿಸಿಕೊಳ್ಳುವ ತಂತ್ರ ಹೆಣೆದರೆ ಎನ್ನುವ ಪ್ರಶ್ನೆ, ಕುತೂಹಲಗಳೂ ಸಹಜವಾಗಿ ಮೂಡಿದವು.

ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಮರುದಿನ ಮೈಸೂರಿಗೆ ಆಗಮಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಿದ್ದರಾಮಯ್ಯ ಆಡಿದ ಮಾತುಗಳು ಕೊನೆಯ ಅಂಶವನ್ನೇ ಪುಷ್ಟೀಕರಿಸುವಂತಿವೆ. “ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತೇನೆಂದು ನಾನೆಲ್ಲೂ ಹೇಳಿರಲೇ ಇಲ್ಲ. ಚಾಮುಂಡೇಶ್ವರಿಯಲ್ಲಷ್ಟೆ ಸ್ಪರ್ಧೆ ಮಾಡುವುದು ಎಂದು ಮೊದಲಿನಿಂದಲೂ ಹೇಳಿದ್ದೆ. ಅದಕ್ಕೆ ಬದ್ಧನಾಗಿದ್ದೇನೆ,’’ ಎನ್ನುವುದು ಅವರ ಮೊದಲ ಪ್ರತಿಕ್ರಿಯೆ. “ಬಾಗಲಕೋಟೆ ಜಿಲ್ಲೆ ಮುಖಂಡರು ಬಂದು ಬಾದಾಮಿಯಲ್ಲೂ ಸ್ಪರ್ಧೆ ಮಾಡಿ ಎಂದು ಕೇಳಿದ್ದರಷ್ಟೆ. ನಾನು ಆ ಬಗ್ಗೆ ಯೋಚನೆಯನ್ನೇನು ಮಾಡಿರಲಿಲ್ಲ, ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಎರಡು ಕಡೆ ಸ್ಪರ್ಧೆ ಮಾಡಿದವನಲ್ಲ,’’ ಎಂದು ಅವರು ಸ್ಪಷ್ಟ ಪಡಿಸಿದರು. ಎರಡು ಕ್ಷೇತ್ರದ ಸ್ಪರ್ಧೆಯ ಆಸೆಗೆ ಹೈಕಮಾಂಡ್‌ ತಣ್ಣೀರೆರಚಿದ್ದಕ್ಕಾಗಲಿ, ಉಳಿದ ನಾಯಕರು ಅಡ್ಡಗಾಲು ಹಾಕಿದ್ದಕ್ಕಾಗಲಿ ಅವರ ಮಾತಿನಲ್ಲಿ ಯಾವುದೇ ಕುರುಹುಗಳೂ ಸಿಗಲಿಲ್ಲ.

ಆದಾಗ್ಯೂ, ‘ಚಾಮುಂಡೇಶ್ವರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ನಿರ್ಧಾರ ಅಪಾಯಕಾರಿ’ ಎನ್ನುವ ಅಭಿಪ್ರಾಯವನ್ನು ಈಗಲೂ ಕೆಲವರು ಹೊಂದಿದ್ದಾರೆ. “ಸಿದ್ದರಾಮಯ್ಯ ವರುಣಾದಲ್ಲೇ ಸ್ಪರ್ಧೆ ಮಾಡಿದ್ದರೆ, ಈ ವೇಳೆಗಾಗಲೇ ಜಿ.ಟಿ.ದೇವೇಗೌಡ (ಈಗ ಸಿದ್ದರಾಮಯ್ಯ ಅವರ ಎದುರಾಳಿ-ಜೆಡಿಎಸ್‌ ಹುರಿಯಾಳು) ಕಾಂಗ್ರೆಸ್ ಸೇರಿ, ಚಾಮುಂಡೇಶ್ವರಿಯಲ್ಲಿ ಅಭ್ಯರ್ಥಿಯಾಗಿರುತ್ತಿದ್ದರು. ಇಷ್ಟೆಲ್ಲ ಉಸಾಬರಿಯೇ ಇರುತ್ತಿರಲಿಲ್ಲ,’’ ಎಂದೂ ಅವರು ಸೇರಿಸುತ್ತಾರೆ. “ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಯ ನಿರ್ಧಾರ ಮಾಡಿದ್ದು ಒಳ್ಳೆಯದೇ ಆಯಿತು. ಎರಡೆರಡು ಕಡೆ ನಿಂತಿದ್ದರೆ ತಪ್ಪು ಸಂದೇಶ ರವಾನೆಯಾಗುವ ಅಪಾಯವಿತ್ತು,’’ ಎನ್ನುವ ವ್ಯಾಖ್ಯಾನಗಳೂ ಕೇಳಿಬರುತ್ತಿವೆ. “ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿಎಂ ಬಯಸಿದ್ದರೆ ಅದನ್ನು ಯಾರೂ ತಡೆಯುತ್ತಿರಲಿಲ್ಲ. ಆದರೆ, ಅವರು ಅಂತಹ ಪರೋಕ್ಷ ಇಂಗಿತ ವ್ಯಕ್ತಪಡಿಸಿ, ಕೊನೆಗೆ ಚಾಮುಂಡೇಶ್ವರಿ ಒಂದೇ ಕ್ಷೇತ್ರದಲ್ಲಿ ನಿಲ್ಲುವ ನಿರ್ಧಾರ ತಳೆಯುವ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ,’’ ಎನ್ನುವಂತ ಚರ್ಚೆಗಳೂ ನಡೆಯುತ್ತಿವೆ. “ಇಲ್ಲಷ್ಟೆ ಸ್ಪರ್ಧೆ ಮಾಡುವುದನ್ನು ಪಕ್ಕಾ ಮಾಡಿಕೊಂಡಿದ್ದ ಸಿದ್ದರಾಮಯ್ಯ ತಮ್ಮ ಸ್ಪರ್ಧೆ ಕುರಿತಂತೆ ಸೃಷ್ಟಿಯಾದ ಗೊಂದಲ, ಶಂಕೆ ಇತ್ಯಾದಿಗಳನ್ನು ತಮಗೆ ಪೂರಕ ಅಸ್ತ್ರಗಳನ್ನಾಗಿ ರೂಪಿಸಿಕೊಳ್ಳುವ ತಂತ್ರಗಾರಿಕೆ ಮಾಡಿರಬಹುದಷ್ಟೆ,’’ ಎನ್ನುವುದು ಅವರ ರಾಜಕೀಯ ನಡೆಗಳನ್ನು ಬಹುಕಾಲದಿಂದ ಬಲ್ಲ ಆಪ್ತರೊಬ್ಬರ ಅನಿಸಿಕೆ. ಇಂಥವೇ ಇನ್ನು ಕೆಲವು ಚರ್ಚೆ, ವಿಶ್ಲೇಷಣೆಗಳು ಇಂತಿವೆ;

  • ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಿದರೆ ಸಿಎಂ ಗೆ ರಿಸ್ಕ್‌ ಜಾಸ್ತಿ ಎನ್ನುವುದು ಹಳೆಯ ಭೀತಿ. ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಬೇಡಿಕೆ ಇದ್ದರೂ ಸಿದ್ದರಾಮಯ್ಯ ಇಲ್ಲೇ ಮತ್ತು ಇಲ್ಲಷ್ಟೆ ಸ್ಪರ್ಧೆ ಮಾಡಲು ನಿರ್ಧರಿಸಿರುವುದು ಕ್ಷೇತ್ರದ ಜನರ ಜೊತೆಗಿನ ಹಳೆಯ- ಭಾವನಾತ್ಮಕ ನಂಟನ್ನು ಗಟ್ಟಿಗೊಳಿಸಲಿದೆ.
  • “ರಾಜಕೀಯ ಜೀವನ ಆರಂಭಿಸಿದ ಕ್ಷೇತ್ರದಲ್ಲೇ ಕೊನೆಯ ಚುನಾವಣೆ ಎದುರಿಸುತ್ತಿದ್ದೇನೆ. ಹಿಂದೆಲ್ಲ ಬೆಂಬಲಿಸಿದ್ದೀರಿ. ರಾಜಕೀಯವಾಗಿ ನೀವು ಕೈ ಹಿಡಿದಿದ್ದರಿಂದಲೇ ನಾನು ಸಿಎಂ ಆದೆ. ಮತ್ತೊಮ್ಮೆ ಹರಸಿ. ಮತ್ತೆ ಮುಖ್ಯಮಂತ್ರಿಯಾಗಿತ್ತೇನೆ,’’ ಎನ್ನುವ ಅವರ ಭರವಸೆಯ ಮಾತು ಈಗ ಹೆಚ್ಚು ಪರಿಣಾಮಕಾರಿ ಎನ್ನಿಸುತ್ತಿದೆ.
  • ಒಂದೊಮ್ಮೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, “ಚಾಮುಂಡೇಶ್ವರಿಯಲ್ಲಿ ಸೋಲುವ ಭಯದಿಂದ ಬಾದಾಮಿಯಲ್ಲೂ ಸ್ಪರ್ಧೆ ಮಾಡಿದ್ದಾರೆ,’’ ಎಂದು ಪ್ರತಿಪಕ್ಷಗಳು ಗುಲ್ಲೆಬ್ಬಿಸಿ, ಮತ್ತಷ್ಟು ಜಾತಿ-ಮತ ವಿಭಜನೆ ಮಾಡುವ ಸಾಧ್ಯತೆ ಇತ್ತು.
  • ಅಂತೆಯೇ, “ಎರಡೂ ಕಡೆ ಗೆದ್ದರೆ, ಅವರು ಚಾಮುಂಡೇಶ್ವರಿಯನ್ನೇ ಉಳಿಸಿಕೊಳ್ಳುವರು. ಆದ್ದರಿಂದ ಇಲ್ಲಿ ಗೆಲ್ಲಿಸಿದರೆ ವ್ಯರ್ಥ,’’ ಎನ್ನುವ ಭಾವನೆಯನ್ನು ಬಾದಾಮಿಯಲ್ಲಿ ಬೇರೂರುವಂತೆ ಮಾಡಲು ಪ್ರತಿಪಕ್ಷಗಳು ತಂತ್ರ ಹೆಣೆದಂತಿದ್ದವು.
  • ಎರಡು ದೋಣಿಯ ಮೂಲಕ ಪಯಣ ಹೊರಟಿದ್ದಲ್ಲಿ, ಅದು ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಆಯ್ಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿತ್ತು. ವರುಣಾ,ಚಾಮುಂಡೇಶ್ವರಿಯಲ್ಲಿ ಪ್ರಬಲ ಸ್ಪರ್ಧೆಯ ವಾತಾವರಣ ಸೃಷ್ಟಿಸಿ, ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷಗಳಿಗೆ ಪುಷ್ಟಿ ನೀಡಿದಂತಾಗುತ್ತಿತ್ತು. ಎರಡು ಕ್ಷೇತ್ರಗಳಲ್ಲಿ ತಮ್ಮ ಗೆಲುವು ಮತ್ತು ವರುಣಾದಲ್ಲಿ ಪುತ್ರನ ಗೆಲುವಿಗೇ ಹೆಚ್ಚು ಶ್ರಮ, ಸಮಯ, ತಂತ್ರಗಾರಿಕೆಯನ್ನು ಅವರು ಮೀಸಲಿಡಬೇಕಾಗುತ್ತಿತ್ತು.
  • ಯಾವುದೇ ಚುನಾವಣೆಗಳಲ್ಲಿ ಸೋಲಿಸುವ ತಂತ್ರಗಳಿಗಿಂತ ಗೆಲ್ಲುವ ತಂತ್ರಗಳೇ ಹೆಚ್ಚು ಪರಿಣಾಮಕಾರಿ. ಅಂತೆಯೇ, ‘ಹೇಗಾದರೂ ಗೆಲ್ಲಲೇಬೇಕು. ಗೆಲುವು ಸುಲಭಕ್ಕೆ ಧಕ್ಕಬೇಕು’ ಎನ್ನುವುದಕ್ಕಿಂತ, ‘ಗೆಲುವೋ, ಸೋಲೋ ಒಂದು ಕೈ ನೋಡೇ ಬಿಡೋಣ’ ಎನ್ನುವ ಗಟ್ಟಿಗತನ ಸ್ಪರ್ಧೆಯ ಹುರುಪನ್ನು ಹೆಚ್ಚಿಸುತ್ತದೆ. ಈ ಅರ್ಥದಲ್ಲಿ ನೋಡಿದರೆ, ಪ್ರತಿಪಕ್ಷಗಳ ಸವಾಲು, ಸೋಲಿಸಿಯೇ ಸೈ ಎನ್ನುವ ಬೆದರಿಕೆ ತಂತ್ರ ಎಲ್ಲವನ್ನು ದಿಟ್ಟವಾಗಿ ಎದುರಿಸುವ ಸಂದೇಶ ರವಾನಿಸಿರುವ ಸಿದ್ದರಾಮಯ್ಯ ರಣ -ಕೆಚ್ಚು ಪ್ರದರ್ಶಿಸಿದ್ದಾರೆ.
  • ಜಾತಿ ಲೆಕ್ಕಾಚಾರವನ್ನಾಧರಿಸಿ, ನಮ್ಮದೇ ಗೆಲುವು ಎನ್ನುತ್ತಿರುವ ಪ್ರತಿಪಕ್ಷಗಳಿಗೆ, “ಇದು ನನ್ನ ಕ್ಷೇತ್ರ. ಇವರು ನನ್ನ ಜನ. ನನ್ನ ಕೈಬಿಡರು. ಜಾತಿ ಮಿತಿಯನ್ನು ಮೀರಿ ಬೆಂಬಲಕ್ಕೆ ನಿಲ್ಲುವರು,’’ ಎನ್ನುವ ವಿಶ್ವಾಸ ಸ್ಥಾಪಿಸುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಲು ಸನ್ನದ್ಧರಾಗಿದ್ದಾರೆ.

ಹಾಗೆ ನೋಡಿದರೆ, ಸಿದ್ದರಾಮಯ್ಯ ಕ್ಷೇತ್ರಾಂತರ ನಿರ್ಧಾರ ಪ್ರಕಟಿಸಿದಾಗ ಚಾಮುಂಡೇಶ್ವರಿ ಅಂತರಂಗದಲ್ಲಿ ಬೇರೆ ಬೇರೆಯದೇ ಲೆಕ್ಕಾಚಾರಗಳು ಧ್ವನಿಸುತ್ತಿದ್ದವು. “ಸಿದ್ದರಾಮಯ್ಯಗೆ ಈ ಕ್ಷೇತ್ರ ಅಪಾಯಕಾರಿ,’’ ಎನ್ನುವ ಮಾತು ಎಲ್ಲೆಡೆ ಸಾಮಾನ್ಯವಾಗಿತ್ತು. ಆದರೆ, ಈಗ ಪರಿಸ್ಥಿತಿ ಅದೇ ರೀತಿ ಉಳಿದಂತಿಲ್ಲ. ಎಚ್‌ ಡಿ ದೇವೇಗೌಡ, ಕುಮಾರಸ್ವಾಮಿ, ಜಿ ಟಿ ದೇವೇಗೌಡ, ಯಡಿಯೂರಪ್ಪ, ಶ್ರೀನಿವಾಸಪ್ರಸಾದ್ ಸಹಿತ ಯಾವುದೇ ನಾಯಕರು ಉರುಳಿಸುವ ಯಾವುದೇ ಸಂಘಟಿತ ತಂತ್ರಕ್ಕೆ ಸಮರ್ಥ ಪ್ರತಿತಂತ್ರ ಹೂಡಬಲ್ಲೇ ಎನ್ನುವುದನ್ನು ತಮ್ಮ ಚತುರ ನಡೆ-ನುಡಿಯ ಮೂಲಕ ಧ್ವನಿಸುತ್ತಿರುವ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕದನ ಕುತೂಹಲವನ್ನು ನೂರ್ಮಡಿಗೊಳಿಸಿದ್ದಾರೆ. ಸಮರ್ಥ ಯೋಧನೊಬ್ಬ ಯಾವತ್ತೂ ದುರ್ಬಲ ಎದುರಾಳಿಯನ್ನು ಬಯಸಲಾರ. ಎದುರಾಳಿ ಎಷ್ಟೇ ಪ್ರಬಲನಾಗಿರಲಿ, ಅಂಜದೆ ಸೆಟೆದು ನಿಲ್ಲುವ ವೈಖರಿ ಮೂಲಕವೇ ಸಮರ್ಥ ಯೋಧ ಅರ್ಧ ಯುದ್ಧ ಗೆದ್ದಿರುತ್ತಾನೆ. ಜೆಡಿಎಸ್‌ ಪಕ್ಷ ಮತ್ತು ಅಭ್ಯರ್ಥಿ ಜಾತಿ ಸಹಿತ ಸಕಲ ಪಟ್ಟುಗಳನ್ನು ಹಾಕಬಲ್ಲ “ಪ್ರಬಲ ಎದುರಾಳಿ’’ ಎನ್ನುವುದು ಗೊತ್ತಿದ್ದೂ ಎದುರಿಸಲು ಸಿದ್ದರಾಮಯ್ಯ ಸನ್ನದ್ಧವಾಗಿರುವ ಅಚಲ ನಿಲುವಿನ ಹಿಂದೆ ಪ್ರಬಲವಾದ ಎದುರಾಳಿಯನ್ನೇ ಬಯಸುವ ಸಮರ್ಥ ಯೋಧನ “ಗೈರತ್ತು’’ ಎದ್ದು ಕಾಣುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More